ಭಾನುವಾರ, ಅಕ್ಟೋಬರ್ 5, 2014

ನಾರಾಯಣ ಬಾಬಾನಗರ ಹೇಳುತ್ತಾರೆ... "ವಿಜ್ಞಾನ ಸಂಘದಿಂದ ನಡೆಸಿದ ಚಟುವಟಿಕೆಗಳು ವಿಜ್ಞಾನ ಸಂವಹನದಲ್ಲಿ ಆಸಕ್ತಿ ಮೂಡಿಸಿದವು"

ವಿಜ್ಞಾನದ ಕಲಿಕೆ ಕಬ್ಬಿಣದ ಕಡಲೆಯಾಗದೆ ಖುಷಿಕೊಡುವ ಕೆಲಸವಾಗಬೇಕೆಂದು ನಂಬಿರುವ, ತಮ್ಮ ವಿದ್ಯಾರ್ಥಿಗಳಿಗೆ ಅದೇ ಅನುಭವವನ್ನು ಕಟ್ಟಿಕೊಡುತ್ತಿರುವ ಅಪರೂಪದ ಶಿಕ್ಷಕರಲ್ಲಿ ಶ್ರೀ ನಾರಾಯಣ ಬಾಬಾನಗರ ಕೂಡ ಒಬ್ಬರು. ವಿಜಾಪುರ ಸಮೀಪದ ಕಾಖಂಡಕಿಯವರಾದ ನಾರಾಯಣರು ಪ್ರಾಣಿಶಾಸ್ತ್ರ ಹಾಗೂ ಶಿಕ್ಷಣದಲ್ಲಿ ಸ್ನಾತಕೋತ್ತರ ಪದವೀಧರರು. ಪ್ರೌಢಶಾಲಾ ವಿಜ್ಞಾನ ಶಿಕ್ಷಕರಾಗಿರುವ ಅವರು ಆಟಿಕೆಗಳ ಮೂಲಕ ಪಾಠ ಹೇಳುವ ವಿನೂತನ ಪ್ರಯೋಗ ಮಾಡಿದ್ದಾರೆ, ಹಲವೆಡೆಗಳಲ್ಲಿ ಪ್ರಾತ್ಯಕ್ಷಿಕೆಗಳನ್ನೂ ನೀಡಿದ್ದಾರೆ. ಪತ್ರಿಕಾ ಲೇಖನಗಳಷ್ಟೇ ಅಲ್ಲದೆ 'ಕುಂಟಾಬಿಲ್ಲೆ', 'ವಿಜ್ಞಾನ ವಿಹಾರ', 'ಬಣ್ಣದ ಬಾಲಂಗೋಚಿ', 'ಕೌತುಕದ ಚುಚ್ಚುಮದ್ದು! ...ಸೋಜಿಗದ ಸೂಜಿಮದ್ದು', 'ಆಹಾ! ಆಟಿಕೆಗಳು' ಮುಂತಾದ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಸಿ. ಎನ್. ಆರ್. ರಾವ್ ಶಿಕ್ಷಣ ಪ್ರತಿಷ್ಠಾನದ 'ಉತ್ತಮ ವಿಜ್ಞಾನ ಶಿಕ್ಷಕ' ಪ್ರಶಸ್ತಿ ಸೇರಿದಂತೆ ಹಲವು ಗೌರವಗಳಿಗೆ ಭಾಜನರಾಗಿದ್ದಾರೆ. ಇಜ್ಞಾನ ಡಾಟ್ ಕಾಮ್ ಸಂಪಾದಕ ಟಿ. ಜಿ. ಶ್ರೀನಿಧಿ ಜೊತೆಗೆ ಅವರು ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದು ಹೀಗೆ...
ವಿಜ್ಞಾನ-ತಂತ್ರಜ್ಞಾನ ಸಂವಹನ ಕ್ಷೇತ್ರಕ್ಕೆ ನೀವು ಬರಲು ಕಾರಣವಾದ ಅಂಶಗಳೇನು?
ನಾನು ಕಲಿತಿದ್ದು ಒಂದು ಚಿಕ್ಕ ಹಳ್ಳಿಯ ಸರಕಾರಿ ಶಾಲೆಯಲ್ಲಿ. ಅಲ್ಲಿ ಪರಿಸರದ ಬೆರಗುಗಳಿಗೆ ಉತ್ತರಗಳು ಅಂತ ಸಿಕ್ಕಿದ್ದು ತುಂಬಾ ಅಪರೂಪ. ಉತ್ತರ ಕೇಳಿದಾಗ ಹೇಳಬೇಕಾದವರಿಂದ ನಿರಾಶೆ ಸಿಕ್ಕಿದ್ದೇ ಹೆಚ್ಚು ಸಲ. ಪ್ರೌಢ ಶಿಕ್ಷಣ ಮುಗಿಸಿ ನಗರದ ಕಾಲೇಜಿಗೆ ಸೇರಿದಾಗ ಕೀಳರಿಮೆಯೇ ತುಂಬಿ ತುಳುಕಾಡಿತು. ಪಠ್ಯದ ಆಚೆಗಿನ ವಿಜ್ಞಾನ ಸಂಬಂಧಿ ಪ್ರಶ್ನೆಗಳನ್ನು ಕೇಳಿದಾಗ ಉಡಾಫೆಯ ಉತ್ತರಗಳೇ ದೊರಕಿದವು. ಏಕೆ?ಹೇಗೆ? ಎಂಬ ಪ್ರಶ್ನೆಗಳಿಗೆ ಸಮಾಧಾನದ ಉತ್ತರಗಳು ಅಂತ ಸಿಕ್ಕದ್ದು ಪದವಿ ಓದುವಾಗ.
ಅಲ್ಲಿ ವಿಜ್ಞಾನ ಸಂಘದಿಂದ ನಡೆಸಿದ ಚಟುವಟಿಕೆಗಳು ವಿಜ್ಞಾನ ಸಂವಹನದಲ್ಲಿ ಆಸಕ್ತಿ ಮೂಡಿಸಿದವು, ವಿಜ್ಞಾನದೆಡೆಗೆ ಆಕರ್ಷಿಸಿದವು.

ನೀವು ಮೆಚ್ಚುವ / ನಿಮ್ಮ ಮೇಲೆ ಪ್ರಭಾವ ಬೀರಿದ ಇತರ ವಿಜ್ಞಾನ ಸಂವಹನಕಾರರು ಯಾರು?
ನನ್ನ ಮೇಲೆ ಗಾಢವಾದ ಪ್ರಭಾವ ಬೀರಿದವರು ಪ್ರೊ. ಎಂ ಆರ್ ನಾಗರಾಜು. ರಾಜ್ಯದ ತುಂಬೆಲ್ಲಾ ಅನೇಕ ಸಂವಹನಕಾರರನ್ನು ಬೆಳೆಸಿದವರು ಅವರು. ಬೇರೆ ಹೆಸರುಗಳು ಆಳ ಮನದಲ್ಲಿ ಇಳಿದಿಲ್ಲ.

ನಾರಾಯಣ ಬಾಬಾನಗರ
ನಿಮ್ಮ (ಹಾಗೂ ಇತರ ಸಂವಹನಕಾರರ) ಕೆಲಸವನ್ನು ಸಮಾಜ ಹೇಗೆ ಸ್ವೀಕರಿಸುತ್ತಿದೆ? 
ನನ್ನ ಕೆಲಸವನ್ನು ನೋಡಿ ಬಹಳಷ್ಟು ಸಲ ಪ್ರೀತಿಯಿಂದ, ಆಸಕ್ತಿಯಿಂದ ಸ್ಪಂದಿಸಿದವರಿದ್ದಾರೆ. ಪ್ರಶ್ನೆಗಳನ್ನು ಹಾಕಿ ಕೆಣಕಿದವರಿದ್ದಾರೆ. ತಿದ್ದಿ ಹೇಳಿ ಬೆನ್ನು ಚಪ್ಪರಿಸಿದವರೂ ಇದ್ದಾರೆ.

ಈ ಕ್ಷೇತ್ರದಲ್ಲಿ ನೀವು ಮಾಡಬಯಸುವ ಮುಂದಿನ ಕೆಲಸ ಯಾವುದು?
ಪ್ರತಿ ಶಾಲಾ ವಿದ್ಯಾರ್ಥಿಗೂ ವಿಜ್ಞಾನವನ್ನು ತಲುಪಿಸುವ ನಿಟ್ಟಿನಲ್ಲಿ ಪ್ರಯತ್ನಿಸುವ ಉದ್ದೇಶವಿದೆ.

ವಿಜ್ಞಾನ ಸಂವಹನ ಹೊರತುಪಡಿಸಿ ನಿಮ್ಮ ಇತರ ಆಸಕ್ತಿಗಳು ಯಾವುವು?
ವಿಜ್ಞಾನ ಸಂವಹನದಷ್ಟೇ ವಿಜ್ಞಾನ ಆಟಿಕೆಗಳ ತಯಾರಿಕೆಯಲ್ಲೂ ನನಗೆ ಆಸಕ್ತಿಯಿದೆ.

ನಾರಾಯಣ ಬಾಬಾನಗರ ಅವರ ಪುಸ್ತಕಗಳನ್ನು ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ
ಕನ್ನಡದ ವಿಜ್ಞಾನ - ತಂತ್ರಜ್ಞಾನ ಸಂವಹನಕಾರರು ಅವರ ಬರವಣಿಗೆಯ ಮೂಲಕ ಬಹಳಷ್ಟು ಓದುಗರಿಗೆ ಪರಿಚಿತರು. ಆದರೆ ವೈಯಕ್ತಿಕವಾಗಿ ಅವರ ಪರಿಚಯ ಬಹಳಷ್ಟು ಓದುಗರಿಗೆ ಇರುವುದಿಲ್ಲ. ಈ ಕೊರತೆಯನ್ನು ಹೋಗಲಾಡಿಸುವ ದೃಷ್ಟಿಯಿಂದ ಇಜ್ಞಾನ ಡಾಟ್ ಕಾಮ್ ಪ್ರಾರಂಭಿಸಿರುವ ಸಂದರ್ಶನ ಸರಣಿಯೇ 'ಪೆನ್ ಸ್ಟಾಂಡ್'. ಈ ಸರಣಿಯ ಬಗ್ಗೆ ನಿಮ್ಮ ಅನಿಸಿಕೆ - ಅಭಿಪ್ರಾಯಗಳಿಗೆ ಹಾರ್ದಿಕ ಸ್ವಾಗತ!
ಪೆನ್‌ ಸ್ಟಾಂಡ್ ಸಂದರ್ಶನ ಸರಣಿಯಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳೂ ಸಂದರ್ಶಿತರ ವೈಯಕ್ತಿಕ ಅನಿಸಿಕೆಗಳು.

2 ಕಾಮೆಂಟ್‌ಗಳು:

dinakarjoshi ಹೇಳಿದರು...

ತುಂಬ ಚುಟುಕಾದ ಆದರೆ ಅರ್ಥಗರ್ಭಿತ ಸಂದರ್ಶನ... ತಮ್ಮ ಕಾರ್ಯ ಹೀಗೆ ಮುಂದುವರಿಯಲಿ... ಶುಭಂ

dinakarjoshi ಹೇಳಿದರು...

ಉತ್ತಮ ಸಂದರ್ಶನ.. ತಮ್ಮಿಂದ ಇನ್ನೂ ಹೆಚ್ಚಿನ ಸಾಧನೆಯ ನಿರೀಕ್ಷ ನಮ್ಮದು... ಶುಭಂ

badge