ಬುಧವಾರ, ಆಗಸ್ಟ್ 6, 2014

ಮೊಬೈಲ್ ಲೋಕದ ಹೊಸ ತಲೆಮಾರು: 4G

ಟಿ ಜಿ ಶ್ರೀನಿಧಿ

ಅದೇನೋ ಮೊಬೈಲ್ ಅಂತೆ, ಜೇಬಿನಲ್ಲಿ ಇಟ್ಟುಕೊಳ್ಳುವ ಫೋನು. ಒಂದು ನಿಮಿಷ ಮಾತಾಡಿದರೆ ಹದಿನೈದೋ ಇಪ್ಪತ್ತೋ ರೂಪಾಯಿ ಕೊಡಬೇಕಂತೆ; ಅಷ್ಟೇ ಅಲ್ಲ, ನಮಗೆ ಬೇರೆಯವರು ಫೋನ್ ಮಾಡಿದಾಗ ಅವರ ಜೊತೆ ಮಾತಾಡುವುದಕ್ಕೂ ನಾವೇ ದುಡ್ಡು ಕೊಡಬೇಕಂತೆ! ಎನ್ನುವುದರೊಡನೆ ಶುರುವಾದದ್ದು ಮೊಬೈಲ್ ಜೊತೆಗಿನ ನಮ್ಮ ಒಡನಾಟ. ಈಗ ಅದು ಎಲ್ಲಿಗೆ ತಲುಪಿದೆ ಅಂದರೆ ತಣ್ಣನೆಯ ಕೋಣೆಯಲ್ಲಿ ಕೂತು ಕೆಲಸಮಾಡುವವನಿಂದ ಹಿಡಿದು ರಸ್ತೆಯಲ್ಲಿ ತರಕಾರಿ ಮಾರುವಾತನವರೆಗೆ ಎಲ್ಲರ ಕೈಯಲ್ಲೂ ಇದೀಗ ಒಂದೊಂದು ಮೊಬೈಲ್ ಇದೆ. ಯುವಜನತೆಯ ಮಟ್ಟಿಗಂತೂ ಮೊಬೈಲ್ ಎನ್ನುವುದು ಊಟ-ಬಟ್ಟೆ-ಸೂರಿನಷ್ಟೇ ಮುಖ್ಯವಾಗಿಬಿಟ್ಟಿದೆ.

ಇದರ ಜತೆಗೇ ಮೊಬೈಲ್ ದೂರವಾಣಿಗಳ ಅವತಾರವೂ ಕಾಲಕಾಲಕ್ಕೆ ಬದಲಾಗುತ್ತ ಬಂದಿದೆ. 'ಇನ್‌ಕಮಿಂಗ್ ಮೂರು ರೂಪಾಯಿ, ಔಟ್‌ಗೋಯಿಂಗ್ ಆರು ರೂಪಾಯಿ' ಕಾಲದಿಂದ 'ಇನ್‌ಕಮಿಂಗ್ ಫ್ರೀ, ಔಟ್‌ಗೋಯಿಂಗ್ ಅರ್ಧ ಪೈಸಾ!' ಕಾಲದವರೆಗೆ, ಎಸ್ಸೆಮ್ಮೆಸ್‌ನಿಂದ ವಾಟ್ಸ್‌ಆಪ್‌ವರೆಗೆ ಈ ಪುಟ್ಟ ಸಾಧನ ಕ್ರಮಿಸಿರುವ ಹಾದಿ ಸಣ್ಣದೇನೂ ಅಲ್ಲ.

ಮೊಬೈಲಿನಲ್ಲಿ ಕಂಡುಬಂದಿರುವ ಇಷ್ಟೆಲ್ಲ ಬದಲಾವಣೆಗಳನ್ನು ನಾವು ಹಲವು ವಿಧಗಳಾಗಿ ವಿಂಗಡಿಸುವುದು ಸಾಧ್ಯ. ಮೊಬೈಲ್ ಮೂಲಕ ದೊರಕುವ ಸೌಲಭ್ಯಗಳಲ್ಲಿನ ಬದಲಾವಣೆ ಈ ಪೈಕಿ ನಮಗೆ ಹೆಚ್ಚು ಪರಿಚಿತವಾದದ್ದು ಎನ್ನಬಹುದು. ಮೊಬೈಲ್ ದೂರವಾಣಿ ಉಪಕರಣಗಳಲ್ಲಿ (ಹ್ಯಾಂಡ್‌ಸೆಟ್) ಕಂಡುಬಂದಿರುವ ಕ್ರಾಂತಿಕಾರಕ ಬದಲಾವಣೆಗಳದ್ದು, ಬಹುಶಃ, ಎರಡನೆಯ ಸ್ಥಾನ.
ಫೋನುಗಳು ಕಳೆದೊಂದು ದಶಕದಲ್ಲಿ ತಮ್ಮ ದಡ್ಡತನವನ್ನೆಲ್ಲ ಬಿಟ್ಟು 'ಸ್ಮಾರ್ಟ್' ಆಗಿರುವ ಕತೆ ನಮಗೆಲ್ಲ ಗೊತ್ತೇ ಇದೆಯಲ್ಲ!ಇವೆರಡೂ ಬದಲಾವಣೆಗಳಿಗೆ ಕಾರಣವಾಗಿರುವುದು ಮೊಬೈಲ್ ಸಂವಹನಕ್ಕಾಗಿ ಬಳಸಲಾಗುವ ತಂತ್ರಜ್ಞಾನದಲ್ಲಿನ ಬದಲಾವಣೆಗಳು. ಈ ಬದಲಾವಣೆಗಳ ಪರಿಣಾಮವನ್ನು ನಾವು ಅರಿತಿದ್ದೇವೆ ನಿಜ, ಆದರೆ ಬದಲಾಗುತ್ತಿರುವ ಆ ತಂತ್ರಜ್ಞಾನದ ಬಗ್ಗೆ ನಮಗೆ ಹೆಚ್ಚು ವಿವರಗಳು ಗೊತ್ತಿರುವುದಿಲ್ಲ.

ತಂತ್ರಜ್ಞಾನವನ್ನು ಸಮಗ್ರವಾಗಿ ಅರ್ಥಮಾಡಿಕೊಳ್ಳುವ ಅಗತ್ಯ ಎಲ್ಲರಿಗೂ ಇರುವುದಿಲ್ಲ, ಹಾಗಾಗಿ ಅದೆಲ್ಲ ನಮಗೆ ಗೊತ್ತಿರಲೇಬೇಕು ಎಂದೇನೂ ಇಲ್ಲ. ಆದರೆ ಹೊರಗಿನ ಪ್ರಪಂಚ ಸುಮ್ಮನಿರಬೇಕಲ್ಲ, ಆಗೊಮ್ಮೆ ಈಗೊಮ್ಮೆ ಸುದ್ದಿಮಾಡುವ, ಜಾಹೀರಾತುಗಳಲ್ಲಿ ಕಾಣಸಿಗುವ ಕೆಲ ಶಬ್ದಗಳು ತಂತ್ರಜ್ಞಾನದ ಕಡೆಗೂ ನಮ್ಮ ಗಮನವನ್ನು ಸೆಳೆಯುತ್ತವೆ. ಭಾರೀ ಹಗರಣ ಬಯಲಿಗೆ ಬರುವ ತನಕ ೨ಜಿ, ಸ್ಪೆಕ್ಟ್ರಮ್ ಇತ್ಯಾದಿ ಹೆಸರುಗಳೆಲ್ಲ ನಮಗೆಲ್ಲಿ ಗೊತ್ತಿದ್ದವು? ೩ಜಿ ಹೆಸರು ಜಾಹೀರಾತಿನಲ್ಲಿ ಕಾಣಲು ಶುರುವಾದಾಗಲೇ ತಾನೆ ನಮ್ಮ ಗಮನ ಆ ಕಡೆಗೆ ಹೋದದ್ದು!

ಈಗ ಈ ಸಾಲಿಗೆ ಸೇರಬಲ್ಲ ಇನ್ನೊಂದು ಹೆಸರು ಸುದ್ದಿಯಲ್ಲಿದೆ, ನಮ್ಮ ಗಮನವನ್ನೂ ಸೆಳೆಯುತ್ತಿದೆ. ಆ ಹೆಸರೇ ೪ಜಿ - ಮೊಬೈಲ್ ಮಾಯೆಯ ನಾಲ್ಕನೆಯ ತಲೆಮಾರು!

೨ಜಿ, ೩ಜಿ, ೪ಜಿ - ಮೊಬೈಲ್ ತಂತ್ರಜ್ಞಾನದ ಪ್ರಸ್ತಾಪ ಬಂದಾಗಲೆಲ್ಲ ಇಂತಹ ಹೆಸರುಗಳು ಕೇಳಸಿಗುತ್ತವಲ್ಲ, ಈ ಹೆಸರಿನಲ್ಲಿ 'ಜಿ' ಎನ್ನುವುದು 'ಜನರೇಶನ್', ಅಂದರೆ ತಲೆಮಾರನ್ನು ಪ್ರತಿನಿಧಿಸುತ್ತದೆ. ಸರಳವಾಗಿ ವಿವರಿಸಬೇಕೆಂದರೆ ೨ಜಿ ಎನ್ನುವುದು ಅಪ್ಪನ ಕಾಲದ ತಂತ್ರಜ್ಞಾನ, ೩ಜಿ ಮಕ್ಕಳ ಕಾಲದ್ದು ಮತ್ತು ೪ಜಿ ಮೊಮ್ಮಕ್ಕಳ ಕಾಲದ್ದು ಎನ್ನಬಹುದೇನೋ.

ಮೊದಮೊದಲು ರೂಪುಗೊಂಡ ಮೊಬೈಲ್ ಫೋನುಗಳು ಅನಲಾಗ್ ತಂತ್ರಜ್ಞಾನವನ್ನು ಬಳಸುತ್ತಿದ್ದವು. ದೂರವಾಣಿ ಕರೆಗಳನ್ನು ಮಾಡಲಷ್ಟೆ ನೆರವಾಗುತ್ತಿದ್ದ ಆ ತಂತ್ರಜ್ಞಾನ ಮೊಬೈಲ್ ದೂರವಾಣಿಯ ಮೊದಲ ತಲೆಮಾರು (೧ಜಿ) ಎಂದು ಕರೆಯುತ್ತಾರೆ.

ಆನಂತರ ಬಂದದ್ದು ೨ಜಿ. ಎರಡನೇ ತಲೆಮಾರಿನ ಈ ತಂತ್ರಜ್ಞಾನ ಮೊಬೈಲ್ ಬಳಸಿ ದೂರವಾಣಿ ಕರೆ ಮಾಡುವುದರ (ವಾಯ್ಸ್) ಜೊತೆಗೆ ದತ್ತಾಂಶದ ವರ್ಗಾವಣೆಯನ್ನೂ (ಡೇಟಾ) ಸಾಧ್ಯವಾಗಿಸಿ ಮೊಬೈಲ್ ದೂರವಾಣಿ ವ್ಯವಸ್ಥೆಗೆ ಡಿಜಿಟಲ್ ಸ್ಪರ್ಶ ನೀಡಿತು. ಎಸ್ಸೆಮ್ಮೆಸ್ ಸೌಲಭ್ಯಕ್ಕೆ ಅಭೂತಪೂರ್ವ ಜನಪ್ರಿಯತೆ ತಂದುಕೊಟ್ಟಿದ್ದು ಇದೇ ೨ಜಿ. ನಿರಂತರ ಅಂತರಜಾಲ ಸಂಪರ್ಕವನ್ನು ಸಾಧ್ಯವಾಗಿಸಿದ ಜಿಪಿಆರ್‌ಎಸ್ (ಜನರಲ್ ಪ್ಯಾಕೆಟ್ ರೇಡಿಯೋ ಸರ್ವಿಸ್) ಹಾಗೂ ಅದಕ್ಕಿಂತ ಹೆಚ್ಚು ವೇಗದ ಎಜ್ (ಎನ್‌ಹಾನ್ಸ್‌ಡ್ ಡೇಟಾ ರೇಟ್ಸ್ ಫಾರ್ ಜಿಎಸ್‌ಎಂ ಎವಲ್ಯೂಶನ್) ಸೌಲಭ್ಯಗಳ ಪರಿಚಯವಾದದ್ದೂ ೨ಜಿ ಅಂಗವಾಗಿಯೇ.

೨ಜಿ ತಂತ್ರಜ್ಞಾನದ ನಂತರ ಬಂದ ಮೂರನೇ ತಲೆಮಾರಿನ ತಂತ್ರಜ್ಞಾನ (೩ಜಿ) ಮೊಬೈಲ್ ಫೋನ್ ಬಳಕೆಯ ಸ್ವರೂಪದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತಂದಿತು. ಮೊಬೈಲ್ ಹ್ಯಾಂಡ್‌ಸೆಟ್ ಎನ್ನುವುದು ದೂರವಾಣಿ ಕರೆಗಳನ್ನು ಮಾಡುವ, ಎಸ್ಸೆಮ್ಮೆಸ್ ಕಳುಹಿಸುವ, ಅಪರೂಪಕ್ಕೊಮ್ಮೆ ಇಮೇಲ್ ಬಳಸುವ ಸಾಧನದಿಂದ ಸದಾಕಾಲವೂ ನಮ್ಮ ಜೊತೆಯಲ್ಲಿರುವ ಪುಟಾಣಿ ಕಂಪ್ಯೂಟರ್ ಆಗಿ ಬದಲಾದದ್ದು ೩ಜಿ ಬಂದಮೇಲೆಯೇ ಎನ್ನಬಹುದು. ಬೇಕೆಂದಾಗ ಬೇಕೆಂದಲ್ಲಿ ಬೇಕಾದಷ್ಟು ಹೊತ್ತು ಅಂತರಜಾಲದ ಮಾಯಾಜಾಲವನ್ನು ನಮ್ಮ ಅಂಗೈಯಲ್ಲೇ ತೆರೆದುಕೊಳ್ಳಲು ೩ಜಿ ತಂತ್ರಜ್ಞಾನ ಸಾಧ್ಯವಾಗಿಸಿತು.

ತಂತ್ರಜ್ಞಾನ ಲೋಕದಲ್ಲಿ ಬದಲಾವಣೆಯೊಂದೇ ಶಾಶ್ವತ ಎಂದಮೇಲೆ ೩ಜಿಯೇ ಅಂತಿಮ ಎಂದು ಸುಮ್ಮನಿರುವುದು ಸಾಧ್ಯವೆ? ೩ಜಿ ತಂತ್ರಜ್ಞಾನಕ್ಕಿಂತ ಹೆಚ್ಚಿನ ಸೌಲಭ್ಯಗಳ ಹುಡುಕಾಟ ನಡೆಯಬೇಕಲ್ಲ!

ಈ ಹುಡುಕಾಟದ ಪರಿಣಾಮವಾಗಿ ರೂಪುಗೊಂಡಿರುವುದೇ ೪ಜಿ, ಅಂದರೆ ನಾಲ್ಕನೇ ತಲೆಮಾರಿನ ಮೊಬೈಲ್ ತಂತ್ರಜ್ಞಾನ. ಡೌನ್‌ಲೋಡ್‌ಗಳಿರಲಿ, ಎಚ್‌ಡಿ ವೀಡಿಯೋ ವೀಕ್ಷಣೆ ಅಥವಾ ವೀಡಿಯೋ ಚಾಟ್ ಇರಲಿ, ಅಂತರಜಾಲದಲ್ಲಿ ಗೆಳೆಯರೊಡನೆ ಆಡುವ ಗೇಮ್‌ಗಳೇ ಇರಲಿ - ಅದನ್ನೆಲ್ಲ ಅದ್ಭುತ ವೇಗದಲ್ಲಿ ಸಾಧ್ಯವಾಗಿಸುವುದು ೪ಜಿ ತಂತ್ರಜ್ಞಾನದ ಹೆಚ್ಚುಗಾರಿಕೆ.೩ಜಿ ತಂತ್ರಜ್ಞಾನದಲ್ಲಿ ಸಾಧ್ಯವಾಗುತ್ತಿದ್ದ ೧ ರಿಂದ ೨೧ ಮೆಗಾಬಿಟ್ಸ್/ಸೆಕೆಂಡ್ ವೇಗದ ಅಂತರಜಾಲ ಸಂಪರ್ಕದ ಹೋಲಿಕೆಯಲ್ಲಿ ನೋಡಿದರೆ ೪ಜಿ ೨ ರಿಂದ ೧೦೦ ಮೆಗಾಬಿಟ್ಸ್/ಸೆಕೆಂಡ್ ವೇಗದ ಸಂಪರ್ಕಗಳನ್ನು ಸಾಧ್ಯವಾಗಿಸಬಲ್ಲದು. ೨ಜಿ ತಂತ್ರಜ್ಞಾನದ ಜಿಪಿಆರ್‌ಎಸ್ ಅಥವಾ ಎಜ್ ಬಳಸುವ ಅಂತರಜಾಲ ಸಂಪರ್ಕಗಳ ವೇಗ ಕೇವಲ ೫೬ ರಿಂದ ೧೪೪ ಕಿಲೋಬಿಟ್ಸ್/ಸೆಕೆಂಡ್‌ನಷ್ಟು ಮಾತ್ರವೇ ಇರುತ್ತದೆ ಎನ್ನುವುದನ್ನು ಗಮನಿಸಿದರೆ ೪ಜಿ ತರಲು ಹೊರಟಿರುವ ಕ್ರಾಂತಿ ಯಾವ ಮಟ್ಟದ್ದು ಎಂದು ಅರಿವಾಗಬಹುದೇನೋ. ಅಂದಹಾಗೆ ೪ಜಿ ಮೊಬೈಲ್ ಜಾಲಗಳು ಬಳಸುವ ಮಾನಕಗಳಿಗೆ (ಸ್ಟಾಂಡರ್ಡ್) ವೈಮ್ಯಾಕ್ಸ್ ಹಾಗೂ ಎಲ್‌ಟಿಇ (ಲಾಂಗ್ ಟರ್ಮ್ ಎವಲ್ಯೂಶನ್) ಎರಡು ಉದಾಹರಣೆಗಳು.

೪ಜಿ ಸೇವೆಗಳು ನಮ್ಮ ದೇಶದಲ್ಲಿ ಮೊದಲಿಗೆ ಪ್ರಾರಂಭವಾದದ್ದು ಡಾಂಗಲ್ ಆಧರಿತ ಅಂತರಜಾಲ ಸಂಪರ್ಕದ ರೂಪದಲ್ಲಿ. ಇದೀಗ ಕೆಲವೇ ಮಾದರಿಯ ಹ್ಯಾಂಡ್‌ಸೆಟ್ ಬಳಕೆದಾರರಿಗೆ ೪ಜಿ ಮೊಬೈಲ್ ಸಂಪರ್ಕಗಳೂ ಲಭ್ಯವಿವೆ. ಸದ್ಯ (ಜುಲೈ ೨೦೧೪ರ ಅಂತ್ಯದಲ್ಲಿದ್ದಂತೆ) ೪ಜಿ ಸಂಪರ್ಕಗಳು ದೇಶದ ಕೆಲವು ಭಾಗಗಳಲ್ಲಷ್ಟೆ ಲಭ್ಯವಿದೆಯಾದರೂ ಮುಂದಿನ ವರ್ಷದ ವೇಳೆಗೆ ಈ ಚಿತ್ರಣ ಗಮನಾರ್ಹವಾಗಿ ಬದಲಾಗುವ ನಿರೀಕ್ಷೆಯಿದೆ.  

೩ಜಿ ಸಂಪರ್ಕಗಳೇ ಇನ್ನೂ ಹೊಸದು ಎನ್ನುವ ಭಾವನೆಯಿರುವ ಭಾರತೀಯ ಮಾರುಕಟ್ಟೆ ೪ಜಿ ತಂತ್ರಜ್ಞಾನಕ್ಕೆ ಈಗಷ್ಟೇ ತೆರೆದುಕೊಳ್ಳುತ್ತಿದೆಯಾದರೂ ೪ಜಿ ಸಾಧ್ಯತೆಗಳ ಬಗ್ಗೆ ಸಾಕಷ್ಟು ಆಸಕ್ತಿ ಈಗಾಗಲೇ ವ್ಯಕ್ತವಾಗಿದೆ. ಮುಂದಿನ ದಿನಗಳಲ್ಲಿ ಈ ಆಸಕ್ತಿ ಇನ್ನಷ್ಟು ಹೆಚ್ಚಲಿದೆ ಎನ್ನುವ ನಿರೀಕ್ಷೆ ಕೂಡ ಸಹಜವಾಗಿಯೇ ಮೂಡಿದೆ. ಎಷ್ಟೇ ಆದರೂ ಪ್ರಪಂಚದಲ್ಲೇ ಅತಿವೇಗವಾಗಿ ಬೆಳೆಯುತ್ತಿರುವ ಮೊಬೈಲ್ ಮಾರುಕಟ್ಟೆಗಳಲ್ಲಿ ನಮ್ಮ ದೇಶಕ್ಕೂ ಮಹತ್ವದ ಸ್ಥಾನ ಇದೆಯಲ್ಲ!

ಆದರೆ ೪ಜಿ ಸಂಪರ್ಕಗಳು ವ್ಯಾಪಕವಾಗಿ ಬಳಕೆಗೆ ಬರಲು ಇನ್ನಷ್ಟು ಸಮಯ ಬೇಕಾಗಬಹುದು ಎಂದು ತಜ್ಞರು ಹೇಳುತ್ತಾರೆ. ಸದ್ಯ ಮಾರುಕಟ್ಟೆಯಲ್ಲಿರುವ ಬಹಳಷ್ಟು ಹ್ಯಾಂಡ್‌ಸೆಟ್‌ಗಳು ೪ಜಿ ತಂತ್ರಜ್ಞಾನವನ್ನು ಬೆಂಬಲಿಸದಿರುವುದು ಹಾಗೂ ೪ಜಿ ಸಂಪರ್ಕಗಳ ದುಬಾರಿ ಬೆಲೆ ಸಾಮಾನ್ಯ ಬಳಕೆದಾರರನ್ನು ಸದ್ಯದ ಮಟ್ಟಿಗೆ ೪ಜಿಯಿಂದ ದೂರವಿಡಬಹುದು ಎನ್ನುವುದು ಅವರ ಅಭಿಪ್ರಾಯ.

ಆಗಸ್ಟ್ ೬, ೨೦೧೪ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

1 ಕಾಮೆಂಟ್‌:

Deepak R Mohan ಹೇಳಿದರು...

Very well written.. ವಿಷಯದ ವಿವರಣೆಯನ್ನು ಸುಂದರವಾಗಿ ಮಾಡಲಾಗಿದೆ.

badge