ಶುಕ್ರವಾರ, ಜುಲೈ 11, 2014

ಕೊಳ್ಳೇಗಾಲ ಶರ್ಮ ಹೇಳುತ್ತಾರೆ... "ವಿಜ್ಞಾನದ ವಿಷಯಗಳು ಎಲ್ಲವೂ ನಮ್ಮ ಇಂದ್ರಿಯಗಳಿಗೆ ನೇರವಾಗಿ ನಿಲುಕುವಂತಹವಲ್ಲ"

ಕನ್ನಡ ವಿಜ್ಞಾನ ಸಂವಹನಕಾರರಲ್ಲಿ ಕೊಳ್ಳೇಗಾಲ ಶರ್ಮರದು ಪ್ರಮುಖ ಹೆಸರು. ಸಾವಿರಕ್ಕೂ ಹೆಚ್ಚು ಲೇಖನ, ಅಂಕಣಬರಹಗಳನ್ನು ಬರೆದಿರುವ ಶರ್ಮರ 'ವಿಜ್ಞಾನ' ಅಂಕಣ ಕನ್ನಡಪ್ರಭ ಪತ್ರಿಕೆಯಲ್ಲಿ ಸುದೀರ್ಘಕಾಲ ಪ್ರಕಟವಾಗಿತ್ತು. 'ಸೈನ್ಸ್ ರಿಪೋರ್ಟರ್' ಸಂಪಾದಕ ಮಂಡಲಿಯ ಸದಸ್ಯರಾಗಿ, ಹಂಪಿ ವಿವಿ ಪ್ರಕಟಣೆ 'ವಿಜ್ಞಾನ ಸಂಗಾತಿ'ಯ ಆರಂಭದ ಸಂಚಿಕೆಗಳಿಗೆ ಗೌರವ ಸಂಪಾದಕರಾಗಿಯೂ ಸೇವೆ ಸಲ್ಲಿಸಿರುವ ಶರ್ಮ ಮೈಸೂರಿನ ಕೇಂದ್ರ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆಯ ಪ್ರಚಾರ ವಿಭಾಗದಲ್ಲಿ ಕೆಲಸಮಾಡುತ್ತಿದ್ದಾರೆ. 'ಮರಳ ಮೇಲಿನ ಹೆಜ್ಜೆಗಳು', 'ಭೂಮಿಗುದುರಿತೆ ಜೀವ? ಮತ್ತು ಇತರ ಪ್ರಶ್ನೆಗಳು' ಮೊದಲಾದ ಕೃತಿಗಳನ್ನು ರಚಿಸಿರುವ ಇವರಿಗೆ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ 'ಶ್ರೇಷ್ಠ ಲೇಖಕ' ಗೌರವ ಲಭಿಸಿದೆ. ಇಜ್ಞಾನ ಡಾಟ್ ಕಾಮ್ ಸಂಪಾದಕ ಟಿ. ಜಿ. ಶ್ರೀನಿಧಿ ಜೊತೆಗೆ ಅವರು ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದು ಹೀಗೆ...

ವಿಜ್ಞಾನ-ತಂತ್ರಜ್ಞಾನ ಸಂವಹನ ಕ್ಷೇತ್ರಕ್ಕೆ ನೀವು ಬರಲು ಕಾರಣವಾದ ಅಂಶಗಳೇನು?
ನನ್ನನ್ನು ವಿಶೇಷವಾಗಿ ಆಕರ್ಷಿಸಿದ ಸಂಗತಿಗಳನ್ನು ಇತರರ ಜೊತೆಗೆ ಹಂಚಿಕೊಳ್ಳಬೇಕು ಎನ್ನುವ ಹಂಬಲ. ವಿಜ್ಞಾನದ ವಿಷಯಗಳು ಎಲ್ಲವೂ ನಮ್ಮ ಇಂದ್ರಿಯಗಳಿಗೆ ನೇರವಾಗಿ ನಿಲುಕುವಂತಹವಲ್ಲ. ಹೀಗಾಗಿ ನಾನು ಅರಿತುಕೊಂಡದ್ದನ್ನು ಬೇರೆಯವರಿಗೆ ತಿಳಿಸುವಾಗ ಸಂವಹನದ ಹಲವು ಸೂತ್ರಗಳನ್ನು ಬಳಸಬೇಕಾಗುತ್ತದೆ ಎನ್ನುವುದು ಅರ್ಥವಾಯಿತು. ಕೆಲವು ಹಿರಿಯ ಲೇಖಕರ ಬರಹಗಳನ್ನು ಓದಿ ಪ್ರೇರಣೆಯೂ ಆಗಿತ್ತು. ಇದು ವಿಜ್ಞಾನ ಸಂವಹನ ಕ್ಷೇತ್ರಕ್ಕೆ ಬರಲು ಮುಖ್ಯ ಕಾರಣ.

ನೀವು ಮೆಚ್ಚುವ / ನಿಮ್ಮ ಮೇಲೆ ಪ್ರಭಾವ ಬೀರಿದ ಇತರ ವಿಜ್ಞಾನ ಸಂವಹನಕಾರರು ಯಾರು?
ಬಾಲ್ಯದಲ್ಲಿ ನಾನು ಓದಿದ ಜಿ. ಟಿ. ನಾರಾಯಣರಾಯರ ಕೃತಿ - ನಕ್ಷತ್ರಗಳನ್ನು ಕುರಿತದ್ದು - ಈ ವಿಶ್ವದ ವಿಸ್ತಾರ, ನಕ್ಷತ್ರಗಳ ಅಗಣಿತ ಸಂಖ್ಯೆಯನ್ನು ಮನಸ್ಸಿಗೆ ಮುಟ್ಟಿಸಿ ವಿಜ್ಞಾನದಲ್ಲಿ ಆಸಕ್ತಿ ಹುಟ್ಟಿಸಿತು.
ಅಬ್ರಾಹಂ ಕೋವೂರ್ ಕೃತಿಗಳು ವಿಜ್ಞಾನ ಮತ್ತು ವಿಚಾರಗಳ ನಡುವಿನ ಸಂಬಂಧವನ್ನು ತಿಳಿಸಿಕೊಟ್ಟವು.

ಇಂಗ್ಲಿಷಿನಲ್ಲಿಯೂ ವಿಜ್ಞಾನದ ಸಂವಹನ ಬಹಳ ಕಷ್ಟ. ಅದನ್ನು ಸರಳವಾಗಿ, ಆಕರ್ಷಕವಾಗಿ ಮಾಡಬಹುದು ಎಂದು ನಿರೂಪಿಸಿದವರು ಜಿ. ಪಿ. ಫೋಂಡ್ಕೆ. ಮರಾಠಿ ಹಾಗೂ ಇಂಗ್ಲಿಷ್ ಎರಡರಲ್ಲೂ ಸರಾಗವಾಗಿ ಬರೆಯುವ ಇವರ ಸಾಮರ್ಥ್ಯವೂ ನನಗೆ ಪ್ರೇರಣೆ.


ಬರೆದರೆ ಸಾಲದು, ಅದನ್ನು ಚೊಕ್ಕ ಮಾಡಬೇಕು ಎಂದು ಕಲಿಸಿದವರು, ನನ್ನ ಎಲ್ಲ ಪ್ರಯೋಗಗಳನ್ನೂ ಪ್ರೋತ್ಸಾಹಿಸುವವರು ಅಡ್ಯನಡ್ಕ ಕೃಷ್ಣಭಟ್. ನನ್ನ ವಿತಂಡವಾದಗಳನ್ನು ಸಾರಾಸಗಟಾಗಿ ಬಿಸಾಡದೆ ಅದರಲ್ಲೇ ಹೊಸ ಸುಳಿವು, ಹೊಸ ಪ್ರಯೋಗಗಳಿಗೆ ಇರುವ ಅವಕಾಶಗಳನ್ನು ಸದಾ ಎತ್ತಿ ತೋರಿಸುವವರು ಅವರು. ವಿಷಯದಲ್ಲಿ ಕುತೂಹಲವಷ್ಟೇ ಇದ್ದರೆ ಸಾಲದು, ಉಪಯುಕ್ತತೆಯೂ ಇರಬೇಕು ಎಂದು ಪಾಠ ಹೇಳಿದವರು, ಬರೆಯಲು ಉತ್ತೇಜನ ನೀಡಿದವರು ನಾಗೇಶ ಹೆಗಡೆ. ಸಾಹಿತ್ಯಕ್ಕೆ ಪೂರಕವಾಗಿ ವಿಜ್ಞಾನವನ್ನು ಬಳಸುವ ಬಗ್ಗೆ ಟಿ. ಆರ್. ಅನಂತರಾಮು ನನ್ನ ಗುರು. ಇನ್ನು ಬಿಜಿಎಲ್ ಸ್ವಾಮಿಯವರಂತೂ ನಮ್ಮಂತಹ ಏಕಲವ್ಯರಿಗೆ ದ್ರೋಣಾಚಾರ್ಯರು. 'ಹಸುರು ಹೊನ್ನು' ಓದಿದ ಮೇಲೆ ಅವರ ಶಿಷ್ಯನಾಗಬೇಕೆಂದು ಹಂಬಲಿಸಿ ಸ್ನಾತಕೋತ್ತರ ಪದವಿಗೆ ಸೇರಿದೆ. ಆದರೆ ನನ್ನ ಕನಸು ನನಸಾಗಲೇ ಇಲ್ಲ. ವಿಧಿ ಎಂಬ ಸಾಹೇಬ ನನ್ನ-ಅವರ ಹಾದಿಯನ್ನು ಬದಲಿಸಿಬಿಟ್ಟಿದ್ದ.

ನಿಮ್ಮ (ಹಾಗೂ ಇತರ ಸಂವಹನಕಾರರ) ಕೆಲಸವನ್ನು ಸಮಾಜ ಹೇಗೆ ಸ್ವೀಕರಿಸುತ್ತಿದೆ? 
ಸಮಾಜದಿಂದ ಮಿಶ್ರ ಪ್ರತಿಕ್ರಿಯೆ ದೊರೆಯುತ್ತಿದೆ. ಅರಿತವರು ಹುಳುಕು ಹುಡುಕುತ್ತಾರೆ, ಅರಿಯದವರು ಹೂವು ಮುಡಿಸುತ್ತಿದ್ದಾರೆ.

ಈ ಕ್ಷೇತ್ರದಲ್ಲಿ ನೀವು ಮಾಡಬಯಸುವ ಮುಂದಿನ ಕೆಲಸ ಯಾವುದು?
ವಿಜ್ಞಾನ ಕಥೆಗಳು, ವಿಶಿಷ್ಟ ವಿಜ್ಞಾನ ಪತ್ರಿಕೆ, ವಿಜ್ಞಾನಕ್ಕೆ ಸಂಬಂಧಿಸಿದ ಚಲನಚಿತ್ರಗಳು, ಅಧ್ಯಯನ - ಹೀಗೆ ಬೇಕಾದಷ್ಟಿವೆ!

ವಿಜ್ಞಾನ ಸಂವಹನ ಹೊರತುಪಡಿಸಿ ನಿಮ್ಮ ಇತರ ಆಸಕ್ತಿಗಳು ಯಾವುವು?
ಓದು, ಬರಹ, ನಿದ್ದೆ! ಕೆಲವೊಮ್ಮೆ ಅಡುಗೆ, ಛಾಯಾಗ್ರಹಣ.

ಶ್ರೀ ಕೊಳ್ಳೇಗಾಲ ಶರ್ಮರವರ ಪುಸ್ತಕಗಳನ್ನು ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

ಕನ್ನಡದ ವಿಜ್ಞಾನ - ತಂತ್ರಜ್ಞಾನ ಸಂವಹನಕಾರರು ಅವರ ಬರವಣಿಗೆಯ ಮೂಲಕ ಬಹಳಷ್ಟು ಓದುಗರಿಗೆ ಪರಿಚಿತರು. ಆದರೆ ವೈಯಕ್ತಿಕವಾಗಿ ಅವರ ಪರಿಚಯ ಬಹಳಷ್ಟು ಓದುಗರಿಗೆ ಇರುವುದಿಲ್ಲ. ಈ ಕೊರತೆಯನ್ನು ಹೋಗಲಾಡಿಸುವ ದೃಷ್ಟಿಯಿಂದ ಇಜ್ಞಾನ ಡಾಟ್ ಕಾಮ್ ಪ್ರಾರಂಭಿಸಿರುವ ಸಂದರ್ಶನ ಸರಣಿಯೇ 'ಪೆನ್ ಸ್ಟಾಂಡ್'. ಈ ಸರಣಿಯ ಬಗ್ಗೆ ನಿಮ್ಮ ಅನಿಸಿಕೆ - ಅಭಿಪ್ರಾಯಗಳಿಗೆ ಹಾರ್ದಿಕ ಸ್ವಾಗತ!

ಕಾಮೆಂಟ್‌ಗಳಿಲ್ಲ:

badge