ಭಾನುವಾರ, ಜೂನ್ 29, 2014

ಛಾಯಾಗ್ರಹಣ ಲೋಕದ ಪಕ್ಷಿನೋಟ

ಕೃತಿಪರಿಚಯ: ಕೆ. ಎಸ್. ರಾಜಾರಾಮ್, AFIAP

ಪುಸ್ತಕ ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ
ನಾನು ಕ್ಯಾಮೆರಾ ಕಂಡದ್ದು ಸುಮಾರು ನಲವತ್ತರಿಂದ ನಲವತ್ತೈದು ವರ್ಷ ಹಿಂದೆ. ಅಪರ್ಚರ್, ಶಟರ್ ಸ್ಪೀಡ್, ಫಿಲ್ಮಿನ ಐಎಸ್‌ಓ ಸೆನ್ಸಿಟಿವಿಟಿ, ಲೆನ್ಸ್ ಕ್ವಾಲಿಟಿ, ಫೋಕಸ್ ಇತ್ಯಾದಿ ಅಂಶಗಳನ್ನು ಅಲ್ಪಸ್ವಲ್ಪ ಅರ್ಥಮಾಡಿಕೊಂಡು ಕ್ಲಿಕ್ ಮಾಡಿದಾಗ ಸುಮಾರಾದ ಚಿತ್ರ ಮೂಡಿಬರುತ್ತಿದ್ದ ಕಾಲ ಅದು. ಹಲವಾರು ತಿಂಗಳು-ವರ್ಷ ಎದ್ದು ಬಿದ್ದು, ಕೈ-ಕಿಸೆ ಸುಟ್ಟ ಮೇಲೆ ಸಾಧನೆಯ ಮೆಟ್ಟಿಲು ಹತ್ತಿದ ಸಮಾಧಾನ ಪಡೆಯುತ್ತಿದ್ದ ದಿನಗಳವು.

ಆದರೆ ಈಚೆಗೆ ಡಿಜಿಟಲ್ ಮಹಾಶಯ ಬೃಹದಾಕಾರ ತಳೆದು ಎಲ್ಲ ರಂಗಗಳಲ್ಲೂ ವಿಜೃಂಭಿಸುತ್ತಿದ್ದಾನಲ್ಲ. ಹಾಗಾಗಿ ಬೇರೆಲ್ಲ ಕಡೆಗಳಂತೆ ಛಾಯಾಗ್ರಹಣದಲ್ಲೂ ಡಿಜಿಟಲ್ ಇಂದಿನ ಜೀವನ ಕ್ರಮವಾಗಿದೆ. ವಿವಿಧ ಮಾದರಿಯ ಡಿಜಿಟಲ್ ಕ್ಯಾಮೆರಾಗಳು ಈಗ ಸುಲಭ ಬೆಲೆಗೆ ಲಭ್ಯ. ಅಷ್ಟೇ ಅಲ್ಲ, ಹೊಸಹೊಸ ಬಗೆಯ ಅತ್ಯಾಧುನಿಕ ಕ್ಯಾಮೆರಾಗಳನ್ನು ಬಳಸಿ ಫೋಟೋ ತೆಗೆಯುವುದೂ ಬಲು ಸುಲಭ!

ಆದರೆ ಇಷ್ಟರಿಂದಲೇ ನಮಗೆ ಛಾಯಾಗ್ರಹಣ ಗೊತ್ತು ಎಂದುಕೊಳ್ಳುವಂತಿಲ್ಲವಲ್ಲ. ಹೀಗಿರುವಾಗ ಸ್ವಲ್ಪ ಉತ್ತಮ ಮಾದರಿಯ ಕ್ಯಾಮೆರಾ ಇರುವ, ಛಾಯಾಗ್ರಹಣದಲ್ಲಿ ತಮ್ಮ ಕೈಚಳಕ ತೋರಿಸಲು ಇಚ್ಛೆ ಪಡುವ ಕೆಲವರಾದರೂ ಈ ದಿಸೆಯಲ್ಲಿ ಅಲ್ಪಸ್ವಲ್ಪ ಓದಿಕೊಂಡರೆ ಉತ್ತಮ ಅಲ್ಲವೇ? ತಾವು ಕೈಹಿಡಿದಿರುವ ಕ್ಯಾಮೆರಾ ಏನೇನು ಮಾಡಬಲ್ಲದು, ಅದರ ಗುಲಾಮನಾಗದೆ ನಾವೇ ಅದನ್ನು ಸವಾರಿ ಮಾಡುವುದು ಹೇಗೆ? ಗೆಳೆಯನೊಬ್ಬನಿಗಿಂತ ನಾನು ಹೇಗೆ ಭಿನ್ನವಾಗಿ ಚಿತ್ರಿಸಬಹುದು? - ಇಂತಹ ಕಾಡುವ ಪ್ರಶ್ನೆಗಳು ನಿಮ್ಮದಾಗಿದ್ದರೆ ಬನ್ನಿ, ಯುವ ಬರಹಗಾರ ಶ್ರೀನಿಧಿ ಒಂದು ಸುಲಭ ಪರಿಹಾರ ದೊರಕಿಸಿದ್ದಾರೆ.

ಡಿಜಿಟಲ್ ಯುಗದ ಹೊಸ ಆವಿಷ್ಕಾರಗಳ ಬಗ್ಗೆ ಕನ್ನಡದಲ್ಲಿ ಲೇಖನ-ಅಂಕಣಗಳನ್ನು ಬರೆಯುವುದರ ಜೊತೆಗೆ ಅವರು ಹಲವಾರು ಪುಸ್ತಕಗಳನ್ನೂ ಹೊರತಂದಿದ್ದಾರಷ್ಟೆ; ಆ ಸಾಲಿಗೆ ಡಿಜಿಟಲ್ ಛಾಯಾಗ್ರಹಣದ ಪರಿಚಯಮಾಡಿಕೊಡುವ ಅವರ ಕೃತಿ 'ಕ್ಲಿಕ್ ಮಾಡಿ ನೋಡಿ!' ಹೊಸ ಸೇರ್ಪಡೆ.

ಕನ್ನಡದ ಸಂದರ್ಭದಲ್ಲಂತೂ ಈ ರೀತಿಯ ಪುಸ್ತಕ ಬಹುಮುಖ ಪಾತ್ರವಹಿಸಲಿದೆ. ಡಿಜಿಟಲ್ ಛಾಯಾಗ್ರಹಣ ಕ್ಷೇತ್ರದಲ್ಲಿ ಏನೇನು ಆಗುತ್ತಿದೆ ಎಂದು ತಿಳಿಯಲು ಪ್ರಯತ್ನಿಸುವ ಸಾಮಾನ್ಯ ಓದುಗನ ಕುತೂಹಲ ತಣಿಸಲು ಶ್ರೀನಿಧಿಯವರ ಈ ಪುಸ್ತಕ ಒಂದು ಉತ್ತಮ ಕನ್ನಡಿ. ಸ್ವಲ್ಪ ಫೋಟೋಗ್ರಫಿ ಆಸಕ್ತಿ ಇದ್ದವರಿಗಂತೂ ತಮ್ಮ ಅರಿವನ್ನು ವಿಸ್ತರಿಸಿಕೊಳ್ಳಲು ಇದು ಅಪರೂಪದ ಭಾಷಾ ಸಂವಹನವೂ ಇರುವ ಖಜಾನೆ. ದೊಡ್ಡಗಾತ್ರದ (೧/೪ ಡೆಮಿ) ಈ ಕೃತಿಯ ಎಲ್ಲ ಪುಟಗಳೂ ಬಹುವರ್ಣದಲ್ಲಿ ಮುದ್ರಿತವಾಗಿವೆ ಎನ್ನುವುದು ಇನ್ನೊಂದು ವಿಶೇಷ.


ಈ ಪುಸ್ತಕದ ವಿವಿಧ ಆಯಾಮಗಳನ್ನು ಗಮನಿಸಿದಾಗ ಪ್ರತಿ ವಿಷಯದಲ್ಲೂ ಶ್ರೀನಿಧಿಯವರದೇ ಆದ ಸಹಜ ಸುಲಭ ನಿರೂಪಣೆ, ಸ್ವಾಭಾವಿಕವಾಗಿ ಅರ್ಥವಾಗುವ ಸುಲಲಿತ ವೈಖರಿ, ಕ್ಲಿಷ್ಟವಾದ ತಾಂತ್ರಿಕ ವಿಷಯಗಳನ್ನೂ ಸರಳವಾಗಿ ಬಿಡಿಸಿ ಹೇಳುವ ಶೈಲಿ ಅನನ್ಯವಾಗಿವೆ. ಆಂಗ್ಲ ಭಾಷೆಯಲ್ಲಿ ಪ್ರಚಲಿತವಾಗಿರುವ ಕೆಲವಾರು ಶಬ್ದಗಳನ್ನು ಹಾಗೆಯೇ ಇಟ್ಟು ವಿವರಿಸುವ ಚಾಕಚಕ್ಯತೆಯ ಒಂದು ಉತ್ತಮ ಮಾದರಿಯೂ ಇಲ್ಲಿದೆ. ಸುಮ್ಮನೆ ಯಾರೋ ಪರಿಣತರನ್ನಷ್ಟೇ ಗಮನದಲ್ಲಿಟ್ಟುಕೊಳ್ಳದ ಅವರ ವಿಷಯ ಸಂಗ್ರಹಣೆ ಎಲ್ಲ ಸಹೃದಯರಿಗೂ ಖುಷಿನೀಡುವ ಓಯಸಿಸ್ ಥರ ಅನ್ನಿಸುತ್ತದೆ.

ಗೊತ್ತಿದ್ದೋ, ಗೊತ್ತಿಲ್ಲದೆಯೋ ತಂತ್ರಜ್ಞಾನದ ಸವಲತ್ತುಗಳನ್ನು ಬಳಸುವ ಹಲವರಿಗೆ ದಿನನಿತ್ಯದ ಭಾಷಾಶೈಲಿಯಲ್ಲಿ ಸೂಕ್ಷ್ಮ ವಿಷಯಗಳನ್ನೂ ಸವಿಸವಿಯಾಗಿ ನಿರೂಪಿಸಿರುವ ರೀತಿ, ಶ್ರೀನಿಧಿಯವರ ಸೃಜನಶೀಲ ಮನಸ್ಸು, ಭಾಷಾ ಸಾಮರ್ಥ್ಯ, ನಿರೂಪಣಾ ಕೌಶಲ್ಯ ಮತ್ತು ಹೊಸ ವಿಷಯಗಳ ಬಗೆಗೆ ಅವರಿಗಿರುವ ಪ್ರೌಢಿಮೆಯನ್ನು ಪ್ರಚುರಪಡಿಸಿವೆ.

ಡಿಜಿಟಲ್ ಛಾಯಾಗ್ರಹಣ ಕ್ಷೇತ್ರದ ವಿವಿಧ ಆಯಾಮಗಳು, ಚಿತ್ರಗಳ ಶೇಖರಣೆ, ಮೆಮೊರಿ ಕಾರ್ಡ್‌ಗಳ ಮಹತ್ವ, ಸೆನ್ಸಿಟಿವಿಟಿಯ ಸೂಕ್ಷ್ಮತೆ, ಮೆಗಾಪಿಕ್ಸೆಲ್‌ಗಳ ಸಾಮರ್ಥ್ಯ, ವೈವಿಧ್ಯಮಯ ಲೆನ್ಸ್, ಕಾಂಪ್ಯಾಕ್ಟಿನಿಂದ ಹಿಡಿದು ದುಬಾರಿ ಡಿಎಸ್‌ಎಲ್‌ಆರ್ ಕ್ಯಾಮೆರಾವರೆಗಿನ ಎಲ್ಲದರಲ್ಲೂ ತಮ್ಮ ವಿಶೇಷತೆ ಮತ್ತು ಅಗತ್ಯವನ್ನು ಓದುಗನಿಗೆ ಮನವರಿಕೆ ಮಾಡಿಕೊಳ್ಳುವ ಶ್ರೀನಿಧಿಯವರ ಬರಹ ತುಂಬಾ ಸುಂದರ. ಎಲ್ಲ ವಿಷಯಗಳ ಬಗೆಗೂ ಗಮನ ಹರಿಸದೇ ದುಡುಕಿ ಏನೇನನ್ನೋ ಕೊಂಡುಬಿಡುವ ಕೊಳ್ಳುಬಾಕತನದ ಬಗೆಗೂ ಅವರು ಎಚ್ಚರಿಸಿದ್ದಾರೆ. ತಮ್ಮ ಅಗತ್ಯಕ್ಕೆ ತಕ್ಕಂತೆ ಎಲ್ಲ ಅಂಶಗಳನ್ನು ಗುರುತು ಹಾಕಿಕೊಂಡು ಮುಂದುವರೆಯಿರಿ ಎಂದು ಶ್ರೀನಿಧಿ ಎಲ್ಲ ಆಸಕ್ತರಿಗೂ ಸೂಕ್ತವಾಗಿ ನಿವೇದಿಸಿರುವುದು ಅವರ ಬರವಣಿಗೆಯ ಮೌಲ್ಯವನ್ನು ಹೆಚ್ಚಿಸಿದೆ.

ಡಿಜಿಟಲ್ ಕ್ಯಾಮೆರಾ ಮೋಡಿ - ಕ್ಲಿಕ್ ಮಾಡಿ ನೋಡಿ!
ಲೇಖಕರು: ಟಿ. ಜಿ. ಶ್ರೀನಿಧಿ
ಡೆಮಿ ೧/೪ ಗಾತ್ರದ ೪೮ ಪುಟಗಳು (ಬಹುವರ್ಣದಲ್ಲಿ)
ಬೆಲೆ: ರೂ. ೧೭೫
ಪ್ರಕಾಶಕರು: ನವಕರ್ನಾಟಕ ಪ್ರಕಾಶನ, ಬೆಂಗಳೂರು 

ಕಾಮೆಂಟ್‌ಗಳಿಲ್ಲ:

badge