ಸೋಮವಾರ, ಮೇ 26, 2014

ಆನ್‌ಲೈನ್ ಶಾಪಿಂಗ್‌ನ ಹಿಂದೆಮುಂದೆ

ಟಿ. ಜಿ. ಶ್ರೀನಿಧಿ


ಪುಸ್ತಕ-ಪೆನ್‌ಡ್ರೈವ್‌ಗಳಿಂದ ಪ್ರಾರಂಭಿಸಿ ಸೋಪು-ಪೌಡರ್-ಶಾಂಪೂಗಳವರೆಗೆ, ಚಪ್ಪಲಿ-ಟೀಶರ್ಟ್-ಕೂಲಿಂಗ್ ಗ್ಲಾಸ್‌ನಿಂದ ಟೀವಿ-ಕಂಪ್ಯೂಟರುಗಳವರೆಗೆ ಸಮಸ್ತವನ್ನೂ ನಮ್ಮ ಕಂಪ್ಯೂಟರಿನ ಮುಂದೆಯೇ ಕುಳಿತು ಖರೀದಿಸುವುದನ್ನು ಸಾಧ್ಯವಾಗಿಸಿದ್ದು ಆನ್‌ಲೈನ್ ಶಾಪಿಂಗ್ ಎಂಬ ಪರಿಕಲ್ಪನೆ.

ತೊಂಬತ್ತರ ದಶಕದ ಕೊನೆಯ ವೇಳೆಗೆ ಡಾಟ್‌ಕಾಂ ಗಾಳಿ ಜೋರಾಗಿ ಬೀಸುತ್ತಿದ್ದ ಕಾಲದಲ್ಲಿ ರೂಪುಗೊಂಡ ಮಹತ್ವಾಕಾಂಕ್ಷಿ ಕಲ್ಪನೆ ಇದು. ಹೊಸದಾಗಿ ವ್ಯಾಪಾರಕ್ಕಿಳಿದಿರುವ ಸ್ಟಾರ್ಟ್‌ಅಪ್‌ಗಳಷ್ಟೇ ಅಲ್ಲದೆ ದೊಡ್ಡದೊಡ್ಡ ಸಂಸ್ಥೆಗಳೂ ಆನ್‌ಲೈನ್ ಶಾಪಿಂಗ್ ಕ್ಷೇತ್ರದತ್ತ ಮುಖಮಾಡಿರುವುದನ್ನು ನಾವಿಂದು ವ್ಯಾಪಕವಾಗಿ ಕಾಣಬಹುದು.

ಪ್ರಸ್ತುತ ನಮ್ಮ ದೇಶದಲ್ಲಿ ಹತ್ತು ಕೋಟಿಗಿಂತ ಹೆಚ್ಚಿನ ಅಂತರಜಾಲ ಬಳಕೆದಾರರಿದ್ದಾರೆ ಎಂದು ಅಂಕಿ ಅಂಶಗಳು ಹೇಳುತ್ತವೆ. ಈ ಸಂಖ್ಯೆ ಬೆಳೆಯುತ್ತಿದ್ದಂತೆಯೇ ಆನ್‌ಲೈನ್ ಶಾಪಿಂಗ್‌ನತ್ತ ಆಸಕ್ತಿಯೂ ಹೆಚ್ಚುತ್ತಿದೆ. ಮಹಾನಗರಗಳಷ್ಟೇ ಅಲ್ಲ, ಸಣ್ಣ ಪಟ್ಟಣಗಳ ನಿವಾಸಿಗಳೂ ತಮ್ಮ ಖರೀದಿಗಳಿಗಾಗಿ ಅಂತರಜಾಲದತ್ತ ಮುಖಮಾಡುತ್ತಿದ್ದಾರೆ.
ಹೀಗಾಗಿ ಶಾಪಿಂಗ್‌ನಂತಹ ಹಣಕಾಸು ವ್ಯವಹಾರಗಳಿಗಾಗಿ ಅಂತರಜಾಲವನ್ನು ವ್ಯಾಪಕವಾಗಿ ಬಳಸುವ ವಿಶ್ವದ ಹತ್ತು ರಾಷ್ಟ್ರಗಳ ಸಾಲಿಗೆ ಭಾರತ ಮುಂಬರುವ ಕೆಲವೇ ವರ್ಷಗಳಲ್ಲಿ ಸೇರಿಕೊಳ್ಳಲಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

ಬಸ್ಸು, ರೈಲು, ವಿಮಾನದ ಟಿಕೇಟುಗಳ ಮುಂಗಡ ಕಾಯ್ದಿರಿಸುವಿಕೆಯಂತೂ ಬಹುಪಾಲು ಜಾಲತಾಣಗಳ ಮೂಲಕವೇ ಆಗುತ್ತಿರುವುದನ್ನು ನಾವು ಈಗಾಗಲೇ ಗಮನಿಸಿದ್ದೇವೆ. ಸಕಲ ವಸ್ತುಗಳನ್ನೂ ಮಾರುವ ಆನ್‌ಲೈನ್ ಸೂಪರ್ ಬಜಾರುಗಳ ಜೊತೆಗೆ ನಿರ್ದಿಷ್ಟ ಬಗೆಯ ವಸ್ತುಗಳನ್ನಷ್ಟೆ ಮಾರಾಟಮಾಡುವ ತಾಣಗಳೂ ನಮ್ಮ ದೇಶದಲ್ಲಿ ಪ್ರಾರಂಭವಾಗಿವೆ; ಇಂತಹ ತಾಣಗಳಲ್ಲಿ ಮಾರಾಟವಾಗುವ ವಸ್ತುಗಳ ವಿಷಯವ್ಯಾಪ್ತಿ ಒಳ ಉಡುಪುಗಳಿಂದ ಲೇಖನ ಸಾಮಗ್ರಿಗಳವರೆಗೆ, ತಾಂತ್ರಿಕ ಪುಸ್ತಕಗಳಿಂದ ಮಕ್ಕಳ ಆಟಿಕೆಗಳವರೆಗೆ ಹರಡಿಕೊಂಡಿರುವುದು ವಿಶೇಷ.ದುಬಾರಿ ಬಾಡಿಗೆ ತೆತ್ತು ಪ್ರಮುಖ ಬೀದಿಗಳಲ್ಲಿ ಅಂಗಡಿ ತೆರೆಯುವ ಹಾಗೂ ಅದರ ನಿರ್ವಹಣೆಗೆ ದೊಡ್ಡಪ್ರಮಾಣದಲ್ಲೇ ಖರ್ಚುಮಾಡಬೇಕಾದ ಅಗತ್ಯ ಆನ್‌ಲೈನ್ ಶಾಪಿಂಗ್ ತಾಣಗಳಿಗೆ ಇರುವುದಿಲ್ಲ. ಹೀಗಾಗಿ ಅವು ಸಾಕಷ್ಟು ಹಣವನ್ನು ಉಳಿತಾಯಮಾಡುತ್ತವೆ. ಹೀಗೆ ಉಳಿಯುವುದರಲ್ಲಿ ಕೆಲಭಾಗವನ್ನು ಅವು ತಮ್ಮ ಗ್ರಾಹಕರಿಗೆ ಬಿಟ್ಟುಕೊಡುವುದರಿಂದ ಸಾಮಾನ್ಯ ಅಂಗಡಿಗಳಿಗಿಂತ ಆನ್‌ಲೈನ್ ಮಳಿಗೆಗಳಲ್ಲಿ ವಸ್ತುಗಳ ಬೆಲೆ ಕಡಿಮೆಯಿರುವ ಸಾಧ್ಯತೆ ಇರುತ್ತದೆ.

ಅದೇನೋ ಸರಿ, ಈ ತಾಣಗಳಲ್ಲಿ ಶಾಪಿಂಗ್ ಮಾಡುವುದು ಹೇಗೆ ಎಂದು ನೀವು ಕೇಳಬಹುದು. ಈ ಪ್ರಶ್ನೆಗೆ ಉತ್ತರ ಬಹಳ ಸರಳವಾದದ್ದು.

ಆನ್‌ಲೈನ್ ಶಾಪಿಂಗ್ ಸಂಸ್ಥೆಗಳ ಜಾಲತಾಣದಲ್ಲಿ ಅವು ಮಾರಾಟಮಾಡುವ ಎಲ್ಲ ವಸ್ತುಗಳ ಚಿತ್ರಸಹಿತ ವಿವರಣೆ ಇರುತ್ತದೆ. ಕೆಲವು ತಾಣಗಳಲ್ಲಿ ಆ ಉತ್ಪನ್ನದ ವೀಡಿಯೋ ಹಾಗೂ ಅದರ ಬಗ್ಗೆ ಇತರ ಬಳಕೆದಾರರು ಬರೆದಿರುವ ವಿಮರ್ಶೆಯೂ ಇರುತ್ತದೆ.

ಇದನ್ನೆಲ್ಲ ನೋಡಿ ಆ ಉತ್ಪನ್ನ ಮನಸ್ಸಿಗೆ ಹಿಡಿಸಿತೆಂದರೆ ಅದರ ಖರೀದಿ ಬಹಳ ಸುಲಭ. ನೆಟ್‌ಬ್ಯಾಂಕಿಂಗ್, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಮುಂತಾದ ಯಾವುದೇ ವಿಧಾನದ ಮೂಲಕ ಹಣ ಪಾವತಿ ಸಾಧ್ಯ. ಅವು ಯಾವುದೂ ಇಲ್ಲ ಎಂದರೂ ಚಿಂತೆಯಿಲ್ಲ, ಚೆಕ್ ಅಥವಾ ಡಿಮ್ಯಾಂಡ್ ಡ್ರಾಫ್ಟ್ ಕೂಡ ಕಳುಹಿಸಬಹುದು. ನಿಮಗೆ ಬೇಕಾದ ವಸ್ತುವನ್ನು ಮನೆಗೆ ತರಿಸಿಕೊಂಡು ಅದನ್ನು ತಂದವರ ಕೈಯಲ್ಲೇ ದುಡ್ಡು ಕೊಟ್ಟು ಕಳುಹಿಸುವ ಕ್ಯಾಷ್ ಆನ್ ಡೆಲಿವರಿ ಆಯ್ಕೆ ಕೂಡ ಅನೇಕ ತಾಣಗಳಲ್ಲಿರುತ್ತದೆ. ಕೆಲ ತಾಣಗಳು ಈ ಆಯ್ಕೆ ಬಳಸುವವರಿಗೆ ಹೆಚ್ಚುವರಿ ಶುಲ್ಕ ವಿಧಿಸುವ ಪದ್ಧತಿ ಇರಿಸಿಕೊಂಡಿವೆ. ಕೆಲವು ಆನ್‌ಲೈನ್ ಶಾಪಿಂಗ್ ಸಂಸ್ಥೆಗಳು ಅಂಚೆವೆಚ್ಚವನ್ನೂ ಪ್ರತ್ಯೇಕವಾಗಿ ಪಡೆದುಕೊಳ್ಳುತ್ತವೆ.ಹಣ ಪಾವತಿಯಾಗುತ್ತಿದ್ದಂತೆ ಆನ್‌ಲೈನ್ ಶಾಪಿಂಗ್ ಸಂಸ್ಥೆ ಅಂಚೆ ಅಥವಾ ಕೊರಿಯರ್ ಮೂಲಕ ನಮ್ಮ ಆಯ್ಕೆಯ ವಸ್ತುವನ್ನು ಮನೆಯ ಬಾಗಿಲಿಗೆ ತಲುಪಿಸುತ್ತದೆ. ಕೆಲವು ಸಂಸ್ಥೆಗಳು ಈ ಕೆಲಸಕ್ಕಾಗಿ ತಮ್ಮದೇ ಉದ್ಯೋಗಿಗಳನ್ನು ನೇಮಿಸಿಕೊಂಡಿರುವುದೂ ಉಂಟು.

ಇದೆಲ್ಲ ಬಹಳ ಸುಲಭ ನಿಜ. ಆದರೆ ಆನ್‌ಲೈನ್ ಶಾಪಿಂಗ್ ಪ್ರಪಂಚದಲ್ಲಿ ಮಾರಾಟಗಾರ ಹಾಗೂ ಖರೀದಿದಾರರ ನಡುವೆ ಮುಖಾಮುಖಿ ಸಂಪರ್ಕ ಇರುವುದಿಲ್ಲವಾದ್ದರಿಂದ ಮಾರಾಟಗಾರನ ವಿಶ್ವಾಸಾರ್ಹತೆ ಹಾಗೂ ಆತ ಮಾರುವ ವಸ್ತುಗಳ ಗುಣಮಟ್ಟದ ಬಗ್ಗೆ ಆದಷ್ಟು ಹೆಚ್ಚಿನ ಮಾಹಿತಿ ಸಂಗ್ರಹಿಸಬೇಕಾದದ್ದು ಅಗತ್ಯ. ವಿಶ್ವಾಸಾರ್ಹರಲ್ಲವೆಂದು ತೋರುವ ವ್ಯಕ್ತಿಗಳ ಹಾಗೂ ಸಂಸ್ಥೆಗಳ ಜೊತೆಗೆ ಯಾವ ಕಾರಣಕ್ಕೂ ವ್ಯವಹರಿಸದಿರುವುದೇ ಒಳ್ಳೆಯದು. ಅಷ್ಟೇ ಅಲ್ಲ, ಒಟ್ಟಾರೆಯಾಗಿ ವಿಶ್ವವ್ಯಾಪಿ ಜಾಲದಲ್ಲಿ ಯಾವುದೇ ರೀತಿಯ ಹಣಕಾಸಿನ ವ್ಯವಹಾರ ನಡೆಸುವಾಗ ನಮ್ಮ ಖಾಸಗಿ ಮಾಹಿತಿಯ ಬಗ್ಗೆ ಕಾಳಜಿವಹಿಸಬೇಕಾದದ್ದೂ ಅನಿವಾರ್ಯವೇ.

[ಜಾಹೀರಾತು] ಫ್ಲಿಪ್‌ಕಾರ್ಟ್‌ನಲ್ಲಿ ನಿಮ್ಮ ನೆಚ್ಚಿನ ವಸ್ತುವಿಗಾಗಿ ಶಾಪಿಂಗ್ ಮಾಡಲು ಈ ಕೊಂಡಿಯನ್ನು ಬಳಸಿ. ಶಾಪಿಂಗ್ ಖುಷಿಯ ಜೊತೆಗೆ ಇಜ್ಞಾನ ಡಾಟ್ ಕಾಮ್‌ಗೆ ಬೆಂಬಲ ನೀಡಿದ ಖುಷಿಯೂ ನಿಮ್ಮದಾಗಲಿ!

ಮೇ ೨೩, ೨೦೧೪ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge