ಮಂಗಳವಾರ, ಮೇ 20, 2014

ನಿಮಗೂ ಒಂದು ವೆಬ್‌ಸೈಟ್ ಬೇಕೆ?

ಟಿ. ಜಿ. ಶ್ರೀನಿಧಿ

ವಿಶ್ವವ್ಯಾಪಿ ಜಾಲ (WWW) ಎಂದಾಕ್ಷಣ ಒಂದಲ್ಲ ಒಂದು ಜಾಲತಾಣದ (ವೆಬ್‌ಸೈಟ್) ಚಿತ್ರ ನಮ್ಮ ಕಣ್ಮುಂದೆ ಬರುತ್ತದೆ. ವಿಶ್ವವ್ಯಾಪಿ ಜಾಲಕ್ಕೂ ಜಾಲತಾಣಗಳಿಗೂ ಇರುವ ಸಂಬಂಧ ಅಂತಹುದು. ವಿಶ್ವವ್ಯಾಪಿ ಜಾಲದಲ್ಲಿರುವ ಮಾಹಿತಿಯೆಲ್ಲ ನಮಗೆ ದೊರಕುವುದು ಜಾಲತಾಣಗಳ ಮೂಲಕವೇ ತಾನೆ!

ಬೇರೆಯವರು ರೂಪಿಸಿದ ಜಾಲತಾಣಗಳನ್ನು ನೋಡುವಾಗ ನಾವೂ ಒಂದು ಜಾಲತಾಣ ರೂಪಿಸಿಕೊಂಡರೆ ಹೇಗೆ ಎನ್ನಿಸುವುದು ಸಹಜ. ನಮ್ಮ ವ್ಯಾಪಾರ-ವಹಿವಾಟುಗಳ ಜಾಹೀರಾತಿಗೆ, ಉದ್ದಿಮೆಯ ಅಭಿವೃದ್ಧಿಗೆ, ಅನಿಸಿಕೆ-ಅಭಿಪ್ರಾಯಗಳ ವಿನಿಮಯಕ್ಕೆ, ಹವ್ಯಾಸದ ಬೆಳವಣಿಗೆಗೆ ನಮ್ಮದೇ ಆದ ಜಾಲತಾಣ ಖಂಡಿತಾ ನೆರವಾಗಬಲ್ಲದು; ಹೊಸ ಅವಕಾಶಗಳ ಬಾಗಿಲನ್ನೂ ತೆರೆಯಬಲ್ಲದು.

ಹಾಗಾದರೆ ನಮ್ಮದೇ ಜಾಲತಾಣವನ್ನು ರೂಪಿಸಿಕೊಳ್ಳುವುದು ಹೇಗೆ?

ನಮ್ಮದೇ ಆದ ಜಾಲತಾಣವೊಂದನ್ನು ರೂಪಿಸಿಕೊಳ್ಳಲು ಹೊರಡುವವರ ಮುಂದೆ ಎರಡು ಆಯ್ಕೆಗಳಿರುತ್ತವೆ: ದುಡ್ಡು ಕೊಟ್ಟು ತಮ್ಮದೇ ಆದ ಯುಆರ್‌ಎಲ್ ಒಂದನ್ನು ಪಡೆದುಕೊಳ್ಳುವುದು, ಅಥವಾ ಉಚಿತ ಜಾಲತಾಣಗಳನ್ನು ಒದಗಿಸುವ ಸಂಸ್ಥೆಗಳ ಸೇವೆಯನ್ನು ಪಡೆದುಕೊಳ್ಳುವುದು.

www.ejnana.com, www.srinidhi.net.in ಮೊದಲಾದ ನಿಮ್ಮದೇ ಸ್ವಂತ ಡೊಮೈನ್ ಬೇಕು ಎನ್ನುವುದಾದರೆ ಮೊದಲಿಗೆ ನಿಮ್ಮ ಆಯ್ಕೆಯ ವಿಳಾಸಕ್ಕಾಗಿ (ಯುಆರ್‌ಎಲ್) ವಾರ್ಷಿಕ ಬಾಡಿಗೆ ನೀಡಬೇಕಾಗುತ್ತದೆ.

ಯುಆರ್‌ಎಲ್‌ಗಳನ್ನು ಒದಗಿಸುವ ಹಾಗೂ ಡೊಮೈನ್ ನೇಮ್ ಸರ್ವರ್‌ಗಳನ್ನು ನಿಭಾಯಿಸುವ ಕೆಲಸ ಮಾಡುವ ಸಂಸ್ಥೆಗಳಿಗೆ ರಿಜಿಸ್ಟ್ರಾರ್‌ಗಳೆಂದು ಹೆಸರು.
ನಮಗೆ ಬೇಕಾದ ಜಾಲತಾಣದ ವಿಳಾಸವನ್ನು ಇಂತಹ ರಿಜಿಸ್ಟ್ರಾರ್‌ಗಳ ಮೂಲಕವೇ ಪಡೆದುಕೊಳ್ಳಬೇಕು. ನಿಮಗೆ ಯಾವ ಬಾಲಂಗೋಚಿಯಿರುವ ವಿಳಾಸ ಬೇಕು (.com, .net, .in ಇತ್ಯಾದಿ; .guru, .technology, .photography ಮುಂತಾದ ಹೊಸ ಬಾಲಂಗೋಚಿಗಳಿರುವ ವಿಳಾಸಗಳೂ ಇದೀಗ ಲಭ್ಯವಿವೆ) ಎನ್ನುವುದರ ಮೇಲೆ ನೀವು ಪಾವತಿಸಬೇಕಾದ ಬಾಡಿಗೆಯ ಮೊತ್ತ ನಿರ್ಧಾರವಾಗುತ್ತದೆ. ಈ ಬಾಡಿಗೆಯ ಮೊತ್ತ ಒಂದೆರಡು ನೂರು ರೂಪಾಯಿಗಳಿಂದ ಸಾವಿರಗಳವರೆಗೂ ಇರಬಹುದು. ಕೆಲವೊಮ್ಮೆ ಪ್ರಾಯೋಜಕರು ಅವನ್ನು ಉಚಿತವಾಗಿ ನೀಡುವುದೂ ಇದೆ.ವಿಳಾಸ ಪಡೆದುಕೊಂಡ ಮೇಲೆ ಜಾಲತಾಣ ನಿರ್ಮಿಸಬೇಕಲ್ಲ. ನಾವು ಹೇಳಬೇಕೆಂದಿರುವ ಮಾಹಿತಿಯನ್ನು ಚಿತ್ರಗಳು, ಪಠ್ಯ, ಧ್ವನಿ ಮುಂತಾದ ಮಾಧ್ಯಮಗಳ ಮೂಲಕ ಹಲವಾರು ಪುಟಗಳಲ್ಲಿ (ವೆಬ್‌ಪೇಜ್) ನಿರೂಪಿಸಿ ಆ ಮಾಹಿತಿಯನ್ನು ಅಗತ್ಯ ಕ್ರಮವಿಧಿಗಳ ಜೊತೆಗೆ ವೆಬ್‌ಸರ್ವರ್ ಒಂದರಲ್ಲಿ ಶೇಖರಿಸಿಡುವುದು ಈ ಹೆಜ್ಜೆಯ ಕೆಲಸ. ಇದಕ್ಕೆ ಹೋಸ್ಟಿಂಗ್ ಎಂದು ಕರೆಯುತ್ತಾರೆ. ಹೋಸ್ಟಿಂಗ್ ಸೇವೆ ಒದಗಿಸುವ ಸಂಸ್ಥೆಗಳಿಗೂ ವರ್ಷಕ್ಕಿಷ್ಟು ಎನ್ನುವ ಲೆಕ್ಕದಲ್ಲಿ ಬಾಡಿಗೆ ನೀಡಬೇಕಾಗುತ್ತದೆ.

ಸಾಮಾನ್ಯವಾಗಿ ಡೊಮೈನ್ ನೇಮ್‌ಗಳನ್ನು ಒದಗಿಸುವ ರಿಜಿಸ್ಟ್ರಾರ್‌ಗಳೇ ವೆಬ್ ಹೋಸ್ಟಿಂಗ್ ಸೇವೆಯನ್ನೂ ಒದಗಿಸುತ್ತವೆ. ನಮ್ಮ ತಾಣಕ್ಕೆ ಬೇಕಾದಷ್ಟು ಜಾಗ, ಅಗತ್ಯವಾದ ತಂತ್ರಾಂಶಗಳು, ಇಮೇಲ್ ವ್ಯವಸ್ಥೆ ಮೊದಲಾದವನ್ನೆಲ್ಲ ಹೊಂದಿಸಿಕೊಡುವುದು ಈ ಸಂಸ್ಥೆಗಳ ಜವಾಬ್ದಾರಿ. ಇಷ್ಟೆಲ್ಲ ಆದ ಕೂಡಲೆ ನಮ್ಮ ಜಾಲತಾಣ ವಿಶ್ವದೆಲ್ಲೆಡೆಯ ಓದುಗರನ್ನು ಸ್ವಾಗತಿಸಲು ಸಜ್ಜಾಗುತ್ತದೆ!

ಜಾಲತಾಣ ಬೇಕು, ಆದರೆ ಅದಕ್ಕಾಗಿ ಹಣಕೊಡಲು ಸಿದ್ಧರಿಲ್ಲ ಎನ್ನುವುದಾದರೆ ಉಚಿತ ಡೊಮೈನ್‌ಗಳು ಹಾಗೂ ವೆಬ್ ಹೋಸ್ಟಿಂಗ್ ಸೇವೆಯನ್ನು ಒದಗಿಸುವ ಸಂಸ್ಥೆಗಳ ನೆರವು ಪಡೆದುಕೊಳ್ಳಬಹುದು. ಈ ಸಂಸ್ಥೆಗಳು ತಮ್ಮ ಬಳಕೆದಾರರಿಗೆ ಮಾಹಿತಿ ಸಂಗ್ರಹಣೆಗಾಗಿ ಸೀಮಿತ ಪ್ರಮಾಣದ ಸ್ಥಳ ಹೊಂದಿರುವ ಜಾಲತಾಣಗಳನ್ನು ಉಚಿತವಾಗಿ ನೀಡುತ್ತವೆ. ಈ ತಾಣಗಳು ವೆಬ್‌ಡಿಸೈನಿಂಗ್‌ನ ಹಿಂದುಮುಂದು ಗೊತ್ತಿಲ್ಲದವರಿಗೆ ನೆರವಾಗುವ ಅನೇಕ ಸೌಲಭ್ಯಗಳನ್ನು ಕೂಡ ಉಚಿತವಾಗಿ ಒದಗಿಸುತ್ತವೆ. ಆದರೆ ಇಂತಹ ಉಚಿತ ಜಾಲತಾಣಗಳ ಯುಆರ್‌ಎಲ್ www.mysite.com ಎನ್ನುವಂತಹ ರೂಪದಲ್ಲಿರದೆ mysite.tripod.comನಂತಿರುತ್ತದೆ. ಅಲ್ಲದೆ ಇಂತಹ ತಾಣಗಳನ್ನು ಒದಗಿಸುವ ಸಂಸ್ಥೆಗಳು ಆ ತಾಣದಲ್ಲಿ ಜಾಹೀರಾತುಗಳನ್ನೂ ಪ್ರದರ್ಶಿಸುತ್ತವೆ.

ಇದಕ್ಕಿಂತ ಸುಲಭವಾಗಿ ವಿಶ್ವವ್ಯಾಪಿ ಜಾಲದಲ್ಲೊಂದು ಸೈಟು ಮಾಡಬೇಕು ಎನ್ನುವುದಾದರೆ ಒಂದು ಬ್ಲಾಗ್ ಪ್ರಾರಂಭಿಸಬಹುದು. ಇವು ನಾವೆಲ್ಲ ಅತ್ಯಂತ ಸುಲಭವಾಗಿ ಪಡೆದುಕೊಳ್ಳಬಹುದಾದ ಜಾಲತಾಣಗಳು. ಬ್ಲಾಗಿಂಗ್ ಸೇವೆ ಒದಗಿಸುವ ಯಾವುದೇ ತಾಣಕ್ಕೆ (ವರ್ಡ್‌ಪ್ರೆಸ್, ಬ್ಲಾಗರ್ ಇತ್ಯಾದಿ) ಹೋಗಿ ಅವರು ಕೇಳುವ ಒಂದಷ್ಟು ಮಾಹಿತಿ ಕೊಟ್ಟು ನೋಂದಾಯಿಸಿಕೊಂಡರೆ ಸಾಕು, ನಮ್ಮದೇ ಆದ ಬ್ಲಾಗು ಸಿದ್ಧವಾಗುತ್ತದೆ; ಅದರಲ್ಲಿ ನಮಗೆ ಬೇಕಾದ ಯಾವುದೇ ಬಗೆಯ ಮಾಹಿತಿ ಸೇರಿಸುವುದು ಸಾಧ್ಯವಾಗುತ್ತದೆ.

ಈಗ ನೀವು ಬ್ಲಾಗರ್ ಡಾಟ್ ಕಾಂ ತಾಣಕ್ಕೆ ಹೋಗಿ myblog ಎಂಬ ಬ್ಲಾಗನ್ನು ಸೃಷ್ಟಿಸಿದ್ದೀರಿ ಎಂದುಕೊಳ್ಳೋಣ; ಪ್ರಪಂಚದಲ್ಲಿರುವ ಯಾರು ಬೇಕಿದ್ದರೂ myblog.blogspot.com ಎಂಬ ಯುಆರ್‌ಎಲ್ ಮುಖಾಂತರ ನಿಮ್ಮ ಬ್ಲಾಗನ್ನು ನೋಡಬಹುದು. ಈ ರೀತಿಯ ವಿಳಾಸದ ಬದಲು www.myblog.com ಎಂಬಂತಹ ಪೂರ್ಣಪ್ರಮಾಣದ ವಿಳಾಸವೇ ಬೇಕು ಎನ್ನುವುದಾದರೆ ಅದು ಕೂಡ ಸಾಧ್ಯ - ನೀವು ಬಾಡಿಗೆಗೆ ಪಡೆದುಕೊಂಡಿರುವ ವಿಳಾಸದಲ್ಲಿಯೇ ನಿಮ್ಮ ಬ್ಲಾಗ್ ದೊರಕುವಂತೆ ಮಾಡುವ ಸೌಲಭ್ಯ ಬ್ಲಾಗರ್ ಡಾಟ್ ಕಾಂನಲ್ಲಿ ಉಚಿತವಾಗಿ ಲಭ್ಯವಿದೆ.
[ಜಾಹೀರಾತು] ನಿಮ್ಮದೇ ವೆಬ್‌ಸೈಟ್ ರೂಪಿಸಿಕೊಳ್ಳುವುದು ಈಗ ಬಹಳ ಸುಲಭ. ವೆಬ್‌ಸೈಟ್ ರೂಪಿಸಲು ಅಗತ್ಯವಾದ ಸವಲತ್ತುಗಳಿಗಾಗಿ http://ejnana.bigrock.in/ ತಾಣಕ್ಕೆ ಭೇಟಿಕೊಡಿ. ವಿಳಾಸ (ಡೊಮೈನ್) ನೋಂದಣಿ, ಹೋಸ್ಟಿಂಗ್ ಮುಂತಾದ ಸೇವೆಗಳ ಮೇಲೆ ಶೇ. ೧೦ರಿಂದ ಶೇ. ೨೦ರವರೆಗೆ ರಿಯಾಯಿತಿ ಪಡೆಯಲು BREJNAN ಕೂಪನ್ ಕೋಡ್ ಬಳಸಿ!
ಮೇ ೧೬, ೨೦೧೪ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge