ಶನಿವಾರ, ಏಪ್ರಿಲ್ 12, 2014

ತಂತ್ರಾಂಶ ನಿರ್ವಹಣೆಯೂ ಬಹುಮುಖ್ಯ!

ಟಿ. ಜಿ. ಶ್ರೀನಿಧಿ

ಕಂಪ್ಯೂಟರ್ ವ್ಯವಸ್ಥೆಗಳೆಂದಮೇಲೆ ಅವುಗಳ ನಿರ್ವಹಣೆಗೂ ಸಾಕಷ್ಟು ಸಮಯ-ಹಣ ಬೇಕು ಎನ್ನುವ ವಿಷಯ ನಮಗೆ ಗೊತ್ತೇ ಇದೆ. ಆದರೆ ಕಂಪ್ಯೂಟರಿನ ನಿರ್ವಹಣೆಯೆಂದ ತಕ್ಷಣ ಹೆಚ್ಚಾಗಿ ನಮ್ಮ ಮನಸ್ಸಿಗೆ ಬರುವುದು ಯಂತ್ರಾಂಶದ (ಹಾರ್ಡ್‌ವೇರ್) ನಿರ್ವಹಣೆಯ ವಿಷಯವೇ. ಮೌಸ್ ಕೆಲಸಮಾಡುತ್ತಿಲ್ಲವೆಂದೋ ಮೋಡೆಮ್ ಕೆಟ್ಟಿದೆಯೆಂದೋ ಇನ್ನಾವುದೋ ಭಾಗ ಹಳೆಯದಾಗಿದೆಯೆಂದೋ ಸಾಕಷ್ಟು ಖರ್ಚುಮಾಡಿರುವ ವಿಷಯ ನಮ್ಮೆಲ್ಲರ ನೆನಪಿನಲ್ಲೂ ಇರುತ್ತದಲ್ಲ!

ಆದರೆ ನಿರ್ವಹಣೆ ಬೇಕಿರುವುದು ಕೇವಲ ಯಂತ್ರಾಂಶಕ್ಕೆ ಮಾತ್ರವಲ್ಲ, ನಾವು ಬರೆಯುವ ತಂತ್ರಾಂಶವನ್ನು (ಸಾಫ್ಟ್‌ವೇರ್) ನಿರ್ವಹಿಸುವುದೂ ಸಾಕಷ್ಟು ದೊಡ್ಡ ಕೆಲಸವೇ.

ಯಂತ್ರಾಂಶದಲ್ಲೇನೋ ಸರಿ, ಬೇಕಾದಷ್ಟು ಬಿಡಿಭಾಗಗಳಿರುತ್ತವೆ - ಉಪಯೋಗಿಸುತ್ತ ಹೋದಂತೆ ಹಾಳಾಗುವ ಸಾಧ್ಯತೆಯೂ ಇರುತ್ತದೆ. ಆದರೆ ತಂತ್ರಾಂಶದ ನಿರ್ವಹಣೆ ಎಂದರೇನು?

ಕೇಳಲು ವಿಚಿತ್ರವೆಂದು ತೋರಿದರೂ ತಂತ್ರಾಂಶಕ್ಕೆ ನಿರ್ವಹಣೆಯ (ಮೇಂಟೆನೆನ್ಸ್) ಅಗತ್ಯ ಬರುವುದು ಅಪರೂಪವೇನಲ್ಲ.
ಇದಕ್ಕೆ ಕಾರಣಗಳು ಹಲವು.

ತಂತ್ರಾಂಶದ ರಚನೆಯ ಸಂದರ್ಭದಲ್ಲಿದ್ದ ಅಗತ್ಯಗಳು ನಂತರದ ದಿನಗಳಲ್ಲಿ ಬದಲಾದರೆ ತಂತ್ರಾಂಶದಲ್ಲಿ ಬದಲಾವಣೆಗಳು ಬೇಕಾಗುತ್ತವೆ. ತಂತ್ರಾಂಶ ತನ್ನ ಮೂಲ ಉದ್ದೇಶವನ್ನು ಬಹಳ ಚೆನ್ನಾಗಿ ಪೂರೈಸಿದಾಗಲೂ ಅಷ್ಟೆ: ಬಳಕೆದಾರರು ಅದಕ್ಕೆ ಹೆಚ್ಚುವರಿ ಸೌಲಭ್ಯಗಳನ್ನು ಸೇರಿಸುವಂತೆ ಕೇಳಿದಾಗಲೂ ತಂತ್ರಾಂಶದಲ್ಲಿ ಬದಲಾವಣೆ ಅಗತ್ಯವಾಗುತ್ತದೆ. ತಂತ್ರಾಂಶದ ಬಳಕೆಯಾಗುತ್ತಿರುವ ಕಂಪ್ಯೂಟರುಗಳಲ್ಲಿ ಯಂತ್ರಾಂಶದ, ಅಥವಾ ಆಪರೇಟಿಂಗ್ ಸಿಸ್ಟಂನಂತಹ ತಂತ್ರಾಂಶಗಳ ಬದಲಾವಣೆಯಾದಾಗಲೂ ನಮ್ಮ ತಂತ್ರಾಂಶದಲ್ಲಿ ಬದಲಾವಣೆಗಳು ಅಗತ್ಯವಾಗಬಹುದು.

ಇಂತಹ ಹಲವು ಕಾರಣಗಳಿಂದಾಗಿ ಯಾವುದೇ ತಂತ್ರಾಂಶಕ್ಕಾಗಿ ನಾವು ವ್ಯಯಿಸುವ ಸಮಯದ ಶೇ. ೯೦ರಷ್ಟು ಭಾಗ ಅದರ ನಿರ್ವಹಣೆಗೇ ಮೀಸಲಾಗಿದ್ದರೂ ಆಶ್ಚರ್ಯವಿಲ್ಲ ಎಂದು ಅಂದಾಜುಗಳು ಹೇಳುತ್ತವೆ.


ತಂತ್ರಾಂಶ ನಿರ್ವಹಣೆಯ ಚಟುವಟಿಕೆಗಳಲ್ಲಿ ಅನೇಕ ವಿಧ. ಮೊದಲನೆಯ ಹಾಗೂ ಸಾಮಾನ್ಯವಾದ ವಿಧ 'ಕರೆಕ್ಟಿವ್ ಮೇಂಟೆನೆನ್ಸ್'ನದು. ತಂತ್ರಾಂಶದ ಕಾರ್ಯನಿರ್ವಹಣೆಯಲ್ಲಿ ಪತ್ತೆಯಾದ ತೊಂದರೆಗಳನ್ನು ಸರಿಪಡಿಸುವುದು ಈ ಚಟುವಟಿಕೆಯ ಉದ್ದೇಶ. ಈ ತೊಂದರೆಗಳನ್ನು ಸರಿಪಡಿಸುವಾಗ ಬೇರೆ ಯಾವುದೇ ಹೊಸ ಸಮಸ್ಯೆ ಸೃಷ್ಟಿಯಾಗದಂತೆ ಗಮನಿಸಿಕೊಳ್ಳಬೇಕಾದ್ದು ಅತ್ಯಗತ್ಯ. ತಂತ್ರಾಂಶದ ಬಗ್ಗೆ ವಿವರಗಳೆಲ್ಲ ಸರಿಯಾಗಿ ದಾಖಲಾಗಿರುವ ಕಡತಗಳು (ಡಾಕ್ಯುಮೆಂಟೇಶನ್) ಲಭ್ಯವಿದ್ದರೆ ಈ ಕೆಲಸ ಬಹಳಷ್ಟು ಸುಲಭವಾಗುತ್ತದೆ.

ಬದಲಾದ ಪರಿಸ್ಥಿತಿಯಲ್ಲಿ ತಂತ್ರಾಂಶದ ಕಾರ್ಯಾಚರಣೆ ನಿರಾತಂಕವಾಗಿರುವಂತೆ ನೋಡಿಕೊಳ್ಳುವುದು ಎರಡನೇ ವಿಧದ ನಿರ್ವಹಣೆಯ ಉದ್ದೇಶ. ತಂತ್ರಾಂಶದ ಅಗತ್ಯಗಳು, ಅದು ಬಳಕೆಯಾಗುವ ಕಂಪ್ಯೂಟರ್ ವ್ಯವಸ್ಥೆ ಇತ್ಯಾದಿಗಳೆಲ್ಲ ಬದಲಾದ ಸಂದರ್ಭದಲ್ಲಿ ತಂತ್ರಾಂಶದ ಕಾರ್ಯಾಚರಣೆಯಲ್ಲಿ ಯಾವ ಅಡ್ಡಿ-ಆತಂಕಗಳೂ ಎದುರಾಗದಂತೆ ನೋಡಿಕೊಳ್ಳುವುದು ಈ 'ಅಡಾಪ್ಟಿವ್ ಮೇಂಟೆನೆನ್ಸ್' ಚಟುವಟಿಕೆಯ ಉದ್ದೇಶ. ತಂತ್ರಾಂಶ ರಚಿಸುವವರ, ಬಳಸುವವರಷ್ಟೇ ಅಲ್ಲದೆ ಈ ಚಟುವಟಿಕೆಗೆ ಸರಕಾರ ಅಥವಾ ಮಾರುಕಟ್ಟೆಯ ಕಡೆಯಿಂದ ಕಾಣಿಸಿಕೊಳ್ಳುವ ಬದಲಾವಣೆಗಳೂ ಕಾರಣವಾಗಬಹುದು (ಉದಾ: ತೆರಿಗೆ ಸ್ವರೂಪದ ಬದಲಾವಣೆ, ವೆಬ್‌ಸೈಟುಗಳು ಮೊಬೈಲಿನಲ್ಲೂ ಸರಿಯಾಗಿ ಕೆಲಸಮಾಡಬೇಕಾದ ಅನಿವಾರ್ಯತೆ ಇತ್ಯಾದಿ).

ತಂತ್ರಾಂಶದ ಕಾರ್ಯಕ್ಷಮತೆಯನ್ನು ಉತ್ತಮಪಡಿಸುವ ಪ್ರಯತ್ನಗಳಿಂದಲೂ ತಂತ್ರಾಂಶದಲ್ಲಿ ಬದಲಾವಣೆ ಅಗತ್ಯವಾಗಬಹುದು. ಸದ್ಯದ ಕೆಲಸಗಳನ್ನೇ ಕಡಿಮೆ ಸಮಯದಲ್ಲಿ ಮಾಡಿಮುಗಿಸುವಂತೆ ಮಾಡಲು, ಹೆಚ್ಚಿನ ಸೌಲಭ್ಯಗಳನ್ನು ಸೇರಿಸಲು, ಅಥವಾ ತಂತ್ರಾಂಶದ ನಿರ್ವಹಣೆಯನ್ನು ಸುಲಭಗೊಳಿಸಲು ಕೈಗೊಳ್ಳಲಾಗುವ ಈ ಚಟುವಟಿಕೆಯನ್ನು 'ಪರ್‌ಫೆಕ್ಟಿವ್ ಮೇಂಟೆನೆನ್ಸ್' ಎಂದು ಕರೆಯುತ್ತಾರೆ. ತಂತ್ರಾಂಶ ನಿರ್ವಹಣೆಯಲ್ಲಿ ಇಂತಹ ಚಟುವಟಿಕೆಗಳದೇ ಬಹುದೊಡ್ಡ ಪಾಲು ಎನ್ನಬಹುದು.

ತಂತ್ರಾಂಶದಲ್ಲಿ ಯಾವುದೇ ತೊಂದರೆ ಕಾಣಿಸಿಕೊಳ್ಳುವ ಮೊದಲೇ ಅವುಗಳ ಸಾಧ್ಯತೆಯನ್ನು ಅಂದಾಜಿಸಿ ಸರಿಪಡಿಸುವ ಚಟುವಟಿಕೆಗೆ 'ಪ್ರಿವೆಂಟಿವ್ ಮೇಂಟೆನೆನ್ಸ್'ನದು. ಮುಂಜಾಗ್ರತೆಯ ಕ್ರಮಗಳನ್ನು ಕೈಗೊಂಡು ತಂತ್ರಾಂಶವನ್ನು ತೊಂದರೆಗಳಿಂದ ದೂರವಿಡುವ ಈ ಚಟುವಟಿಕೆಯನ್ನು ಸಾಫ್ಟ್‌ವೇರ್ ರೀಇಂಜಿನಿಯರಿಂಗ್ ಎಂದೂ ಕರೆಯಲಾಗುತ್ತದೆ.

ನಿರ್ವಹಣೆಯ ಚಟುವಟಿಕೆ ಈ ಯಾವ ವಿಧದ್ದೇ ಆಗಿದ್ದರೂ ಅದಕ್ಕೊಂದು ನಿರ್ದಿಷ್ಟ ಕ್ರಮವನ್ನು ಬಳಸುವುದು ಒಳ್ಳೆಯದು. ಅಷ್ಟೇ ಅಲ್ಲ, ತಂತ್ರಾಂಶ ಅಭಿವೃದ್ಧಿಯ ಸಂದರ್ಭದಲ್ಲಿ ಅನುಸರಿಸುವ ಕ್ರಮವನ್ನು (ಉದಾ: ರಿಕ್ವೈರ್‌ಮೆಂಟ್ಸ್, ಡಿಸೈನ್, ಟೆಸ್ಟಿಂಗ್, ಡಾಕ್ಯುಮೆಂಟೇಶನ್ ಇತ್ಯಾದಿ) ಇಲ್ಲೂ ಪಾಲಿಸಬೇಕು. ಆ ಮೂಲಕ ನಿರ್ವಹಣೆಯ ಚಟುವಟಿಕೆಗೊಂದು ಶಿಸ್ತುಬದ್ಧ ಸ್ವರೂಪ ದೊರಕುವುದಷ್ಟೇ ಅಲ್ಲ, ಬದಲಾವಣೆಗಳ ದಾಖಲಾತಿಯಂತಹ ಕ್ರಮಗಳು ಮುಂದಿನ ದಿನಗಳ ನಿರ್ವಹಣೆಯನ್ನು ಇನ್ನಷ್ಟು ಸುಲಭಗೊಳಿಸಲೂ ನೆರವಾಗುತ್ತವೆ.

ಏಪ್ರಿಲ್ ೧೧, ೨೦೧೪ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge