ಶನಿವಾರ, ಏಪ್ರಿಲ್ 26, 2014

ಇಜ್ಞಾನ ಎಂಬ ಏಳು ವರ್ಷಗಳ ಪಯಣ...

ಏಳು ವರ್ಷದ ವಿಶೇಷ: ಉಚಿತ ಇ-ಪುಸ್ತಕ 'ಸಪ್ತವರ್ಣ' ಓದಲು ಇಲ್ಲಿ ಕ್ಲಿಕ್ ಮಾಡಿ!


ಇಜ್ಞಾನ ಡಾಟ್ ಕಾಮ್ ಕತೆ ಶುರುವಾದದ್ದು ಏಳು ವರ್ಷಗಳ ಹಿಂದೆ, ೨೦೦೭ರ ಏಪ್ರಿಲ್‌ನಲ್ಲಿ. ಒಮ್ಮೆ ಹೀಗೆಯೇ ಮಾತನಾಡುತ್ತಿದ್ದಾಗ ವಿಜ್ಞಾನದ ಬರಹಗಳಿಗೇ ಒಂದು ಬ್ಲಾಗ್ ಮಾಡಬಹುದಲ್ಲ ಎಂದು ಐಡಿಯಾ ಕೊಟ್ಟವರು ಲೇಖಕ ಶ್ರೀ ಕೊಳ್ಳೇಗಾಲ ಶರ್ಮ. ಈ ಐಡಿಯಾ ಕುರಿತು ಯೋಚಿಸುತ್ತ ಬ್ಲಾಗಿನ ಹೆಸರೇನಿರಬೇಕು ಎಂದು ಕೇಳಿದಾಗ 'ಇಜ್ಞಾನ'ವೆಂಬ ನಾಮಕರಣ ಮಾಡಿದ್ದು ಗೆಳೆಯ ನಂದಕಿಶೋರ್.

ಅಲ್ಲಿಂದ ಇಲ್ಲಿಯವರೆಗೆ, ಕಳೆದ ಏಳು ವರ್ಷಗಳ ಇಜ್ಞಾನದ ಹಾದಿಯಲ್ಲಿ ಹಲವು ಮೈಲಿಗಲ್ಲುಗಳು ಹಾದುಹೋಗಿವೆ: ಇಜ್ಞಾನ 'ಡಾಟ್ ಕಾಮ್' ಆದದ್ದು, ವಿದ್ಯುನ್ಮಾನ ಪತ್ರಿಕೆಯೊಂದನ್ನು ಪ್ರಾಯೋಗಿಕವಾಗಿ ಪ್ರಕಟಿಸಿದ್ದು, 'ತಿನ್ನಲಾಗದ ಬಿಸ್ಕತ್ತು...' ಕೃತಿಯ ಮೂಲಕ ಪ್ರಕಾಶನವನ್ನೂ ಪ್ರಯತ್ನಿಸಿದ್ದು, ಓದುಗರಿಗಾಗಿ ಒಂದೆರಡು ಸ್ಪರ್ಧೆ ಏರ್ಪಡಿಸಿದ್ದು, 'ಶಾಪಿಂಗ್ ಸಂಗಾತಿ' ಪ್ರಾರಂಭಿಸಿದ್ದು... ಹೀಗೆ.

ಇಷ್ಟೆಲ್ಲ ಪ್ರಯತ್ನಗಳಲ್ಲಿ ಇಜ್ಞಾನ ಡಾಟ್ ಕಾಮ್ ಜೊತೆಯಲ್ಲಿ ನಿಂತವರು ಅನೇಕ ಮಂದಿ. ಈ ಅವಧಿಯಲ್ಲಿ ಡಾ. ಪಿ. ಎಸ್. ಶಂಕರ್, ಶ್ರೀ ನಾಗೇಶ ಹೆಗಡೆ, ಶ್ರೀ ಟಿ. ಆರ್. ಅನಂತರಾಮು, ಡಾ. ಯು. ಬಿ. ಪವನಜ, ಶ್ರೀ ಶ್ರೀವತ್ಸ ಜೋಶಿ, ಶ್ರೀ ಬೇಳೂರು ಸುದರ್ಶನ, ಶ್ರೀ ಕೊಳ್ಳೇಗಾಲ ಶರ್ಮ, ಶ್ರೀ ಟಿ. ಎಸ್. ಗೋಪಾಲ್ ಸೇರಿದಂತೆ ಅನೇಕ ಮಹನೀಯರ ಲೇಖನಗಳನ್ನು ಪ್ರಕಟಿಸುವ - ಹಲವು ಲೇಖಕರ ಪುಸ್ತಕಗಳನ್ನು ಪರಿಚಯಿಸುವ ಅವಕಾಶ ಇಜ್ಞಾನಕ್ಕೆ ದೊರಕಿತು. ಇಜ್ಞಾನದ ಪ್ರಯೋಗಗಳಿಗೆ ಓದುಗರ - ಪತ್ರಿಕೆಗಳ - ಕನ್ನಡ ಜಾಲತಾಣಗಳ ಬೆಂಬಲವೂ ಒದಗಿಬಂತು.

ಇಂದು, ಇಜ್ಞಾನ ಪ್ರಾರಂಭವಾಗಿ ಏಳು ವರ್ಷ. ನಮ್ಮ ಈ ಪಯಣದಲ್ಲಿ ನಿಮ್ಮ ಬೆಂಬಲ ಸದಾ ನಮ್ಮ ಜೊತೆಯಲ್ಲಿದೆ, ಮುಂದೆಯೂ ಹಾಗೆಯೇ ಇರಲಿ.

ಹುಟ್ಟುಹಬ್ಬದ ಈ ಖುಷಿಯಲ್ಲಿ ನಿಮಗೆ ನಮ್ಮ ಉಡುಗೊರೆಯಾಗಿ 'ಸಪ್ತವರ್ಣ' ಎಂಬ ಇ-ಪುಸ್ತಕವನ್ನು ಉಚಿತವಾಗಿ ನೀಡುತ್ತಿದ್ದೇವೆ. ಕಳೆದ ಏಳು ವರ್ಷಗಳಲ್ಲಿ ಹೆಚ್ಚು ಜನರನ್ನು ತಲುಪಿದ ಏಳು ಲೇಖನಗಳ ಈ ಸಂಕಲನವನ್ನು ಇಂದು ಪ್ರಕಟಿಸಲು ನಾವು ಹರ್ಷಿಸುತ್ತೇವೆ.

ಈ ಪುಸ್ತಕದಲ್ಲಿ ಪ್ರಕಟಿಸಲು ತಮ್ಮ ಅನಿಸಿಕೆಗಳನ್ನು ನೀಡಿರುವ ಶ್ರೀ ವಸುಧೇಂದ್ರ, ಶ್ರೀ ಬೇಳೂರು ಸುದರ್ಶನ, ಶ್ರೀ ನಂದಕಿಶೋರ್ ಹಾಗೂ ಶ್ರೀ ವಿಕಾಸ್ ಹೆಗಡೆಯವರಿಗೆ ನಮ್ಮ ವಿಶೇಷ ಕೃತಜ್ಞತೆಗಳು.

ನಿಮ್ಮ ಪ್ರೋತ್ಸಾಹಕ್ಕೆ ಮತ್ತೊಮ್ಮೆ ಧನ್ಯವಾದಗಳು!

2 ಕಾಮೆಂಟ್‌ಗಳು:

Dr U B Pavanaja ಹೇಳಿದರು...

ಅಭಿನಂದನೆಗಳು ಮತ್ತು ಸಮಸ್ತ ಕನ್ನಡಿಗರ ಪರವಾಗಿ ಧನ್ಯವಾದಗಳು. ಕನ್ನಡಕ್ಕೆ ಇಂತಹ ಕೊಡುಗೆಗಳು ಇನ್ನಷ್ಟು ಬರಲಿ. ಇಜ್ಞಾನವು ಇನ್ನೂ ಹಲವರಿಗೆ ಸ್ಫೂರ್ತಿದಾಯಕವಾಗಿ ಕನ್ನಡ ಮಾಹಿತಿ ಸಾಹಿತ್ಯ ಬೆಳೆಯಲಿ.

ವಿ.ರಾ.ಹೆ. ಹೇಳಿದರು...

ಅಭಿನಂದನೆಗಳು.... :)

badge