ಸೋಮವಾರ, ಮಾರ್ಚ್ 17, 2014

ಸಮರತಂತ್ರದ ಹೈಟೆಕ್ ಮಂತ್ರ

ಟಿ. ಜಿ. ಶ್ರೀನಿಧಿ

ಉಕ್ರೇನಿನ ಪ್ರಕ್ಷುಬ್ಧ ವಾತಾವರಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಚಲನ ಮೂಡಿಸುತ್ತಿರುವ ವಿಷಯ ನಮಗೆಲ್ಲ ಗೊತ್ತೇ ಇದೆ. ಯುರೋಪಿಯನ್ ಒಕ್ಕೂಟ ಸೇರುವುದೋ ಅಥವಾ ರಷ್ಯಾವನ್ನು ಬೆಂಬಲಿಸುವುದೋ ಎನ್ನುವ ಗೊಂದಲ ಇಡೀ ದೇಶವನ್ನೇ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ.

ಈ ನಡುವೆ ಉಕ್ರೇನಿನ ಕಂಪ್ಯೂಟರ್ ಜಾಲಗಳು ಹಾಗೂ ದೂರಸಂಪರ್ಕ ವ್ಯವಸ್ಥೆಯನ್ನು ಬೇರೆಯದೇ ಒಂದು ಬಗೆಯ ಸಮಸ್ಯೆ ಕಾಡುತ್ತಿದೆ ಎಂದು ಪತ್ರಿಕಾವರದಿಗಳು ಹೇಳುತ್ತಿವೆ. ಉಕ್ರೇನಿನ ಮೊಬೈಲ್ ಹಾಗೂ ಕಂಪ್ಯೂಟರ್ ಜಾಲಗಳ ಮೇಲೆ ಹೊರಗಿನ ಯಾವುದೋ ಶಕ್ತಿ ದಾಳಿಮಾಡುತ್ತಿದೆ ಎನ್ನುವುದು ಈ ವರದಿಗಳ ಸಾರಾಂಶ. ಬಿಬಿಸಿ ವರದಿಯ ಪ್ರಕಾರ ಈ ದಾಳಿಗಳ ಹಿಂದೆ ರಷ್ಯಾದ ಕೈವಾಡವಿದೆ ಎನ್ನುವುದು ಉಕ್ರೇನಿನ ರಕ್ಷಣಾಪಡೆಗಳ ಆರೋಪವಂತೆ.

ಈ ಆರೋಪ ನಿಜವೋ ಸುಳ್ಳೋ ಅದು ನಮಗೆ ಬೇಕಿಲ್ಲ. ಆದರೆ ಅದು ದೇಶದೇಶಗಳ ನಡುವಿನ ಸಮರದ ಹೊಸ ಮುಖವೊಂದನ್ನಂತೂ ಜಗತ್ತಿಗೆ ಪರಿಚಯಿಸುತ್ತಿದೆ.
ಶತ್ರುರಾಷ್ಟ್ರದ ದೂರಸಂಪರ್ಕ ಹಾಗೂ ಕಂಪ್ಯೂಟರ್ ಜಾಲಗಳನ್ನು ಹಾಳುಮಾಡಿ ಅಲ್ಲಿನ ಜನರಿಗೆ ತೊಂದರೆಕೊಡುವ ಹೊಸಬಗೆಯ ಯುದ್ಧವಿಧಾನ ಇದು.

ಅಂದಹಾಗೆ ಸೈಬರ್ ಸಮರದ ಸುದ್ದಿ ಕೇಳಿಬಂದಿರುವುದು ಇದೇ ಮೊದಲೇನೂ ಅಲ್ಲ. ಕೆಲವರ್ಷಗಳ ಹಿಂದೆ ಎಸ್ಟೋನಿಯಾ ಹಾಗೂ ಜಾರ್ಜಿಯಾ ದೇಶಗಳ ಕಂಪ್ಯೂಟರ್ ವ್ಯವಸ್ಥೆಯ ಮೇಲೆ ಇದೇ ರಷ್ಯಾ ಸಮರಸಾರಿತ್ತು ಎನ್ನುವ ಆರೋಪ ವ್ಯಾಪಕವಾಗಿ ಕೇಳಸಿಕ್ಕಿತ್ತು. ೨೦೧೧ರ ಸುಮಾರಿಗೆ ಇರಾನಿನ ಅಣುಸ್ಥಾವರಗಳಿಗೆ ತೊಂದರೆಮಾಡಿದ್ದ 'ಸ್ಟಕ್ಸ್‌ನೆಟ್' ಎನ್ನುವ ವೈರಸ್ ಕೂಡ ಸೈಬರ್ ಸಮರದ ಅಂಗವೇ ಎನ್ನಲಾಗಿತ್ತು. ಅಷ್ಟೇ ಏಕೆ, ಅಮೆರಿಕಾದಿಂದ ಪ್ರಾರಂಭಿಸಿ ಭಾರತದವರೆಗೆ ಅನೇಕ ರಾಷ್ಟ್ರಗಳ ಮೇಲೆ ಹಲವಾರು ಸಂದರ್ಭಗಳಲ್ಲಿ ಸೈಬರ್ ದಾಳಿಗಳು ನಡೆದಿವೆ. ಇಂತಹ ದಾಳಿಗಳ ಉದ್ದೇಶ ಜಾಲತಾಣಗಳನ್ನು ಹಾಳುಗೆಡಹುವ ಅಥವಾ ಮಹತ್ವದ ಮಾಹಿತಿಯನ್ನು ಕದಿಯುವುದರಿಂದ ಪ್ರಾರಂಭಿಸಿ ಎಸ್ಟೋನಿಯಾದಲ್ಲಿ ಆಗಿದ್ದಂತೆ ಇಡೀ ಕಂಪ್ಯೂಟರ್ ಜಾಲವನ್ನೇ ತೊಂದರೆಗೆ ಸಿಲುಕಿಸುವವರೆಗೆ ಏನು ಬೇಕಾದರೂ ಇರಬಹುದು.

ಇರಾನಿನಲ್ಲಿ ಆಗಿದ್ದಂತೆ ಅಣುಸ್ಥಾವರದಲ್ಲಿರುವ ಕಂಪ್ಯೂಟರುಗಳನ್ನೇ ಪ್ರಭಾವಿಸುವಷ್ಟು ದೊಡ್ಡ ಪ್ರಮಾಣದ ದಾಳಿಗಳು ಪ್ರತಿದಿನವೂ ನಡೆಯುವುದಿಲ್ಲ, ನಿಜ. ಆದರೆ ಡಿಸ್ಟ್ರಿಬ್ಯೂಟೆಡ್ ಡಿನಯಲ್ ಆಫ್ ಸರ್ವಿಸ್‌ನಂತಹ (ಡಿಡಿಒಎಸ್) ದಾಳಿಗಳು ಸೈಬರ್ ಸಂಘರ್ಷಗಳಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತವೆ.

ಜಾಲತಾಣಗಳಿಗೆ ಅಸಂಖ್ಯಾತ ಕೃತಕ ಗ್ರಾಹಕರನ್ನು ಸೃಷ್ಟಿಸುವ ಬ್ಲ್ಯಾಕ್‌ಮೇಲ್ ತಂತ್ರವನ್ನು ಡಿಡಿಒಎಸ್ ದಾಳಿ ಎಂದು ಕರೆಯುತ್ತಾರೆ. ಇಂತಹ ದಾಳಿಗೆ ಈಡಾಗುವ ತಾಣದ ಸರ್ವರ್‌ಗೆ ಮಾಹಿತಿ ಕೇಳಿ ಬರುವ ಬೇಡಿಕೆ ಇದ್ದಕ್ಕಿದ್ದಂತೆ ಭಾರೀ ಪ್ರಮಾಣದಲ್ಲಿ ಹೆಚ್ಚುತ್ತದೆ. ಇದರಿಂದಾಗಿ ಆ ಸರ್ವರ್‌ನ ಕಾರ್ಯಾಚರಣೆ ಬಲು ನಿಧಾನವಾಗಿಬಿಡುತ್ತದೆ. ಇಂತಹ ದಾಳಿಗಳು ಹೆಚ್ಚುಕಾಲ ಮುಂದುವರೆದದ್ದೇ ಆದರೆ ಮಾಹಿತಿಯ ಮಿತಿಮೀರಿದ ಒತ್ತಡದಿಂದಾಗಿ ದಾಳಿಗೀಡಾದ ಸರ್ವರ್, ಹಾಗೂ ಅದನ್ನು ಅವಲಂಬಿಸಿದ ಜಾಲತಾಣ ಸಂಪೂರ್ಣವಾಗಿ ಸ್ಥಗಿತಗೊಳ್ಳುವ ಸಾಧ್ಯತೆಯೂ ಇರುತ್ತದೆ.

ಇಂತಹ ದಾಳಿ ಒಂದೇ ಸ್ಥಳದಿಂದ ಆದರೆ ಅದನ್ನು ಗುರುತಿಸುವುದು ಸುಲಭವಾಗುತ್ತದಲ್ಲ! ಹಾಗಾಗುವುದನ್ನು ತಪ್ಪಿಸಲೆಂದೇ ಇಲ್ಲಿ ಸಾಮಾನ್ಯವಾಗಿ ಬಾಟ್‌ನೆಟ್‌ಗಳು ಬಳಕೆಯಾಗುತ್ತವೆ.

ನಮ್ಮನಿಮ್ಮಂತಹ ಬಳಕೆದಾರರ ಕಂಪ್ಯೂಟರುಗಳನ್ನು ಕುತಂತ್ರಾಂಶಗಳ ಮೂಲಕ ತಮ್ಮ ವಶಕ್ಕೆ ತೆಗೆದುಕೊಂಡು ಅವನ್ನು ತಮ್ಮ ದುರುದ್ದೇಶಗಳಿಗಾಗಿ ಬಳಸಿಕೊಳ್ಳುವುದು ದಾಳಿ ನಡೆಸುವವರ ಉದ್ದೇಶವಾಗಿರುತ್ತದೆ. ಇಂತಹ ನೂರಾರು-ಸಾವಿರಾರು ಕಂಪ್ಯೂಟರುಗಳ ಜಾಲವೇ ಬಾಟ್‌ನೆಟ್. ಈ ಜಾಲದ ಅಂಗವಾಗಿರುವ ಕಂಪ್ಯೂಟರುಗಳು ಜಗತ್ತಿನ ಯಾವ ಮೂಲೆಯಲ್ಲಿ ಬೇಕಾದರೂ ಇರಬಹುದಾದ್ದರಿಂದ ಅನೇಕ ಸನ್ನಿವೇಶಗಳಲ್ಲಿ ನಿಜವಾದ ಅಪರಾಧಿಯ ಪತ್ತೆಯಾಗುವುದೇ ಇಲ್ಲ.

ಸೈಬರ್ ಸಮರತಂತ್ರವನ್ನು ಹಲವು ದೇಶಗಳು ತಮ್ಮ ರಕ್ಷಣಾವ್ಯವಸ್ಥೆಯ ಅಂಗವಾಗಿಯೇ ಬೆಳೆಸುತ್ತಿವೆ ಎನ್ನಲಾಗಿದೆ. ಇದು ಇನ್ನಷ್ಟು ದೊಡ್ಡ ಸಮಸ್ಯೆಯಾಗಿ ಬೆಳೆಯುವ ಮೊದಲೇ ಸೈಬರ್ ದಾಳಿಗಳನ್ನು ಪರಿಣಾಮಕಾರಿಯಾಗಿ ತಡೆಯುವ ನಿಟ್ಟಿನಲ್ಲೂ ಪ್ರಯತ್ನಗಳು ಸಾಗಿರುವುದು ಸಮಾಧಾನದ ಸಂಗತಿ ಎನ್ನಬಹುದು.

ಮಾರ್ಚ್ ೧೪, ೨೦೧೪ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge