ಶುಕ್ರವಾರ, ಫೆಬ್ರವರಿ 28, 2014

ಸೋಶಿಯಲ್ ರೀಡಿಂಗ್: ಒಟ್ಟಿಗೆ ಓದೋಣ!

ಟಿ. ಜಿ. ಶ್ರೀನಿಧಿ

ಪತ್ರಿಕೆಗಳಲ್ಲಿ ಬರುವ ಧಾರಾವಾಹಿಗಳನ್ನು ಓದಿ ಮಿತ್ರರೆಲ್ಲ ಸೇರಿದಾಗ ಅದರ ಬಗ್ಗೆ ಚರ್ಚಿಸುವ ಹವ್ಯಾಸ ಅನೇಕರಲ್ಲಿತ್ತು. ತಮ್ಮ ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸವನ್ನು ಬೆಳೆಸಲು ಡಾ. ಬಿ. ಜಿ. ಎಲ್. ಸ್ವಾಮಿಯವರು ಒಂದೇ ಕೃತಿಯ ಹಲವು ಪ್ರತಿಗಳನ್ನು ಖರೀದಿಸಿ ಅವರಿಗೆಲ್ಲ ಕೊಡುತ್ತಿದ್ದರಂತೆ; ಓದಿದ ಮೇಲೆ ಎಲ್ಲರೂ ಸೇರಿ ಆ ಕೃತಿಯ ಬಗ್ಗೆ ವಿಚಾರವಿನಿಮಯ ಮಾಡಿಕೊಳ್ಳಬೇಕು ಎನ್ನುವುದು ಅವರ ಅಭಿಪ್ರಾಯವಾಗಿತ್ತು. ಇಂದಿನ ಡಿಜಿಟಲ್ ಯುಗದಲ್ಲೂ ಇಂತಹ ಅಭ್ಯಾಸ ಇಟ್ಟುಕೊಳ್ಳುವುದನ್ನು ಸಾಧ್ಯವಾಗಿಸಿರುವುದು 'ಸೋಶಿಯಲ್ ರೀಡಿಂಗ್'ನ  ಪರಿಕಲ್ಪನೆ.

ನಾವು ಯಾವ ಪುಸ್ತಕ ಓದುತ್ತಿದ್ದೇವೆ, ಅದರ ಬಗ್ಗೆ ನಮ್ಮ ಅನಿಸಿಕೆ ಏನು ಎನ್ನುವುದರಿಂದ ಪ್ರಾರಂಭಿಸಿ ಎಷ್ಟು ಪುಟ ಓದಿಯಾಗಿದೆ, ಯಾವ ಪುಟದಲ್ಲಿ ಏನು ಇಷ್ಟವಾಯಿತು-ಇಷ್ಟವಾಗಲಿಲ್ಲ ಎನ್ನುವವರೆಗೆ ಹಲವು ವಿಷಯಗಳನ್ನು ಸಮಾಜ ಜಾಲಗಳಲ್ಲಿನ ನಮ್ಮ ಸ್ನೇಹಿತರೊಡನೆ ಹಂಚಿಕೊಳ್ಳಲು ಈ ಪರಿಕಲ್ಪನೆ ಸಹಾಯ ಮಾಡುತ್ತದೆ.

ಮುಂದೆ ಯಾವ ಪುಸ್ತಕ ಓದಬಹುದು ಎಂದು ನಮ್ಮ ಸ್ನೇಹಿತರಿಂದ ತಿಳಿದುಕೊಳ್ಳಲೂ ಸೋಶಿಯಲ್ ರೀಡಿಂಗ್ ಅಭ್ಯಾಸ ನೆರವಾಗಬಲ್ಲದು.
ಇಷ್ಟವಾದ ಪುಸ್ತಕದ ಇಷ್ಟವಾದ ಭಾಗವನ್ನು ನಮ್ಮ ಮಿತ್ರರೊಡನೆ ಹಂಚಿಕೊಳ್ಳುವುದೂ ಸಾಧ್ಯ. ಬೇರೆಯವರೊಡನೆ ಹಂಚಿಕೊಳ್ಳುವುದು ಬೇಡ ಎಂದರೂ ಪರವಾಗಿಲ್ಲ, ಪುಸ್ತಕಗಳಲ್ಲಿ ನಮಗಿಷ್ಟವಾದ ಭಾಗವನ್ನು ಉಳಿಸಿಟ್ಟು ನಮಗೆ ಬೇಕಾದಾಗ ಮತ್ತೆ ಉಪಯೋಗಿಸಿಕೊಳ್ಳಬಹುದು. ನಾವು ಓದಿದ ಎಲ್ಲ ಪುಸ್ತಕಗಳ ಪಟ್ಟಿಯನ್ನು ದಾಖಲಿಸಿಕೊಳ್ಳಲು ಕೂಡ ಸೋಶಿಯಲ್ ರೀಡಿಂಗ್ ಸೇವೆಗಳು ನೆರವಾಗುತ್ತವೆ.

ಸೋಶಿಯಲ್ ನೆಟ್‌ವರ್ಕಿಂಗ್ ಎಂದು ಈಗಾಗಲೇ ಸಾಕಷ್ಟು ಸಮಯ ಕಳೆಯುತ್ತಿದ್ದೇವೆ, ಈಗ ಸೋಶಿಯಲ್ ರೀಡಿಂಗ್ ಎಂದು ಇನ್ನಷ್ಟು ಸಮಯ ಕಳೆದರೆ ಪುಸ್ತಕ ಓದುವುದು ಯಾವಾಗ ಎಂದು ನೀವು ಕೇಳಿದರೆ ಅದಕ್ಕೆ ಉತ್ತರಿಸುವುದು ಕಷ್ಟ, ನಿಜ. ಆದರೆ ಈ ಕಷ್ಟವನ್ನು ಕೊಂಚ ಕಡಿಮೆಮಾಡಲು ಇಬುಕ್ ಸೇವೆ ನೀಡುತ್ತಿರುವ ಸಂಸ್ಥೆಗಳು ಪ್ರಯತ್ನಿಸುತ್ತಿವೆ. ಉದಾಹರಣೆಗೆ ಅಮೆಜಾನ್ ಕಿಂಡಲ್‌ನಲ್ಲಿ ಓದುವ ಪುಸ್ತಕಗಳ ಬಗ್ಗೆ ನಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಾವು ಕಿಂಡಲ್‌ನ ಜಾಲತಾಣದಲ್ಲೇ ಹಂಚಿಕೊಳ್ಳಬಹುದು.

ಇದೇ ರೀತಿಯ ಸೇವೆಯನ್ನು ಇನ್ನೂ ಕೆಲ ಸಂಸ್ಥೆಗಳು ಒದಗಿಸುತ್ತಿವೆ: ಇಂತಹ ಸೇವೆಗಳನ್ನು ಬಳಸಿ ನಾವು ಓದುತ್ತಿರುವ ವಿಷಯದ ಬಗ್ಗೆ ಫೇಸ್‌ಬುಕ್-ಟ್ವಿಟ್ಟರ್‌ನಂತಹ ತಾಣಗಳಲ್ಲಿ ಮಾಹಿತಿ ಹಂಚಿಕೊಳ್ಳಬಹುದು. ಪಾತಾಳದಲ್ಲಿ ಪಾಪಚ್ಚಿ ಓದುತ್ತಿದ್ದೇವೆ ಎಂದುಕೊಂಡರೆ ಅದರಲ್ಲಿ ಇಸ್ಪೀಟು ರಾಣಿಯ ಪ್ರಸ್ತಾಪ ಬಂದತಕ್ಷಣ ನಾನು ಈಗಷ್ಟೆ ಇಸ್ಪೀಟು ರಾಣಿಯನ್ನು ಭೇಟಿಮಾಡಿದೆ ಎಂದು ಫೇಸ್‌ಬುಕ್‌ನಲ್ಲಿ ಹಾಕುವ ಆಯ್ಕೆಯನ್ನು ಇಂತಹ ಸೇವೆಗಳು ನೀಡುತ್ತವೆ. ಇಬುಕ್ ರೀಡರಿನಲ್ಲಿ ಓದುತ್ತಿರುವಾಗ ಪಕ್ಕದಲ್ಲೇ ಆ ವಿಷಯದ ಬಗ್ಗೆ ಫೇಸ್‌ಬುಕ್‌ನಲ್ಲಿ ಚರ್ಚೆಮಾಡಲು ಸಿದ್ಧ ಎನ್ನುವವರಿಗೆ ಆ ಆಯ್ಕೆಯೂ ಇದೆ.

ಅಂದಹಾಗೆ ಸೋಶಿಯಲ್ ರೀಡಿಂಗ್‌ನ ಉಪಯೋಗ ಇಷ್ಟಕ್ಕೇ ಸೀಮಿತವೇನಲ್ಲ: ಈಗ ನೀವು ಮತ್ತು ನಿಮ್ಮ ಮಿತ್ರರು ಯಾವುದೋ ಪ್ರವಾಸಕಥನದ ಸೋಶಿಯಲ್ ರೀಡಿಂಗ್ ಮಾಡುತ್ತಿದ್ದೀರಿ, ಅದರಿಂದ ಪ್ರೇರೇಪಿತರಾಗಿ ನೀವೂ ಪ್ರವಾಸಹೊರಡಲು ನಿರ್ಧರಿಸಿದ್ದೀರಿ ಎಂದುಕೊಳ್ಳೋಣ. ಲೇಖಕರು ಭೇಟಿನೀಡಿದ ತಾಣಗಳ ಮ್ಯಾಪ್ ತಯಾರಿಸಿಕೊಂಡು ಆ ಪ್ರವಾಸಕ್ಕೆ ಬೇಕಾದ ಮಾಹಿತಿಯನ್ನೆಲ್ಲ ಸುಲಭವಾಗಿ ಪಡೆದುಕೊಳ್ಳುವಂತಿದ್ದರೆ ಎಷ್ಟು ಚೆನ್ನಾಗಿತ್ತು ಅಲ್ಲವೆ? ನೀವು ಆ ಸ್ಥಳಗಳಿಗೆ ಹೋದಾಗ ಅಲ್ಲಿನ ವೈಶಿಷ್ಟ್ಯಗಳ ಬಗ್ಗೆ, ಹೋಟಲ್-ಶಾಪಿಂಗ್ ಇತ್ಯಾದಿಗಳ ಬಗ್ಗೆ ಮೊಬೈಲಿನಲ್ಲೇ ಮಾಹಿತಿ ಸಿಕ್ಕುವಂತಿದ್ದರಂತೂ ಇನ್ನೂ ಒಳಿತಾಗುತ್ತಿತ್ತು.

ಇದೆಲ್ಲ ಬರಿಯ ಕಲ್ಪನೆಯಷ್ಟೆ ಅಲ್ಲ ಎಂದು ತಜ್ಞರು ಹೇಳುತ್ತಾರೆ. ಮುಂದಿನ ದಿನಗಳಲ್ಲಿ ಸೋಶಿಯಲ್ ರೀಡಿಂಗ್ ಪರಿಕಲ್ಪನೆ ಇನ್ನಷ್ಟು ಬೆಳೆದಂತೆ ಇಂತಹ ಸೌಲಭ್ಯಗಳನ್ನು ನೀಡುವುದೂ ಸಾಧ್ಯವಾಗಲಿದೆ ಎನ್ನುವುದು ಅವರ ನಂಬಿಕೆ.

ಫೆಬ್ರುವರಿ ೨೮, ೨೦೧೪ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge