ಭಾನುವಾರ, ಫೆಬ್ರವರಿ 16, 2014

ಡಾಟ್ ಕಾಮ್ ಕತೆಗೆ ಹೊಸದೊಂದು ತಿರುವು

ಟಿ. ಜಿ. ಶ್ರೀನಿಧಿ

ವಿಶ್ವವ್ಯಾಪಿ ಜಾಲ (ವರ್ಲ್ಡ್‌ವೈಡ್ ವೆಬ್) ನಮ್ಮ ಕಣ್ಣಮುಂದೆ ಮಾಹಿತಿಯ ಮಹಾಸಾಗರವನ್ನೇ ತಂದಿಟ್ಟಿದೆಯಲ್ಲ, ಅಷ್ಟೆಲ್ಲ ಮಾಹಿತಿ ನಮಗೆ ದೊರಕುವುದು ವೆಬ್‌ಸೈಟ್, ಅಂದರೆ ಜಾಲತಾಣಗಳ ಮೂಲಕ. ಈ ಜಾಲತಾಣಗಳನ್ನು ಬಹಳಷ್ಟು ಜನ ಗುರುತಿಸುವುದು ಡಾಟ್ ಕಾಮ್‌ಗಳೆಂದೇ.

'ಡಾಟ್ ಕಾಮ್' ಎನ್ನುವುದು ಜಾಲತಾಣಗಳ ಹೆಸರಿಗೆ ಪರ್ಯಾಯವಾಗಿ ಬೆಳೆದುಬಿಟ್ಟಿದ್ದರೂ ವಾಸ್ತವದಲ್ಲಿ ಅದು ಜಾಲತಾಣಗಳ ವಿಳಾಸದ ಒಂದು ಭಾಗವಷ್ಟೇ.

ವಿಶ್ವವ್ಯಾಪಿ ಜಾಲದಲ್ಲಿರುವ ಕೋಟ್ಯಂತರ ತಾಣಗಳನ್ನು ಪ್ರತ್ಯೇಕವಾಗಿ ಗುರುತಿಸುವ ವಿಳಾಸ - ಯೂನಿಫಾರ್ಮ್ ರಿಸೋರ್ಸ್ ಲೊಕೇಟರ್ (ಯುಆರ್‌ಎಲ್) - ಇರುತ್ತದಲ್ಲ, ಅದರ ಕೊನೆಯ ಭಾಗವನ್ನು ಜೆನೆರಿಕ್ ಟಾಪ್ ಲೆವೆಲ್ ಡೊಮೈನ್ (ಜಿಟಿಎಲ್‌ಡಿ) ಎಂದು ಕರೆಯುತ್ತಾರೆ.

ಡಾಟ್ ಕಾಮ್ ಎನ್ನುವುದು ಇಂತಹ ಜಿಟಿಎಲ್‌ಡಿಗಳಲ್ಲೊಂದು. ಡಾಟ್ ಕಾಮ್ ಅಲ್ಲದೆ .net, .org, .biz, .edu ಮುಂತಾದ ಇನ್ನೂ ಅನೇಕ ಜಿಟಿಎಲ್‌ಡಿಗಳು ಬಳಕೆಯಲ್ಲಿವೆ. ಇವಷ್ಟರ ಜೊತೆಗೆ ಜಾಲತಾಣ ಯಾವ ದೇಶದ್ದು ಎಂದು ಸೂಚಿಸುವ ಕಂಟ್ರಿ ಕೋಡ್ ಟಾಪ್ ಲೆವೆಲ್ ಡೊಮೈನ್(ಸಿಸಿಟಿಎಲ್‌ಡಿ)ಗಳೂ ಇವೆ - ಭಾರತಕ್ಕೆ .in, ಫ್ರಾನ್ಸಿನ ತಾಣಗಳಿಗೆ .fr, ಇಟಲಿಗೆ .it - ಹೀಗೆ.

ನಮ್ಮ ಜಾಲತಾಣದ ಹೆಸರು ಏನೇ ಇದ್ದರೂ ವಿಳಾಸದ ಕೊನೆಯ ಭಾಗಕ್ಕೆ ಮೇಲೆ ಹೇಳಿದ ಯಾವುದೋ ಒಂದು ವಿಸ್ತರಣೆಯನ್ನು ಬಳಸಬೇಕಾದ್ದು ಇಲ್ಲಿಯವರೆಗೂ ಅನಿವಾರ್ಯವಾಗಿತ್ತು. ಹಲವಾರು ವರ್ಷಗಳಿಂದ ಹೆಚ್ಚು ಬದಲಾವಣೆಗಳಿಲ್ಲದೆ ನಡೆದುಕೊಂಡುಬಂದಿದ್ದ ಈ ವ್ಯವಸ್ಥೆಗೆ ಇದೀಗ ಬದಲಾವಣೆಯ ಸಮಯ ಬಂದಿದೆ.

ವೆಬ್ ವಿಳಾಸಗಳ ಮೇಲ್ವಿಚಾರಣೆ ನೋಡಿಕೊಳ್ಳುವ ಸಂಸ್ಥೆ ಇಂಟರ್‌ನೆಟ್ ಕಾರ್ಪೊರೇಷನ್ ಫಾರ್ ಅಸೈನ್ಡ್ ನೇಮ್ಸ್ ಆಂಡ್ ನಂಬರ್ಸ್ (ICANN) ಪರಿಚಯಿಸಿರುವ ಹೊಸ ವ್ಯವಸ್ಥೆಯ ಮೂಲಕ ಜಾಲತಾಣದ ಹೆಸರಿನಂತೆ ಅದರ ವಿಸ್ತರಣೆಯನ್ನೂ ನಮ್ಮ ಇಷ್ಟದ ಪ್ರಕಾರ ಆರಿಸಿಕೊಳ್ಳುವುದು ಸಾಧ್ಯವಾಗಿದೆ. ಅಂದರೆ, ಬೆಸ್ಟ್ ಫೋಟೋಗ್ರಫಿ ಎನ್ನುವ ಸಂಸ್ಥೆ ಇದೆ ಅಂದುಕೊಂಡರೆ ಅದರ ಜಾಲತಾಣ www.bestphotography.com ಎಂದೇನೋ ಇರುವ ಬದಲು www.best.photography ಎಂದೇ ಇರುವುದು ಇನ್ನುಮುಂದೆ ಸಾಧ್ಯವಾಗಲಿದೆ.

ಈ ನಿಟ್ಟಿನಲ್ಲಿ ಮೊದಲ ಮಹತ್ವದ ಘಟನೆ ಫೆಬ್ರುವರಿ ೨೦೧೪ರ ಮೊದಲ ವಾರದಲ್ಲಿ ನಡೆದಿದೆ. ಅರೇಬಿಕ್ ಭಾಷೆಯ ತಾಣಗಳಿಗೆ 'ಡಾಟ್ ಶಬಾಕಾ' ಎನ್ನುವ ಹೊಸ ವಿಸ್ತರಣೆ ಇದೀಗ ಲಭ್ಯವಾಗಿದೆ.

ಇಂಗ್ಲಿಷ್ ಭಾಷೆಯಲ್ಲೂ ಹಲವಾರು ಹೊಸ ವಿಸ್ತರಣೆಗಳು ಸಿದ್ಧವಾಗಿದ್ದು ಜಾಲತಾಣಗಳು ಶೀಘ್ರದಲ್ಲೇ ಡಾಟ್ ಕ್ಯಾಮೆರಾ, ಡಾಟ್ ಗ್ರಾಫಿಕ್ಸ್, ಡಾಟ್ ಫೋಟೋಗ್ರಫಿ, ಡಾಟ್ ಪ್ರೆಸ್, ಡಾಟ್ ಬಜ್, ಡಾಟ್ ಇಂಡಿಯನ್ಸ್, ಡಾಟ್ ಟೆಕ್ ಮುಂತಾದ ವಿಸ್ತರಣೆಗಳನ್ನು ಪಡೆದುಕೊಳ್ಳುವುದು ಸಾಧ್ಯವಾಗಲಿದೆ.

ಇಂತಹ ಪ್ರತಿಯೊಂದು ಹೊಸ ಟಾಪ್ ಲೆವೆಲ್ ಡೊಮೈನ್‌ಗೆ ಮಾನ್ಯತೆ ನೀಡಲು ೧.೮೫ ಲಕ್ಷ ಡಾಲರುಗಳ ಶುಲ್ಕ ವಿಧಿಸಲಾಗಿದೆ. ಹಾಗಾಗಿ ಈ ವಿಸ್ತರಣೆಯಿರುವ ಜಾಲತಾಣಗಳನ್ನು ನೋಂದಾಯಿಸಲು ಬಳಕೆದಾರರೂ ಕೊಂಚ ಹೆಚ್ಚಿನ ಬಾಡಿಗೆ ನೀಡಬೇಕಾಗಬಹುದು ಎಂದು ಊಹಿಸಲಾಗಿದೆ.

ಅಂದಹಾಗೆ ಇಂತಹ ವಿಸ್ತರಣೆಗಳಿರುವ ಜಾಲತಾಣದ ವಿಳಾಸಗಳನ್ನು ಬಳಕೆದಾರರಿಗೆ ಲಭ್ಯವಾಗಿಸುವ ಕೆಲಸ ಈಗಾಗಲೇ ಶುರುವಾಗಿದೆ. ವಿವಿಧ ಹೆಸರುಗಳ ಮೇಲೆ ಹಕ್ಕುಸ್ವಾಮ್ಯ ಹೊಂದಿರುವವರಿಗೆ ಪ್ರಥಮ ಆದ್ಯತೆ ಕೊಟ್ಟ ನಂತರ ಇತರರಿಗೂ ಈ ಹೊಸ ವಿಸ್ತರಣೆಗಳಿರುವ ವೆಬ್ ವಿಳಾಸ ನೋಂದಾಯಿಸಿಕೊಳ್ಳುವ ಅವಕಾಶ ಇದೆ.

ನಮ್ಮಿಷ್ಟದ ಹೆಸರು, ನಮ್ಮಿಷ್ಟದ ವಿಸ್ತರಣೆ ಜೊತೆಗೆ ನಮ್ಮ ಭಾಷೆಯಲ್ಲೇ ಜಾಲತಾಣದ ವಿಳಾಸಗಳನ್ನು ನೋಂದಾಯಿಸಿಕೊಳ್ಳುವುದೂ ಈಗಾಗಲೇ ಸಾಧ್ಯವಾಗಿದೆ. ಉದಾಹರಣೆಗೆ ಈ ಲೇಖನದ ಪ್ರಾರಂಭದಲ್ಲಿ ಹೇಳಿರುವ 'ಡಾಟ್ ಶಬಾಕಾ' ವಿಸ್ತರಣೆ ಅರೇಬಿಕ್ ಭಾಷೆಯಲ್ಲೇ ಇದೆ. ಇಂಟರ್‌ನ್ಯಾಶನಲೈಸ್ಡ್ ಡೊಮೈನ್ ನೇಮ್‌ಗಳೆಂದು ಕರೆಸಿಕೊಳ್ಳುವ ಈ ವಿಳಾಸಗಳು ಸಂಪೂರ್ಣವಾಗಿ ಇಂಗ್ಲಿಷೇತರ ಭಾಷೆಗಳಲ್ಲೇ ಇರುವುದು ಸಾಧ್ಯ.

ಅರೇಬಿಕ್ ಜೊತೆಗೆ ಚೈನೀಸ್, ರಷ್ಯನ್, ಥಾಯ್ ಮುಂತಾದ ಇನ್ನೂ ಹಲವು ಭಾಷೆಗಳಲ್ಲಿ ಇಂಟರ್‌ನ್ಯಾಶನಲೈಸ್ಡ್ ಡೊಮೈನ್ ನೇಮ್‌ಗಳನ್ನು ರೂಪಿಸಿಕೊಳ್ಳುವುದು ಸಾಧ್ಯ. ಭಾರತದ ಮಟ್ಟಿಗೆ ತಮಿಳು-ತೆಲುಗು ಸೇರಿ ಕೆಲವು ಭಾಷೆಗಳಿಗಷ್ಟೇ ಸಿಕ್ಕಿರುವ ಈ ಸೌಲಭ್ಯ ಇನ್ನೂ ಕನ್ನಡಕ್ಕೆ ಲಭ್ಯವಾಗದಿರುವುದೊಂದೇ ಬೇಸರದ ಸಂಗತಿ.

ಫೆಬ್ರುವರಿ ೧೪, ೨೦೧೪ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge