ಬುಧವಾರ, ಜನವರಿ 29, 2014

ಸೋಶಿಯಲ್ ನೆಟ್‌ವರ್ಕ್‌ನಲ್ಲಿ ನೆಟ್ಟಗಿರೋಣ!

ಟಿ. ಜಿ. ಶ್ರೀನಿಧಿ


ಸೋಶಿಯಲ್ ನೆಟ್‌ವರ್ಕ್ ಅಥವಾ ಸಮಾಜಜಾಲಗಳು ಯಾರಿಗೆ ತಾನೆ ಗೊತ್ತಿಲ್ಲ? ಪುಟ್ಟಮಕ್ಕಳಿಂದ ಅಜ್ಜಿತಾತನವರೆಗೆ ಎಲ್ಲರೂ ಇಂದು ಫೇಸ್‌ಬುಕ್, ಟ್ವಿಟ್ಟರ್ ಮುಂತಾದ ಸಮಾಜಜಾಲಗಳಲ್ಲಿ ಕಾಣಸಿಗುತ್ತಾರೆ. ಚಾಟಿಂಗ್, ಫೋಟೋ-ವೀಡಿಯೋ ಹಂಚಿಕೆ, ಮಾಹಿತಿ ವಿತರಣೆ ಇವೆಲ್ಲ ಈ ತಾಣಗಳ ಮುಖ್ಯ ಉಪಯೋಗ.

ಸಮಾಜಜಾಲಗಳಿಂದ ಇನ್ನೂ ಬೇಕಾದಷ್ಟು ಪ್ರಯೋಜನಗಳಿವೆ. ಹೊಸಬರ ಪರಿಚಯ ಮಾಡಿಕೊಂಡು ನಮ್ಮ ನೆಟ್‌ವರ್ಕ್ ವಿಸ್ತರಿಸಿಕೊಳ್ಳುವುದು ಇಂತಹ ಪ್ರಯೋಜನಗಳಲ್ಲೊಂದು. ಲಿಂಕ್ಡ್‌ಇನ್‌ನಂತಹ ತಾಣಗಳಲ್ಲಿ ರೂಪುಗೊಳ್ಳುವ ಇಂತಹ ನೆಟ್‌ವರ್ಕ್ ನಮ್ಮ ವೃತ್ತಿಜೀವನದಲ್ಲಿ ಸಾಕಷ್ಟು ನೆರವು ನೀಡಬಲ್ಲದು. ಇದಲ್ಲದೆ ನಮ್ಮ ಪ್ರಶ್ನೆಗಳಿಗೆ ಉತ್ತರ ಹುಡುಕುವುದರಿಂದ ಪ್ರಾರಂಭಿಸಿ ಯಾವುದೋ ಕೆಲಸಕ್ಕೆ ಅಗತ್ಯವಾದ ಮಾಹಿತಿ ಅಥವಾ ನೆರವು ಪಡೆದುಕೊಳ್ಳುವವರೆಗೆ ಅನೇಕ ಕೆಲಸಗಳಲ್ಲಿ ಸಮಾಜಜಾಲಗಳು ನೆರವಾಗುತ್ತವೆ. ನಮ್ಮ ಬಿಸಿನೆಸ್ ಬೆಳವಣಿಗೆಗೆ - ನಮ್ಮ ಗ್ರಾಹಕರೊಡನೆ ಸಂಪರ್ಕ ಬೆಳೆಸಿಕೊಳ್ಳುವುದಕ್ಕೂ ಸಮಾಜಜಾಲಗಳನ್ನು ಬಳಸಿಕೊಳ್ಳಬಹುದು. ಸಮಾಜಜಾಲಗಳನ್ನು ಸೂಕ್ತವಾಗಿ ಬಳಸಿಕೊಂಡರೆ ಹಣಕಾಸಿನ ಲಾಭ ಮಾಡಿಕೊಳ್ಳುವುದೂ ಸಾಧ್ಯ.

ಅಷ್ಟೇ ಏಕೆ, ಹೊಸ ವಿಷಯಗಳ ಹಾಗೂ ಹಳೆಯ ವಿಷಯದ ಹೊಸ ಆಯಾಮಗಳನ್ನು ಪರಿಚಯಿಸಿಕೊಳ್ಳಲೂ ಸಮಾಜಜಾಲಗಳು ಸಹಾಯಮಾಡುತ್ತವೆ. ನೂರೆಂಟು ವಿಷಯಗಳ ಬಗ್ಗೆ ಆರೋಗ್ಯಕರ ಚರ್ಚೆ ಕೂಡ ಇಲ್ಲಿ ಸಾಧ್ಯ. ಅದೆಷ್ಟೋ ಸಂದರ್ಭಗಳಲ್ಲಿ ಸುದ್ದಿಗಳು ಬೇರೆಲ್ಲ ಮಾಧ್ಯಮಗಳಿಗೆ ಮೊದಲು ಸಮಾಜಜಾಲಗಳಲ್ಲೇ ಕಾಣಿಸಿಕೊಳ್ಳುವುದೂ ಉಂಟು.

ಹೀಗಿದ್ದರೂ ನಮ್ಮಂತಹ ಅದೆಷ್ಟೋ ಬಳಕೆದಾರರ ಪಾಲಿಗೆ ಸಮಾಜಜಾಲಗಳು ವೈಯಕ್ತಿಕ ಮಾಹಿತಿ ಹಂಚಿಕೊಳ್ಳುವ ವೇದಿಕೆಗಳಾಗಿಯೇ ಮುಂದುವರೆದಿವೆ. ಗೆಳೆಯರೊಂದಿಗೆ ಸದಾಕಾಲ ಸಂಪರ್ಕದಲ್ಲಿರಲು, ಹೊಸಹೊಸ ಜನರನ್ನು ಪರಿಚಯ ಮಾಡಿಕೊಳ್ಳಲು, ನಮ್ಮ ಚಟುವಟಿಕೆಗಳ ಬಗೆಗೆ ಮಿತ್ರರಿಗೆಲ್ಲ ಹೇಳಲು, ಛಾಯಾಚಿತ್ರ-ವೀಡಿಯೋಗಳನ್ನು ಹಂಚಿಕೊಳ್ಳಲು, ಪಠ್ಯ-ಧ್ವನಿ-ವೀಡಿಯೋ ರೂಪದಲ್ಲಿ ಚಾಟ್ ಮಾಡಲು ಈ ತಾಣಗಳು ನೆರವಾಗುತ್ತಿವೆ.

ಈ ಸಹಾಯದ ಬೆನ್ನಹಿಂದೆಯೇ ಅವು ನಮ್ಮ ಮೇಲೊಂದು ಮಹತ್ವದ ಜವಾಬ್ದಾರಿಯನ್ನೂ ಹೊರೆಸುತ್ತಿವೆ. ಸಮಾಜಜಾಲಗಳಲ್ಲಿ ಇಷ್ಟೆಲ್ಲ ಬಗೆಯ ವೈಯಕ್ತಿಕ ಮಾಹಿತಿ ಹಂಚಿಕೊಳ್ಳುತ್ತೇವಲ್ಲ, ಅದರಮೇಲೆ ಒಂದಷ್ಟು ಮಟ್ಟದ ಸ್ವಯಂನಿಯಂತ್ರಣ ಇಟ್ಟುಕೊಳ್ಳಬೇಕಾದ್ದೇ ಈ ಜವಾಬ್ದಾರಿ.

ಈಗೊಂದು ಉದಾಹರಣೆ ನೋಡುವುದಾದರೆ ಒಬ್ಬ ವಿದ್ಯಾರ್ಥಿ ಕಾಲೇಜು ದಿನಗಳ ಹುಮ್ಮಸ್ಸಿನಲ್ಲಿ ತಾನು ಮಾಡಿದ್ದನ್ನೆಲ್ಲ ಸಮಾಜಜಾಲಗಳಲ್ಲಿ ಸೇರಿಸುತ್ತಾನೆ ಅಂದುಕೊಳ್ಳೋಣ. ಹತ್ತಾರು ಸನ್ನಿವೇಶ-ನೂರೆಂಟು ಭಂಗಿಯ ಚಿತ್ರಗಳು, ಅವರಿವರ ಜೊತೆಗೆ ಜಗಳ, ಬೈಗುಳ ಇತ್ಯಾದಿ ಎಲ್ಲವೂ ಅವನ ಖಾತೆಗೆ ಸೇರುತ್ತಾ ಹೋಗುತ್ತದೆ. ಇನ್ನು ಒಂದೋ ಎರಡೋ ವರ್ಷಗಳಲ್ಲಿ ಕೆಲಸಕ್ಕೆ ಸೇರುವ ಹೊತ್ತಿನಲ್ಲಿ ಆ ಮಾಹಿತಿಯೆಲ್ಲ ಉದ್ಯೋಗದಾತರ ಕಣ್ಣಿಗೆ ಬಿದ್ದರೆ ಅವರಲ್ಲಿ ಅವನ ಬಗ್ಗೆ ಎಂತಹ ಅಭಿಪ್ರಾಯ ಮೂಡಬಹುದು? ಕೆಲಸದ ವಿಷಯ ಹೋಗಲಿ, ಆಕ್ಷೇಪಾರ್ಹ ಚಿತ್ರ-ಸಂದೇಶ ಇತ್ಯಾದಿಗಳನ್ನು ನೋಡಿದ ಆತನ ಕುಟುಂಬದವರ ಪ್ರತಿಕ್ರಿಯೆ ಹೇಗಿರಬಹುದು? ಕೆಲಸಕ್ಕೆ ಸೇರಿದ ಮೇಲೂ ಅಸಮರ್ಪಕ ಮಾಹಿತಿ ಹಂಚಿಕೊಳ್ಳುವ ಈ ಅಭ್ಯಾಸ ಮುಂದುವರೆದರೆ ಅವನ ವೃತ್ತಿ ಭವಿಷ್ಯಕ್ಕೆ ಎಷ್ಟು ತೊಂದರೆಯಾಗಬಹುದು?

ಒಟ್ಟಾರೆಯಾಗಿ, ಕಾಲೇಜು ದಿನಗಳಲ್ಲಿ ಕೂಲ್ ಆಗಿ ಕಾಣಲೆಂದು ಯಾವಯಾವುದೋ ಸನ್ನಿವೇಶ-ಭಂಗಿಗಳಲ್ಲಿ ತೆಗೆಸಿಕೊಂಡ ಛಾಯಾಚಿತ್ರ ಆಗ ಹೇಗೆ ಕಂಡರೂ ಮುಂದೆ ನಮ್ಮ ವ್ಯಕ್ತಿತ್ವದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಬಹುದು. ಕೀಳು ಅಭಿರುಚಿಯ ಬರಹಗಳ - ಕಮೆಂಟುಗಳ ಕತೆಯೂ ಇದೇ. ಮುಂದೆಂದೋ ನಮಗೆ ಮುಜುಗರ ಉಂಟುಮಾಡುವಂತಹ ಇಂತಹ ಮಾಹಿತಿಯನ್ನು ಮೊದಲಿಗೆ ಯಾವ ಜಾಲತಾಣಕ್ಕೂ ಸೇರಿಸದೇ ಇರುವುದು ಈ ಸಮಸ್ಯೆಗೆ ಸರಳ ಪರಿಹಾರ ಎನ್ನಬಹುದು.

ವೈಯಕ್ತಿಕ ಮಾಹಿತಿಯನ್ನೂ ಅಷ್ಟೇ, ಸಾಮಾನ್ಯವಾಗಿ ನಾವು ಅಪರಿಚಿತರ ಜೊತೆ ಏನನ್ನು ಹಂಚಿಕೊಳ್ಳಲು ಇಷ್ಟಪಡುವುದಿಲ್ಲವೋ ಅಂಥ ಮಾಹಿತಿಯನ್ನು ಯಾವ ಕಾರಣಕ್ಕೂ ಸಮಾಜ ಜಾಲಗಳಲ್ಲಿ ಹಂಚಿಕೊಳ್ಳದಿರುವುದು - ನಮ್ಮದೇ ಸುರಕ್ಷತೆಯ ದೃಷ್ಟಿಯಿಂದ - ಬಹಳ ಒಳ್ಳೆಯದು. ತೀರಾ ಖಾಸಗಿ ಕ್ಷಣಗಳ ಚಿತ್ರ, ವಿವರಗಳು ಖಾಸಗಿಯಾಗಿಯೇ ಇರಲಿ.

ನಮ್ಮ ಚಟುವಟಿಕೆಗಳ ಕುರಿತು ಅತಿಯಾಗಿ ಅಪ್‌ಡೇಟ್‌ಗಳನ್ನು ಪ್ರಕಟಿಸುವುದು, ಹೋದ ಸ್ಥಳಗಳಿಂದೆಲ್ಲ ಪುಂಖಾನುಪುಂಖವಾಗಿ ಸಂದೇಶಗಳನ್ನು ಹರಿಬಿಡುವುದು  - ಇದು ಸುರಕ್ಷತೆ ಹಾಗೂ ಖಾಸಗಿತನ ಕಾಪಾಡಿಕೊಳ್ಳುವ ದೃಷ್ಟಿಯಿಂದ ತಪ್ಪು ಮಾತ್ರವೇ ಅಲ್ಲ, ಅತಿಯೆನಿಸುವಷ್ಟು ಸಂದೇಶಗಳು ನಮ್ಮ ಮಿತ್ರರಿಗೆ ಕಿರಿಕಿರಿಯನ್ನೂ ಉಂಟುಮಾಡಬಲ್ಲದು. ಅನಗತ್ಯ, ಅಸ್ಪಷ್ಟ ಸಂದೇಶಗಳ ಕತೆಯೂ ಅಷ್ಟೇ - ಅವುಗಳಿಂದ ಸಮಯ ವ್ಯರ್ಥವಾಗುವುದಲ್ಲದೆ ಬೇರೆ ಯಾವ ಉಪಯೋಗವೂ ಇಲ್ಲ!

ಯಾವುದೋ ಖಾಸಗಿ ಮಾಹಿತಿಯನ್ನು ಹಂಚಿಕೊಳ್ಳುವಾಗ ಅದನ್ನು ಎಲ್ಲರಿಗೂ ಕಾಣುವಂತೆ ಪ್ರಕಟಿಸದೆ ಸಂಬಂಧಪಟ್ಟವರಿಗೆ ಮಾತ್ರ ಖಾಸಗಿ ಸಂದೇಶವಾಗಿ ಕಳುಹಿಸಿಕೊಡಬಹುದು. ಫೇಸ್‌ಬುಕ್‌ನದೇ ಉದಾಹರಣೆ ತೆಗೆದುಕೊಂಡರೆ ಇಂತಹ ಮಾಹಿತಿಗೆ ಮಿತ್ರರ 'ವಾಲ್'ಗಿಂತ ಮೆಸೇಜಿಂಗ್ ಆಯ್ಕೆ ಹೆಚ್ಚು ಸೂಕ್ತ. 'ವಾಲ್'ನಲ್ಲಿ ಕಾಣಿಸಿಕೊಳ್ಳುವ ಮಾಹಿತಿಯೂ ಪ್ರಪಂಚಕ್ಕೆಲ್ಲ ತಿಳಿಯಬೇಕಾದ ಅವಶ್ಯಕತೆಯೇನಿಲ್ಲ; ನಾವು ಪ್ರಕಟಿಸುವ ಯಾವ ಮಾಹಿತಿ ಯಾರಿಗೆಲ್ಲ ತಿಳಿಯಬೇಕು ಎನ್ನುವುದನ್ನು ಗೋಪ್ಯತೆಯ ಆಯ್ಕೆಗಳನ್ನು (ಪ್ರೈವೆಸಿ ಸೆಟ್ಟಿಂಗ್ಸ್) ಸೂಕ್ತವಾಗಿ ಹೊಂದಿಸುವ ಮೂಲಕ ನಾವೇ ತೀರ್ಮಾನಿಸುವುದು ಸಾಧ್ಯ.

ಇನ್ನು ಇತರರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದು, ಜಗಳಕಾಯುವುದು, ದ್ವೇಷಕಾರುವುದಂತೂ ಖಂಡಿತಾ ಬೇಡ. ವೈಯಕ್ತಿಕ ದೃಷ್ಟಿಕೋನಗಳ ಬಗ್ಗೆ ಮಾತನಾಡುವಾಗ ಸಭ್ಯತೆಯ ಎಲ್ಲೆಯೊಳಗಿರುವುದು ಉತ್ತಮ; ನಮ್ಮ ದೃಷ್ಟಿಕೋನ ಸರಿ ಎಂದು ವಾದಿಸುವ ಭರದಲ್ಲಿ ಇತರರ ನಿಂದೆ ಸಭ್ಯತೆಯಲ್ಲ.

ನಮಗೆ ತಮಾಷೆಯೆಂದು ತೋರಿದರೂ ಬೇರೆಯವರಿಗೆ ತೊಂದರೆಯುಂಟುಮಾಡಬಲ್ಲ ಮಾಹಿತಿಯನ್ನು (ಉದಾ: ಸ್ನೇಹಿತರಿಗೆ ಮುಜುಗರವಾಗುವಂತಹ ಘಟನೆಯ ಉಲ್ಲೇಖ, ಅಥವಾ ಚಿತ್ರ) ಪ್ರಕಟಿಸುವುದೂ ತಪ್ಪು. ಹಿಂದೆ ಯಾವತ್ತೋ ಮುಗಿದಿರುವ ಚರ್ಚೆಯಲ್ಲಿ ಕಮೆಂಟ್ ಮಾಡುವ ಮೂಲಕ ಅದಕ್ಕೆ ಮತ್ತೆ ಜೀವತುಂಬುವುದು ಕೂಡ ಒಳ್ಳೆಯದಲ್ಲ.

ಸಮಾಜ ಜಾಲಗಳಲ್ಲಿ ನೂರೆಂಟು ವಿಷಯಗಳನ್ನು ಕುರಿತ ಮಾಹಿತಿ ಕಾಣಸಿಗುವುದು ಸಾಮಾನ್ಯ. ನಿಖರ-ಉಪಯುಕ್ತ ಮಾಹಿತಿಯಿಂದ ಪ್ರಾರಂಭಿಸಿ ಶುದ್ಧ ಸುಳ್ಳಿನ ಕಂತೆಗಳವರೆಗೆ ಇಲ್ಲಿ ಸಕಲವೂ ಇರುತ್ತದೆ. ಹಾಗಾಗಿ ನಮ್ಮ ಗಮನಕ್ಕೆ ಬಂದ ಮಾಹಿತಿಯನ್ನೆಲ್ಲ ಸುಳ್ಳೋ ನಿಜವೋ ನೋಡದೆ ಎಲ್ಲರಿಗೂ ಹಂಚಿಬಿಡುವ (ಫೇಸ್‌ಬುಕ್ ಭಾಷೆಯಲ್ಲಿ ಹೇಳುವುದಾದರೆ 'ಶೇರ್ ಮಾಡುವ') ಹವ್ಯಾಸ ಖಂಡಿತಾ ಬೇಡ. ಅದರಿಂದಾಗಿ ಸಮಯ ಹಾಳಾಗುವುದು ಅಥವಾ ಮಿತ್ರರಿಂದ ಬೈಸಿಕೊಳ್ಳುವುದಷ್ಟೇ ಅಲ್ಲ, ಆರೋಗ್ಯಕ್ಕೆ ಸಂಬಂಧಿಸಿದಂತೆ ಸಿಕ್ಕಸಿಕ್ಕ ಸಲಹೆಯನ್ನೆಲ್ಲ ಪಾಲಿಸಹೋಗುವುದು ಹಾನಿಕಾರಕವೂ ಆಗಬಹುದು.

ಹಾಗಾಗಿ ಈ ಸಂದೇಶವನ್ನು ಹತ್ತು ಜನಕ್ಕೆ ಕಳುಹಿಸಿದರೆ ನಿಮಗೆ ಒಳ್ಳೆಯದಾಗುತ್ತದೆ ಅಂತಲೋ ಈ ಸಂದೇಶವನ್ನು ಇದೇ ಕ್ಷಣದಲ್ಲಿ ಮಿತ್ರರೆಲ್ಲರಿಗೂ ಕಳುಹಿಸಿದರೆ ಒಂದು ಐಪ್ಯಾಡ್ ಉಚಿತವಾಗಿ ಸಿಗುತ್ತದೆ ಅಂತಲೋ ಹೇಳುವ ಸಂದೇಶಗಳನ್ನು ಹಂಚಿಕೊಂಡು ನಮ್ಮ ಆಪ್ತರಿಗೆಲ್ಲ ಕಿರಿಕಿರಿ ಮಾಡದಿರುವುದೇ ಒಳ್ಳೆಯ ಅಭ್ಯಾಸ ಎನ್ನಬಹುದು. ಅಕಸ್ಮಾತ್ ನಮ್ಮ ಪರಿಚಿತರಲ್ಲಿ ಯಾರಾದರೂ ಇಂತಹ ಅಸಂಬದ್ಧ ಸಂದೇಶಗಳನ್ನು ನಮ್ಮೊಡನೆ ಹಂಚಿಕೊಂಡರೆ ಒಳ್ಳೆಯ ಮಾತಿನಲ್ಲೇ ಅವರಿಗೆ ತಿಳಿಸಿಹೇಳುವುದು ಖಂಡಿತಾ ತಪ್ಪಾಗಲಾರದು!

ಚಿತ್ರಗಳನ್ನು, ಸಂದೇಶಗಳನ್ನು ಶೇರ್ ಮಾಡುವುದೇ ಆದರೂ ಅದರಲ್ಲಿ ಸಿಕ್ಕಸಿಕ್ಕವರನ್ನೆಲ್ಲ ಟ್ಯಾಗ್ ಮಾಡುವುದು ಬೇಡ. ನಿಮಗಿಷ್ಟವಾದ ಅಥವಾ ಕುತೂಹಲಕರವಾಗಿ ಕಂಡ ಸಂಗತಿ ಬೇರೆಯವರಿಗೆ ಇಷ್ಟವಾಗದಿರಬಹುದು, ಅಥವಾ ಮುಜುಗರ ಹುಟ್ಟಿಸಬಹುದು. ನೀವು ಹಂಚಿಕೊಂಡ ಮಾಹಿತಿ ಯಾರಿಗೆ ನೇರವಾಗಿ ಸಂಬಂಧಿಸಿದೆಯೋ ಅವರನ್ನು ಮಾತ್ರ - ಅದೂ ಅತ್ಯಗತ್ಯವಾದರೆ - ಟ್ಯಾಗ್ ಮಾಡಿ. ಸುಖಾಸುಮ್ಮನೆ ಎಲ್ಲೆಡೆಯೂ ಟ್ಯಾಗ್ ಮಾಡುವವರನ್ನು ಯಾರೂ ಇಷ್ಟಪಡುವುದಿಲ್ಲ; ಕಾಟ ಜಾಸ್ತಿಯಾದಾಗ ಅಂಥವರನ್ನು ಮಿತ್ರರ ಪಟ್ಟಿಯಿಂದ ಹೊರಹಾಕುವ ಸಾಧ್ಯತೆಯೂ ಇರುತ್ತದೆ! ಗೇಮ್‌ಗಳ, ಆಪ್‌ಗಳ ಕತೆಯೂ ಅಷ್ಟೆ - ನಿಮಗೆ ಇಷ್ಟವಾದುದ್ದನ್ನು ಖುಷಿಯಿಂದ ಬಳಸಿ; ಆದರೆ ನಿಮಗೆ ಇಷ್ಟವಾದ ಪ್ರತಿಯೊಂದು ಗೇಮ್ ಅಥವಾ ಆಪ್ ಬಳಸುವಂತೆ ಎಲ್ಲರಿಗೂ ಆಮಂತ್ರಣ ಕಳುಹಿಸುತ್ತ ಕಿರಿಕಿರಿಮಾಡಬೇಡಿ!

ಈ ಎಲ್ಲ ಅಂಶಗಳ ಕುರಿತು ಗಮನಹರಿಸುವುದಷ್ಟೇ ಅಲ್ಲ, ಅವುಗಳ ಬಗ್ಗೆ ಕಿರಿಯರಿಗೆ ತಿಳಿಹೇಳುವುದೂ ನಮ್ಮದೇ ಕರ್ತವ್ಯ. ಸಮಾಜಜಾಲಗಳಲ್ಲಿ ಅವರು ಸೂಕ್ತ ಎಚ್ಚರಿಕೆ ವಹಿಸಲಿಲ್ಲ ಎಂದರೆ ಕೆಟ್ಟ ಸಹವಾಸ, ಸೈಬರ್ ಪೀಡಕರ ಕಾಟ ಎಲ್ಲವೂ ಶುರುವಾಗಬಹುದು; ಇದರಿಂದಾಗಿ ಅವರು ತೀವ್ರ ಮಾನಸಿಕ ಹಿಂಸೆಯನ್ನೂ ಅನುಭವಿಸಬೇಕಾಗಿ ಬರಬಹುದು. ಅದೃಷ್ಟವಶಾತ್ ಅಷ್ಟೆಲ್ಲ ಗಂಭೀರ ಸಮಸ್ಯೆ ಆಗದಿದ್ದರೂ ಓದಿನ ಮೇಲೆ, ಆಟದ ಮೇಲೆ ಅವರ ಆಸಕ್ತಿ ಕಡಿಮೆಯಾಗುವ ಸಾಧ್ಯತೆ ಖಂಡಿತಾ ಇರುತ್ತದೆ. ಹಾಗಾಗಿ ಮಕ್ಕಳನ್ನು ದೊಡ್ಡವರ ಸಮಾಜಜಾಲಗಳಿಂದ ಆದಷ್ಟೂ ದೂರ ಇಡುವುದು ಒಳಿತು. ಹಾಗೆ ಅವರು ಸಮಾಜಜಾಲಗಳನ್ನು ಸೇರಲೇಬೇಕು ಎನ್ನುವುದಾದರೆ ಅವರನ್ನು ಮಕ್ಕಳಿಗಾಗಿಯೇ ಇರುವ ಸಮಾಜಜಾಲಗಳತ್ತ ಕಳುಹಿಸಬಹುದು.

ಒಟ್ಟಿನಲ್ಲಿ ಸಮಾಜಜಾಲಗಳನ್ನು ಎಷ್ಟು ಸಮರ್ಪಕವಾಗಿ ಬಳಸಿಕೊಳ್ಳುತ್ತೇವೆ ಎನ್ನುವುದು ನಮ್ಮ ಕೈಯಲ್ಲೇ ಇದೆ. ಅದರಿಂದ ಅನುಕೂಲವಾದರೂ ತೊಂದರೆಯಾದರೂ ಅದರ ಸಂಪೂರ್ಣ ಜವಾಬ್ದಾರಿ ನಮ್ಮದೇ!

ಜನವರಿ ೨೯, ೨೦೧೪ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

1 ಕಾಮೆಂಟ್‌:

Bolwar Mahamad Kunhi ಹೇಳಿದರು...

ಫೇಸ್ ಬುಕ್ ಬಳಸುವ ಎಲ್ಲರಿಗೂ ಬಹಳಷ್ಟು ಗುಟ್ಟುಗಳನ್ನು ಬಿಟ್ಟುಕೊಟ್ಟ ಬಹಳ ಉಪಯುಕ್ತ ಬರಹ. ಅಭಿನಂದನೆಗಳು.-bolwar

badge