ಟಿ. ಜಿ. ಶ್ರೀನಿಧಿ ಹೊಸ ಪುಸ್ತಕ: 'ಟೆಕ್ಸ್ಟ್‌ಬುಕ್ ಅಲ್ಲ, ಇದು ಟೆಕ್ ಬುಕ್!'

ಸಾಫ್ಟ್‌ವೇರ್ ಜಗದ ಜೀವನಚಕ್ರ

ಟಿ. ಜಿ. ಶ್ರೀನಿಧಿ

ತಂತ್ರಾಂಶ ರಚನೆಯಲ್ಲಿ ಪಾಲಿಸಬೇಕಾದ ಕ್ರಮ, ನಿಯಮ-ನಿಬಂಧನೆಗಳ ರೂಪುರೇಷೆಯನ್ನು ಸಾಫ್ಟ್‌ವೇರ್ ಇಂಜಿನಿಯರಿಂಗ್ ಪರಿಕಲ್ಪನೆ ಮುಂದಿಡುತ್ತದೇನೋ ಸರಿ, ಆದರೆ ಆ ನಿಯಮ ನಿಬಂಧನೆಗಳು ಯಾವುವು, ಹಾಗೂ ಅವನ್ನು ಪಾಲಿಸುವುದು ಹೇಗೆ?

ಈ ಉದ್ದೇಶಕ್ಕಾಗಿ ಸಾಫ್ಟ್‌ವೇರ್ ಜಗತ್ತಿನಲ್ಲಿ ಹಲವು ಕಾರ್ಯವಿಧಾನ ಮಾದರಿಗಳನ್ನು (ಪ್ರಾಸೆಸ್ ಮಾಡೆಲ್) ಬಳಸಲಾಗುತ್ತದೆ. ಈ ಮಾದರಿಗಳು ತಂತ್ರಾಂಶ ರಚನೆಯ ವಿವಿಧ ಹಂತಗಳನ್ನು ಹಾಗೂ ಅಂತಹ ಪ್ರತಿಯೊಂದು ಹಂತದಲ್ಲೂ ಕೈಗೊಳ್ಳಬೇಕಾದ ನಿರ್ದಿಷ್ಟ ಚಟುವಟಿಕೆಗಳನ್ನು ನಮ್ಮ ಮುಂದಿಡುತ್ತವೆ. ಸರಳವಾಗಿ ಹೇಳುವುದಾದರೆ ತಂತ್ರಾಂಶ ರಚನೆ ಪ್ರಕ್ರಿಯೆಯ ಜೀವನ ಚಕ್ರವನ್ನೇ ನಿರ್ದೇಶಿಸುತ್ತವೆ.

ಮೂಲತಃ ಈ ಎಲ್ಲ ಮಾದರಿಗಳಲ್ಲೂ ಸಾಫ್ಟ್‌ವೇರ್ ಇಂಜಿನಿಯರಿಂಗ್ ಪರಿಕಲ್ಪನೆಯಲ್ಲಿರುವ ಮೂಲ ಹೆಜ್ಜೆಗಳೇ (ರಿಕ್ವೈರ್‌ಮೆಂಟ್ಸ್ ಅನಾಲಿಸಿಸ್, ಡಿಸೈನ್, ಡೆವೆಲಪ್‌ಮೆಂಟ್, ಟೆಸ್ಟಿಂಗ್ ಇತ್ಯಾದಿ) ಬಳಕೆಯಾಗುತ್ತವೆ. ಆದರೆ ಪ್ರತಿಯೊಂದು ಮಾದರಿಯಲ್ಲೂ ಈ ಹೆಜ್ಜೆಗಳ ಅನುಷ್ಠಾನ ಮಾತ್ರ ಭಿನ್ನವಾಗಿರುತ್ತದೆ.

ಒಂದು ಉದಾಹರಣೆ ನೋಡೋಣ.

ಸೋಶಿಯಲ್ ನೆಟ್‌ವರ್ಕ್‌ನಲ್ಲಿ ನೆಟ್ಟಗಿರೋಣ!

ಟಿ. ಜಿ. ಶ್ರೀನಿಧಿ


ಸೋಶಿಯಲ್ ನೆಟ್‌ವರ್ಕ್ ಅಥವಾ ಸಮಾಜಜಾಲಗಳು ಯಾರಿಗೆ ತಾನೆ ಗೊತ್ತಿಲ್ಲ? ಪುಟ್ಟಮಕ್ಕಳಿಂದ ಅಜ್ಜಿತಾತನವರೆಗೆ ಎಲ್ಲರೂ ಇಂದು ಫೇಸ್‌ಬುಕ್, ಟ್ವಿಟ್ಟರ್ ಮುಂತಾದ ಸಮಾಜಜಾಲಗಳಲ್ಲಿ ಕಾಣಸಿಗುತ್ತಾರೆ. ಚಾಟಿಂಗ್, ಫೋಟೋ-ವೀಡಿಯೋ ಹಂಚಿಕೆ, ಮಾಹಿತಿ ವಿತರಣೆ ಇವೆಲ್ಲ ಈ ತಾಣಗಳ ಮುಖ್ಯ ಉಪಯೋಗ.

ಸಮಾಜಜಾಲಗಳಿಂದ ಇನ್ನೂ ಬೇಕಾದಷ್ಟು ಪ್ರಯೋಜನಗಳಿವೆ. ಹೊಸಬರ ಪರಿಚಯ ಮಾಡಿಕೊಂಡು ನಮ್ಮ ನೆಟ್‌ವರ್ಕ್ ವಿಸ್ತರಿಸಿಕೊಳ್ಳುವುದು ಇಂತಹ ಪ್ರಯೋಜನಗಳಲ್ಲೊಂದು. ಲಿಂಕ್ಡ್‌ಇನ್‌ನಂತಹ ತಾಣಗಳಲ್ಲಿ ರೂಪುಗೊಳ್ಳುವ ಇಂತಹ ನೆಟ್‌ವರ್ಕ್ ನಮ್ಮ ವೃತ್ತಿಜೀವನದಲ್ಲಿ ಸಾಕಷ್ಟು ನೆರವು ನೀಡಬಲ್ಲದು. ಇದಲ್ಲದೆ ನಮ್ಮ ಪ್ರಶ್ನೆಗಳಿಗೆ ಉತ್ತರ ಹುಡುಕುವುದರಿಂದ ಪ್ರಾರಂಭಿಸಿ ಯಾವುದೋ ಕೆಲಸಕ್ಕೆ ಅಗತ್ಯವಾದ ಮಾಹಿತಿ ಅಥವಾ ನೆರವು ಪಡೆದುಕೊಳ್ಳುವವರೆಗೆ ಅನೇಕ ಕೆಲಸಗಳಲ್ಲಿ ಸಮಾಜಜಾಲಗಳು ನೆರವಾಗುತ್ತವೆ. ನಮ್ಮ ಬಿಸಿನೆಸ್ ಬೆಳವಣಿಗೆಗೆ - ನಮ್ಮ ಗ್ರಾಹಕರೊಡನೆ ಸಂಪರ್ಕ ಬೆಳೆಸಿಕೊಳ್ಳುವುದಕ್ಕೂ ಸಮಾಜಜಾಲಗಳನ್ನು ಬಳಸಿಕೊಳ್ಳಬಹುದು. ಸಮಾಜಜಾಲಗಳನ್ನು ಸೂಕ್ತವಾಗಿ ಬಳಸಿಕೊಂಡರೆ ಹಣಕಾಸಿನ ಲಾಭ ಮಾಡಿಕೊಳ್ಳುವುದೂ ಸಾಧ್ಯ.

ಅಷ್ಟೇ ಏಕೆ, ಹೊಸ ವಿಷಯಗಳ ಹಾಗೂ ಹಳೆಯ ವಿಷಯದ ಹೊಸ ಆಯಾಮಗಳನ್ನು ಪರಿಚಯಿಸಿಕೊಳ್ಳಲೂ ಸಮಾಜಜಾಲಗಳು ಸಹಾಯಮಾಡುತ್ತವೆ. ನೂರೆಂಟು ವಿಷಯಗಳ ಬಗ್ಗೆ ಆರೋಗ್ಯಕರ ಚರ್ಚೆ ಕೂಡ ಇಲ್ಲಿ ಸಾಧ್ಯ. ಅದೆಷ್ಟೋ ಸಂದರ್ಭಗಳಲ್ಲಿ ಸುದ್ದಿಗಳು ಬೇರೆಲ್ಲ ಮಾಧ್ಯಮಗಳಿಗೆ ಮೊದಲು ಸಮಾಜಜಾಲಗಳಲ್ಲೇ ಕಾಣಿಸಿಕೊಳ್ಳುವುದೂ ಉಂಟು.

ಹೀಗಿದ್ದರೂ ನಮ್ಮಂತಹ ಅದೆಷ್ಟೋ ಬಳಕೆದಾರರ ಪಾಲಿಗೆ ಸಮಾಜಜಾಲಗಳು ವೈಯಕ್ತಿಕ ಮಾಹಿತಿ ಹಂಚಿಕೊಳ್ಳುವ ವೇದಿಕೆಗಳಾಗಿಯೇ ಮುಂದುವರೆದಿವೆ. ಗೆಳೆಯರೊಂದಿಗೆ ಸದಾಕಾಲ ಸಂಪರ್ಕದಲ್ಲಿರಲು, ಹೊಸಹೊಸ ಜನರನ್ನು ಪರಿಚಯ ಮಾಡಿಕೊಳ್ಳಲು, ನಮ್ಮ ಚಟುವಟಿಕೆಗಳ ಬಗೆಗೆ ಮಿತ್ರರಿಗೆಲ್ಲ ಹೇಳಲು, ಛಾಯಾಚಿತ್ರ-ವೀಡಿಯೋಗಳನ್ನು ಹಂಚಿಕೊಳ್ಳಲು, ಪಠ್ಯ-ಧ್ವನಿ-ವೀಡಿಯೋ ರೂಪದಲ್ಲಿ ಚಾಟ್ ಮಾಡಲು ಈ ತಾಣಗಳು ನೆರವಾಗುತ್ತಿವೆ.

ಈ ಸಹಾಯದ ಬೆನ್ನಹಿಂದೆಯೇ ಅವು ನಮ್ಮ ಮೇಲೊಂದು ಮಹತ್ವದ ಜವಾಬ್ದಾರಿಯನ್ನೂ ಹೊರೆಸುತ್ತಿವೆ. ಸಮಾಜಜಾಲಗಳಲ್ಲಿ ಇಷ್ಟೆಲ್ಲ ಬಗೆಯ ವೈಯಕ್ತಿಕ ಮಾಹಿತಿ ಹಂಚಿಕೊಳ್ಳುತ್ತೇವಲ್ಲ, ಅದರಮೇಲೆ ಒಂದಷ್ಟು ಮಟ್ಟದ ಸ್ವಯಂನಿಯಂತ್ರಣ ಇಟ್ಟುಕೊಳ್ಳಬೇಕಾದ್ದೇ ಈ ಜವಾಬ್ದಾರಿ.

ಆಪರೇಟಿಂಗ್ ಸಿಸ್ಟಂ

ಟಿ. ಜಿ. ಶ್ರೀನಿಧಿ

ಪ್ರೋಗ್ರಾಮ್ ಬರೆದು ಕಂಪ್ಯೂಟರಿಗೆ ಪಾಠಹೇಳುವುದೇನೋ ಸರಿ, ಆದರೆ ನಾವು ಪ್ರೋಗ್ರಾಮ್ ಬರೆಯಲಿಕ್ಕಾದರೂ ಒಂದು ಕಂಪ್ಯೂಟರ್ ಬೇಕಲ್ಲ. ಮೊದಲಿಗೆ ಅದು ಕೆಲಸಮಾಡುತ್ತಿದ್ದರೆ ತಾನೇ ನಾವು ಪ್ರೋಗ್ರಾಮ್ ಬರೆಯುವುದು?

ನಿಜ, ಯಾವ ಕಂಪ್ಯೂಟರೇ ಆದರೂ ಅದು ನಾವು ಹೇಳಿದ ಮಾತು ಕೇಳುವಂತೆ ಮಾಡುವ ವ್ಯವಸ್ಥೆಯೊಂದು ಬೇಕೇಬೇಕು. ಕೆಲವರು ತಮ್ಮ ಪ್ರೋಗ್ರಾಮುಗಳ ಮೂಲಕ ಅಂತಹ ವ್ಯವಸ್ಥೆಯನ್ನೇ ರೂಪಿಸುತ್ತಾರೆ ಬಿಡಿ, ಆದರೆ ಮಿಕ್ಕವರ ಕ್ರಮವಿಧಿಗಳು ಕೆಲಸಮಾಡಲು ಇಂತಹುದೊಂದು ವ್ಯವಸ್ಥೆ ಅತ್ಯಗತ್ಯ.

ಅಂತಹ ವ್ಯವಸ್ಥೆಯೇ ಆಪರೇಟಿಂಗ್ ಸಿಸ್ಟಂ, ಅಂದರೆ ಕಾರ್ಯಾಚರಣ ವ್ಯವಸ್ಥೆ. ಕಂಪ್ಯೂಟರಿನ ಪ್ರಾಥಮಿಕ ಚಟುವಟಿಕೆಗಳನ್ನು ನಿಯಂತ್ರಿಸುವ, ಅದರ ವಿವಿಧ ಸೌಲಭ್ಯಗಳನ್ನು ಬಳಸಿಕೊಳ್ಳಲು ನಮಗೆ ಸಹಾಯಮಾಡುವ, ನಮ್ಮ ಕ್ರಮವಿಧಿಗಳು ಕೆಲಸಮಾಡಲು ಅನುವುಮಾಡಿಕೊಡುವ ಈ ವ್ಯವಸ್ಥೆಯೂ ಒಂದು ತಂತ್ರಾಂಶವೇ. ನಮಗೆಲ್ಲ ಚಿರಪರಿಚಿತವಾದ ಮೈಕ್ರೋಸಾಫ್ಟ್ ವಿಂಡೋಸ್, ಲಿನಕ್ಸ್ ಮುಂತಾದವು ಕಾರ್ಯಾಚರಣ ವ್ಯವಸ್ಥೆಗೆ ಕೆಲ ಉದಾಹರಣೆಗಳು.

ಕಣ್ಣಮುಂದಿನ ಅದ್ಭುತಲೋಕ: ಆಗ್‌ಮೆಂಟೆಡ್ ರಿಯಾಲಿಟಿ

ಟಿ. ಜಿ. ಶ್ರೀನಿಧಿ
ಇದು 'ಸ್ವ-ತಂತ್ರ' ಅಂಕಣದ ಐವತ್ತನೇ ಸಂಚಿಕೆ. ಇಂದು ಪ್ರಕಟವಾಗಿರುವ ಅಂಕಣಬರಹದ ವಿಷಯವನ್ನು ಅಂತರಜಾಲದಲ್ಲಿ ನಡೆದ ಸ್ಪರ್ಧೆಯೊಂದರ ಮೂಲಕ ಓದುಗರೇ ಸೂಚಿಸಿರುವುದು ವಿಶೇಷ. ಈ ವಿಷಯ ಸೂಚಿಸಿ ಇಜ್ಞಾನ ಡಾಟ್ ಕಾಮ್‌ನಿಂದ ಬಹುಮಾನ ಗೆದ್ದಿರುವ ಶ್ರೀ ಅಶ್ವತ್ಥ್ ಸಂಪಾಜೆಯವರಿಗೆ ಅಭಿನಂದನೆಗಳು.
ಅಪರಿಚಿತ ಸ್ಥಳದಲ್ಲಿ ಹೋಟಲೊಂದರ ಮುಂದೆ ನಿಂತಾಗ ನಮ್ಮ ಕಣ್ಣಿಗೆ ಅದರ ಬೋರ್ಡಿನ ಬದಲು ಅಲ್ಲಿ ದೊರಕುವ ಊಟೋಪಚಾರದ ವಿಮರ್ಶೆ ಕಂಡರೆ ಹೇಗಿರುತ್ತದೆ? ಒಳಕ್ಕೆ ಹೋಗಿಬಂದು ಆಮೇಲೆ ಊಟ ಕೆಟ್ಟದಾಗಿತ್ತೆಂದು ಬೈದುಕೊಳ್ಳುವುದಾದರೂ ತಪ್ಪುತ್ತದಲ್ಲ! ಅದೇರೀತಿ ಪಠ್ಯಪುಸ್ತಕ ಓದಿ ಬೇಜಾರಾದಾಗ ಪುಟದಲ್ಲಿನ ಅಕ್ಷರಗಳ ಬದಲು ಪಾಠಕ್ಕೆ ಸಂಬಂಧಪಟ್ಟ ವೀಡಿಯೋ ಕಾಣಿಸಿಕೊಂಡರೆ? ಇತಿಹಾಸದ್ದೋ ವಿಜ್ಞಾನದ್ದೋ ಪುಟಗಟ್ಟಲೆ ಶುಷ್ಕ ನಿರೂಪಣೆ ಓದುವ ಬದಲು ಅದೆಲ್ಲ ಚಿತ್ರ ಮತ್ತು ಧ್ವನಿಯ ರೂಪದಲ್ಲಿ ಮೂಡಿಬರುವಂತಿದ್ದರೆ?

ಇದೊಳ್ಳೆ ಸಿನಿಮಾ ಕತೆ ಆಯಿತಲ್ಲ ಎನ್ನಬೇಡಿ. ಮೇಲ್ನೋಟಕ್ಕೆ ಕಾಲ್ಪನಿಕ ಕತೆಯಂತೆ ತೋರುವ ಈ ವಿಷಯಗಳೆಲ್ಲ ಈಗಾಗಲೇ ಸಾಧ್ಯವಾಗಿವೆ. ಇದನ್ನೆಲ್ಲ ಸಾಧ್ಯವಾಗಿಸಿರುವ ತಂತ್ರಜ್ಞಾನದ ಹೆಸರು ಆಗ್‌ಮೆಂಟೆಡ್ ರಿಯಾಲಿಟಿ, ಹ್ರಸ್ವವಾಗಿ 'ಎಆರ್'.

ತಂತ್ರಜ್ಞಾನದ ನೆರವಿನಿಂದ ನಮ್ಮ ಕಣ್ಣಮುಂದಿನ ವಾಸ್ತವ ದೃಶ್ಯಕ್ಕೆ ವರ್ಚುಯಲ್ ಅಂಶಗಳನ್ನು ಹೆಚ್ಚುವರಿಯಾಗಿ ಸೇರಿಸುವುದು ಈ 'ಎಆರ್'ನ ಹೆಚ್ಚುಗಾರಿಕೆ.

ಸಾಫ್ಟ್‌ವೇರ್ ಇಂಜಿನಿಯರಿಂಗ್

ಟಿ. ಜಿ. ಶ್ರೀನಿಧಿ

ಎರಡು ಸಂಖ್ಯೆಗಳನ್ನು ಕೂಡುವುದಕ್ಕೋ ಅವುಗಳ ಪೈಕಿ ದೊಡ್ಡ ಸಂಖ್ಯೆಯನ್ನು ಗುರುತಿಸುವುದಕ್ಕೋ ಪ್ರೋಗ್ರಾಮ್, ಅಂದರೆ ಕ್ರಮವಿಧಿ ಬರೆಯುವುದು ಸುಲಭದ ಕೆಲಸ. ಕೊಂಚ ತರಬೇತಿಯೊಡನೆ ಇಷ್ಟು ಕೆಲಸವನ್ನು ಯಾರು ಬೇಕಿದ್ದರೂ ಮಾಡಬಹುದು.

ಆದರೆ ಎಲ್ಲ ಕ್ರಮವಿಧಿಗಳೂ ಇಷ್ಟು ಸರಳವಾಗಿರುವುದಿಲ್ಲ. ಬ್ಯಾಂಕಿನ ಹಣಕಾಸು ವ್ಯವಹಾರಗಳನ್ನು ನಿರ್ವಹಿಸುವಾಗ, ಕಚೇರಿಯಲ್ಲಿ ಸಂಬಳ ವಿತರಿಸುವಾಗ, ಆಸ್ಪತ್ರೆಯಲ್ಲಿ ವೈದ್ಯಕೀಯ ಯಂತ್ರೋಪಕರಣಗಳನ್ನು ನಿರ್ವಹಿಸುವಾಗ, ವಿಮಾನ ಹಾರಾಟವನ್ನು ನಿಯಂತ್ರಿಸುವಾಗೆಲ್ಲ ಬಹಳ ಸಂಕೀರ್ಣವಾದ ತಂತ್ರಾಂಶಗಳು ಬಳಕೆಯಾಗುತ್ತವೆ.

ಆ ತಂತ್ರಾಂಶಗಳಲ್ಲಿ ಬಹಳ ದೊಡ್ಡ ಸಂಖ್ಯೆಯ ಕ್ರಮವಿಧಿಗಳು ಅಲ್ಪಸ್ವಲ್ಪ ತಪ್ಪಿಗೂ ಜಾಗವಿಲ್ಲದಂತೆ ಒಟ್ಟಾಗಿ ಕೆಲಸಮಾಡಬೇಕಾದ್ದು ಅನಿವಾರ್ಯ. ವಿಮಾನ ಹಾರಾಟದ ಸಂದರ್ಭದಲ್ಲಿ ಅದನ್ನು ನಿಯಂತ್ರಿಸುವ ತಂತ್ರಾಂಶವೇನಾದರೂ ತಪ್ಪುಮಾಡಿದರೆ ಪರಿಣಾಮ ಏನಾಗಬಹುದು?

ಸಾಫ್ಟ್‌ವೇರ್ ಡೆವೆಲಪ್‌ಮೆಂಟ್ (ತಂತ್ರಾಂಶ ಅಭಿವೃದ್ಧಿ) ಕೆಲಸ ಮಹತ್ವ ಪಡೆದುಕೊಳ್ಳುವುದು ಇದೇ ಕಾರಣಕ್ಕಾಗಿ. ತಂತ್ರಾಂಶ ಅಭಿವೃದ್ಧಿಯೆಂದರೆ ಕ್ರಮವಿಧಿ ರಚನೆಯಷ್ಟೇ ಅಲ್ಲ ಎನ್ನುವುದೂ ಇದರಿಂದಾಗಿಯೇ.

'ಸಾಫ್ಟ್‌ವೇರ್ ಇಂಜಿನಿಯರಿಂಗ್'ನ ಪರಿಕಲ್ಪನೆ ಹುಟ್ಟುವುದೇ ಇಲ್ಲಿ.

ಪಾಠದಲ್ಲಿ ಆಟದ ವಿನೋದ ಕಾಣಬೇಕಾದರೆ...

ವಿಜ್ಞಾನದ ಕಲಿಕೆಯಲ್ಲಿ ಆಟಿಕೆಗಳನ್ನು ಬಳಸಬಹುದೆ? ಒಂದಷ್ಟು ಉದಾಹರಣೆಗಳ ಮೂಲಕ 'ಹೌದು!' ಎನ್ನುವ ಪುಸ್ತಕವೊಂದು ಇದೀಗ ಪ್ರಕಟವಾಗಿದೆ. ಶ್ರೀ ನಾರಾಯಣ ಬಾಬಾನಗರ ಅವರ 'ಆಹಾ! ಆಟಿಕೆಗಳು' ಕೃತಿಗೆ ಹಿರಿಯ ವಿಜ್ಞಾನ ಸಂವಹನಕಾರ ಪ್ರೊ. ಎಮ್. ಆರ್. ನಾಗರಾಜುರವರು ಬರೆದಿರುವ ಬೆನ್ನುಡಿ ಇಲ್ಲಿದೆ.

ಪಾಠ ಮತ್ತು ಆಟ ಎರಡೂ ತದ್ವಿರುದ್ಧ ಪದಗಳಾಗಿರುವುದು ಶಿಕ್ಷಣ ವ್ಯವಸ್ಥೆಯ ದುರಂತ. ಪಾಠದಲ್ಲಿ ಆಟದ ವಿನೋದ ಕಾಣಬೇಕಾದರೆ ಆಟಿಕೆಗಳು ಬೋಧನಾ ಸಾಮಗ್ರಿಗಳಾಗಬೇಕು. ಹಾಗೆಯೇ ಬೋಧನಾ ಸಾಮಗ್ರಿಗಳನ್ನು ಮಾರ್ಪಡಿಸಿ ಆಟಿಕೆಗಳಾಗಿಸಬೇಕು. ಆಗ ಆಟದ ಆನಂದ ಕಲಿಕೆಯ ಆನಂದ ಕೂಡಿ ಆಯಾಸವಿಲ್ಲದ ಸಂವಹನಕ್ಕೆ ದಾರಿಮಾಡಿಕೊಡುತ್ತದೆ.

ಹಾಗಾದರೆ ಮಾಡಬೇಕಾದ್ದಾದರೂ ಏನು? ಆಟಿಕೆಗಳನ್ನು ಗಮನಿಸುತ್ತಾ ಏಕ ಪರಿಕಲ್ಪನೆ ಲಕ್ಷಿತವಾಗುವಂತೆ ಅದನ್ನು ಮಾರ್ಪಡಿಸುವುದು. ಹಾಗೆಯೇ ಬೋಧನಾ ಸಾಮಗ್ರಿಗಳನ್ನು ಸ್ಥಳೀಯ ಲಭ್ಯ ಪರ್ಯಾಯಗಳೊಂದಿಗೆ ರೂಪಿಸಿ ಅದಕ್ಕೆ ರಂಜನೆಯ ಲೇಪವನ್ನು ಕೊಡುವುದು. ಈ ಕೆಲಸ, ಹೇಳಿದಷ್ಟು ಸುಲಭವಲ್ಲ. ಹಾಗೆ ಮಾಡಿ ಯಶಸ್ವಿಯಾದ ಮಾದರಿಗಳು ಇಲ್ಲಿವೆ. ಸಮಾನಾಂತರವಾಗಿ, ಸಾಹಸ ಕೈಗೊಳ್ಳುವವರಿಗೆ ಇವು ಪೂರಕ ಸಾಮಗ್ರಿಯಾಗಬಲ್ಲವು. ಇಂತಹ ಮಾದರಿಗಳ, ಆಟಿಕೆಗಳ ಬೆಳವಣಿಗೆಗೆ ಈ ಪುಸ್ತಕ ವೇಗವರ್ಧಕವಾಗಬಲ್ಲದು.

ಅರ್ಥಪೂರ್ಣ ವಿಜ್ಞಾನದ ಕಲಿಕೆಗೆ... ಆಹಾ! ಆಟಿಕೆಗಳು
ಲೇಖಕರು: ನಾರಾಯಣ ಬಾಬಾನಗರ
೫೨ ಪುಟಗಳು, ಬೆಲೆ ರೂ. ೪೦/-
ಪ್ರಕಾಶಕರು: ಬೆನಕ ಬುಕ್ಸ್ ಬ್ಯಾಂಕ್

ಆಲ್ಗರಿದಮ್ ಅಂದರೇನು?

ಟಿ. ಜಿ. ಶ್ರೀನಿಧಿ

ಕಂಪ್ಯೂಟರ್ ವಿಜ್ಞಾನದ ಪ್ರಾಥಮಿಕ ಪಾಠಗಳನ್ನು ಕಲಿಯಲು ಹೊರಟವರು ಮೊದಲಿಗೆ ಕೇಳುವ ಹೆಸರುಗಳಲ್ಲಿ 'ಆಲ್ಗರಿದಮ್' ಪ್ರಮುಖವಾದದ್ದು. ಇದನ್ನು ಕನ್ನಡದಲ್ಲಿ 'ಕ್ರಮಾವಳಿ' ಎನ್ನೋಣ.

ನಾವೀಗ ಯಾವುದೋ ಒಂದು ಪ್ರೋಗ್ರಾಮ್ (ಕ್ರಮವಿಧಿ) ಬರೆಯುತ್ತಿದ್ದೇವೆ ಎನ್ನುವುದಾದರೆ ಅದರಲ್ಲಿ ಪ್ರತಿಯೊಂದು ಹೆಜ್ಜೆಯನ್ನೂ ಪ್ರತ್ಯೇಕವಾಗಿ ವಿವರಿಸಬೇಕು ತಾನೆ, ಅಷ್ಟೆಲ್ಲ ಹೆಜ್ಜೆಗಳ ಸರಣಿಯೇ ಆಲ್ಗರಿದಮ್, ಅಂದರೆ ಕ್ರಮಾವಳಿ. ಆಲ್ಗರಿದಮ್ ಎನ್ನುವ ಪದ ಕ್ರಿ.ಶ. ೮೨೫ರ ಸುಮಾರಿಗೆ ಪರ್ಶಿಯಾದಲ್ಲಿದ್ದ ಅಲ್-ಖೋವಾರಿಜ್ಮಿ (al Khowarizmi) ಎನ್ನುವ ಗಣಿತಜ್ಞನ ಹೆಸರಿನಿಂದ ರೂಪುಗೊಂಡಿತು ಎಂದು ಇತಿಹಾಸ ಹೇಳುತ್ತದೆ.

ಕಂಪ್ಯೂಟರಿಗೆ ನೀಡುವ ಇನ್‌ಪುಟ್ ಅನ್ನು ಸೂಕ್ತವಾಗಿ ಸಂಸ್ಕರಿಸಿ ನಮಗೆ ಬೇಕಾದ ರೂಪದ ಔಟ್‌ಪುಟ್ ನೀಡುವಂತೆ ನಿರ್ದೇಶಿಸುವುದು ಆಲ್ಗರಿದಮ್, ಅಂದರೆ ಕ್ರಮಾವಳಿಯ ಕೆಲಸ. ಇದು ಪ್ರೋಗ್ರಾಮಿಂಗ್ ಕ್ಷೇತ್ರದ ಪ್ರಾಥಮಿಕ ಪಾಠ ಎಂದರೂ ಸರಿಯೇ.

ಕ್ರಮಾವಳಿಯ ಪ್ರಾಮುಖ್ಯ ಏನು ಎಂದು ವಿವರಿಸುವುದು ಬಹಳ ಸುಲಭ. ಏಕೆಂದರೆ ನಮ್ಮ ಬದುಕಿನ ಬಹುತೇಕ ಕೆಲಸಗಳೆಲ್ಲ ಒಂದಲ್ಲ ಒಂದು ಕ್ರಮಾವಳಿಯನ್ನು ಆಧರಿಸಿರುತ್ತವೆ. ಮನೆಗೆ ಇನ್ಸ್‌ಟಂಟ್ ನೂಡಲ್ಸ್ ತಂದಿರುತ್ತೇವಲ್ಲ, ಆ ಪೊಟ್ಟಣದ ಹಿಂಭಾಗ ನೋಡಿ: ಎಷ್ಟು ನೀರು ಹಾಕಬೇಕು, ಎಷ್ಟು ಹೊತ್ತು ಬೇಯಿಸಬೇಕು, ಮಸಾಲೆ ಯಾವಾಗ ಹಾಕಬೇಕು ಎಂಬ ಪ್ರತಿಯೊಂದು ವಿವರವನ್ನೂ ಅದರಲ್ಲಿ ಒಂದಾದಮೇಲೆ ಒಂದರಂತೆ ಪಟ್ಟಿಮಾಡಿರುತ್ತಾರೆ.
badge