ಶನಿವಾರ, ಡಿಸೆಂಬರ್ 7, 2013

ಇಜ್ಞಾನ ವಿಶೇಷ: ನದಿ ತಿರುವು

ನಾಗೇಶ ಹೆಗಡೆ


'ಎದುರಾಳಿಯನ್ನು ನೇರಾನೇರ ಕೆಡವಲು ಸಾಧ್ಯವಿಲ್ಲದಿದ್ದರೆ ಆತನನ್ನು ಗೊಂದಲಕ್ಕೆ ಕೆಡವಿ' ಎಂಬುದೊಂದು ತಮಾಷೆಯ ಮಾತಿದೆ. ನೇತ್ರಾವತಿ (ಎತ್ತಿನ ಹೊಳೆ) ನದಿ ತಿರುವು ಯೋಜನೆಯ ಸಮರ್ಥಕರು ಇದನ್ನೇ ಮಾಡುತ್ತಿದ್ದಾರೆ.

ಎತ್ತಿನಹೊಳೆ ವಿವಾದ ನೆನೆಗುದಿಗೆ ಬಿದ್ದಿದೆ. ಇಡೀ ಯೋಜನೆ ನಿರರ್ಥಕವೆಂದು ಹೇಳುವ ಪರಿಸರಪ್ರೇಮಿಗಳು, ಕಾನೂನುತಜ್ಞರು, ನೀರಾವರಿ ಪರಿಣತರ ವಾದಗಳಿಗೆ ಸೂಕ್ತ ಉತ್ತರ ನೀಡಲಾರದೆ ಸರಕಾರ ಕಕ್ಕಾಬಿಕ್ಕಿಯಾಗಿದೆ. ಇದೇ ಸಂದರ್ಭದಲ್ಲಿ ಇನ್ನಷ್ಟು ಅಂಥದ್ದೇ ಯೋಜನೆಗಳನ್ನು ಜನತೆಯ ಮುಂದೆ ಛೂ ಬಿಟ್ಟು ಎಲ್ಲರನ್ನೂ ಗೊಂದಲಕ್ಕೆ ಕೆಡವಲಾಗುತ್ತಿದೆ. ಲಿಂಗನಮಕ್ಕಿಯಿಂದ ಕುಡಿಯುವ ನೀರನ್ನು ಬೆಂಗಳೂರಿಗೆ ಸಾಗಿಸುವ ಯೋಜನೆ ಬರುತ್ತದಂತೆ.ಲಿಂಗನಮಕ್ಕಿಗೆ ದೂರದ ಅಘನಾಶಿನಿಯಿಂದ ನೀರನ್ನು ಪಂಪ್ ಮಾಡಿ ತುಂಬಲು ಸಾಧ್ಯವಿದೆಯಂತೆ. ಅಂಥ ಭಾರೀ ಯೋಜನೆಗಳು ಜಾರಿಗೆ ಬಂದರೆ ಮಾತ್ರ ಬೆಂಗಳೂರಿನ ಜನರಿಗೆ ನೀರು ಪೂರೈಕೆ ಸಾಧ್ಯವಂತೆ. ಇಲ್ಲಾಂದರೆ ರಾಜಧಾನಿಯಲ್ಲಿ ಹಾಹಾಕಾರ ಏಳುತ್ತದಂತೆ....

ಇಂಥ ಬುಡುಬುಡಿಕೆ ಯೋಜನೆಗಳನ್ನು ರೂಪಿಸಲು ಎಂಜಿನಿಯರುಗಳೇ ಬೇಕೆಂದಿಲ್ಲ. ಮೇಜಿನ ಮೇಲೊಂದು ನಕಾಶೆ, ಕೈಯಲ್ಲೊಂದು ಪೆನ್ಸಿಲ್ ಇದ್ದರೆ ಸಾಕು. ಗೆರೆ ಎಳೆದು ಅಘನಾಶಿನಿಯನ್ನೂ ಬೆಂಗಳೂರಿಗೆ ತರಬಹುದು; ಕೃಷ್ಣಾ, ಗೋದಾವರಿ, ಮಹಾನದಿಯನ್ನೂ ಗಂಗೆಯನ್ನೂ ಎಳೆದು ತರಬಹುದು.

ಗೆರೆ ಎಳೆದ ನಂತರ ಅದಕ್ಕಿಷ್ಟು ಅಧಿಕೃತತೆ ಬರಬೇಕೆಂದರೆ ಸರಕಾರದ ಗಮನ ಸೆಳೆಯಲು ಇನ್ನೊಂದು ಕೆಲಸ ಮಾಡಬೇಕು: ಅದಕ್ಕೆ ವಿಶೇಷ ಬಗೆಯ ನಕ್ಷೆಯನ್ನು ಬಳಸಬೇಕು. ಭೂಮಿಯ ಏರಿಳಿತವನ್ನು ತೋರಿಸುವ 'ಟೊಪೊಗ್ರಫಿಕ್ ನಕ್ಷೆ' ಎಂಬುದೊಂದು ಇರುತ್ತದೆ. ಚಿಕ್ಕ ಮೊತ್ತದ ಶುಲ್ಕ ಕಟ್ಟಿದರೆ 'ಸರ್ವೆ ಆಫ್ ಇಂಡಿಯಾ' ಕಚೇರಿಯಲ್ಲಿ ನೀವು ಯಾವ ತಾಲ್ಲೂಕಿನ, ಯಾವ ಹೋಬಳಿಯ ನಕ್ಷೆಯನ್ನು ಬೇಕಾದರೂ ಪಡೆಯಬಹುದು. ನೇತ್ರಾವತಿ, ಅಘನಾಶಿನಿ, ಲಿಂಗನಮಕ್ಕಿ ಕೊಳ್ಳಗಳು ಎಷ್ಟು ತಗ್ಗಿನಲ್ಲಿವೆ ಎಂಬುದು ಅದರಲ್ಲಿ ಗೊತ್ತಾಗುತ್ತದೆ.

ಅಲ್ಲಿಂದ ಎಷ್ಟು ಎತ್ತರಕ್ಕೆ ನೀರನ್ನು ಪಂಪ್ ಮಾಡಿದರೆ ಬಯಲುಸೀಮೆಗೆ ಅದನ್ನು ಹರಿಸಬಹುದು ಎಂಬುದನ್ನು ನೀವು ಈ ವಿಶೇಷ ನಕ್ಷೆಯಲ್ಲಿ ಗುರುತಿಸಬಹುದು. ಎಷ್ಟು ಟಿಎಮ್‌ಸಿ ನೀರನ್ನು ಎಷ್ಟೆತ್ತರಕ್ಕೆ ಎತ್ತಲು ಎಷ್ಟು ಅಶ್ವಶಕಿಯ ಪಂಪ್ ಬೇಕಾಗುತ್ತದೆ ಎಂಬುದರ ಬಗ್ಗೆ ಪಕ್ಕದ ಮನೆಯ ಎಂಜಿನಿಯರಿಂಗ್ ವಿದ್ಯಾರ್ಥಿಯನ್ನು ಕೇಳಿ. ಅಥವಾ ಅದಕ್ಕೆಂದೇ ರೆಡಿಮೇಡ್ ಕೋಷ್ಟಕಗಳು ಸಿಗುತ್ತವೆ. ಅದನ್ನು ನಿಮ್ಮ ಪೆನ್ಸಿಲ್ ಗೆರೆಯ ಮೇಲೆ ಅಲ್ಲಲ್ಲಿ ಬರೆದರೆ ಸಾಕು. ನೀರನ್ನು ಪಂಪ್ ಮಾಡಲು ಎಲ್ಲಿಂದ ವಿದ್ಯುತ್ ತರಬಹುದು ಎಂಬುದನ್ನೂ ಸೂಚಿಸಿಬಿಡಿ. ನಿಮ್ಮ ಯೋಜನೆ ಸಿದ್ಧ!

ನೀರು ಬರುತ್ತೊ ಬಿಡುತ್ತೊ, ಆದರೆ ಗುತ್ತಿಗೆದಾರರ ಬಾಯಲ್ಲಿ ನೀರೂರಿಸಲು ಅಷ್ಟು ಸಾಕು. ಅವರು ಯಾರನ್ನು ಹಿಡಿಯಬೇಕೊ ಅವರನ್ನು ಹಿಡಿದು, ಸರಕಾರಿ ಖಜಾನೆಯಿಂದ ನೂರಿನ್ನೂರು ಕೋಟಿ ಬಿಡುಗಡೆ ಮಾಡಿಸಿ ಆರಂಭಿಕ ಸಮೀಕ್ಷೆ ಮಾಡಿಸುತ್ತಾರೆ. ಯೋಜನೆ ದೊಡ್ಡದಿದ್ದಷ್ಟೂ ಗುತ್ತಿಗೆದಾರರ, ರಾಜಕಾರಣಿಗಳ ಉತ್ಸಾಹ ಇಮ್ಮಡಿಸುತ್ತದೆ. ಅವರೇ ಸರಕಾರಿ ನೀರಾವರಿ ಎಂಜಿನಿಯರ್‌ಗಳ ಮೂಲಕ ವಿವರವಾದ 'ಅಧಿಕೃತ' ಸಮೀಕ್ಷೆ ಮಾಡಿಸುತ್ತಾರೆ. 'ಈ ಯೋಜನೆ ಸರಿಯಿಲ್ಲ' ಎಂದು ಯಾರಾದರೂ ಅಧಿಕಾರಿ ಹೇಳಿದರೆ ಆತನನ್ನು ಪಕ್ಕಕ್ಕಿಟ್ಟು, 'ಸರಿ ಇದೆ' ಎನ್ನುವವರನ್ನೇ ನೇಮಕ ಮಾಡಲಾಗುತ್ತದೆ.

ಎತ್ತಿನಹೊಳೆ ನದಿ ತಿರುವು ಯೋಜನೆಯಲ್ಲಿ ಇಂಥದ್ದೇ ಚಮತ್ಕಾರ ನಡೆದಿದೆ ಎಂಬ ಗುಮಾನಿ ನನ್ನದು. ಏಕೆಂದರೆ ಆ ನದಿ ಕಣಿವೆಯಲ್ಲಿ ಎಷ್ಟು ನೀರು ಹರಿಯುತ್ತಿದೆ ಎಂಬ ವಿವರಗಳು ವರದಿಯಲ್ಲಿಲ್ಲ. ಮಳೆ ಎಷ್ಟು ಬೀಳುತ್ತಿದೆ ಎಂಬ ಮಾಹಿತಿಯೂ ಸರಿ ಇಲ್ಲ. ಅಂತರರಾಜ್ಯ ಒಡಂಬಡಿಕೆಗಳ ಪ್ರಕಾರ ಅದು ಸಿಂಧುವಾಗುತ್ತದೆಯೆ ಇಲ್ಲವೆ ಎಂಬುದನ್ನೂ ನೋಡಿಲ್ಲ (ಮಂಗಳೂರಿನ ಎಚ್. ಸುಂದರರಾವ್ ಈ ಕುರಿತು ಮಾಹಿತಿಹಕ್ಕು ಚಲಾಯಿಸಿ ಯೋಜನೆಯ ವಿವರಗಳನ್ನೆಲ್ಲ ತರಿಸಿ ತಮ್ಮ ಬ್ಲಾಗ್‌ನಲ್ಲಿ ಇಂಥ ಲೋಪಗಳನ್ನು ಎತ್ತಿ ತೋರಿಸಿದ್ದಾರೆ).  ಇನ್ನು, ಅಷ್ಟು ದೊಡ್ಡ ನೀರಾವರಿ ಕಾಲುವೆಯನ್ನು ಅಷ್ಟು ದೂರದವರೆಗೆ ನಿರ್ಮಿಸುವಾಗ ನಿಸರ್ಗಕ್ಕೆ, ವನ್ಯಜೀವಲೋಕಕ್ಕೆ, ರೈತರಿಗೆ, ಭೂವಿನ್ಯಾಸಕ್ಕೆ, ಎಂಥೆಂಥ ಧಕ್ಕೆ ಬಂದೀತೆಂಬುದರ ಕಿಲೊಮೀಟರ್ ಸ್ಕೇಲಿನ ವಿವರ ಮಾಹಿತಿಗಳಂತೂ ಇರಲಿಕ್ಕೆ ಸಾಧ್ಯವಿಲ್ಲ.

ಇಂಥ ಭಾರೀ ಯೋಜನೆಗಳನ್ನು ಕೈಗೊಳ್ಳುವಾಗ ನಾಳಿನ, ದೂರಭವಿಷ್ಯದ ವಾಯುಗುಣವನ್ನೂ ಗಮನಿಸಬೇಕಾಗುತ್ತದೆ. ಈಗಿನ ಎಲ್ಲ ವೈಜ್ಞಾನಿಕ ಅಂದಾಜುಗಳ ಪ್ರಕಾರ, ಇಡೀ ಭೂಮಂಡಲವೇ ಮೆಲ್ಲಗೆ ಬಿಸಿಯಾಗುತ್ತಿದೆ. ಇಂದು ಮಳೆಯಾಗುವ ಪ್ರದೇಶದಲ್ಲಿ ಮುಂದಿನ ದಶಕದಲ್ಲಿ ಮಹಾಮಳೆ ಬೀಳುತ್ತಿರಬಹದು, ಇಲ್ಲವೆ ಬರಗಾಲವೇ ಆವರಿಸಬಹುದು. ನದಿಗಾತ್ರದ ನೀರಾವರಿ ಕಾಲುವೆಯೇ ನಿರರ್ಥಕವಾಗಬಹುದು. ಅದರ ಬಗ್ಗೆ ಚಕಾರ ಚರ್ಚೆ ನಡೆಸದೆ ಯೋಜನೆಯನ್ನು ಕೈಗೆತ್ತಿಕೊಂಡರೆ ನಾಳಿನ ಪೀಳಿಗೆಯ ಕಣ್ಣಲ್ಲಿ ನಾವು ಮೂರ್ಖರೆನಿಸಲಾರೆವೆ?

ನಾವಿಂದು ನದಿಯನ್ನು ತಿರುಗಿಸುವ ಬದಲು ನೀರಾವರಿ ಎಂಜಿನಿಯರುಗಳ ಆದ್ಯತೆಯನ್ನು ತಿರುಗಿಸಬೇಕಾಗಿದೆ. ಬೆಂಗಳೂರು ಒಂದೇ ಅಲ್ಲ, ಹುಬ್ಬಳ್ಳಿ, ಗುಲಬರ್ಗಾ, ಚಿತ್ರದುರ್ಗ, ಕೋಲಾರ ಎಲ್ಲ ಕಡೆ ನೀರಿನ ಅಭಾವವಿದೆ ನಿಜ. ಆದರೆ ನಮ್ಮ ನಗರ ಪಟ್ಟಣಗಳಲ್ಲಿ ನಾವು ಬಳಸಿ ಚೆಲ್ಲುತ್ತಿರುವ ನೀರನ್ನು ಮರುಬಳಕೆ ಮಾಡುತ್ತಿರುವ ಒಂದು ಉತ್ತಮ ಉದಾಹರಣೆಯೂ ನಮ್ಮೆದುರು ಇಲ್ಲ. ಜಗತ್ತಿನ ಅದೆಷ್ಟು ರಾಷ್ಟ್ರಗಳಲ್ಲಿ ಇದು ಇಂದು ಆದ್ಯತೆಯ ವಿಷಯವಾಗಿದೆ. ನೀರಿನ ಮರುಬಳಕೆಯ ಎಷ್ಟೊಂದು ಸಫಲ ಉದಾಹರಣೆಗಳು ನಮ್ಮೆದುರು ಇವೆ. ಸಿಂಗಪುರದಲ್ಲಿ ಚರಂಡಿಯ ನೀರನ್ನು ಅದೆಷ್ಟು ಶುದ್ಧ ಮಾಡುತ್ತಾರೆಂದರೆ ಅದನ್ನು ಗ್ಲಾಸ್‌ನಲ್ಲಿ ಕೊಟ್ಟರೆ ನಿಶ್ಚಿಂತೆಯಿಂದ ಕುಡಿಯಬಹುದು. ಗಗನಯಾತ್ರಿಗಳಂತೂ ತಮ್ಮ ಮೂತ್ರವನ್ನು ಶುದ್ಧೀಕರಿಸಿ ತಾವೇ ಕುಡಿಯುತ್ತಾರೆ. ನಾವು ಅದೆಷ್ಟು ಅನಾಗರಿಕ ಯುಗದಲ್ಲಿದ್ದೇವೆಂದರೆ ಬೆಂಗಳೂರಿನ ಜನರು ಮೂತ್ರವನ್ನು ತೊಳೆಯಲಿಕ್ಕೂ ನೂರು ಕಿಲೊಮೀಟರ್ ದೂರದ ಕಾವೇರಿಯನ್ನು ಶುದ್ಧೀಕರಿಸಿ, ಪಂಪ್ ಮಾಡಿ ಮೇಲೆತ್ತಿ ತಂದ ನೀರನ್ನೇ ಸುರಿಯುತ್ತಾರೆ.

ನಮ್ಮ ಆದ್ಯತೆಯನ್ನು ಬದಲಿಸಬಾರದೆ? ಕುಡಿಯಲಿಕ್ಕೆ ಅಲ್ಲವಾದರೂ ಕಾರನ್ನು, ಅಂಗಳವನ್ನು ತೊಳೆಯುವವರಿಗೆ, ಹುಲ್ಲು ಹಾಸನ್ನು ಹಸುರಾಗಿಡುವವರಿಗೆ ಸಂಸ್ಕರಿತ ಚರಂಡಿ ನೀರನ್ನು ಕೊಡಲಾರೆವೆ? ಮಳೆಕೊಯ್ಲಿನ ನೀರು, ಬೋರ್‌ವೆಲ್ ನೀರು, ಕೆರೆಗಳ ನೀರು, ಕಾವೇರಿ ನೀರು, ಜೊತೆಗೆ ಶೇಕಡಾ ೨೦ರಷ್ಟು ಸಂಸ್ಕರಿತ ನೀರು ಕೊಟ್ಟರೂ ಬೆಂಗಳೂರಿನ ನೀರಿನ ಅಭಾವ ನೀಗಿಸಲು ಸಾಧ್ಯವಿದೆ. ನಾಳಿನ ಹವಾಮಾನ ಅದೆಷ್ಟೇ ಏರುಪೇರಾದರೂ ನೀರಿನ ಸಂಸ್ಕರಣೆಗೆ ಹೂಡಿದ ಹಣ ವ್ಯರ್ಥವಾಗದು. ಆ ನಿಟ್ಟಿನಲ್ಲಿ ಯಾಕೆ ಯೋಚಿಸಲಾರೆವು?

ಯಾಕೆಂದರೆ, ನಕಾಶೆಯ ಮೇಲೆ ಗೆರೆ ಎಳೆದೆಳೆದು ನಿಸರ್ಗವನ್ನು, ತೆರಿಗೆದಾರರ ಹಣವನ್ನು ದೋಚುವುದೇ ನಮಗೆ ಸುಲಭವಾಗಿದೆ; ಅದೇ ರೂಢಿಯಾಗಿದೆ.

ಡಿಸೆಂಬರ್ ೨೦೧೩ ಅಡಿಕೆ ಪತ್ರಿಕೆಯಲ್ಲಿ ಪ್ರಕಟವಾದ 'ರಿಕ್ತ-ವ್ಯತಿರಿಕ್ತ' ಅಂಕಣಬರಹ 

1 ಕಾಮೆಂಟ್‌:

Akhilesh ಹೇಳಿದರು...

Sharavati hinnirininda sagarakke niru taralu pipeline ready aagide.
nivu baredante idu ondu Bevkoof Idea!!!

badge