ಸೋಮವಾರ, ಡಿಸೆಂಬರ್ 23, 2013

ಕಳೆದ ಹಾರ್ಡ್‌ಡಿಸ್ಕ್ ನೆಪದಲ್ಲಿ ಕಾಣದ ದುಡ್ಡಿನ ಕುರಿತು...

ಈಗ ಒಂದಷ್ಟು ದಿನಗಳಿಂದ ಇಂಟರ್‌ನೆಟ್‌ ತುಂಬೆಲ್ಲ ಬಿಟ್‌ಕಾಯಿನ್‌ನದೇ ಸುದ್ದಿ. ಬಿಟ್‌ಕಾಯಿನ್ ಹಾಗಂತೆ ಹೀಗಂತೆ ಚಿನ್ನಕ್ಕಿಂತ ದುಬಾರಿಯಂತೆ... ಅಂತೆಕಂತೆಗಳಿಗೆ ಕೊನೆಯೇ ಇಲ್ಲ. ಈ ವಿಶಿಷ್ಟ ಪರಿಕಲ್ಪನೆಯನ್ನು ಕನ್ನಡದ ಓದುಗರಿಗೆ ವಿವರವಾಗಿ ಪರಿಚಯಿಸುವ ಪ್ರಯತ್ನವನ್ನು ಇಜ್ಞಾನ ಡಾಟ್ ಕಾಮ್ ಮಾಡಿದೆ. ಓದಿ, ಪ್ರತಿಕ್ರಿಯೆ ನೀಡಿ. ಈ ಲೇಖನವನ್ನು ಡಿಸೆಂಬರ್ ೨೨, ೨೦೧೩ರ 'ಸಾಪ್ತಾಹಿಕ ಸಂಪದ'ದಲ್ಲಿ ಪ್ರಕಟಿಸಿದ ಉದಯವಾಣಿಗೆ ನಮ್ಮ ಕೃತಜ್ಞತೆಗಳು. 

ಟಿ. ಜಿ. ಶ್ರೀನಿಧಿ


ಹಳೆಯ, ಕೆಟ್ಟುಹೋದ ಕಂಪ್ಯೂಟರಿನಿಂದ ತೆಗೆದಿಟ್ಟ ಹಾರ್ಡ್‌ಡಿಸ್ಕ್ ಬೆಲೆ ಎಷ್ಟಿರಬಹುದು? ಗುಜರಿ ಅಂಗಡಿಯವನು ಅಬ್ಬಬ್ಬಾ ಎಂದರೆ ಐನೂರು ರೂಪಾಯಿಗೆ ಕೊಳ್ಳಬಹುದೇನೋ.

ಬ್ರಿಟನ್ನಿನ ಜೇಮ್ಸ್ ಹವೆಲ್ಸ್ ಎಂಬಾತನಲ್ಲೂ ಇಂತಹುದೇ ಒಂದು ಹಾರ್ಡ್‌ಡಿಸ್ಕ್ ಇತ್ತು, ಬಹುಶಃ ಸುಮಾರು ಮೂರು-ನಾಲ್ಕು ವರ್ಷ ಹಳೆಯದು. ಹೀಗೆಯೇ ಒಂದು ದಿನ ಮನೆ ಸ್ವಚ್ಛಗೊಳಿಸುವಾಗ ಮತ್ತೆ ಕೈಗೆ ಸಿಕ್ಕ ಅದನ್ನು ಆತ ಸೀದಾ ಕಸದಬುಟ್ಟಿಗೆ ಸೇರಿಸಿದ. ನಂತರದ ದಿನಗಳಲ್ಲಿ ಅದು ಊರ ಕಸವೆಲ್ಲ ಸೇರುವ ಲ್ಯಾಂಡ್‌ಫಿಲ್ ಎಂಬ ಕಸಸಾಗರದೊಳಗೆ ಲೀನವಾಯಿತು. ಇದೆಲ್ಲ ಆಗಿ ಕೆಲವು ತಿಂಗಳು ಕಳೆದ ಮೇಲೆ ಜೇಮ್ಸ್‌ಗೆ ಜ್ಞಾನೋದಯವಾಗಿ ತಾನೆಂತಹ ಕೆಲಸಮಾಡಿಬಿಟ್ಟೆನಲ್ಲ ಎಂದು ಕೊರಗಲು ಶುರುಮಾಡಿದ.

ಬೇಡದ ಹಾರ್ಡ್ ಡಿಸ್ಕನ್ನು ಕಸಕ್ಕೆ ಹಾಕಿದ ಮೇಲೆ ಅದನ್ನು ನೆನಪಿಸಿಕೊಂಡು ಕೊರಗುವುದು ಯಾಕೆ? ಇಲ್ಲೇನೋ ವಿಚಿತ್ರವಿದೆ ಅನ್ನಿಸುತ್ತಿದೆ, ಅಲ್ಲವೆ?

ವಿಚಿತ್ರವೇನೂ ಇಲ್ಲ - ಜೇಮ್ಸ್ ಬಿಸಾಡಿದ ಹಾರ್ಡ್‌ಡಿಸ್ಕ್‌ನಲ್ಲಿ ಸುಮಾರು ಏಳೂವರೆಸಾವಿರ ಬಿಟ್‌ಕಾಯಿನ್‌ಗಳಿದ್ದವು, ಮತ್ತು ನವೆಂಬರ್ ೨೦೧೩ರ ಅಂತ್ಯದಲ್ಲಿ ಅವುಗಳ ಒಟ್ಟು ಮೌಲ್ಯ ಸುಮಾರು ಏಳೂವರೆ ಲಕ್ಷ ಅಮೆರಿಕನ್ ಡಾಲರುಗಳಷ್ಟಿತ್ತು. ರೂಪಾಯಿ ಲೆಕ್ಕದಲ್ಲಿ ೪೬ ಕೋಟಿಗಿಂತ ಹೆಚ್ಚು!

ಅರೆ, ಇಷ್ಟೆಲ್ಲ ಬೆಲೆಬಾಳುವ ವಸ್ತು ಹಳೆಯ ಹಾರ್ಡ್‌ಡಿಸ್ಕ್‌ನೊಳಗೇಕಿತ್ತು? ಇಷ್ಟಕ್ಕೂ ಈ ಬಿಟ್ ಕಾಯಿನ್ ಎಂದರೇನು?

ಬಿಟ್‌ಕಾಯಿನ್ ಎನ್ನುವುದು ಅಂತರಜಾಲ ಲೋಕದಲ್ಲಿ ಬಳಕೆಗೆ ಬರುತ್ತಿರುವ ವರ್ಚುಯಲ್ ಹಣ. ಭಾರತದಲ್ಲಿ ರೂಪಾಯಿ, ಅಮೆರಿಕಾದಲ್ಲಿ ಡಾಲರುಗಳೆಲ್ಲ ಇದ್ದ ಹಾಗೆ ಅಂತರಜಾಲದ ಹಣ ಇದು. ಅಂತರಜಾಲ ಹೇಗೆ ಮಿಥ್ಯಾಲೋಕವೋ ಅಲ್ಲಿ ಚಲಾವಣೆಯಾಗುವ ಈ 'ಬಿಟ್‌ಕಾಯಿನ್' ಕೂಡ ವರ್ಚುಯಲ್, ಅಂದರೆ ಕಣ್ಣಿಗೆ ಕಾಣದ, ಕರೆನ್ಸಿಯೇ.

ಮೂಲತಃ ನಾಣ್ಯ-ನೋಟುಗಳಾವುದೂ ಇಲ್ಲದ ಬಿಟ್‌ಕಾಯಿನ್ ಅಸ್ತಿತ್ವ ಕಂಪ್ಯೂಟರ್ ಪ್ರಪಂಚಕ್ಕೆ ಸೀಮಿತ. ನಾವೆಲ್ಲ ಪರ್ಸಿನಲ್ಲಿ ದುಡ್ಡು ಇಟ್ಟುಕೊಳ್ಳುತ್ತೇವಲ್ಲ, ಬಿಟ್‌ಕಾಯಿನ್‌ಗಳನ್ನು ಕಂಪ್ಯೂಟರಿನಲ್ಲಿರುವ ಡಿಜಿಟಲ್ ವ್ಯಾಲೆಟ್‌ಗಳಲ್ಲಷ್ಟೆ ಇಟ್ಟುಕೊಳ್ಳುವುದು ಸಾಧ್ಯ - ಶೇರುಗಳು ನಮ್ಮ ಕಣ್ಣಿಗೆ ಕಾಣದಂತೆ ಡಿಮ್ಯಾಟ್ ರೂಪದಲ್ಲಿರುತ್ತವಲ್ಲ, ಹಾಗೆ.

ಅಂದಹಾಗೆ ರೂಪಾಯಿಗೆ ಡಾಲರಿಗೆ ಇದ್ದಹಾಗೆ ಈ ಕರೆನ್ಸಿಗೂ ಒಂದು ಸಂಕೇತವಿದೆ. ಕಂಪ್ಯೂಟರಿನಲ್ಲಿ ಶೇಖರವಾಗುವ ಬಿಟ್‌ಕಾಯಿನ್ ಆಸ್ತಿ ಎಷ್ಟೇ ಇದ್ದರೂ ಅದನ್ನು ನೋಟಿನ ಕಂತೆಗಳಲ್ಲಿ ಮನೆಗೆ ತರಲಾಗುವುದಿಲ್ಲ ಎನ್ನುವುದು ನಿಜವೇ ಆದರೂ ಕೆಲವು ಆಸಕ್ತರು ಬಿಟ್‌ಕಾಯಿನ್ ನಾಣ್ಯಗಳನ್ನೂ ರೂಪಿಸಿದ್ದಾರೆ.

ಬಿಟ್‌ಕಾಯಿನ್ ವ್ಯವಸ್ಥೆ ಪರಿಚಯವಾದದ್ದು ೨೦೦೯ರಲ್ಲಿ. ಸಟೋಶಿ ನಕಾಮೋಟೋ ಎಂಬ ಹೆಸರಿನ ಅಜ್ಞಾತ ವ್ಯಕ್ತಿಯನ್ನು ಬಿಟ್‌ಕಾಯಿನ್ ಸೃಷ್ಟಿಕರ್ತ ಎಂದು ಗುರುತಿಸಲಾಗುತ್ತದೆ. ಆದರೆ ಅದು ಯಾರದ್ದಾದರೂ ನಿಜವಾದ ಹೆಸರೋ ಅಲ್ಲವೋ ಎನ್ನುವುದರ ಬಗ್ಗೆ ಸಾಕಷ್ಟು ಸಂದೇಹಗಳಿವೆ. ಅಷ್ಟೇ ಅಲ್ಲ, ಬಿಟ್‌ಕಾಯಿನ್ ಸೃಷ್ಟಿಯ ಹಿಂದೆ ದೊಡ್ಡದೊಂದು ತಂಡವೇ ಇರುವ ಸಂಶಯ ಕೂಡ ಇದೆ.

ಪ್ರತಿ ದೇಶದಲ್ಲೂ ಚಲಾವಣೆಯಲ್ಲಿರುವ ಕರೆನ್ಸಿಗಳಂತೆ ಬಿಟ್‌ಕಾಯಿನ್ ಅನ್ನು ಯಾವುದೇ ಬ್ಯಾಂಕ್ ಅಥವಾ ಸರಕಾರ ನಿಯಂತ್ರಿಸುವುದಿಲ್ಲ. ಹಾಗೆಂದಮಾತ್ರಕ್ಕೆ ಬಿಟ್‌ಕಾಯಿನ್ ಕರೆನ್ಸಿಯನ್ನು ಗೊತ್ತುಗುರಿಯಿಲ್ಲದಂತೆ ಚಲಾವಣೆಗೆ ತರಲಾಗುತ್ತದೆ ಎಂದೇನೂ ಇಲ್ಲ, ಪೂರೈಕೆ ಹೆಚ್ಚಾಗಿ ಹಣದುಬ್ಬರ ಉಂಟಾಗದಂತೆ ತಡೆಯಲು ಪ್ರತಿಬಾರಿಯೂ ನಿರ್ದಿಷ್ಟ ಪ್ರಮಾಣದ ಬಿಟ್‌ಕಾಯಿನ್‌ಗಳಷ್ಟೆ ಹೊಸದಾಗಿ ಚಲಾವಣೆಗೆ ಬರುತ್ತವೆ.

ಅದೇನೋ ಸರಿ, ಈ ಬಿಟ್‌ಕಾಯಿನ್ ಅನ್ನು ಸಂಪಾದಿಸುವುದು ಹೇಗೆ?

ಬಿಟ್‌ಕಾಯಿನ್ ಸಂಪಾದಿಸಬೇಕು ಎನ್ನುವವರು ತಮ್ಮ ಕಂಪ್ಯೂಟರುಗಳಲ್ಲಿ ಒಂದು ವಿಶೇಷ ತಂತ್ರಾಂಶವನ್ನು ಅನುಸ್ಥಾಪಿಸಿಕೊಳ್ಳಬೇಕು. ಅನೇಕ ಜನರು ಹೀಗೆ ಸೇರಿದಾಗ ದೊರಕುವ ಸಂಸ್ಕರಣಾ ಸಾಮರ್ಥ್ಯವನ್ನು ಬಳಸಿಕೊಂಡು ವಿಶ್ವದೆಲ್ಲೆಡೆಯ ಬಿಟ್‌ಕಾಯಿನ್ ಬಳಕೆದಾರರು ನಡೆಸುವ ವಹಿವಾಟನ್ನೆಲ್ಲ ಸಂಸ್ಕರಿಸುವ ಕೆಲಸ ನಡೆಯುತ್ತದೆ. ಈ ಪ್ರಕ್ರಿಯೆಯಲ್ಲಿ ಹಲವಾರು ಸಂಕೀರ್ಣ ಲೆಕ್ಕಾಚಾರಗಳನ್ನು ಕೈಗೊಳ್ಳಬೇಕಾದ್ದರಿಂದ ಅದು ಕ್ಲಿಷ್ಟವಷ್ಟೇ ಅಲ್ಲ, ನಿಧಾನವೂ ಹೌದು. ಈ ಪ್ರಕ್ರಿಯೆ ಮುಂದುವರೆಯುತ್ತ ಹೋದಂತೆ ಅದರಲ್ಲಿ ನೆರವಾದವರಿಗೆ ಬಿಟ್‌ಕಾಯಿನ್ ರೂಪದ ಹಣ ದೊರಕುತ್ತ ಹೋಗುತ್ತದೆ, ಆ ಮೂಲಕ ಚಲಾವಣೆಯಲ್ಲಿರುವ ಬಿಟ್‌ಕಾಯಿನ್‌ಗಳ ಪ್ರಮಾಣವೂ ಹೆಚ್ಚುತ್ತದೆ. ಬಳ್ಳಾರಿಯಲ್ಲಿ ಮಣ್ಣು ಬಗೆಯುವ ಬದಲು ಕಂಪ್ಯೂಟರಿನಲ್ಲಿ ಬಿಟ್‌ಕಾಯಿನ್ ಕೂಡಿಸುವ ಈ ಪ್ರಕ್ರಿಯೆಗೂ 'ಮೈನಿಂಗ್' ಎಂದೇ ಹೆಸರು. ಈಚೆಗೆ ಬಿಟ್‌ಕಾಯಿನ್ ಗಣಿಗಾರಿಕೆಯ ಈ ಕೆಲಸ ಸಾಧಾರಣ ಕಂಪ್ಯೂಟರುಗಳ ಸಾಮರ್ಥ್ಯವನ್ನು ಮೀರಿ ಬೆಳೆದುಬಿಟ್ಟಿರುವುದರಿಂದ ಅದಕ್ಕೆಂದೇ 'ಮೈನರ್'ಗಳೆಂಬ ವಿಶೇಷ ಯಂತ್ರಾಂಶಗಳೂ ತಯಾರಾಗುತ್ತಿವೆ.

ಮೈನಿಂಗ್ ಮೂಲಕ ಸಂಪಾದಿಸಬಹುದಾದ ಹಣಕ್ಕೆ ಮಿತಿಯೇ ಇಲ್ಲ ಎಂದೇನೂ ಇಲ್ಲ. ಚಲಾವಣೆಗೆ ಬರುವ ಬಿಟ್‌ಕಾಯಿನ್‌ಗಳ ಪ್ರಮಾಣ ಹೆಚ್ಚುತ್ತಿದ್ದಂತೆ ಬಳಕೆದಾರರಿಗೆ ಹೊಸದಾಗಿ ಸಿಗುವ ಬಿಟ್‌ಕಾಯಿನ್‌ಗಳ ಸಂಖ್ಯೆಯೂ ಕಡಿಮೆಯಾಗುತ್ತ ಹೋಗುತ್ತದೆ - ೫೦ರಿಂದ ೨೫ಕ್ಕೆ, ೨೫ರಿಂದ ೧೨.೫ಕ್ಕೆ... ಹೀಗೆ.

೨೦೦೯ರಲ್ಲಿ ಜೇಮ್ಸ್ ಹವೆಲ್ಸ್ ಈ ಪ್ರಯತ್ನದಲ್ಲಿ ತೊಡಗಿದ್ದಾಗ ಅವನಿಗೆ ೭೫೦೦ ಬಿಟ್‌ಕಾಯಿನ್‌ಗಳು ಬಹು ಸುಲಭವಾಗಿಯೇ ದೊರಕಿಬಿಟ್ಟಿದ್ದವಂತೆ. ಆದರೆ ಈಗ ಬಿಟ್‌ಕಾಯಿನ್ ಸಂಪಾದನೆ ಅಷ್ಟೆಲ್ಲ ಸುಲಭವೇನಲ್ಲ. ಹಾಗಾಗಿಯೇ ಮೈನಿಂಗ್ ಆಸಕ್ತರು ಸಾಮಾನ್ಯ ಕಂಪ್ಯೂಟರುಗಳನ್ನೆಲ್ಲ ಬಿಟ್ಟು ಈಗ ಹೆಚ್ಚು ಸಾಮರ್ಥ್ಯದ ಮೈನರ್ ಯಂತ್ರಾಂಶಗಳತ್ತ ಮುಖಮಾಡಿದ್ದಾರೆ. ಬೇಗಬೇಗ ಮೈನಿಂಗ್ ಮಾಡುವಂತಾಗಲು ತಮ್ಮೊಳಗೇ ಗುಂಪುಗಳನ್ನೂ ರಚಿಸಿಕೊಂಡಿದ್ದಾರೆ.

ನವೆಂಬರ್ ತಿಂಗಳ ಅಂತ್ಯದಲ್ಲಿ ಚಲಾವಣೆಯಲ್ಲಿದ್ದ ಬಿಟ್‌ಕಾಯಿನ್‌ಗಳ ಒಟ್ಟು ಸಂಖ್ಯೆ ಸುಮಾರು ಒಂದು ಕೋಟಿಯ ಆಸುಪಾಸಿನಲ್ಲಿತ್ತು. ಒಂದು ಅಂದಾಜಿನ ಪ್ರಕಾರ ಮೈನಿಂಗ್ ನಡೆಯುತ್ತ ನಡೆಯುತ್ತ ೨೧೪೦ನೇ ಇಸವಿಯ ವೇಳೆಗೆ ಬಿಟ್‌ಕಾಯಿನ್‌ಗಳು ಹೊಸದಾಗಿ ಚಲಾವಣೆಗೆ ಬರುವ ಪ್ರಕ್ರಿಯೆ ನಿಂತುಹೋಗುತ್ತದಂತೆ. ಆ ವೇಳೆಗೆ ಒಟ್ಟು ೨.೧ ಕೋಟಿ ಬಿಟ್‌ಕಾಯಿನ್‌ಗಳು ಚಲಾವಣೆಯಲ್ಲಿರಲಿವೆ ಎನ್ನಲಾಗಿದೆ.

ಬೇರೆಲ್ಲ ಕರೆನ್ಸಿಗಳ ಮೌಲ್ಯ ಹೆಚ್ಚು-ಕಡಿಮೆ ಆಗುವಂತೆ ಬಿಟ್‌ಕಾಯಿನ್ ಮೌಲ್ಯದಲ್ಲೂ ಬದಲಾವಣೆಗಳು ಸಾಮಾನ್ಯ. ಜಾಲಲೋಕದಲ್ಲಿ ಈಗಾಗಲೇ ಸಕ್ರಿಯವಾಗಿರುವ ಹಲವು ವಿನಿಮಯ ಕೇಂದ್ರಗಳು ಬಿಟ್‌ಕಾಯಿನ್ ಕರೆನ್ಸಿಯನ್ನು ಇತರ ಕರೆನ್ಸಿಯೊಡನೆ ಹೋಲಿಸುವ ಕೆಲಸ ಮಾಡುತ್ತಿವೆ. ಒಂದು ಡಾಲರಿಗೆ ಇಷ್ಟು ರೂಪಾಯಿ ಎಂದಂತೆ ಒಂದು ಬಿಟ್ ಕಾಯಿನ್ ಇಷ್ಟು ಡಾಲರಿಗೋ ಪೌಂಡಿಗೋ ಸಮ ಎನ್ನುವಂತಹ ಮಾಹಿತಿ ಸದಾಕಾಲ ಸಿಗುತ್ತಲೇ ಇರುತ್ತದೆ. ನವೆಂಬರ್ ೨೦೧೩ರ ಅಂತ್ಯದಲ್ಲಿ ಒಂದು ಬಿಟ್‌ಕಾಯಿನ್ ಮೌಲ್ಯ ಸಾವಿರ ಡಾಲರ್ ದಾಟಿತ್ತು!

ಈ ಮಾಹಿತಿಯ ಆಧಾರದ ಮೇಲೆ ಹಲವೆಡೆ ಬಿಟ್‌ಕಾಯಿನ್‌ಗಳನ್ನು ಕೊಳ್ಳುವುದು, ಮಾರುವುದು, ಅವುಗಳನ್ನು ಬಳಸಿ ವ್ಯವಹರಿಸುವುದು ಸಾಧ್ಯ. ನಮ್ಮ ಹಣಕ್ಕೆ ಬದಲಾಗಿ ಬಿಟ್‌ಕಾಯಿನ್ ಕೊಡುವ ಎಟಿಎಂ ಕೂಡ ಆಗಲೇ ಸಿದ್ಧವಾಗಿಬಿಟ್ಟಿದೆ.

ನಗದು-ಕಾರ್ಡುಗಳನ್ನೆಲ್ಲ ಸ್ವೀಕರಿಸಿದ ಹಾಗೆ ಹಲವಾರು ಸಂಸ್ಥೆಗಳು ಬಿಟ್‌ಕಾಯಿನ್ ರೂಪದ ಪಾವತಿಯನ್ನೂ ಅನುಮತಿಸುತ್ತವೆ. ಹಲವು ಕಡೆ ಬಿಟ್‌ಕಾಯಿನ್ ಬಳಸಿ ಶಾಪಿಂಗ್ ಕೂಡ ಮಾಡಬಹುದು. ಬಿಟ್‌ಕಾಯಿನ್ ಹಲವು ಕಾನೂನುಬಾಹಿರ ವ್ಯವಹಾರಗಳಲ್ಲೂ ಬಳಕೆಯಾಗುತ್ತಿರುವ ಸಂಶಯವೂ ಇದೆ.

ಬಿಟ್‌ಕಾಯಿನ್‌ಗಳು ಕಂಪ್ಯೂಟರಿನಲ್ಲಿ ಶೇಖರವಾಗಿರುತ್ತವೆ ಎಂದಾಕ್ಷಣ ಬೇರೆಲ್ಲ ಕಡತಗಳಂತೆ ಅವನ್ನೂ ಕಾಪಿ ಮಾಡಿಕೊಂಡು ಬಳಸಬಹುದೇ ಎನ್ನುವ ಪ್ರಶ್ನೆ ಮೂಡುವುದು ಸಹಜ. ಒಂದು ಬಿಟ್‌ಕಾಯಿನ್ ಮಾಹಿತಿಯನ್ನು ನಾಲ್ಕು ಜನ ಕಾಪಿಮಾಡಿಕೊಂಡು ಶಾಪಿಂಗ್ ಮಾಡಿಬಿಟ್ಟರೆ ಅದು ಖೋಟಾನೋಟು ಬಳಸಿದಂತೆಯೇ ತಾನೆ!

ಅಂತಹುದೊಂದು ಸಾಧ್ಯತೆಯನ್ನು ತಪ್ಪಿಸಲು ಅಗತ್ಯ ತಾಂತ್ರಿಕ ಮುನ್ನೆಚ್ಚರಿಕೆಯನ್ನು ಈ ವ್ಯವಸ್ಥೆ ಒಳಗೊಂಡಿದೆ. ಹಾಗಾಗಿಯೇ ಒಮ್ಮೆ ನಮ್ಮ ಬಿಟ್‌ಕಾಯಿನ್ ಅನ್ನು ಖರ್ಚುಮಾಡಿದೆವೆಂದರೆ ಆ ವ್ಯವಹಾರವನ್ನು ರದ್ದುಪಡಿಸುವುದು ಅಸಾಧ್ಯ. ಅಲ್ಲದೆ ಬಿಟ್‌ಕಾಯಿನ್ ಬಳಸಿ ನಡೆದ ವಹಿವಾಟಿನ ಬಗ್ಗೆ ಮಾಹಿತಿಯನ್ನು ಅಂತರಜಾಲದಲ್ಲಿ ಉಳಿಸಿಡಲಾಗುತ್ತದೆ; ಆದರೆ ಈ ವಹಿವಾಟು ನಡೆಸಿದವರು ಯಾರು ಎಂಬ ಮಾಹಿತಿ ಮಾತ್ರ ಎಲ್ಲೂ ಶೇಖರವಾಗುವುದಿಲ್ಲ. ಕಾನೂನುಬಾಹಿರ ಚಟುವಟಿಕೆಗಳಲ್ಲಿ ಬಿಟ್‌ಕಾಯಿನ್ ಬಳಕೆ ಹೆಚ್ಚಾಗಲು ಇದೇ ಪ್ರಮುಖ ಕಾರಣ ಎಂದು ತಜ್ಞರು ಹೇಳುತ್ತಾರೆ.

ಅಷ್ಟೇ ಅಲ್ಲ, ಈ ಕಾರಣದಿಂದಾಗಿಯೇ ಬಿಟ್‌ಕಾಯಿನ್‌ಗಳನ್ನು ನಾಣ್ಯ-ನೋಟುಗಳಷ್ಟೇ ಜೋಪಾನವಾಗಿ ನೋಡಿಕೊಳ್ಳಬೇಕಾಗುತ್ತದೆ. ಜೇಮ್ಸ್ ಹವೆಲ್ಸ್‌ನಿಗೆ ಆದಂತೆ ಬಿಟ್‌ಕಾಯಿನ್ ಶೇಖರಿಸಿಟ್ಟಿದ್ದ ಕಂಪ್ಯೂಟರ್ ಅಥವಾ ಮೊಬೈಲ್ ಫೋನ್ ಕಳೆದುಹೋಗಿ ನಮ್ಮಲ್ಲಿ ಆ ಮಾಹಿತಿಯ ಬ್ಯಾಕಪ್ ಕೂಡ ಇಲ್ಲ ಎನ್ನುವುದಾದರೆ ಅಷ್ಟು ಹಣ ಖಾಯಮ್ಮಾಗಿ ನಮ್ಮ ಕೈಬಿಟ್ಟಂತೆ.

ಹಾಗಾಗಿಯೇ ಈಗ ಬೇರೊಬ್ಬರ ಬಿಟ್‌ಕಾಯಿನ್‌ಗಳನ್ನು ಕದ್ದು ಬಳಸುವ ವಂಚಕರೂ ಹುಟ್ಟಿಕೊಂಡಿದ್ದಾರೆ: ಕಳೆದ ಎರಡು-ಮೂರು ವರ್ಷಗಳಲ್ಲಿ ಬಳಕೆದಾರರ ಸಾವಿರಾರು ಬಿಟ್‌ಕಾಯಿನ್‌ಗಳು ಕಳ್ಳತನವಾದ ಅನೇಕ ಘಟನೆಗಳು ವರದಿಯಾಗಿವೆ. ಅಂತರಜಾಲದಲ್ಲಿರುವ ಬಿಟ್‌ಕಾಯಿನ್ ವಿನಿಮಯ ಕೇಂದ್ರಗಳಿಗೂ ಹಲವುಬಾರಿ ಕನ್ನಹಾಕಿದ ಕಳ್ಳರು ಅಲ್ಲೂ ತಮ್ಮ ಕೈಚಳಕ ತೋರಿಸಿದ್ದರು. ಅಂತಹ ಒಂದು ಸಂದರ್ಭದಲ್ಲಿ ಉಂಟಾದ ಗೊಂದಲ ಎಷ್ಟರಮಟ್ಟಿಗಿತ್ತು ಎಂದರೆ ಬಿಟ್‌ಕಾಯಿನ್‌ಗಳ ವಿನಿಮಯ ದರ ಒಮ್ಮೆಲೇ ಹತ್ತಾರು ಪಟ್ಟು ಕುಸಿದು ಅವುಗಳ ಅಸ್ತಿತ್ವಕ್ಕೇ ಸಂಚಕಾರ ಬರುವಂತಹ ಪರಿಸ್ಥಿತಿ ಉಂಟಾಗಿತ್ತು.

ಬಿಟ್‌ಕಾಯಿನ್ ಕಳ್ಳತನ ಹಾಗೂ ದುರುಪಯೋಗದ ಹಲವು ಘಟನೆಗಳ ಹಿನ್ನೆಲೆಯಲ್ಲಿ ಅವುಗಳ ಬಳಕೆ ಎಷ್ಟು ಸುರಕ್ಷಿತ ಎನ್ನುವ ಪ್ರಶ್ನೆ ಎದ್ದಿದೆ. ಬಿಟ್‌ಕಾಯಿನ್ ಮೌಲ್ಯದಲ್ಲಿ ಬಹಳ ಕ್ಷಿಪ್ರವಾಗಿ ಸಂಭವಿಸುವ ಏರಿಳಿತ ಅವುಗಳ ಸ್ಥಿರತೆಯ ಬಗೆಗೂ ಅನುಮಾನ ಮೂಡಿಸಿದೆ.

ಬಿಟ್‌ಕಾಯಿನ್ ಮೌಲ್ಯದಲ್ಲಿ ಸದ್ಯ ಕಂಡುಬಂದಿರುವ ಭಾರೀ ಹೆಚ್ಚಳದ ಹಿಂದೆ ಬೇರೆಲ್ಲ ಕಾರಣಗಳಿಗಿಂತ ಲಾಭದ ಊಹೆ (ಸ್ಪೆಕ್ಯುಲೇಶನ್) ಕೆಲಸಮಾಡಿದೆ ಎನ್ನುವ ಮಾತೂ ಇದೆ. ಇಷ್ಟಲ್ಲದೆ ಭಾರತವೂ ಸೇರಿದಂತೆ ಅನೇಕ ದೇಶಗಳಲ್ಲಿ ಬಿಟ್‌ಕಾಯಿನ್ ಬಳಕೆಯ ಬಗ್ಗೆ ಯಾವುದೇ ನಿಯಮ-ಕಾನೂನುಗಳು ಇಲ್ಲದಿರುವುದು ಈ ಹೊಸ ಕರೆನ್ಸಿಯ ಬಗ್ಗೆ ಗೊಂದಲವನ್ನು ಇನ್ನಷ್ಟು ಹೆಚ್ಚಿಸಿದೆ.

ಸದ್ಯ ಬಿಟ್‌ಕಾಯಿನ್ ಮೇಲೆ ಯಾವುದೇ ಸರಕಾರ ಅಥವಾ ಕೇಂದ್ರೀಯ ಪ್ರಾಧಿಕಾರದ ನಿಯಂತ್ರಣ ಇಲ್ಲದಿದ್ದರೂ ಮುಂದಿನ ದಿನಗಳಲ್ಲಿ ವಿವಿಧ ಸರಕಾರಗಳು ಬಿಟ್‌ಕಾಯಿನ್ ಮೇಲೆ ನಿರ್ಬಂಧ ಹೇರಲು ಪ್ರಯತ್ನಿಸಬಹುದು ಎಂಬ ಊಹೆ ಕೂಡ ಇದೆ. ಹಣಕಾಸು ಸಂಸ್ಥೆಗಳು ಬಿಟ್‌ಕಾಯಿನ್ ವಹಿವಾಟಿನಲ್ಲಿ ತೊಡಗದಂತೆ ಕೆಲದಿನಗಳ ಹಿಂದೆ ಚೀನಾದಲ್ಲಿ ಘೋಷಣೆಯಾದ ನಿರ್ಬಂಧ ಇದಕ್ಕೊಂದು ಉದಾಹರಣೆ ಎನ್ನಲಾಗುತ್ತಿದೆ. ಆ ನಿರ್ಬಂಧ ಹೊರಬಿದ್ದ ಬೆನ್ನಲ್ಲೇ ಅಲ್ಲಿನ ಅತಿದೊಡ್ಡ ಸರ್ಚ್ ಇಂಜನ್ 'ಬೈಡು' ತನ್ನ ಶುಲ್ಕಗಳಿಗಾಗಿ ಬಿಟ್‌ಕಾಯಿನ್‌ಗಳನ್ನು ಸ್ವೀಕರಿಸಲು ನಿರಾಕರಿಸಿತು. ಅಷ್ಟೇ ಅಲ್ಲ, ಈ ನಿರ್ಬಂಧದ ಪರಿಣಾಮವಾಗಿ ಬಿಟ್‌ಕಾಯಿನ್ ವಿನಿಮಯ ದರ ಹೆಚ್ಚೂಕಡಿಮೆ ಅರ್ಧಕ್ಕರ್ಧ ಕಡಿಮೆಯಾಗಿ ಈ ಹೊಸ ಕರೆನ್ಸಿಯ ಅಸ್ಥಿರತೆಯನ್ನೂ ತೋರಿಸಿಕೊಟ್ಟಿತು. ನಂತರದಲ್ಲಿ ವಿನಿಮಯದರ ಮತ್ತೆ ತನ್ನ ಹಿಂದಿನ ಮೌಲ್ಯದತ್ತ ಮರಳಿತಾದರೂ ಅಷ್ಟೆಲ್ಲ ಕ್ಷಿಪ್ರವಾಗಿ ನಡೆದ ಈ ಬದಲಾವಣೆ ಹೂಡಿಕೆದಾರರ ಮನಸ್ಸಿನಲ್ಲಿ ಸಣ್ಣದೊಂದು ಸಂಶಯ ಹುಟ್ಟುಹಾಕಿದ್ದಂತೂ ನಿಜ.

ಈ ನಡುವೆಯೇ ಅವುಗಳ ಭವಿಷ್ಯದ ಬಗೆಗೂ ಸಾಕಷ್ಟು ಭರವಸೆಯ ಮಾತುಗಳು ಕೇಳಿಬರುತ್ತಿವೆ. ವಿಶ್ವದ ಹಲವೆಡೆಗಳಲ್ಲಿ ಅದನ್ನೊಂದು ಹೂಡಿಕೆಯ ಮಾಧ್ಯಮದಂತೆ ನೋಡಲಾಗುತ್ತಿದೆ ಎನ್ನುವ ಸುದ್ದಿ ಕೂಡ ಇದೆ. ಬಿಟ್‌ಕಾಯಿನ್‌ಗೆ ದೊರೆತಿರುವ ಪ್ರಾಮುಖ್ಯದ ಬೆನ್ನಲ್ಲೇ ಅಂತಹ ಇನ್ನೂ ಹಲವು ಡಿಜಿಟಲ್ ಕರೆನ್ಸಿಗಳು ಕಾಣಿಸಿಕೊಳ್ಳಲು ಶುರುವಾಗಿವೆ. ಅಷ್ಟೇ ಅಲ್ಲ, ರಿಚರ್ಡ್ ಬ್ರಾನ್ಸನ್, ಬಿಲ್ ಗೇಟ್ಸ್, ಅಲ್ ಗೋರ್ ಮುಂತಾದ ಹಲವಾರು ಘಟಾನುಘಟಿಗಳು ಬಿಟ್‌ಕಾಯಿನ್ ಬೆಂಬಲಕ್ಕೆ ನಿಂತಿದ್ದಾರೆ. ಬಿಟ್‌ಕಾಯಿನ್ ಸುತ್ತ ಕೇಳಿಬರುತ್ತಿರುವ ಹೊಸ ಆಲೋಚನೆಗಳಿಗೆ ಗೂಗಲ್ ವೆಂಚರ್‍ಸ್‌ನಂತಹ ಸಂಸ್ಥೆಗಳಿಂದಲೇ ಹೂಡಿಕೆ ಹರಿದುಬರುತ್ತಿದೆ. ಸದ್ಯ ಬಿಟ್‌ಕಾಯಿನ್ ಬಗ್ಗೆ ಅಷ್ಟೇನೂ ಆಸಕ್ತಿ ತೋರಿಸಿಲ್ಲದ ನಮ್ಮ ದೇಶದಲ್ಲೂ ಈ ಕುರಿತು ಅರಿವು ಮೂಡಿಸಲು ಪ್ರಯತ್ನಗಳು ನಡೆದಿವೆ; ಈಚೆಗೆ ಬೆಂಗಳೂರಿನಲ್ಲಿ ನಡೆದ ಗ್ಲೋಬಲ್ ಬಿಟ್‌ಕಾಯಿನ್ ಕಾನ್ಫರೆನ್ಸ್ ಇದಕ್ಕೊಂದು ಉದಾಹರಣೆಯಷ್ಟೆ.

ಒಟ್ಟಾರೆಯಾಗಿ ಈಗ ನಾವೆಲ್ಲ ಬಳಸುವ ನಾಣ್ಯನೋಟುಗಳಿಗೆ ಈ ಬಿಟ್‌ಕಾಯಿನ್, ಅಥವಾ ಅಂತಹುದೇ ಬೇರೆ ಯಾವುದೋ ಕರೆನ್ಸಿ, ನಿಜಕ್ಕೂ ಪರ್ಯಾಯವಾಗಿ ಬೆಳೆಯಬಲ್ಲದೆ ಎನ್ನುವುದನ್ನು, ಸಾಕಷ್ಟು ಕುತೂಹಲದಿಂದಲೇ, ಕಾದುನೋಡಬೇಕಿದೆ.

ಅಂದಹಾಗೆ ಜೇಮ್ಸ್ ಹವೆಲ್ಸ್‌ನ ಹಾರ್ಡ್‌ಡಿಸ್ಕ್ ಅವನ ಊರಿನ ಫುಟ್‌ಬಾಲ್ ಮೈದಾನದಷ್ಟು ದೊಡ್ಡ ಲ್ಯಾಂಡ್‌ಫಿಲ್‌ನ ಮೂಲೆಯಲ್ಲೆಲ್ಲೋ ಮೂರು-ನಾಲ್ಕು ಅಡಿ ಆಳದಲ್ಲಿ ಸೇರಿಕೊಂಡಿರಬೇಕು ಎಂದು ಊಹಿಸಲಾಗಿದೆ. ಕಸದ ರಾಶಿಯ ನಡುವಿನ ಈ ನಿಧಿ ಯಾರಿಗಾದರೂ ಸಿಗುತ್ತದೋ ಇಲ್ಲವೋ - ಅದನ್ನೂ ಕಾದುನೋಡಲೇಬೇಕು!

ಡಿಸೆಂಬರ್ ೨೨, ೨೦೧೩ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge