ಭಾನುವಾರ, ಡಿಸೆಂಬರ್ 22, 2013

ಇಜ್ಞಾನ ವಿಶೇಷ: ನಾಗೇಶ ಹೆಗಡೆ ಹೇಳುತ್ತಾರೆ...

ಡಿಸೆಂಬರ್ ೨೧, ೨೦೧೩ರಂದು ನಡೆದ ಕನ್ನಡ ವಿಶ್ವವಿದ್ಯಾನಿಲಯದ ನುಡಿಹಬ್ಬದಲ್ಲಿ ನಾಗೇಶ ಹೆಗಡೆಯವರು ಮಾಡಿದ ಭಾಷಣದ ಪೂರ್ಣಪಾಠ 

ಕನ್ನಡ ವಿಶ್ವವಿದ್ಯಾಲಯದ ಆವರಣಕ್ಕೆ ಬಂದಾಗಲೆಲ್ಲ ನಮ್ಮ ಮನಸ್ಸು ಪ್ರಫುಲ್ಲಿತವಾಗುತ್ತದೆ. ಇಲ್ಲಿನ ಬಂಡೆಗಳು, ಇಲ್ಲಿ ಮರುಹುಟ್ಟು ಪಡೆದ ಸಸ್ಯಗಳು, ಇಲ್ಲಿನ ಸಹಜ ನೈಸರ್ಗಿಕ ಸೌಂದರ್ಯ ಜತೆಜತೆಗೆ ಕನ್ನಡದ ಕಲೆ, ಸಂಸ್ಕೃತಿ ಪರಂಪರೆಗಳನ್ನು ಬಿಂಬಿಸುವ ಶಿಲ್ಪ, ವಾಸ್ತುಶಿಲ್ಪ -ಹೀಗೆ ಇಲ್ಲಿನ ಒಂದೊಂದೂ ಕನ್ನಡ ಲೋಕದ ಅನನ್ಯತೆಯನ್ನು ಮೆರೆಯುವ ಪ್ರತೀಕಗಳಾಗಿವೆ.

ನಮ್ಮಲ್ಲಿ ಎರಡು ಕನ್ನಡ ನಾಡುಗಳಿವೆ: ಒಂದು ಬೆಂಗಳೂರಿನ ಬಹಿರ್ಮುಖಿ ಕನ್ನಡ: 'ವಿಜ್ಞಾನದ ರಾಜಧಾನಿ' ಎಂದು ಕರೆಸಿಕೊಂಡು ವಿಶ್ವವನ್ನು ಬೆಸೆಯುವ ಕನ್ನಡ. ಅದು ಕಾರ್ಪೊರೇಟ್ ವಲಯಗಳ ಥಳಕಿನ ಕನ್ನಡ. ರಾಷ್ಟ್ರದ ನಾಯಕರು, ವಿದೇಶೀ ಗಣ್ಯರು, ಉದ್ಯಮಿಗಳನ್ನು ಆಕರ್ಷಿಸುವ ಕನ್ನಡ. ಅದು ನಂದನ ನೀಲೇಕಣಿಯವರನ್ನು, ಶಕುಂತಲಾ ದೇವಿಯವರನ್ನು, ದೇವಿಪ್ರಸಾದ್ ಶೆಟ್ಟಿಯವರನ್ನು, ಮಾಲತಿ ಹೊಳ್ಳರನ್ನು, ಅನಿಲ್ ಕುಂಬ್ಳೆಗಳನ್ನು, ಉಲ್ಲಾಸ ಕಾರಂತರನ್ನು, ಸಿಎನ್‌ಆರ್ ರಾವ್, ಯುಆರ್ ರಾವ್‌ರವರನ್ನು, ನಾರಾಯಣ ಮೂರ್ತಿ- ಅನಂತಮೂರ್ತಿಯಂಥವರನ್ನು ನಾಡಿನಾಚೆ ಪ್ರದರ್ಶಿಸುವ ಕನ್ನಡ. ಅದು ಕ್ಯಾಲಿಫೋರ್ನಿಯಾಕ್ಕೆ ಕಂಪ್ಯೂಟರ್ ಪರಿಣತರನ್ನು, ಬಾಹ್ಯಾಕಾಶಕ್ಕೆ ಉಪಗ್ರಹಗಳನ್ನು, ಮಂಗಳಲೋಕಕ್ಕೆ ಪ್ರೋಬ್‌ಗಳನ್ನೂ ಕಳಿಸಬಲ್ಲ ಧೀರರ ಕನ್ನಡ. ಅದು ಹೆಬ್ಬಾಗಿಲ ಕನ್ನಡ.

ಇನ್ನೊಂದು ಒಳಮನೆಯ ಕನ್ನಡ, ಅಂತರ್ಮುಖಿ ಕನ್ನಡ. ಈ ಒಳಮನೆಯ ಕನ್ನಡ ಏನಿದೆ ಅದು ನಮ್ಮ ಸ್ವಂತದ ಕನ್ನಡ. ಅಲ್ಲಿ ಹಾಡು ಹಸೆಗಳಿವೆ. ಲಾವಣಿ ಪದ್ಯಗಳಿವೆ, ವಚನಗಳಿವೆ, ದಾಸರ ಪದಗಳಿವೆ, ಹಸೆ ಚಿತ್ರಗಳಿವೆ, ಕಾಷ್ಠಶಿಲ್ಪಗಳಿವೆ, ಗುಮಟೆ ಪಾಂಗುಗಳಿವೆ, ಪಣತ, ಹಗೇವು, ಬೀಸುಗಲ್ಲು, ಮನೆಮದ್ದುಗಳಿವೆ, ಕಜ್ಜಾಯ- ಕಷಾಯಗಳಿವೆ. ಅದು ರೈತ ಮಕ್ಕಳ, ಬುಡಕಟ್ಟಿನವರ ಖಾಸಾ ಕನ್ನಡ. ಅದು ಜಾಯಮಾನದ ಕನ್ನಡ.

ಈ ಒಳಮನೆಯ ಕನ್ನಡದ ಉಸ್ತುವಾರಿಯ, ಪರಿಚಾರಿಕೆಯ ಕೆಲಸ ಮಾಡುವ ಕನ್ನಡ ವಿಶ್ವವಿದ್ಯಾಲಯ ನಮ್ಮೆಲ್ಲರ ಹೆಮ್ಮೆಯ ಸಂಸ್ಥಾನವೆನಿಸಿದೆ. ಕನ್ನಡ ಜ್ಞಾನ ಮತ್ತು ಕೌಶಲ ಪರಂಪರೆಯನ್ನು ಕೆಡದಂತೆ ಕಾಯುವ ಉತ್ತಮ ಕೆಲಸವನ್ನು ಅದು ಮಾಡುತ್ತಿದೆ. ಜ್ಞಾನಪರಂಪರೆಯಲ್ಲಿ, ನಮ್ಮ ಜನಪದದಲ್ಲಿ ಅಂತಸ್ಥವಾಗಿದ್ದ ದೇಸೀ ವಿಜ್ಞಾನವನ್ನು ಹುಡುಕಿ ತೆಗೆಯುವ, ಸಂಸ್ಕರಿಸಿ ಮತ್ತೆ ಪುಟಕ್ಕಿಡುವ ಕೆಲಸವನ್ನು ಕನ್ನಡ ವಿಶ್ವವಿದ್ಯಾಲಯ ಹೊಸದಾಗಿ ಈ ವರ್ಷ ಆರಂಭಿಸುತ್ತಿದೆ.

ಅದು ಹೊಸದಾಗಿದ್ದರಿಂದ ನಾಲ್ಕು ಮಾತು ಹೇಳಬೇಕಾಗಿದೆ.

ಭಾರತದ ವಿಜ್ಞಾನ ಪರಂಪರೆ ಭವ್ಯವಾಗಿದೆ, ಜಾಗತಿಕ ಮಾನ್ಯತೆ ಗಳಿಸಿದೆ. ಚರಕ, ಶುಶ್ರುತರಿಂದ ಹಿಡಿದು, ಆರ್ಯಭಟ, ವರಾಹ ಮಿಹಿರ, ಭಾಸ್ಕರಾಚಾರ್‍ಯರೇ ಮುಂತಾದ ಪಂಡಿತರು ಇಂದಿನ ಟೆಕ್ನಾಲಜಿ ಯುಗದಲ್ಲೂ ಬಹುವಂದ್ಯರಾಗಿದ್ದಾರೆ. ಯಾವುದೇ ವೈಜ್ಞಾನಿಕ ಸಲಕರಣೆಗಳಿಲ್ಲದೆ ತರ್ಕ, ಗಣಿತ ಮತ್ತು ನಿರಂತರ ವೀಕ್ಷಣೆಯಿಂದಲೇ ಭೂಮಿ ತನ್ನ ಅಕ್ಷದ ಸುತ್ತ ಸುತ್ತುತ್ತದೆಂದೂ ಚಂದ್ರನೆಂದರೆ ಸೂರ್ಯನ ಬೆಳಕನ್ನು ಪ್ರತಿಫಲಿಸುವ ಕನ್ನಡಿಯೆಂದೂ ಈ ನಿಶಿತಮತಿಗಳು ಸಾವಿರಾರು ವರ್ಷಗಳ ಹಿಂದೆಯೇ ಹೇಳಿದ್ದರು.

ಸಾಧಕರ ಪಟ್ಟಿಯಲ್ಲಿ ಸೇರದ ಸಂಶೋಧಕರು
ಅದಿರಲಿ. ಚರಿತ್ರೆಯಲ್ಲಿ ಆಗಿಹೋದ ದೊಡ್ಡ ದೊಡ್ಡ ಸಾಧಕರ ಹೆಸರುಗಳನ್ನು ಪಟ್ಟಿ ಮಾಡುತ್ತ, ಆ ಬೆರಳೆಣಿಕೆಯ ಅವರಿಂದಾಗಿಯೇ ವಿಜ್ಞಾನ ತಂತ್ರಜ್ಞಾನ ಇಷ್ಟರಮಟ್ಟಿಗೆ ಬೆಳೆದಿದೆ ಎಂದರೆ ಅದು ಹಿಂದಿನ ಜನಸಮುದಾಯಕ್ಕೆ ಅಪಚಾರ ಮಾಡಿದಂತಾಗುತ್ತದೆ. ವಿಜ್ಞಾನ ಎಂದೆಂದಿಗೂ ಸಾಮೂಹಿಕ ಯತ್ನವೇ ಆಗಿದೆ. ಗೆಲಿಲಿಯೊ ಗ್ರಹಗಳ ಚಲನೆಯ ಕ್ರಮವನ್ನು ಅಧ್ಯಯನ ಮಾಡಿದ ಎನ್ನುವಾಗ, ಆತನಿಗೆ ಲಭ್ಯವಿದ್ದ ಟೆಲಿಸ್ಕೋಪನ್ನು ನಿರ್ಮಿಸಿದವನ ಅಥವಾ ಅದಕ್ಕೂ ಹಿಂದೆ ಆ ಟೆಲಿಸ್ಕೋಪ್‌ಗೆ ಬೇಕಿದ್ದ ಗಾಜಿನ ಮಸೂರವನ್ನು ಸಿದ್ಧಪಡಿಸಿದ ವ್ಯಕ್ತಿಯ ಅಥವಾ ಅದಕ್ಕೂ ಹಿಂದೆ ಗ್ರಹಗಳ ಸ್ಥಾನವನ್ನು ನಿಷ್ಕರ್ಷಿಸಿದ ಪಂಚಾಂಗಕರ್ತನ ಹೆಸರು ಗೌಣವಾಗಿರುತ್ತದೆ. ಒಬ್ಬ ವ್ಯಕ್ತಿಯ ಸಾಧನೆಯ ಹಿಂದೆ ಅನಾಮಧೇಯ ಸಾಧಕರ ಕೊಡುಗೆ ಅಪಾರವಾಗಿರುತ್ತದೆ. ಭಾರತದ ಮಟ್ಟಿಗೆ ಹೇಳುವುದಾದರೆ, ಮೌರ್ಯರ ಕಾಲದ ಕಮ್ಮಾರರು ತುಕ್ಕು ಹಿಡಿಯದ ಕಬ್ಬಿಣವನ್ನು ತಯಾರಿಸುತ್ತಿದ್ದರು. ದಿಲ್ಲಿಯಲ್ಲಿ ಸುಮಾರು ಎರಡು ಸಾವಿರ ವರ್ಷಗಳ ಹಿಂದೆಯೇ ನಿಲ್ಲಿಸಿದ ಉಕ್ಕಿನ ಕಂಬ ಈಗಲೂ ಕುತುಬ್ ಮಿನಾರ್ ಬಳಿ ಪ್ರವಾಸಿಗರನ್ನು ಅಚ್ಚರಿಗೊಳಿಸುತ್ತಿದೆ. ಆರು ಟನ್ ತೂಕದ, ಏಳು ಮೀಟರ್ ಎತ್ತರದ ಈ ಸ್ತಂಭವನ್ನು ಒಂದೇ ಎರಕದಲ್ಲಿ ಅದೆಂಥ ಕುಲುಮೆಯಲ್ಲಿ ಯಾರು ತಯಾರಿಸಿದರೊ, ಅದಕ್ಕೆ ಬೇಕಿದ್ದ ಕಬ್ಬಿಣದ ಅದುರನ್ನು ಯಾರು ಗಣಿಯಿಂದ ಎತ್ತಿದರೊ, ಹೇಗೆ ಎಲ್ಲಿಂದ ಸಾಗಿಸಿ ತಂದರೊ, ಆ ಅದುರಿಗೆ ಇಂಗಾಲ ಸೇರಿಸಿದರೆ ತುಕ್ಕು ಹಿಡಿಯದ ಉಕ್ಕಾಗುತ್ತದೆ ಎಂದು ಯಾವ ಕಮ್ಮಾರ ಕಂಡು ಹಿಡಿದನೊ, ಅದಕ್ಕೆ ಬೇಕಿದ್ದ ಇಂಗಾಲವನ್ನು ಯಾವ ಮೂಲದಿಂದ ಪಡೆದಿದ್ದರೊ ಅಂತು ಅದೊಂದು ರಹಸ್ಯವಾಗಿಯೇ ಉಳಿದಿದೆ. ಅವೆಲ್ಲವೂ ಸಮುದಾಯದ ವಿಜ್ಞಾನವಾಗಿ ಇತಿಹಾಸದ ಅಲಿಖಿತ ಪುಟಗಳಿಗೆ ಸೇರಿಹೋಗಿವೆ.

ನಮ್ಮ ಆಹಾರ, ಬಟ್ಟೆಬರೆ, ಪಾತ್ರೆಪಡಗಗಳೇ ಮುಂತಾದ ನಿತ್ಯ ಬಳಕೆಯ ವಸ್ತುಗಳಲ್ಲಿ ನಾವು ಹಿಂದಿನ 'ವಿಜ್ಞಾನಿ'ಗಳ ಶ್ರಮವನ್ನು ನೋಡಬೇಕು. ಹಿಂದಿನ ಕಾಲದಲ್ಲಿ ಎಲ್ಲೋ ಕಾಡುಮೇಡುಗಳ ಹುಲ್ಲುಗಾವಲಿನಲ್ಲಿ ಸಿಗುತ್ತಿದ್ದ ಸಾವಿರಾರು ಬಗೆಯ ತೃಣಧಾನ್ಯಗಳಲ್ಲಿ ಹೆಕ್ಕಿ ಹೆಕ್ಕಿ ಭತ್ತ, ಜೋಳ, ಗೋಧಿ, ಸೆಜ್ಜೆಯಂಥ ಕೆಲವೇ ಕೆಲವು ಧಾನ್ಯಗಳನ್ನು ಬಳಕೆಗೆ ತಂದರು. ಯಾವ ಬೀಜದಿಂದ ಎಂಥ ಎಣ್ಣೆ ಬರುತ್ತದೆ, ಯಾವ ನಾರಿನಿಂದ ಬಟ್ಟೆ ನೇಯಬಹುದು, ಯಾವ ಲೋಹವನ್ನು ಕರಗಿಸಿ ಕುಟ್ಟಿದರೆ ಪಾತ್ರೆಯ ರೂಪ ಕೊಡಬಹುದು ಇಂಥವೇ ಮುಂತಾದ ಜ್ಞಾನದ ಹಿಂದೆ ನಾನಾ ಬಗೆಯ ಪ್ರಯೋಗಗಳು ನಡೆದಿವೆ. ವಿಜ್ಞಾನಿಗಳೆಂದು ನಾವು ಗುರುತಿಸದಿದ್ದರೂ ರೈತರು, ನೇಕಾರರು, ಬೆಸ್ತರು, ಕುಂಬಾರರು, ಶಸ್ತ್ರವೈದ್ಯರೆನಿಸಿದ್ದ ನಾಪಿತರು, ನಾಟಿ ವೈದ್ಯರು, ಕಮ್ಮಾರರು ಇವರೆಲ್ಲರ ಪರಿಶ್ರಮದಿಂದ ರೂಪುಗೊಂಡ ಸಸ್ಯಜ್ಞಾನ, ಪ್ರಾಣಿಜ್ಞಾನ, ಕೀಟಜ್ಞಾನ, ಖನಿಜ ಜ್ಞಾನ, ಲೋಹವಿದ್ಯೆ, ನೇಯ್ಗೆ, ಶಸ್ತ್ರಾಸ್ತ್ರ ನಿರ್ಮಾಣ, ಪಶುಸಂಗೋಪನ, ಬೇಟೆಕೌಶಲ, ದೋಣಿ ನಿರ್ಮಾಣ -ಈ ಎಲ್ಲವುಗಳ ಹಿಂದೆ ಶೋಧಕರಿದ್ದರು. ಸಂಶೋಧಕರಿದ್ದರು. ಅವರು ನೆಲದಾಳದ ಜಲಮೂಲಗಳನ್ನು ಪತ್ತೆ ಮಾಡುತ್ತಿದ್ದರು. ನೀರನ್ನು ಮೇಲಕ್ಕೆತ್ತುವ ಹಾಗೂ ಮಳೆನೀರನ್ನು ಹಿಡಿದಿಡುವ ಎಂಜಿನಿಯರಿಂಗ್ ಜ್ಞಾನ ಅವರಲ್ಲಿ ವಿಕಾಸವಾಗಿತ್ತು; ಕಾಡಾನೆಗಳನ್ನು ಹಿಡಿದು ಪಳಗಿಸುವುದು ಗೊತ್ತಿತ್ತು; ಯಾವ ಸಸ್ಯದಲ್ಲಿ ಯಾವ ಔಷಧೀಯ ಗುಣಗಳಿವೆ ಎಂಬುದು ಗೊತ್ತಿತ್ತು.  ಯಾವ ಸಸ್ಯದ ಇದ್ದಿಲನ್ನು ಕುಲುಮೆಯಲ್ಲಿ ಕೆಂಡವಾಗಿ ಬಳಸಿದರೆ ಲೋಹಕ್ಕೆ ಎಂಥ ಗುಣ ಬರುತ್ತದೆ ಎಂಬುದು ಅವರಿಗೆ ಗೊತ್ತಿತ್ತು.

ಡಮಸ್ಕಸ್ ಖಡ್ಗದಲ್ಲಿ ಕನ್ನಡದ ಕಾರ್ಬನ್
ಕುಲುಮೆಯ ವಿಚಾರಕ್ಕೆ ಮತ್ತೆ ಬರೋಣ. ನಮ್ಮ ರಾಜ್ಯದ 'ಇಂಗಲದ್ಹಾಳ', 'ಬೂದಿಹಾಳ', ಗಟ್ಟಿ ಹೊಸಳ್ಳಿ, ಮೂಸೆ ಹೊಸಳ್ಳಿ ಅಥವಾ ಬೂದಿಕೋಟೆ ಮುಂತಾದ ಹೆಸರುಗಳ ಹಳ್ಳಿಗಳಿಗೂ ಹಿಂದಿನ ತಲೆಮಾರಿನ ಲೋಹವಿದ್ಯೆಗೂ ನೇರ ಸಂಬಂಧವಿದೆ. ಬೂದಿ, ಇಂಗಾಲ, ಗಟ್ಟಿ, ಮೂಸೆ ಮುಂತಾದ ಪದಗಳು ಕುಲುಮೆಗೇ ಸಂಬಂಧಿಸಿದ್ದವು. ಅಲ್ಲಿ ಸಾವಿರಾರು ವರ್ಷಗಳ ಹಿಂದೆ ಕಬ್ಬಿಣ, ಮ್ಯಾಂಗನೀಸ್ ಮುಂತಾದ ಲೋಹಗಳ ಅದುರನ್ನು ಕುಲುಮೆಯಲ್ಲಿ ಕರಗಿಸಿ ಎರಕ ಹೊಯ್ಯುತ್ತಿದ್ದರು. ಕುಲುಮೆಗಳಲ್ಲಿ ಕಬ್ಬಿಣದ ಅದುರಿನ ಜೊತೆಗೆ ಸುಣ್ಣ, ಇದ್ದಿಲು ಮತ್ತು ಮರಳನ್ನು ಕರಗಿಸಿ ಕುದಿಸಿ ಉತ್ತಮ ಗುಣಮಟ್ಟದ ಉಕ್ಕನ್ನು ತಯಾರಿಸುವುದು ಹೇಗೆ ಎಂಬ ತಾಂತ್ರಿಕ ಮಾಹಿತಿ ಅವರಲ್ಲಿತ್ತು. ಚಿತ್ರದುರ್ಗದ ಬಳಿಯ ಗಟ್ಟಿ ಹೊಸಳ್ಳಿ ಎಂಬ ಊರಿನ ಕಮ್ಮಾರರೇ ತಯಾರಿಸುತ್ತಿದ್ದ ವಿಶೇಷ ಉಕ್ಕಿನ ಪಟ್ಟಿಗಳು ಸಿರಿಯಾ ದೇಶದ ಡಮಸ್ಕಸ್‌ಗೆ ಹೋಗಿ ಅಲ್ಲಿ ಖಡ್ಗಗಳಾಗಿ 'ಡಮಸ್ಕಸ್ ಖಡ್ಗ' ಎಂದೇ ಹೆಸರು ಪಡೆದು ಮುನ್ನೂರು ವರ್ಷಗಳ ಹಿಂದೆಯೇ ವಿವಿಧ ರಾಷ್ಟ್ರಗಳಿಗೆ ಹೋಗುತ್ತಿದ್ದವು. ತುಕ್ಕು ಹಿಡಿಯದ, ರೇಷ್ಮೆಯ ನವಿರು ದಾರವನ್ನೂ ಕತ್ತರಿಸಬಹುದಾದಷ್ಟು ಹರಿತಧಾರೆಯ ಡಮಸ್ಕಸ್ ಖಡ್ಗಗಳಿಗೆ ಬಳಸುತ್ತಿದ್ದ ಲೋಹವನ್ನು 'ವೂಲ್ಟ್ಸ್ ಸ್ಟೀಲ್' ಎಂದು ಕರೆಯಲಾಗುತ್ತಿತ್ತು.  ಕನ್ನಡ ಮತ್ತು ತೆಲುಗು ಭಾಷೆಯ 'ಉಕ್ಕು' ಎಂಬ ಪದವೇ ಅಲ್ಲಿಗೆ ಹೋಗಿ 'ವೂಲ್ಟ್ಸ್' ಎಂದು ಬದಲಾಗಿದೆಯೆನ್ನಲಾಗುತ್ತಿದೆ. ಟಿಪ್ಪೂ ಸುಲ್ತಾನ್ ಬಳಸುತ್ತಿದ್ದ ಅಂಥ ಡಮಸ್ಕಸ್ ಖಡ್ಗದಲ್ಲಿ ನ್ಯಾನೊ ಕಾರ್ಬನ್ ಸುರುಳಿಗಳಿವೆ ಎಂದು ನೊಬೆಲ್ ವಿಜ್ಞಾನಿ ರಾಬರ್ಟ್ ಕರ್ಲ್ ಎಂಬಾತ ೨೦೦೮ರಲ್ಲಿ ವಿಶಾಖಾ ಪಟ್ಟಣದ ಸೈನ್ಸ್ ಕಾಂಗ್ರೆಸ್ ಸಮಾವೇಶದಲ್ಲಿ ಹೇಳಿದುದು ಸಾಕಷ್ಟು ಸಂಚಲನವನ್ನು ಮೂಡಿಸಿತ್ತು. ನಮ್ಮ ಕಮ್ಮಾರರು ತಯಾರಿಸಿದ ಉಕ್ಕು ವಿದೇಶಕ್ಕೆ ಹೋದ ನಂತರವೇ ಪ್ರಸಿದ್ಧಿ ಪಡೆದಿದ್ದು, ಅದರ ಮಹತ್ವ ವಿದೇಶೀ ವಿಜ್ಞಾನಿಯಿಂದಲೇ ಬಹಿರಂಗವಾಗಿದ್ದು ನಮಗೊಂದು ಪಾಠವಾಗಬೇಕಿತ್ತು. ಇತಿಹಾಸದ ಪುಟಗಳಲ್ಲಿ, ಅಷ್ಟೇಕೆ ಪುಟಗಳೇ ಇಲ್ಲದೆ ಕೇವಲ ಮಾತುಗಳಲ್ಲಿ, ಸ್ಥಳಪುರಾಣಗಳಲ್ಲಿ ಅವಿತಿರುವ ಅಂಥ ದೇಸೀ ಜ್ಞಾನವನ್ನು ಹೊರಕ್ಕೆ ತೆಗೆದು ದಾಖಲಿಸಲೆಂದೇ ಕನ್ನಡ ವಿಶ್ವವಿದ್ಯಾಲಯ ಹೊಸದಾಗಿ 'ದೇಸೀ ವಿಜ್ಞಾನ' ವಿಭಾಗವನ್ನು ಆರಂಭಿಸಲು ಹೊರಟಿದೆ. ಅದರ ಮಹತ್ವ ನಮಗೆಲ್ಲರಿಗೆ ಮನದಟ್ಟಾಗಬೇಕಾಗಿದೆ.

ನಮ್ಮವರ ಪುರಾತನ ಜ್ಞಾನ ಪರಂಪರೆ ವಿದೇಶಕ್ಕೆ ಹೋಗಿ ಮೆರುಗು ಪಡೆದ ಅನೇಕ ಉದಾಹರಣೆಗಳು ಕೇವಲ ಲೋಹವಿದ್ಯೆ, ಯೋಗವಿದ್ಯೆಗಳಲ್ಲಷ್ಟೇ ಅಲ್ಲ, ಗಿಡಮೂಲಿಕೆಗಳ ವಿಚಾರದಲ್ಲೂ ಸಿಗುತ್ತವೆ. ನಮ್ಮ ನಾಡಿನ ನಿಸರ್ಗದಲ್ಲಿ ಸರ್ಪಗಂಧಿ ಎಂಬ ಮೂಲಿಕೆ ಅದೆಷ್ಟೊ ಕಡೆ ತಾನೇ ತಾನಾಗಿ ಬೆಳೆಯುತ್ತಿದೆ. ಅನಾದಿ ಕಾಲದಿಂದ ನಮ್ಮ ನಾಟಿವೈದ್ಯರು, ಹಿರಿಯಜ್ಜಿಯರು ಅದರ ಬೇರನ್ನು ಔಷಧ ಮೂಲಿಕೆಯನ್ನಾಗಿ ಬಳಸುತ್ತಿದ್ದರು. ಮನೆಯಲ್ಲಿ ಯಾರೇ ಪಿತ್ತ ಪ್ರಕೋಪ, ಅತಿ ಆಯಾಸ, ನಿದ್ರಾಹೀನತೆಯಿಂದ ಬಳಲುತ್ತಿದ್ದರೆ ಅಜ್ಜಿ ಹಿತ್ತಿಲಿಗೆ ಹೋಗಿ ಸರ್ಪಗಂಧಿ ಸಸ್ಯದ ಬೇರನ್ನು ಕಿತ್ತು ತಂದು ತೇಯ್ದು ಲಿಂಬೆರಸದೊಂದಿಗೆ ನೆಕ್ಕಿಸುತ್ತಿದ್ದರು. ಅವರಿವರೇಕೆ, ಮಹಾತ್ಮಾ ಗಾಂಧೀ ಕೂಡ ನಿದ್ರಾಹೀನತೆ ಉಂಟಾದಾಗ ಸರ್ಪಗಂಧಿ ಮೂಲಿಕೆಯ ಕಷಾಯವನ್ನಾಗಿ ಸೇವಿಸುತ್ತಿದ್ದರು. ಪಶ್ಚಿಮದ ಔಷಧ ಕಂಪನಿಗಳಿಗೆ ಇದು ಗೊತ್ತಾಗಿದ್ದೇ ತಡ, ಐವತ್ತರ ದಶಕದಲ್ಲಿ ಭಾರತದ ಈ ಮೂಲಿಕೆಗೆ ಭಾರೀ ಬೇಡಿಕೆ ಬಂದು ನಮ್ಮಲ್ಲಿಂದ ಅದರ ಸಾವಿರಾರು ಟನ್‌ಗಟ್ಟಲೆ ಬೇರುಗಳು ಜರ್ಮನಿಗೆ ರಫ್ತಾಗಿ, ಅಲ್ಲಿ ಅದು 'ಸರ್ಪಾಸಿಲ್' ಹೆಸರಿನ ಮಾತ್ರೆಯಾಗಿ ಜಗತ್ತಿಗೆಲ್ಲ ಪ್ರಸಾರವಾಯಿತು. ನಮ್ಮ ಔಷಧ ಅಂಗಡಿಗಳಿಗೂ ಬರತೊಡಗಿತು. ನಮ್ಮ ಹಿತ್ತಲಲ್ಲೇ ಇರುವ ಈ ಔಷಧವನ್ನು ನಾವು ಕ್ಲಿನಿಕ್ಕಿಗೆ ಹೋಗಿ ಡಾಕ್ಟರ್‌ರ ಆದೇಶದ ಮೇರೆಗೆ ಔಷಧ ಅಂಗಡಿಗಳಲ್ಲಿ ಕೊಳ್ಳುವಂತಾಯಿತು. ಈ ಮೂಲಿಕೆ ಈಗ ನಮ್ಮಲ್ಲಿ ಮೂಲೆಗುಂಪಾಗಿದೆ. ಸರ್ಪಗಂಧಿ ಇರಲಿ, ಅಶ್ವಗಂಧಿ ಇರಲಿ ಇಂದಿನ ಮಕ್ಕಳಿಗೆ ಹಾಗಿರಲಿ, ಹಿರಿಯರಿಗೂ ಅದು ಎಲ್ಲಿದೆ ಗೊತ್ತಾಗುವುದಿಲ್ಲ.  ನಾವು ಅದನ್ನು ತುಳಿಯುತ್ತಲೇ ಓಡಾಡುತ್ತಿದ್ದರೂ ನಮಗೆ ಅದರ ಇರವು ಗೊತ್ತಾಗದಷ್ಟು ನಾವು ಕುರುಡರಾಗಿದ್ದೇವೆ.

ಈಗಂತೂ ಆಧುನೀಕರಣ, ನಗರೀಕರಣದ ಪ್ರಕ್ರಿಯೆಗಳಿಂದಾಗಿ ನಾವು ನಿಸರ್ಗದಿಂದ ದೂರವಾಗುತ್ತಿದ್ದೇವೆ. ನಿಸರ್ಗದ ನಡುವೆಯೇ ಬದುಕುತ್ತಿರುವ ವನವಾಸಿಗಳು, ಗುಡ್ಡಗಾಡು ಜನಾಂಗದವರು, ಬುಡಕಟ್ಟು ಜನರು, ಮೀನುಗಾರರು, ನಾಟಿವೈದ್ಯರು ಈಗಿನ ಜಾಗತೀಕರಣದ ಸುನಾಮಿಯಲ್ಲಿ ಸಿಕ್ಕು ತಮ್ಮದೆಲ್ಲವನ್ನು ಕಳೆದುಕೊಳ್ಳುತ್ತಿದ್ದಾರೆ. ದಿನದಿನಕ್ಕೂ ದೇಸೀ ಜ್ಞಾನ ಪರಂಪರೆಗಳು ನಾಶವಾಗುತ್ತಿವೆ.

ಬತ್ತಿಹೋಗುತ್ತಿರುವ ದೇಸೀ ಜ್ಞಾನಧಾರೆ
ಐದು ಪ್ರಮುಖ ಕಾರಣಗಳಿಂದಾಗಿ ಇಂದು ನಮ್ಮ ಸ್ಥಳೀಯರ ಜ್ಞಾನ ಪರಂಪರೆ ಅತಿ ಶೀಘ್ರವಾಗಿ ಶಿಥಿಲವಾಗುತ್ತಿದೆ. ಕಣ್ಮರೆಯಾಗುತ್ತಿದೆ. ಈ ಕಾರಣಗಳನ್ನು ಪಟ್ಟಿ ಮಾಡುವುದಾದರೆ-

೧. ಅರಣ್ಯ ಮತ್ತು ಪರಿಸರ ನಾಶ: ಗಣಿಗಾರಿಕೆ, ಅಣೆಕಟ್ಟೆ ನಿರ್ಮಾಣ, ಹೆದ್ದಾರಿ, ಕೃಷಿಗಾಗಿ ಒತ್ತುವರಿ, ನಗರ ನಿರ್ಮಾಣವೇ ಮುಂತಾದ ಚಟುವಟಿಕೆಗಳಿಂದಾಗಿ ಅಪಾರ ಪ್ರಮಾಣದ ಅರಣ್ಯ ನಾಶವಾಗುತ್ತಿದೆ, ಜೀವಿ ವೈವಿಧ್ಯ ನಾಶವಾಗುತ್ತಿದೆ. ಕೊಳ್ಳಗಳು ಬತ್ತುತ್ತಿವೆ, ಕೆರೆಗಳು ಕಣ್ಮರೆಯಾಗುತ್ತಿವೆ. ಅಳಿದುಳಿದ ಅರಣ್ಯಗಳಲ್ಲಿ ಅಕೇಶಿಯಾ, ನೀಲಗಿರಿಯಂಥ ಏಕಜಾತಿಯ ಸಸ್ಯಗಳನ್ನು ವಿಶಾಲ ಕ್ಷೇತ್ರಗಳಲ್ಲಿ ಬೆಳೆಸಲಾಗುತ್ತಿದೆ. ಈಚಲು ಮರಗಳು, ಮುಕ್ಕಡಕ ಪೊದೆಗಳು, ತುಡುವಿ ಜೇನುಗಳು ಕಣ್ಮರೆಯಾಗುತ್ತಿವೆ. ಕೆರೆಗಳು ನಾಶವಾದರೆ ಜಲಪರಿಸರದ ಜೀವಸಂಕುಲಗಳಂತೂ ನಾಶವಾಗುತ್ತವೆ. ಜೊತೆಗೇ ಕುಂಬಾರಿಕೆಗೆ ಬೇಕಿದ್ದ ಜೇಡಿ ಮಣ್ಣು ಕೂಡ ಕೈಗೆ ಸಿಗದಂತಾಗುತ್ತದೆ. ಚನ್ನಪಟ್ಟಣದ ಬಳಿ ಕುಂಬಾರರು ಸುಶ್ರಾವ್ಯ ನಾದ ಹೊಮ್ಮಿಸಬಲ್ಲ ಮಣ್ಣಿನ ಗಂಟೆಗಳನ್ನು ಮಾಡುತ್ತಿದ್ದರು. ಹದಿನೈದು ವರ್ಷಗಳ ಹಿಂದೆ ನಾನೇ ಕೆಲವನ್ನು ಖರೀದಿಸಿ, ಸ್ವಿತ್ಸರ್ಲೆಂಡಿನಿಂದ ಬಂದ ಅತಿಥಿಗಳಿಗೆ ಉಡುಗೊರೆಯಾಗಿ ಕಳಿಸಿದ್ದೆ. ಈಚಿನ ವರ್ಷಗಳಲ್ಲಿ ಅಂತಹ ಮಣ್ಣಿನ ಗಂಟೆಗಳನ್ನು ತಯಾರಿಸುವವರೇ ಎಲ್ಲೋ ವಲಸೆ ಹೋಗಿದ್ದಾರೆ. ಎಲ್ಲಿ ಹೋದರೊ ಗೊತ್ತಿಲ್ಲ. ಸಹಜವಾಗಿ, ಅವರೊಂದಿಗಿನ ಆ ಅಪೂರ್ವ ಜ್ಞಾನವೂ ಹೊರಟುಹೋಗಿದೆ.

೨. ಆಧುನಿಕ ಕೃಷಿ ವಿಧಾನ: ಹೈಬ್ರಿಡ್ ತಳಿಗಳು, ರಸಾಯನ ಒಳಸುರಿಗಳು, ಕೀಟನಾಶಕಗಳ ವಿಪರೀತ ಬಳಕೆಯಿಂದಾಗಿ ನೈಸರ್ಗಿಕ ತಳಿಗಳು ನಾಪತ್ತೆಯಾಗುತ್ತಿವೆ. ಕೊಡಗು, ಚಿಕ್ಕಮಗಳೂರಿನ ಕಾಫಿ ತೋಟಗಳಲ್ಲಿ ಕಳೆನಾಶಕ ಕೆಮಿಕಲ್‌ಗಳ ಬಳಕೆ ವರ್ಷವರ್ಷಕ್ಕೆ ಹೆಚ್ಚುತ್ತಿದೆ. 'ಕಳೆ' ಎಂದು ನಾವು ಭಾವಿಸುವ ಅನೇಕ ಗಿಡಮೂಲಿಕೆಗಳ ವಂಶವೇ ನಿರ್ನಾಮವಾಗುತ್ತಿದೆ. ಇತರ ಕೀಟನಾಶಕ ವಿಷಗಳ ಅತಿ ಬಳಕೆಯಿಂದಾಗಿ ಪರಾಗಸ್ಪರ್ಶ ಕ್ರಿಯೆ ಸ್ಥಗಿತಗೊಂಡು ಅದೆಷ್ಟು ಮೂಲಿಕೆ ಸಂತತಿಗಳು ನಿರ್ನಾಮವಾಗುತ್ತಿವೆಯೊ ಯಾರೂ ಲೆಕ್ಕ ಇಟ್ಟವರಿಲ್ಲ. ಆಯುರ್ವೇದ ಪಂಡಿತರಿಗೆ, ನಾಟಿವೈದ್ಯರಿಗೆ ನಸುಗುನ್ನಿ ಕಾಯಿ (ಕಾಪಿಕಾಚು ಅಥವಾ ಮಾಕುನ್ನಾ ಪ್ಯುರೆನ್ಸಿಸ್) ತುಂಬ ಮಹತ್ವದ್ದಾಗಿತ್ತು. ಅದು ಪಾರ್ಕಿನ್ಸನ್ ಕಾಯಿಲೆಗೆ ಉತ್ತಮ ಔಷಧವೆಂದು ವಿದೇಶದಲ್ಲಿ ಪ್ರತೀತಿ ಪಡೆದ ಮೇಲಂತೂ ನಸುಗುನ್ನಿ ಬಳ್ಳಿಯನ್ನು ಕೃಷಿಭೂಮಿಯಲ್ಲಿ ಬಳಸುವ ಯತ್ನಗಳು ನಡೆದವು. ಕೊಯ್ಲಿಗೆ ಸುಲಭವಾಗುವಂತೆ, ಇಳುವರಿ ಹೆಚ್ಚಿಸುವಂತೆ ಸಸ್ಯವಿಜ್ಞಾನಿಗಳು ಸಂಕರತಳಿಯನ್ನು ಸೃಷ್ಟಿಮಾಡಿದರು. ವೆಲ್ವೆಟ್ ಬೀನ್ಸ್ ಎಂಬ ಹೆಸರಿನಲ್ಲಿ ಅದನ್ನು ಸಾಕಷ್ಟು ಕಡೆ ಬೆಳೆಸಲಾಗುತ್ತಿದೆ. ಆದರೆ ಅದರಲ್ಲಿ ಔಷಧೀಯ ಗುಣ ಉಳಿದಿಲ್ಲವೆಂದು ಕೆಲವು ವೈದ್ಯರು ನಸುಗುನ್ನಿಯ ಬಳಕೆಯನ್ನೇ ಕೈಬಿಡುತ್ತಿದ್ದಾರೆ. ಇನ್ನು, ಕುಲಾಂತರಿ ತಂತ್ರಜ್ಞಾನಕ್ಕೆ ಮಾನ್ಯತೆ ಸಿಕ್ಕು ಅದು ಬಳಕೆಗೆ ಬಂದಮೇಲೆ ಯಾವ ಯಾವ ಸಸ್ಯಗಳು ತಮ್ಮ ಔಷಧೀಯ ಗುಣಗಳನ್ನು ಕಳೆದುಕೊಳ್ಳುತ್ತವೆಯೊ ಹೇಳುವಂತಿಲ್ಲ.

೩, ೪. ಶಿಕ್ಷಣ ಮಾಲಿನ್ಯ, ಸಾಂಸ್ಕೃತಿಕ ಮಾಲಿನ್ಯ : ತೀರ ಹಿಂದುಳಿದ, ಬುಡಕಟ್ಟು ಜನಾಂಗದವರನ್ನೂ ಸುಶಿಕ್ಷಿತರನ್ನಾಗಿ ಮಾಡುವ ಭರದಲ್ಲಿ, ಕನ್ನಡ ಪಠ್ಯಪುಸ್ತಕಗಳನ್ನೇ ಸೋಲಿಗರ, ಜೇನುಕುರುಬರ, ಹಾಲಕ್ಕಿಗಳ, ಗೌಳಿಗರ ಹಾಗೂ ಮಲೆಕುಡಿಯರ ಮಕ್ಕಳಿಗೂ ಬೋಧಿಸಲಾಗುತ್ತಿದೆ. ಅವರ ಮೂಲಭಾಷೆಯ ಬಳಕೆ ಕಡಿಮೆಯಾಗುತ್ತಿದೆ. ನಿಸರ್ಗದೊಂದಿಗೆ ಸದಾ ಬೆರೆತಿದ್ದ ಬುಡಕಟ್ಟು ಜನರು ತಮ್ಮದೇ ಭಾಷೆಯಲ್ಲಿ ಅದೆಷ್ಟೊ ಗಿಡಮೂಲಿಕೆಗಳನ್ನು, ಗಡ್ಡೆಗೆಣಸುಗಳನ್ನು, ಪ್ರಾಣಿಪಕ್ಷಿಗಳನ್ನು, ಜಲಚರಗಳನ್ನು ಗುರುತಿಸುತ್ತಿದ್ದರು. ಅಂಥವರ ಮಕ್ಕಳು ಶಾಲೆಯಲ್ಲಿ ಬೇರೆಯದೇ ಶಿಕ್ಷಣ ಪಡೆಯುವುದರಿಂದ ನೆಲಮೂಲ ಜ್ಞಾನ ಅವರಲ್ಲಿ ನಶಿಸಿ ಹೋಗುತ್ತಿದೆ. ಭಾಷಾ ವೈವಿಧ್ಯ ನಾಶವಾಗುತ್ತ ಹೋದರೆ ಜೀವಿವೈವಿಧ್ಯವೂ ಕ್ರಮೇಣ ನಾಶವಾಗುತ್ತದೆ. ಕಾಲಬುಡದಲ್ಲೇ ಇದ್ದರೂ ಕಣ್ಣಿಗೆ ಕಾಣದಂತಾಗುತ್ತವೆ. ಹಾಗೆ ಆಗದಂತೆ ಬಿಳಿಗಿರಿರಂಗನ ಬೆಟ್ಟದ ಸೋಲಿಗರ ಮಕ್ಕಳಿಗೆಂದು ಅವರದೇ ಸಂಸ್ಕೃತಿ-ಪರಂಪರೆಯನ್ನು ಆಧರಿಸಿದ ಪಠ್ಯಗಳನ್ನು ರೂಪಿಸಲಾಗಿದ್ದು, ಅದನ್ನೇ ಬೋಧಿಸಲು ಶಿಕ್ಷಣ ಇಲಾಖೆ ಅನುಮತಿ ನೀಡಿದೆ. ಆದರೆ ಇತರ ಬುಡಕಟ್ಟು ಮಕ್ಕಳಿಗೆ ಆ ಅದೃಷ್ಟ ಇಲ್ಲವಾಗಿದೆ.

೫. ನಗರಗಳ ಕಡೆ ವಲಸೆ: ಗ್ರಾಮೀಣ ಕುಶಲ ಕರ್ಮಿಗಳು, ಸೂಲಗಿತ್ತಿಯರು, ನಾಟಿವೈದ್ಯರು, ಕಮ್ಮಾರರು, ಕುಂಬಾರರು, ಮೇದರು ಅವರಿವರೆನ್ನದೆ ಬಹುದೊಡ್ಡ ಪ್ರಮಾಣದಲ್ಲಿ ಹಳ್ಳಿಯ ಜನರು 'ಪರಿಸರ ನಿರಾಶ್ರಿತ'ರಾಗಿ ಪಟ್ಟಣಗಳಿಗೆ ವಲಸೆ ಬರುತ್ತಿದ್ದಾರೆ. ಅವರ ನೆಲಮೂಲ ಜ್ಞಾನವನ್ನೆಲ್ಲ ಅವರು ತ್ಯಜಿಸಿಯೇ ಬರಬೇಕಾಗುತ್ತದೆ. ಒಂದು ಪೀಳಿಗೆಯ ನಂತರ ಅವೆಲ್ಲ ಜ್ಞಾನವೂ ಕಣ್ಮರೆಯಾಗುತ್ತದೆ.

ಪರಭಾರೆಯಾಗುತ್ತಿರುವ ಪರಂಪರಾಗತ ಜ್ಞಾನ
ಶಿಥಿಲವಾಗುವುದು, ನಶಿಸಿಹೋಗುವುದು ಒಂದು ಬಗೆಯ ನಷ್ಟವಾದರೆ, ನಮ್ಮ ಪರಂಪರಾಗತ ಜ್ಞಾನ ಪರಭಾರೆಯಾಗಿ ಯಾವುದೋ ದೇಶದ ಕಂಪನಿಯೊಂದು ಅಂಥ ಜ್ಞಾನದ ಹಕ್ಕುಸ್ವಾಮ್ಯವನ್ನು ಪಡೆಯುವ ಸಂಭವ ದಿನದಿನಕ್ಕೆ ಹೆಚ್ಚುತ್ತಿದೆ. ಅದು ಇನ್ನೊಂದು ಬಗೆಯ ನಷ್ಟವೆಂದೇ ಹೇಳಬೇಕು. ಬೇವು, ಅರಿಶಿಣ, ಬಾಸ್ಮತಿ ಅಕ್ಕಿಗೆ ೧೯೯೫ರಲ್ಲಿ ವಿದೇಶೀ ಪೇಟೆಂಟ್ ಸಿಕ್ಕಿದ್ದು ಗೊತ್ತಾಗಿ ಡಾ. ವಂದನಾ ಶಿವ, ಡಾ. ಸುಮನ್ ಸಹಾಯ್‌ರಂಥ ಕ್ರಿಯಾಶೀಲ ವ್ಯಕ್ತಿಗಳು ಪ್ರಚಾರಾಂದೋಲನ ನಡೆಸಿದ ಪರಿಣಾಮವಾಗಿ ಕೇಂದ್ರ ಸರಕಾರ ಎಚ್ಚೆತ್ತು, ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ಖಟ್ಲೆ ಹಾಕಿ, ಅವು ನಮ್ಮವೇ ಎಂಬುದನ್ನು ಸಾಬೀತುಪಡಿಸಲೆಂದು ಪುರಾಣ ಗ್ರಂಥಗಳ ಉಲ್ಲೇಖಗಳನ್ನು ನೀಡಬೇಕಾಯಿತು. ಬೇವು, ಅರಿಶಿಣಕ್ಕೆ ಅಷ್ಟೆಲ್ಲ ಮಹತ್ವ ಇದೆಯೆಂಬುದು (ಬೇರೆಯವರು ಲಪಟಾಯಿಸಹೊರಟಾಗಲೇ) ನಮ್ಮ ಆಧುನಿಕ ಪ್ರಜೆಗಳಿಗೆ ಮೊದಲ ಬಾರಿ ಗೊತ್ತಾಯಿತು.
ಈ ಬಗೆಯ ನಿಸರ್ಗಜ್ಞಾನ ನಶಿಸಿ ಹೋಗದಂತೆ ಅಥವಾ ಪರಭಾರೆಯಾಗದಂತೆ ತಡೆಯಲೆಂದು ೨೦೦೧ರಲ್ಲಿ ರಾಷ್ಟ್ರೀಯ ಮಟ್ಟದಲ್ಲಿ 'ಪರಂಪರಾಗತ ಜ್ಞಾನಗಳ ಡಿಜಿಟಲ್ ಗ್ರಂಥಾಲಯ' (ಟ್ರೆಡಿಶನಲ್ ನಾಲೆಜ್ ಡಿಜಿಟಲ್ ಲೈಬ್ರರಿ -ಟಿಕೆಡಿಎಲ್) ಎಂಬ ವ್ಯವಸ್ಥೆಯನ್ನು ರೂಪಿಸಲಾಗಿದೆ. ಆಯುರ್ವೇದ, ಯುನಾನಿ, ಸಿದ್ಧ, ಯೋಗವಿದ್ಯೆ ಮತ್ತು ನಿಸರ್ಗ ಚಿಕಿತ್ಸೆಗೆ ಸಂಬಂಧಿಸಿದ ೧೪೮ ಪುರಾತನ ಗ್ರಂಥಗಳಲ್ಲಿರುವ ಮೂರುವರೆ ಕೋಟಿ ಪುಟಗಳಷ್ಟು ಮಾಹಿತಿಗಳನ್ನು ಕಂಪ್ಯೂಟರಿಗೆ ಸೇರಿಸಲಾಗಿದೆ. ಮೂಲ ಸಂಸ್ಕೃತ, ಹಿಂದಿ, ಅರೇಬಿಕ್, ಪರ್ಶಿಯನ್, ಉರ್ದು, ತಮಿಳು ಭಾಷೆಗಳಿಂದ ಇಂಗ್ಲಿಷ್, ಜರ್ಮನ್, ಫ್ರೆಂಚ್, ಸ್ಪ್ಯಾನಿಷ್ ಮತ್ತು ಜಪಾನೀ ಭಾಷೆಗಳಿಗೆ ತರ್ಜುಮೆ ಮಾಡಿಸಿ, ೨೦೦೬ರಲ್ಲಿ ಯುರೋಪ್, ಅಮೆರಿಕ ಮತ್ತು ಆಗ್ನೇಯ ಏಷ್ಯದ ಪ್ರಮುಖ ಪೇಟೆಂಟ್ ಕಚೇರಿಗಳಿಗೆ ಲಭ್ಯವಾಗುವಂತೆ ಮಾಡಲಾಗಿದೆ. ಆದರೆ ಅಷ್ಟರೊಳಗೇ ೧೩೧ ಬಗೆಯ ಯೋಗಾಸನಗಳು ಬೇರೆ ದೇಶಗಳಲ್ಲಿ ಹಕ್ಕುಸ್ವಾಮ್ಯ ಪಡೆದಿದ್ದವು. ಗಿಡಮೂಲಿಕೆಗಳಿಗೆ ಹಾಗೂ ಇತರ ಜ್ಞಾನಶಾಖೆಗಳಿಗೆ ಸಂಬಂಧಿಸಿದಂತೆ ೭೪ ಪೇಟೆಂಟ್‌ಗಳು ಯುರೋಪ್ ಅಮೆರಿಕಗಳಲ್ಲಿ ದಾಖಲಾಗಿದ್ದವು. ಟಿಕೆಡಿಎಲ್‌ನಿಂದಾಗಿ ಅಂಥ ಪೇಟೆಂಟ್‌ಗಳೆಲ್ಲ ಅಸಿಂಧುವೆಂದೂ ಅವೆಲ್ಲ, ಮೂಲತಃ ಭಾರತೀಯವೇ ಎಂದೂ ಸಾಬೀತಾಗಿವೆ.

ಇದು ಶ್ಲಾಘನೀಯವೇ ಹೌದಾದರೂ ಇವೆಲ್ಲ ನಮ್ಮ ಲಿಖಿತ ಪರಂಪರೆಗೆ ಸಂಬಂಧಿಸಿದವಾಗಿವೆ. ಸಸ್ಯಜ್ಞಾನ ಅನ್ನಿ, ವೃಕ್ಷಾಯುರ್ವೇದ ಅನ್ನಿ, ವೈದ್ಯವಿಜ್ಞಾನ ಅನ್ನಿ, ಜ್ಯೋತಿರ್ವಿಜ್ಞಾನ ಅನ್ನಿ, ಲೋಹಶಾಸ್ತ್ರವೆನ್ನಿ, ನಾಡಿಶಾಸ್ತ್ರವೆನ್ನಿ ಅವುಗಳಲ್ಲಿ ಕೆಲವಷ್ಟು ಆರ್ಯರ ಆಗಮನದೊಂದಿಗೆ ನಮ್ಮ ಸಂಸ್ಕೃತಿಯಲ್ಲಿ ಸೇರಿವೆ. ಕೆಲವು ಹಂತದವರೆಗೆ ಅವು ಶಿಸ್ತಿನ ಜ್ಞಾನವಾಗಿ, ಲಿಖಿತರೂಪದಲ್ಲೂ ಸಾಹಿತ್ಯಕ್ಕೆ ಸೇರ್ಪಡೆಯಾಗಿವೆ. ಇನ್ನು ಕೆಲವು ನೆಲಮೂಲ ಜ್ಞಾನಗಳು ವಿಶೇಷವಾಗಿ ಬುಡಕಟ್ಟು ಜನಾಂಗದ ಮೌಖಿಕ ಜ್ಞಾನ ಪರಂಪರೆಗಳು ಅಕ್ಷರ ರೂಪದಲ್ಲಿ ಇಲ್ಲವೆ ಡಿಜಿಟಲ್ ರೂಪದಲ್ಲಿ ದಾಖಲಾಗಿಲ್ಲ. ಅವುಗಳನ್ನು ಆದಷ್ಟು ಶೀಘ್ರವಾಗಿ, ವ್ಯವಸ್ಥಿತವಾಗಿ ದಾಖಲಿಸದೇ ಇದ್ದರೆ ನಮ್ಮ ಪರಂಪರಾಗತ ಜ್ಞಾನವೆಲ್ಲ ಒಂದೋ ನಶಿಸಿಹೋಗುತ್ತವೆ, ಇಲ್ಲವೆ ಕಳ್ಳಮಾರ್ಗದ ಮೂಲಕ ಪರಭಾರೆಯಾಗುತ್ತವೆ. ಇಂಥ ಒಂದು ತಳಿಚೌರ್ಯದ ಕೆಲಸ ನಮ್ಮ ನಾಡಿನಲ್ಲೇ, ನಮ್ಮ ವಿಜ್ಞಾನಿಗಳ ನೆರವಿನಿಂದಲೇ ನಡೆದಿದೆ: ಉಡುಪಿಯ 'ಮುಟ್ಟುಗುಳ್ಳ' ಹೆಸರಿನ ಬದನೆಯ ತಳಿಯನ್ನು ಅಮೆರಿಕ ಮೂಲದ ಮೊನ್ಸಾಂಟೊ ಕಂಪನಿ ಹಾಗೂ ಅದರ ಭಾರತೀಯ ಪಾಲುದಾರ 'ಮಹಿಕೊ' ಕಂಪನಿಗಳು ಎತ್ತಿತಂದು ನಮ್ಮದೇ ಕೃಷಿ ವಿಶ್ವವಿದ್ಯಾಲಯದ ತಜ್ಞರ ಸಹಕಾರದಿಂದ ಕುಲಾಂತರಿ ತಳಿಯನ್ನಾಗಿ ಮಾರ್ಪಡಿಸಿದರು. ಭಾರತ ಸರಕಾರದ ಜೀವಿವೈವಿಧ್ಯ ಅಧಿನಿಯಮ ೨೦೦೨ರ ಪ್ರಕಾರ ಹಾಗೆಲ್ಲ ಅನುಮತಿ ಇಲ್ಲದೆ ವಾಣಿಜ್ಯ ಉದ್ದೇಶಕ್ಕಾಗಿ ನಮ್ಮ ಜೈವಿಕ ಸಂಪತ್ತನ್ನು ಎತ್ತಿ ಬಳಸುವುದು ಕಾನೂನಿನ ದೃಷ್ಟಿಯಲ್ಲಿ ಅಪರಾಧವೆನಿಸುತ್ತದೆ. ಆದ್ದರಿಂದಲೇ ಕರ್ನಾಟಕದ ಜೀವಿ ವೈವಿಧ್ಯ ಮಂಡಳಿ ಮುಟ್ಟುಗುಳ್ಳದ ತಳಿ ಮಾರ್ಪಾಟಿಗೆ ಕೈಹಾಕಿದ ಕಂಪನಿಗಳ ಮೇಲೆ, ವಿಜ್ಞಾನಿಗಳ ಮೇಲೆ ಖಟ್ಲೆ ಹಾಕಿದೆ. ಪ್ರಕರಣ ಇದೀಗ ನ್ಯಾಯಾಲಯದಲ್ಲಿದೆ. ಮುಟ್ಟುಗುಳ್ಳ ಅಥವಾ ಅಂಥ ಅನೇಕಾನೇಕ ನಾಟಿ ತರಕಾರಿಗಳ ಬಗ್ಗೆ ನಮ್ಮ ಪುರಾತನ ಗ್ರಂಥಗಳಲ್ಲಿ ಉಲ್ಲೇಖವೇ ಇರಲಿಕ್ಕಿಲ್ಲ. ಅಂಥ ಹಣ್ಣು-ತರಕಾರಿಗಳ ಅಥವಾ ಔಷಧಮೂಲಿಕೆಗಳ ಮಹತ್ವ ಏನೆಂಬುದು ಗ್ರಾಮೀಣ ನಿವಾಸಿಗಳಿಗೆ ಅದರಲ್ಲೂ ಹೆಚ್ಚಿನ ಪಾಲು ಮಹಿಳೆಯರ ಮೂಲಕ ಪೀಳಿಗೆಯಿಂದ ಪೀಳಿಗೆಗೆ ಪರಂಪರಾಗತವಾಗಿ ಮೌಖಿಕವಾಗಿ ಬಂದ ಜ್ಞಾನವೇ ಆಗಿದೆ. ಇಂಥ ಮೌಖಿಕ ಜ್ಞಾನವನ್ನೂ ದಾಖಲಿಸಬೇಕೆಂದು ರಾಷ್ಟ್ರೀಯ ಜೀವಿವೈವಿಧ್ಯ ಮಂಡಲಿ ನಿರ್ಧರಿಸಿದೆ. ನಿಸರ್ಗದ ಮಡಿಲಲ್ಲಿರುವ ಎಲ್ಲ ಬಗೆಯ ಜೈವಿಕ ಸಂಪತ್ತಿನ ದಾಖಲೀಕರಣ ಆಗಬೇಕೆಂದು ನಿರ್ಣಯಿಸಲಾಗಿದೆ. ಕರ್ನಾಟಕದ ಜೀವಿವೈವಿಧ್ಯ ಮಂಡಲಿಯೂ ರಾಜ್ಯದ ಪ್ರತಿಯೊಂದು ಪಂಚಾಯತದಲ್ಲೂ ಜೀವಿವೈವಿಧ್ಯ ಸಮಿತಿಯೊಂದು ಇರಬೇಕೆಂದೂ ಅದು ತನ್ನ ವ್ಯಾಪ್ತಿಯ ಎಲ್ಲ ಜೀವಸಂಪತ್ತನ್ನೂ ದಾಖಲಿಸಿ ವರ್ಗೀಕರಿಸಬೇಕೆಂದೂ ಆದೇಶ ನೀಡಿದೆ. ಆದರೆ ಪಂಚಾಯ್ತಿ ಮಟ್ಟದಲ್ಲಿ ಸಸ್ಯಗಳ ಶಾಸ್ತ್ರೀಯ ಜ್ಞಾನದ ಅಭಾವ, ವನ್ಯ ಪ್ರಾಣಿಪಕ್ಷಿಗಳ, ಜೇನುಜೀರುಂಡೆಗಳ ಸಮೀಕ್ಷೆ ನಡೆಸಬಲ್ಲ ಪರಿಣತರ ಅಭಾವದಿಂದಾಗಿ ಬಹಳಷ್ಟು ಪಂಚಾಯಿತಿಗಳಲ್ಲಿ ಈ ಸಮಿತಿಗಳು ಕಾರ್ಯರೂಪಕ್ಕೆ ಬಂದಿಲ್ಲ; ದಾಖಲೀಕರಣ ನಡೆಯುತ್ತಿಲ್ಲ. ಈ ದೃಷ್ಟಿಯಿಂದ ಕನ್ನಡ ವಿಶ್ವವಿದ್ಯಾಲಯ 'ದೇಸೀ ವಿಜ್ಞಾನ' ವಿಭಾಗವನ್ನು ಆರಂಭಿಸುತ್ತಿರುವುದು ಸಮಯೋಚಿತವೇ ಸರಿ. ನಮ್ಮ ನೆಲದ ಮೌಖಿಕ ಜ್ಞಾನವನ್ನು ದಾಖಲಿಸುವ ನಿಟ್ಟಿನಲ್ಲಿ ಕನ್ನಡ ವಿಶ್ವವಿದ್ಯಾಲಯದ ಕರ್ನಾಟಕದ ಜೀವಿವೈವಿಧ್ಯ ಮಂಡಲಿಯ ಜೊತೆಗೆ ಕೈಜೋಡಿಸಬಹುದಾಗಿದೆ.

ಜ್ಞಾನ ಮತ್ತು ವಿಜ್ಞಾನದ ಜಿಜ್ಞಾಸೆ 
'ದೇಸೀ ವಿಜ್ಞಾನ' ಎಂಬ ಹೆಸರಿನೊಂದಿಗೆ ಹೊಸ ವಿಭಾಗವೊಂದು ಆರಂಭವಾದಾಗ ನಮ್ಮ ನೆಲದಲ್ಲಿನ 'ಜ್ಞಾನ' ಯಾವುದು, 'ವಿಜ್ಞಾನ' ಯಾವುದು, 'ತಂತ್ರಜ್ಞಾನ' ಯಾವುದು ಎಂಬುದನ್ನು ಪ್ರತ್ಯೇಕಿಸಿ ನೋಡುವ ಜಟಿಲ ಸಮಸ್ಯೆಯೊಂದು ಎದುರಾಗುತ್ತದೆ. ಉದಾಹರಣೆಗೆ, ಕೇರಳದ ಕಾಣಿ ಬುಡಕಟ್ಟಿನ ಜನರು 'ಆರೋಗ್ಯ ಪಚ್ಚ' ಎಂಬ ಸಸ್ಯ.ವನ್ನು ಶಕ್ತಿವರ್ಧನೆಗಾಗಿ ಅನಾದಿ ಕಾಲದಿಂದ ಬಳಸುತ್ತಿದ್ದರು. ೧೯೮೭ರಲ್ಲಿ ಲಖ್ನೋದ ಸಸ್ಯವಿಜ್ಞಾನ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಪುಷ್ಪಾಂಗದನ್ ಎಂಬ ವಿಜ್ಞಾನಿ ಕೇರಳದ ಅಗಸ್ತ್ಯಮಲೈ ಪರ್ವತಶ್ರೇಣಿಯಲ್ಲಿ ಸಮೀಕ್ಷೆ ಕೈಗೊಂಡಿದ್ದರು. ಅವರಿಗೆ ದಾರಿ ತೋರಿಸಲೆಂದು ಬಂದು ಕಾಣಿ ಬುಡಕಟ್ಟಿನ ಯುವಕನೊಬ್ಬ ಅಲ್ಲಿ ಇಲ್ಲಿ ಸಿಕ್ಕ ಈ ಮೂಲಿಕೆಯನ್ನು ಅಗಿಯುತ್ತ ಬೇರೇನೂ ತಿನ್ನದೆ ದಿನಗಳೆಯುತ್ತಿರುವುದು ವಿಜ್ಞಾನಿಯ ಗಮನಕ್ಕೆ ಬಂತು. ಆ ಮೂಲಿಕೆಯನ್ನು ಪ್ರಯೋಗಶಾಲೆಗೆ ಕೊಂಡೊಯ್ದು ವಿಶ್ಲೇಷಣೆ ಮಾಡಿ ನೋಡಿದಾಗ ಅದರಲ್ಲಿ ಅಪರೂಪದ ಶಕ್ತಿವರ್ಧಕ ರಸಾಯನಗಳಿದ್ದುದು ಪತ್ತೆಯಾಯಿತು. ಹೊರ ಜಗತ್ತಿಗೆ ಗೊತ್ತೇ ಇರದ ಈ ವಿಶಿಷ್ಟ ಸಸ್ಯಕ್ಕೆ 'ಆರೋಗ್ಯ ಪಾಚ್ಚಾ' ಎಂದು ಕರೆದು ಅದನ್ನು ಮಾರುಕಟ್ಟೆಗೆ ಕೊಂಡೊಯ್ಯುವಂತೆ ಹಾಗೂ ಅದರಿಂದ ಬರುವ ಧನರಾಶಿಯೆಲ್ಲ ಆ ಬುಡಕಟ್ಟು ಸಮುದಾಯಕ್ಕೇ ಲಭಿಸುವಂತೆ ವ್ಯವಸ್ಥೆ ಮಾಡಲಾಯಿತು. ೨೦೦೨ರಲ್ಲಿ ವಿಶ್ವಸಂಸ್ಥೆ ಅದೇ ತಾನೆ ಆರಂಭಿಸಿದ ೩೦ ಸಾವಿರ ಡಾಲರ್‌ಗಳ 'ಈಕ್ವೇಟರ್ ಇನಿಶಿಯೇಟಿವ್ ಬಹುಮಾನ' ಕೂಡ ಈ ಯೋಜನೆಯನ್ನು ಜಾರಿಗೆ ತಂದ ಬುಡಕಟ್ಟು ಮಂಡಲಿಗೆ ಲಭಿಸಿತು.

ಈ ಉಲ್ಲೇಖನೀಯ ಪ್ರಸಂಗದಲ್ಲಿ ಬೆಳಕಿಗೆ ಬಂದಿದ್ದು ಕಾಣಿ ಜನಾಂಗದ ಜ್ಞಾನವೊ, ವಿಜ್ಞಾನವೊ? ಇದು ತತ್ತ್ವಶಾಸ್ತ್ರದ ಪ್ರಮಾಣ-ಪ್ರಮೇಯ ವಿಚಾರಕ್ಕೆ (ಎಪಿಸ್ಟೆಮಾಲಜಿಗೆ) ಸಂಬಂಧಿಸಿದ ಪ್ರಶ್ನೆಯಾದರೂ ಆರೋಗ್ಯ ಪಾಚ್ಚಾದಲ್ಲಿ ಶಕ್ತಿವರ್ಧಕ ಗುಣಗಳಿವೆ ಎಂಬುದನ್ನು ಪರಂಪರಾಗತ ಜ್ಞಾನವೆಂದೇ ಹೇಳಬೇಕೆ ವಿನಾ ವಿಜ್ಞಾನವೆಂದು ಪರಿಗಣಿಸುವಂತಿಲ್ಲ. ಅಂದಮಾತ್ರಕ್ಕೇ ಅದು 'ವಿಜ್ಞಾನ' ಅಲ್ಲವೆಂಬ ಕಾರಣವನ್ನು ನೀಡಿ 'ದೇಸೀ ವಿಜ್ಞಾನ ವಿಭಾಗ'ದ ವ್ಯಾಪ್ತಿಯಿಂದ ಹೊರಗಿಡುವುದೂ ಸರಿಯಾಗುವುದಿಲ್ಲ. ಪರಂಪರೆಯಲ್ಲೇ ಸೇರಿಹೋದ, ಆದರೆ ವೈಜ್ಞಾನಿಕ ಮಹತ್ವ ಗೊತ್ತಿಲ್ಲದೆ ಅಥವಾ ಮರೆಯಾಗಿಯೇ ಇರುವ ಅನೇಕ ವೈಜ್ಞಾನಿಕ ಸಂಗತಿಗಳನ್ನು ನಾವು ಇಂದಿನ ಸಮಾಜದಲ್ಲಿ ಕಾಣುತ್ತೇವೆ. ಕುಷ್ಟಗಿಯ ಅಂಕ್ಲೀಮಠದ ಜಾತ್ರೆಯಲ್ಲಿ ನಡೆಯುವ ಒಂದು ವಿಶಿಷ್ಟ ಕಾರ್ಯಾಚರಣೆಯನ್ನು ನಾವಿಲ್ಲಿ ಉದಾಹರಣೆಯಾಗಿ ಕೊಡಬಹುದು. ಅಲ್ಲಿ ಜಾತ್ರೆಗೆಂದು ರೈತಾಪಿ ಜನರೆಲ್ಲ ಬರುವಾಗ ತಮ್ಮ ನೆಲದಲ್ಲಿ ಬೆಳೆದ ಒಂದರ್ಧ ಕಿಲೊ ಜೋಳ ಅಥವಾ ಸೆಜ್ಜೆಯನ್ನು ಬಟ್ಟೆಯಲ್ಲಿ ಕಟ್ಟಿತಂದು ಅಲ್ಲಿಟ್ಟ ಬಿದಿರಿನ ಬುಟ್ಟಿಗೆ ಹಾಕುತ್ತಾರೆ. ಜಾತ್ರೆ ಮುಗಿಸಿ ಮರಳಿ ಹೋಗುವ ಸಂದರ್ಭದಲ್ಲಿ ಅದೇ ಬುಟ್ಟಿಯಲ್ಲಿ ಸೇರಿರುವ ಎಲ್ಲ ಬಗೆಯ ಕಾಳನ್ನೂ ಮಿಶ್ರಣ ಮಾಡಿ, ದೇವರ ಪ್ರಸಾದವೆಂದು ತಂತಮ್ಮ ಉಡಿಯಲ್ಲಿ ಇಷ್ಟಿಷ್ಟು ಸುರಿದುಕೊಂಡು ಮರಳಿ ಕೊಂಡೊಯ್ಯುತ್ತಾರೆ. ತಮ್ಮ ಹೊಲದಲ್ಲಿ ಬಿತ್ತನೆ ಮಾಡುತ್ತಾರೆ. ದೂರದ ಊರುಗಳಿಂದ ಬಂದ ಜನರು ಹೀಗೆ ಪರಸ್ಪರ ತಳಿ ವಿನಿಮಯ ಮಾಡಿಕೊಂಡಾಗ ತಳಿ ವೈವಿಧ್ಯ ಹೆಚ್ಚುತ್ತದೆ. ಒಂದೇ ತಳಿಯ ಬೆಳೆಗಳು ಹೊಲದ ತುಂಬಾ ಇದ್ದರೆ ರೋಗರುಜಿನೆಗಳ, ಶಿಲೀಂಧ್ರಗಳ, ಕೀಟಗಳ ದಾಳಿಯ ಸಂಭವ ಹೆಚ್ಚಿಗೆ ಇರುತ್ತದೆ ಎಂಬುದನ್ನು ಆಧುನಿಕ ವಿಜ್ಞಾನ ಕೂಡ ಹೇಳುತ್ತದೆ. ಅಂಥ ಅಪಾಯವನ್ನು ಎದುರಿಸಲು ಬೇಕಾದ ತಂತ್ರವೊಂದು ಜಾತ್ರೆಯ ಸಂಪ್ರದಾಯದಲ್ಲೇ ಸೇರಿಹೋಗಿ, ಅದು ವಿಜ್ಞಾನ ಅಲ್ಲವೇನೊ ಎಂಬಂತೆ ಅವಗಣನೆಗೆ ತುತ್ತಾಗುವ ಸಂಭವ ಇರುತ್ತದೆ. ಹಿಂದಿನ ಕಾಲಕ್ಕೆ ಸೇರಿಹೋಗಿರುವ ಅಂಥ ಸಂಪ್ರದಾಯಗಳನ್ನು ಪೃಥಕ್ಕರಿಸಿ ನೋಡಿ, ಪರಂಪರೆಯಲ್ಲಿ ಅವಿತಿರುವ ವಿಜ್ಞಾನವನ್ನು ಹೊರಗೆಳೆದು ನೋಡುವ ವಿಶೇಷ ಪರಿಣತಿಯನ್ನು ಕನ್ನಡ ವಿಶ್ವವಿದ್ಯಾಲಯದಲ್ಲಿ ರೂಪಿಸಬೇಕಾದ ಅಗತ್ಯವಿದೆ.  

ಹಾಗೆಂದು ಕೇವಲ ಪರಂಪರೆಯಲ್ಲಿ, ರೂಢಿಗತವಾಗಿ ಬಂದ ಆಚರಣೆಗಳನ್ನು ಮಾತ್ರ ಹೆಕ್ಕಿ ದಾಖಲಿಸಿದರೆ ಸಾಲದು. ಸಮಕಾಲೀನ 'ದೇಸೀ ವಿಜ್ಞಾನ'ವನ್ನೂ ಕನ್ನಡ ವಿಶ್ವವಿದ್ಯಾಲಯ ಪರಿಗಣಿಸಬೇಕಿದೆ. ಆಧುನಿಕ 'ವಿಜ್ಞಾನ' ಎಂದರೆ, ವಿಶ್ವವಿದ್ಯಾಲಯಗಳಲ್ಲಿ ಪದವಿ ಪಡೆದು ಪಿಎಚ್‌ಡಿ ಮಾಡಿರುವವರಷ್ಟೇ ನಡೆಸುವ ಶಿಸ್ತಿನ ಸಂಶೋಧನೆ ಎಂಬ ಅಭಿಪ್ರಾಯ ನಮ್ಮಲ್ಲಿ ತಳವೂರಿದೆ. ಅಂಥ ಮಿಥ್ಯಾಭಿಪ್ರಾಯಗಳನ್ನು ಸುಳ್ಳು ಮಾಡಬಲ್ಲ ಜನಸಾಮಾನ್ಯರ ಸಂಶೋಧನೆಗಳತ್ತ ಕಣ್ಣುಹಾಯಿಸಬೇಕಾದ ಕೆಲಸವನ್ನೂ ಕನ್ನಡ ವಿಶ್ವವಿದ್ಯಾಲಯ ಕೈಗೊಳ್ಳಬೇಕಿದೆ.

ನಿಂಬೆಗುಂದಿಯ ಹತ್ತಿ, ಗನೀಖಾನರ ತಳಿಖಜಾನೆ
ಈಗಿನ ಕಾಲದ 'ದೇಸೀ ವಿಜ್ಞಾನ' ಯಾವುದು? ಅದಕ್ಕೆ ಸಾಕಷ್ಟು ಉದಾಹರಣೆಗಳು ಗ್ರಾಮೀಣ ಜಗತ್ತಿನಲ್ಲಿ ಸಿಗುತ್ತವೆ. ಕೂಲಿಗಳ ಅಭಾವದಿಂದ ತತ್ತರಿಸಿದ ರೈತರು ನಾನಾ ಬಗೆಯ ಹೊಸ ಹೊಸ ತಂತ್ರಜ್ಞಾನವನ್ನು ರೂಪಿಸಿಕೊಳ್ಳುತ್ತಿದ್ದಾರೆ. ಬೆಳೆ ರಕ್ಷಣೆ, ದೇಸೀ ತಳಿ ಸಂರಕ್ಷಣೆಗೆ ಗ್ರಾಮೀಣ ಮಟ್ಟದಲ್ಲೂ ಆದ್ಯತೆ ಸಿಗುತ್ತಿದೆ. ರೈತರೇ ಹೊಸ ಹೊಸ ಸಂಕರ ತಳಿಗಳನ್ನು ಸೃಷ್ಟಿಸತೊಡಗಿದ್ದಾರೆ. 'ಮೈಸೂರು ಮಲ್ಲಿಗೆ' ಹೆಸರಿನ ಭತ್ತದ ತಳಿಯನ್ನು ರೂಪಿಸಿದ ಚನ್ನಪಟ್ಟಣದ ರೈತ ಲಿಂಗಮಾದಯ್ಯ, 'ಎನ್‌ಎಮ್‌ಎಸ್೨' ಹೆಸರಿನ ಮತ್ತೊಂದು ಹೊಸ ತಳಿಯನ್ನು ಬಿಡುಗಡೆ ಮಾಡಿದ ನರ್ಸೀಪುರದ ಶಂಕರ್‌ಗುರು ಇವರೆಲ್ಲ ಕೃಷಿವಿಜ್ಞಾನಿಗಳಿಂದಲೇ ಸೈ ಎನ್ನಿಸಿಕೊಂಡಿದ್ದಾರೆ. ತಳಿಸಂರಕ್ಷಣೆಯ ಕೆಲಸದಲ್ಲಂತೂ ಪೈಪೋಟಿಯಲ್ಲಿ ಹಿರೇಕೆರೂರಿನ ನಾಗಪ್ಪ ನಿಂಬೆಗುಂದಿ, ಕಿರುಗಾವಲಿನ ಸೈಯದ್ ಗನೀಖಾನ್ ಮುಂತಾದವರು ಹೆಚ್ಚು ಹೆಚ್ಚು ತಳಿಗಳ ರಕ್ಷಣೆಯ ಹೊಣೆ ಹೊರುತ್ತಿದ್ದಾರೆ. ನಿಂಬೆಗುಂದಿ ಬಿಟಿ ಹತ್ತಿಯ ಹಾವಳಿಯನ್ನು ಎದುರಿಸಲೆಂದು ತಮ್ಮ ಹೊಲದಲ್ಲಿ ದೇಸೀ ಹತ್ತಿಯ ೪೦ ತಳಿಗಳನ್ನು, ಕಿರುಧಾನ್ಯಗಳ ೬೦ಕ್ಕೂ ಹೆಚ್ಚು ತಳಿಗಳನ್ನು, ಸೊಪ್ಪು ತರಕಾರಿಯ ೨೦-೩೦ ಜಾತಿಯನ್ನು ತಮ್ಮಲ್ಲಿ ಸಂರಕ್ಷಿಸಿದ್ದಾರೆ. ಯಾವ ಕೃಷಿ ವಿಶ್ವವಿದ್ಯಾಲಯಕ್ಕೂ ಕಮ್ಮಿ ಇಲ್ಲದಂತೆ ಗನಿಖಾನ್ ತಮ್ಮ ಜಮೀನಿನಲ್ಲಿ ಟಿಪ್ಪೂ ಕಾಲದ ೧೨೦ ಮಾವಿನ ತಳಿಗಳಲ್ಲದೆ ೭೨೦ಕ್ಕೂ ಹೆಚ್ಚು ಬಗೆಯ ಭತ್ತದ ತಳಿಗಳ ಸಂರಕ್ಷಕರಾಗಿದ್ದಾರೆ. ವಿಜ್ಞಾನಿಗಳಲ್ಲಿ ಕಾಣಬೇಕಾದ ಎಲ್ಲ ಶಿಸ್ತು, ದಾಖಲೀಕರಣ, ತಳಿಶುದ್ಧಿ ಪರೀಕ್ಷೆಗಳನ್ನು ಇವರೂ ಮಾಡುತ್ತಾರೆ. ಇವರ ಯತ್ನಗಳಿಗೆ ಕೈಜೋಡಿಸಲೆಂದು ದೇಶದ ವಿವಿಧ ರಾಜ್ಯಗಳ ಗ್ರಾಮೀಣ ತಳಿರಕ್ಷಕರು ತಮ್ಮಲ್ಲಿರುವ ವಿವಿಧ ಬಗೆಯ ತಳಿಗಳನ್ನು ಇವರಿಗೆ ಉಚಿತವಾಗಿ ತಂದುಕೊಡುತ್ತಿದ್ದಾರೆ. ಒಂದರ್ಥದಲ್ಲಿ ಗನಿಖಾನ್‌ಗಳು, ನಿಂಬೆಗುಂದಿಗಳು ತಳಿಖಜಾನೆಯನ್ನೇ ರೂಪಿಸುತ್ತಿದ್ದಾರೆ. ವರ್ಷವರ್ಷವೂ ಇವರ ತಳಿಖಜಾನೆ ದೊಡ್ಡದಾಗುತ್ತಿದೆ. ಬ್ರಿಟನ್ನಿನ ಕೀವ್ ಸಸ್ಯೋದ್ಯಾನದಲ್ಲಿ ಅಥವಾ ಫಿಲಿಪ್ಪೀನ್ಸ್‌ನ ಭತ್ತದ ತಳಿಸಂಗ್ರಹಾಲಯದಲ್ಲಿ ಆಧುನಿಕ ಸಸ್ಯವಿಜ್ಞಾನಿಗಳು ಮಾಡುತ್ತಿರುವ ಕೆಲಸವನ್ನು ಸದ್ದಿಲ್ಲದೆ ನಮ್ಮ ಗ್ರಾಮೀಣ ಉತ್ಸಾಹಿಗಳು ಕೈಗೊಂಡಿದ್ದಾರೆ. ಅವರ ಯತ್ನಗಳನ್ನು ದಾಖಲಿಸಬೇಕಾಗಿದೆ. ಇದಲ್ಲದೆ, ಆಧುನಿಕ ಕೀಟನಾಶಕ, ಕ್ರಿಮಿನಾಶಕ ಕೆಮಿಕಲ್‌ಗಳ ಅಪಾಯದಿಂದ ಬೇಸತ್ತು ರಾಜ್ಯಾದ್ಯಂತ ನೂರಾರು ರೈತರು ಬದಲೀ ಸುರಕ್ಷಿತ ರೋಗನಿಯಂತ್ರಕ ಸಾವಯವ ದ್ರವ್ಯಗಳನ್ನು ರೂಪಿಸುತ್ತಿದ್ದಾರೆ. ಕೃಷಿ ವಿಶ್ವವಿದ್ಯಾಲಯದಲ್ಲಿರುವಂತೆ ವಿಸ್ತರಣಾ ವ್ಯವಸ್ಥೆ ಇಲ್ಲದಿರುವುದರಿಂದ ಇಂಥ ಖಾಸಗೀ ವಿಜ್ಞಾನಿಗಳ ಯಶಸ್ವೀ ವಿಧಾನಗಳು ನಿರೀಕ್ಷಿತ ಪ್ರಮಾಣದಲ್ಲಿ ಪ್ರಚಾರಕ್ಕೆ ಬಾರದೆ ಮೂಲೆಗುಂಪಾಗುವ ಸಂಭವ ಇದೆ. ಕನ್ನಡ ವಿಶ್ವವಿದ್ಯಾಲಯ ಇಂಥವುಗಳನ್ನು ದಾಖಲಿಸಿ ಬೆಳಕಿಗೆ ತಂದರೆ ಕನ್ನಡ ರೈತ ಸಮುದಾಯಕ್ಕೆ ಹಾಗೂ ಆಮೂಲಕ ಇಡೀ ಸಮಾಜಕ್ಕೆ ಅದೊಂದು ಮಹತ್ವದ ಕೊಡುಗೆಯಾಗುತ್ತದೆ.

ವಿಜ್ಞಾನ, ಅದು ಆಧುನಿಕದ್ದಾಗಿರಲಿ, ದೇಸೀ ಆಗಿರಲಿ -ಅದರ ಬಹುಮುಖ್ಯ ಲಕ್ಷಣ ಏನಿರಬೇಕೆಂದರೆ ತನ್ನನ್ನೆ ಕಾಲಕಾಲಕ್ಕೆ ಅದು ಪರೀಕ್ಷೆಗೆ ಒಡ್ಡಿಕೊಳ್ಳುತ್ತಿರಬೇಕು. ಹಳೆಯ ನಂಬಿಕೆಗಳು, ಹಳೆಯ ಸಂಪ್ರದಾಯಗಳು ಆಗಿನ ಕಾಲಕ್ಕೆ ಅದೆಷ್ಟೇ ವೈಜ್ಞಾನಿಕವೆನಿಸಿದರೂ ಈಗಿನ ಪರಿಸ್ಥಿತಿಯಲ್ಲಿ ಅವು ಅವೈಜ್ಞಾನಿಕವೆನಿಸಿದರೆ ಅದನ್ನೂ ಎತ್ತಿ ತೋರಿಸುವ ಪರಿಜ್ಞಾನವನ್ನು ನಾವು ಬೆಳೆಸಿಕೊಳ್ಳಬೇಕಾಗುತ್ತದೆ. ಮಲೆನಾಡಿನ ಅನೇಕ ಹಳ್ಳಿಗಳ ಹಳ್ಳಕೊಳ್ಳಗಳಲ್ಲಿ ಮೀನು ಹಿಡಿಯಲೆಂದು ಕಾಸರಕ (ನಕ್ಸ್‌ವೋಮಿಕಾ), ಕಾರೆಕಾಯಿಗಳನ್ನು ಜಜ್ಜಿ ನೀರಿಗೆ ಹಾಕುತ್ತಾರೆ. ಕೊಳ್ಳದ ನೂರಿನ್ನೂರು ಮೀಟರ್ ದೂರದವರೆಗಿನ ಎಲ್ಲ ಜಲಜೀವಿಗಳೂ ಸತ್ತು ಇಲ್ಲವೆ ಪ್ರಜ್ಞೆ ತಪ್ಪಿ ನೀರಿನ ಮೇಲೆ ತೇಲುತ್ತವೆ. ಮೀನುಗಳನ್ನು ಮಾತ್ರ ಎತ್ತಿ ಅಡುಗೆಗೆ ಒಯ್ಯುತ್ತಾರೆ; ಇತರ ಅನೇಕ ಜಲಜೀವಿಗಳು, ದ್ವಿಚರಿಗಳು ಉಸಿರುಗಟ್ಟಿ ನಿರರ್ಥಕವಾಗಿ ಸಾವಪ್ಪುತ್ತವೆ. ಹಿಂದಿನ ಕಾಲದಲ್ಲಿ ವರ್ಷವಿಡೀ ತೊರೆಯಲ್ಲಿ ನೀರು ಹರಿಯುತ್ತಿದ್ದಾಗ ಇಂಥ ಘಾತುಕ ಕೆಲಸಗಳನ್ನು ನಿಸರ್ಗ ಹೇಗೊ ಸಹಿಸಿಕೊಳ್ಳುತ್ತಿತ್ತು. ವಿಷದ ನೀರು ಹೊರಟು ಹೋದನಂತರದ ಹೊಸ ನೀರಿನಲ್ಲಿ ಜೀವಿಗಳ ಮರುಭರ್ತಿ ಆಗುತ್ತಿತ್ತು. ಯಾವ ಸಸ್ಯದಲ್ಲಿ ಎಷ್ಟು ಉಗ್ರ ವಿಷವಿದೆ ಎಂಬ ಅಂದಿನ ಗ್ರಾಮೀಣ ಸಸ್ಯಜ್ಞಾನಕ್ಕೆ ಗೌರವ ಕೊಡೋಣ. ಆದರೆ ಈಗಿನ ದಿನಗಳಲ್ಲಿ ಹೀಗೆ ನದಿಧಾರೆಗೇ ವಿಷವಿಟ್ಟು ಮೀನು ಹಿಡಿಯುವುದು ಅವೈಜ್ಞಾನಿಕ ಕ್ರಮವೆಂದೇ ವಿಶ್ಲೇಷಿಸಬೇಕಾಗುತ್ತದೆ. ಅದೇರೀತಿ,  ಕೆಲವು ಬಗೆಯ ಹುಲ್ಲಿನ ಬೀಜಗಳು ಬೆಂಕಿಯ ಝಳಕ್ಕೆ ಸಿಕ್ಕು ಹೊರಗಿನ ಸಿಪ್ಪೆ ಭಾಗಶಃ ಸುಟ್ಟುಹೋದರೆ ಮಾತ್ರ ಮೊಳಕೆ ಒಡೆಯುತ್ತವೆ. ಹಾಗೆ ಸುಟ್ಟರೆ ಹುಲ್ಲು ಚೆನ್ನಾಗಿ ಬರುತ್ತದೆಂಬ ಜ್ಞಾನವನ್ನು ಮೆಚ್ಚಬೇಕಾದದ್ದೇ. ಆದರೆ ಹುಲ್ಲು ಚೆನ್ನಾಗಿ ಬರಲೆಂದು ಕಾಡಿನಂಚಿನ ಗೋಮಾಳಕ್ಕೆ ಬೆಂಕಿಕೊಡುವ ಪರಂಪರೆ ಅನೇಕ ಕಡೆ ಚಾಲ್ತಿಯಲ್ಲಿದೆ. ಅದೆಷ್ಟೊ ಬಾರಿ ಪಕ್ಕದ ಅರಣ್ಯಗಳಿಗೆ ಬೆಂಕಿ ಆವರಿಸಿ ಇಡಿ ಇಡೀ ಕಾಡನ್ನೇ ಸುಟ್ಟುಹಾಕಿದ್ದೂ ಇದೆ. ಗೋಮಾಳಕ್ಕೆ ಬೆಂಕಿಕೊಡುವ ಪರಂಪರಾಗತ ಕ್ರಮಗಳನ್ನು ಈಗಿನ ಕಾಲದಲ್ಲಿ ಅವೈಜ್ಞಾನಿಕ ಎಂದೇ ಹೇಳಬೇಕಾಗುತ್ತದೆ.

ಹಿಂದಿನವರ ಅರಿವಿನ ಇತಿಮಿತಿಗಳು
ನಮ್ಮ ಅನೇಕ ಬುಡಕಟ್ಟುಗಳ ಜನರು ಸುತ್ತಲಿನ ಅಡವಿಯನ್ನು ಕೊಚ್ಚಿಸುಟ್ಟು, ಅಲ್ಲಿ ರಾಗಿ, ಭತ್ತ, ತರಕಾರಿಗಳನ್ನು ಬೆಳೆಸುತ್ತಾರೆ. ಪ್ರತಿ ಮೂರು ನಾಲ್ಕು ವರ್ಷಗಳಿಗೊಮ್ಮೆ ಹಾಗೆ ಪರಿವರ್ತಿಸಿದ ಜಮೀನನ್ನು ಬೀಳುಬಿಟ್ಟು ಬೇರೊಂದು ಅರಣ್ಯಕ್ಕೆ ಹೋಗಿ ಅದನ್ನು ಕೊಚ್ಚಿಸುಟ್ಟು ಕಮತ ನಡೆಸುತ್ತಾರೆ. ಹಿಂದಿನ ಕಾಲದಲ್ಲಿ ಅದು ಅವರ ಉಳಿವಿನ ಮೂಲಾಧಾರವಾಗಿತ್ತು. ಹಿಂದೆ ಕೊಚ್ಚಿಸುಟ್ಟ ಅರಣ್ಯ ಮತ್ತೆ ಬೆಳೆಯಲೆಂಬ ಉದಾತ್ತ ಉದ್ದೇಶದ ಈ ಕೃತ್ಯ ವೈಜ್ಞಾನಿಕವೆನ್ನಿಸಿತ್ತು. ಆದರೆ ಅರಣ್ಯಗಳು ನಾನಾ ಕಾರಣಗಳಿಂದ ಕಡಿಮೆಯಾಗುತ್ತಿರುವ ಈ ಯುಗದಲ್ಲಿ ಅರಣ್ಯವಾಸಿಗಳೇ ಕಾಡನ್ನು ಕೊಚ್ಚಿ ಸುಡುವುದು ಅವೈಜ್ಞಾನಿಕ ಅಷ್ಟೇ ಅಲ್ಲ, ಅಪರಾಧವೆನ್ನಿಸುತ್ತದೆ. ಅನೇಕ ಬುಡಕಟ್ಟು ಜನಾಂಗದವರು ಅಂಥ ಸಂಪ್ರದಾಯವನ್ನು ಇಂದಿಗೂ ಪಾಲಿಸಿಕೊಂಡು ಬರುತ್ತಿದ್ದಾರೆ. ಹಾಗೆಯೇ ರೈತ ಸಮುದಾಯದವರು ಕಬ್ಬಿನ ರವುದಿ, ತೆಂಗಿನ ಗರಿಗಳಂಥ ಕೃಷಿತ್ಯಾಜ್ಯಗಳನ್ನು ಸುಡುವ ಪದ್ಧತಿ ಕೂಡ ಇಂದಿನ ಯುಗದಲ್ಲಿ ತೀರ ಅವೈಜ್ಞಾನಿಕವೆನಿಸುತ್ತದೆ. ಸಸ್ಯಗಳಲ್ಲಿನ ಇಂಗಾಲವನ್ನು ಸುಟ್ಟರೆ ವಾತಾವರಣಕ್ಕೆ ಸೇರಿಹೋಗಿ ಭೂಮಿಯ ಒಟ್ಟಾರೆ ತಾಪವನ್ನು ಹೆಚ್ಚಿಸುತ್ತದೆ. ಅದರ ಬದಲು ಕೃಷಿತ್ಯಾಜ್ಯವನ್ನು ಇಡಿಯಾಗಿ ಹೂಳುವ 'ಕಾರ್ಬನ್ ಸಿಕ್ವೆಸ್ಟ್ರೇಶನ್' ವಿಧಾನವನ್ನು ಯಾವುದೇ ರೈತರು ಅಳವಡಿಸಿದ್ದರೆ ಅಂಥ ಮಾದರಿಗಳನ್ನು ಎತ್ತಿ ತೋರಿಸಬೇಕಾದ ಅಗತ್ಯವಿದೆ. ಅಮೆಝಾನ್ ಕಾಡಿನ ಕೆಲವು ಬುಡಕಟ್ಟಿನ ಜನರು ಅನಾದಿಕಾಲದಿಂದ ಈ ವಿಧಾನವನ್ನು ಅನುಸರಿಸುತ್ತಿದ್ದುದು ಈಗಿನ ವಿಜ್ಞಾನಿಗಳ ಪ್ರಶಂಸೆಗೆ ಪಾತ್ರವಾಗಿದೆ.

'ದೇಸೀ ವಿಜ್ಞಾನ' ವಿಭಾಗಕ್ಕೆ ಎದುರಾಗುವ ಎಲ್ಲಕ್ಕಿಂತ ದೊಡ್ಡ ಸವಾಲೆಂದರೆ ವಿಜ್ಞಾನ ಯಾವುದು, ಮೂಢನಂಬಿಕೆ ಯಾವುದು ಎಂಬುದನ್ನು ವಿಂಗಡಿಸುವುದು. ಅಶ್ವತ್ಥ ಮರವನ್ನು ಸುತ್ತಿದರೆ iಕ್ಕಳಾಗುತ್ತವೆ ಎಂಬುದನ್ನು ಹೇಗೆ ವಿಶ್ಲೇಷಿಸೋಣ? ಮೇಲ್ನೋಟಕ್ಕೆ ಇದೊಂದು ಮೂಢ ನಂಬಿಕೆ ಅಥವಾ ರೂಢನಂಬಿಕೆಯಂತೆ ಕಾಣುತ್ತದೆ. ಆದರೆ ಅದರ ಹಿಂದೆ ಅಪ್ಪಟ ವೈಜ್ಞಾನಿಕ ತಿಳುವಳಿಕೆ ಇದೆ. ಆಗಿನ ಕಾಲದಲ್ಲಿ ದಿನಕ್ಕೆ ಮೂರು ನಾಲ್ಕು ಗಂಟೆಗಳ ಕಾಲ ಅಡುಗೆ ಮನೆಯಲ್ಲಿ ಸೌದೆ ಒಲೆಯ ಹೊಗೆಮಸಿಯ ಮಧ್ಯೆ ಏಗಬೇಕಾಗಿದ್ದ ಮಹಿಳೆಗೆ ಆಮ್ಲಜನಕ ಸಾಕಷ್ಟು ಸಿಗುತ್ತಿರಲಿಲ್ಲ (ಈಗ ಸುಧಾರಿತ ಒಲೆಗಳು, ಗ್ಯಾಸ್ ಸಿಲಿಂಡರ್‌ಗಳು ಬಂದಿವೆ) ಅಡುಗೆ ಮನೆಯಲ್ಲಿ ಹೊಗೆಯನ್ನೇ ಉಸಿರಾಡಿಸಬೇಕಾದ ಅವಳ ಶ್ವಾಸಕೋಶಕ್ಕೆ ಇಂಗಾಲದ ಡೈಆಕ್ಸೈಡ್ ಸೇರುತ್ತಿತ್ತು. ರಕ್ತಕ್ಕೆ ಆಮ್ಲಜನ ಸಾಕಷ್ಟು ಸಿಗದೆ, ಅವಳ ಹಿಮೊಗ್ಲೋಬಿನ್ ಉತ್ಪಾದನೆ ಕ್ಷೀಣಿಸುತ್ತದೆ. ಅದಕ್ಕೇ ಹಳ್ಳಿಯ ಹೆಣ್ಣುಮಕ್ಕಳು ಹೆಚ್ಚಿನದಾಗಿ ಹಂಚಿಕಡ್ಡಿಯಂತಿರುವುದನ್ನು ನಾವು ಕಾಣುತ್ತೇವೆ. ಪ್ರತಿತಿಂಗಳೂ ಋತುಸ್ರಾವದ ರೂಪದಲ್ಲಿ ರಕ್ತಹಾನಿಯಾಗುತ್ತದೆ. ಜೊತೆಗೆ ದೇಹದಲ್ಲಿರುವ ರಕ್ತವೂ ದುರ್ಬಲವಾಗಿ ಭಾರತದ ಬಹಳಷ್ಟು ಹೆಣ್ಣುಮಕ್ಕಳು ಅನೀಮಿಯಾದಿಂದ ಬಳಲುತ್ತಾರೆ. ಅಶ್ವತ್ಥ ಮರ ಇತರ ವೃಕ್ಷಗಳಿಗಿಂತ ಹೆಚ್ಚಿನ ಪ್ರಮಾಣದ ಆಮ್ಲಜನಕವನ್ನು ಕೊಡುತ್ತದೆ. ದಿನದ ಕೆಲವು ಸಮಯವನ್ನಾದರೂ  ಮಹಿಳೆಯರು ಅದರ ಬಳಿ ಸುಳಿದಾಡಿದರೆ ಆಕೆಯ ರಕ್ತ ಶುದ್ಧವಾಗುತ್ತದೆ, ದೇಹಕ್ಕೆ ಗಟ್ಟಿತನ ಬರುತ್ತದೆ ಎಂಬ ವೈಜ್ಞಾನಿಕ ಸತ್ಯ ಅಲ್ಲಿದೆ. ಅದನ್ನೊಂದು ಶಾಸ್ತ್ರವನ್ನಾಗಿ ಮಾಡಿ, ತುಸು ಕಡ್ಡಾಯದ ರೂಪದಲ್ಲಿ ಅಥವಾ ಆಮಿಷದ ರೂಪದಲ್ಲಿ ಹೆಂಗಸರು ಆಮ್ಲಜನಕ ಸೇವನೆ ಮಾಡುವಂತೆ ಮಾಡಿರುವುದನ್ನು ನಾವು ಮೆಚ್ಚಿಕೊಳ್ಳಬೇಕಾದ ಅಂಶವೂ ಹೌದು.

ರೂಢನಂಬಿಕೆಗಳು, ಮೂಢನಂಬಿಕೆಗಳು
ಆಧುನಿಕ ವೈಜ್ಞಾನಿಕ ವಿಶ್ಲೇಷಣೆಗೆ ನಿಲುಕಬಲ್ಲ ಇಂಥ ರೂಢನಂಬಿಕೆಗಳನ್ನು ಒತ್ತಟ್ಟಿಗಿಡೋಣ. ಮೂಢನಂಬಿಕೆಯಂತೆ ತೋರುವ ಬಹಳಷ್ಟು ಗ್ರಾಮೀಣ ಸಂಪ್ರದಾಯಗಳು ನಮ್ಮ ವಿಜ್ಞಾನಿಗಳ ಗ್ರಹಿಕೆಗೆ ನಿಲುಕುವುದಿಲ್ಲ. ಅಥವಾ ಸತ್ಯಾಸತ್ಯವನು ವಿಶ್ಲೇಷಿಸುವ ಸಾಮರ್ಥ್ಯವಾಗಲೀ ಆಸಕ್ತಿಯಾಗಲೀ ಅವರಿಗೆ ಇರುವುದಿಲ್ಲ. ಶುಕ್ಲಪಕ್ಷದಲ್ಲಿ  ಬೀಜ ಊರಿದರೆ ಬೆಳೆ ಚೆನ್ನಾಗಿ ಬರುತ್ತದೆ; ಅಮಾವಾಸ್ಯೆಯ ಇಂಥ ಹೊತ್ತಿನಲ್ಲಿ ಇಂಥ ಪ್ರಾಣಿಯ ಕೊಂಬನ್ನು ನೆಲದಲ್ಲಿ ಹೂತಿಟ್ಟರೆ ಇಡೀ ಹೊಲದ ಇಳುವರಿ ಏರುತ್ತದೆ -ಈ ಬಗೆಯ ನಂಬಿಕೆ ಮತ್ತು ಆಚರಣೆಗಳ ಹಿಂದಿರುವ 'ವೈಜ್ಞಾನಿಕ' ತಥ್ಯಗಳನ್ನು ಅರಿಯಬಲ್ಲ ಸಾಧನವಾಗಲೀ ಸಾಮರ್ಥ್ಯವಾಗಲೀ ಆಧುನಿಕ ವಿಜ್ಞಾನಕ್ಕಿಲ್ಲ. ಏಕೆಂದರೆ ಆಧುನಿಕ ವಿಜ್ಞಾನಕ್ಕೆ ಎಂದೂ ಸತ್ಯ ಇಡಿಯಾಗಿ ಗೋಚರಿಸಿದ್ದೇ ಇಲ್ಲ. ಬೀಜ ಹೇಗೆ ಮೊಳಕೆ ಒಡೆಯುತ್ತದೆ ಎಂಬುದನ್ನು ಬೀಜಕೋಶ, ಅಂಡಾಶಯ, ತೇವಾಂಶ, ಉಷ್ಣಾಂಶ, ಬೀಜದಳಗಳ ಬಿಡಿಬಿಡಿ ಪ್ರಕ್ರಿಯೆಗಳ ಮೂಲಕ ಅದು ವಿವರಿಸುತ್ತದೆ ವಿನಾ ಬೀಜ ಊರಿದವನ ಕೈಗುಣವನ್ನಾಗಲೀ, ಕಾಸ್ಮಿಕ್ ಕಿರಣಗಳ ಪ್ರಭಾವವನ್ನಾಗಲೀ ಕ್ವಾಂಟಮ್ ವಿದ್ಯಮಾನಗಳ ಮೂಲಕ ವಿಶ್ಲೇಷಿಸುವ ಸಾಮರ್ಥ್ಯ ವಿಜ್ಞಾನಕ್ಕಿನ್ನೂ ಬಂದಿಲ್ಲ. ಅಂಥ ಇದಮಿತ್ಥಂ ಎನ್ನಲಾಗದ ಅವಧಿಯಲ್ಲೇ ನಮ್ಮ ಗ್ರಾಮೀಣ ಸಂಪತ್ತನ್ನು, ಪರಂಪರಾಗತ ಜ್ಞಾನಭಂಡಾರವನ್ನು ತಮ್ಮದಾಗಿಸಿಕೊಳ್ಳಬಯಸುವವರಿಗೆ ಅನುಕೂಲವಾಗುವಂತೆ ಬೌದ್ಧಿಕ ಆಸ್ತಿಗೆ ಸಂಬಂಧಿಸಿದ ಪೇಟೆಂಟ್ ಕಾನೂನುಗಳನ್ನು ಬರೆಯಲಾಗುತ್ತಿದೆ. ಖಾಸಗಿ ಕಂಪನಿಗಳು ತಮ್ಮ ಲಾಭಕ್ಕಾಗಿ ನಮ್ಮದೇ ವಿಜ್ಞಾನಿಗಳ ನೆರವಿನಿಂದ ಸಂಶೋಧನೆಯ ಹೆಸರಿನಲ್ಲಿ ತಳಿಗಣಿಗಾರಿಕೆ ನಡೆಸುತ್ತಿವೆ. ವಿಜ್ಞಾನದ ಫಲವನ್ನು ಲೋಕಕಲ್ಯಾಣಕ್ಕೇ ಅರ್ಪಿಸುವ ಕಾಲ ಎಂದೋ ಕಣ್ಮರೆಯಾಗಿದೆ. ಇಂದು ವಿಜ್ಞಾನವೆಂದರೆ ಅಧಿಕಾರಶಾಹಿಗಳ, ಬಹುರಾಷ್ಟ್ರೀಯ ಕಂಪನಿಗಳ ಲಾಭಕ್ಕಾಗಿ ಹಾಗೂ ಸೇವೆಗಾಗಿಯೇ ಮುಡಿಪಾಗಿಡುವ ಜ್ಞಾನಶಾಖೆಯಾಗಿ ಮಾರ್ಪಟ್ಟಿದೆ. ಶ್ರೀಸಾಮಾನ್ಯನ ಬದುಕಿನ ಜಂಜಡವನ್ನು ಕಡಿಮೆ ಮಾಡುವ ಬದಲು ಅದು ಈಗ ಶೋಷಣೆಯ ಹೊಸ ಮಾರ್ಗವಾಗಿದೆ.

ಇಂಥ ವಿಕ್ಷಿಪ್ತ ಘಳಿಗೆಯಲ್ಲಿ ಕನ್ನಡ ವಿಶ್ವವಿದ್ಯಾಲಯ ಹೊಸ ಅಧ್ಯಯನ ವಿಭಾಗವನ್ನು ಆರಂಭಿಸುತ್ತಿರುವುದು ನಮ್ಮ ವಿಜ್ಞಾನ ಪರಂಪರೆಯ ಶ್ಲಾಘನೀಯ ಘಟ್ಟವೆನ್ನಬೇಕು. ಶೋಷಿತರು, ಅರೆಸಾಕ್ಷರರು, ಅನಕ್ಷರಸ್ಥರು ತಮ್ಮೊಂದಿಗೆ ಉಳಿಸಿಕೊಂಡು ಬಂದ ಅರಿವಿನ ಗಂಟನ್ನು ತನ್ನ ಸಂದೂಕದಲ್ಲಿ ಕಾಪಿಡಲು, ಹೊಸ ಅರಿವಿನ ಬೆಳಕಿನಲ್ಲಿ ಹೊಳಪು ಕೊಡಲು ಅದು ಮುಂದಾಗಿದೆ. ಪುಸ್ತಕಗಳಲ್ಲಿ ಬರೆದಿರುವುದೇ ವಿಜ್ಞಾನ, ಶಾಲೆ-ಕಾಲೇಜುಗಳಲ್ಲಿ ಬೋಧಿಸುವುದೇ ವಿಜ್ಞಾನ, ಗಾಜಿನ ಪ್ರಯೋಗಶಾಲೆಗಳಲ್ಲಿನ ಕೆಲಸಗಳೇ ವಿಜ್ಞಾನ ಎಂಬ ಭ್ರಮೆಯನ್ನು ನಾವೆಲ್ಲರೂ ಪೋಷಿಸುತ್ತಿದ್ದೇವೆ. ಆ ಭ್ರಮೆಯನ್ನು ತೊಳೆಯುವ ಕೆಲಸ ನಡೆಯಬೇಕಿದೆ. ವಿದ್ಯೆಯನ್ನು ಸೃಷ್ಟಿಸುವ ವಿದ್ಯಾಲಯವೆನ್ನಿಸಿದ ಈ ಸಂಸ್ಥೆ ಅಸಾಂಪ್ರದಾಯಿಕ ವಿಜ್ಞಾನವನ್ನೂ ಪೋಷಿಸುವ, ದೇಸೀ ವಿಜ್ಞಾನವನ್ನು ಸೃಷ್ಟಿಸುವ ಸಂಸ್ಥೆಯಾಗಿ ಆಧುನಿಕ ವಿಜ್ಞಾನಕ್ಕೂ ಹೊಸ ಪಾಠ ಹೇಳಲೆಂದು ಆಶಿಸುತ್ತೇನೆ.

ಒಳಮನೆಯ ಕನ್ನಡಕ್ಕೆ ಹೊಸ ಗಾಳಿ ಬೀಸಲೆಂದು ಹಾರೈಸುತ್ತೇನೆ.

ಕೊನೆಯದಾಗಿ ಒಂದು ಮಾತು: ನಮ್ಮೆಲ್ಲ ವಿಶ್ವವಿದ್ಯಾಲಯಗಳೂ ತಾವು ಸೃಷ್ಟಿಸುವ, ಸಂಗ್ರಹಿಸುವ ಲೋಕಜ್ಞಾನವನ್ನು ವಿಶ್ವಕೋಶಗಳಾಗಿ ಮಾರ್ಪಡಿಸಿ, ಅವುಗಳ ಪ್ರಕಟನೆಯ ಹಕ್ಕುಗಳನ್ನು ತಮ್ಮಲ್ಲೇ ಇಟ್ಟುಕೊಳ್ಳುತ್ತವೆ ವಿನಾ ಅರಿವಿನ ಲೋಕಕ್ಕೆ ಮುಕ್ತವಾಗಿ ಹರಿಬಿಡುವುದಿಲ್ಲ. ಅಂಥ ಪ್ರಕಟನೆಗಳು ಕೆಲವರಿಗೆ ಮಾತ್ರ ಕೈಗೆಟಕುವಂತೆ ಸುಭದ್ರ ಕಪಾಟುಗಳಲ್ಲಿ ಉಳಿಯುತ್ತವೆ ವಿನಾ, ಜನಬಳಕೆಗೆ ಮುಕ್ತವಾಗಿ ಸಿಗುತ್ತಿಲ್ಲ. ಇಂದಿನ ಡಿಜಿಟಲ್ ಯುಗದಲ್ಲಿ ಅಂಥ ಜ್ಞಾನವೆಲ್ಲ ಬಹುಮಾಧ್ಯಮಗಳ ಮೂಲಕ, ಮೊಬೈಲ್, ಐಪ್ಯಾಡ್ ಮುಂತಾದ ಸಾಧನಗಳ ಮೂಲಕ, ಅಂತರಜಾಲದ ಮೂಲಕ ಯಾರಿಗೆ ಬೇಕಾದರವರಿಗೆ, ಯಾವಾಗ ಬೇಕೆಂದರಾವಾಗ ಉಚಿತವಾಗಿ ಸಿಗುವಂತಾಗಬೇಕು. ಸಾರ್ವಜನಿಕರ ಹಣದಿಂದ ಸಂಗ್ರಹಿಸಿದ ಜ್ಞಾನವೆಲ್ಲ ಸಾರ್ವಜನಿಕರಿಗೆ ಮುಕ್ತವಾಗಿ ಸಿಗಬೇಕು. ದೇಸೀ ವಿಜ್ಞಾನ ನಿಕಾಯ ಈ ನಿಟ್ಟಿನಲ್ಲೂ ಪ್ರಥಮ ಹೆಜ್ಜೆಯನ್ನಿಡುವಂತಾಗಬೇಕು. ದೇಶಕ್ಕೇ ಮಾದರಿಯಾಗಬೇಕು.

ಜೈಪೃಥ್ವಿ, ಜೈ ಕರ್ನಾಟಕ.

2 ಕಾಮೆಂಟ್‌ಗಳು:

Akhilesh ಹೇಳಿದರು...

ಅತ್ಯುತ್ತಮ ಮಾತುಗಳು. ಹೆಗಡೆಯವರಿಗೆ ಮತ್ತು ಹಂಚಿದವರಿಗೆ
ಹೃದಯಪೂವ೯ಕ ವಂದನೆಗಳು

Renuka Manjunath ಹೇಳಿದರು...

ಈ ಒಂದು ಉಪನ್ಯಾಸದಿಂದ ನಮಗೆ ಸಿಕ್ಕ ಜ್ಞಾನ ಅದೆಷ್ಟು...!ನಾಗೇಶ್ ಹೆಗಡೆ ಸರ್ ಗೆ ನಿಜಕ್ಕೂ ಧನ್ಯವಾದಗಳು!

badge