ಶನಿವಾರ, ಡಿಸೆಂಬರ್ 21, 2013

ಅಂತರಜಾಲದ ವೇಗದ ಲೆಕ್ಕ

ಟಿ. ಜಿ. ಶ್ರೀನಿಧಿ

ಅಂತರಜಾಲ ಲೋಕದಲ್ಲಿ ಈಗ ಎಲ್ಲೆಲ್ಲೂ ಬ್ರಾಡ್‌ಬ್ಯಾಂಡ್ ಸಂಪರ್ಕಗಳದ್ದೇ ರಾಜ್ಯಭಾರ. ಡಯಲ್ ಅಪ್ ಸಂಪರ್ಕಗಳ ಹೋಲಿಕೆಯಲ್ಲಿ ಅದ್ಭುತವೆನಿಸುವಂತಹ ವೇಗದ ಅಂತರಜಾಲ ಸಂಪರ್ಕ ಕಲ್ಪಿಸಿಕೊಟ್ಟಿದ್ದು ಬ್ರಾಡ್‌ಬ್ಯಾಂಡ್‌ನ ಹಿರಿಮೆ. ಈ ಬಗೆಯ ಸಂಪರ್ಕಗಳ ವೇಗ ಕಳೆದ ಕೆಲ ವರ್ಷಗಳಲ್ಲಿ ಒಂದೇ ಸಮನೆ ಹೆಚ್ಚುತ್ತಲೇ ಇದೆ. ಇನ್ನು ಈಗ ಮೊಬೈಲಿನಲ್ಲಿ ಥ್ರೀಜಿ ಸಂಪರ್ಕ ಬಂದಮೇಲಂತೂ ಬ್ರಾಡ್‌ಬ್ಯಾಂಡ್ ಸಂಪರ್ಕವೇ ನಿಧಾನವೇನೋ ಎನ್ನಿಸುವಂತಹ ವೇಗಗಳೂ ಸಾಧ್ಯವಾಗಿವೆ.

ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ ನಿಯಮದನ್ವಯ ಯಾವುದೇ ಅಂತರಜಾಲ ಸಂಪರ್ಕ ಬ್ರಾಡ್‌ಬ್ಯಾಂಡ್ ಎಂದು ಕರೆಸಿಕೊಳ್ಳಲು ಪ್ರತಿ ಸೆಕೆಂಡಿಗೆ ಕನಿಷ್ಠ ೨೫೬ ಕೆಬಿಪಿಎಸ್ ಡೌನ್‌ಲೋಡ್ ವೇಗ ಹೊಂದಿರಬೇಕು, ನಿಜ. ಆದರೆ ಹತ್ತಾರು ಎಂಬಿಪಿಎಸ್ ವೇಗದ ಸಂಪರ್ಕಗಳೂ ಲಭ್ಯವಿವೆ.

ಕೆಬಿ ಅಂದರೆ ಕಿಲೋಬೈಟ್, ಎಂಬಿ ಅಂದರೆ ಮೆಗಾಬೈಟ್ ಎನ್ನುವ ಲೆಕ್ಕವನ್ನೆಲ್ಲ ಕೇಳಿದ್ದೇವೆ, ಆದರೆ ಇದೇನಿದು ಕೆಬಿಪಿಎಸ್-ಎಂಬಿಪಿಎಸ್?

ಇದನ್ನು ತಿಳಿಯುವ ಮುನ್ನ ನಾವು ಡೇಟಾ ರೇಟ್ ಎನ್ನುವ ಪರಿಕಲ್ಪನೆಯನ್ನು ಅರ್ಥಮಾಡಿಕೊಳ್ಳಬೇಕು.

ಯಾವುದೇ ದೂರಸಂಪರ್ಕ ವ್ಯವಸ್ಥೆಯ ಮೂಲಕ ಒಂದು ನಿರ್ದಿಷ್ಟ ಅವಧಿಯಲ್ಲಿ ಹಾದುಹೋಗುವ ದತ್ತಾಂಶದ (ಡೇಟಾ) ಸರಾಸರಿ ಪ್ರಮಾಣವನ್ನು ಡೇಟಾ ರೇಟ್ ಎಂದು ಕರೆಯುತ್ತಾರೆ. ಒಂದಷ್ಟು ದತ್ತಾಂಶವನ್ನು ತೆಗೆದುಕೊಂಡರೆ ಅದು ಒಂದು ಸ್ಥಳದಿಂದ ಮತ್ತೊಂದಕ್ಕೆ ಎಷ್ಟು ವೇಗವಾಗಿ ತಲುಪಬಲ್ಲದು ಎನ್ನುವುದನ್ನು ಈ ಡೇಟಾ ರೇಟ್ ಸೂಚಿಸುತ್ತದೆ.

ದತ್ತಾಂಶದ ರವಾನೆಗೆ ನಾವು ಯಾವುದೇ ಮಾರ್ಗ ಆಯ್ದುಕೊಂಡಾಗ ಅದರ ಮೂಲಕ ಒಂದು ನಿರ್ದಿಷ್ಟ ಅವಧಿಯಲ್ಲಿ ನಿಗದಿತ ಪ್ರಮಾಣದ ದತ್ತಾಂಶವಷ್ಟೆ ಹಾದುಹೋಗುವುದು ಸಾಧ್ಯ. ಇದನ್ನು ಆ ಮಾರ್ಗದ ಬ್ಯಾಂಡ್‌ವಿಡ್ತ್ ಎಂದು ಕರೆಯುತ್ತಾರೆ. ಬ್ಯಾಂಡ್‌ವಿಡ್ತ್ ಹೆಚ್ಚಿದ್ದಷ್ಟೂ ಡೇಟಾ ರೇಟ್ ಕೂಡ ಹೆಚ್ಚಾಗಿರುವುದು ಸಾಧ್ಯ.

ಡೇಟಾ ರೇಟ್ ಅನ್ನು ಅಳೆಯುವ ಏಕಮಾನವೇ ಡೇಟಾ ರೇಟ್ ಯುನಿಟ್. ಕೊಂಚಹೊತ್ತಿಗೆ ಮುನ್ನ ನೋಡಿದ ಕೆಬಿಪಿಎಸ್-ಎಂಬಿಪಿಎಸ್‌ಗಳೆಲ್ಲ ಇಂತಹವೇ ಡೇಟಾ ರೇಟ್ ಯುನಿಟ್‌ಗಳು.

ಕಂಪ್ಯೂಟರಿನ ಸ್ಮೃತಿಯಲ್ಲಿ (ಮೆಮೊರಿ) ಯಾವುದೇ ದತ್ತಾಂಶ ದ್ವಿಮಾನ ಪದ್ಧತಿಯ ಸಂಖ್ಯೆಗಳ (೧ ಅಥವಾ ೦) ರೂಪದಲ್ಲಿ ಮಾತ್ರ ಶೇಖರವಾಗುವುದು ಸಾಧ್ಯ ಎನ್ನುವುದು ನಮಗೆಲ್ಲ ಗೊತ್ತೇ ಇದೆ. ಈ ಸಂಖ್ಯೆಗಳನ್ನು ಬೈನರಿ ಡಿಜಿಟ್ ಅಥವಾ ಬಿಟ್ ಎಂದು ಕರೆಯುತ್ತಾರೆ ಎನ್ನುವುದೂ ನಮಗೆ ಗೊತ್ತು.

ಯಾವುದೋ ಅಂತರಜಾಲ ಸಂಪರ್ಕ ಬಳಸಿ ಪ್ರತಿ ಸೆಕೆಂಡಿಗೆ ಒಂದು ಸಾವಿರ ಬಿಟ್‌ನಷ್ಟು ದತ್ತಾಂಶವನ್ನು ಪಡೆದುಕೊಳ್ಳುವುದು ಸಾಧ್ಯ ಎಂದುಕೊಳ್ಳೋಣ. ಆಗ ಆ ಸಂಪರ್ಕದ ಮೂಲಕ ಒಂದು ಕಿಲೋಬಿಟ್ ಪರ್ ಸೆಕೆಂಡ್ (ಕೆಬಿಪಿಎಸ್) ದತ್ತಾಂಶ ಹಾದುಹೋದಂತಾಯಿತು. ಇಲ್ಲಿ ಕೆಬಿಪಿಎಸ್ ಎನ್ನುವುದು ದತ್ತಾಂಶದ ಹರಿವನ್ನು ಅಳೆಯುವ ಏಕಮಾನ, ಅರ್ಥಾತ್ ಡೇಟಾ ರೇಟ್ ಯುನಿಟ್.

ಡಯಲ್ ಅಪ್ ಸಂಪರ್ಕಗಳ ಕಾಲದಲ್ಲಿ ೫೬ಕೆಬಿಪಿಎಸ್ ಸಂಪರ್ಕ ಬಹಳ ಸಾಮಾನ್ಯವಾಗಿತ್ತು. ೬೪ ಕೆಬಿಪಿಎಸ್ ವೇಗದ ಸಂಪರ್ಕಗಳೂ ಒಂದಷ್ಟುಕಾಲ ಜನಪ್ರಿಯವಾಗಿದ್ದವು. ಬ್ರಾಡ್‌ಬ್ಯಾಂಡ್ ಬಂದಮೇಲೆ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ ನಿಯಮದನ್ವಯ ೨೫೬ ಕೆಬಿಪಿಎಸ್ ಸಂಪರ್ಕಗಳು ವ್ಯಾಪಕವಾಗಿ ಕಾಣಿಸಿಕೊಂಡವು. ಇದೀಗ ಬ್ರಾಡ್‌ಬ್ಯಾಂಡ್ ಸಂಪರ್ಕಗಳ ವೇಗ ಕಿಲೋಬಿಟ್‌ಗಳನ್ನು ದಾಟಿ ಮೆಗಾಬಿಟ್‌ಗಳನ್ನು ಮುಟ್ಟಿದೆ. ಒಂದು ಸೆಕೆಂಡಿಗೆ ಹತ್ತು ಲಕ್ಷ ಬಿಟ್‌ಗಳಷ್ಟು ದತ್ತಾಂಶವನ್ನು ನಿಭಾಯಿಸಬಲ್ಲಂಥವು ೧ ಎಂಬಿಪಿಎಸ್ ಸಂಪರ್ಕಗಳೆಂದು ಕರೆಸಿಕೊಳ್ಳುತ್ತವೆ. ೨ ಎಂಬಿಪಿಎಸ್, ೪ ಎಂಬಿಪಿಎಸ್, ೮ ಎಂಬಿಪಿಎಸ್, ೧೬ ಎಂಬಿಪಿಎಸ್, ೨೪ ಎಂಬಿಪಿಎಸ್ ಹೀಗೆ ವಿವಿಧ ವೇಗದ ಸಂಪರ್ಕಗಳು ಲಭ್ಯವಿವೆ.

ಡಿಸೆಂಬರ್ ೨೦, ೨೦೧೩ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge