ಮಂಗಳವಾರ, ಅಕ್ಟೋಬರ್ 22, 2013

ಜ್ವಾಲಾಮುಖಿ ಒಡಲಿನ ತಂಪು!

ಹಿರಿಯ ವಿಜ್ಞಾನ ಲೇಖಕ ಶ್ರೀ ಟಿ. ಆರ್. ಅನಂತರಾಮುರವರ 'ಭೂಮಿಯ ಟೈಂ ಬಾಂಬ್: ಜ್ವಾಲಾಮುಖಿ' ಕೃತಿಯ ಪರಿಚಯ

ಕೆ. ಎಸ್. ನವೀನ್

'ಭೂಮಿಯ ಟೈಂ ಬಾಂಬ್: ಜ್ವಾಲಾಮುಖಿ' ಹಿರಿಯ ವಿಜ್ಞಾನ ಲೇಖಕರಾದ ಶ್ರೀ ಟಿ. ಆರ್. ಅನಂತರಾಮು ಅವರ ಹೊಸ ಕೃತಿ. ಈ ಹಿಂದೆ ಜ್ವಾಲಾಮುಖಿ ಎಂಬ ಹೆಸರಿನ ಇವರದ್ದೇ ಪುಸ್ತಕ ಪ್ರಕಟವಾಗಿದ್ದರೂ ಇದು ಹೊಸತೇ ಆದ ಹೊತ್ತಗೆ.

ಒಟ್ಟು ಹದಿನೇಳು ಅಧ್ಯಾಯಗಳಿರುವ ಈ ಪುಸ್ತಕದಲ್ಲಿ ಜ್ವಾಲಾಮುಖಿಯ ವೈಜ್ಞಾನಿಕ ಕಥನ ಅಲೆ ಅಲೆಯಾಗಿ ತೆರೆದುಕೊಳ್ಳುತ್ತಾ ಹೋಗುತ್ತದೆ. ಒಬ್ಬ ಅನುಭವಿ ಬರೆಹಗಾರ ಹೇಗೆ ಲೀಲಾಜಾಲವಾಗಿ ಪುಸ್ತಕದ ಎಲ್ಲ ವಿಭಾಗಗಳನ್ನು ಅಚ್ಚುಕಟ್ಟಾಗಿ  ಸಂಯೋಜಿಸಿ ಒಂದು ಕಲಾಕೃತಿಯನ್ನಾಗಿಸುತ್ತಾನೆ ಎಂಬುದಕ್ಕೆ ಈ ಪುಸ್ತಕ ಮಾದರಿ. ಶೀರ್ಷಿಕೆಗಳಿಂದಲೇ ಇದಕ್ಕೆ ಉದಾಹರಣೆ ಕೊಡಬಹುದು. "ಆಕಾಶದಲ್ಲಿ ಆತಂಕ", "ಜ್ವಾಲಾಮುಖಿಯ ಬಾಯಿಯೊಳಗೆ", "ವಾಯುನೆಲೆಯ ಮೇಲೆ ದಾಳಿ", "ಭೂಮಿಯೊಳಗೆ ಭೂತ", "ಭೂಗರ್ಭದಲ್ಲಿ ಏನಿದೆ?" ಹೀಗೆ ಓದುಗನನ್ನು ಸೆರೆಹಿಡಿಯುತ್ತವೆ. ಪುಸ್ತಕದ ನಡುವೆ ಇಪ್ಪತ್ತನಾಲ್ಕು ಪುಟಗಳ ವರ್ಣ ಚಿತ್ರ ಸಂಪುಟವಿದೆ. ಈ ಚಿತ್ರ ಸಂಪುಟ ಜ್ವಾಲಾಮುಖಿ ಜಗತ್ತಿನೊಳಗೊಂದು ಪಯಣ. ವಿಜ್ಞಾನ ಕೃತಿಗೆ ವರ್ಣಚಿತ್ರ ತರಬಹುದಾದ ಶೋಭೆಯನ್ನು ಇದು ಶ್ರುತ ಪಡಿಸಿದೆ. ಒಂದು ಪಠ್ಯಪುಸ್ತಕ ಅಥವಾ ಆಕರ ಗ್ರಂಥದ ಬಿಗುವಿನಿಂದ ಕೂಡಿರದೆ ಆಸಕ್ತ ಓದುಗ ಓದಲೇ ಬೇಕಾದ ಆಕರವಾಗಿ ಉಳಿಯುತ್ತದೆ.

ನಮ್ಮ ಎಷ್ಟೋ ವಿಜ್ಞಾನ ಪುಸ್ತಕಗಳಲ್ಲಿ ಕಾಣದ ಅಂಶವೆಂದರೆ, ವಿಜ್ಞಾನ! ಆದರೆ, ಇಲ್ಲಿ ವಿಜ್ಞಾನ ಮೊದಲ ಅಧ್ಯಾಯದಿಂದ ಅಲ್ಲ "ನನ್ನ ಮಾತು" ಎಂಬ ಲೇಖಕರ ಮೊದಲ ಮಾತುಗಳಿಂದಲೇ ಮೊದಲಾಗುವುದು ವಿಶೇಷ. ಕೆಲವು ಮಾತುಗಳನ್ನು ನೋಡಿರಿ: "...ಭೂಮಿಯ ಮೇಲ್ಮೈಗೆ ಚಿನ್ನವೂ ಸೇರಿದಂತೆ ಅಪರೂಪದ ಲೋಹಗಳನ್ನು ಎತ್ತಿ ತಂದಿರುವುದೇ ಜ್ವಾಲಾಮುಖಿಗಳು. ಅಮೂಲ್ಯವಾದ ವಜ್ರವನ್ನು ಕೊಳವೆ ಮೂಲಕ ಹೊರಕ್ಕೆ ತಂದಿರುವುದೂ ಇವೇ ಜ್ವಾಲಾಮುಖಿಗಳು. ಗಂಧಕ, ಪಟಕ, ಪಾದರಸ, ಎಲ್ಲಕ್ಕಿಂತ ಮಿಗಿಲಾಗಿ ಫಲವತ್ತಾದ ಕರಿಮಣ್ಣಿನ ಕೊಡುಗೆಯೂ ನಿಸರ್ಗದ ಈ ಜ್ವಾಲಾಮುಖಿಗಳಿಂದಲೇ ನಮಗೆ ಲಭ್ಯ ಅವು ಉಪಕಾರಿಗಳೇ ಅಥವಾ ವಿಧ್ವಂಸಕಾರಿಗಳೇ ಎಂದು ಬೆಲೆ ಕಟ್ಟುವುದೇ ಸರಿಯಲ್ಲ. ನಿಸರ್ಗಕ್ಕೆ ಇಂತಹ ಯಾವ ವ್ಯತ್ಯಾಸವೂ ಇಲ್ಲ..." ಇದಕ್ಕೆ ಬೇರೆ ವಿವರಣೆ ಅವಶ್ಯಕವೇ? ಚಿನ್ನ, ವಜ್ರಕ್ಕಿಂತ ಕರಿಮಣ್ಣಿನ ಮಹತ್ವ ನೀಡಿರುವುದನ್ನು ಗಮನಿಸಬೇಕು. ಒಂದು ವಿಜ್ಞಾನ ಪುಸ್ತಕದ ಸಾರ್ಥಕತೆ, ವಿಜ್ಞಾನ ವಿಭಾಗವನ್ನು ಮೀರಿ ಬೆಳೆದು ವೈಜ್ಞಾನಿಕತೆಯ ವ್ಯಾಖ್ಯೆಯನ್ನು ಮನದಲ್ಲಿ ಮೂಡಿಸುತ್ತದೆ. ಇದು ಈ ಕೃತಿಯಲ್ಲಿ ಪದೇ ಪದೇ ಆಗುತ್ತದೆ. ಹಿರಿಯ ವಿಜ್ಞಾನ ಲೇಖಕರಾಗಿದ್ದು ಶ್ರೀ ಜಿ.ಟಿ. ನಾರಾಯಣರಾಯರ ಭಾಷೆಯಲ್ಲಿ ಹೇಳುವುದಾದರೆ ತಾಕತ್ತಿನ ತಾಣದಿಂದ ಹೊಮ್ಮಿದ ಕೃತಿ ಇದು.

ಜ್ವಾಲಾಮುಖಿ ಎಂದೊಡನೆಯೇ ನಮಗೆ ನೆನಪಾಗುವುದು ಪಾಂಪೆ! ನಿಂತ ಹೆಜ್ಜೆಯಲ್ಲಿ  ಶಿಲಾರಸದಲ್ಲಿ ಹೂತು ಹೋದವರ ಚಿತ್ರ ಕಣ್ಣಮುಂದೆ ಬರುತ್ತದೆ. ಹಾಗೆ ಕಲ್ಲಾದವರ ನೆನಪಿಗೆ ಈ ಪುಸ್ತಕವನ್ನು ಅರ್ಪಿಸಲಾಗಿದೆ.

ಕೃತಿಯ ಮತ್ತೊಂದು ಮಹತ್ವದ ಅಂಶವೆಂದರೆ, ಆಯಾ ಅಧ್ಯಾಯಗಳಿಗೆ ಸೂಕ್ತವಾಗಿ ಹೊಂದುವಂತೆ ರಾಜಕೀಯ, ಐತಿಹಾಸಿಕ ವಿಷಯವನ್ನು ಬಳಸಿಕೊಂಡಿರುವುದು. ಇದು ಎಲ್ಲಿಯೂ ಅಭಾಸವಾಗುವುದಿಲ್ಲ, ಬದಲಾಗಿ ವಿಷಯ ಮತ್ತಷ್ಟು ಸ್ಪಷ್ಟವಾಗುತ್ತದೆ. ಮೊದಲ ಅಧ್ಯಾಯ "ಆಕಾಶದಲ್ಲಿ ಆತಂಕ" ಏಪ್ರಿಲ್ ೧೦, ೨೦೧೦ರಿಂದ ಒಂದು ವಾರ ಕಾಲ ಯೂರೋಪಿನ ವಿಮಾನಯಾನಗಳು ಸ್ಥಗಿತವಾದ ಹಿನ್ನೆಲೆ, ಅದರಿಂದಾದ ಆರ್ಥಿಕ ನಷ್ಟ, ಪ್ರಯಾಣಿಕರು ಅನುಭವಿಸಿದ ಬವಣೆಯನ್ನು ಉಸಿರು ಬಿಗಿಹಿಡಿದು ಓದುವಂತೆ ಮಾಡುತ್ತದೆ. ಈ ನಷ್ಟಕ್ಕೆಲ್ಲಾ ಕಾರಣ ಒಂದು ಜ್ವಾಲಾಮುಖಿಯ ಸ್ಫೋಟ! ಇಯಾಕುಟ್ಲ್ ಎಂಬ ಹೆಸರಿನ Eyjafjeallojokull ಎಂಬ ವಿಚಿತ್ರ ಸ್ಪೆಲ್ಲಿಂಗ್ ಇದರದ್ದು! ಇದನ್ನು ಐಸ್ಲಾಂಡ್‌ನವರು ಮಾತ್ರವೇ ಸರಿಯಾಗಿ ಉಚ್ಛರಿಸಬಲ್ಲರಂತೆ! ಈ ಪದವನ್ನು ಉಚ್ಛರಿಸುವ ರೀತಿ ತೋರಿಸಲೇ ಕೆಲವು ದೂರದರ್ಶನ ಕಾರ್‍ಯಕ್ರಮಗಳು ರೂಪಿತವಾದವಂತೆ! ಹೀಗೆ ಕುತೂಹಲಕಾರಿಯಾಗಿ ಸಾಗುವ ಜ್ವಾಲಾಯಾನ ಅದರ ಇತಿಹಾಸದತ್ತ, ವಿಜ್ಞಾನದತ್ತ ಹೊರಳುತ್ತದೆ. ಇಲ್ಲಿ ಲೇಖಕರು ಓದುಗರೊಂದಿಗೆ ಸಂವಾದ ನಡೆಸುತ್ತಿರುವಂತೆ ಭಾಸವಾಗುತ್ತದೆ.

ಮುಂದೆ ಜ್ವಾಲಾಮುಖಿಯ ಬಾಯಿಯೊಳಗೆ ಅಧ್ಯಾಯದಲ್ಲಿ ಲೇಖಕರು ಯೂರೋಪಿನ ಏಕೈಕ ಜೀವಂತ ಜ್ವಾಲಾಮುಖಿ ವಿಸುವಿಯಸ್ ಯಾತ್ರೆಯನ್ನು ವರ್ಣಿಸುತ್ತಾರೆ. ಶಿಲಾರಸದಲ್ಲಿ ಮುಳುಗೆದ್ದ ಪಾಂಪೆನಗರದ ಅವಶೇಷಗಳ ಚಿತ್ರಗಳು ಮನಕರಗಿಸುತ್ತವೆ.

"ಭೂಮಿಯೊಳಗೆ ಭೂತ" ಅಧ್ಯಾಯ ನಾಗರಿಕತೆ-ವಿಜ್ಞಾನ ಕಾಣದಿರದ ಕಾಲದಲ್ಲಿ ಜನರು ಮತ್ತು ಅವರ ಧರ್ಮಗಳು ಜ್ವಾಲಾಮುಖಿಯನ್ನು ಹೇಗೆ ಕಂಡರು ಎಂಬುದನ್ನು ವಿವರಿಸಲಾಗಿದೆ. ಮುಂದೆ "ಭೂಗರ್ಭದಲ್ಲಿ ಏನಿದೆ?" ಎಂಬ ಅಧ್ಯಾಯ ಹೆಸರೇ ಹೇಳುವಂತೆ ಭೂಮಿಯ "ಒಡಲಾಳ"ವನ್ನು ತೆರೆದಿಡುತ್ತದೆ. ಇಲ್ಲಿ ಜ್ವಾಲಾಮುಖಿಯ ಭೂ ವಿಜ್ಞಾನ ಯಾನ ಗಂಭೀರವಾಗಿ ಆದರೆ, ಚೂರೂ ಬೇಸರ ತರಿಸದಂತೆ ಮೂಡಿಬಂದಿದೆ.  ಮುಂದಿನ ಇಪ್ಪತ್ತನಾಲ್ಕು ಪುಟಗಳು ವರ್ಣಚಿತ್ರ ಸಂಪುಟ. ಇಲ್ಲಿ ಜ್ವಾಲಾಮುಖಿಯ ಬಗೆಗಳು, ಜ್ವಾಲಮುಖಿ ಉಕ್ಕುವ, ಸ್ಫೋಟಿಸುವ, ಚಿಮ್ಮುವ, ಹರಿಯುವ ಚಿತ್ರಗಳಿವೆ. ಜೊತೆಗೆ, ಇವುಗಳಲ್ಲಿ ಗಂಧಕಸಂಪನ್ಮೂಲ ಹುಡುಕುವ ಮಾನವನ ಚಿತ್ರಗಳು ಮನುಷ್ಯನ ಆಸೆಬುರುಕುತನವನ್ನು, ಕುತೂಹಲವನ್ನು ಪ್ರತೀಕಿಸುತ್ತದೆ. ಭೂಉಷ್ಣವನ್ನು ಬಳಸಿಕೊಂಡು ವಿದ್ಯುತ್ಛಕ್ತಿ ಉತ್ಪಾದಿಸುವ ಕೇಂದ್ರಗಳು, ಜ್ವಾಲಾಮುಖಿ ಸೃಷ್ಟಿಸಿರುವ ದ್ವೀಪಗಳು, ಶಿಲೆಗಳ ಚಿತ್ರಗಳು ಬೇರೊಂದು ಲೋಕವನ್ನೇ ಸೃಷ್ಟಿಸುತ್ತದೆ.

ಮುಂದಿನ ಮೂರು ಅಧ್ಯಾಯಗಳು, "ಖಂಡಗಳ ಜಂಬೂಸವಾರಿ", "ಬಗೆ ಬಗೆಯ ಜ್ವಾಲಾಮುಖಿಗಳು" ಮತ್ತು "ಜ್ವಾಲಾಮುಖಿಗಳು ಕೆರಳುವ ವಿಧಾನ" ಜ್ವಾಲಾಮುಖಿಯ ಸಾರಸರ್ವಸ್ವವನ್ನು ಉಣಬಡಿಸುತ್ತದೆ. ಹೊಸದಾಗಿ ವಿಜ್ಞಾನ ಬರೆಯುವವರಿಗೆ ಇಲ್ಲಿ ಪಾಠಗಳಿವೆ. ಈ ವಿವರಣೆ ನೋಡಿ: ಭೂ ಫಲಕದ ಜ್ವಾಲಾಮುಖಿಗಳನ್ನು ಅವರು ಹೀಗೆ ವಿವರಿಸುತ್ತಾರೆ " ನಿಮ್ಮ ಅಡುಗೆ ಮನೆಯಲ್ಲಿ ದೊಡ್ಡ ಬರ್ನರ್‌ಗಳಿರುವ ಗ್ಯಾಸ್ ಸ್ಟೌನ್‌ವ ಬರ್ನರ್ ಹೊತ್ತಿಸುತ್ತೀರಿ. ನೀಲಿ ಜ್ವಾಲೆ ಉರಿಯುತ್ತಿದೆ. ಉದ್ದನೆಯ ಕಾವಲಿಯನ್ನು ಅದರ ಮೇಲಿಡುತ್ತೀರಿ. ಕಾವಲಿ ಒಂದೇ ಸಾಲಿನಲ್ಲಿ ಉದ್ದಕ್ಕೂ ಬಿಟ್ಟು ಬಿಟ್ಟು ತೂತಾಗಿದೆ. ಕಾವಲಿಯನ್ನು ನಿಧಾನವಾಗಿ ಸರಿಸುತ್ತೀರಿ. ಎಲ್ಲೆಲ್ಲಿ ರಂಧ್ರವಿದೆಯೋ ಅಲ್ಲಿ ಜ್ವಾಲೆ ಕಾವಲಿಯಿಂದ ಹೊರಬರುತ್ತದೆ. ಭೂಮಿಯ ಸ್ಥಿತಿಯೂ ಹೀಗೆಯೇ. ಭೂಕವಚದಲ್ಲಿರುವ ಶಿಲಾಪಾಕ ಹೊರಬರಲು ಹವಣಿಸುತ್ತದೆ. ಫಲಕಗಳ ಅಂಚಿನ ಭಾಗದಲ್ಲಿದ್ದರೆ ಹೊರಬರುವುದು ಸುಲಭ. ಏಕೆಂದರೆ ಅದು ದುರ್ಬಲ ವಲಯ. ಆದರೆ, ಖಂಡದ ಮಧ್ಯದಲ್ಲಿ ಅಷ್ಟು ಸುಲಭವಾಗಿ ಹೊರನುಗ್ಗಲಾರದು. ಆಗ ಅತಿ ಹೆಚ್ಚು ಶಾಖವಿರುವ ಕವಚದ ಭಾಗ ಬೆಲೂನಿನಂತೆ ಉಬ್ಬುತ್ತದೆ. ಫಲಕಗಳೇನೋ ಎಂದಿನಂತೆ ನಿಧಾನಗತಿಯಲ್ಲಿ ಸರಿಯುತ್ತವೆ. ಸ್ಟೋವ್ ಮೇಲಿಟ್ಟ ಕಾವಲಿಯನ್ನು ನೀವು ಮೆಲ್ಲಗೆ ಸರಿಸಿದಂತೆ. ಭೂಮಿಯಲ್ಲಿ ಆ ಉಬ್ಬಿದ ಜಾಗದಲ್ಲಿ ಸಣ್ಣ ಸಣ್ಣ ಬಿರುಕುಗಳಾಗುತ್ತವೆ. ಭೂಚಿಪ್ಪು ಆ ಭಾಗದಲ್ಲಿ ತೆರೆದುಕೊಳ್ಳುತ್ತದೆ. ಅಲ್ಲಿಂದ ಲಾವಾರಸ ನುಗ್ಗುತ್ತದೆ. ಆಗಲೂ ಜ್ವಾಲಾಮುಖಿಗಳಾಗುತ್ತವೆ. ಇಂಥ ಜ್ವಾಲಾಮುಖಿಗಳ ತಾಣವನ್ನು "ಹಾಟ್ ಸ್ಪಾಟ್" ಅಂದರೆ ಬಿಸಿದಾಣ ಎಂದು ಕರೆಯುವುದುಂಟು. ಹವಾಯಿ ದ್ವೀಪದಲ್ಲಿ ಈ ಬಗೆಯ ಜ್ವಾಲಾಮುಖಿಗಳುಂಟು. ಇವೆಲ್ಲವೂ ಫಲಕ ಮಧ್ಯದ ಜ್ವಾಲಾಮುಖಿಗಳು" ಇದು ಯಾರಿಗೆ ಅರ್ಥವಾಗುವುದಿಲ್ಲ?

ಮುಂದೆ "ಭಾರತದಲ್ಲಿ ಜ್ವಾಲಾಮುಖಿ" ಎಂಬ ಅಧ್ಯಾಯದಲ್ಲಿ ಭಾರತದಲ್ಲಿ ಜ್ವಾಲಾಮುಖಿಗಳ ಪರಿಚಯ ಮಾಡಿಕೊಡಲಾಗಿದೆ. ಸೇಂಟ್ ಮೇರಿದ್ವೀಪದ ರಹಸ್ಯ ಬಯಲಾಗಿದೆ. ಅನಿಲದ ಮಹಾಪೂರ ಎಂಬ ಮುಂದಿನ ಅಧ್ಯಾಯ ಹೆಸರೇ ಸೂಚಿಸುವ ವೈಶಿಷ್ಟ್ಯವನ್ನು ವಿವರಿಸುತ್ತದೆ. ಜೊತೆಗಿರುವ ಚಿತ್ರ, ರೇಖಾಚಿತ್ರಗಳು, ವಿಜ್ಞಾನಿಗಳ ಚಿತ್ರಗಳು ಎಲ್ಲವೂ ಓದನ್ನು ಒಂದು ರಸಯಾತ್ರೆಯನ್ನಾಗಿಸುತ್ತದೆ. "ಜ್ವಾಲಾಮುಖಿಯೇ ಪ್ರಯೋಗಶಾಲೆ" ಎಂಬ ಅಧ್ಯಾಯದಲ್ಲಿ ಮಾನವ ಇವುಗಳಲ್ಲಿ ಯಾವ ಯಾವ ಪ್ರಯೋಗಗಳನ್ನು ಮಾಡಿದ ಎಂಬ ಕುತೂಹಲಕಾರಿ ಸಂಗತಿಗಳನ್ನು ತಿಳಿಸಲಾಗಿದೆ. ಜ್ವಾಲಾಮುಖಿ ಭೂಮಿಗೆ ಮಾತ್ರ ಸೀವಿತವಲ್ಲ, ಇದು ಇಡೀ ವಿಶ್ವದ ವಿದ್ಯಮಾನ ಎನ್ನುವುದನ್ನು ಕುತೂಹಲಕರ ಮಾಹಿತಿಯೊಂದಿಗೆ ಕೊನೆಯ ಅಧ್ಯಾಯ ತಿಳಿಸುತ್ತದೆ. ಶೀತಲ ಜ್ವಾಲಾಮುಖಿಗಳ ಬಗ್ಗೆಯೂ ತಿಳಿಸಲಾಗಿದೆ. ಅದರ ಕೊನೆಯ ವಾಕ್ಯ ನೋಡಿ: " ನಮ್ಮ ಸೌರಮಂಡಲದಲ್ಲೇ ಇಷ್ಟೋಂದು ವೈವಿಧ್ಯಮಯ ಜ್ವಾಲಾಮುಖಿಗಳಿವೆಯೆಂದರೆ ಇನ್ನು ಇಡೀ ಬ್ರಹ್ಮಾಂಡದಲ್ಲಿ? ಇಡೀ ವಿಶ್ವದಲ್ಲಿ ? ಇಲ್ಲೇ ನಮ್ಮ ಊಹೆ ಸೋಲುವುದು; ನಿಸರ್ಗದ ಚೋದ್ಯಕ್ಕೆ ಬೆರಗಾಗುವುದು".

ಭೂಮಿಯ ಟೈಂ ಬಾಂಬ್: ಜ್ವಾಲಾಮುಖಿ
ಲೇಖಕರು: ಟಿ.ಆರ್. ಅನಂತರಾಮು
೧೬೮ ಪುಟಗಳು (೨೪ ಪುಟ ಬಹುವರ್ಣದಲ್ಲಿ), ಬೆಲೆ ರೂ. ೧೫೦/-
ಪ್ರಕಾಶಕರು: ನವಕರ್ನಾಟಕ, ಬೆಂಗಳೂರು* ಲೇಖನದಲ್ಲಿ ವ್ಯಕ್ತಪಡಿಸಲಾಗಿರುವ ಎಲ್ಲ ಅಭಿಪ್ರಾಯಗಳೂ ಲೇಖಕರವು

ಕಾಮೆಂಟ್‌ಗಳಿಲ್ಲ:

badge