ಶುಕ್ರವಾರ, ಅಕ್ಟೋಬರ್ 11, 2013

ಬಿಗ್ ಡೇಟಾ ಬಗ್ಗೆ ಇನ್ನಷ್ಟು...

ಟಿ ಜಿ ಶ್ರೀನಿಧಿ

ಸರ್ಚ್ ಇಂಜನ್ ಹುಡುಕಾಟಗಳು, ಸಮಾಜಜಾಲಗಳಲ್ಲಿ ಹರಿದಾಡುವ ಸಂದೇಶಗಳು, ಆನ್‌ಲೈನ್ ಅಂಗಡಿಗಳಲ್ಲಿ ಮಾರಾಟವಾಗುವ ಸರಕುಗಳು - ಹೀಗೆ ಹಲವಾರು ಮೂಲಗಳಿಂದ ಹರಿದುಬರುವ ಅಗಾಧ ಪ್ರಮಾಣದ ದತ್ತಾಂಶವನ್ನು ನಾವು ಬಿಗ್ ಡೇಟಾ ಎಂದು ಕರೆಯುತ್ತೇವೆ ಎನ್ನುವುದೇನೋ ಸರಿ. ಆದರೆ ಇಷ್ಟೆಲ್ಲ ಭಾರೀ ಪ್ರಮಾಣದ ಮಾಹಿತಿಯಿಂದ ನಮಗೇನು ಉಪಯೋಗ? ಇದನ್ನು ವಿಶ್ಲೇಷಿಸಿ ಉಪಯುಕ್ತ ಮಾಹಿತಿ ಪಡೆದುಕೊಳ್ಳುವುದು ಹೇಗೆ?

ಸಾಂಪ್ರದಾಯಿಕ ದತ್ತಸಂಚಯಗಳಲ್ಲೇನೋ ನಮಗೆ ಏಕರೂಪದ ದತ್ತಾಂಶ ಸಿಗುತ್ತದೆ; ಆದರೆ ಬಿಗ್ ಡೇಟಾದಲ್ಲಿ ಹಾಗಲ್ಲವಲ್ಲ - ಇಲ್ಲಿ ವಿವಿಧ ಮೂಲಗಳಿಂದ ವಿವಿಧ ರೂಪಗಳಲ್ಲಿ ಬರುವ ದತ್ತಾಂಶವನ್ನು ಸಂಸ್ಕರಿಸುವುದೇ ಮೊದಲ ಸವಾಲು. ಹಲವಾರು ಬಾರಿ ಆ ಮಾಹಿತಿ ಒಂದೇ ಸ್ಥಳದಲ್ಲಿರುವುದೂ ಇಲ್ಲ.

ಹಿಂದೆ ಈ ಬಗೆಯ ದತ್ತಾಂಶವನ್ನು ಯಾರೂ ಸಂಸ್ಕರಿಸುತ್ತಲೇ ಇರಲಿಲ್ಲ. ಆದರೆ ಬಿಗ್ ಡೇಟಾ ಮಹತ್ವ ಸ್ಪಷ್ಟವಾಗುತ್ತ ಹೋದಂತೆ ಸಂಸ್ಥೆಗಳಿಗೆ ಈ ಬಗೆಯ ದತ್ತಾಂಶವನ್ನೂ ಸಂಸ್ಕರಿಸಿ ವಿಶ್ಲೇಷಿಸಬೇಕಾದ ಅಗತ್ಯ ಕಂಡುಬಂತು. ಆಗ ಶುರುವಾದದ್ದೇ ದತ್ತಾಂಶ ಸಂಸ್ಕರಣೆ-ವಿಶ್ಲೇಷಣೆಯ ಹೊಸ ಯುಗ. ಸಾಮಾನ್ಯ ವಿಧಾನಗಳಿಂದ ಸಂಪೂರ್ಣವಾಗಿ ಬೇರೆಯದೇ ಆದ ಈ ಬಗೆಯ ಸಂಸ್ಕರಣೆ-ವಿಶ್ಲೇಷಣೆಯಲ್ಲಿ ಬೇರೆಬೇರೆಡೆ ಇರುವ ಬೇರೆಬೇರೆ ಬಗೆಯ ದತ್ತಾಂಶವನ್ನು ನಮ್ಮ ಅಗತ್ಯಕ್ಕೆ ತಕ್ಕಂತೆ ಸಂಸ್ಕರಿಸಲಾಗುತ್ತದೆ. ಇದರ ಫಲಿತಾಂಶವಾಗಿ ದೊರಕುವ ಮಾಹಿತಿ ಬಲು ಮಹತ್ವದ್ದಾಗಿರುತ್ತದೆ ಎಂದು ತಜ್ಞರು ಹೇಳುತ್ತಾರೆ.

ಈ ನಿಟ್ಟಿನಲ್ಲಿ ಮೊದಲ ಯಶಸ್ವೀ ಪ್ರಯೋಗಗಳನ್ನು ನಡೆಸಿದ ಸಂಸ್ಥೆಗಳ ಪೈಕಿ ಗೂಗಲ್, ಅಮೆಜಾನ್ ಸೇರಿದಂತೆ ಅನೇಕ ಪ್ರಖ್ಯಾತ ಹೆಸರುಗಳಿವೆ. ನಮ್ಮ ಖರೀದಿಗಳನ್ನೆಲ್ಲ ಗಮನಿಸಿಕೊಂಡು, ನಮ್ಮಂತಹ ಇನ್ನೂ ಅದೆಷ್ಟೋ ಜನರ ಅಭ್ಯಾಸಗಳೊಡನೆ ಹೋಲಿಸಿನೋಡಿ ಅಮೆಜಾನ್ ಸಂಸ್ಥೆ ನಮ್ಮ ಆಸಕ್ತಿ ಕೆರಳಿಸಬಲ್ಲಂತಹ ಆಫರುಗಳನ್ನು ಕಳುಹಿಸುತ್ತದಲ್ಲ, ಅದು ಬಿಗ್ ಡೇಟಾ ಸಂಸ್ಕರಣೆಯ ಫಲಿತಾಂಶವೇ ಎನ್ನಬಹುದು. ಅಮೆಜಾನ್ ವಹಿವಾಟು ಹೆಚ್ಚಬೇಕು ಎಂದರೆ ಅದು ಮಾಡುವ ದತ್ತಾಂಶದ ವಿಶ್ಲೇಷಣೆ ಸರಿಯಾಗಿರಲೇಬೇಕು. ಹಾಗೆಯೇ ಗೂಗಲ್‌ನಲ್ಲಿ ಹುಡುಕಲುಹೊರಟಾಗ ಒಂದೆರಡು ಪದ ಟೈಪಿಸುತ್ತಿದ್ದಂತೆ ಮುಂದಿನದ್ದನ್ನು ಅದೇ ಊಹಿಸಿಬಿಡುವ ಸಂಗತಿಯನ್ನೂ ಇದೇ ಗುಂಪಿಗೆ ಸೇರಿಸಬಹುದು. ಬಳಕೆದಾರರ ಹುಡುಕಾಟ ಕ್ಷಿಪ್ರವಾಗಿ ಮುಗಿದಷ್ಟೂ ಗೂಗಲ್ ಸಂಸ್ಥೆಗೆ ಲಾಭವೇ ತಾನೆ!

ಬಿಗ್ ಡೇಟಾದಿಂದ ಏನು ಉಪಯೋಗ ಎನ್ನುವ ಪ್ರಶ್ನೆಗೂ ಈ ಉದಾಹರಣೆಗಳೇ ಉತ್ತರನೀಡುತ್ತವೆ ಎನ್ನಬಹುದು. ಗೂಗಲ್ ಇರಲಿ ಅಮೆಜಾನ್ ಇರಲಿ, ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಆ ಸಂಸ್ಥೆಗಳಿಗೆ ನೆರವಾಗುವಲ್ಲಿ ಬಿಗ್ ಡೇಟಾ ಸಂಸ್ಕರಣೆ-ವಿಶ್ಲೇಷಣೆ ಮಹತ್ವದ ಪಾತ್ರ ವಹಿಸುತ್ತದೆ. ಡೆಂಗ್ಯೂ-ಮಲೇರಿಯಾ ಮುಂತಾದ ಮಾರಕ ರೋಗಗಳು ಪ್ರಪಂಚದಾದ್ಯಂತ ಹರಡುವ ಬಗೆ ಮತ್ತು ಅದರ ಕಾರಣಗಳನ್ನು ವಿಶ್ಲೇಷಿಸಿ, ಅದರಿಂದ ದೊರಕುವ ಮಾಹಿತಿಯನ್ನು ರೋಗದ ಹರಡುವಿಕೆ ತಡೆಯುವಲ್ಲಿ ಉಪಯೋಗಿಸಲಾಗುತ್ತಿರುವ ಉದಾಹರಣೆ ಕೂಡ ಇದೆ. ಅಷ್ಟೆಲ್ಲ ದೊಡ್ಡ ಉದ್ದೇಶವಿಲ್ಲದಿದ್ದರೂ ಪರವಾಗಿಲ್ಲ, ನಮ್ಮ ಸಂಸ್ಥೆಯ ಬಗ್ಗೆ ಟ್ವಿಟ್ಟರಿನಲ್ಲಿ - ಫೇಸ್‌ಬುಕ್ಕಿನಲ್ಲಿ ಜನ ಏನು ಹೇಳುತ್ತಿದ್ದಾರೆ ಎಂದು ಅರ್ಥಮಾಡಿಕೊಂಡರೆ ಸಂಸ್ಥೆಗಳಿಗೆ ಅಷ್ಟರಿಂದಲೇ ಲಾಭವಾಗಬಲ್ಲದು. ಇನ್ನು ಗೂಗಲ್‌ನಲ್ಲಿ ಯಾವ ಮಾಹಿತಿಗಾಗಿ ಹೆಚ್ಚಿನ ಹುಡುಕಾಟ ನಡೆಯುತ್ತದೆ ಎಂದು ಗಮನಿಸಿಕೊಳ್ಳುವುದು ಗೂಗಲ್‌ಗಷ್ಟೇ ಅಲ್ಲ, ಇತರ ಜಾಲತಾಣಗಳಿಗೆ - ಕೆಲವೊಮ್ಮೆ ನಮ್ಮನಿಮ್ಮಂತಹ ಸಾಮಾನ್ಯರಿಗೂ ಲಾಭದಾಯಕವಾಗಬಹುದಲ್ಲ!

ಹೀಗೆ ಬಿಗ್ ಡೇಟಾ ಸಾಮಾನ್ಯರಿಂದ ಬೃಹತ್ ಸಂಸ್ಥೆಗಳವರೆಗೆ ಎಲ್ಲರನ್ನೂ ಒಂದಲ್ಲ ಒಂದು ರೀತಿಯಲ್ಲಿ ಮುಟ್ಟುತ್ತಿದೆ. ಬಿಗ್ ಡೇಟಾ ಬಗ್ಗೆ ಚರ್ಚೆಗಳು ಹೆಚ್ಚುಹೆಚ್ಚಿನ ಸಂಖ್ಯೆಯಲ್ಲಿ ಕೇಳಿಬರುತ್ತಿದ್ದಂತೆ ಐಟಿ ಲೋಕದಲ್ಲಂತೂ ಹತ್ತಾರು ಬಗೆಯ ಅವಕಾಶಗಳು, ಆಶಯಗಳು ಹುಟ್ಟಿಕೊಂಡಿವೆ; ಮುಂದೇನಾಗಲಿದೆ ಎನ್ನುವ ಕುತೂಹಲ ಎಲ್ಲರಲ್ಲೂ ಇದೆ!

ಅಕ್ಟೋಬರ್ ೧೧, ೨೦೧೩ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge