ಗುರುವಾರ, ಅಕ್ಟೋಬರ್ 10, 2013

ಕೌತುಕದ ಚುಚ್ಚುಮದ್ದು

ಇಂಜೆಕ್ಷನ್, ಸಿರಿಂಜ್ ಇವೆಲ್ಲ ಮಕ್ಕಳಲ್ಲಿ ಹುಟ್ಟುಹಾಕುವ ಭಾವನೆಗಳು ಅನೇಕ ಬಗೆಯವು: ಸಿರಿಂಜ್ ನೋಡಿದರೆ ಕುತೂಹಲ, ಇಂಜೆಕ್ಷನ್ ಎಂದರೆ ಭಯ!

ಇದೇ ಸಿರಿಂಜನ್ನು ಬಳಸಿಕೊಂಡು ವಿಜ್ಞಾನ ಕಲಿಕೆಯನ್ನು ಸಾಧ್ಯವಾಗಿಸಬಹುದೆ? ಈ ಉದ್ದೇಶದಿಂದ ಪ್ರಕಟವಾಗಿರುವ ಪುಸ್ತಕವೇ 'ಕೌತುಕದ ಚುಚ್ಚುಮದ್ದು! ...ಸೋಜಿಗದ ಸೂಜಿಮದ್ದು.' ಮಕ್ಕಳ ವಿಜ್ಞಾನ ಕಲಿಕೆಗೆ ಸಂತಸ ನೀಡುವ ಪ್ರಸಂಗಗಳ ಈ ಕೃತಿಯ ಲೇಖಕರು ಶ್ರೀ ನಾರಾಯಣ ಬಾಬಾನಗರ.

ನಮಗೆಲ್ಲ ಪರಿಚಿತವಾದ ಸಿರಿಂಜು ಈ ಪುಸ್ತಕದ ಕೇಂದ್ರಬಿಂದು. ಸಿರಿಂಜ್‌ಗಳನ್ನು ಬಳಸಿ ಮಾಡಬಹುದಾದ ಅನೇಕ ಚಟುವಟಿಕೆಗಳನ್ನು ಈ ಪುಸ್ತಕ ಪರಿಚಯಿಸುತ್ತದೆ. ಸಂದರ್ಭಕ್ಕೆ ತಕ್ಕಂತೆ ಹಲವಾರು ಪೂರಕ ಸಂಗತಿಗಳನ್ನೂ ಪರಿಚಯಿಸಲಾಗಿದೆ (ಉದಾ: ಕೆಲವು ಇಂಜೆಕ್ಷನ್‌ಗಳಲ್ಲಿ ನೀರು ಹಾಗೂ ಔಷಧಿಯ ಪುಡಿ ಪ್ರತ್ಯೇಕವಾಗಿರುವುದು ಏಕೆ?).

ಹಾಗಿದ್ದರೂ ವಿಜ್ಞಾನದ ಪಾಠದಂತೆ ತೋರದೆ ಕತೆಯಂತೆಯೋ ನಾಟಕದಂತೆಯೋ ತೋರುವುದು ಇಲ್ಲಿನ ಬರವಣಿಗೆಯ ವಿಶೇಷತೆ. ಮಕ್ಕಳ ಮನಸ್ಸಿನಲ್ಲಿ ಸಹಜವಾಗಿ ಮೂಡುವ ಪ್ರಶ್ನೆಗಳನ್ನು ಕೇಳಲು ಇಲ್ಲಿ ಮಕ್ಕಳ ಪಾತ್ರಗಳೇ ಇವೆ. ಒಟ್ಟಿನಲ್ಲಿ, ಹಿರಿಯ ವಿಜ್ಞಾನ ಸಂವಹನಕಾರರಾದ ಪ್ರೊ. ಎಂಆರ್‌ಎನ್ ಅವರು ಮುನ್ನುಡಿಯಲ್ಲಿ ಹೇಳಿರುವಂತೆ ಇದು ಮಕ್ಕಳ ಸಲುವಾಗಿ ಬರೆದ ಪುಸ್ತಕ ಎಂದು ಮೇಲುನೋಟಕ್ಕೆ ಅನಿಸಿದರೂ ಹಿರಿಯರೂ ಓದಬೇಕಾದ, ಸುಲಭವಾಗಿ ಓದಿಸಿಕೊಂಡು ಹೋಗುವ ಪುಸ್ತಕ ಇದು.

ಪುಸ್ತಕದ ವಿನ್ಯಾಸವನ್ನು ಆಕರ್ಷಕಗೊಳಿಸಲು ಸಾಕಷ್ಟು ಶ್ರಮಿಸಲಾಗಿದೆ. ಅಷ್ಟೇ ಅಲ್ಲ, ಪುಸ್ತಕದ ಗಾತ್ರ ಕೂಡ ಸುಲಭ ಓದಿಗೆ ಅನುಕೂಲಕರ. ಕನ್ನಡ ವಿಜ್ಞಾನ ಸಾಹಿತ್ಯಕ್ಕೆ  ವೈವಿಧ್ಯತಂದುಕೊಡುವ ನಿಟ್ಟಿನಲ್ಲಿ ಶ್ರೀ ನಾರಾಯಣ ಬಾಬಾನಗರ ಅವರ ಈ ಪ್ರಯತ್ನ ನಿಜಕ್ಕೂ ಶ್ಲಾಘನೀಯ.

ಇಂಟರ್‌ನೆಟ್ ಮೂಲಕ ಈ ಪುಸ್ತಕವನ್ನು ಕೊಳ್ಳಲು ಇಲ್ಲಿ ಕ್ಲಿಕ್ ಮಾಡಬಹುದು.

ಕೌತುಕದ ಚುಚ್ಚುಮದ್ದು! ...ಸೋಜಿಗದ ಸೂಜಿಮದ್ದು
ಲೇಖಕರು: ನಾರಾಯಣ ಬಾಬಾನಗರ
೬೦ ಪುಟಗಳು, ಬೆಲೆ ರೂ. ೮೦/-
ಪ್ರಕಾಶಕರು: ಪ್ರಿಸಮ್ ಬುಕ್ಸ್, ಬೆಂಗಳೂರು

ಕಾಮೆಂಟ್‌ಗಳಿಲ್ಲ:

badge