ಶುಕ್ರವಾರ, ಸೆಪ್ಟೆಂಬರ್ 20, 2013

ಫಿಲ್ಮ್ ಸ್ಟೋರಿ!

ಡಿಜಿಟಲ್ ಫೋಟೋಗ್ರಫಿ ತಂತ್ರಜ್ಞಾನ ಕುರಿತ ಕೃತಿ 'ಕ್ಲಿಕ್ ಮಾಡಿ ನೋಡಿ!' ಬರುವ ಭಾನುವಾರ (ಸೆ. ೨೨) ಬೆಂಗಳೂರಿನಲ್ಲಿ ಬಿಡುಗಡೆಯಾಗುತ್ತಿದೆ. ಛಾಯಾಗ್ರಹಣದ ಇತಿಹಾಸದಿಂದ ಡಿಜಿಟಲ್ ಕ್ಯಾಮೆರಾ ತಂತ್ರಜ್ಞಾನದ ಪಕ್ಷಿನೋಟದವರೆಗೆ, ಛಾಯಾಗ್ರಹಣದ ಪರಿಕಲ್ಪನೆಗಳ ಪರಿಚಯದಿಂದ ಕ್ಯಾಮೆರಾ ಕೊಳ್ಳುವ ಟಿಪ್ಸ್‌ವರೆಗೆ ಅನೇಕ ವಿಷಯಗಳತ್ತ ಗಮನಹರಿಸುವ ಈ ಪುಸ್ತಕದಿಂದ ಆಯ್ದ ಒಂದು ಭಾಗ ಇಲ್ಲಿದೆ. ಈ ಪುಸ್ತಕವನ್ನು ನವಕರ್ನಾಟಕ ಪ್ರಕಾಶನ ಪ್ರಕಟಿಸಿದೆ.

ಇದೇ ಪುಸ್ತಕದಿಂದ ಆಯ್ದ ಇನ್ನೊಂದು ಭಾಗ ಚುಕ್ಕು‌ಬುಕ್ಕು ಡಾಟ್ ಕಾಮ್‌ನಲ್ಲಿದೆ.

ಟಿ. ಜಿ. ಶ್ರೀನಿಧಿ

ಮೆಮೊರಿ ಕಾರ್ಡುಗಳ ಜೊತೆ ಕ್ಯಾಮೆರಾದ ಸಂಬಂಧ ಇಷ್ಟೊಂದು ಗಾಢವಾಗಿ  ಬೆಳೆಯುವ ಮುನ್ನ ಫಿಲ್ಮ್ ರೋಲುಗಳು ಛಾಯಾಗ್ರಹಣದ ಅವಿಭಾಜ್ಯ ಅಂಗಗಳಾಗಿದ್ದವು. ಫೋಟೋ ಕ್ಲಿಕ್ಕಿಸುವ ಮುನ್ನ ಕ್ಯಾಮೆರಾದಲ್ಲಿ ಫಿಲ್ಮ್ ಎಷ್ಟಿದೆ ಎಂದು ಪರೀಕ್ಷಿಸಿಕೊಳ್ಳುವುದು, ಎಲ್ಲ ಚಿತ್ರಗಳನ್ನೂ ಕ್ಲಿಕ್ಕಿಸಿದ ಮೇಲೆ ಫಿಲ್ಮ್ ರೋಲನ್ನು ಹುಷಾರಾಗಿ ಹೊರತೆಗೆದು ಸ್ಟೂಡಿಯೋಗೆ ಕೊಡುವುದು, ಚಿತ್ರಗಳು ಮುದ್ರಿತವಾಗಿ ಬರುವುದನ್ನು ಕಾತರದಿಂದ ಕಾಯುವುದು - ಇದು ಹವ್ಯಾಸಿ ಛಾಯಾಗ್ರಾಹಕರೆಲ್ಲರ ಜೀವನಕ್ರಮವೇ ಆಗಿತ್ತು ಎಂದರೂ ಸರಿಯೇ.

ಅತ್ಯಂತ ಸರಳವಾಗಿ ಹಾಗೂ ಅತ್ಯಂತ ಪರಿಣಾಮಕಾರಿಯಾಗಿ ಚಿತ್ರಗಳನ್ನು ದಾಖಲಿಸಿಕೊಳ್ಳುವ ಸಾಮರ್ಥ್ಯವೇ ಫಿಲ್ಮ್ ರೋಲುಗಳಿಗೆ ದೊರೆತ ಈ ಪ್ರಾಮುಖ್ಯಕ್ಕೆ ಕಾರಣ ಎನ್ನಬಹುದು. ಸಣ್ಣದೊಂದು ಸುರುಳಿಯೊಳಗೆ ಅವಿತುಕೊಂಡಿರುವ ತೆಳು ಹಾಳೆಯೊಂದು ಬೆಳಕಿನ ಸಂಪರ್ಕಕ್ಕೆ ಬಂದತಕ್ಷಣ  ತನ್ನ ಎದುರಿನ ದೃಶ್ಯವನ್ನು ತನ್ನಲ್ಲಿ ಸೆರೆಹಿಡಿದಿಟ್ಟುಕೊಳ್ಳುವುದು ಸಣ್ಣ ವಿಷಯವೂ ಅಲ್ಲ ಬಿಡಿ.

ಫಿಲ್ಮ್ ರೋಲಿನೊಳಗೆ ಪ್ಲಾಸ್ಟಿಕ್ಕಿನ ಆ ತೆಳು ಹಾಳೆ ಇರುತ್ತದಲ್ಲ, ಅದರ ಒಂದು ಬದಿಗೆ ವಿವಿಧ ರಾಸಾಯನಿಕಗಳನ್ನು ಲೇಪಿಸಲಾಗಿರುತ್ತದೆ. ಇತರ ಲೇಪನಗಳನ್ನೆಲ್ಲ ಒಟ್ಟಿಗೆ ಹಿಡಿದಿಡುವುದರಿಂದ ಪ್ರಾರಂಭಿಸಿ ಫಿಲ್ಮಿನಲ್ಲಿ ಚಿತ್ರವನ್ನು ಸೆರೆಹಿಡಿಯುವವರೆಗೆ ಈ ಲೇಪನಗಳು ಹಲವಾರು ಜವಾಬ್ದಾರಿಗಳನ್ನು ನಿರ್ವಹಿಸುತ್ತವೆ.

ಇವುಗಳ ಪೈಕಿ ಛಾಯಾಗ್ರಹಣದಲ್ಲಿ ಪ್ರಮುಖ ಪಾತ್ರವಹಿಸುವುದು ಸಿಲ್ವರ್ ಹ್ಯಾಲೈಡ್ ಎಂಬ ರಾಸಾಯನಿಕ. ಕ್ಯಾಮೆರಾದ ಗುಂಡಿಯನ್ನು ಒತ್ತಿದಾಗ ಬೆಳಕು ಒಳಬರುತ್ತದಲ್ಲ, ಆ ಬೆಳಕು ಸಿಲ್ವರ್ ಹ್ಯಾಲೈಡ್ ಲೇಪನದೊಡನೆ ವರ್ತಿಸಿದಾಗಲಷ್ಟೆ ಕ್ಯಾಮೆರಾ ಮುಂದಿನ ದೃಶ್ಯ ಫಿಲ್ಮಿನಲ್ಲಿ ಸೆರೆಯಾಗುತ್ತದೆ.
ಚಿತ್ರದ ಯಾವ ಭಾಗದಲ್ಲಿ ಬೆಳಕು ಸಿಲ್ವರ್ ಹ್ಯಾಲೈಡ್ ಕಣಗಳೊಡನೆ ಹೆಚ್ಚಾಗಿ ವರ್ತಿಸಿರುತ್ತದೋ ಆ ಭಾಗ ಹೆಚ್ಚು  ಸ್ಪಷ್ಟವಾಗಿ ಮೂಡುತ್ತದೆ, ಅಷ್ಟೇನೂ ಹೆಚ್ಚು ಬೆಳಕಿಲ್ಲದ ಭಾಗಗಳು ಕೊಂಚ ಮಬ್ಬುಮಬ್ಬಾಗಿ ಕಾಣಿಸಿಕೊಳ್ಳುತ್ತವೆ. ನಾವು ಬ್ಲ್ಯಾಕ್ ಆಂಡ್ ವೈಟ್ ಫಿಲ್ಮ್ ಬಳಸುತ್ತಿದ್ದರೆ ಅದೆಲ್ಲ ಕಪ್ಪು-ಬಿಳುಪಿನಲ್ಲೇ ಇರುತ್ತವೆ; ಕಲರ್ ಫಿಲ್ಮ್ ಆದರೆ ಎಲ್ಲವೂ ಬಣ್ಣದಲ್ಲೇ ಸೆರೆಯಾಗುತ್ತದೆ, ಅಷ್ಟೆ.

ಫಿಲ್ಮ್ ರೋಲುಗಳಲ್ಲಿ ಎಷ್ಟು ವಿಧ ಎಂದು ಕೇಳಿದರೆ ನಾವು ಈಗಷ್ಟೆ ನೋಡಿದೆವಲ್ಲ, ಕಲರ್ ಫಿಲ್ಮ್ ಮತ್ತು ಬ್ಲ್ಯಾಕ್ ಆಂಡ್ ವೈಟ್ ಫಿಲ್ಮ್ - ಅಷ್ಟೇ ತಾನೆ? ಎಂದು ಥಟ್ಟನೆ ಮರುಪ್ರಶ್ನೆ ಹಾಕುತ್ತೇವೆ.

ಆದರೆ ಫಿಲ್ಮ್‌ಗಳಲ್ಲಿರುವುದು ಇವೆರಡು ವಿಧಗಳಷ್ಟೇ ಅಲ್ಲ: ನಿರ್ದಿಷ್ಟ ಫಿಲ್ಮ್ ಯಾವ ಬೆಳಕಿನಲ್ಲಿ ಬಳಕೆಗೆ ಹೆಚ್ಚು ಸೂಕ್ತ ಎಂದು ಸೂಚಿಸುವ ಐಎಸ್‌ಒ (ಇಂಟರ್‌ನ್ಯಾಶನಲ್ ಸ್ಟಾಂಡರ್ಡ್ಸ್ ಆರ್ಗನೈಸೇಶನ್) ಅಥವಾ ಎಎಸ್‌ಎ (ಅಮೆರಿಕನ್ ಸ್ಟಾಂಡರ್ಡ್ಸ್ ಅಸೋಸಿಯೇಶನ್) ಸ್ಪೀಡ್ ರೇಟಿಂಗ್‌ಗೆ ಅನುಗುಣವಾಗಿಯೇ ಫಿಲ್ಮ್‌ಗಳಲ್ಲಿ ಹಲವಾರು ವಿಧಗಳಿವೆ. ಪ್ರೊಜೆಕ್ಟರಿನಲ್ಲಿ ಬಳಕೆಯಾಗುತ್ತದಲ್ಲ, ಆ ಸ್ಲೈಡುಗಳಿಗೆಂದೇ ಬೇರೆಬಗೆಯ ಫಿಲ್ಮ್ ಕೂಡ ಇದೆ.

ಚಿತ್ರ ಸೆರೆಹಿಡಿಯಲು ಬಳಸಿದ ಫಿಲ್ಮ್ ಯಾವುದೇ ಆದರೂ ರೋಲ್ ಮುಗಿದ ನಂತರ ಅದನ್ನು ಡೆವೆಲಪ್ ಮಾಡಲೇಬೇಕು. ಈ ಪ್ರಕ್ರಿಯೆಯಲ್ಲಿ ಹಲವು ವಿಶೇಷ ರಾಸಾಯನಿಕಗಳು ಬಳಕೆಯಾಗುತ್ತವೆ. 'ಫಿಲ್ಮ್ ತೊಳೆಸುವುದು' ಎಂಬ ಹೇಳಿಕೆ ಸಾಕಷ್ಟು ವ್ಯಾಪಕವಾಗಿ ಕೇಳಸಿಗುತ್ತದಲ್ಲ, ಅದಕ್ಕೆ ಕಾರಣವಾಗಿರುವುದು ಈ ಪ್ರಕ್ರಿಯೆಯ ಕೊನೆಯಲ್ಲಿ ಫಿಲ್ಮನ್ನು ನೀರಿನಿಂದ ತೊಳೆಯುತ್ತಿದ್ದ ಅಭ್ಯಾಸ.

ಫಿಲ್ಮ್ ರೋಲಿನಲ್ಲಿ ದಾಖಲಾದ ಚಿತ್ರಗಳು ನೆಗೆಟಿವ್ ಎಂದು ಕರೆಸಿಕೊಳ್ಳುವುದು ಡೆವೆಲಪಿಂಗ್ ಪ್ರಕ್ರಿಯೆಯ ಕೊನೆಯಲ್ಲೇ. ಆ ನೆಗೆಟಿವ್ ಅನ್ನು ಬಳಸಿ ಚಿತ್ರಗಳನ್ನು ಮುದ್ರಿಸಿಕೊಳ್ಳುವುದು ಸಾಧ್ಯವಾಗುತ್ತದೆ. ನಮಗೆ ಸ್ಲೈಡ್ ಬೇಕು ಎನ್ನುವುದಾದರೆ (ಅದಕ್ಕೆ ಸೂಕ್ತ ಫಿಲ್ಮ್ ಬಳಸಿದಾಗ) ಡೆವೆಲಪ್ ಮಾಡಿದ ಫಿಲ್ಮೇ ಸ್ಲೈಡುಗಳ ರೂಪದಲ್ಲಿ ನಮ್ಮ ಕೈಸೇರುತ್ತದೆ.

ಸೆಪ್ಟೆಂಬರ್ ೨೦, ೨೦೧೩ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ. ಬೂಲಿಯನ್ ಲಾಜಿಕ್ ಬಗ್ಗೆ ಪ್ರಕಟವಾಗುತ್ತಿದ್ದ ಲೇಖನಸರಣಿ ಮುಂದಿನವಾರ ಮುಂದುವರೆಯುತ್ತದೆ.

ಕಾಮೆಂಟ್‌ಗಳಿಲ್ಲ:

badge