ಶನಿವಾರ, ಆಗಸ್ಟ್ 10, 2013

ಸರಿ, ತಪ್ಪು ಮತ್ತು ಕಂಪ್ಯೂಟರ್

ಟಿ. ಜಿ. ಶ್ರೀನಿಧಿ

ಕಂಪ್ಯೂಟರಿಗೂ ತರ್ಕಕ್ಕೂ (ಲಾಜಿಕ್) ಅವಿನಾಭಾವ ಸಂಬಂಧ. ಅಲ್ಲಿ ಏನನ್ನೇ ಪ್ರತಿನಿಧಿಸಬೇಕಾದರೂ ಅದು ತರ್ಕಬದ್ಧವಾಗಿಯೇ ಇರಬೇಕು.

ಶಾಲೆಯ ವಿದ್ಯಾರ್ಥಿಯೊಬ್ಬ ಪ್ರತಿ ಶನಿವಾರ ಶಾಲೆಗೆ ಬೇರೆಯ ಸಮವಸ್ತ್ರ ಧರಿಸಿ ಹೋಗಬೇಕು ಎಂದುಕೊಳ್ಳೋಣ. ಹಾಗಾದರೆ ಪ್ರತಿ ದಿನ ಇವತ್ತು ಯಾವ ದಿನ ಎಂಬ ಆಲೋಚನೆ ಆತನ ಮನಸ್ಸಿಗೆ ಬರುತ್ತದೆ ತಾನೆ? ಶನಿವಾರವಾದರೆ ವಿಶೇಷ ಸಮವಸ್ತ್ರ, ಇಲ್ಲದಿದ್ದರೆ ಸಾಮಾನ್ಯ ಸಮವಸ್ತ್ರ.

ಇವತ್ತು ಶನಿವಾರವೇ? ಎಂದು ಆತ ತನ್ನನ್ನು ತಾನೇ ಕೇಳಿಕೊಂಡರೆ ಅದಕ್ಕೆ 'ಹೌದು' ಅಥವಾ 'ಇಲ್ಲ' ಎನ್ನುವುದರಲ್ಲಿ ಯಾವುದೋ ಒಂದು ಉತ್ತರ ದೊರಕುತ್ತದೆ. ವಿದ್ಯಾರ್ಥಿಯ ಶನಿವಾರದ ಸಮವಸ್ತ್ರವಷ್ಟೇ ಏಕೆ, ನಮ್ಮ ಬದುಕಿನ ಇನ್ನೂ ಹಲವಾರು ಸನ್ನಿವೇಶಗಳನ್ನು ಪ್ರಶ್ನೆಗಳನ್ನಾಗಿ ರೂಪಿಸಿಕೊಂಡರೂ 'ಹೌದು' ಅಥವಾ 'ಇಲ್ಲ' - ಇವೆರಡಲ್ಲಿ ಒಂದು ಉತ್ತರ ಬರುವುದು ಸಾಮಾನ್ಯ: ಶಾಲೆಗೋ ಕಚೇರಿಗೋ ಹೊರಡುವ ಸಮಯ ಆಯಿತೆ? ಊಟಮಾಡಲು ಹಸಿವೆ ಆಗಿದೆಯೆ? ನಮಗೆ ಬೇಕಾದ ಕಾಲೇಜಿನಲ್ಲಿ ಸೀಟು ಸಿಗಲು ಬೇಕಾದಷ್ಟು ಅಂಕ ಬಂದಿದೆಯೆ? ಮೊಬೈಲ್ ಬಳಸಲು ಬೇಕಾದಷ್ಟು ಕರೆನ್ಸಿ ಇದೆಯೆ? ಹೀಗೆ. ಇಂತಹ ಪ್ರಶ್ನೆಗಳಿಗೆ ದೊರಕುವ ಉತ್ತರವನ್ನೇ ನಮ್ಮ ಮುಂದಿನ ಕ್ರಿಯೆ ಅವಲಂಬಿಸಿರುತ್ತದೆ. ಕೆಲವೊಮ್ಮೆ ಇಂತಹ ಪ್ರಶ್ನೆಗಳ ಸರಣಿಯೇ ನಮ್ಮೆದುರು ನಿಲ್ಲುವುದುಂಟು: ಮೊದಲ ಪ್ರಶ್ನೆಯ ಉತ್ತರ ಆಧರಿಸಿ ಎರಡನೇ ಪ್ರಶ್ನೆ; ಅದರ ಉತ್ತರವನ್ನು ಅವಲಂಬಿಸಿ ಮೂರನೆಯ ಪ್ರಶ್ನೆ, ಹೀಗೆ ಈ ಸರಣಿ ಬೆಳೆಯುತ್ತ ಹೋಗುತ್ತದೆ.

ಕಂಪ್ಯೂಟರಿನಲ್ಲಿ ಏನನ್ನೇ ಪ್ರತಿನಿಧಿಸಬೇಕಾದರೂ ಅದರ ಪ್ರತಿ ಹಂತವೂ ಹೀಗೆಯೇ ತರ್ಕಬದ್ಧವಾಗಿರಬೇಕು. ಅಂದರೆ, ಅಲ್ಲಿನ ಪ್ರತಿಯೊಂದು ಹಂತದ ಉತ್ತರವೂ 'ಸರಿ' (ಟ್ರೂ) ಆಗಿರಬೇಕು, ಇಲ್ಲವೇ 'ತಪ್ಪು' (ಫಾಲ್ಸ್) ಆಗಿರಬೇಕು.

ಇದೇಕೆ ಹೀಗೆ ಎನ್ನುವ ಪ್ರಶ್ನೆಗೆ ಉತ್ತರ ಹುಡುಕುವ ಮುನ್ನ ಅನಲಾಗ್ ಹಾಗೂ ಡಿಜಿಟಲ್ ತಂತ್ರಜ್ಞಾನಗಳ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳುವುದು ಒಳಿತು.

ನಮಗೆಲ್ಲ ಟೇಪ್ ರೆಕಾರ್ಡರ್ ಗೊತ್ತಲ್ಲ, ಅನಲಾಗ್ ತಂತ್ರಜ್ಞಾನದ ಕಾರ್ಯವೈಖರಿ ತಿಳಿದುಕೊಳ್ಳಲು ಅದೊಂದು ಉತ್ತಮ ಉದಾಹರಣೆ. ರೆಕಾರ್ಡ್ ಮಾಡಬೇಕು ಎಂದಾಗ ಮೈಕ್ರೋಫೋನ್ ಮೂಲಕ ದೊರಕುವ ಧ್ವನಿ ತರಂಗಗಳನ್ನು ಹಾಗೆಯೇ ಕ್ಯಾಸೆಟ್ಟಿನಲ್ಲಿರುವ ಟೇಪ್ ಮೇಲಕ್ಕೆ ವರ್ಗಾಯಿಸಲಾಗುತ್ತದೆ. ಇಲ್ಲಿ ಮೂಲ ಧ್ವನಿಯೂ ಅನಲಾಗ್, ಟೇಪ್‌ನಲ್ಲಿ ದಾಖಲಾಗಿರುವುದೂ ಅನಲಾಗ್. ಕ್ಯಾಸೆಟ್ ಹಾಕಿ ಹಾಡು ಕೇಳುವಾಗ ನಮಗೆ ಕೇಳಿಸುವುದು ಇದೇ ಅನಲಾಗ್ ಧ್ವನಿಯ ತರಂಗಗಳು.

ಡಿಜಿಟಲ್ ತಂತ್ರಜ್ಞಾನ ಕೆಲಸಮಾಡುವುದೇ ಬೇರೆ ರೀತಿ. ಉದಾಹರಣೆಗೆ, ಕಂಪ್ಯೂಟರ್ ಬಳಸಿ ಧ್ವನಿಯನ್ನು ರೆಕಾರ್ಡ್ ಮಾಡುವಾಗ ಮೂಲ ಧ್ವನಿ ತರಂಗಗಳನ್ನು ಹಾಗೆಯೇ ದಾಖಲಿಸಿಕೊಳ್ಳುವ ಬದಲಿಗೆ ಅದು ನಿರ್ದಿಷ್ಟ ಅವಧಿಗೊಮ್ಮೆಯಂತೆ ಮೂಲ ಧ್ವನಿ ಯಾವ ಮಟ್ಟದಲ್ಲಿದೆ ಎನ್ನುವುದನ್ನು ದಾಖಲಿಸಿಕೊಳ್ಳುತ್ತ ಹೋಗುತ್ತದೆ. ಹೀಗೆ ದಾಖಲಾದ 'ಸ್ಯಾಂಪಲ್ಲು'ಗಳನ್ನು ಅಂಕಿಗಳ ರೂಪದಲ್ಲಿ ಉಳಿಸಿಡಲಾಗುತ್ತದೆ (ಮೂಲ ಧ್ವನಿಯನ್ನು ಆದಷ್ಟೂ ಯಥಾವತ್ತಾಗಿ ಗ್ರಹಿಸಲು ಮೂಲ ಧ್ವನಿಯ ತರಂಗದಲ್ಲಿ ಅನೇಕ ಮಟ್ಟಗಳನ್ನು ಗುರುತಿಸಲಾಗಿರುತ್ತದೆ; ಹಾಗೆಯೇ ಪ್ರತಿ ಸೆಕೆಂಡಿಗೆ ಸಾವಿರಾರು ಸ್ಯಾಂಪಲ್ಲುಗಳನ್ನೂ ದಾಖಲಿಸಿಕೊಳ್ಳಲಾಗುತ್ತದೆ). ಧ್ವನಿಯನ್ನು ಮತ್ತೆ ಕೇಳಬೇಕು ಎಂದಾಗ ಇವೇ ಅಂಕಿಗಳ ಆಧಾರದ ಮೇಲೆ ಧ್ವನಿ ತರಂಗವನ್ನು ಮರುಸೃಷ್ಟಿಸಲಾಗುತ್ತದೆ.

ಡಿಜಿಟಲ್ ತಂತ್ರಜ್ಞಾನ ಬಳಸಿ ಧ್ವನಿಯನ್ನು ದಾಖಲಿಸಿಕೊಳ್ಳುವ ಹಾಗೂ ಮತ್ತೆ ಕೇಳುವ ಈ ಉದಾಹರಣೆಯಲ್ಲಿ ನೋಡಿದಂತೆ ಇಲ್ಲಿ ಎಲ್ಲವೂ ಅಂಕಿಗಳ ರೂಪದಲ್ಲೇ ಉಳಿಯಬೇಕು ತಾನೆ. ಈ ಅಂಕಿಗಳನ್ನು ವಿದ್ಯುನ್ಮಾನ ರೂಪದಲ್ಲಿ ಪ್ರತಿನಿಧಿಸುವಾಗ 'ಆನ್' ಅಥವಾ 'ಆಫ್' ಎಂಬ ಎರಡು ರೂಪಗಳನ್ನಷ್ಟೆ ಬಳಸುವುದು ಸಾಧ್ಯ - ಲೈಟಿನ ಸ್ವಿಚ್ ಅದುಮಿದರೆ ಬೆಳಕಿದೆ, ಇಲ್ಲವಾದರೆ ಇಲ್ಲ ಎನ್ನುವಂತೆ.

ಸ್ವಿಚ್ ಅದುಮಿದಾಗ ವಿದ್ಯುತ್ ಹರಿದು ಬಲ್ಬು ಬೆಳಗುತ್ತದಲ್ಲ; ಕಂಪ್ಯೂಟರ್ ಸರ್ಕ್ಯೂಟುಗಳಲ್ಲಿರುವ ಸ್ವಿಚ್ಚುಗಳು ಕೂಡ ಹಾಗೆಯೇ. ಅವು ಆನ್ ಆಗಿವೆಯೋ ಆಫ್ ಆಗಿವೆಯೋ ಎನ್ನುವುದರ ಆಧಾರದ ಮೇಲೆ ಕಂಪ್ಯೂಟರಿನಲ್ಲಿ ಏನು ಮಾಹಿತಿ ಶೇಖರವಾಗಿದೆ ಎನ್ನುವುದು ತೀರ್ಮಾನವಾಗುತ್ತದೆ; ಇವತ್ತು ಶನಿವಾರ ಹೌದೋ ಅಲ್ಲವೋ ಎನ್ನುವುದರ ಮೇಲೆ ವಿದ್ಯಾರ್ಥಿಯ ಸಮವಸ್ತ್ರ ಬದಲಾಗುವಂತೆ!

ಆಗಸ್ಟ್ ೯, ೨೦೧೩ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge