ಶುಕ್ರವಾರ, ಆಗಸ್ಟ್ 2, 2013

ಕಂಪ್ಯೂಟರ್ ಕಡೆಗೊಂದು ಮರುನೋಟ

ಟಿ. ಜಿ. ಶ್ರೀನಿಧಿ

ನಮ್ಮ ದಿನನಿತ್ಯದ ಬದುಕಿನ ಹತ್ತಾರು ಕೆಲಸಗಳಲ್ಲಿ ಗೊತ್ತಿದ್ದೋ ಗೊತ್ತಿಲ್ಲದೆಯೋ ನಾವು ಕಂಪ್ಯೂಟರುಗಳನ್ನು ಬಳಸುತ್ತೇವೆ. ನಮ್ಮಲ್ಲಿ ಅನೇಕರ ಮನೆಗಳಲ್ಲಿ ಕನಿಷ್ಠ ಒಂದಾದರೂ ಕಂಪ್ಯೂಟರ್ ಇರುವುದು ತೀರಾ ಸಾಮಾನ್ಯ. ಅಷ್ಟೇ ಏಕೆ, ನಮ್ಮೆಲ್ಲರ ಕೈಯಲ್ಲಿರುವ ಮೊಬೈಲುಗಳೂ ಸ್ಮಾರ್ಟ್ ಆಗುತ್ತ ಆಗುತ್ತ ತಾವೂ ಕಂಪ್ಯೂಟರುಗಳೇ ಆಗಿಬಿಟ್ಟಿವೆ!

ಹೀಗಿರುವಾಗ ಕಂಪ್ಯೂಟರುಗಳನ್ನು ಯಾರಿಗೂ ವಿಶೇಷವಾಗಿ ಪರಿಚಯಿಸುವ ಅಗತ್ಯ ಬೀಳುವುದು ತೀರಾ ಅಪರೂಪ ಅಂತಲೇ ಹೇಳಬೇಕು. ನಿಮಗೆ ಕಂಪ್ಯೂಟರ್ ಗೊತ್ತಾ ಎಂದು ಯಾರನ್ನಾದರೂ ಕೇಳಿದರೆ ಪ್ರತಿಕ್ರಿಯೆಯಾಗಿ "ಓ, ಅಷ್ಟೂ ಗೊತ್ತಿಲ್ಲವೇ?" ಎಂಬ ಉದ್ಗಾರ ಕೇಳಸಿಗುವ ಸಾಧ್ಯತೆಯೇ ಹೆಚ್ಚು. ನಮಗೆ ಯಾರಾದರೂ ಈ ಪ್ರಶ್ನೆ ಹಾಕಿದರೆ ನಾವೂ ಇದೇ ಉತ್ತರ ಕೊಡುತ್ತೇವೇನೋ.

ಇರಲಿ, ಸುಮ್ಮನೆ ವಾದಕ್ಕಾಗಿ, ನಾವೀಗ ಕಂಪ್ಯೂಟರ್ ಎಂದರೇನು ಎಂಬ ಪ್ರಶ್ನೆಗೆ (ಮರುಪ್ರಶ್ನೆಯ ರೂಪದಲ್ಲಲ್ಲ!) ಉತ್ತರ ಹೇಳಬೇಕಿದೆ ಎಂದುಕೊಳ್ಳೋಣ. ಅಂತಹ ಸಂದರ್ಭದಲ್ಲಿ ನಮ್ಮ ಉತ್ತರ ಏನಿರಬಹುದು?

ಕಂಪ್ಯೂಟರ್ ಕುರಿತ ಪ್ರಾಥಮಿಕ ಪಾಠ ಹೇಳುತ್ತಿದ್ದೇವೆ ಎಂದಾದರೆ ಬಹುಶಃ ಕಂಪ್ಯೂಟರನ್ನು ಕ್ಯಾಲ್‌ಕ್ಯುಲೇಟರಿಗೆ ಹೋಲಿಸಬಹುದೇನೋ. ಕಂಪ್ಯೂಟರ್ ಒಂದು ಕ್ಯಾಲ್‌ಕ್ಯುಲೇಟರ್ ಇದ್ದಂತೆ, ಬೇರೆಬೇರೆ ವಿಷಯಗಳಿಗೆ ಸಂಬಂಧಪಟ್ಟ ಮಾಹಿತಿ ಸಂಗ್ರಹಿಸಿಟ್ಟುಕೊಂಡು ಅವನ್ನೆಲ್ಲ ಬಳಸಿ ನೂರೆಂಟು ಬಗೆಯ ಲೆಕ್ಕಾಚಾರ ಮಾಡಲು ಕಂಪ್ಯೂಟರ್ ಬಳಕೆಯಾಗುತ್ತದೆ ಅಂತಲೂ ಹೇಳಬಹುದು.

ಆದರೆ ಹೀಗೆ ಹೇಳಿದ ತಕ್ಷಣ ನಮ್ಮಲ್ಲೇ ಇನ್ನೊಂದು ಪ್ರಶ್ನೆ ಮೂಡುತ್ತದೆ: ಬರಿಯ ಇಷ್ಟೇ ಕೆಲಸವಾಗಿದ್ದರೆ ಕಂಪ್ಯೂಟರ್ ಬದಲಿಗೆ ಕ್ಯಾಲ್‌ಕ್ಯುಲೇಟರನ್ನೇ ಬಳಸಬಹುದಲ್ಲ! ಸರಳವಾದ ಕ್ಯಾಲ್‌ಕ್ಯುಲೇಟರನ್ನು ಬಳಸುವ ಬದಲು ಹೆಚ್ಚು ವೆಚ್ಚದ, ಬಳಸಲು ಹೆಚ್ಚು ಕ್ಲಿಷ್ಟವಾದ ಕಂಪ್ಯೂಟರ್ ಸಹವಾಸ ಏಕೆ ಬೇಕು? ಇಂಥದ್ದೊಂದು ಸಾಧನವನ್ನು ರೂಪಿಸಿದ ಕಾರಣವಾದರೂ ಏನು?

ಇತಿಹಾಸದ ಕಡೆಗೊಂದು ಇಣುಕುನೋಟ ಹರಿಸಿದರೆ ಆಧುನಿಕ ಕಂಪ್ಯೂಟರ್ ಉಗಮದ ಹಿಂದೆ ಲೋಕಕಲ್ಯಾಣದ ಘನ ಉದ್ದೇಶವೇನೂ ಇರಲಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಏಕೆಂದರೆ ಕಂಪ್ಯೂಟರ್ ಬೆಳವಣಿಗೆಗೆ ಕಾರಣವಾದದ್ದು ಎರಡನೇ ವಿಶ್ವಸಮರ!

ಯುದ್ಧನೌಕೆಗಳಿಂದ ವೈರಿಗಳತ್ತ ಸ್ಫೋಟಕಗಳನ್ನು ಹಾರಿಸುವಾಗ ಅದರ ಕೋನ, ವೇಗ ಇತ್ಯಾದಿಗಳನ್ನೆಲ್ಲ ತೀರ್ಮಾನಿಸಲು ಸಾಕಷ್ಟು ಲೆಕ್ಕಾಚಾರಗಳನ್ನು ಮಾಡಬೇಕಾಗುತ್ತಿತ್ತು. ರೇಡಾರ್ ಸಹಾಯದಿಂದ ಶತ್ರುವನ್ನು ಗುರುತಿಸಿದ ಮೇಲೆ ಶತ್ರು ಸಾಗುತ್ತಿರುವ ದಿಕ್ಕು, ಆತನ ವೇಗ ಇದನ್ನೆಲ್ಲ ಗಮನಿಸಿ ಕರಾರುವಾಕ್ಕಾಗಿ ದಾಳಿ ನಡೆಸಬೇಕಿತ್ತಲ್ಲ, ಯುದ್ಧದ ತೀವ್ರತೆ ಹೆಚ್ಚಾದಂತೆ ಇದಕ್ಕೆ ಬೇಕಾದ ಲೆಕ್ಕಾಚಾರಗಳನ್ನೆಲ್ಲ ಮನುಷ್ಯರೇ ಮಾಡುವುದು ಕಷ್ಟವಾಗತೊಡಗಿತು. ಶಾಲೆ-ಕಾಲೇಜಿನ ವಿದ್ಯಾರ್ಥಿಗಳು ಲಾಗ್ ಟೇಬಲ್ ಬಳಸಿದಂತೆ ಇಲ್ಲೂ ಫೈರಿಂಗ್ ಟೇಬಲ್ ಬಳಸಿ ಕ್ಷಿಪ್ರ ಕಾರ್ಯಾಚರಣೆ ನಡೆಸಬೇಕಾದ ಅಗತ್ಯ ಕಂಡುಬಂತು.

ವಿದ್ಯಾರ್ಥಿಯೊಬ್ಬ ಲಾಗ್ ಟೇಬಲ್ ಬಳಸಬೇಕೆಂದರೆ ಮೊದಲಿಗೆ ಅದನ್ನು ಯಾರಾದರೂ ಸಿದ್ಧಮಾಡಿಟ್ಟಿರಬೇಕಲ್ಲ! ಫೈರಿಂಗ್ ಟೇಬಲಿನದೂ ಅದೇ ಕತೆ. ಅಂಥದ್ದೊಂದು ಪಟ್ಟಿಯನ್ನು ಯಾರಾದರೂ ಸಿದ್ಧಪಡಿಸಿಟ್ಟರೆ ಬಾಂಬ್ ಹಾಕಲು ಬೇಕಾದ ಲೆಕ್ಕಾಚಾರಕ್ಕೆ ಅದನ್ನು ಬಳಸಬಹುದಿತ್ತು ನಿಜ, ಆದರೆ ಮೊದಲಿಗೆ ಆ ಪಟ್ಟಿ ಸಿದ್ಧಪಡಿಸುವುದು ಹೇಗೆ?

ಇದಕ್ಕೆ ಬೇಕಾದ ಲೆಕ್ಕಾಚಾರವನ್ನು ಯಂತ್ರವೊಂದರ ಸಹಾಯದಿಂದ ಕ್ಷಿಪ್ರವಾಗಿ ಮಾಡಲು ಸಾಧ್ಯವಾಗಬಹುದು ಎಂದು ಯಾರಿಗೋ ತೋಚಿತು. ಆ ವೇಳೆಗಾಗಲೇ ಚಾರ್ಲ್ಸ್ ಬ್ಯಾಬೇಜ್‌ನಂತಹ ಆದ್ಯ ಪ್ರವರ್ತಕರು ಯಾಂತ್ರಿಕ (ಮೆಕಾನಿಕಲ್) ಕಂಪ್ಯೂಟರುಗಳನ್ನು ಸೃಷ್ಟಿಸಲು ಪ್ರಯತ್ನಿಸಿದ್ದರಲ್ಲ, ಹಾಗಾಗಿ ಈ ಬಾರಿಯೂ ಕಂಪ್ಯೂಟರುಗಳತ್ತಲೇ ಒಲವು ವ್ಯಕ್ತವಾಯಿತು; ಮೆಕಾನಿಕಲ್ ಕಂಪ್ಯೂಟರುಗಳ ಬದಲು ಇಲೆಕ್ಟ್ರಾನಿಕ್ ಕಂಪ್ಯೂಟರ್ ಸೃಷ್ಟಿಯ ನಿರೀಕ್ಷೆಯಿದ್ದದ್ದೇ ವ್ಯತ್ಯಾಸ ಅಷ್ಟೆ!

ಈ ನಿರೀಕ್ಷೆಯೊಡನೆ ವಿಶ್ವದ ವಿವಿಧೆಡೆಗಳಲ್ಲಿ ಅಪಾರ ಪ್ರಮಾಣದ ಬಂಡವಾಳ ಹಾಗೂ ಮೇಧಾಶಕ್ತಿಯನ್ನು ಇಲೆಕ್ಟ್ರಾನಿಕ್ ಕಂಪ್ಯೂಟರ್ ಸೃಷ್ಟಿಯ ಪ್ರಯತ್ನದ ಮೇಲೆ ನಿಯೋಗಿಸಲಾಯಿತು. ಎಲ್ಲರೂ ನಿರೀಕ್ಷಿಸಿದಂತೆ ಒಂದಕ್ಕಿಂತ ಒಂದು ಹೆಚ್ಚು ಸಮರ್ಥವಾದ ಕಂಪ್ಯೂಟರುಗಳ ಆವಿಷ್ಕಾರವಾಯಿತು.

ಯುದ್ಧಕಾಲದಲ್ಲಿ ಆದಂತೆ ಮೊದಮೊದಲು ಬಂದ ಕಂಪ್ಯೂಟರುಗಳು ಹೆಚ್ಚಾಗಿ ಗಣಿತದ ಲೆಕ್ಕಾಚಾರವನ್ನಷ್ಟೇ ಮಾಡುತ್ತಿದ್ದವು. ಹಾಗಾಗಿ ಲೆಕ್ಕಹಾಕುವ, ಅಂದರೆ 'ಕಂಪ್ಯೂಟ್' ಮಾಡುವ ಯಂತ್ರವೆಂಬ ಹೆಸರು ಅವಕ್ಕೆ ಹೆಚ್ಚಾಗಿ ಹೊಂದುತ್ತಿತ್ತು. 'ಕಂಪ್ಯೂಟರ್' ಎಂಬ ಹೆಸರು ಖಾಯಮ್ಮಾಗಿ ನಿಂತದ್ದು ಅದೇ ಕಾರಣದಿಂದಾಗಿ.

ಕಂಪ್ಯೂಟರುಗಳು ಈಗ ಮಾಡುವುದೂ ಲೆಕ್ಕಾಚಾರವೇ ಆದರೂ ಅದರ ವ್ಯಾಪ್ತಿ ಮನರಂಜನೆಯಿಂದ ಹವಾಮಾನ ಮುನ್ಸೂಚನೆ ನೀಡುವವರೆಗೆ, ಕಾರಿನ ಭಾಗಗಳನ್ನು ನಿಯಂತ್ರಿಸುವುದರಿಂದ ರಾಕೆಟ್ ಉಡಾಯಿಸುವವರೆಗೆ, ಉನ್ನತ ಅಧ್ಯಯನದಿಂದ ಜನಸಾಮಾನ್ಯರ ಜೀವನದ ಭಾಗವೇ ಆಗುವವರೆಗೂ ಹರಡಿಕೊಂಡಿದೆ. ಹೀಗಾಗಿಯೇ, ನಮ್ಮ ಸುತ್ತಲೂ ಒಂದು ಕಂಪ್ಯೂಟರ್ ಪ್ರಪಂಚವೇ ರೂಪುಗೊಂಡಿದೆ!

ಆಗಸ್ಟ್ ೨, ೨೦೧೩ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge