ಶನಿವಾರ, ಜುಲೈ 20, 2013

ಏನು? ಗಣಿತ ಅಂದ್ರಾ?

ಪ್ರತಿಯೊಬ್ಬರೂ ಶಾಲೆಯಲ್ಲಿ ಗಣಿತ ಕಲಿತೇ ಇರುತ್ತಾರೆ. ಪಾಸು ಎನ್ನುವುದು ಅನಿವಾರ್ಯ; ಆದ್ದರಿಂದ ಪಾಸೂ ಮಾಡಿರುತ್ತಾರೆ. ಆದರೆ ಶಾಲೆಯಲ್ಲಿ ಕಲಿತ ಗಣಿತದ ಎಷ್ಟು ಭಾಗ ಹಲವಾರು ವರ್ಷಗಳ ನಂತರವೂ ನೆನಪಿನಲ್ಲಿ ಉಳಿದಿದೆ ಎಂದು ಪ್ರಶ್ನೆ ಕೇಳಿದಾಗ ಅವರ ವೃತ್ತಿಗೆ ಅನುಗುಣವಾಗಿ ವೈವಿಧ್ಯಮಯ ಉತ್ತರಗಳು ದೊರಕುತ್ತವೆ. ಬಹುಶಃ ಗಣಿತ ಇಷ್ಟ ಎನ್ನುವವರಿಗಿಂತ ಗಣಿತ ಕಷ್ಟ ಎನ್ನುವವರ ಸಂಖ್ಯೆಯೇ ಜಾಸ್ತಿಯೇನೋ.

ಇದಕ್ಕೆ ಕಾರಣ ಏನು ಎಂದು ಹುಡುಕುತ್ತ ಹೋದರೆ ಎದುರಿಗೆ ನಿಲ್ಲುವುದು ನಮ್ಮ ಶಿಕ್ಷಣ ವ್ಯವಸ್ಥೆ. ಈ ವರ್ಷದ ಸಿಲಬಸ್ ಇಷ್ಟು, ಇಷ್ಟನ್ನು ನೀನು ಕಲಿಯಲೇಬೇಕು ಎನ್ನುವ ಶಿಕ್ಷಣಕ್ರಮ ಮಕ್ಕಳನ್ನು ಹೆದರಿಸಬಹುದೇ ಹೊರತು ಅವರಲ್ಲಿ ಕಲಿಕೆಯ ಬಗ್ಗೆ ಪ್ರೀತಿ ಮೂಡಿಸಲಾರದು. ನಮ್ಮ ಶಾಲಾದಿನಗಳ ಗಣಿತದ ಪಾಠಗಳು ಸವಿನೆನಪನ್ನೇನೂ ಉಳಿಸದೆಹೋದದ್ದಕ್ಕೆ ಇದೇ ಕಾರಣ ಎಂದರೆ ತಪ್ಪಾಗಲಿಕ್ಕಿಲ್ಲ.

ಉದಾಹರಣೆಗೆ ನಮ್ಮ ಗಣಿತದ ಪಾಠದಲ್ಲಿದ್ದ ಲ.ಸಾ.ಅ. ಮತ್ತು ಮ.ಸಾ.ಅ. (Highest Common Factor (H.C.F) and Lowest Common Multiple (L.C.M)). ಅದನ್ನೆಲ್ಲ ಶಾಲೆಯಲ್ಲಿ ನಮಗೆ ಕಲಿಸಿಕೊಟ್ಟರು, ನಾವು ಕಲಿತೆವು, ಪರೀಕ್ಷೆ ಪಾಸಾಗಿ ಗೆದ್ದೆವು. ಆದರೆ ನಮಗೆ ಅವನ್ನೆಲ್ಲ ಲೆಕ್ಕಹಾಕುವುದು ಗೊತ್ತಾಯಿತೇ ಹೊರತು ಅದರ ಉಪಯೋಗ ಏನು ಎಂದು ಮಾತ್ರ ತಿಳಿಯಲಿಲ್ಲ.

ಇಂತಹ ಅಂಶಗಳನ್ನೆಲ್ಲ ಸರಳವಾಗಿ ಹೇಳಿಕೊಡುವವರು ಯಾರಾದರೂ ಸಿಕ್ಕಿದ್ದರೆ ಗಣಿತದ ಬಗ್ಗೆ ಭೀತಿಯ ಜಾಗದಲ್ಲಿ ನಮಗೂ ಪ್ರೀತಿ ಬಂದಿರುತ್ತಿತ್ತೋ ಏನೋ.

ಇರಲಿ, "ಇದು ನಮಗೆ ಶಾಲೆಯಲ್ಲಿದ್ದಾಗ ಸಿಕ್ಕಿದ್ದರೆ ಎಷ್ಟು ಚೆನ್ನಾಗಿತ್ತಲ್ಲ" ಎನ್ನುವಂತಹ ಪುಸ್ತಕವೊಂದು ಇದೀಗ ಪ್ರಕಟವಾಗಿದೆ. ಗಣಿತದಂತಹ ಕಠಿಣ ವಿಷಯವನ್ನೂ ರಂಜನೀಯವಾಗಿ ಮಾಡಿ ತೋರಿಸಿರುವ ಈ ಪುಸ್ತಕದ ಹೆಸರೇ "ಏನು? ಗಣಿತ ಅಂದ್ರಾ?". ಇದನ್ನು ಬರೆದಿರುವವರು ಹೆಸರಾಂತ ವಿಜ್ಞಾನಿ, ಲೇಖಕಿ ಡಾ. ಬಿ. ಎಸ್. ಶೈಲಜಾ.

ಒಂದೇ ಮಾತಿನಲ್ಲಿ ಹೇಳುವುದಾದರೆ ಗಣಿತವನ್ನು ಸಂತೋಷವಾಗಿ ಕಲಿಯುವಂತಾಗಲು, ಸೂಕ್ಷ್ಮಗಳನ್ನು ಸರಳವಾಗಿ ತಿಳಿದುಕೊಳ್ಳಲು ಈ ಪುಸ್ತಕ ಸಹಾಯಕ. ಕೊಂಡು ಓದಿ. ಇದರಲ್ಲಿನ ವಿಷಯಗಳನ್ನೆಲ್ಲ ಮನೆಯ ಮಕ್ಕಳಿಗೂ ತಲುಪಿಸಿ.

ಏನು? ಗಣಿತ ಅಂದ್ರಾ?
ಲೇಖಕರು: ಡಾ. ಬಿ. ಎಸ್. ಶೈಲಜಾ 
೧೨೪ ಪುಟಗಳು, ಬೆಲೆ ರೂ. ೭೫/-
ಪ್ರಕಾಶಕರು: ನವಕರ್ನಾಟಕ, ಬೆಂಗಳೂರು

ಕಾಮೆಂಟ್‌ಗಳಿಲ್ಲ:

badge