ಶುಕ್ರವಾರ, ಜುಲೈ 19, 2013

ಕ್ಯಾಮೆರಾ ಕತೆಗಳು : ೨

ಟಿ. ಜಿ. ಶ್ರೀನಿಧಿ

೧೮೪೪ರಲ್ಲಿ ತೆಗೆದ
ಕ್ಯಾಲೋಟೈಪ್ ಚಿತ್ರ
[ಮೊದಲ ಭಾಗಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ]
[ಮೂರನೆಯ ಭಾಗಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ]

೧೮೩೦ರ ಸುಮಾರಿಗೆ ಫ್ರಾನ್ಸಿನಲ್ಲಿ ರೂಪುಗೊಂಡ ಡಿಗೇರೋಟೈಪ್ ತಂತ್ರಜ್ಞಾನ ಫೋಟೋಗ್ರಫಿಯನ್ನು ಪ್ರಾಯೋಗಿಕವಾಗಿ ಸಾಧ್ಯವಾಗಿಸುವ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸಿತು ಎನ್ನುವುದೇನೋ ನಿಜ. ಆದರೆ ಛಾಯಾಗ್ರಹಣವನ್ನು ನಿಜಕ್ಕೂ ಸರಳಗೊಳಿಸಿ ಚಿತ್ರಗಳನ್ನು ಸುಲಭವಾಗಿ ಪಡೆದುಕೊಳ್ಳುವಲ್ಲಿ ಈ ತಂತ್ರಜ್ಞಾನದಿಂದ ಹೆಚ್ಚಿನ ಸಹಾಯವೇನೂ ಆಗಲಿಲ್ಲ. ಕ್ಷಿಪ್ರವಾಗಿ ಚಿತ್ರ ಪಡೆಯಲು ಸಾಧ್ಯವಿಲ್ಲದೆ ಇದ್ದದ್ದು, ಚಿತ್ರ ಮೂಡಿಸಲು ಲೋಹದ ಫಲಕ ಬಳಸಬೇಕಿದ್ದದ್ದು, ಒಂದೇ ಚಿತ್ರದ ಹೆಚ್ಚುವರಿ ಪ್ರತಿಗಳನ್ನು ಪಡೆದುಕೊಳ್ಳಲು ಕಷ್ಟಪಡಬೇಕಾದ್ದು - ಇವೆಲ್ಲ ಈ ತಂತ್ರಜ್ಞಾನದ ಪ್ರಮುಖ ಕೊರತೆಗಳಾಗಿದ್ದವು.

ಛಾಯಾಗ್ರಹಣ ಇನ್ನಷ್ಟು ಸುಲಭವಾಗಬೇಕಾದರೆ ಈ ಕೊರತೆಗಳು ನೀಗಬೇಕಲ್ಲ, ಹಾಗಾಗಿ ಆ ದಿಕ್ಕಿನಲ್ಲಿ ಪ್ರಯತ್ನಗಳು ಶುರುವಾದವು. ಇಂತಹ ಹಲವು ಪ್ರಯತ್ನಗಳಿಗೆ ಸ್ವತಃ ಡಿಗೇರೋಟೈಪ್ ತಂತ್ರಜ್ಞಾನವೇ ಆಧಾರವಾಗಿತ್ತು. ಇಂತಹ ಹಲವು ಪ್ರಯತ್ನಗಳಿಂದಾಗಿ ಕೆಲವೇ ನಿಮಿಷಗಳಲ್ಲಿ ಚಿತ್ರಗಳನ್ನು ಸೆರೆಹಿಡಿಯುವುದು ಕೂಡ ಸಾಧ್ಯವಾಯಿತು; ಹಾಗಾಗಿ ಭಾವಚಿತ್ರಗಳನ್ನು ತೆಗೆಯುವ-ತೆಗೆಸಿಕೊಳ್ಳುವ ಅಭ್ಯಾಸ ಕೂಡ ಪ್ರಾರಂಭವಾಯಿತು. ಈ ಅಂಶ ಮೊದಲ ಬಾರಿಗೆ ಛಾಯಾಗ್ರಹಣವನ್ನು ಜನರತ್ತ ಕರೆತಂದಿತು ಎಂದರೂ ತಪ್ಪಾಗಲಾರದೇನೋ.

ಈ ನಡುವೆ ಛಾಯಾಗ್ರಹಣದಲ್ಲಿ ಲೋಹದ ಫಲಕ ಬಳಕೆಗೆ ಪರ್ಯಾಯದ ಹುಡುಕಾಟವೂ ಮುಂದುವರೆದಿತ್ತು. ಈ ನಿಟ್ಟಿನಲ್ಲಿ ವಿಲಿಯಂ ಟ್ಯಾಲ್‌ಬಟ್ ಎಂಬಾತನ ಕೊಡುಗೆ ಬಹಳ ಮಹತ್ವದ್ದು; ಛಾಯಾಗ್ರಹಣದಲ್ಲಿ ನೆಗೆಟಿವ್ ಬಳಕೆಯ ಪರಿಕಲ್ಪನೆಯನ್ನು ಪರಿಚಯಿಸಿದ್ದು ಈತನೇ. ೧೮೪೦ರ ಸುಮಾರಿಗೆ ಈತ ಬಳಕೆಗೆ ತಂದ ಕ್ಯಾಲೋಟೈಪ್ ತಂತ್ರಜ್ಞಾನದಲ್ಲಿ ಸಿಲ್ವರ್ ಅಯೊಡೈಡ್ ಲೇಪನವಿರುವ ಕಾಗದವನ್ನು ನೆಗೆಟಿವ್‌ನಂತೆ ಬಳಸಲಾಗುತ್ತಿತ್ತು. ನಮಗೆ ಬೇಕಾದ ದೃಶ್ಯದ ಛಾಯೆ ಕಾಗದದ ಈ ಹಾಳೆಯ ಮೇಲೆ ಮೂಡಿದ ನಂತರ ಅದನ್ನು ರಾಸಾಯನಿಕವಾಗಿ ಸಂಸ್ಕರಿಸಿ ಬೇರೊಂದು ಕಾಗದದ ಮೇಲೆ ಚಿತ್ರವನ್ನು ಮುದ್ರಿಸಿಕೊಳ್ಳುವುದು ಸಾಧ್ಯವಿತ್ತು.

ಈ ವಿಧಾನ ಕಾಗದದ ಬಳಕೆಯ ಸಾಧ್ಯತೆಯನ್ನು ತೋರಿಸಿಕೊಟ್ಟಿದ್ದರಿಂದ ಛಾಯಾಗ್ರಹಣದಲ್ಲಿ ಲೋಹದ ಫಲಕಗಳನ್ನೇ ಬಳಸಬೇಕಾದ ಅನಿವಾರ್ಯತೆ ದೂರವಾಯಿತು.
ನೆಗೆಟಿವ್ ಪರಿಕಲ್ಪನೆಯ ಪರಿಚಯವಾದ್ದರಿಂದ ಒಂದೇ ಚಿತ್ರದ ಹಲವು ಪ್ರತಿಗಳನ್ನು ಪಡೆದುಕೊಳ್ಳುವುದು ಕೂಡ ಸಾಧ್ಯವಾಯಿತು. ಆದರೆ ಈ ವಿಧಾನದ ಮೂಲಕ ದೊರಕುತ್ತಿದ್ದ ಚಿತ್ರಗಳ ಗುಣಮಟ್ಟ ಅಷ್ಟೇನೂ ಚೆನ್ನಾಗಿರುತ್ತಿರಲಿಲ್ಲ. ನೆಗೆಟಿವ್ ರೂಪದಲ್ಲಿ ಬಳಸಲಾಗುತ್ತಿದ್ದ ಕಾಗದದ ಮೇಲ್ಮೈಗುಣ (ಟೆಕ್ಸ್‌ಚರ್) ಹಾಗೂ ಅದರಲ್ಲಿರುವ ನಾರುಗಳ ಛಾಯೆಯೂ ಚಿತ್ರದಲ್ಲಿ ಸೇರಿಕೊಂಡು ಚಿತ್ರ ಇನ್ನಷ್ಟು ಅಸ್ಪಷ್ಟವಾಗುತ್ತಿತ್ತು. ಇಷ್ಟು ಸಾಲದೆಂಬಂತೆ ಟ್ಯಾಲ್‌ಬಟ್ ತನ್ನ ವಿಧಾನಕ್ಕೆ ಪೇಟೆಂಟನ್ನೂ ಪಡೆದುಕೊಂಡಿದ್ದರಿಂದ ಆತನ ತಂತ್ರಜ್ಞಾನ ಅಷ್ಟೇನೂ ವ್ಯಾಪಕವಾಗಿ ಬಳಕೆಗೆ ಬರಲಿಲ್ಲ.

ಇದಾದ ನಂತರ ಛಾಯಾಗ್ರಹಣ ಕ್ಷೇತ್ರದಲ್ಲಿ ಇನ್ನೊಂದು ದೊಡ್ಡ ಬದಲಾವಣೆ ತಂದದ್ದು ಗಾಜಿನ ನೆಗೆಟಿವ್‌ಗಳ ಬಳಕೆ. ಈ ಬೆಳವಣಿಗೆಗೆ ಸಾಕ್ಷಿಯಾದದ್ದು ೧೮೫೦ರ ದಶಕ. ಬಹಳ ಕ್ಷಿಪ್ರವಾಗಿ ಉತ್ತಮ ಗುಣಮಟ್ಟದ ಚಿತ್ರಗಳನ್ನು ನೀಡುತ್ತಿದ್ದ ಈ ವಿಧಾನಕ್ಕೆ ಯಾವುದೇ ಪೇಟೆಂಟ್‌ನ ಕಾಟವೂ ಇರಲಿಲ್ಲ.

ಮೊದಲು ಬಳಕೆಗೆ ಬಂದ 'ವೆಟ್ ಪ್ಲೇಟ್' ವಿಧಾನದಲ್ಲಿ ಗಾಜಿನ ನೆಗೆಟಿವ್ ಬಳಸುವ ಕೆಲವೇ ಕ್ಷಣಗಳ ಮುನ್ನ ಅದಕ್ಕೆ ರಾಸಾಯನಿಕಗಳನ್ನು ಲೇಪಿಸಬೇಕಾಗಿತ್ತು. ಅಷ್ಟೇ ಅಲ್ಲ, ಚಿತ್ರ ಸೆರೆಹಿಡಿದ ತಕ್ಷಣದಲ್ಲಿ - ಗಾಜಿನ ಮೇಲೆ ತೇವಾಂಶ ಇನ್ನೂ ಇರುವಂತೆಯೇ - ನೆಗೆಟಿವ್ ಅನ್ನು ಸೂಕ್ತವಾಗಿ ಸಂಸ್ಕರಿಸುವುದು ಅನಿವಾರ್ಯವಾಗಿತ್ತು. ಹಾಗಾಗಿ ಛಾಯಾಗ್ರಾಹಕರು ಎಲ್ಲೆಲ್ಲಿ ಹೋದರೂ ಆಲ್ಲೆಲ್ಲ ಡಾರ್ಕ್‌ರೂಮ್ ಕೂಡ ಇರಬೇಕಾದ್ದು ಅನಿವಾರ್ಯವಾಗಿತ್ತು.

ಈ ಸಮಸ್ಯೆಯ ನಡುವೆಯೂ ವೆಟ್ ಪ್ಲೇಟ್ ವಿಧಾನ ಗಮನಾರ್ಹ ಪ್ರಮಾಣದ ಜನಪ್ರಿಯತೆ ಗಳಿಸಿಕೊಂಡಿದ್ದು ವಿಶೇಷ. ಇದೇ ಮಾದರಿಯಲ್ಲಿ ಕೆಲಸಮಾಡುತ್ತಿದ್ದ, ಆದರೆ ಗಾಜಿನ ಬದಲು ತಗಡಿನ ನೆಗೆಟಿವ್ ಬಳಸುತ್ತಿದ್ದ 'ಟಿನ್‌ಟೈಪ್' ವಿಧಾನ ಕೂಡ, ತನ್ನ ಕಡಿಮೆ ವೆಚ್ಚದಿಂದಾಗಿ ಸಾಕಷ್ಟು ಜನಪ್ರಿಯವಾಗಿತ್ತು.

ಆದರೆ ಚಿತ್ರ ಸೆರೆಹಿಡಿದ ತಕ್ಷಣವೇ ನೆಗೆಟಿವ್ ಅನ್ನು ಸಂಸ್ಕರಿಸುವುದು ಎಲ್ಲ ಸಂದರ್ಭಗಳಲ್ಲೂ ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ನಮಗೆ ಬೇಕಾದಾಗ ಚಿತ್ರಗಳನ್ನು ಸೆರೆಹಿಡಿದು ಇಷ್ಟಬಂದಾಗ ಅವನ್ನು ಸಂಸ್ಕರಿಸಿಕೊಳ್ಳುವ ಸ್ವಾತಂತ್ರ್ಯ ಕೊಡುವ ವಿಧಾನದ ಹುಡುಕಾಟ ಪ್ರಾರಂಭವಾಯಿತು.

ಈ ಹುಡುಕಾಟದ ಫಲವಾಗಿ ರೂಪುಗೊಂಡದ್ದು 'ಡ್ರೈ ಪ್ಲೇಟ್' ತಂತ್ರಜ್ಞಾನ. ೧೮೭೦ರ ಸುಮಾರಿಗೆ ಕಾಣಿಸಿಕೊಂಡ ಈ ತಂತ್ರಜ್ಞಾನದಿಂದಾಗಿ ನೆಗೆಟಿವ್‌ಗಳನ್ನು ಮುಂಚಿತವಾಗಿಯೇ ಸಿದ್ಧಪಡಿಸಿಟ್ಟುಕೊಳ್ಳುವುದು ಹಾಗೂ ಚಿತ್ರ ಸೆರೆಹಿಡಿದ ನಂತರ ಅದನ್ನು ನಿಧಾನವಾಗಿ ಸಂಸ್ಕರಿಸಿಕೊಳ್ಳುವುದು ಸಾಧ್ಯವಾಯಿತು.

ಅಷ್ಟೇ ಅಲ್ಲ, ಈ ಬಗೆಯ ನೆಗೆಟಿವ್‌ಗಳಲ್ಲಿ ವೆಟ್ ಪ್ಲೇಟ್ ನೆಗೆಟಿವ್‌ಗಳಿಗಿಂತ ಚೆನ್ನಾಗಿ ಬೆಳಕನ್ನು ಗ್ರಹಿಸುವ ಸಾಮರ್ಥ್ಯ ಇತ್ತು. ಇದರಿಂದಾಗಿ ಚಿತ್ರಗಳನ್ನು ಸೆರೆಹಿಡಿಯಲು ದೀರ್ಘಸಮಯದವರೆಗೆ ಕಾಯಬೇಕಾದ ಹಾಗೂ ಟ್ರೈಪಾಡ್ ಅನ್ನು ಅವಲಂಬಿಸಬೇಕಾದ ಅನಿವಾರ್ಯತೆ ನಿವಾರಣೆಯಾಯಿತು. ಇದರ ಪರಿಣಾಮವಾಗಿ ಕೈಯಲ್ಲಿ ಹಿಡಿದುಕೊಳ್ಳಬಹುದಾದಂತಹ (ಹ್ಯಾಂಡ್-ಹೆಲ್ಡ್) ಕ್ಯಾಮೆರಾಗಳು ಮಾರುಕಟ್ಟೆಯಲ್ಲಿ ಕಾಣಿಸಿಕೊಂಡವು.

ಛಾಯಾಗ್ರಹಣದ ಇತಿಹಾಸದಲ್ಲಿ ಇನ್ನೊಂದು ಹೊಸ ಅಧ್ಯಾಯ ಶುರುವಾಯಿತು.

ಜುಲೈ ೧೯, ೨೦೧೩ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ; ಉಳಿದ ಭಾಗ ಮುಂದಿನ ವಾರ!

ಕಾಮೆಂಟ್‌ಗಳಿಲ್ಲ:

badge