ಗುರುವಾರ, ಜುಲೈ 18, 2013

ರಂಜಕ ಪ್ರಸಂಗ

ನಾಗೇಶ ಹೆಗಡೆ

ಕೊಳ್ಳಿದೆವ್ವ ಅಂದರೆ ಬಾಲ್ಯದಲ್ಲಿ ನಮಗೆಲ್ಲ ಭಯ ಇತ್ತು. ಶವವನ್ನು ದಫನ ಮಾಡಿ ಬೆಂಕಿಯೆಲ್ಲ ಪೂರ್ತಿ ಆರಿದ ನಂತರ ಮೂರನೆಯ ರಾತ್ರಿಯಲ್ಲೂ ಶವದ ಮೂಳೆಗಳು ನಿಗಿನಿಗಿ ಮಿನುಗುತ್ತಿದ್ದರೆ ಭಯವೇ ತಾನೆ? ಆಗ ನಮಗೆ ಗೊತ್ತಿರಲಿಲ್ಲ, ಒಬ್ಬೊಬ್ಬ ಮನುಷ್ಯನ ಮೂಳೆಗಳಲ್ಲಿ ಸರಾಸರಿ ಆರುನೂರು ಗ್ರಾಮ್ ರಂಜಕ ಇರುತ್ತದೆ ಅಂತ, ರಂಜಕಕ್ಕೆ ಕತ್ತಲಲ್ಲಿ ಮಿನುಗುವ ಗುಣ ಇದೆ ಅಂತ. ಈಗಲೂ ರಂಜಕ ಅಂದರೆ ಕೊಂಚ ಭಯ ಆಗುತ್ತದೆ ಅದರ ಭವಿಷ್ಯದ ಚಿತ್ರಣವನ್ನು ಕಲ್ಪಿಸಿಕೊಂಡಾಗ.

ಆಧುನಿಕ ಕೃಷಿಕರಿಗೆಲ್ಲ ರಂಜಕ ಬೇಕೇಬೇಕು. ಸಾರಜನಕ, ರಂಜಕ ಮತ್ತು ಪೊಟ್ಯಾಶ್ ಇವು ಮೂರು ಮೂಲವಸ್ತುಗಳನ್ನು ಕೃಷಿಯ ಮೂಲಮಂತ್ರವೆಂತಲೇ ವಿಜ್ಞಾನಿಗಳು ಹೇಳುತ್ತ ಬಂದಿದ್ದಾರೆ. ಇವು ಎಲ್ಲಿಂದ ಬರುತ್ತವೆ? ಸಾರಜನಕವೇನೊ ಸುಲಭ. ವಾಯುಮಂಡಲದ ಶೇಕಡಾ ೭೮ ಪಾಲು ಸಾರಜನಕವೇ ಇದೆ; ಅದು ಎಂದೂ ಮುಗಿಯುವಂಥದ್ದಲ್ಲ. ಪೊಟ್ಯಾಶ್ ಕೂಡ ಅನಂತ ಪ್ರಮಾಣದಲ್ಲಿದೆ. ಸಮುದ್ರವಿದ್ದಷ್ಟು ಕಾಲ ಪೊಟ್ಯಾಶ್‌ಗೆ ತೊಂದರೆ ಇಲ್ಲ. ಆದರೆ ರಂಜಕ ಹಾಗಲ್ಲ. ಅದು ಸೀಮಿತ ಸಂಪನ್ಮೂಲ. ಚೀನಾ, ಅಮೆರಿಕ ಮತ್ತೊ ಮೊರೊಕ್ಕೊದಂಥ ಎಲ್ಲೋ ಕೆಲವು ದೇಶಗಳಲ್ಲಿ ಮಾತ್ರ ದೊಡ್ಡ ನಿಕ್ಷೇಪಗಳ ರೂಪದಲ್ಲಿ ಇರುವ ಶಿಲಾರಂಜಕವನ್ನು ವರ್ಷಕ್ಕೆ ೧೫ಕೋಟಿ ಟನ್‌ಗಳಷ್ಟು ಪ್ರಮಾಣದಲ್ಲಿ ಎತ್ತುತ್ತಿದ್ದಾರೆ. ಬೇಡಿಕೆ ವರ್ಷವರ್ಷಕ್ಕೆ ಹೆಚ್ಚುತ್ತಲೇ ಇದೆ. ಹೀಗೆ ನಿರಂತರ ಗಣಿಗಳಿಂದ ಮೇಲೆತ್ತಿ ಖಾಲಿ ಮಾಡಿದರೆ ಅದು ಮತ್ತೆ ಭರ್ತಿಯಾಗುವಂಥದ್ದಲ್ಲ. ಒಂದು ಅಂದಾಜಿನ ಪ್ರಕಾರ ಮುಂದಿನ ೭೦-೮೦ ವರ್ಷಗಳಿಗೆ ಸಾಲುವಷ್ಟು ರಂಜಕ ಮಾತ್ರ ಈ ಭೂಮಿಯ ಮೇಲಿದೆ. ಆಮೇಲೆ ಏನು? ತೀರ ಆಳದಲ್ಲಿ, ತೀರ ಕಷ್ಟಪಟ್ಟು ತೆಗೆಯಬಹುದಾದ ಕಳಪೆ ಗುಣಮಟ್ಟದ ರಂಜಕದ ನಿಕ್ಷೇಪ ಇದೆ. ಅದನ್ನೂ ತೆಗೆದು ಮುಂದಿನ ಹತ್ತು ವರ್ಷ ಬಳಸುತ್ತಾರೆ ಎನ್ನೋಣ. ಮುಂದೇನು?

ಪಶ್ಚಿಮ ಜಗತ್ತಿನಲ್ಲಿ ಕೃಷಿಕ್ರಾಂತಿ ಆರಂಭವಾದ ಹೊಸದರಲ್ಲಿ, ಅಂದರೆ ೧೮೭೦-೮೦ರಲ್ಲಿ ಶಾಂತಸಾಗರದ ಕೆಲವು ದ್ವೀಪಗಳಲ್ಲಿ ರಂಜಕದ ಭಾರೀ ದೊಡ್ಡ ದಿಬ್ಬಗಳು ಪತ್ತೆಯಾಗಿದ್ದವು. ಲಕ್ಷಾಂತರ ವರ್ಷಗಳಿಂದ ಪಕ್ಷಿಗಳು ಮಲವಿಸರ್ಜನೆ ಮಾಡಿದ್ದರಿಂದ ಅದೇ 'ಗುವಾನೊ'ದಿಬ್ಬಗಳಾಗಿದ್ದವು. ಕೇವಲ ಮೂವತ್ತು ವರ್ಷಗಳಲ್ಲಿ ಅವೆಲ್ಲ ಖಾಲಿಯಾದವು. ಖನಿಜರೂಪದ ನಿಕ್ಷೇಪವೂ ಖಾಲಿಯಾಗಿಬಿಟ್ಟರೆ?

ಹಿಂದಿನವರು ಮಣ್ಣಿನಲ್ಲಿರುವ ರಂಜಕವನ್ನೇ ವ್ಯವಸ್ಥಿತವಾಗಿ ಭೂಮಿಗೆ ಮರುಭರ್ತಿ ಮಾಡುತ್ತಿದ್ದರು. ಗೋಧಿ, ಜೋಳ, ಭತ್ತ, ಅಲಸಂದೆ ಕೊಯ್ಲು ಮಾಡಿದ ನಂತರ ಎಲೆದಂಟನ್ನು ಮೇವಾಗಿ ದನಕರುಗಳಿಗೆ ತಿನ್ನಿಸಿ, ಅವುಗಳ ಸೆಗಣಿ-ಗಂಜಳವನ್ನು ಮತ್ತೆ ಕೃಷಿ ಭೂಮಿಗೇ ಹಾಕುತ್ತಿದ್ದರು. ಚೀನಾ, ಮೊಂಗೋಲಿಯಾ, ನೇಪಾಳಗಳಲ್ಲಿ ಅನಾದಿಕಾಲದಿಂದಲೂ ಮನುಷ್ಯ ವಿಸರ್ಜನೆಯನ್ನು ಕಾಂಪೋಸ್ಟ್ ಮಾಡಿ ಹೊಲಗಳಿಗೆ ಹಾಕುತ್ತಿದ್ದರು. ಚೀನೀಯರು ಬಿದಿರಿನ ಕಾವಡಿಗಳಲ್ಲಿ ದವಸಧಾನ್ಯ ಹೊತ್ತು ಪಟ್ಟಣದಲ್ಲಿ ಮಾರಿ ಮರಳಿ ಬರುವಾಗ ಅಲ್ಲಿಂದ ಮನುಷ್ಯ ಗೊಬ್ಬರವನ್ನು ಸಾಗಿಸಿ ತರುತ್ತಿದ್ದರು. ಅಂದಿನವರು 'ಚಿನ್ನವನ್ನು ಸೆಗಣಿಯಂತೆ, ಗೊಬ್ಬರವನ್ನು ಚಿನ್ನದಂತೆ ಪರಿಗಣಿಸುತ್ತಿದ್ದರು' ಎಂದು ೧೮೬೨ರಲ್ಲಿ ವಿಕ್ಟರ್ ಹ್ಯೂಗೋ ಬರೆದಿದ್ದ.

ಗಣಿಗಳಿಂದ, ಫ್ಯಾಕ್ಟರಿಗಳಿಂದ ಸೂಪರ್ ಫಾಸ್ಫೇಟ್‌ಸಿದ್ಧವಾಗಿ ಕೃಷಿರಂಗಕ್ಕೆ ಬರುತ್ತ ಕೃಷಿಯೂ ಉದ್ಯಮವಾಗುತ್ತ ನಗರಗಳು ಬೆಳೆಯತೊಡಗಿದ ನಂತರ ರಂಜಕದ ಚಕ್ರ ತುಂಡಾಯಿತು. ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆ (ಎಫ್‌ಎಓ) ಸಮೀಕ್ಷೆಯ ಪ್ರಕಾರ ಪ್ರತಿವರ್ಷ ೩೦ ಲಕ್ಷ ಟನ್ ರಂಜಕ ಮನುಷ್ಯ ವಿಸರ್ಜನೆಯಲ್ಲೇ ವ್ಯಯವಾಗುತ್ತಿದ್ದು, ನಗರೀಕರಣ ಹೆಚ್ಚುತ್ತ ಹೋದಂತೆ ಚರಂಡಿಗಳಲ್ಲಿ ಹಾಗೂ ಬಳಕೆಗೆ ಬಾರದ ತಿಪ್ಪೆಗುಂಡಿಗಳಲ್ಲಿ ಅವು ಸಂಚಯವಾಗುತ್ತಿವೆ. ಪಶ್ಚಿಮದ ದೇಶಗಳಲ್ಲಿ ಹಸುರಿನ ಬಹುಪಾಲು ಪ್ರಾಣಿಗಳ ಮೇವಾಗಿ, ಪ್ರಾಣಿಗಳು ಕೂಡ ಮನುಷ್ಯನ ಹೊಟ್ಟೆಗೇ ಹೋಗಿ ಅವುಗಳ ಬಹುಭಾಗ ಕೂಡ ಅಂತಿಮವಾಗಿ ತಿಪ್ಪೆಗುಂಡಿಗೇ ಸೇರುತ್ತಿದೆ.

ಕಳೆದ ೫೦ ವರ್ಷಗಳಲ್ಲಿ ಗಣಿಗಾರಿಕೆಯಿಂದ ತೆಗೆದ ಅಂದಾಜು ನೂರು ಕೋಟಿ ರಂಜಕದಲ್ಲಿ ಶೇ. ೨೫ ನೀರು ಪಾಲಾಗಿದೆ. ಅಮೊನಿಯಂ ನೈಟ್ರೇಟ್‌ನ ಜೊತೆಗೇ (ಕಳೆದ ಸಂಚಿಕೆಯ ಈ ಅಂಕಣ ನೆನಪಿಸಿಕೊಳ್ಳಿ) ಸೂಪರ್ ಫಾಸ್ಫೇಟ್ ಕೂಡ ಕೆರೆ-ನದಿಗಳ ಮೂಲಕ ಸಾಗುತ್ತ ಅಲ್ಲಿನ ಜಲಚರಗಳನ್ನು ಕೊಲ್ಲುತ್ತ ಅಂತಿಮವಾಗಿ ಸಮುದ್ರ ಸೇರಿ ಮೃತಪ್ರಾಂತಗಳನ್ನು ಸೃಷ್ಟಿಸುತ್ತಿದೆ.

ಹೀಗೇ ನಡೆಯುತ್ತಿದ್ದರೆ ಇನ್ನು ಮೂವತ್ತು ವರ್ಷಗಳಲ್ಲೇ ರಂಜಕದ ಸಂಕಟ ದೊಡ್ಡದಾಗಿ ಕಾಣಿಸಿಕೊಳ್ಳತೊಡಗುತ್ತದೆ. ಚೀನಾ ಈಗಾಗಲೇ ತನ್ನ ಗಣಿಗಳನ್ನು ಭದ್ರಪಡಿಸತೊಡಗಿದೆ. ಅಮೆರಿಕವಂತೂ ಹೊರಗಿನವರಿಗೆ ರಂಜಕವನ್ನು ರಫ್ತು ಮಾಡಲಾರದು. ಜಗತ್ತಿನ ಅತಿ ದೊಡ್ಡ ರಂಜಕ ನಿಕ್ಷೇಪ ಆಫ್ರಿಕಾಖಂಡದ ಮೊರೊಕ್ಕೊ ದೇಶದಲ್ಲಿದೆ. ಸೌದಿ ಅರೇಬಿಯಾದಲ್ಲಿ ತೈಲದ ಅತಿ ದೊಡ್ಡ ನಿಕ್ಷೇಪ ಇದ್ದ ಹಾಗೆ ಮೊರೊಕ್ಕೊವನ್ನು 'ರಂಜಕದ ಸೌದಿ ಅರೇಬಿಯಾ' ಎನ್ನಲಾಗುತ್ತದೆ. ಅದು ತನ್ನ ರಂಜಕದಿಂದಾಗಿಯೇ ಇನ್ನೇನೇನು ರಾಜಕೀಯ ಒತ್ತಡಗಳನ್ನು ಎದುರಿಸಬೇಕೊ ಗೊತ್ತಿಲ್ಲ.

ಈ ನಡುವೆ ರಂಜಕದ ಮರುಬಳಕೆ ಪ್ರಮಾಣವನ್ನು ಹೆಚ್ಚಿಸುವಂತೆ ಕೆಲವೆಡೆ ಯತ್ನಗಳು ನಡೆಯತೊಡಗಿವೆ. ಅಂದರೆ ನಗರಗಳ ಅಂಚಿನಲ್ಲಿ ಶೇಖರವಾಗುವ ರಂಜಕವನ್ನು ಮತ್ತೆ ಹೊಲಗಳತ್ತ ತಿರುಗಿಸುವುದು. ಸ್ವೀಡನ್‌ನಲ್ಲಿ ಶೌಚಾಲಯಗಳಲ್ಲಿ ಮಾನವ ಮೂತ್ರವನ್ನು ಕಡ್ಡಾಯವಾಗಿ ಬೇರ್ಪಡಿಸಿ ಪ್ರತ್ಯೇಕವಾಗಿ ತೊಟ್ಟಿಗಳಲ್ಲಿ ಶೇಖರಿಸುವ ವ್ಯವಸ್ಥೆ ಆಗಲೇ ಬಂದಿದೆ. ಯುರೋಪಿನ ಇತರ ನಗರಗಳಲ್ಲೂ ಮಾನವತ್ಯಾಜ್ಯಗಳಲ್ಲಿನ ರಂಜಕವನ್ನು ಬೇರ್ಪಡಿಸಿ ಬಳಸುವ ಬಗ್ಗೆ ಪ್ರಾಯೋಗಿಕ ಯತ್ನಗಳು ನಡೆದಿವೆ. ನಗರದ ಗಟ್ಟಿ ಶೌಚವನ್ನು ಸಂಸ್ಕರಿಸಿ ಗೊಬ್ಬರವಾಗಿ ಪರಿವರ್ತಿಸಿ ಹಳ್ಳಿಗಳಿಗೆ ಸಾಗಿಸುವ ವ್ಯವಸ್ಥೆ ಮೊಂಗೋಲಿಯಾದಲ್ಲಿ ಜಾರಿಗೆ ಬಂದಿದೆ.  

ಮುಂಬರುವ ದಿನಗಳಲ್ಲಿ ಇತರೆಲ್ಲ ದೇಶಗಳಿಗಿಂತ ಭಾರತವೇ ರಂಜಕದ ಅತ್ಯಂತ ತೀವ್ರ ಅಭಾವವನ್ನು ಎದುರಿಸಬೇಕಾಗಿ ಬರಲಿದೆ. ಆದರೆ ನಮ್ಮಲ್ಲಿ ಅದರ ಮರುಬಳಕೆಯ ಬಗ್ಗೆ ಯಾವ ಗಮನಾರ್ಹ ಸಿದ್ಧತೆಯೂ ನಡೆಯುತ್ತಿಲ್ಲ. ಪ್ರಾಯಶಃ ರಂಜಕದ ಬೆಲೆ ಹೆಚ್ಚುತ್ತ ಹೋದಂತೆ ಶವಾಗಾರಗಳ ಬೂದಿಗೂ ಬೆಲೆ ಬರಬಹುದು. ಒಳಚರಂಡಿ ಸ್ವರೂಪ ಬದಲಾಗಬಹುದು. ಹಿಂದೆಲ್ಲ ಅಕ್ಕಸಾಲಿಗರ ಆಭರಣದ ಅಂಗಡಿಗಳ ಎದುರಿನ ಬೀದಿಯನ್ನೂ ಚರಂಡಿಯನ್ನೂ ಚೊಕ್ಕಟವಾಗಿ ಗುಡಿಸಿ ಚಿನ್ನದ ಕಣಗಳನ್ನು ಹೆಕ್ಕುವವರು ಕಾಣುತ್ತಿದ್ದರು. ಮುಂದೊಂದು ದಿನ ಮಾನವ ಶೌಚಕ್ಕೆ ಚಿನ್ನದ ಬೆಲೆ ಬರಬಹುದು. ಹ್ಯೂಗೊ ಹೇಳಿದ ಮಾತು ೨೦೦ ವರ್ಷಗಳ ನಂತರ ಮತ್ತೆ ಸತ್ಯವಾಗಬಹುದು. ನಗರದಂಚಿನ ಕೆರೆ-ಕೊಳ್ಳಗಳ ಪರಿಸರ ಚೊಕ್ಕಟವಾಗಬಹುದು.

ಅಡಿಕೆ ಪತ್ರಿಕೆಯ ಜುಲೈ ೨೦೧೩ರ ಸಂಚಿಕೆಯಲ್ಲಿ ಪ್ರಕಟವಾದ ಲೇಖನ; 
ಲೇಖಕರ ಅನುಮತಿಯೊಡನೆ ಪ್ರಕಟಿಸಲಾಗಿದೆ

ಕಾಮೆಂಟ್‌ಗಳಿಲ್ಲ:

badge