ಶುಕ್ರವಾರ, ಜುಲೈ 12, 2013

ಕ್ಯಾಮೆರಾ ಕತೆಗಳು : ೧

ಟಿ. ಜಿ. ಶ್ರೀನಿಧಿ

[ಎರಡನೇ ಭಾಗಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ]
[ಮೂರನೆಯ ಭಾಗಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ]

ಹಂಪೆಯ ವಿರೂಪಾಕ್ಷ ದೇವಾಲಯದಲ್ಲಿ ದರ್ಶನ ಮುಗಿಸಿ ಹೊರಬರುವ ಹಾದಿಯಲ್ಲಿ ನಮಗೊಂದು ವಿಶಿಷ್ಟ ದೃಶ್ಯ ಕಾಣಸಿಗುತ್ತದೆ: ಸಣ್ಣ ಕಿಂಡಿಯೊಂದರ ಮೂಲಕ ಹಾದುಬರುವ ಬೆಳಕಿನ ಕಿರಣಗಳು ಎದುರಿನ ಗೋಡೆಯ ಮೇಲೆ ರಾಜಗೋಪುರದ ಚಿತ್ರವನ್ನು ಮೂಡಿಸುತ್ತವೆ.

ಸಣ್ಣದೊಂದು ಕಿಂಡಿಯ ಮೂಲಕ ಬೆಳಕು ಹಾಯುವಂತೆ ಮಾಡಿ ಎದುರಿನ ಗೋಡೆಯ ಮೇಲೆ ಹೊರಗಿನ ದೃಶ್ಯವನ್ನು - ತಲೆಕೆಳಗಾಗಿ - ಮೂಡಿಸುವ ಈ ತಂತ್ರವಿದೆಯಲ್ಲ, ಇದೇ ಇಂದಿನ ಛಾಯಾಗ್ರಹಣದ ಮೂಲರೂಪ ಎಂದು ತಜ್ಞರು ಹೇಳುತ್ತಾರೆ. ಪಿನ್‌ಹೋಲ್ ಕ್ಯಾಮೆರಾ, ಕ್ಯಾಮೆರಾ ಅಬ್ಸ್‌ಕೂರಾ (Camera Obscura) ಎಂದೆಲ್ಲ ಕರೆಯುವುದು ಶತಮಾನಗಳಷ್ಟು ಹಳೆಯ ಈ ತಂತ್ರವನ್ನೇ.


ಆದರೆ ಈ ತಂತ್ರಕ್ಕೂ ಇಂದಿನ ಫೋಟೋಗ್ರಫಿಗೂ ಒಂದು ಮುಖ್ಯ ವ್ಯತ್ಯಾಸವಿತ್ತು. ಇದರಲ್ಲಿ ಚಿತ್ರ ಒಂದೆಡೆ (ಉದಾಹರಣೆಗೆ, ಗೋಡೆಯ ಮೇಲೆ) ಮೂಡುತ್ತಿತ್ತೇ ಹೊರತು ಇಂದಿನ ಕ್ಯಾಮೆರಾಗಳಂತೆ ಎಲ್ಲೂ ದಾಖಲಾಗುತ್ತಿರಲಿಲ್ಲ. ಚಿತ್ರರಚನೆ ಗೊತ್ತಿದ್ದವರು ಬೇಕಿದ್ದರೆ ಗೋಡೆಯ ಮೇಲೆ ಮೂಡಿದ ಚಿತ್ರವನ್ನು ಪ್ರತಿಮಾಡಿಕೊಳ್ಳಬಹುದಿತ್ತು ಅಷ್ಟೆ.

ಇದಾದ ನಂತರ ಛಾಯಾಗ್ರಹಣದ ಹಾದಿಯಲ್ಲಿ ಕಾಣಸಿಗುವ ಪ್ರಮುಖ ಮೈಲಿಗಲ್ಲು ಎಂದರೆ ೧೭೬೦ರ ಆಸುಪಾಸಿನಲ್ಲಿ ಪ್ರಕಟವಾದ 'Giphantie' ಎಂಬ ಫ್ರೆಂಚ್ ಕಾದಂಬರಿ. ಯಾವುದೇ ದೃಶ್ಯದ ಪ್ರತಿಫಲನವನ್ನು ಫಲಕವೊಂದರಲ್ಲಿ ಸೆರೆಹಿಡಿದುಬಿಡುವ ಕಾಲ್ಪನಿಕ ಮಾಯಾತಂತ್ರವನ್ನು ಈ ಕಾದಂಬರಿ ವಿವರಿಸಿತ್ತಂತೆ. ಇಂದಿನ ಛಾಯಾಗ್ರಹಣದ ಬಗ್ಗೆ ಈ ಕೃತಿ ಆಗಲೇ ಭವಿಷ್ಯನುಡಿದಿತ್ತು ಎಂದರೂ ಸರಿಯೇ.

ಆದರೆ ಛಾಯಾಗ್ರಹಣದ ಕಲ್ಪನೆ ವಾಸ್ತವಕ್ಕೆ ಬದಲಾಗಲು ಇನ್ನೂ ಸುಮಾರು ಅರ್ಧಶತಮಾನದಷ್ಟು ಸಮಯ ಬೇಕಾಯಿತು. ೧೯ನೇ ಶತಮಾನದ ಪ್ರಾರಂಭದಲ್ಲಿ ಫ್ರಾನ್ಸಿನ ಜೋಸೆಫ್ ನಿಸೆಫೋರ್ ನಿಯೆಪ್ಸ್ ಎಂಬ ವ್ಯಕ್ತಿ ಹೀಲಿಯೋಗ್ರಫಿ ('ಸೂರ್ಯಚಿತ್ರ') ಎಂಬ ತಂತ್ರವೊಂದನ್ನು ಕಂಡುಹಿಡಿದ. ಬೆಳಕು ಬಿದ್ದಾಗ ಬದಲಾಗುವ ಗುಣ ಹೊಂದಿದ್ದ ರಾಸಾಯನಿಕಗಳನ್ನು ಹಾಳೆಯೊಂದರ ಮೇಲೆ ಲೇಪಿಸಿ ೧೮೨೬-೨೭ರ ಸಮಯದಲ್ಲಿ ಆತ ಸೆರೆಹಿಡಿದ ಫೋಟೋ ಬಹುಶಃ ಪ್ರಪಂಚದ ಮೊದಲ ಛಾಯಾಚಿತ್ರವೇ ಇರಬೇಕು.

ಆದರೆ ಈ ವಿಧಾನದಲ್ಲಿ ಚಿತ್ರ ಹಾಳೆಯ ಮೇಲೆ ಮೂಡಲು ಎಂಟು ಗಂಟೆಗಳ ಕಾಲ ಬೇಕಿತ್ತು. ಒಂದು ಸೆಕೆಂಡಿನ ಅದೆಷ್ಟೋ ಸಾವಿರದಲ್ಲೊಂದು ಭಾಗದಲ್ಲಿ ಅದ್ಭುತ ಛಾಯಾಚಿತ್ರಗಳನ್ನು ಸೆರೆಹಿಡಿಯುವ ಈ ಕಾಲದಲ್ಲಿ ಒಂದು ಚಿತ್ರಕ್ಕಾಗಿ ಎಂಟು ಗಂಟೆಗಳ ಕಾಲ ಕಾಯುವುದನ್ನು ಕಲ್ಪಿಸಿಕೊಳ್ಳುವುದೇ ಕಷ್ಟ. ಒಂದುವೇಳೆ ಕಾದೆವೆಂದೇ ಇಟ್ಟುಕೊಂಡರೂ ಕ್ಯಾಮೆರಾ ಮುಂದಿನ ದೃಶ್ಯವನ್ನು ಎಂಟು ಗಂಟೆಗಳ ಕಾಲ ನಿಶ್ಚಲವಾಗಿಡುವುದು ಹೇಗೆ? ಪಾಸ್‌ಪೋರ್ಟ್ ಫೋಟೋ ಬೇಕೆನ್ನುವವರನ್ನು ಬೆಳಗಿನಿಂದ ಸಂಜೆಯವರೆಗೂ ಕ್ಯಾಮೆರಾ ಮುಂದೆಯೇ ನಿಲ್ಲಿಸಿರಲು ಆಗುತ್ತದೆಯೇ?

ಹೀಗಾಗಿಯೇ ಜೋಸೆಫ್ ರೂಪಿಸಿದ ಹೀಲಿಯೋಗ್ರಫಿ ತಂತ್ರಜ್ಞಾನ - ಪ್ರಾಯೋಗಿಕವಾಗಿ ಯಶಸ್ವಿಯಾದರೂ - ವ್ಯಾಪಕ ಬಳಕೆಗೆ ಬರಲಿಲ್ಲ.

ಹೆಚ್ಚೂಕಡಿಮೆ ಇದೇ ಸಮಯದಲ್ಲಿ ಲೂಯಿ ಡಿಗೇರ್ ಎಂಬ ಇನ್ನೊಬ್ಬ ವ್ಯಕ್ತಿ, ಜೋಸೆಫ್ ನಿಯೆಪ್ಸ್ ಜೊತೆಯಲ್ಲೇ, ಛಾಯಾಗ್ರಹಣದ ಪ್ರಯೋಗಗಳಲ್ಲಿ ತೊಡಗಿಸಿಕೊಂಡಿದ್ದ. ಆತನ ಪ್ರಯೋಗಗಳಿಂದ ಸುಮಾರು ಹದಿನೈದು ನಿಮಿಷಗಳ ಅವಧಿಯಲ್ಲೇ ಛಾಯಾಚಿತ್ರಗಳನ್ನು ದಾಖಲಿಸಿಕೊಳ್ಳುವುದು ಸಾಧ್ಯವಾಯಿತು.

ಆತ ರೂಪಿಸಿದ ಈ ವಿಧಾನವನ್ನು ಡಿಗೇರೋಟೈಪ್ ಎಂದು ಗುರುತಿಸಲಾಯಿತು. ವಿಕಿಪೀಡಿಯಾ ಹೇಳುವಂತೆ ಈ ವಿಧಾನದಲ್ಲಿ ಚಿತ್ರಗಳನ್ನು ಸೆರೆಹಿಡಿಯಲು ಅಯೊಡಿನ್ ಮಿಶ್ರಿತ ಬೆಳ್ಳಿ ಲೇಪಿಸಿದ ತಾಮ್ರದ ಫಲಕಗಳನ್ನು ಬಳಸಲಾಗುತ್ತಿತ್ತಂತೆ. ಈ ವಿಧಾನಕ್ಕೆ ಸಂಬಂಧಿಸಿದ ಹಕ್ಕುಸ್ವಾಮ್ಯವನ್ನು ಮುಂದೆ ಫ್ರೆಂಚ್ ಸರಕಾರ ಖರೀದಿಸಿ "ಮನುಕುಲಕ್ಕೆ ಕೊಡುಗೆ"ಯಾಗಿ ನೀಡಿತು.

ಅಂದಹಾಗೆ ಡಿಗೇರೋಟೈಪ್ ಚಿತ್ರಗಳನ್ನು ಕ್ಲಿಕ್ಕಿಸಲು ಹದಿನೈದು ನಿಮಿಷ ಕಾಯಬೇಕಿತ್ತಲ್ಲ, ಭಾವಚಿತ್ರ ತೆಗೆಸಿಕೊಳ್ಳಲು ಬಂದವರನ್ನು ಹದಿನೈದು ನಿಮಿಷ ಸುಮ್ಮನೆ ನಿಲ್ಲಿಸುವುದು ಹೇಗೆ? ಈ ಉದ್ದೇಶಕ್ಕಾಗಿ ಅಡ್ಡಣಿಗೆಯೊಂದನ್ನು ಇಟ್ಟು ಅದಕ್ಕೆ ಕ್ಲಾಂಪ್ ಹಾಕಿ ಫೋಟೋ ತೆಗೆಸಿಕೊಳ್ಳಲು ಬಂದವರನ್ನು ಅಲುಗಾಡದಂತೆ ಹಿಡಿದಿಡಲಾಗುತ್ತಿತ್ತಂತೆ!

ಜುಲೈ ೧೨, ೨೦೧೩ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ; ಮುಂದಿನ ಭಾಗಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಕಾಮೆಂಟ್‌ಗಳಿಲ್ಲ:

badge