ಶುಕ್ರವಾರ, ಜೂನ್ 28, 2013

ಆನ್‌ಲೈನ್ ಸಹಾಯಹಸ್ತ

ಟಿ. ಜಿ. ಶ್ರೀನಿಧಿ

ಉತ್ತರಾಖಂಡದ ಪ್ರವಾಹ ಅಕ್ಷರಶಃ ಕಣ್ಣೀರಿನ ಪ್ರವಾಹವೇ ಆಗಿಬಿಟ್ಟಿದೆ. ವರ್ಷಗಳಿಂದ ನಡೆದ ವ್ಯವಸ್ಥಿತ ಪರಿಸರನಾಶ ದೊಡ್ಡ ಕಾರಣವೋ, ಪರಿಹಾರ ಕಾರ್ಯದಲ್ಲಿ ಸರಕಾರ ತೋರಿದ ಬೇಜವಾಬ್ದಾರಿತನ ದೊಡ್ಡ ಕಾರಣವೋ ಎಂದು ಯೋಚಿಸಲೂ ಆಗದಷ್ಟು ಪ್ರಮಾಣದ ಹಾನಿ ಇಡೀ ದೇಶವನ್ನೇ ಗಾಬರಿಗೊಳಿಸಿದೆ. ನಮ್ಮ ಸೇನಾಪಡೆಗಳು ತಮ್ಮ ಎಂದಿನ ಸಮರ್ಪಣಾಭಾವದೊಡನೆ ಮಾಡುತ್ತಿರುವ ಕೆಲಸವೊಂದೇ ಈ ಸನ್ನಿವೇಶದ ಏಕೈಕ ಆಶಾಕಿರಣ ಎನ್ನಬಹುದೇನೋ.

ಇಂತಹ ಸನ್ನಿವೇಶದಲ್ಲಿ ಉತ್ತರಾಖಂಡದಿಂದ ನೂರಾರು ಮೈಲಿ ದೂರವಿರುವ ನಮ್ಮನಿಮ್ಮಂಥವರು ಹೇಗೆ ನೆರವಾಗಬಹುದು ಎನ್ನುವುದು ದೊಡ್ಡ ಪ್ರಶ್ನೆ. ತೊಂದರೆಯಲ್ಲಿ ಸಿಲುಕಿರುವವರು ಆದಷ್ಟೂ ಬೇಗ ಪಾರಾಗಿ ಬರಲಿ ಎನ್ನುವ ಹಾರೈಕೆಯೇನೋ ಸರಿ, ಆದರೆ ಅಲ್ಲಿನ ಪರಿಸ್ಥಿತಿ ಸುಧಾರಿಸಲು ಅಷ್ಟೇ ಸಾಕಾಗುವುದಿಲ್ಲವಲ್ಲ!

ಈ ನಿಟ್ಟಿನಲ್ಲಿ ಇಂಟರ್‌ನೆಟ್ ಲೋಕ ತನ್ನ ಕೈಲಾದಷ್ಟು ಮಟ್ಟದ ನೆರವು ನೀಡಲು ಹೊರಟಿರುವುದು ವಿಶೇಷ.

ಪ್ರವಾಹ, ಭೂಕಂಪನ, ಸುನಾಮಿ ಮುಂತಾದ ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿ ನೆರವಿನ ಬಗ್ಗೆ ಯೋಚಿಸುತ್ತಿದ್ದಂತೆಯೇ ನಮ್ಮ ಮನಸ್ಸಿಗೆ ಬರುವುದು ಹಣಕಾಸಿನ ದೇಣಿಗೆ. ಹಲವು ಸಂದರ್ಭಗಳಲ್ಲಿ ಹೀಗೆ ದೇಣಿಗೆ ಸಂಗ್ರಹಿಸುವವರು ಮನೆಬಾಗಿಲಿಗೇ ಬರುತ್ತಾರಾದರೂ ಅವರಿಗೆ ಕೊಟ್ಟ ಹಣ ಸಂತ್ರಸ್ತರಿಗಾಗಿಯೇ ಬಳಕೆಯಾಗುತ್ತದೋ ಇಲ್ಲವೋ ಎನ್ನುವ ಸಂಶಯ ಮೂಡುತ್ತದೆ. ಈ ಸಂಶಯ ಪರಿಹರಿಸಿಕೊಳ್ಳಬೇಕೆಂದರೆ ನಮ್ಮ ದೇಣಿಗೆಯನ್ನು ನಿಜಕ್ಕೂ ಕೆಲಸಮಾಡುತ್ತಿರುವ ಸಂಸ್ಥೆಗಳಿಗೇ ನೇರವಾಗಿ ತಲುಪಿಸಬೇಕು.

ಇದಕ್ಕಾಗಿ ಅಂತರಜಾಲದಲ್ಲಿ ಹಲವು ಮಾರ್ಗಗಳಿವೆ. ಪ್ರಧಾನಮಂತ್ರಿಗಳ ಪರಿಹಾರನಿಧಿಯಿಂದ ಪ್ರಾರಂಭಿಸಿ ಹಲವು ಸ್ವಯಂಸೇವಾ ಸಂಸ್ಥೆಗಳವರೆಗೆ ನಮ್ಮ ಆಯ್ಕೆಯ ಸಂಸ್ಥೆಗೆ ದೇಣಿಗೆಯನ್ನು ನೇರವಾಗಿ ತಲುಪಿಸುವುದು ಇದೀಗ ಸಾಧ್ಯ. ಎನ್‌ಇಎಫ್‌ಟಿ ಮೂಲಕ ಹಣದ ವರ್ಗಾವಣೆಯಷ್ಟೇ ಅಲ್ಲ, ನೆಟ್‌ಬ್ಯಾಂಕಿಂಗ್-ಡೆಬಿಟ್ ಕಾರ್ಡ್-ಕ್ರೆಡಿಟ್ ಕಾರ್ಡ್ ಮುಂತಾದ ಇನ್ನೂ ಹಲವಾರು ಮಾರ್ಗಗಳ ಮೂಲಕ ನಾವು ನಮ್ಮ ನೆರವು ನೀಡಬಹುದು.

ಹಣಕಾಸಿನ ನೆರವಷ್ಟೇ ಅಲ್ಲ, ತೊಂದರೆಯಲ್ಲಿ ಸಿಲುಕಿರುವವರ ಬಗ್ಗೆ ಮಾಹಿತಿ ಹಂಚಿಕೊಳ್ಳಲೂ ಅಂತರಜಾಲ ನೆರವಾಗುತ್ತದೆ. ಇಂತಹ ವ್ಯವಸ್ಥೆಗಳಲ್ಲೊಂದು ಗೂಗಲ್‌ನ ಪರ್ಸನ್ ಫೈಂಡರ್.  ಹೈಟಿ, ನ್ಯೂಜಿಲೆಂಡ್, ಜಪಾನ್ ಮುಂತಾದೆಡೆಗಳಲ್ಲಿ ಭೂಕಂಪನದಂತಹ ವಿಕೋಪಗಳು ಸಂಭವಿಸಿದಾಗ ಬಳಕೆಯಾಗಿದ್ದ ಈ ಸೌಲಭ್ಯ ಇದೀಗ ಉತ್ತರಾಖಂಡ ಪ್ರವಾಹ ಸಂತ್ರಸ್ತರಿಗೂ ನೆರವಾಗಲು ಮರಳಿಬಂದಿದೆ.

ಜಾಲಲೋಕದಲ್ಲಿ ನಮಗೆ ಬೇಕಾದ ಮಾಹಿತಿಗಾಗಿ ನಾವು ಗೂಗಲ್ ಮೊರೆಹೋಗುತ್ತೇವಲ್ಲ, ಹಾಗೆಯೇ ಇಂತಹ ದುರಂತಗಳ ಸಂದರ್ಭದಲ್ಲಿ ಆ ಪ್ರದೇಶಗಳಲ್ಲಿದ್ದವರನ್ನು ಹುಡುಕಲು ಈ 'ಪರ್ಸನ್ ಫೈಂಡರ್' ನೆರವಾಗುತ್ತದೆ. ಇಂತಹ ಸಂದರ್ಭದಲ್ಲಿ ಆ ಪ್ರದೇಶದಲ್ಲಿದ್ದ ಯಾವುದೇ ವ್ಯಕ್ತಿ, ಅಥವಾ ಆತ ಕ್ಷೇಮವಾಗಿದ್ದಾನೆ ಎಂದು ಬಲ್ಲ ಬೇರೆ ಯಾರಾದರೂ ಈ ತಾಣಕ್ಕೆ ಬಂದು ಕ್ಷೇಮಸಮಾಚಾರ ದಾಖಲಿಸಿದರೆ ಮಾಹಿತಿ ಹುಡುಕಿಬಂದ ಎಲ್ಲರಿಗೂ ಆತ ಕ್ಷೇಮವಾಗಿರುವುದು ತಿಳಿದುಬಿಡುತ್ತದೆ. ಅಷ್ಟೇ ಅಲ್ಲ, ನಿರಾಶ್ರಿತರ ಶಿಬಿರಗಳಿಂದಲೂ ಮಾಹಿತಿ ಸಂಗ್ರಹಿಸಿ ಈ ತಾಣಕ್ಕೆ ಸೇರಿಸಲಾಗುತ್ತಿದೆ.

ಫೇಸ್‌ಬುಕ್ ಹಾಗೂ ಟ್ವೀಟರ್‌ನಂತಹ ಸಾಮಾಜಿಕ ತಾಣಗಳು ಕೂಡ ದುರಂತಗಳ ಸಂದರ್ಭದಲ್ಲಿ ಸಾಕಷ್ಟು ಉಪಯುಕ್ತ ಪಾತ್ರ ನಿರ್ವಹಿಸಬಲ್ಲವು. ನಾನು ಕ್ಷೇಮವಾಗಿದ್ದೇನೆ ಎಂದೋ, ನನಗೆ ಸಹಾಯ ಬೇಕು ಎಂದೋ ಹೇಳಬಯಸಿದವರು ತಮ್ಮ ಸಂದೇಶವನ್ನು ಒಂದೇ ಒಂದು ಕಡೆ ದಾಖಲಿಸಿ ಅದು ಎಲ್ಲ ಮಿತ್ರರಿಗೂ ತಲುಪುವಂತೆ ಮಾಡುವುದು ಈ ತಾಣಗಳಿಂದಾಗಿ ಸಾಧ್ಯವಾಯಿತು.

ತೀರಾ ಹೆಚ್ಚು ಸಮಸ್ಯೆಯಾದ ಕೆಲವೆಡೆ ಮೊಬೈಲ್ ಸಂಪರ್ಕಕ್ಕೂ ಸಂಚಕಾರ ಬಂದು ಯಾವ ಸಂಪರ್ಕವೂ ಸಾಧ್ಯವಾಗಲಿಲ್ಲ ಎನ್ನುವುದೂ ನಿಜವೇ ಆದರೂ ಸಮಸ್ಯೆಯ ಸಂದರ್ಭದಲ್ಲಿ ತನ್ನ ಕೈಲಾದ ನೆರವು ನೀಡುತ್ತಿರುವ ಇಂಟರ್‌ನೆಟ್ ಪ್ರಪಂಚದ ನೆರವು ನಿಜಕ್ಕೂ ಶ್ಲಾಘನೀಯವೇ.

ಜೂನ್ ೨೮, ೨೦೧೩ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge