ಶುಕ್ರವಾರ, ಜೂನ್ 21, 2013

ಎಲ್ಲೆಲ್ಲೂ ಇಂಟರ್‌ನೆಟ್!

ಟಿ. ಜಿ. ಶ್ರೀನಿಧಿ


ನೀವು ಯಾವ ಬಗೆಯ ಇಂಟರ್‌ನೆಟ್ ಸಂಪರ್ಕ ಉಪಯೋಗಿಸುತ್ತೀರಿ ಎಂದು ಕೇಳಿದರೆ ಬೇರೆಬೇರೆ ಸನ್ನಿವೇಶಗಳಲ್ಲಿ ಬೇರೆಬೇರೆ ರೀತಿಯ ಉತ್ತರಗಳು ಕೇಳಸಿಗುತ್ತವೆ: ಕಚೇರಿಗಳಲ್ಲಿ ಒಂದು ರೀತಿ, ನಗರಪ್ರದೇಶದ ಮನೆಗಳಲ್ಲಿ ಇನ್ನೊಂದು ರೀತಿ, ಗ್ರಾಮೀಣ ಪ್ರದೇಶಗಳಲ್ಲಿ ಬೇರೆಯದೇ ರೀತಿ. ಹೆಚ್ಚುಕಾಲ ಪ್ರಯಾಣದಲ್ಲೇ ಇರುವವರು ಬೇರೆಯದೇ ಉತ್ತರ ನೀಡುತ್ತಾರೇನೋ, ಇರಲಿ.

ಈ ಪೈಕಿ ಹೆಚ್ಚಿನ ಬ್ಯಾಂಡ್‌ವಿಡ್ತ್‌ನೊಡನೆ ಅತಿವೇಗದ ಸಂಪರ್ಕ ಒದಗಿಸುವ ಬ್ರಾಡ್‌ಬ್ಯಾಂಡ್ ಸೇವೆ ಸಾಕಷ್ಟು ಜನಪ್ರಿಯ. ದೂರಸಂಪರ್ಕ ಕ್ಷೇತ್ರದ ಪ್ರಮುಖ ಸಂಸ್ಥೆಗಳಷ್ಟೇ ಅಲ್ಲದೆ ಹಲವಾರು ಕೇಬಲ್ ಟೀವಿ ಸಂಸ್ಥೆಗಳೂ ಇಂತಹ ಅತಿವೇಗದ ಅಂತರಜಾಲ ಸಂಪರ್ಕವನ್ನು ಒದಗಿಸುತ್ತಿವೆ.

ವೈರ್‌ಲೆಸ್ ಫಿಡೆಲಿಟಿ ಅಥವಾ 'ವೈ-ಫಿ' ಮಾನಕ ಆಧಾರಿತ ತಂತ್ರಜ್ಞಾನ ಬಳಸಿ ವೈರ್‌ಲೆಸ್ (ನಿಸ್ತಂತು) ಅಂತರಜಾಲ ಸಂಪರ್ಕವನ್ನೂ ಕಲ್ಪಿಸಿಕೊಳ್ಳಬಹುದು. ಬ್ರಾಡ್‌ಬ್ಯಾಂಡ್ ಸೇವೆ ಒದಗಿಸುವ ಸಂಸ್ಥೆಗಳ ನೀಡುವ ವೈ-ಫಿ ಮೋಡೆಮ್ ಬಳಸಿ ನಮ್ಮ ಮನೆಯಲ್ಲೇ ಇಂತಹ ಸಂಪರ್ಕ ದೊರಕುವಂತೆ ಕೂಡ ಮಾಡಿಕೊಳ್ಳಬಹುದು.

ನಮ್ಮ ಕೈಲಿರುವ ಮೊಬೈಲುಗಳೆಲ್ಲ ಸ್ಮಾರ್ಟ್‌ಫೋನುಗಳಾಗುತ್ತಿದ್ದಂತೆ ಅವುಗಳ ಮೂಲಕ ಅಂತರಜಾಲ ಸಂಪರ್ಕ ಬಳಸುವುದು ಕೂಡ ಜನಪ್ರಿಯವಾಗಿದೆ. ಜಿಪಿಆರ್‌ಎಸ್, ಥ್ರೀಜಿ ಹೀಗೆ ಮೊಬೈಲ್ ಜಾಲ ಬಳಸಿ ಅಂತರಜಾಲ ಸಂಪರ್ಕ ಒದಗಿಸಿಕೊಡುವ ಅದೆಷ್ಟೋ ಬಗೆಯ ಹ್ಯಾಂಡ್‌ಸೆಟ್ಟುಗಳು ಹಾಗೂ ನಿಸ್ತಂತು ಅಂತರಜಾಲ ಸಂಪರ್ಕ ಉಪಕರಣಗಳು (ಡಾಂಗಲ್) ಮಾರುಕಟ್ಟೆಯಲ್ಲಿವೆ.

ಇನ್ನು ಸಾಮಾನ್ಯ ದೂರವಾಣಿ ಬಳಸಿ ಕೆಲಸಮಾಡುವ ಡಯಲ್-ಅಪ್ ಸಂಪರ್ಕ ತೀರಾ ಇತ್ತೀಚಿನವರೆಗೂ ವ್ಯಾಪಕ ಬಳಕೆಯಲ್ಲಿತ್ತು. ದೂರವಾಣಿ ತಂತಿಗಳ ಮೂಲಕ ಮಾಹಿತಿ ವಿನಿಮಯ ನಡೆಸುವ ಈ ಬಗೆಯ ಸಂಪರ್ಕ ಈಚೆಗೆ ನೇಪಥ್ಯಕ್ಕೆ ಸರಿಯುತ್ತಿದೆ.

ಅಂತರಜಾಲ ಸಂಪರ್ಕಗಳಲ್ಲಿ ಇಷ್ಟೆಲ್ಲ ವೈವಿಧ್ಯವಿದ್ದರೂ ಅವುಗಳ ವ್ಯಾಪ್ತಿಯೇ ದೊಡ್ಡದೊಂದು ಸಮಸ್ಯೆ. ಎಲ್ಲೆಲ್ಲಿ ದೂರವಾಣಿ ಅಥವಾ ಕೇಬಲ್ ಜಾಲ ಇಲ್ಲವೋ ಅಲ್ಲಿ ಅಂತರಜಾಲ ಸಂಪರ್ಕವೂ ಇರುವುದಿಲ್ಲ. ಇನ್ನು ಡಯಲ್-ಅಪ್ ಅಥವಾ ಮೊಬೈಲ್ ಅಂತರಜಾಲ ಸಂಪರ್ಕ ಕೆಲವೆಡೆಗಳಲ್ಲಿ ಇದ್ದರೂ ಸಂಪರ್ಕದ ವೇಗ ಬಹಳ ಕಡಿಮೆ ಇರುತ್ತದೆ.

ಇಂತಹ ಕಡೆಗಳಲ್ಲಿ ಅಂತರಜಾಲ ಸಂಪರ್ಕ ಒದಗಿಸುವುದು ಹೇಗೆ?

ಅಂತರಜಾಲ ಸಂಪರ್ಕ ಒದಗಿಸಲು ಉಪಗ್ರಹಗಳನ್ನು ಬಳಸುವುದು ಈ ನಿಟ್ಟಿನಲ್ಲಿ ನಡೆದ ಪ್ರಯತ್ನಗಳಲ್ಲೊಂದು. ಗ್ರಾಮೀಣ ಪ್ರದೇಶದ ಬಳಕೆದಾರರಿಗೆ ಉಪಗ್ರಹದ ಮೂಲಕ ಅತಿವೇಗದ ಅಂತರಜಾಲ ಸಂಪರ್ಕ ಒದಗಿಸುವುದು ಇದರ ವೈಶಿಷ್ಟ್ಯ. ಇದು ನಮಗೆಲ್ಲ ಪರಿಚಿತವಾಗಿರುವ ಡಿಟಿಹೆಚ್ ಸೇವೆಯಂತೆಯೇ ಪುಟಾಣಿ ಡಿಷ್ ಆಂಟೆನಾ ಬಳಸಿಕೊಂಡು ಕೆಲಸಮಾಡುತ್ತದೆ. ಆಧುನಿಕ ಸಂಪರ್ಕ ವ್ಯವಸ್ಥೆಗಳಿಂದ ದೂರವಿರುವ ಪ್ರದೇಶಗಳಿಗೂ ಹೆಚ್ಚುವೇಗದ ಅಂತರಜಾಲ ಸಂಪರ್ಕ ದೊರಕುವಂತಾಗಲು ಇದೊಂದು ಉತ್ತಮ ಮಾರ್ಗ.

ಪ್ರಪಂಚದ ಅನೇಕ ಕಡೆಗಳಲ್ಲಿ ಉಪಗ್ರಹ ಅಂತರಜಾಲ ಈಗಾಗಲೇ ಲಭ್ಯವಿದೆ; ಯೂರೋಪಿನ ಗ್ರಾಮೀಣ ಪ್ರದೇಶಗಳಿಗೆ ಅಂತರಜಾಲ ಸೌಲಭ್ಯ ಒದಗಿಸಲೆಂದೇ ೨೦೧೦ರಲ್ಲಿ ವಿಶೇಷ ಉಪಗ್ರಹವೊಂದನ್ನು ಕೂಡ ಉಡಾಯಿಸಲಾಗಿತ್ತು.

ಆದರೆ ಇಲ್ಲೊಂದು ಸಮಸ್ಯೆಯಿದೆ: ಉಪಗ್ರಹದ ಮೂಲಕ ಕಲ್ಪಿಸಲಾಗುವ ಈ ಸಂಪರ್ಕ ಬೇರೆಲ್ಲ ಬಗೆಯ ಅಂತರಜಾಲ ಸಂಪರ್ಕಗಳಿಗಿಂತ ತುಸು ದುಬಾರಿ. ಹಾಗಾಗಿ ಎಲ್ಲ ಕಡೆಯೂ ಈ ಬಗೆಯ ಅಂತರಜಾಲ ಸಂಪರ್ಕ ಕಲ್ಪಿಸಿಕೊಡುವುದು ಕಷ್ಟ.

ಈ ಸಮಸ್ಯೆಗೆ ಪರಿಹಾರವಾಗಿ ಗೂಗಲ್ ಸಂಸ್ಥೆ ಇದೀಗ ಪರ್ಯಾಯ ವಿಧಾನವೊಂದನ್ನು ಪರಿಚಯಿಸಿದೆ. ಆಕಾಶದಲ್ಲಿ ಬಲೂನುಗಳನ್ನು ಹಾರಿಬಿಟ್ಟು ಅವುಗಳ ಮೂಲಕ ದೂರ ಪ್ರದೇಶಗಳಿಗೆ ಅಂತರಜಾಲ ಸಂಪರ್ಕ ಕಲ್ಪಿಸುವುದು ಗೂಗಲ್‌ನ ಉದ್ದೇಶ.  ಸುಮಾರು ಹದಿನೈದು ಮೀಟರ್ ವ್ಯಾಸದ ಈ ಬಲೂನುಗಳು ಆಕಾಶದಲ್ಲಿ ಇಪ್ಪತ್ತು ಕಿಲೋಮೀಟರ್ ಎತ್ತರದಲ್ಲಿ ಸಾಗುತ್ತವಂತೆ. ಇದು ವಿಮಾನಗಳು ಸಾಗುವ ಎತ್ತರಕ್ಕಿಂತ ಹತ್ತು ಕಿಲೋಮೀಟರಿನಷ್ಟು ಹೆಚ್ಚಿನ ಎತ್ತರ!

ನಿಯಂತ್ರಿತ ಪಥದಲ್ಲೇ ಸಾಗುವ ಇಂತಹ ಪ್ರತಿಯೊಂದು ಬಲೂನೂ ಭೂಮಿಯ ಮೇಲೆ ಸುಮಾರು ನಲವತ್ತು ಕಿಲೋಮೀಟರ್ ವ್ಯಾಸದ ಪ್ರದೇಶಕ್ಕೆ ಅಂತರಜಾಲ ಸಂಪರ್ಕ ಒದಗಿಸಲಿದೆ ಎಂದು ಅಂದಾಜಿಸಲಾಗಿದೆ. ಈ ಮೂಲಕ ಸಂಪರ್ಕ ಪಡೆಯಲು ಮನೆಗಳಲ್ಲಿ ವಿಶೇಷವಾದುದೊಂದು ಆಂಟೆನಾ ಇರಬೇಕು ಅಷ್ಟೆ.

ತನ್ನಲ್ಲಿರುವ ಸೌರಶಕ್ತಿ ಫಲಕಗಳಿಂದ ವಿದ್ಯುತ್ ಉತ್ಪಾದಿಸಿಕೊಂಡು ಕಾರ್ಯನಿರ್ವಹಿಸುವ ಇಂತಹ ಪ್ರತಿಯೊಂದು ಬಲೂನು ಸುಮಾರು ನೂರು ದಿನಗಳ ಕಾಲ ಹಾರಾಟ ನಡೆಸುತ್ತದೆ ಎಂದು ಗೂಗಲ್ ಅಂದಾಜಿಸಿದೆ. ಮೊದಲಿಗೆ ನ್ಯೂಜಿಲೆಂಡ್‌ನಲ್ಲಿ ಪ್ರಾರಂಭವಾಗಿರುವ ಈ ಪ್ರಯೋಗ ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ಪ್ರಪಂಚದ ಮೂರನೇ ಎರಡರಷ್ಟು ಜನಸಂಖ್ಯೆಗೆ ಬಲೂನುಗಳೇ ಅಂತರಜಾಲದ ಬೆಳಕಿಂಡಿಗಳಾಗಲಿವೆ ಎನ್ನುವ ಮಹತ್ವಾಕಾಂಕ್ಷೆ ಆ ಸಂಸ್ಥೆಯದು.

ಜೂನ್ ೨೧, ೨೦೧೩ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge