ಶುಕ್ರವಾರ, ಜೂನ್ 7, 2013

ಬ್ರೌಸರ್ ಕಿಟಕಿಯಲ್ಲಿ ಕನ್ನಡದ ಕಂಪು

ಟಿ. ಜಿ. ಶ್ರೀನಿಧಿ

ವಿಶ್ವವ್ಯಾಪಿ ಜಾಲವನ್ನು ನಾವೆಲ್ಲ ಬಳಸುತ್ತೇವಾದರೂ ಬಳಕೆಯ ಉದ್ದೇಶ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತಲೇ ಇರುತ್ತದೆ. ಶಾಲೆಯ ವಿದ್ಯಾರ್ಥಿಗೆ ವೆಬ್ ವಿಹಾರವೆಂದರೆ ಆಟವಾಡುವ ಅಥವಾ ಹೋಮ್‌ವರ್ಕ್‌ಗೆ ಬೇಕಾದ ಮಾಹಿತಿ ಹುಡುಕುವ ಮಾರ್ಗ; ಅದೇ ವೃತ್ತಿಪರನೊಬ್ಬನಿಗೆ ವಿಶ್ವವ್ಯಾಪಿ ಜಾಲವೆಂದರೆ ಕಚೇರಿಯ ಕೆಲಸಕ್ಕೆ ಮನೆಯಿಂದಲೇ ಕಿಟಕಿ ತೆರೆದುಕೊಡುವ ಕೊಂಡಿಯಿದ್ದಂತೆ. ಇನ್ನು ಮಕ್ಕಳು ಮೊಮ್ಮಕ್ಕಳೆಲ್ಲ ವಿದೇಶದಲ್ಲಿರುವ ಅಜ್ಜಿ-ತಾತನ ಪಾಲಿಗೆ ವಿಶ್ವವ್ಯಾಪಿ ಜಾಲ ಜೀವನಾಡಿಯೇ ಇದ್ದಂತೆ!

ಇವರೆಲ್ಲ ವಿಶ್ವವ್ಯಾಪಿ ಜಾಲವನ್ನು ಸಂಪರ್ಕಿಸುವ ವಿಧಾನ ಕೂಡ ವಿಭಿನ್ನವೇ. ಒಬ್ಬರು ತಮ್ಮ ಮೊಬೈಲಿನ ಥ್ರೀಜಿ ಸಂಪರ್ಕ ಬಳಸಿದರೆ ಇನ್ನೊಬ್ಬರ ಮನೆಯಲ್ಲಿ ಬ್ರಾಡ್‌ಬ್ಯಾಂಡ್, ವೈ-ಫಿ ಇತ್ಯಾದಿಗಳೆಲ್ಲ ಇರುತ್ತದೆ. ಇನ್ನು ಕೆಲವೆಡೆ ಹಳೆಯಕಾಲದ ಡಯಲ್ ಅಪ್ ಸಂಪರ್ಕವೂ ಬಳಕೆಯಾಗುತ್ತಿರುತ್ತದೆ.

ಇಷ್ಟೆಲ್ಲ ವೈವಿಧ್ಯಗಳ ನಡುವೆ ವಿಶ್ವವ್ಯಾಪಿ ಜಾಲದ ಎಲ್ಲ ಬಳಕೆದಾರರೂ ಕಡ್ಡಾಯವಾಗಿ ಉಪಯೋಗಿಸುವ ಅಂಶವೊಂದಿದೆ. ಅದೇ ಬ್ರೌಸರ್‌ಗಳ ಬಳಕೆ.

ವಿಶ್ವವ್ಯಾಪಿ ಜಾಲದಲ್ಲಿರುವ ತಾಣಗಳನ್ನು ತಮ್ಮ ಕಂಪ್ಯೂಟರಿನಲ್ಲಿ ವೀಕ್ಷಿಸಲು ಬಳಕೆದಾರರಿಗೆ ಅನುವುಮಾಡಿಕೊಡುವುದು ಈ ತಂತ್ರಾಂಶದ ಕೆಲಸ. ಹಾಗಾಗಿಯೇ ಬಳಸುತ್ತಿರುವ ಕಂಪ್ಯೂಟರ್, ಸಂಪರ್ಕದ ವಿಧಾನ, ಬಳಕೆಯ ಉದ್ದೇಶ ಇವೆಲ್ಲ ಏನೇ ಆದರೂ ವಿಶ್ವವ್ಯಾಪಿಜಾಲದ ಬಳಕೆದಾರರೆಲ್ಲರೂ ಬ್ರೌಸರ್ ತಂತ್ರಾಂಶವನ್ನು ಬಳಸಲೇಬೇಕು. ಲ್ಯಾಪ್‌ಟಾಪ್-ಡೆಸ್ಕ್‌ಟಾಪ್‌ಗಳಿಗಷ್ಟೆ ಅಲ್ಲ, ಟ್ಯಾಬ್ಲೆಟ್ಟು-ಮೊಬೈಲುಗಳಲ್ಲೂ ಬ್ರೌಸರ್ ತಂತ್ರಾಂಶ ಬೇಕು. ಕ್ಲೌಡ್ ಕಂಪ್ಯೂಟಿಂಗ್ ವಿಷಯಕ್ಕೆ ಬಂದರಂತೂ ಅದೆಷ್ಟೋ ಕೆಲಸಗಳಿಗೆ ಬ್ರೌಸರ್ ತಂತ್ರಾಂಶವೇ ಜೀವಾಳ.

ಈ ತಂತ್ರಾಂಶಗಳಲ್ಲಿ ಹಲವು ಬಗೆ. ಮೊದಲ ಬ್ರೌಸರ್ 'ಮೊಸಾಯಿಕ್'ನಿಂದ ಪ್ರಾರಂಭಿಸಿ ಇಂದಿನವರೆಗೆ ಅನೇಕ ಬ್ರೌಸರ್ ತಂತ್ರಾಂಶಗಳು ಬಂದುಹೋಗಿವೆ. ಈಗ ಪ್ರಚಲಿತದಲ್ಲಿರುವ ಬ್ರೌಸರ್‌ಗಳಲ್ಲಿ ಗೂಗಲ್ ಕ್ರೋಮ್, ಮೊಜಿಲ್ಲಾ ಫೈರ್‌ಫಾಕ್ಸ್, ಇಂಟರ್‌ನೆಟ್ ಎಕ್ಸ್‌ಪ್ಲೋರರ್ ಮೊದಲಾದವು ಮುಖ್ಯವಾದವು. ಮೊಬೈಲ್ ಉಪಕರಣಗಳಿಗಾಗಿಯೇ ಇರುವ ವಿಶೇಷ ಬ್ರೌಸರುಗಳೂ ಇವೆ.

ನಾವು ನೋಡುತ್ತಿರುವ ಜಾಲತಾಣ ಕನ್ನಡದ್ದಾಗಿರಲಿ, ಇಂಗ್ಲಿಷಿನದ್ದಾಗಿರಲಿ ಅಥವಾ ರಷ್ಯನ್ ಭಾಷೆಯದೇ ಇರಲಿ - ತಾಂತ್ರಿಕ ಹೊಂದಾಣಿಕೆಗಳೆಲ್ಲ ಸರಿಯಾಗಿದ್ದ ಪಕ್ಷದಲ್ಲಿ ಅಲ್ಲಿರುವ ಮಾಹಿತಿಯನ್ನು ನಮ್ಮೆದುರು ಪ್ರದರ್ಶಿಸುವುದು ಬ್ರೌಸರ್‌ನ ಕೆಲಸ. ಹೀಗೆ ವಿಶ್ವವ್ಯಾಪಿ ಜಾಲದಲ್ಲಿರುವ ಮಾಹಿತಿಯನ್ನು ನೋಡುವುದು ಮಾತ್ರವಲ್ಲ; ಆ ಮಾಹಿತಿಯನ್ನು ಉಳಿಸಿಕೊಳ್ಳುವುದು, ಮುದ್ರಿಸಿಕೊಳ್ಳುವುದು, ವಿವಿಧ ಪುಟಗಳ ನಡುವೆ ಹಿಂದೆಮುಂದೆ ಓಡಾಡುವುದು, ಅಚ್ಚುಮೆಚ್ಚಿನ ಪುಟಗಳ ವಿಳಾಸ ಸಂಗ್ರಹಿಸಿಟ್ಟುಕೊಳ್ಳುವುದು ಮುಂತಾದ ಇನ್ನಿತರ ಸೌಲಭ್ಯಗಳೂ ಬ್ರೌಸರ್ ತಂತ್ರಾಂಶದಲ್ಲಿರುತ್ತವೆ.

ಯಾವ ಭಾಷೆಯ ಯಾವ ರೂಪದ ಮಾಹಿತಿಯನ್ನಾದರೂ ಬ್ರೌಸರಿನಲ್ಲಿ ನೋಡಬಹುದು ಎನ್ನುವುದೇನೋ ಸರಿ, ಆದರೆ ಬ್ರೌಸರಿನಲ್ಲಿ ಇಂತಹ ಹಲವಾರು ಸೌಲಭ್ಯಗಳಿರುತ್ತವಲ್ಲ, ಅದಕ್ಕೆ ಸಂಬಂಧಿಸಿದ ಆಯ್ಕೆಗಳೆಲ್ಲ (ಮೆನು) ಯಾವ ಭಾಷೆಯಲ್ಲಿರುತ್ತದೆ?

ಈ ಪ್ರಶ್ನೆಗೆ 'ಇಂಗ್ಲಿಷ್' ಎಂದೇ ಉತ್ತರಿಸಬೇಕಾದ ಅನಿವಾರ್ಯತೆ ಈಚಿನ ಕೆಲ ವರ್ಷಗಳವರೆಗೂ ಇತ್ತು. ಆದರೆ ಈಗ ಪರಿಸ್ಥಿತಿ ಹಾಗಿಲ್ಲ ಎನ್ನುವುದು ಖುಷಿಯ ಸಂಗತಿ.

ನಿಜ, ಇಂದು ಹಲವಾರು ಪ್ರಮುಖ ಬ್ರೌಸರುಗಳ ಕನ್ನಡ ಆವೃತ್ತಿ ನಮಗೆ ಲಭ್ಯ. ಹೀಗಾಗಿ ಕ್ರೋಮ್, ಫೈರ್‌ಫಾಕ್ಸ್, ಇಂಟರ್‌ನೆಟ್ ಎಕ್ಸ್‌ಪ್ಲೋರರ್ ಮುಂತಾದ ಪ್ರಮುಖ ಬ್ರೌಸರುಗಳಲ್ಲಿರುವ ಆಯ್ಕೆಗಳನ್ನೆಲ್ಲ ನಾವು ಕನ್ನಡದಲ್ಲಿ ನೋಡಬಹುದು, ಬಳಸಬಹುದು. ವಿಶ್ವವ್ಯಾಪಿ ಜಾಲದಲ್ಲಿ ಕನ್ನಡದ ಮಾಹಿತಿ ಸಾಕಷ್ಟು ಪ್ರಮಾಣದಲ್ಲಿ ದೊರಕುತ್ತಿರುವಾಗ ಅದನ್ನು ಪಡೆದುಕೊಳ್ಳುವ ಪ್ರಕ್ರಿಯೆಯೂ ಕನ್ನಡದಲ್ಲೇ ಆಗುವುದು ಇಂಗ್ಲಿಷ್ ಅವಲಂಬನೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯೆಂದೇ ಹೇಳಬಹುದು.

ಮೊಜಿಲ್ಲಾ ಫೈರ್‌ಫಾಕ್ಸ್ ವಿಷಯಕ್ಕೆ ಬಂದರೆ ಬ್ರೌಸರ್ ತಂತ್ರಾಂಶವನ್ನು ಡೌನ್‌ಲೋಡ್ ಮಾಡುವಾಗಲೇ ನಾವು ಕನ್ನಡ ಆವೃತ್ತಿಯನ್ನು ಆರಿಸಿಕೊಳ್ಳಬೇಕಾಗುತ್ತದೆ. ಫೈರ್‌ಫಾಕ್ಸ್ ಕನ್ನಡ ಆವೃತ್ತಿ ಬಳಸಿ ಗೂಗಲ್, ಜಿಮೇಲ್ ಮುಂತಾದ ಪುಟಗಳನ್ನು ತೆರೆದರೆ ಅವೆಲ್ಲವುದರ ಮೊದಲ ಪುಟಗಳು ಕನ್ನಡ ಆವೃತ್ತಿಯಲ್ಲೇ ತೆರೆದುಕೊಳ್ಳುವುದು ವಿಶೇಷ. ಅಷ್ಟೇ ಅಲ್ಲ, ಫೈರ್‌ಫಾಕ್ಸ್ ಒಂದು ಮುಕ್ತ ತಂತ್ರಾಂಶವಾಗಿರುವುದರಿಂದ ಬಾಕಿಯಿರುವ ಅನುವಾದದ ಕೆಲಸದಲ್ಲಿ ನಾವೂ ಸಹಾಯಮಾಡಬಹುದು.

ಗೂಗಲ್ ಕ್ರೋಮ್ ಬಳಕೆದಾರರು ತಮ್ಮ ಇಷ್ಟದ ಭಾಷೆ ಆರಿಸಿಕೊಳ್ಳಲು ಸೆಟಿಂಗ್ಸ್ ಮೆನುಗೆ ಹೋದರೆ ಸಾಕು. ಅಲ್ಲಿರುವ ಅಡ್ವಾನ್ಸ್‌ಡ್ ಆಯ್ಕೆಗಳನ್ನು ಬಳಸಿಕೊಂಡು ನಾವು ಕ್ರೋಮ್ ತಂತ್ರಾಂಶವನ್ನು ಯಾವ ಭಾಷೆಯಲ್ಲಿ ನೋಡಲು ಇಷ್ಟಪಡುತ್ತೇವೆ ಎನ್ನುವುದನ್ನು ಸೂಚಿಸಬಹುದು. ಫೈರ್‌ಫಾಕ್ಸ್‌ನಂತೆ ಕ್ರೋಮ್‌ನಲ್ಲೂ ಕನ್ನಡ ಭಾಷೆ ಬಳಸುವಾಗ ಗೂಗಲ್‌ನ ಎಲ್ಲ ಜಾಲತಾಣಗಳೂ (ಗೂಗಲ್, ಜಿಮೇಲ್, ಬ್ಲಾಗರ್, ಡ್ರೈವ್ ಇತ್ಯಾದಿ) ಮೊದಲಿಗೆ ಕನ್ನಡದಲ್ಲೇ ಮೂಡಿಬರುತ್ತವೆ. ಆದರೆ ಇದನ್ನು ನಮ್ಮ ಇಚ್ಛೆಯಂತೆ ಬದಲಿಸಿಕೊಳ್ಳುವುದು ಬಹಳ ಸುಲಭ.

ಕನ್ನಡದ ಅನುಭವ ನೀಡುವಲ್ಲಿ ಇಂಟರ್‌ನೆಟ್ ಎಕ್ಸ್‌ಪ್ಲೋರರ್ ಕೂಡ ಹಿಂದೆಬಿದ್ದಿಲ್ಲ. ಈ ತಂತ್ರಾಂಶಕ್ಕಾಗಿ ಮೈಕ್ರೋಸಾಫ್ಟ್ ಜಾಲತಾಣದಲ್ಲಿ ಸಿಗುವ ಲ್ಯಾಂಗ್ವೇಜ್ ಪ್ಯಾಕ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವ ಮೂಲಕ ನಾವು ಅದನ್ನು ಕನ್ನಡದಲ್ಲಿ ಬಳಸುವುದು ಸಾಧ್ಯವಾಗುತ್ತದೆ.

ಒಟ್ಟಿನಲ್ಲಿ ನಾವು ವಿಶ್ವವ್ಯಾಪಿ ಜಾಲವನ್ನು ಜಾಲಾಡಲು ಕಾರಣ ಏನೇ ಆದರೂ ಆ ಸಂದರ್ಭದಲ್ಲಿ ಕನ್ನಡದ ಬ್ರೌಸರ್ ತಂತ್ರಾಂಶ ಬಳಸುವುದು ಒಂದು ವಿಭಿನ್ನ ಅನುಭವ ಕಟ್ಟಿಕೊಡುತ್ತದೆ. ಅಷ್ಟೇ ಅಲ್ಲ, ಇಂತಹ ಸಣ್ಣಸಣ್ಣ ಹೆಜ್ಜೆಗಳು ಕೂಡ ತಂತ್ರಜ್ಞಾನ ಲೋಕದಲ್ಲಿ ಕನ್ನಡವನ್ನು ಮುನ್ನಡೆಸುವಲ್ಲೂ ಸಹಕಾರಿಯಾಗುತ್ತವೆ!

ಜೂನ್ ೭, ೨೦೧೩ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge