ಶನಿವಾರ, ಮೇ 25, 2013

ಬರಿಯ ಫೋಟೋಗ್ರಫಿಯಷ್ಟೆ ಅಲ್ಲ, ಇದು ಲೋಮೋಗ್ರಫಿ!


ಟಿ. ಜಿ. ಶ್ರೀನಿಧಿ

ಸ್ಮಾರ್ಟ್‌ಫೋನ್ ಬಳಸುವವರಲ್ಲಿ ಅನೇಕರಿಗೆ ಇನ್ಸ್‌ಟಾಗ್ರಾಮ್ ಗೊತ್ತು. ನಾವು ಕ್ಲಿಕ್ಕಿಸುವ ಚಿತ್ರಗಳನ್ನು ನಮ್ಮ ಇಷ್ಟದಂತೆ ಬದಲಿಸುವ, ರೆಟ್ರೋ ಇಫೆಕ್ಟ್ ಕೊಡುವ ಆಪ್ (app) ಇದು; ಬಹಳ ಜನಪ್ರಿಯವೂ ಹೌದು. ಸುಮಾರು ಒಂದು ವರ್ಷದ ಹಿಂದೆ ಫೇಸ್‌ಬುಕ್ ಸಂಸ್ಥೆ ಒಂದು ಬಿಲಿಯನ್ ಡಾಲರ್ ಕೊಟ್ಟು ಇನ್ಸ್‌ಟಾಗ್ರಾಮ್ ಅನ್ನು ಕೊಂಡ ಸುದ್ದಿ ಬಂತಲ್ಲ, ಆಗ ಅದೆಷ್ಟು ಸುದ್ದಿಯಾಯಿತೆಂದರೆ ಸ್ಮಾರ್ಟ್‌ಫೋನ್ ಬಳಕೆದಾರರಲ್ಲದವರು ಕೂಡ ಇನ್ಸ್‌ಟಾಗ್ರಾಮ್ ಹೆಸರು ಕೇಳುವಂತಾಗಿತ್ತು!

ಫೋಟೋಗಳಿಗೆ ಹೀಗೆ ಸ್ಪೆಶಲ್ ಇಫೆಕ್ಟುಗಳನ್ನು ಸೇರಿಸುವುದು ಬಹಳ ಜನಪ್ರಿಯ ಅಭ್ಯಾಸ ಎಂದೇ ಹೇಳಬೇಕು. ಈಗಂತೂ ಡಿಜಿಟಲ್ ಚಿತ್ರಗಳಿಗೆ ಬಹಳ ಸುಲಭವಾಗಿ ನಮಗೆ ಬೇಕಾದ ಇಫೆಕ್ಟುಗಳನ್ನೆಲ್ಲ ಸೇರಿಸಿಬಿಡಬಹುದು. ಹಿಂದೆ ಬ್ಲಾಕ್ ಆಂಡ್ ವೈಟ್ ಕಾಲದಲ್ಲಿ ಚಿತ್ರಗಳಿಗೆ ಬಣ್ಣ ಹಾಕುತ್ತಿದ್ದದ್ದೂ ಸ್ಪೆಶಲ್ ಇಫೆಕ್ಟೇ!

ಇದೇನೋ ಚಿತ್ರ ಕ್ಲಿಕ್ಕಿಸಿದ ನಂತರದ ಮಾತಾಯಿತು. ಕ್ಲಿಕ್ಕಿಸಿದ ಚಿತ್ರ ಕ್ಯಾಮೆರಾದಲ್ಲಿ ಸೆರೆಯಾಗುವಾಗಲೇ ನಮಗೆ ಬೇಕಾದ ಇಫೆಕ್ಟುಗಳೆಲ್ಲ ಅದರಲ್ಲಿ ಸೇರಿಕೊಳ್ಳುವಂತಿದ್ದರೆ ಹೇಗಿರುತ್ತಿತ್ತು?


ಈ ರೀತಿಯಲ್ಲಿ ಚಿತ್ರಗಳಿಗೆ ವಿಶೇಷ ಇಫೆಕ್ಟ್ ಕೊಡುತ್ತಿದ್ದ ಹಳೆಯದೊಂದು ಕ್ಯಾಮೆರಾದ ಕತೆ ಇಲ್ಲಿದೆ. ತನ್ನ ಈ ವೈಶಿಷ್ಟ್ಯದಿಂದಾಗಿ ಫಿಲಂ ಕ್ಯಾಮೆರಾಗಳ ನಿರ್ಗಮನವನ್ನು ಒಂದಷ್ಟು ವರ್ಷಗಳ ಕಾಲ ಮುಂದೆ ಹಾಕಿದ ಖ್ಯಾತಿಯೂ ಈ ಕ್ಯಾಮೆರಾಗೇ ಸಲ್ಲಬೇಕು.

* * *

ಅದು ೧೯೯೦ರ ದಶಕದ ಪ್ರಾರಂಭ. ಆಸ್ಟ್ರಿಯಾ ದೇಶದ ಒಂದಷ್ಟು ವಿದ್ಯಾರ್ಥಿಗಳು ಸಮೀಪದ ಪ್ರಾಗ್ ನಗರದ ಪ್ರವಾಸದಲ್ಲಿದ್ದರು. ಶಾಪಿಂಗ್ ಹೋಗಿದ್ದಾಗ ಅಂಗಡಿಯೊಂದರಲ್ಲಿ ಅವರಿಗೆ ಪುಟ್ಟದೊಂದು ಕ್ಯಾಮೆರಾ ಕಾಣಸಿಕ್ಕಿತು.

ಮೇಲ್ನೋಟಕ್ಕೆ ಆ ಕ್ಯಾಮೆರಾದಲ್ಲಿ ಹೇಳಿಕೊಳ್ಳುವಂತಹ ವೈಶಿಷ್ಟ್ಯವೇನೂ ಇರಲಿಲ್ಲ - ಸಾಧಾರಣ ವಿನ್ಯಾಸ, ಸಣ್ಣ ಗಾತ್ರ, ಕೊಂಚ ಹೆಚ್ಚೇ ಎನಿಸುವಷ್ಟು ತೂಕ. ಅಷ್ಟೇ ಅಲ್ಲ, ರೀಲು ಹಾಕುವುದರಿಂದ ಫೋಕಸ್ ಮಾಡುವುದರವರೆಗೆ ಪ್ರತಿಯೊಂದು ಹೆಜ್ಜೆಯನ್ನೂ ಸ್ವತಃ ಛಾಯಾಗ್ರಾಹಕನೇ ತನ್ನ ಕೈಯಾರೆ ಮಾಡಬೇಕು!

ವಿದ್ಯಾರ್ಥಿಗಳಿಗೆ ಆ ಕ್ಯಾಮೆರಾದ ವೈಶಿಷ್ಟ್ಯ ಮನದಟ್ಟಾದದ್ದು ಅವರು ತೆಗೆದ ಫೋಟೋಗಳನ್ನೆಲ್ಲ ಪ್ರಿಂಟುಹಾಕಿಸಿದ ನಂತರವೇ.  ಆ ಚಿತ್ರಗಳು ಅದೆಷ್ಟು ವಿಭಿನ್ನವಾಗಿ ಮೂಡಿಬಂದಿದ್ದವೆಂದರೆ ಅವರೆಲ್ಲರೂ ಒಮ್ಮೆಲೇ ಆ ಕ್ಯಾಮೆರಾದ ಅಭಿಮಾನಿಗಳಾಗಿಬಿಟ್ಟರು.

ಗಾಢ ಹಾಗೂ ದಟ್ಟವಾದ ಬಣ್ಣಗಳು, ಚಿತ್ರದ ಮೂಲೆಗಳಿಗೆಲ್ಲ ಕಪ್ಪು ಛಾಯೆ ಕೊಡುವ ವಿಗ್ನೆಟಿಂಗ್ ಇಫೆಕ್ಟ್, ಚಿತ್ರದಲ್ಲಿ ಹೆಚ್ಚು ಬೆಳಕಿರುವ-ಇಲ್ಲದ ಪ್ರದೇಶಗಳ ನಡುವೆ ನಾಟಕೀಯವೆನಿಸುವಂತಹ ವೈದೃಶ್ಯ - ಆ ಪುಟ್ಟ ಕ್ಯಾಮೆರಾ ತೆಗೆದ ಚಿತ್ರಗಳಲ್ಲಿ ಇವೆಲ್ಲವೂ ಇತ್ತು.

ಆ ಕ್ಯಾಮೆರಾದ ಹೆಸರು ಎಲ್‌ಸಿ-ಎ, ಅಂದರೆ ಲೋಮೋ ಕಾಂಪ್ಯಾಕ್ಟ್ ಆಟೋಮ್ಯಾಟ್. ಅದನ್ನು ನಿರ್ಮಿಸುತ್ತಿದ್ದದ್ದು 'ಲೆನಿನ್‌ಗ್ರಾಡ್ ಆಪ್ಟಿಕ್ಸ್ ಆಂಡ್ ಮೆಕ್ಯಾನಿಕ್ಸ್ ಅಸೋಸಿಯೇಶನ್' ಎಂಬ ಸಂಸ್ಥೆ. ಅದರ ರಷ್ಯನ್ ಹೆಸರಿನ ಹ್ರಸ್ವರೂಪವೇ 'ಲೋಮೋ'!

* * *

ಲೋಮೋ ಕ್ಯಾಮೆರಾಗಳು ಹೀಗೆ ಮರುಹುಟ್ಟು ಪಡೆದ ಮೇಲೆ ನಡೆದದ್ದೆಲ್ಲ ಈಗ ಇತಿಹಾಸ. ವಿಭಿನ್ನ ಚಿತ್ರಗಳನ್ನು ಕ್ಲಿಕ್ಕಿಸುತ್ತಿದ್ದ ಇವು ಬಹಳ ಬೇಗನೆ ಎಷ್ಟು ಜನಪ್ರಿಯವಾದವೆಂದರೆ ಆ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ಉಳಿದಿದ್ದ ಕ್ಯಾಮೆರಾಗಳೆಲ್ಲ ಬಹಳ ಕಡಿಮೆ ಅವಧಿಯಲ್ಲೇ ಖರ್ಚಾಗಿಬಿಟ್ಟವು.
ಆಮೇಲೂ ಬೇಡಿಕೆಯೇನು ಕಡಿಮೆಯಾಗಲಿಲ್ಲ; ಫಿಲಂ ಕ್ಯಾಮೆರಾ ಕಾಲ ಮುಗಿಯಿತೆಂದು ಕ್ಯಾಮೆರಾಗಳ ನಿರ್ಮಾಣವನ್ನೇ ನಿಲ್ಲಿಸಿದ್ದ ಲೋಮೋ ಸಂಸ್ಥೆಯ ಮೇಲೆ ಅವುಗಳ ತಯಾರಿಕೆಯನ್ನು ಮತ್ತೆ ಶುರುಮಾಡುವಂತೆ ಒತ್ತಡ ಹೇರಲಾಯಿತು. ಲೋಮೋ ಕ್ಯಾಮೆರಾವನ್ನೇ ಹೋಲುವ, ಅದರಂತೆಯೇ ಕೆಲಸಮಾಡುವ ಇನ್ನೂ ಹಲ ಮಾದರಿಗಳು ಮಾರುಕಟ್ಟೆಗೆ ಬಂದವು. ಹಳೆಯ ಟ್ರೆಂಡುಗಳು ಮರುಕಳಿಸುವ ಘಟನೆಗಳಿಗೆ ಇನ್ನೊಂದು ಉದಾಹರಣೆಯಾಗಿ ಲೋಮೋ ಕ್ಯಾಮೆರಾಗಳ ಬಳಕೆ ಮತ್ತೆ ಫ್ಯಾಶನ್ ಆಯಿತು. ಬಿಬಿಸಿ ವರದಿಯೊಂದರ ಪ್ರಕಾರ ಮದುವೆಯಂತಹ ವಿಶೇಷ ಸಂದರ್ಭಗಳಲ್ಲೂ ಲೋಮೋ ಕ್ಯಾಮೆರಾದಿಂದ ಚಿತ್ರಗಳನ್ನು ಕ್ಲಿಕ್ಕಿಸುವ ಅಭ್ಯಾಸ ಇದೀಗ ಪ್ರಾರಂಭವಾಗಿದೆಯಂತೆ.

ಲೋಮೋ ಕ್ಯಾಮೆರಾದಲ್ಲಿ ತೆಗೆದ ಚಿತ್ರಗಳು ವಿಭಿನ್ನವಾಗಿ ಮೂಡುತ್ತವಲ್ಲ, ಕ್ಯಾಮೆರಾ ಮುಂದಿನ ದೃಶ್ಯವನ್ನೂ ಅಷ್ಟೇ ವಿಭಿನ್ನವಾಗಿ ನೋಡಿದರೆ ಇನ್ನೂ ಚೆಂದದ ಚಿತ್ರ ಸಿಗುವುದು ಸಾಧ್ಯ ಎಂದು ಆಸಕ್ತರು ಹೇಳುತ್ತಾರೆ. ಫೋಟೋಗ್ರಫಿ ಕ್ಷೇತ್ರದ ಈ ಹೊಸ ವಿಭಾಗವನ್ನು ಅವರು ಲೋಮೋಗ್ರಫಿ ಎಂದು ಕರೆಯುತ್ತಾರೆ. ಲೋಮೋಗ್ರಫಿ ಆಸಕ್ತರಿಗಾಗಿಯೇ ಮೀಸಲಾದ ಹಲವು ಅಂಗಡಿಗಳು, ಸಂಘಟನೆಗಳು ವಿಶ್ವದ ಹಲವೆಡೆಗಳಲ್ಲಿವೆ. ಕ್ಯಾಮೆರಾಗೆ ಬೇಕಾದ ಫಿಲಂಗಳನ್ನು ಪೂರೈಸುವಲ್ಲಿ, ಅವುಗಳನ್ನು ಡೆವೆಲಪ್ ಮಾಡಲು ಬೇಕಾದ ನೆರವು ಒದಗಿಸುವಲ್ಲಿ ಈ ಸಂಸ್ಥೆಗಳು ನೆರವಾಗುತ್ತವೆ.

ನಾನು-ನೀವು ಫಿಲಂ ಕ್ಯಾಮೆರಾಗಳನ್ನು ಬಿಟ್ಟುಬಂದು ಬಹಳ ಸಮಯವಾಗಿದೆ ಎಂದರೂ ಚಿಂತೆಯಿಲ್ಲ. ನಮ್ಮಲ್ಲಿ ಲೋಮೋ ಕ್ಯಾಮೆರಾ ಇಲ್ಲದಿದ್ದರೂ ಯೋಚನೆ ಮಾಡಬೇಕಿಲ್ಲ. ನಮ್ಮ ಡಿಜಿಟಲ್ ಕ್ಯಾಮೆರಾದಲ್ಲಿ ತೆಗೆದ ಚಿತ್ರಗಳಿಗೂ ಲೋಮೋ ಕ್ಯಾಮೆರಾದಲ್ಲಿ ತೆಗೆದಂತಹ ಇಫೆಕ್ಟ್ ಕೊಡಲು 'ಪಿಕಾಸಾ' ಸೇರಿದಂತೆ ಹಲವು ಫೋಟೋ ಎಡಿಟಿಂಗ್ ತಂತ್ರಾಂಶಗಳು ಸಹಾಯಮಾಡುತ್ತವೆ. ನಾವೂ ಅವನ್ನೆಲ್ಲ ಬಳಸಬಹುದು, ಹೀಗೊಂದು ವಿಶಿಷ್ಟ ಫ್ಲಾಶ್‌ಬ್ಯಾಕ್‌ನೊಳಗೆ ಹೋಗಿಬಿಡಬಹುದು!

ಮೇ ೨೪, ೨೦೧೩ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge