ಶುಕ್ರವಾರ, ಮೇ 10, 2013

ಕಲ್ಪನೆಗಳಿಗೆ ರೆಕ್ಕೆಕಟ್ಟುವ ಫೋಟೋಶಾಪ್


ಟಿ. ಜಿ. ಶ್ರೀನಿಧಿ

ನೂರು ಪದಗಳು ಹೇಳಲಾರದ್ದನ್ನು ಒಂದು ಚಿತ್ರ ಪರಿಣಾಮಕಾರಿಯಾಗಿ ಹೇಳುತ್ತದಂತೆ. ನಮ್ಮ ಸುತ್ತ ಇರುವ ಮಾಹಿತಿಯಲ್ಲಿ ದೊಡ್ಡದೊಂದು ಪಾಲು ಚಿತ್ರರೂಪದಲ್ಲೇ ಇರುವುದನ್ನು ನೋಡಿದಾಗ ಈ ಹೇಳಿಕೆಯ ಹಿನ್ನೆಲೆ ನಮಗೆ ಸ್ಪಷ್ಟವಾಗಿಬಿಡುತ್ತದೆ. ಏಕೆಂದರೆ ಪಠ್ಯರೂಪದ ಮಾಹಿತಿಯಿಂದ ಸಾಧ್ಯವಾಗುವ, ಅಥವಾ ಅದಕ್ಕಿಂತ ಹೆಚ್ಚು ಸಮರ್ಥವಾದ ಸಂವಹನ ಅದರ ಜತೆಗಿರುವ ಚಿತ್ರದ ಮೂಲಕ ಸಾಧ್ಯವಾಗುತ್ತದೆ.

ಚಿತ್ರ ಇಷ್ಟೆಲ್ಲ ಪರಿಣಾಮಕಾರಿಯಾದ ಮಾಧ್ಯಮ ಎಂದಮೇಲೆ ಚಿತ್ರಗಳ ಸೃಷ್ಟಿ ಹಾಗೂ ಚೆಂದಗಾಣಿಸುವ ಪ್ರಕ್ರಿಯೆಗಳೂ ಬಹಳ ಮುಖ್ಯವೇ ಆಗಿಬಿಡುತ್ತವಲ್ಲ. ಇವುಗಳ ಪ್ರಾಮುಖ್ಯ ಎಷ್ಟರಮಟ್ಟದ್ದು ಎಂದರೆ ಕಲಾವಿದರ ಕೈಚಳಕದಿಂದ ಸೃಷ್ಟಿಯಾದ ಚಿತ್ರಗಳನ್ನೂ ಬಹಳಷ್ಟು ಸಾರಿ ನಾವೆಲ್ಲ ನೈಜವೆಂದೇ ನಂಬಿಬಿಡುತ್ತೇವೆ.

ಈಚಿನ ವರ್ಷಗಳ ವಿಷಯಕ್ಕೆ ಬಂದರೆ ಇಂತಹ ಚಿತ್ರಗಳ ಹಿಂದೆ ಸ್ಪಷ್ಟವಾಗಿ ಕಾಣಸಿಗುವುದು ಕಂಪ್ಯೂಟರಿನ ಕೈವಾಡ. ಹೌದು, ಕಂಪ್ಯೂಟರ್ ಸಹಾಯದಿಂದ ಅತ್ಯಂತ ಉತ್ಕೃಷ್ಟ ಗುಣಮಟ್ಟದ ಚಿತ್ರಗಳನ್ನು ಸೃಷ್ಟಿಸುವುದು ಹಾಗೂ ಈಗಾಗಲೇ ಇರುವ ಚಿತ್ರಗಳನ್ನು ಸುಳಿವೇ ಸಿಗದಂತೆ ಬದಲಿಸಿಬಿಡುವುದು ಸಾಧ್ಯ.

ಇದನ್ನು ಸಾಧ್ಯವಾಗಿಸುವ ತಂತ್ರಾಂಶಗಳಲ್ಲಿ ಅತ್ಯಂತ ಪ್ರಮುಖ ಹೆಸರು ಫೋಟೋಶಾಪ್‌ನದು.
ಈ ತಂತ್ರಾಂಶದ ಜನಪ್ರಿಯತೆ ಎಷ್ಟರಮಟ್ಟದ್ದು ಎಂದರೆ ಕಂಪ್ಯೂಟರ್ ಸಹಾಯದಿಂದ ಚಿತ್ರಗಳನ್ನು ಬದಲಿಸುವ ಕೆಲಸವನ್ನು 'ಫೋಟೋಶಾಪಿಂಗ್' ಎಂದೇ ಕರೆಯಲಾಗುತ್ತದೆ. ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಪೈರಸಿ ಕಾಟಕ್ಕೆ ತುತ್ತಾಗುವ ತಂತ್ರಾಂಶಗಳ ಪಟ್ಟಿಯಲ್ಲೂ ಫೋಟೋಶಾಪ್‌ಗೆ ಪ್ರಮುಖ ಸ್ಥಾನ!

ಈ ವಿಶಿಷ್ಟ ತಂತ್ರಾಂಶಕ್ಕೆ ಕಾಲು ಶತಮಾನಕ್ಕೂ ಹೆಚ್ಚಿನ ಇತಿಹಾಸವಿದೆ. ಫೋಟೋಶಾಪ್‌ನ ಪ್ರಾಥಮಿಕ ಆವೃತ್ತಿ ಸಿದ್ಧವಾದದ್ದು ೧೯೮೭ರಲ್ಲಿ; ಅದನ್ನು ರೂಪಿಸಿದ್ದು ಆಗ ಪಿಎಚ್‌ಡಿ ವಿದ್ಯಾರ್ಥಿಯಾಗಿದ್ದ ಥಾಮಸ್ ನಾಲ್ ಎಂಬಾತ. ಆಗಿನ್ನೂ ಫೋಟೋಶಾಪ್ ಎಂಬ ನಾಮಕರಣ ಆಗಿರಲಿಲ್ಲ; ಅಷ್ಟೇ ಅಲ್ಲ, ಆ ತಂತ್ರಾಂಶ ಮ್ಯಾಕ್ ಕಂಪ್ಯೂಟರುಗಳಲ್ಲಿ ಮಾತ್ರವೇ ಕೆಲಸ ಮಾಡುತ್ತಿತ್ತು.

ಫೋಟೋಶಾಪ್ ಎಂಬ ಹೆಸರು ಮೊದಲು ಕೇಳಿಬಂದದ್ದು ೧೯೮೮ರಲ್ಲಿ. ತನ್ನ ಸಾಧ್ಯತೆಗಳನ್ನು ಹೆಚ್ಚಿಸಿಕೊಳ್ಳುತ್ತಲೇ ಹೋದ ಈ ತಂತ್ರಾಂಶದ ಜನಪ್ರಿಯತೆಯೂ ಬಹುಬೇಗನೆ ಏರಿತು. ಮುಂದಿನ ಒಂದೆರಡು ವರ್ಷಗಳಲ್ಲಿ ಫೋಟೋಶಾಪ್ ಹೆಸರಿನ ಹಿಂದಕ್ಕೆ ಅಡೋಬಿ ಸಂಸ್ಥೆಯ ಹೆಸರೂ ಸೇರಿಕೊಂಡು ಸಾಫ್ಟ್‌ವೇರ್ ಪ್ರಪಂಚದ ಅತ್ಯಂತ ಜನಪ್ರಿಯ ನಾಮಧೇಯವೊಂದು ಸೃಷ್ಟಿಯಾಯಿತು.

ಅಲ್ಲಿಂದ ಮುಂದೆ ನಡೆದದ್ದೆಲ್ಲ ಇತಿಹಾಸವೇ. ಚಿತ್ರವಿನ್ಯಾಸಕರಿಗೆ ಈ ತಂತ್ರಾಂಶದ ಅಪಾರ ಸಾಧ್ಯತೆಗಳು ಅರಿವಾಗುತ್ತಿದ್ದಂತೆ ಅವರು ಹೆಚ್ಚಿನ ಸಂಖ್ಯೆಯಲ್ಲಿ ಫೋಟೋಶಾಪ್ ಬಳಕೆದಾರರಾದರು. ವಿಂಡೋಸ್ ಜನಪ್ರಿಯತೆ ಹೆಚ್ಚಿದಂತೆ ಫೋಟೋಶಾಪ್‌ನ ವಿಂಡೋಸ್ ಆವೃತ್ತಿಯೂ ಬಂತು.

ಚಿತ್ರಗಳ ವಿಷಯಕ್ಕೆ ಬಂದರೆ ಈಗಂತೂ ಫೋಟೋಶಾಪ್‌ನಲ್ಲಿ ಏನೇನು ಸಾಧ್ಯ ಎನ್ನುವುದಕ್ಕಿಂತ ಏನೇನು ಸಾಧ್ಯವಿಲ್ಲ ಎಂದು ಹುಡುಕುವುದೇ ಸುಲಭವೇನೋ. ಯಾವುದೋ ಕ್ಯಾಮೆರಾದಲ್ಲಿ ಕ್ಲಿಕ್ಕಿಸಿದ ಸಾಧಾರಣ ಚಿತ್ರವೂ ಫೋಟೋಶಾಪ್ ಪರಿಣತರ ಕೈಚಳಕದಿಂದ ಅದ್ಭುತ ಕಲಾಕೃತಿಯಾಗಿ ಬದಲಾಗಬಲ್ಲದು. ಬಣ್ಣ-ಕುಂಚಗಳನ್ನೆಲ್ಲ ಬಿಟ್ಟು ಫೋಟೋಶಾಪ್ (ಮತ್ತು ಅದರಂತಹ ಇನ್ನಿತರ ಕೆಲ ತಂತ್ರಾಂಶಗಳ) ಸಹಾಯದಿಂದ ಕಲೆಯ ಸೃಷ್ಟಿ ಮಾಡುವ ಡಿಜಿಟಲ್ ಆರ್ಟ್ ಎಂಬ ಹೊಸ ಕ್ಷೇತ್ರವೇ ಇದೀಗ ರೂಪುಗೊಂಡಿದೆ.

ಡೆಸ್ಕ್‌ಟಾಪ್-ಲ್ಯಾಪ್‌ಟಾಪ್ ಕಂಪ್ಯೂಟರುಗಳ ಪರಿಮಿತಿಯನ್ನು ದಾಟಿ ಹೊರಬಂದಿರುವ ಫೋಟೋಶಾಪ್ ಈಗ ಟ್ಯಾಬ್ಲೆಟ್ ಹಾಗೂ ಮೊಬೈಲುಗಳಲ್ಲೂ ಬಳಕೆಗೆ ಸಿಗುತ್ತಿದೆ, ಪರಿಣತರಷ್ಟೇ ಅಲ್ಲದೆ ನನ್ನ ನಿಮ್ಮಂತಹ ಸಾಮಾನ್ಯ ಬಳಕೆದಾರರ ಕಲ್ಪನೆಗಳಿಗೂ ರೆಕ್ಕೆ ಕಟ್ಟುತ್ತಿದೆ!

ಮೇ ೧೦, ೨೦೧೩ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge