ಶುಕ್ರವಾರ, ಮೇ 3, 2013

ಇಂಟರ್‌ನೆಟ್ಟಿನ ಪಬ್ಲಿಕ್ ಪೊಲೀಸ್


ಟಿ. ಜಿ. ಶ್ರೀನಿಧಿ

ಜಾಲಲೋಕದ ಸಾಧ್ಯತೆಗಳು ಅಪಾರ. ವಿಶ್ವವ್ಯಾಪಿ ಜಾಲವೆಂಬ ಈ ಮಹಾಸಮುದಾಯ ಅಲ್ಲಿರುವ ನನ್ನ ನಿಮ್ಮಂತಹವರಿಗೂ ವಿಶಿಷ್ಟ ಶಕ್ತಿಗಳನ್ನು ನೀಡುತ್ತದೆ. ಕೆಲವೇ ದಿನಗಳಲ್ಲಿ ನಿಘಂಟು ಸಿದ್ಧಪಡಿಸಬೇಕೇ, ಯಾವುದೋ ತಂತ್ರಾಂಶವನ್ನು ಸುಧಾರಿಸಬೇಕೇ, ವೈಜ್ಞಾನಿಕ ಸಮಸ್ಯೆಯೊಂದಕ್ಕೆ ಉತ್ತರ ಹುಡುಕಬೇಕೇ ಅಥವಾ ಸಿನಿಮಾ ನಿರ್ಮಾಣಕ್ಕೆ ಕಾಸು ಕೂಡಿಸಬೇಕೇ - ಸಮುದಾಯದಲ್ಲಿರುವ ಎಲ್ಲರೂ ನಮ್ಮನಮ್ಮ ಕೈಲಾದ ಅಲ್ಪಸ್ವಲ್ಪ ಸಹಾಯವನ್ನಷ್ಟೇ ಮಾಡುವ ಮೂಲಕ ಒಟ್ಟಾರೆಯಾದ ಬೃಹತ್ ಸಾಧನೆಯೊಂದನ್ನು ಮಾಡಿತೋರಿಸುವ ಈ ಮಾಯಾಜಾಲ ಸಾಮಾನ್ಯವಾದುದೇನಲ್ಲ.

ಹನಿಗೂಡಿದರೆ ಹಳ್ಳ ಎನ್ನುವಂತೆ ಸಣ್ಣಸಣ್ಣ ವೈಯಕ್ತಿಕ ಕೊಡುಗೆಗಳ ಮೂಲಕ ದೊಡ್ಡ ಕೆಲಸಗಳನ್ನು ಸಾಧಿಸಿಕೊಳ್ಳುವ ಈ ವಿಶಿಷ್ಟ ಪರಿಕಲ್ಪನೆಯ ಹೆಸರೇ 'ಕ್ರೌಡ್‌ಸೋರ್ಸಿಂಗ್'. ಸಮುದಾಯದ ಸಾಮರ್ಥ್ಯವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದು ಈ ಪರಿಕಲ್ಪನೆಯ ಉದ್ದೇಶ.

ಸಮುದಾಯದ ಸಾಮರ್ಥ್ಯ ಎಂದಮೇಲೆ ಮುಗಿದೇ ಹೋಯಿತು, ಅದಕ್ಕೆ ನಾವು ಯಾವ ಮಿತಿಯನ್ನೂ ಕಲ್ಪಿಸಿಕೊಳ್ಳುವಂತೆಯೇ ಇಲ್ಲ. ಅನ್ಯಗ್ರಹ ಜೀವಿಗಳ ಹುಡುಕಾಟದಂತಹ ಕ್ಲಿಷ್ಟ ವೈಜ್ಞಾನಿಕ ಶೋಧಗಳಲ್ಲೇ ಸಮುದಾಯದ ಪಾಲ್ಗೊಳ್ಳುವಿಕೆ ಇದೆ ಎಂದಮೇಲೆ ಭೂಮಿಯ ಮೇಲಿನ ಪಾತಕಿಗಳ ಪತ್ತೆಯನ್ನೂ ಕ್ರೌಡ್‌ಸೋರ್ಸ್ ಮಾಡಬಹುದಲ್ಲ!

ಈ ಆಲೋಚನೆಗೆ ರೆಕ್ಕೆಪುಕ್ಕ ಬಂದದ್ದು ಅಮೆರಿಕಾದ ಬಾಸ್ಟನ್‌ನಲ್ಲಿ ಈಚೆಗೆ ನಡೆದ ಭಯೋತ್ಪಾದಕ ಕೃತ್ಯದ ನಂತರ. ಅತ್ತ ಬಾಂಬ್ ಸ್ಫೋಟವಾದ ಕೆಲವೇ ಸಮಯದಲ್ಲಿ ಹಲವಾರು ಜನ ಸ್ವಯಂಘೋಷಿತ ಪತ್ತೆದಾರರು ವಿಶ್ವವ್ಯಾಪಿ ಜಾಲದಲ್ಲಿ ತಮ್ಮ ಪತ್ತೇದಾರಿಕೆ ಶುರುಮಾಡಿಬಿಟ್ಟಿದ್ದರು.

ಮ್ಯಾರಥಾನ್‌ನಂತಹ ಸಾರ್ವಜನಿಕ ಕಾರ್ಯಕ್ರಮದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದ್ದರಿಂದ ಆ ಸಂದರ್ಭದ ಅನೇಕ ಚಿತ್ರಗಳು  ಅಲ್ಲಲ್ಲಿ ಪ್ರಕಟವಾಗಿದ್ದವು. ಆ ಚಿತ್ರಗಳನ್ನು ನೋಡಿದ ಅನೇಕರು ಅಲ್ಲಿರುವ ಜನರ ಪೈಕಿ ಅಪರಾಧಿ ಯಾರಿರಬಹುದು ಎಂದು ಊಹಿಸಲು ಪ್ರಾರಂಭಿಸಿಬಿಟ್ಟರು. ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಲು, ಹಾಗೂ ಇತರರ ಅಭಿಪ್ರಾಯಗಳನ್ನು ತಿಳಿದುಕೊಳ್ಳಲು ಅವರು ಆಯ್ದುಕೊಂಡಿದ್ದು, ಸಹಜವಾಗಿಯೇ, ಸೋಶಿಯಲ್ ನೆಟ್‌ವರ್ಕುಗಳನ್ನು.

ಈ ಪ್ರಯತ್ನದ ಹಿಂದಿನ ಉದ್ದೇಶವೇನೋ ಒಳ್ಳೆಯದೇ ಆಗಿತ್ತು, ನಿಜ. ಆದರೆ ಈ ಪತ್ತೇದಾರರು ತಮ್ಮ ಅತ್ಯುತ್ಸಾಹದಿಂದಾಗಿ ಕೆಲವೇ ಸಮಯದಲ್ಲಿ ಯಾರುಯಾರಿಗೋ ಭಯೋತ್ಪಾದಕನೆಂಬ ಪಟ್ಟ ಕಟ್ಟಿಬಿಟ್ಟರು. ಯಾರ ಕಣ್ಣಿಗೋ ಸಂಶಯಾಸ್ಪದವಾಗಿ ಕಂಡವರು, ಚರ್ಮದ ಬಣ್ಣದಿಂದಾಗಿ ಸಂದೇಹಕ್ಕೆ ಗುರಿಯಾದವರು, ಬ್ಯಾಗ್ ಹಿಡಿದು ನಿಂತಿದ್ದರಿಂದಲೇ ಭಯೋತ್ಪಾದಕರೆನಿಸಿಕೊಂಡವರು ಅದೆಷ್ಟೋ ಮಂದಿ. ಆದರೆ ಭದ್ರತಾ ಪಡೆಗಳು ಕಾರ್ಯಾಚರಣೆ ಮುಗಿಸಿದ ನಂತರ ಇವರಲ್ಲಿ ಯಾರೂ ಭಯೋತ್ಪಾದಕರಾಗಿರಲಿಲ್ಲ ಎಂದು ತಿಳಿದುಬಂದದ್ದು ವಿಪರ್ಯಾಸ!

ಸಿಟಿಜನ್ ಜರ್ನಲಿಸಂನ ಹಾದಿಯಲ್ಲಿ ಸಾಗಲು ಹೊರಟ ಸಿಟಿಜನ್ ಪೊಲೀಸಿಂಗ್ ತನ್ನ ಮೊದಲ ಪ್ರಮುಖ ಪ್ರಯತ್ನದಲ್ಲೇ ಮುಗ್ಗರಿಸಿಬಿದ್ದದ್ದು ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಒಳ್ಳೆಯ ಉದ್ದೇಶಕ್ಕಾಗಿ ನೆರವಾಗಲು ಹಲವರು ಮುಂದೆಬಂದಿದ್ದು ಖುಷಿಯ ವಿಷಯವೇ ಆದರೂ ಅವರ ಉತ್ಸಾಹ ನಿರಪರಾಧಿಗಳಿಗೆ ತೊಂದರೆಕೊಡುವ ಮಟ್ಟಕ್ಕೆ ಹೋಗದಂತೆ ತಡೆಯಬೇಕಾದ್ದೂ ಅನಿವಾರ್ಯ ಎನ್ನುವ ಅಂಶ ಈ ಅನುಭವದಿಂದ ಕಲಿತ ಪಾಠ ಎನ್ನಬಹುದು.

ಹಾಗೆಂದಮಾತ್ರಕ್ಕೆ ಕುತಂತ್ರಿಗಳನ್ನು ಹುಡುಕುವ ಹೈಟೆಕ್ ವಿಧಾನಗಳೆಲ್ಲ ನಿರುಪಯುಕ್ತ ಎಂದು ಗುಡಿಸಿಹಾಕುವಂತೇನೂ ಇಲ್ಲ. ಏಕೆಂದರೆ ವಿಶ್ವವ್ಯಾಪಿ ಜಾಲದ ಸಾಧ್ಯತೆಗಳನ್ನು ಬಳಸಿಕೊಂಡು ದುಷ್ಕರ್ಮಿಗಳನ್ನು ಪತ್ತೆಮಾಡುವ ನಿಟ್ಟಿನಲ್ಲಿ ಅನೇಕ ಪ್ರಯತ್ನಗಳು ಈಗಾಗಲೇ ಸಾಗಿವೆ.

ಇಂತಹ ಚಟುವಟಿಕೆಗಳು ಸೋಶಿಯಲ್ ನೆಟ್‌ವರ್ಕುಗಳಲ್ಲಿ ಹಾದಿತಪ್ಪುವ ಸಾಧ್ಯತೆಯೇ ಹೆಚ್ಚು ತಾನೆ, ಆ ಸಾಧ್ಯತೆಯನ್ನು ತಪ್ಪಿಸುವ ಹೊಸ ವಿಧಾನಗಳ ಅನ್ವೇಷಣೆ ಕೂಡ ನಡೆದಿದೆ. ಇಂತಹ ವಿಧಾನಗಳಲ್ಲಿ ಒಂದನ್ನು ಪರೀಕ್ಷಿಸಲು ಕೆಲದಿನಗಳ ಹಿಂದೆ ಜಾಗತಿಕ ಮಟ್ಟದಲ್ಲಿ ನಡೆದ ವರ್ಚುಯಲ್ ಕಾರ್ಯಾಚರಣೆಯೊಂದು ಯಶಸ್ವಿಯೂ ಆಗಿದೆಯೆಂದು ನ್ಯೂ ಸೈಂಟಿಸ್ಟ್ ಪತ್ರಿಕೆ ವರದಿಮಾಡಿತ್ತು. ಕಾರ್ಯಾಚರಣೆಯ ಹಾದಿತಪ್ಪಿಸುವ ಮಾತು ಹಾಗಿರಲಿ, ಸೋಶಿಯಲ್ ನೆಟ್‌ವರ್ಕುಗಳಲ್ಲಿ ಇಂತಹ ವಿಷಯಗಳ ಕುರಿತು ಗಾಳಿಸುದ್ದಿಗಳು ಹರಡದಂತೆ ತಡೆಯುವ ತಂತ್ರಾಂಶಗಳೂ ಅಭಿವೃದ್ಧಿಯ ಹಂತದಲ್ಲಿವೆಯಂತೆ.

ಈ ಎಲ್ಲ ಹೈಟೆಕ್ ವಿಧಾನಗಳೂ ಸರಿಯಾಗಿ ಬಳಕೆಯಾದವೆಂದರೆ ಅವು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸಲಿವೆ ಎಂದು ತಜ್ಞರು ಹೇಳುತ್ತಾರೆ. ಆದರೆ ಇಷ್ಟೆಲ್ಲ ಪ್ರಬಲವಾದ ಈ ವ್ಯವಸ್ಥೆ ದುಷ್ಕರ್ಮಿಗಳ ಕೈಗೆ ಸಿಗದಂತೆ ಜೋಪಾನವಾಗಿರಬೇಕಾದದ್ದೂ ಅಷ್ಟೇ ಮುಖ್ಯ ಎನ್ನುವುದು ಅವರು ನೀಡುವ ಎಚ್ಚರಿಕೆ.

ಮೇ ೩, ೨೦೧೩ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge