ಮಂಗಳವಾರ, ಏಪ್ರಿಲ್ 9, 2013

ತಿರುಗಿ ನೋಡುವ ಸಮಯ

ಉದಯವಾಣಿಯ 'ಜೋಶ್' ಪುರವಣಿಯಲ್ಲಿ ಕಳೆದ ೧೨೨ ವಾರಗಳಿಂದ ಪ್ರಕಟವಾಗುತ್ತಿದ್ದ 'ವಿಜ್ಞಾಪನೆ' ಅಂಕಣ ಇಂದಿನ ಲೇಖನದೊಡನೆ ಮುಕ್ತಾಯವಾಗುತ್ತಿದೆ. ಈ ಅಂಕಣವನ್ನು ಮೆಚ್ಚಿಕೊಂಡು ಪ್ರೋತ್ಸಾಹಿಸಿದ ಎಲ್ಲ ಓದುಗರಿಗೂ ಉದಯವಾಣಿಯ ಸಂಪಾದಕವರ್ಗಕ್ಕೂ ನಮ್ಮ ಹೃತ್ಪೂರ್ವಕ ಕೃತಜ್ಞತೆಗಳು. ಉದಯವಾಣಿ ಮಂಗಳೂರು ಆವೃತ್ತಿಯ 'ಯುವ ಸಂಪದ'ದಲ್ಲಿ ಪ್ರಕಟವಾಗುತ್ತಿರುವ ಅಂಕಣ 'ಸ್ವ-ತಂತ್ರ' ಸದ್ಯಕ್ಕೆ ಹಾಗೆಯೇ ಮುಂದುವರೆಯುತ್ತದೆ. ಇತರ ಹೊಸ ಬರಹಗಳು ಇಜ್ಞಾನ ಡಾಟ್ ಕಾಮ್‌ನಲ್ಲಿ ಎಂದಿನಂತೆ ಪ್ರಕಟವಾಗುತ್ತವೆ.
ಟಿ. ಜಿ. ಶ್ರೀನಿಧಿ

"ಈಗ ನಾವಿದ್ದೇವಲ್ಲ ಪರಿಸ್ಥಿತಿ, ತಂತ್ರಜ್ಞಾನ ಈಗಲೇ ಎಷ್ಟೊಂದು ಬೆಳೆದುಬಿಟ್ಟಿದೆ! ಮುಂದೆಯೂ ಹೀಗೆಯೇ ಬೆಳೆಯುತ್ತ ಹೋದರೆ ಏನು ಗತಿ?" ಎಂಬಂತಹ ಮಾತುಗಳು ನಾಗರೀಕತೆಯ ಪ್ರತಿಯೊಂದು ಹಂತದಲ್ಲೂ ಕೇಳಿಬಂದಿವೆ. ಕಳೆದೊಂದು ಶತಮಾನದಲ್ಲಂತೂ ಮಾಹಿತಿ ತಂತ್ರಜ್ಞಾನ ಬೆಳೆಯುತ್ತಹೋದಂತೆ ನಮ್ಮ ಸುತ್ತಲೂ ಸೃಷ್ಟಿಯಾಗುತ್ತಿರುವ ಮಾಹಿತಿಯ ಮಹಾಪೂರದ ಬಗ್ಗೆ ಕಾಳಜಿ ವ್ಯಕ್ತವಾಗುತ್ತಲೇ ಇದೆ.

೧೯೭೧ರಲ್ಲಿ ಪ್ರಕಟವಾದ ಲೇಖನವೊಂದು ಈಗಾಗಲೇ ನಮ್ಮಲ್ಲಿ ಐದಾರು ಟೀವಿ ಚಾನೆಲ್ಲುಗಳಿವೆ, ಇದು ಹೀಗೆಯೇ ಬೆಳೆಯುತ್ತ ಹೋಗಿ ಮುಂದೆ ನೂರಾರು ಚಾನೆಲ್ಲುಗಳಾದರೆ ಏನು ಗತಿ? ಎಂದು ಆತಂಕ ವ್ಯಕ್ತಪಡಿಸಿತ್ತಂತೆ. ತಮಾಷೆಯ ವಿಷಯವೆಂದರೆ, ಕೆಲವೇ ದಶಕಗಳ ನಂತರ, ಈಗ ನೂರಾರು ಚಾನೆಲ್ಲುಗಳು ಇರುವುದಷ್ಟೇ ಅಲ್ಲ, ನಮಗೆ ಅದು ವಿಶೇಷ ಎನಿಸುತ್ತಲೂ ಇಲ್ಲ!

ಬೇರೆಯವರ ವಿಷಯವೆಲ್ಲ ಏಕೆ, ಕಂಪ್ಯೂಟರ್ ವಿಜ್ಞಾನದ ಆದ್ಯ ತಜ್ಞರಲ್ಲೊಬ್ಬರಾದ ಅಲನ್ ಟ್ಯೂರಿಂಗ್ ಕೂಡ ೧೯೫೦ರಲ್ಲಿ ಇಂತಹುದೇ ಒಂದು ಮಾತು ಹೇಳಿದ್ದರಂತೆ. ಮುಂದಿನ ಐವತ್ತು ವರ್ಷಗಳಲ್ಲಿ ಕಂಪ್ಯೂಟರಿನ ಮೆಮೊರಿ ನೂರು ಕೋಟಿ ಬಿಟ್‌ಗಳನ್ನು ಉಳಿಸಿಕೊಳ್ಳುವ ಮಟ್ಟಕ್ಕೆ ಬೆಳೆಯಲಿದೆ ಎನ್ನುವುದು ಅವರ ಮಾತಿನ ಸಾರಾಂಶವಾಗಿತ್ತು. ನೂರು ಕೋಟಿ ಎನ್ನುವ ಸಂಖ್ಯೆ ಬಹಳ ದೊಡ್ಡದೇ, ನಿಜ. ಆದರೆ ಅದು ೧೨೮ ಎಂಬಿಗಿಂತ ಕೊಂಚ ಕಡಿಮೆಯೇ ಎನ್ನುವುದನ್ನು ಗಮನಿಸಿದಾಗ ಕಳೆದ ಐವತ್ತು-ಅರವತ್ತು ವರ್ಷಗಳಲ್ಲಿ ತಂತ್ರಜ್ಞಾನ ಹೇಗೆ ಬೆಳೆದಿದೆ ಎನ್ನುವುದು ನಮ್ಮ ಗಮನಕ್ಕೆ ಬರುತ್ತದೆ. ೧೨೮ಎಂಬಿ ಎಲ್ಲಿ, ಇಂದಿನ ಟೆರಾಬೈಟುಗಳೆಲ್ಲಿ!

ನಮ್ಮ ಸುತ್ತ ಇರುವ ಮಾಹಿತಿಯ ಪ್ರಮಾಣ ಹಾಗೂ ಕಂಪ್ಯೂಟರ್ ಮೆಮೊರಿಯ ಮಾತೆಲ್ಲ ಹಾಗಿರಲಿ. ಇದೆಲ್ಲದರ ಬೆಳವಣಿಗೆಗೆ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಕಾರಣವಾಗಿರುವುದು ಸಂಸ್ಕರಣಾ ಸಾಮರ್ಥ್ಯ, ಅಂದರೆ ಪ್ರಾಸೆಸಿಂಗ್ ಪವರ್ ಬೆಳೆದಿರುವ ರೀತಿ. ಬಹಳ ಹಿಂದಿನ ಮಾತೆಲ್ಲ ಏಕೆ, ಈ ಶತಮಾನದ ಪ್ರಾರಂಭದಲ್ಲೂ ಇನ್ನೂರು-ಮುನ್ನೂರು ಮೆಗಾಹರ್ಟ್ಸ್ ಆಸುಪಾಸಿನಲ್ಲೇ ಇದ್ದ ಪ್ರಾಸೆಸರ್ ಸಾಮರ್ಥ್ಯ ಗಿಗಾಹರ್ಟ್ಸ್‌ಗಳನ್ನು ದಾಟಿ ಅದೆಷ್ಟೋ ಕಾಲವಾಗಿದೆ. ಒಂದರ ಜಾಗದಲ್ಲಿ ಪ್ರಾಸೆಸರ್ ಒಳಗೆ ನಾಲ್ಕು ತಿರುಳುಗಳು (ಕ್ವಾಡ್-ಕೋರ್) ಬಂದು ಕುಳಿತುಬಿಟ್ಟಿವೆ!

ಕಂಪ್ಯೂಟರ್ ತಂತ್ರಜ್ಞಾನ ಈ ಪರಿಯ ಬೆಳವಣಿಗೆ ಕಾಣಲಿದೆ ಎಂದು ಬಹಳ ಹಿಂದೆಯೇ ಅನೇಕರು ಸರಿಯಾಗಿ ಊಹಿಸಿದ್ದರು.
ಅಂತಹವರಲ್ಲಿ ಇಂಟೆಲ್ ಸಂಸ್ಥೆಯ ಸ್ಥಾಪಕರಲ್ಲೊಬ್ಬರಾದ ಗಾರ್ಡನ್ ಮೂರ್ ಕೂಡ ಒಬ್ಬರು.

ಕಂಪ್ಯೂಟರ್ ಅಷ್ಟೇ ಏಕೆ, ಯಾವ ವಿದ್ಯುನ್ಮಾನ ಉಪಕರಣವನ್ನೇ ತೆಗೆದುಕೊಂಡರೂ ಅದರ ಮೆದುಳು-ಹೃದಯದ ಕೆಲಸವನ್ನೆಲ್ಲ ಮಾಡಲು ಕನಿಷ್ಠ ಒಂದಾದರೂ ಇಂಟಿಗ್ರೇಟೆಡ್ ಸರ್ಕ್ಯೂಟ್ (ಐಸಿ) ಇರುತ್ತದೆ; ಕಂಪ್ಯೂಟರಿನಲ್ಲಿ ಪ್ರಾಸೆಸರ್ ಇರುತ್ತದಲ್ಲ, ಹಾಗೆ. ಈ ಐಸಿಗಳಲ್ಲಿ ಬೇಕಾದಷ್ಟು ಟ್ರಾನ್ಸಿಸ್ಟರುಗಳಿರುತ್ತವೆ. ಸಾವಿರಗಳಷ್ಟೆ ಏಕೆ, ಲಕ್ಷಗಟ್ಟಲೆ ಟ್ರಾನ್ಸಿಸ್ಟರುಗಳು ಇಂತಹ ಐಸಿಗಳೊಳಗೆ ಅಡಕವಾಗಿರುತ್ತವೆ. ಒಂದು ಐಸಿಯಲ್ಲಿ ಹೆಚ್ಚುಹೆಚ್ಚು ಟ್ರಾನ್ಸಿಸ್ಟರುಗಳನ್ನು ಸೇರಿಸುವುದು ಸಾಧ್ಯವಾದಷ್ಟೂ ಆ ಐಸಿ ಬಳಸುವ ಉಪಕರಣದ ಗಾತ್ರ ಚಿಕ್ಕದಾಗುತ್ತದೆ; ಅಷ್ಟೇ ಅಲ್ಲ, ಅದರ ಕಾರ್ಯಕ್ಷಮತೆ ಕೂಡ ಹೆಚ್ಚುತ್ತದೆ.

ಏಪ್ರಿಲ್ ೧೯೬೫ರಲ್ಲಿ ಪ್ರಕಟವಾದ ಲೇಖನವೊಂದರಲ್ಲಿ ಪ್ರತಿಯೊಂದು ಐಸಿಯಲ್ಲಿ ಅಡಕವಾಗುವ ಟ್ರಾನ್ಸಿಸ್ಟರುಗಳ ಸಂಖ್ಯೆಯ ಬಗೆಗೊಂದು ಕುತೂಹಲಕರ ಹೇಳಿಕೆ ದಾಖಲಾಗಿತ್ತು. ಆ ಲೇಖನ ಬರೆದವರು ಗಾರ್ಡನ್ ಮೂರ್. "ಐಸಿಗಳಲ್ಲಿರುವ ಟ್ರಾನ್ಸಿಸ್ಟರುಗಳ ಸಂಖ್ಯೆ ಸರಿಸುಮಾರು ಎರಡು ವರ್ಷಗಳಿಗೊಮ್ಮೆಯಂತೆ ದ್ವಿಗುಣಗೊಳ್ಳುತ್ತದೆ" ಎನ್ನುವ ಈ ಹೇಳಿಕೆಯೇ ಮುಂದೆ 'ಮೂರ್ ನಿಯಮ' (Moore's Law) ಎಂದು ವಿಖ್ಯಾತವಾಯಿತು.

ಇಡೀ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಯ ವೇಗವನ್ನು ಅತ್ಯಂತ ಸಮರ್ಥವಾಗಿ ಅಂದಾಜಿಸಿದ್ದು ಈ ನಿಯಮದ ಹೆಚ್ಚುಗಾರಿಕೆ. ಕಂಪ್ಯೂಟರ್ ಪ್ರಾಸೆಸರ್ ದತ್ತಾಂಶವನ್ನು ಸಂಸ್ಕರಿಸುವ ವೇಗ, ಮೆಮೊರಿಯ ಶೇಖರಣಾ ಸಾಮರ್ಥ್ಯ, ಡಿಜಿಟಲ್ ಛಾಯಾಚಿತ್ರಗಳಲ್ಲಿರುವ ಪಿಕ್ಸೆಲ್‌ಗಳ ಸಂಖ್ಯೆ - ಹೀಗೆ ಅನೇಕ ಅಂಶಗಳು ಕಳೆದ ದಶಕಗಳಲ್ಲಿ ಮೂರ್ ನಿಯಮದಲ್ಲಿ ಹೇಳಿದಷ್ಟೇ, ಅಥವಾ ಅದಕ್ಕಿಂತ ಹೆಚ್ಚಿನ ವೇಗದಲ್ಲಿ ಬೆಳೆದವು. ತಂತ್ರಜ್ಞಾನದ ಪ್ರಪಂಚದಲ್ಲಿ ಇವತ್ತು ಅತ್ಯಾಧುನಿಕವೆಂದು ಕರೆಸಿಕೊಂಡದ್ದು ನಾಳೆಯಹೊತ್ತಿಗೆ ಹಳತಾಗಿರುತ್ತದೆ ಎನ್ನುವ ಅಭಿಪ್ರಾಯ ಮೂಡುವುದಕ್ಕೂ ಬಹುಶಃ ಇದೇ ಕಾರಣವಾಯಿತು ಎನ್ನಬಹುದು.

ಇಷ್ಟೆಲ್ಲ ಬೆಳವಣಿಗೆಯ ಹಿಂದಿದ್ದದ್ದು ಅವೇ ಇಂಟಿಗ್ರೇಟೆಡ್ ಸರ್ಕ್ಯೂಟುಗಳು (ಐಸಿ). ಆ ಐಸಿಗಳ ನಿರ್ಮಾಣದಲ್ಲಿ ಬಳಕೆಯಾದದ್ದು? ಸಿಲಿಕಾನ್ ಎಂಬ ಮೂಲವಸ್ತು. ತಂತ್ರಜ್ಞಾನಕ್ಕೆ ಸಂಬಂಧಪಟ್ಟ ಸಂಸ್ಥೆಗಳು ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲೆಲ್ಲಿದ್ದವೋ ಆ ಸ್ಥಳಗಳಿಗೆಲ್ಲ ಸಿಲಿಕಾನ್ ವ್ಯಾಲಿ, ಸಿಲಿಕಾನ್ ಸಿಟಿ ಇತ್ಯಾದಿ ನಾಮಕರಣವಾಗುವುದಕ್ಕೂ ಇದೇ ಸಿಲಿಕಾನ್ ಕಾರಣವಾದದ್ದು ನಮಗೆಲ್ಲ ಗೊತ್ತೇ ಇದೆ.

ಬದಲಾವಣೆಯೇ ತಂತ್ರಜ್ಞಾನ ಕ್ಷೇತ್ರದ ಜೀವಾಳ ಎನ್ನುವುದಾದರೆ ಈ ಸಿಲಿಕಾನ್, ಅದರಿಂದ ತಯಾರಾದ ಐಸಿಗಳು, ಹಾಗೂ ಭವಿಷ್ಯದಲ್ಲಿ ಅವುಗಳ ಬೆಳವಣಿಗೆಯ ಮುನ್ಸೂಚನೆ ನೀಡುವ ಮೂರ್ ನಿಯಮ ಎಲ್ಲಾದರೂ ಶಾಶ್ವತವಾಗಿ ಉಳಿದುಕೊಳ್ಳಲು ಸಾಧ್ಯವೆ?

ಖಂಡಿತಾ ಇಲ್ಲ. ಮೂರ್ ನಿಯಮದಂತೆ ನಾಗಾಲೋಟದಲ್ಲಿ ಸಾಗಿಬಂದ ತಂತ್ರಜ್ಞಾನದ ಬೆಳವಣಿಗೆ ಈಗಾಗಲೇ ಸಾಕಷ್ಟು ನಿಧಾನವಾಗಿದೆ. ಕಂಪ್ಯೂಟರುಗಳ ವಿಷಯಕ್ಕೇ ಬಂದರೆ ಈಗ ಎರಡುಮೂರು ವರ್ಷಗಳ ಹಿಂದೆ ಮಾರುಕಟ್ಟೆಗೆ ಬಂದ ಪ್ರಾಸೆಸರ್‌ಗೂ ಇಂದಿನ ಲೇಟೆಸ್ಟ್ ಮಾಡೆಲಿಗೂ ನಡುವೆ ನಮ್ಮಂತಹ ಬಳಕೆದಾರರಿಗೆ ಅದ್ಭುತವೆನಿಸುವ ವ್ಯತ್ಯಾಸವೇನೂ ಕಾಣಿಸುತ್ತಿಲ್ಲ.

ಇಷ್ಟರಮೇಲೆ ವಿದ್ಯುತ್ ಬಳಕೆಯಲ್ಲಿ ಮಿತವ್ಯಯ ಸಾಧಿಸಲೂ ನಮ್ಮ ಯಂತ್ರಾಂಶಗಳು ತಿಣುಕುತ್ತಿವೆ. ಮೊಬೈಲಿನಲ್ಲಿ ಹೊಸತೇನಿದೆ ಎಂದು ಹುಡುಕುವವನಿಗೆ ಸಿಗುವ ಉತ್ತರಗಳಷ್ಟು ಆಕರ್ಷಕವಾದ ಉತ್ತರ ಬ್ಯಾಟರಿ ಎಷ್ಟು ಹೆಚ್ಚಿನ ಕಾಲ ಬಾಳಿಕೆ ಬರುತ್ತದೆ ಎಂದು ಕೇಳುವವನಿಗೆ ಸಿಗುತ್ತಿಲ್ಲ. ಕಂಪ್ಯೂಟರಿನ ಪ್ರಾಸೆಸರುಗಳಂತೂ ಹೀಟ್ ಸಿಂಕ್, ಫ್ಯಾನ್ ಇತ್ಯಾದಿಗಳೆಲ್ಲ ಇಲ್ಲದಿದ್ದರೆ ತಾವು ಹೊರಸೂಸುವ ಶಾಖಕ್ಕೆ ಸೀದಾ ಕರಗಿಯೇ ಹೋಗುತ್ತವೇನೋ! ದೊಡ್ಡ ಸಂಸ್ಥೆಗಳ ಸಮಸ್ತ ಚಟುವಟಿಕೆಗಳ ಕೇಂದ್ರದಲ್ಲಿರುವ ಡೇಟಾಸೆಂಟರುಗಳಂತೂ ಸಂಪನ್ಮೂಲಗಳನ್ನು ನುಂಗುವ ಬಕಾಸುರಗಳಾಗಿ ಬೆಳೆದುಬಿಟ್ಟಿವೆ.

ಪರಿಸ್ಥಿತಿ ಹೀಗಿರುವಾಗ ತಂತ್ರಜ್ಞರೇನೂ ಸುಮ್ಮನೆ ಕುಳಿತಿಲ್ಲ. ವಿದ್ಯುತ್ ಬಳಕೆ ಕಡಿಮೆಮಾಡುವುದರ ಬಗ್ಗೆ, ಶಾಖದ ರೂಪದಲ್ಲಿ ಶಕ್ತಿ ಅಪವ್ಯಯವಾಗುವುದನ್ನು ತಡೆಯುವ ನಿಟ್ಟಿನಲ್ಲಿ - ಅವರ ಅನೇಕ ಪ್ರಯತ್ನಗಳು ಸಾಗುತ್ತಿವೆ. ಸಿಲಿಕಾನ್ ಆಧರಿತ ಪ್ರಾಸೆಸರುಗಳನ್ನು ಇನ್ನಷ್ಟು ಉತ್ತಮಪಡಿಸುವುದು ಸಾಧ್ಯವಾಗದಿದ್ದರೆ ಅವುಗಳ ಬದಲಿಗೆ ಸಂಪೂರ್ಣವಾಗಿ ಬೇರೆಯದೇ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ಆಯ್ಕೆಯೂ ಅವರ ಮುಂದಿದೆ. ಸಿಲಿಕಾನ್ ಸಿಟಿಯ ಹೆಸರು ಬದಲಿಸುವುದೇನು ಮಹಾ, ದೊಡ್ಡ ವಿಷಯವೆ?

ಒಟ್ಟಿನಲ್ಲಿ, ತಂತ್ರಜ್ಞಾನದ ಚಕ್ರ ತಿರುಗುತ್ತಲೇ ಇದೆ. ಚಕ್ರ ತಿರುಗಿದಂತೆ ಹೊಸಹೊಸ ಆವಿಷ್ಕಾರಗಳು ಒಂದಾದಮೇಲೆ ಒಂದರಂತೆ ನಮ್ಮತ್ತ ಬರುತ್ತಿವೆ. ಅವೆಲ್ಲವುದರ ಬಗ್ಗೆ ತಿಳಿದುಕೊಳ್ಳುವ ಮಾರ್ಗಗಳೂ ಅಷ್ಟೆ, ಎಲ್ಲ ದಿಕ್ಕುಗಳಲ್ಲೂ ನಮ್ಮನ್ನು ಸ್ವಾಗತಿಸುತ್ತಿವೆ. ಇಲ್ಲೊಂದು ಕಿಟಕಿ ಮುಚ್ಚಿದರೆ ಅಲ್ಲಿ ಇನ್ನೊಂದು ಬಾಗಿಲೇ ತೆರೆದುಕೊಳ್ಳುತ್ತದೆ. ಹೀಗಿರುವಾಗ ನನ್ನ ನಿಮ್ಮ ಭೇಟಿಯೇನು ಕಷ್ಟದ ಕೆಲಸವೆ? ಇನ್ನೊಂದು ದಿನ-ಇನ್ನೊಂದು ಸನ್ನಿವೇಶದಲ್ಲಿ ಮತ್ತೆ ಭೇಟಿಯಾಗೋಣ. ನಮಸ್ಕಾರ.

ಏಪ್ರಿಲ್ ೯, ೨೦೧೩ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

1 ಕಾಮೆಂಟ್‌:

mukundachiplunkar ಹೇಳಿದರು...

shrii means Lakshmi. Nidhi means also
Lakshmi. totally Lakshmi. Income. not outgoing in everyones life. but as an exception here shrinidhi has made a marvellous change in the knowledge of
ordinary interested person in various fields. especially -e-field discribing in our vernacular language i.e.Kannada.
Really fantastic work-that too ongoing!without any benifit!also i congratulate to his team.

badge