ಶುಕ್ರವಾರ, ಏಪ್ರಿಲ್ 5, 2013

ಇಂಟರ್‌ನೆಟ್ ಲೋಕದ ಟ್ರಾಫಿಕ್ ಜಾಮ್


ಟಿ. ಜಿ. ಶ್ರೀನಿಧಿ

ನಮ್ಮ ಬೆಂಗಳೂರಿನ ಟ್ರಾಫಿಕ್ ಜಾಮ್‌ಗಳ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ? ಐಬಿಎಂ ಗ್ಲೋಬಲ್ ಕಮ್ಯೂಟರ್ ಪೇನ್ ಸರ್ವೆ ಪ್ರಕಾರ ದಿನನಿತ್ಯದ ಪ್ರಯಾಣಿಕರು ಅತ್ಯಂತ ಹೆಚ್ಚು ಕಿರಿಕಿರಿ ಅನುಭವಿಸುವ ಪ್ರಪಂಚದ ನಗರಗಳ ಪಟ್ಟಿಯಲ್ಲಿ ಬೆಂಗಳೂರಿಗೂ ಸ್ಥಾನವಿದೆಯಂತೆ.

ಇದೇ ಬೆಂಗಳೂರು ಮಾಹಿತಿ ತಂತ್ರಜ್ಞಾನದ ತವರೂ ಹೌದು. ಇಲ್ಲಿನ ಪುಟ್ಟ ಮಕ್ಕಳೂ ಬಹುಶಃ ಡಾಟ್ ಕಾಮ್ ಭಾಷೆಯನ್ನೇ ಮಾತನಾಡುತ್ತಾರೇನೋ! ಕುತೂಹಲದ ಸಂಗತಿಯೆಂದರೆ ಬೆಂಗಳೂರು ಅಥವಾ ಇನ್ನಾವುದೇ ನಗರದಲ್ಲಿರುವಂತೆ ಅಂತರಜಾಲದ ಲೋಕದಲ್ಲೂ ರಸ್ತೆಗಳಿವೆ; ಅಡ್ಡರಸ್ತೆ-ಮುಖ್ಯರಸ್ತೆ-ರೋಡ್‌ಹಂಪು-ಪಾಟ್‌ಹೋಲು ಎಲ್ಲವೂ ಆನ್‌ಲೈನ್ ಲೋಕದಲ್ಲೂ ಇವೆ. ಆಟೋ ಕಾರು ಬಸ್ಸು ಲಾರಿಗಳ ಬದಲಿಗೆ ಅಲ್ಲಿ ಮಾಹಿತಿ ಹರಿದಾಡುತ್ತದೆ ಎನ್ನುವುದೊಂದೇ ವ್ಯತ್ಯಾಸ ಅಷ್ಟೆ. ಹೀಗಾಗಿಯೇ ಇದನ್ನು 'ಇನ್‌ಫರ್ಮೇಶನ್ ಸೂಪರ್‌ಹೈವೇ' ಎಂದು ಕರೆಯಲಾಗುತ್ತದೆ.

ಕಚೇರಿಗೆ ಹೋಗುವ ಧಾವಂತದಲ್ಲಿ ಹೆಚ್ಚುಹೆಚ್ಚು ಕಾರು-ಬಸ್ಸು-ಬೈಕುಗಳು ರಸ್ತೆಗಿಳಿದಾಗ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಆಗುತ್ತದಲ್ಲ, ಆನ್‌ಲೈನ್ ಪ್ರಪಂಚದಲ್ಲೂ ರಸ್ತೆಗಳಿವೆ ಎನ್ನುವುದಾದರೆ ಅಲ್ಲೂ ಟ್ರಾಫಿಕ್ ಜಾಮ್ ಆಗುವುದು ಸಾಧ್ಯವೆ?

ಖಂಡಿತಾ ಸಾಧ್ಯ. ಅಂತರಜಾಲದ ವ್ಯಾಪ್ತಿ ನಮ್ಮ ಕಲ್ಪನೆಗೂ ಮೀರಿದ ಪ್ರಮಾಣದಲ್ಲಿದೆ ಎಂದಮಾತ್ರಕ್ಕೆ ಅಲ್ಲಿ ಹರಿದಾಡುವ ಮಾಹಿತಿಯ ಪ್ರಮಾಣಕ್ಕೆ ಮಿತಿಯೇ ಇಲ್ಲ ಎಂದುಕೊಳ್ಳುವುದು ತಪ್ಪಾಗುತ್ತದೆ. ನಮ್ಮ ಬಡಾವಣೆಯ ಮೂಲಕ ಹಾದುಹೋಗುವ ರಸ್ತೆಯಲ್ಲಿ - ಅದು ಎಷ್ಟೇ ದೊಡ್ಡದಾದರೂ - ಏಕಕಾಲಕ್ಕೆ ಹೇಗೆ ನಿರ್ದಿಷ್ಟ ಸಂಖ್ಯೆಯ ಸಂಖ್ಯೆಯ ವಾಹನಗಳಿಗಷ್ಟೆ ಜಾಗವಿದೆಯೋ ಹಾಗೆಯೇ ಅಂತರಜಾಲದ ಹೆದ್ದಾರಿಯೂ ನಿರ್ದಿಷ್ಟ ಪ್ರಮಾಣದ ಮಾಹಿತಿಗಷ್ಟೆ ಸರಾಗ ಪ್ರಯಾಣದ ಅವಕಾಶ ನೀಡಬಲ್ಲದು. ಹಾಗಾಗಿ ಸಾಮಾನ್ಯಕ್ಕಿಂತ ಹೆಚ್ಚು ಪ್ರಮಾಣದ ಮಾಹಿತಿಯ ಹರಿವು ಈ ಹೆದ್ದಾರಿಯತ್ತ ಹರಿದುಬಂದರೆ ವಾರಾಂತ್ಯದ ಬೆಂಗಳೂರಿನ ರಸ್ತೆಗಳಂತೆ ಮಾಹಿತಿ ಹೆದ್ದಾರಿಯಲ್ಲೂ ಟ್ರಾಫಿಕ್ ಜಾಮ್ ಆಗುತ್ತದೆ.

ಕಳೆದವಾರ ಆದದ್ದು ಇದೇ.

ಒಂದುಕಡೆ ಈಜಿಪ್ಟಿನ ಹತ್ತಿರ ಯಾರೋ ದುಷ್ಕರ್ಮಿಗಳು ಸಮುದ್ರದಾಳದ ಕೇಬಲ್ಲುಗಳನ್ನು ಕತ್ತರಿಸಿದ್ದರಿಂದ ಮೊದಲೇ ಹಲವು ದೇಶಗಳ ಅಂತರಜಾಲ ಸಂಪರ್ಕದಲ್ಲಿ ಅಷ್ಟಿಷ್ಟು ವ್ಯತ್ಯಯ ಕಂಡುಬಂದಿತ್ತು. ಇನ್ನೊಂದುಕಡೆ ಇಂಟರ್‌ನೆಟ್ ಇತಿಹಾಸದಲ್ಲೇ ಅತಿ ದೊಡ್ಡ ಪ್ರಮಾಣದ್ದು ಎನ್ನಲಾದ ಸೈಬರ್ ದಾಳಿಯಿಂದಾಗಿ ಅಂತರಜಾಲ ಸಂಪರ್ಕ ಇದ್ದ ಕಡೆಗಳಲ್ಲೂ ವೇಗ ತೀರಾ ಕಡಿಮೆಯಾಗಿಬಿಟ್ಟಿತ್ತು. ಮೇಲಿನ ಉದಾಹರಣೆಯ ಮಾತುಗಳಲ್ಲೇ ಹೇಳುವುದಾದರೆ ಅಂತರಜಾಲದ ಮಾಹಿತಿ ಹೆದ್ದಾರಿಯಲ್ಲಿ ಭಾರೀ ಪ್ರಮಾಣದ ಟ್ರಾಫಿಕ್ ಜಾಮ್ ಕಾಣಿಸಿಕೊಂಡಿತ್ತು!

ಸ್ಪಾಮ್‌ಹೌಸ್ ಎನ್ನುವುದೊಂದು ಸ್ವಯಂಸೇವಾ ಸಂಸ್ಥೆಯಿದೆ, ಅಂತರಜಾಲ ಲೋಕದ ದುಷ್ಟಕೂಟದ ಮೇಲೊಂದು ಕಣ್ಣಿಟ್ಟು ಅವರಿಗೆ ನೆರವಾಗುವ ಸರ್ವರ್‌ಗಳನ್ನು ನಿರ್ಬಂಧಿಸುವುದು ಈ ಸಂಸ್ಥೆಯ ಕೆಲಸಗಳಲ್ಲೊಂದು. ಕಾನೂನುಬಾಹಿರ ಚಟುವಟಿಕೆಗಳಿಗೆ ನೆರವಾದ ಆರೋಪದ ಮೇಲೆ ಇತ್ತೀಚೆಗೆ ಆ ಸಂಸ್ಥೆ ನೆದರ್‌ಲೆಂಡಿನಲ್ಲಿರುವ ಸೈಬರ್‌ಬಂಕರ್ ಎನ್ನುವ ಗುಂಪಿಗೆ ಸೇರಿದ ಕೆಲವು ಸರ್ವರ್‌ಗಳ ಮೇಲೆ ಪ್ರತಿಬಂಧ ಹೇರಿತ್ತು. ಈ ಪ್ರತಿಬಂಧದಿಂದಾಗಿ ಸೈಬರ್‌ಬಂಕರ್ ಸರ್ವರುಗಳಲ್ಲಿದ್ದ ಬಹಳಷ್ಟು ಆಕ್ಷೇಪಾರ್ಹ ಮಾಹಿತಿ ಅಂತರಜಾಲದಿಂದ ಹೊರಗುಳಿದಿತ್ತು.

ಇದಕ್ಕೆ ಪ್ರತೀಕಾರವಾಗಿ ಶುರುವಾದದ್ದೇ ಡಿಡಿಒಎಸ್ ದಾಳಿ. ಕುತಂತ್ರಾಂಶಗಳ ಸಹಾಯದಿಂದ ಕೃತಕ ಮಾಹಿತಿಯ ಪ್ರವಾಹವನ್ನು ಸೃಷ್ಟಿಸುವ ಬ್ಲ್ಯಾಕ್‌ಮೇಲ್ ತಂತ್ರ ಇದು. ಇಂತಹ ದಾಳಿಗೆ ಗುರಿಯಾದ ವ್ಯವಸ್ಥೆ ಅಪಾರ ಪ್ರಮಾಣದ ಅನಗತ್ಯ ಮಾಹಿತಿಯನ್ನು ನಿರ್ವಹಿಸಬೇಕಾಗಿ ಬರುವುದರಿಂದ ಅದರ ಕಾರ್ಯಾಚರಣೆ ಬಲು ನಿಧಾನವಾಗಿಬಿಡುತ್ತದೆ. ಇಂತಹ ದಾಳಿಗಳು ಹೆಚ್ಚುಕಾಲ ಮುಂದುವರೆದದ್ದೇ ಆದರೆ ಮಾಹಿತಿಯ ಮಿತಿಮೀರಿದ ಒತ್ತಡದಿಂದಾಗಿ ದಾಳಿಗೀಡಾದ ವ್ಯವಸ್ಥೆ ಸಂಪೂರ್ಣವಾಗಿ ಸ್ಥಗಿತಗೊಳ್ಳುವ ಸಾಧ್ಯತೆಯೂ ಇರುತ್ತದೆ.

ಪೂರ್ವ ಯೂರೋಪ್ ಹಾಗೂ ರಷ್ಯಾದ ಕೆಲ ಸೈಬರ್ ಕ್ರಿಮಿನಲ್‌ಗಳ ಸಹಾಯದಿಂದ ಪ್ರಾರಂಭವಾಯಿತೆಂದು ಹೇಳಲಾದ ಈ ದಾಳಿಯೇ ಅಂತರಜಾಲ ಹಿಂದೆಂದೂ ಕಂಡರಿಯದ ಮಟ್ಟದ್ದು ಎಂಬ ಹಣೆಪಟ್ಟಿ ಗಳಿಸಿಕೊಂಡಿದ್ದು. ಈ ದಾಳಿಗೆ ಗುರಿಯಾದದ್ದು ಸ್ಪಾಮ್‌ಹೌಸ್ ಸಂಸ್ಥೆಯ ಡಿಎನ್‌ಎಸ್ ಸರ್ವರುಗಳು. ಪ್ರತಿಯೊಂದು ತಾಣದ ಯುಆರ್‌ಎಲ್ ಅನ್ನು ಅದರ ಐ.ಪಿ. ವಿಳಾಸದೊಂದಿಗೆ ಹೊಂದಿಸಿಕೊಡುವ ಈ ವ್ಯವಸ್ಥೆ ನಿಧಾನವಾದರೆ ಬಳಕೆದಾರರು ತಮಗೆ ಬೇಕಾದ ತಾಣಕ್ಕೆ ಭೇಟಿಕೊಡುವ ಪ್ರಕ್ರಿಯೆಯೂ ನಿಧಾನವಾಗುತ್ತದೆ ಎನ್ನುವ ಉದ್ದೇಶ ಈ ದಾಳಿಗಳ ಹಿಂದಿತ್ತು.

ಸಾಮಾನ್ಯ ತಾಣಗಳ ಮೇಲೇನಾದರೂ ಈ ಪ್ರಮಾಣದ ಡಿಡಿಒಎಸ್ ದಾಳಿ ನಡೆದಿದ್ದರೆ ಆ ತಾಣಗಳು ಕ್ಷಣಾರ್ಧದಲ್ಲಿ ಸ್ಥಗಿತವಾಗಿಬಿಡುತ್ತಿದ್ದವು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸ್ಪಾಮ್‌ಹೌಸ್ ಸಂಸ್ಥೆಯ ವ್ಯವಸ್ಥೆ ಸಾಕಷ್ಟು ಉನ್ನತ ಮಟ್ಟದ್ದಾಗಿದ್ದರಿಂದಲೇ ಅದರ ಮೇಲೆ ತೀವ್ರ ದುಷ್ಪರಿಣಾಮಗಳಾಗಿಲ್ಲ ಅಷ್ಟೆ. ಅಲ್ಲದೆ ತಂತ್ರಜ್ಞಾನ ಕ್ಷೇತ್ರದ ಅನೇಕ ದೊಡ್ಡ ಸಂಸ್ಥೆಗಳು ಹಾಗೂ ಹಲವು ರಾಷ್ಟ್ರಗಳ ಸೈಬರ್ ಸುರಕ್ಷತಾ ವ್ಯವಸ್ಥೆಗಳೂ ಸ್ಪಾಮ್‌ಹೌಸ್ ಜೊತೆ ಕೈಜೋಡಿಸಿದ್ದರಿಂದ ಈ ದಾಳಿಯ ಪರಿಣಾಮವನ್ನು ನಿಯಂತ್ರಣದಲ್ಲಿಡಲು ಸಾಧ್ಯವಾಯಿತು ಎಂದೂ ನಂಬಲಾಗಿದೆ.

ಅದೆಲ್ಲ ಏನೇ ಆದರೂ ಕಳೆದವಾರದ ಈ ಘಟನೆ ಅಂತರಜಾಲದ ಭವಿಷ್ಯದ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿರುವುದಂತೂ ನಿಜ. ನಮ್ಮಿಂದ ಬೇರೇನಾದರೂ ಸಾಧ್ಯವಿದೆಯೋ ಇಲ್ಲವೋ, ಮುಂಬರುವ ದಿನಗಳಲ್ಲಿ ಅಂತರಜಾಲವನ್ನು ನಮ್ಮೆಲ್ಲರಿಗೆ ಇನ್ನಷ್ಟು, ಮತ್ತಷ್ಟು ಸುರಕ್ಷಿತವಾಗಿರುವಂತೆ ಬೆಳೆಸಲು ಈ ಘಟನೆ ಪ್ರೇರಣೆಯಾಗಲಿ ಎಂದಂತೂ ಹಾರೈಸೋಣ.

ಏಪ್ರಿಲ್ ೫, ೨೦೧೩ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge