ಶುಕ್ರವಾರ, ಏಪ್ರಿಲ್ 19, 2013

ಅಂತರಜಾಲದ ಅಂಚೆವ್ಯವಸ್ಥೆ


ಟಿ. ಜಿ. ಶ್ರೀನಿಧಿ

ನೂರು ಮನೆಗಳಿರುವ ಒಂದು ಊರಿದೆ ಎಂದುಕೊಳ್ಳೋಣ. ಬಹಳ ಕಾಲದಿಂದಲೂ ಅಲ್ಲಿರುವ ಮನೆಗಳ ಸಂಖ್ಯೆ ಅಷ್ಟೇ ಇರುವುದರಿಂದ ಊರಿನ ಎಲ್ಲ ವ್ಯವಸ್ಥೆಗಳೂ ನೂರು ಮನೆಗಳಿಗಷ್ಟೆ ಸರಿಯಾಗಿ ಕೆಲಸಮಾಡುವಂತೆ ರೂಪುಗೊಂಡುಬಿಟ್ಟಿವೆ. ನೂರು ಮನೆಗಳಿಗೆ ಸಾಲುವಷ್ಟು ನೀರು-ವಿದ್ಯುತ್ ಪೂರೈಕೆ, ನೂರು ಮನೆಗಳಿಗೆ ಬೇಕಾದಷ್ಟು ಅಂಗಡಿಗಳು, ನೂರು ಮನೆಗಳನ್ನಷ್ಟೆ ನಿಭಾಯಿಸಲು ಶಕ್ತವಾದ ಅಂಚೆ ವ್ಯವಸ್ಥೆ, ನೂರೇ ನೂರು ದೂರವಾಣಿ ಸಂಪರ್ಕ; ಯಾರಿಗೂ ಯಾವುದರಲ್ಲೂ ಕೊರತೆಯಿಲ್ಲ.

ಊರಿನಲ್ಲಿ ವ್ಯವಸ್ಥೆ ಇಷ್ಟೆಲ್ಲ ಸಮರ್ಪಕವಾಗಿದೆ ಎನ್ನುವ ಸುದ್ದಿ ಕೇಳಿದ ಅನೇಕ ಜನರು ಆ ಊರಿನತ್ತ ಆಕರ್ಷಿತರಾದರು. ಪರಿಣಾಮವಾಗಿ ಅಲ್ಲಿನ ರಿಯಲ್ ಎಸ್ಟೇಟ್ ಉದ್ದಿಮೆ ದೊಡ್ಡದಾಗಿ ಬೆಳೆಯಿತು. ದೊಡ್ಡ ಸಂಖ್ಯೆಯಲ್ಲಿ ಹೊಸ ಮನೆಗಳು, ಅಪಾರ್ಟ್‌ಮೆಂಟುಗಳೆಲ್ಲ ಸೃಷ್ಟಿಯಾದವು. ಒಂದೊಂದಾಗಿ ಹೊಸ ಕುಟುಂಬಗಳೂ ಆ ಮನೆಗಳಿಗೆ ಬಂದು ಸೇರಿಕೊಂಡವು.

ಮೂಲ ಊರಿನ ಸುತ್ತ ಬೇಕಾದಷ್ಟು ಜಾಗವೇನೋ ಇತ್ತು, ರಿಯಲ್ ಎಸ್ಟೇಟ್ ಉದ್ಯಮಿಗಳು ಅಲ್ಲೆಲ್ಲ ಮನೆ ಕಟ್ಟಿ ಮಾರಿಬಿಟ್ಟರು. ಆದರೆ ಅಷ್ಟೆಲ್ಲ ಸಂಖ್ಯೆಯ ಹೊಸ ಮನೆಗಳಿಗೆ ನೀರು-ವಿದ್ಯುತ್-ದೂರವಾಣಿ ಸಂಪರ್ಕಗಳನ್ನು ಕೊಡುವಷ್ಟು ಸಾಮರ್ಥ್ಯ ಅಲ್ಲಿನ ವ್ಯವಸ್ಥೆಗೆ ಇಲ್ಲ; ಬೇರೆಲ್ಲ ಹೋಗಲಿ ಎಂದರೆ ಹೊಸ ಮನೆಗಳವರ ಅಗತ್ಯಗಳನ್ನು ಪೂರೈಸುವಷ್ಟು ಸಾಮರ್ಥ್ಯವೂ ಊರಿನ ಅಂಗಡಿಗಳಿಗಿಲ್ಲ.

ನೂರು ಮನೆಗಳಿದ್ದಾಗ ಯಾವ ಕೊರತೆಯೂ ಇಲ್ಲದ ಊರು ಅತಿ ಶೀಘ್ರದಲ್ಲೇ ಸಮಸ್ಯೆಗಳ ಆಗರವಾಗುವುದು ಎಷ್ಟು ಸುಲಭ ಅಲ್ಲವೆ? ಸ್ವಲ್ಪ ಹೆಚ್ಚೂಕಡಿಮೆಯಾದರೆ ನಮ್ಮ ಅಂತರಜಾಲವೂ ಇಂತಹುದೇ ಪರಿಸ್ಥಿತಿಯತ್ತ ಹೋಗಬಹುದು ಎಂದು ತಜ್ಞರು ಹೇಳುತ್ತಾರೆ.

ಅಂತರಜಾಲ ನಮ್ಮ ಬದುಕಿನಲ್ಲಿ ಎಷ್ಟು ಮಹತ್ವದ ಪಾತ್ರ ವಹಿಸುತ್ತಿದೆ ಎನ್ನುವುದು ನಮಗೆಲ್ಲ ಗೊತ್ತೇ ಇದೆ. ಕಂಪ್ಯೂಟರುಗಳಷ್ಟೇ ಏಕೆ, ಈಗ ಮೊಬೈಲು-ಟ್ಯಾಬ್ಲೆಟ್ಟು-ಟೀವಿಗಳೂ ಈ ಜಾಲದ ಸಂಪರ್ಕಕ್ಕೆ ಬಂದುಬಿಟ್ಟಿವೆ.

ಅಂತರಜಾಲದಲ್ಲಿ ಇಷ್ಟೆಲ್ಲ ವಿವಿಧ ಬಗೆಯ ಸಾಧನಗಳ ನಡುವೆ ಮಾಹಿತಿ ವಿನಿಮಯ ಆಗುತ್ತದಲ್ಲ, ವಿನಿಮಯವಾಗುವ ಮಾಹಿತಿ ಎಲ್ಲಿಂದ ಎಲ್ಲಿಗೆ ಹೋಗುತ್ತಿದೆ ಎಂದು ಗುರುತಿಸಲು ಪ್ರತಿಯೊಂದು ಸಾಧನಕ್ಕೂ ವಿಶಿಷ್ಟವಾದ ವಿಳಾಸ ಇರಬೇಕಾಗುತ್ತದೆ. ಈ ವಿಳಾಸವನ್ನೇ ಐಪಿ ಅಡ್ರೆಸ್ ಎಂದು ಕರೆಯುತ್ತಾರೆ.

ಬರೆದ ಪತ್ರವನ್ನು ಅಂಚೆಗೆ ಹಾಕುವ ಮೊದಲು ಲಕೋಟೆಯ ಮೇಲೆ ಅದು ತಲುಪಬೇಕಾದ ವಿಳಾಸ ಹಾಗೂ ಅದನ್ನು ಕಳುಹಿಸುತ್ತಿರುವವರ ವಿಳಾಸ ಬರೆಯುತ್ತೇವಲ್ಲ, ಇದೂ ಹಾಗೆಯೇ. ಅಂಚೆಪೆಟ್ಟಿಗೆಗೆ ಹಾಕಿದ ಪತ್ರವನ್ನು ಇಲಾಖೆಯವರು ಪೂರ್ವನಿರ್ಧಾರಿತ ಮಾರ್ಗದಲ್ಲಿ ಕೊಂಡೊಯ್ದು ಅದು ಹೋಗಿ ಸೇರಬೇಕಾದ ಸ್ಥಳಕ್ಕೆ ತಲುಪಿಸುತ್ತಾರೆ. ಅಂತರಜಾಲದ ಲೋಕದಲ್ಲಿ ಈ ಕೆಲಸ ಮಾಡುವುದು ಇಂಟರ್‌ನೆಟ್ ಪ್ರೋಟೊಕಾಲ್ (ಐಪಿ) ಎಂಬ ಶಿಷ್ಟಾಚಾರ.

ಇದೀಗ ಉಪಯೋಗದಲ್ಲಿರುವುದು ಇಂಟರ್‌ನೆಟ್ ಪ್ರೋಟೊಕಾಲ್‌ನ ೪ನೇ ಆವೃತ್ತಿ (ಐಪಿವಿ೪). ಇದರಲ್ಲಿ ವಿಳಾಸಗಳನ್ನು ನಿಯೋಜಿಸಲು ೩೨ ಬಿಟ್‌ಗಳನ್ನು ಬಳಸಲಾಗುತ್ತದೆ. ನೂರು ಮನೆಗಳಿದ್ದ ಊರಿನ ಉದಾಹರಣೆಗೆ ಇದನ್ನು ಹೋಲಿಸುವುದಾದರೆ ಈ ಊರಿನಲ್ಲಿ ೪,೨೯೪,೯೬೭,೨೯೬ ಮನೆಗಳಿವೆ ಎನ್ನಬಹುದು. ಅಂದರೆ, ಇಂದಿನ ಅಂತರಜಾಲದ ವ್ಯವಸ್ಥೆ ಇಷ್ಟು ಸಂಖ್ಯೆಯ ಸಾಧನಗಳಿಗೆ ಮಾತ್ರವೇ ವಿಳಾಸಗಳನ್ನು ನೀಡಬಲ್ಲದು.

ಆದರೆ ಅಂತರಜಾಲದ ವ್ಯಾಪ್ತಿ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವುದರಿಂದ ಈ ಸಂಖ್ಯೆ ಈಗಾಗಲೇ ಸಣ್ಣದು ಎನಿಸಲು ಪ್ರಾರಂಭವಾಗಿದೆ. ಹಾಗಾಗಿ ಅಂತರಜಾಲದ ಲೋಕ ಇಂಟರ್‌ನೆಟ್ ಪ್ರೋಟೊಕಾಲ್‌ನ ಹೊಸ ಆವೃತ್ತಿಯತ್ತ ಹೊರಟಿದೆ. ಐಪಿವಿ೬ ಎಂದು ಕರೆಸಿಕೊಂಡಿರುವ ಈ ಆರನೇ ಆವೃತ್ತಿಯಲ್ಲಿ ವಿಳಾಸಗಳನ್ನು ನಿಯೋಜಿಸಲು ೧೨೮ ಬಿಟ್‌ಗಳನ್ನು ಬಳಸಲಾಗುತ್ತದೆ.

ಹಾಗಾಗಿ ಐಪಿವಿ೪ನಲ್ಲಿ ಬಳಸಲು ಸಾಧ್ಯವಿರುವುದಕ್ಕಿಂತ ಅದೆಷ್ಟೋ ಹೆಚ್ಚು ಸಂಖ್ಯೆಯ ಸಾಧನಗಳನ್ನು ಐಪಿವಿ೬ ವ್ಯವಸ್ಥೆಯಲ್ಲಿ ಬಳಸಬಹುದು. 'ನ್ಯೂ ಸೈಂಟಿಸ್ಟ್' ಪತ್ರಿಕೆ ವರದಿಮಾಡಿರುವ ಪ್ರಕಾರ ಐಪಿವಿ೪ನಲ್ಲಿ ಲಭ್ಯವಿರುವುದಕ್ಕಿಂತ ೮೦,೦೦೦ ಟ್ರಿಲಿಯನ್ ಟ್ರಿಲಿಯನ್ ಪಟ್ಟು ಹೆಚ್ಚಿನ ವಿಳಾಸಗಳು ಐಪಿವಿ೬ನಲ್ಲಿ ಸಿಗುತ್ತವಂತೆ.

ಸೈದ್ಧಾಂತಿಕವಾಗಿ ನೋಡಿದರೆ ಇದು ಐಪಿವಿ೪ನ ಎಲ್ಲ ಸಮಸ್ಯೆಗಳನ್ನೂ ನಿವಾರಿಸಿಬಿಡುತ್ತದೆ, ನಿಜ. ಆದರೆ ಸದ್ಯದ ವ್ಯವಸ್ಥೆಯಿಂದ ಐಪಿವಿ೬ಗೆ ವಲಸೆಹೋಗುವ ಕೆಲಸ ಅಷ್ಟೇನೂ ಸುಲಭವಾಗಿ ಕಾಣುತ್ತಿಲ್ಲ. ಐಪಿವಿ೪ ವಿಳಾಸಗಳೆಲ್ಲ ಮುಗಿದುಹೋಗುವ ಮುನ್ನ ಐಪಿವಿ೬ ಬಳಕೆ ಪ್ರಾರಂಭವಾಗಬೇಕು ಎಂದು ಮೊದಲಿಗೆ ಯೋಜಿಸಲಾಗಿತ್ತು; ಆದರೆ ಐಪಿವಿ೪ ವಿಳಾಸಗಳು ಇನ್ನೇನು ಮುಗಿದುಹೋಗುವ ಹಂತಕ್ಕೆ ಬಂದಿದ್ದರೂ ಐಪಿವಿ೬ ಅನುಷ್ಠಾನ ಸಂಪೂರ್ಣವಾಗಿ ಸಾಧ್ಯವಾಗಿಲ್ಲ.

ಗುರಿ ಮುಟ್ಟುವಲ್ಲಿ ಇತರ ರಾಷ್ಟ್ರಗಳೆಲ್ಲ ಹಿಂದುಳಿದಿದ್ದರೂ ಈ ನಿಟ್ಟಿನಲ್ಲಿ ಚೀನಾ ಗಮನಾರ್ಹ ಸಾಧನೆ ಮಾಡಿದೆ ಎಂದು ನ್ಯೂ ಸೈಂಟಿಸ್ಟ್ ವರದಿ ಹೇಳಿದೆ. ದೇಶದೊಳಗೆ ಐಪಿವಿ೬ ಬಳಕೆಯನ್ನು ಈಗಾಗಲೇ ಪ್ರಾರಂಭಿಸಿರುವ ಹೆಗ್ಗಳಿಕೆ ಆ ದೇಶದ್ದು. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಜನ್ಮತಳೆದು ಬೆಳೆದ ಅಂತರಜಾಲದ ಭವಿಷ್ಯದ ದಿನಗಳಲ್ಲಿ ಚೀನಾ ಮುಂಚೂಣಿಯಲ್ಲಿರುವ ದೇಶವಾಗಲಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

ಈ ನಿಟ್ಟಿನಲ್ಲಿ ಭಾರತದಲ್ಲೂ ಕೆಲಸ ಸಾಗಿದೆ. ಪತ್ರಿಕಾವರದಿಗಳ ಪ್ರಕಾರ ಐಪಿವಿ೬ ವಿಳಾಸಗಳ ಪ್ರಾಯೋಗಿಕ ವಿತರಣೆ ಹಾಗೂ ಪ್ರಸ್ತುತ ಮೂಲಸೌಕರ್ಯದೊಡನೆ ಅದರ ಹೊಂದಾಣಿಕೆಯ ಪರೀಕ್ಷೆ ಕಳೆದ ವರ್ಷಾಂತ್ಯದಲ್ಲೇ ಪ್ರಾರಂಭವಾಗಿದೆ. ದೂರಸಂಪರ್ಕ ಇಲಾಖೆಯ ಜಾಲತಾಣದಲ್ಲಿ ಕಂಡುಬಂದ ಮಾಹಿತಿಯ ಪ್ರಕಾರ ಐಪಿವಿ೬ ವ್ಯವಸ್ಥೆಯ ಅನುಷ್ಠಾನ ೨೦೧೭ರ ವೇಳೆಗೆ ಸಂಪೂರ್ಣವಾಗುವ ನಿರೀಕ್ಷೆಯಿದೆ.

ಏಪ್ರಿಲ್ ೧೯, ೨೦೧೩ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge