ಸೋಮವಾರ, ಏಪ್ರಿಲ್ 15, 2013

ಮಾತು ಮಾತುಗಳನು ದಾಟಿ...

ಟಿ. ಜಿ. ಶ್ರೀನಿಧಿ

ಕಳೆದ ಕೆಲ ದಶಕಗಳಲ್ಲಿ ನಮ್ಮ ಬದುಕನ್ನು ತೀರಾ ಗಣನೀಯವಾಗಿ ಬದಲಿಸಿರುವ ವಸ್ತುಗಳಲ್ಲಿ ಮೊಬೈಲ್ ದೂರವಾಣಿಯದು ಪ್ರಮುಖ ಸ್ಥಾನ. ಬಹಳ ಕಡಿಮೆ ಸಮಯದಲ್ಲಿ ಅಪಾರ ಜನಪ್ರಿಯತೆ ಗಳಿಸಿದ ಹೆಚ್ಚುಗಾರಿಕೆ ಈ ಮೊಬೈಲ್ ಫೋನಿನದು.

ಮೊಬೈಲ್ ದೂರವಾಣಿಯ ಕಲ್ಪನೆ ಸುಮಾರು ಐವತ್ತು-ಅರವತ್ತು ವರ್ಷಗಳಷ್ಟು ಹಳೆಯದು. ಸಾಮಾನ್ಯ ದೂರವಾಣಿ, ಅಂದರೆ ಲ್ಯಾಂಡ್‌ಲೈನ್, ಆ ವೇಳೆಗಾಗಲೇ ಸಾಕಷ್ಟು ವ್ಯಾಪಕವಾಗಿ ಬಳಕೆಯಾಗುತ್ತಿತ್ತು; ರೇಡಿಯೋ ಕಲ್ಪನೆ ಕೂಡ ಸುಮಾರು ಹಳೆಯದಾಗಿತ್ತು. ಒಬ್ಬರ ಮಾತನ್ನು ಇನ್ನೊಬ್ಬರಿಗೆ ತಲುಪಿಸುವ ಸಾಮಾನ್ಯ ಫೋನು ತಂತಿಗಳ ನೆರವಿಲ್ಲದೆ, ಅಂದರೆ ರೇಡಿಯೋ ರೀತಿಯಲ್ಲಿ, ಕೆಲಸ ಮಾಡಿದರೆ ಎಷ್ಟೊಂದು ಅನುಕೂಲ ಎನ್ನುವ ಯೋಚನೆ ಮೊಬೈಲ್ ದೂರವಾಣಿಯ ಸೃಷ್ಟಿಗೆ ಕಾರಣವಾಯಿತು.

ಆದರೆ ಅವತ್ತಿನ ಮೊಬೈಲ್ ತಂತ್ರಜ್ಞಾನ ಇವತ್ತಿನಷ್ಟು ಮುಂದುವರೆದಿರಲಿಲ್ಲ. ಮೊಬೈಲ್ ಕರೆಗಳ ದರ ವಿಪರೀತ ಜಾಸ್ತಿಯಿದ್ದದ್ದಷ್ಟೇ ಅಲ್ಲ, ಫೋನುಗಳೂ ತೀರಾ ದೊಡ್ಡದಾಗಿದ್ದವು. ಅವುಗಳ ಗಾತ್ರ ಎಷ್ಟು ದೊಡ್ಡದಿತ್ತೆಂದರೆ ಮೊದಮೊದಲು ಬಂದ ಮೊಬೈಲ್ ಫೋನುಗಳನ್ನು ಕಾರುಗಳಲ್ಲಷ್ಟೇ ಇಟ್ಟುಕೊಳ್ಳಲು ಸಾಧ್ಯವಿತ್ತು.

ಇದನ್ನೆಲ್ಲ ನೋಡುತ್ತಿದ್ದ ಮಾರ್ಟಿನ್ ಕೂಪರ್ ಎಂಬ ತಂತ್ರಜ್ಞರಿಗೆ ಒಂದು ಯೋಚನೆ ಬಂತು; ದೂರವಾಣಿಯನ್ನು ಒಂದು ಮನೆಗೆ, ಕಚೇರಿಗೆ ಅಥವಾ ಈಗ ವಾಹನಕ್ಕೆ ಸೀಮಿತಗೊಳಿಸಿಬಿಟ್ಟಿದ್ದೇವಲ್ಲ, ಅದರ ಬದಲು ದೂರವಾಣಿಗಿರುವ ಭೌಗೋಳಿಕ ಮಿತಿಯನ್ನು ಸಂಪೂರ್ಣವಾಗಿ ಹೋಗಲಾಡಿಸಿ ಒಬ್ಬ ವ್ಯಕ್ತಿಗೆ ಒಂದು ದೂರವಾಣಿ ಸಂಖ್ಯೆ ಕೊಡುವಂತಿದ್ದರೆ ಹೇಗೆ?

ಇದೇ ಆಲೋಚನೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಕೆಲಸ ಪ್ರಾರಂಭಿಸಿದ ಮಾರ್ಟಿನ್ ತಮ್ಮ ಕೆಲಸದಲ್ಲಿ ಯಶಸ್ವಿಯಾದದ್ದಷ್ಟೇ ಅಲ್ಲ, ೧೯೭೩ರ ಏಪ್ರಿಲ್ ತಿಂಗಳಲ್ಲಿ ಮೊತ್ತಮೊದಲ ಮೊಬೈಲ್ ಕರೆಯನ್ನೂ ಮಾಡಿದರು. ತಮ್ಮ ಆವಿಷ್ಕಾರ ಮುಂದೆ ಇಷ್ಟೆಲ್ಲ ಜನಪ್ರಿಯವಾಗಲಿದೆ, ತಾವು ಮಾಡಿದ ಈ ಕರೆ ಮುಂದೊಂದು ದಿನ ತಮಗೆ ಮೊಬೈಲ್ ಫೋನ್ ಪಿತಾಮಹನೆಂಬ ಗೌರವ ತಂದುಕೊಡಲಿದೆಯೆಂದು ಅವರಿಗೆ ಗೊತ್ತಿತ್ತೋ ಇಲ್ಲವೋ!

ಇರಲಿ, ೧೯೭೩ರಲ್ಲಿ ಮೊದಲ ಮೊಬೈಲ್ ಕರೆ ಮಾಡಿದ ಮಾತ್ರಕ್ಕೆ ಮೊಬೈಲ್ ಫೋನ್ ತಂತ್ರಜ್ಞಾನದ ವಿಕಾಸ  ಆಗಲೇ ಸಂಪೂರ್ಣವೇನೂ ಆಗಿಬಿಟ್ಟಿರಲಿಲ್ಲ. ಹ್ಯಾಂಡ್‌ಸೆಟ್ಟಿನ ಗಾತ್ರವೂ ಇನ್ನೂ ಸಮಸ್ಯೆಯಾಗಿಯೇ ಉಳಿದಿತ್ತು: ಮಾರ್ಟಿನ್ ಬಳಸಿದ ಮೊದಲ ಫೋನು ಹೆಚ್ಚೂಕಡಿಮೆ ಒಂದು ಕೇಜಿ ತೂಕವಿತ್ತಂತೆ! ಅಷ್ಟೇ ಅಲ್ಲ, ಆ ಫೋನನ್ನು ಹತ್ತು ಗಂಟೆಗಳ ಕಾಲ ಚಾರ್ಜ್ ಮಾಡಿದರೆ ಮೂವತ್ತು ನಿಮಿಷಗಳ ಕಾಲ ಮಾತನಾಡುವುದು ಸಾಧ್ಯವಾಗುತ್ತಿತ್ತು ಎಂದು ದಾಖಲೆಗಳು ಹೇಳುತ್ತವೆ.

೧೯೭೩ರ ಪ್ರಯೋಗ ಯಶಸ್ವಿಯಾದರೂ ಮೊಬೈಲ್ ತಂತ್ರಜ್ಞಾನ ಸಾರ್ವಜನಿಕ ಬಳಕೆಗೆ ಸಿಗುವಂತಾಗಲು ಹೆಚ್ಚೂಕಡಿಮೆ ಒಂದು ದಶಕದ ಕಾಲ ಕಾಯಬೇಕಾಯಿತು. ೧೯೭೦ರ ದಶಕದ ಕೊನೆಯ ವೇಳೆಗೆ ಕಾಣಿಸಿಕೊಳ್ಳಲು ಪ್ರಾರಂಭಿಸಿದ ಮೊಬೈಲ್ ಫೋನ್ ಜಾಲಗಳು ನಿಧಾನವಾಗಿ ತಮ್ಮ ಹರವನ್ನು ಪ್ರಪಂಚದಾದ್ಯಂತ ವಿಸ್ತರಿಸಿಕೊಂಡವು. ವಿಕಿಪೀಡಿಯಾ ಹೇಳುವಂತೆ ಜಪಾನ್, ಡೆನ್ಮಾರ್ಕ್, ಫಿನ್‌ಲೆಂಡ್, ನಾರ್ವೆ, ಸ್ವೀಡನ್, ಯುಕೆ, ಮೆಕ್ಸಿಕೋ ಹಾಗೂ ಕೆನಡಾಗಳ ನಂತರ ಅಮೆರಿಕಾದ ಬಳಕೆದಾರರ ಕೈಗೆ ೧೯೮೩ರಲ್ಲಿ ಮೊಬೈಲ್ ಬಂತಂತೆ.

ಆಗ ಮೋಟರೋಲಾ ಸಂಸ್ಥೆ ತಯಾರಿಸುತ್ತಿದ್ದ ಡೈನಾಟಾಕ್ ಎಂಬ ಮೊಬೈಲ್ ದೂರವಾಣಿ ನೋಡಲು ಕಾರ್ಡ್‌ಲೆಸ್ ಫೋನಿನಂತೆ ಕಾಣುತ್ತಿತ್ತು; ಗಾತ್ರವೂ ಅಷ್ಟೇ ದೊಡ್ಡದಾಗಿತ್ತು. ಸುಮಾರು ಮೂರೂವರೆ ಸಾವಿರ ಡಾಲರುಗಳ ಬೆಲೆಗೆ ಮಾರಾಟವಾಗುತ್ತಿದ್ದ ಈ ಹ್ಯಾಂಡ್‌ಸೆಟ್‌ಗಳ ಬೆಲೆಯೇ ಮೊಬೈಲ್ ದೂರವಾಣಿ ಕ್ಷೇತ್ರದ ಭವಿಷ್ಯಕ್ಕೆ ಮಾರಕವಾಗಿಬಿಡುತ್ತದೇನೋ ಎಂದು ಮಾರ್ಟಿನ್ ಕೂಪರ್ ಭಾವಿಸಿದ್ದರಂತೆ.

ಹೊರಗೆ ಇಷ್ಟೆಲ್ಲ ಬೆಳವಣಿಗೆಯಾಗುತ್ತಿದ್ದರೂ ಮೊಬೈಲ್ ಗಾಳಿ ನಮ್ಮ ದೇಶದತ್ತ ಬೀಸಲು ಇನ್ನೂ ಸ್ವಲ್ಪ ಕಾಲ ಬೇಕಾಯಿತು.

ನಮ್ಮ ಮಾರುಕಟ್ಟೆಗೆ ಮೊಬೈಲ್ ದೂರವಾಣಿ ಬಂದಿದ್ದು ೧೯೯೦ರ ದಶಕದಲ್ಲಿ. ಆಗ ಇದ್ದ ಹ್ಯಾಂಡ್‌ಸೆಟ್ಟುಗಳು ಹೆಚ್ಚೂಕಡಿಮೆ ಇವತ್ತಿನ ಕಾರ್ಡ್‌ಲೆಸ್ ಫೋನುಗಳಷ್ಟೇ ದೊಡ್ಡದಾಗಿದ್ದವು. ಹ್ಯಾಂಡ್‌ಸೆಟ್ ಹೋಗಲಿ, ಮೊಬೈಲ್ ಬಳಸಿ ಮಾತಾಡಬೇಕು ಅಂದರೆ ನಿಮಿಷಕ್ಕೆ ಹದಿನೈದು ಇಪ್ಪತ್ತು ರುಪಾಯಿ ಕೊಡಬೇಕಿತ್ತು. ಔಟ್‌ಗೋಯಿಂಗ್‌ಗೂ ಅಷ್ಟು ದುಡ್ಡು, ಇನ್‌ಕಮಿಂಗ್‌ಗೂ ಅಷ್ಟೇ ದುಡ್ಡು!

ಆದರೆ ಮುಂದಿನ ಕೆಲವೇ ವರ್ಷಗಳಲ್ಲಿ ಭಾರತ ಮೊಬೈಲ್ ದೂರವಾಣಿ ಕ್ಷೇತ್ರದಲ್ಲಿ ಗಮನಾರ್ಹ ಬೆಳವಣಿಗೆ ಕಂಡಿತು. ಮಾರುಕಟ್ಟೆಯಲ್ಲಿ ಸ್ಪರ್ಧೆ ಜಾಸ್ತಿಯಾಯಿತು, ಮೊಬೈಲ್ ಸಂಪರ್ಕ ಪಡೆಯುವುದು ಸುಲಭವಷ್ಟೇ ಅಲ್ಲ, ಬಹಳ ಅಗ್ಗವೂ ಆಯಿತು. ಮೊಬೈಲ್ ಸಂಪರ್ಕಕ್ಕಾಗಿ ಮಾಡಬೇಕಾದ ಖರ್ಚು ಕಡಿಮೆಯಾಗುತ್ತಿದ್ದಂತೆ ಅದರ ಜನಪ್ರಿಯತೆ ತಾನೇತಾನಾಗಿ ಏರಿತು.

ಇದೆಲ್ಲದರ ಪರಿಣಾಮ - ಪ್ರಪಂಚದಲ್ಲೇ ಅತಿ ಹೆಚ್ಚು ಮೊಬೈಲ್ ಸಂಪರ್ಕ ಹೊಂದಿರುವ ದೇಶಗಳಲ್ಲಿ ಭಾರತಕ್ಕೆ ಈಗ ಎರಡನೇ ಸ್ಥಾನ. ಮೊಬೈಲ್ ಸೇವೆಯ ಬೆಲೆ ಅತ್ಯಂತ ಕಡಿಮೆಯಿರುವ ದೇಶಗಳ ಸಾಲಿನಲ್ಲೂ ನಮಗೆ ಪ್ರಮುಖ ಸ್ಥಾನ ಇದೆ. ಮೊಬೈಲ್ ಫೋನ್ ಕ್ಷೇತ್ರದ ಹೊಸ ಅಲೆಗಳಿಗೆ ಬಹುಬೇಗ ಒಗ್ಗಿಕೊಳ್ಳುವಲ್ಲೂ ನಾವೇನು ಕಡಿಮೆಯಿಲ್ಲ: ಕಳೆದ ವರ್ಷ ಭಾರತದಲ್ಲಿ ಮಾರಾಟವಾದ ಮೊಬೈಲ್ ಫೋನುಗಳಲ್ಲಿ ಅರ್ಧಕ್ಕಿಂತ ಹೆಚ್ಚು ಸ್ಮಾರ್ಟ್‌ಫೋನುಗಳಾಗಿದ್ದವಂತೆ!

೨೦೧೨ರಲ್ಲಿ ಅಂತಾರಾಷ್ಟ್ರೀಯ ಟೆಲಿಕಮ್ಯೂನಿಕೇಶನ್ ಯೂನಿಯನ್ ಸಿದ್ಧಪಡಿಸಿದ ವರದಿಯ ಪ್ರಕಾರ ಪ್ರಪಂಚದಲ್ಲಿ ಆರುನೂರು ಕೋಟಿ ಮೊಬೈಲ್ ಸಂಪರ್ಕಗಳಿವೆಯಂತೆ. ಆ ಸಮಯದಲ್ಲಿ ಭೂಮಿಯ ಜನಸಂಖ್ಯೆ ಇದ್ದದ್ದೇ ಏಳುನೂರು ಕೋಟಿ ಎನ್ನುವುದನ್ನು ಗಮನಿಸಿದರೆ ಮೊಬೈಲ್ ಫೋನುಗಳ ಜನಪ್ರಿಯತೆ ಎಷ್ಟು ಎಂದು ಅರಿವಾಗುತ್ತದೆ.

ಹೀಗೆ ಸಂಪರ್ಕಗಳ, ಬಳಕೆದಾರರ ಜಾಸ್ತಿಯಾದಂತೆ ಮೊಬೈಲ್ ಮೂಲಕ ಲಭ್ಯವಾಗುತ್ತಿರುವ ಸೌಲಭ್ಯಗಳೂ ಹೆಚ್ಚುತ್ತಿವೆ. ಮೊಬೈಲಲ್ಲಿ ಕರೆ ಮಾಡಿ ಮಾತಾಡಬಹುದು ಎನ್ನುವ ದಿನಗಳು ಹೋಗಿ ಇತರ ನೂರೆಂಟು ಕೆಲಸಗಳ ಜೊತೆಗೆ ದೂರವಾಣಿ ಕರೆಯನ್ನೂ ಮಾಡಬಹುದು ಎನ್ನುವಂತಹ ಸಂದರ್ಭ ಬಂದಿದೆ. ಎಸ್ಸೆಮ್ಮೆಸ್, ಎಮ್ಮೆಮ್ಮೆಸ್, ವಾಯ್ಸ್‌ಮೇಲ್ ಮುಂತಾದ ಸೌಲಭ್ಯಗಳಿಂದ ಪ್ರಾರಂಭಿಸಿ ಇಮೇಲ್ ಕಳಿಸುವುದು, ಇಂಟರ್‌ನೆಟ್ ಬ್ರೌಸಿಂಗ್, ಟೀವಿ ವೀಕ್ಷಣೆ, ಟೆಲಿಕಾನ್ಪರೆನ್ಸ್, ವೀಡಿಯೋ ಕಾಲಿಂಗ್ - ಹೀಗೆ ನೂರೆಂಟು ಸಾಧ್ಯತೆಗಳು ನಮ್ಮ ಮುಂದೆ ಬಂದಿವೆ. ಬಿಡುವಿನ ವೇಳೆಯಲ್ಲಿ ಕೇಳಲು ಹಾಡುಗಳನ್ನು, ಆಟವಾಡಲು ಗೇಮ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವುದು, ರಿಂಗ್‌ಟೋನ್ ಕಾಲರ್ ಟ್ಯೂನ್ ಇವನ್ನೆಲ್ಲ ಇಷ್ಟಬಂದಹಾಗೆ ಇಷ್ಟಬಂದಷ್ಟು ಸಲ ಬದಲಾಯಿಸುವುದು - ಎಲ್ಲವೂ ಚಿಟಿಕೆ ಹೊಡೆದಷ್ಟು ಸುಲಭ ಆಗಿಬಿಟ್ಟಿದೆ.

ಮೊಬೈಲ್ ಮೂಲಕ ಅಂತರಜಾಲ ಸಂಪರ್ಕ ದೊರಕುವುದರಿಂದ ಕಂಪ್ಯೂಟರ್ ಬಳಸಿ ಏನೇನು ಮಾಡುತ್ತೇವೋ ಅವೆಲ್ಲವನ್ನೂ ಮೊಬೈಲ್ ಮೂಲಕವೇ ಮಾಡಿಮುಗಿಸುವುದು ಕೂಡ ಸಾಧ್ಯವಾಗಿದೆ. ಬ್ಯಾಂಕಿಂಗ್ ವ್ಯವಹಾರ, ಬಸ್ಸು-ರೈಲು-ಸಿನಿಮಾ ಟಿಕೆಟ್ ಬುಕಿಂಗ್, ಶಾಪಿಂಗ್ - ಇವೆಲ್ಲವೂ ಈಗ ಮೊಬೈಲ್ ಮೂಲಕವೇ ಆಗುವುದು ಸರ್ವೇಸಾಮಾನ್ಯವಾಗಿಬಿಟ್ಟಿದೆ.

ಅಷ್ಟೇ ಏಕೆ, ಸಮುದಾಯಗಳನ್ನು ಸಶಕ್ತಗೊಳಿಸುವಲ್ಲೂ ಮೊಬೈಲುಗಳು ಪ್ರಮುಖ ಪಾತ್ರ ವಹಿಸಿವೆ. ದೂರಪ್ರದೇಶಗಳಲ್ಲಿರುವ ಜನರಿಗೆ ಹೊರಪ್ರಪಂಚದೊಡನೆ ಸಂಪರ್ಕ ಕಲ್ಪಿಸುವುದರಿಂದ ಪ್ರಾರಂಭಿಸಿ ಬ್ಯಾಂಕಿಂಗ್ ಸವಲತ್ತುಗಳನ್ನು ಅವರ ಅಂಗೈಯೊಳಗೆ ತಂದುಕೊಡುವವರೆಗೆ ಮೊಬೈಲ್ ಫೋನುಗಳ ಕೊಡುಗೆ ಅನನ್ಯವಾದದ್ದು.

ಮೊಬೈಲ್ ಕ್ಷೇತ್ರದಲ್ಲಿ ಆಗಿರುವ ಇಷ್ಟೆಲ್ಲ ಬದಲಾವಣೆಗಳು ಇನ್ನೂ ಅದೆಷ್ಟೋ ಬಗೆಯ ಹೊಸಹೊಸ ಸೌಲಭ್ಯಗಳನ್ನು ನಾವೆಲ್ಲ ನಿರೀಕ್ಷಿಸುವ ಹಾಗೆ ಮಾಡಿವೆ. ಏನೇನಾಗುತ್ತೋ, ಕಾದು ನೋಡೋಣ!

ಏಪ್ರಿಲ್ ೧೪, ೨೦೧೩ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

2 ಕಾಮೆಂಟ್‌ಗಳು:

shashimysooru ಹೇಳಿದರು...

ತುಂಬ ಉಪಯುಕ್ತವಾದ ಮಾಹಿತಿ. ಮೊಬೈಲ್ ರೂಪರೂಪಗಳನು ದಾಟಿ ಇನ್ನು ಯಾವ ಮುಟ್ಟುತ್ತದೋ ಕಾದು ನೋಡಬೇಕು. ಆದರೆ, ಈ ಮೊಬೈಲ್ ನೆಟ್ವರ್ಕ್ ನಿಂದಾಗಿ ಗುಬ್ಬಚ್ಚಿಗಳ ಸಂಕೆ ಕಮ್ಮಿಯಾಗಿದೆ ಅನ್ನುತ್ತಾರಲ್ಲ ಅದು ನಿಜವೇ? ಹಾಗೊಂದು ವೇಳೆ ನಿಜವೇ ಆಗಿದ್ದರೆ, ಅದು ನಿಜಕ್ಕೂ ಬೇಸರ ತರುವ ಸಂಗತಿ.

shashimysooru ಹೇಳಿದರು...

ತುಂಬ ಉಪಯುಕ್ತವಾದ ಮಾಹಿತಿ. ಮೊಬೈಲ್ ರೂಪರೂಪಗಳನು ದಾಟಿ ಇನ್ನು ಯಾವ ಮುಟ್ಟುತ್ತದೋ ಕಾದು ನೋಡಬೇಕು. ಆದರೆ, ಈ ಮೊಬೈಲ್ ನೆಟ್ವರ್ಕ್ ನಿಂದಾಗಿ ಗುಬ್ಬಚ್ಚಿಗಳ ಸಂಕೆ ಕಮ್ಮಿಯಾಗಿದೆ ಅನ್ನುತ್ತಾರಲ್ಲ ಅದು ನಿಜವೇ? ಹಾಗೊಂದು ವೇಳೆ ನಿಜವೇ ಆಗಿದ್ದರೆ, ಅದು ನಿಜಕ್ಕೂ ಬೇಸರ ತರುವ ಸಂಗತಿ.

badge