ಮಂಗಳವಾರ, ಏಪ್ರಿಲ್ 2, 2013

ಸ್ಪಾಮ್ ಅಲ್ಲ, ಇದು ಬೇಕನ್!


ಟಿ. ಜಿ. ಶ್ರೀನಿಧಿ

ಸ್ಪಾಮ್ ಬಗ್ಗೆ ಎಲ್ಲರಿಗೂ ಗೊತ್ತು. ಬೇಡದ ಮಾಹಿತಿಯ ಕಸವನ್ನು ಅನುಮತಿಯಿಲ್ಲದೆ ನಮ್ಮ ಇಮೇಲ್ ಖಾತೆಯೊಳಗೆ ತಂದು ಸುರಿಯುವ ಈ ಕೆಟ್ಟ ಅಭ್ಯಾಸದ ವಿರುದ್ಧ ಇಡೀ ಅಂತರಜಾಲವೇ ಹೋರಾಡುತ್ತಿದೆ ಎಂದರೂ ಸರಿಯೇ. ಸ್ಪಾಮ್ ಸಂದೇಶಗಳನ್ನು ಎಡೆಬಿಡದೆ ಕಳುಹಿಸುವ ಬಾಟ್‌ನೆಟ್‌ಗಳನ್ನು ಹುಡುಕಿ ಮಟ್ಟಹಾಕುವ ಹಾಗೂ ಆ ಬಾಟ್‌ನೆಟ್‌ಗಳು ರಕ್ತಬೀಜಾಸುರರಂತೆ ಮತ್ತೆ ತಲೆಯೆತ್ತುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಲೇ ಇರುತ್ತದೆ.

ಹೀಗಿರುವಾಗ ಇಮೇಲ್ ಲೋಕಕ್ಕೆ ಹೊಸದೊಂದು ಉಪದ್ರವದ ಪ್ರವೇಶವಾಗಿದೆ. ಅತ್ತ ಸ್ಪಾಮ್‌ನಂತೆ ಸಂಪೂರ್ಣ ಅನಪೇಕ್ಷಿತವೂ ಅಲ್ಲದ, ಇತ್ತ ನಾವು ನಿರೀಕ್ಷಿಸುವ ಉಪಯುಕ್ತ ಸಂದೇಶವೂ ಅಲ್ಲದ ಹೊಸಬಗೆಯ ಈ ತಾಪತ್ರಯ ಈಗಾಗಲೇ ಅನೇಕ ಬಳಕೆದಾರರಿಗೆ ಕಿರಿಕಿರಿಮಾಡುತ್ತಿದೆ.

ಇದಕ್ಕೆ ತಜ್ಞರು ಇಟ್ಟಿರುವ ಹೆಸರು ಬೇಕನ್. ಇಂಗ್ಲಿಷಿನಲ್ಲಿ 'ಬಾಡಿಸಿದ ಅಥವಾ ಉಪ್ಪುಹಚ್ಚಿದ ಹಂದಿಯ ಮಾಂಸ' ಎಂದು ಅರ್ಥಕೊಡುವ ಈ ಪದವೇ ಇಮೇಲ್ ಪೆಟ್ಟಿಗೆಯ ಈ ತಾಪತ್ರಯಕ್ಕೆ ನಾಮಕಾರಣವಾಗಿದೆ; ಮೂಲದಿಂದ ಪ್ರತ್ಯೇಕವಾಗಿ ಗುರುತಿಸಲೋ ಏನೋ ಈ ಹೊಸ ಹೆಸರಿನ ಸ್ಪೆಲಿಂಗ್ ಮಾತ್ರ ಕೊಂಚ ಬದಲಾಗಿ bacon ಬದಲು bacn ಆಗಿದೆ ಅಷ್ಟೆ.

ಸ್ಪಾಮ್ ಅಂದರೇನು ಎನ್ನುವುದು ನಮಗೆಲ್ಲ ಗೊತ್ತು. ಯಾವುದೋ ವಿಷಯ ಕುರಿತ ಜಾಹೀರಾತು, ಕಾನೂನು ವಿರೋಧಿ ಚಟುವಟಿಕೆಗಳಲ್ಲಿ ನೆರವಾಗುವ ಆಮಿಷ, ಮೋಸದ ಗಾಳ - ಹೀಗೆ ಅಪಾರ ವಿಷಯ ವೈವಿಧ್ಯ ಇಂತಹ ಸಂದೇಶಗಳಲ್ಲಿರುತ್ತದೆ. ಆದರೆ ಈ ಬೇಕನ್ ಅಂದರೇನು?

ಸ್ಪಾಮ್‌ನಂತೆ ಅನಪೇಕ್ಷಿತವಲ್ಲದ, ಆದರೆ ಬಹಳಷ್ಟು ಸಾರಿ ಅಷ್ಟೇ ನಿರುಪಯುಕ್ತವಾದ ಸಂದೇಶಗಳನ್ನು ಈ ಹೆಸರಿನಿಂದ ಗುರುತಿಸಲಾಗುತ್ತದೆ. ಯಾವುದೋ ಜಾಲತಾಣದಕ್ಕೆ ಹೋದಾಗ ನಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಅವರಿಂದ ಇಮೇಲ್ ಸಂದೇಶಗಳನ್ನು ಪಡೆಯಲು ಅನುಮತಿಸಿರುತ್ತೇವಲ್ಲ, ಬೇಕನ್ ಎಂದು ಕರೆಸಿಕೊಳ್ಳುವ ಈ ಸಂದೇಶಗಳು ಬರುವುದು ಅಂತಹ ತಾಣಗಳಿಂದಲೇ. ರಿಮೈಂಡರ್, ನ್ಯೂಸ್‌ಲೆಟರ್, ನೋಟಿಫಿಕೇಶನ್, ಸ್ಪೆಶಲ್ ಆಫರ್, ಇನ್ವಿಟೇಶನ್ - ಇಂತಹ ಹತ್ತಾರು ಹೆಸರುಗಳಲ್ಲಿ ಈ ಜಾಲತಾಣಗಳು ನಮಗೆ ಸಂದೇಶಗಳನ್ನು ಕಳುಹಿಸುತ್ತಲೇ ಇರುತ್ತವೆ. ನೇರವಾಗಿ ನಮಗೇ ಕಳುಹಿಸಿರುವುದರಿಂದ ಇವು ಸ್ಪಾಮ್ ತಡೆಯುವ ತಂತ್ರಾಂಶಕ್ಕೂ ಸಿಗದೆ ಬಹಳಷ್ಟು ಸಾರಿ ಸೀದಾ ಇನ್‌ಬಾಕ್ಸ್‌ನೊಳಕ್ಕೇ ಬಂದುಬಿಡುತ್ತವೆ; ಬಹಳಷ್ಟು ಸಾರಿ ಇಂತಹ ನಿರುಪಯುಕ್ತ ಸಂದೇಶಗಳ ರಾಶಿಯಲ್ಲಿ ನಾವು ನಿರೀಕ್ಷಿಸುತ್ತಿರುವ ಉಪಯುಕ್ತ ಸಂದೇಶಗಳನ್ನು ಹುಡುಕಿಕೊಳ್ಳುವುದೇ ಒಂದು ದೊಡ್ಡ ಕೆಲಸವಾಗಿಬಿಡುತ್ತದೆ.

ಅತ್ತ ಸ್ಪಾಮ್ ಎಂದೂ ಕರೆಸಿಕೊಳ್ಳದ ಇತ್ತ ಉಪಯುಕ್ತವೆಂಬ ಹಣೆಪಟ್ಟಿಯನ್ನೂ ಗಿಟ್ಟಿಸಿಕೊಳ್ಳದ ಈ ಎಡಬಿಡಂಗಿ ಸಂದೇಶಗಳು ನಮ್ಮಂತಹ ಬಳಕೆದಾರರ ತಾಳ್ಮೆಯನ್ನು ಪರೀಕ್ಷಿಸುವುದಂತೂ ನಿಜ. ಇಮೇಲ್ ತೆರೆಯುತ್ತಿದ್ದಂತೆ ಕಂಡ ಇಪ್ಪತ್ತೈದು ಸಂದೇಶಗಳಲ್ಲಿ ಇಪ್ಪತ್ತು, ಅಥವಾ ಅದಕ್ಕಿಂತ ಹೆಚ್ಚು ಇಂತಹ ಸಂದೇಶಗಳೇ ಆಗಿರುವ ಅನುಭವ ನಮ್ಮಲ್ಲಿ ಅನೇಕರಿಗೆ ಈಗಾಗಲೇ ಆಗಿರುತ್ತದೆ. ನಮ್ಮ ದೇಶದ ಮಟ್ಟಿಗೆ ಹೇಳುವುದಾದರೆ ಈಚಿನ ವರ್ಷಗಳಲ್ಲಿ ತಮ್ಮ ವ್ಯಾಪ್ತಿಯನ್ನು ಹಿಗ್ಗಿಸಿಕೊಳ್ಳುತ್ತಿರುವ ಆನ್‌ಲೈನ್ ಶಾಪಿಂಗ್ ತಾಣಗಳು ಇಂತಹ ಅದೆಷ್ಟೋ ಸಂದೇಶಗಳನ್ನು ನಮಗೆ ಕಳುಹಿಸುತ್ತಲೇ ಇರುತ್ತವಲ್ಲ!

ಇಂತಹ ಸಂದೇಶಗಳನ್ನು ಸೂಕ್ತವಾಗಿ ವಿಲೇವಾರಿ ಮಾಡುವುದು ಸದ್ಯಕ್ಕೆ ಕೊಂಚ ಕಿರಿಕಿರಿಯ ವಿಷಯವೇ. ಪದೇಪದೇ ಡಿಸ್ಕೌಂಟ್ ಆಫರುಗಳನ್ನು ಕಳುಹಿಸುವ ತಾಣದ ವಿಳಾಸವನ್ನು ನೇರವಾಗಿ ಸ್ಪಾಮ್ ಪಟ್ಟಿಗೆ ಸೇರಿಸಿಬಿಟ್ಟರೆ ಮುಂದೆಂದೋ ಆ ತಾಣದಿಂದ ಬರಬಹುದಾದ ಉಪಯುಕ್ತ ಸಂದೇಶಕ್ಕೂ ಸಂಚಕಾರ ಬಂದುಬಿಡುತ್ತದೆ; ನಮಗಿಷ್ಟವಾದ ಯಾವುದೋ ವಸ್ತು ಶೇ. ೯೦ರ ರಿಯಾಯಿತಿಯಲ್ಲಿ ಸಿಗುತ್ತಿದೆ ಎಂದು ಅವರು ಕಳುಹಿಸಿದ ಸಂದೇಶ ನಮಗೆ ತಲುಪದಿದ್ದರೆ ನಷ್ಟವಾಗುತ್ತದಲ್ಲ!? ಈ ಪರಿಸ್ಥಿತಿ ತಪ್ಪಿಸಲು ಇಂತಹ ಸಂದೇಶಗಳು ಪ್ರತ್ಯೇಕ ಫೋಲ್ಡರಿನೊಳಗೆ ಹೋಗುವಂತಹ ವ್ಯವಸ್ಥೆ ಮಾಡಿಕೊಳ್ಳಬಹುದು.

ಪರಿಚಿತ ತಾಣ ಅಥವಾ ವಿಳಾಸಗಳಿಂದ ಬರುವ ಸಂದೇಶಗಳಾದರೆ ಸರಿ, ನಾವು ನಿರೀಕ್ಷಿಸಿಯೇ ಇರದ ತಾಣವೊಂದು ಇದ್ದಕ್ಕಿದ್ದಂತೆ ಇಂತಹ ಸಂದೇಶಗಳನ್ನು ಕಳುಹಿಸಲು ಶುರುಮಾಡಿದರೆ ಏನುಮಾಡಬಹುದು? ಅಂತಹ ಪರಿಸ್ಥಿತಿಯಲ್ಲೂ ನೆರವಾಗಬಲ್ಲ ಕೆಲ ತಂತ್ರಾಂಶಗಳು, ಆನ್‌ಲೈನ್ ಸೇವೆಗಳು ಈಗಾಗಲೇ ಮಾರುಕಟ್ಟೆಗೆ ಬಂದಿವೆಯಂತೆ; ಅವು ಎಲ್ಲ ಇಮೇಲ್ ಸೇವೆಗಳಲ್ಲೂ ದೊರಕುವಂತಾಗಲು, ಎಲ್ಲರ ಕೈಗೆ-ಮೌಸ್‌ಗೆ ಎಟುಕಲು ಇನ್ನೂ ಕೊಂಚ ಸಮಯ ಬೇಕಾಗಬಹುದು ಅಷ್ಟೆ.

ಆದರೆ ಸ್ಪಾಮ್ ಸಂದೇಶಗಳನ್ನು ಗುರುತಿಸಿದಷ್ಟು ನೇರವಾಗಿ ಇಂತಹ ಸಂದೇಶಗಳನ್ನು ಗುರುತಿಸುವುದು ಕಷ್ಟ ಎಂದು ತಜ್ಞರು ಹೇಳುತ್ತಾರೆ. ಯಾವುದೋ ಸಂದರ್ಭದಲ್ಲಿ ಇಂತಹ ಮೂಲಗಳು ಇಮೇಲ್ ಸ್ವೀಕರಿಸಲು ಬಳಕೆದಾರರ ಒಪ್ಪಿಗೆಯನ್ನೂ ಪಡೆದುಕೊಂಡುಬಿಟ್ಟಿರುವುದರಿಂದ ಅವನ್ನು ಕಾನೂನುಬಾಹಿರವೆಂದು ಕರೆಯುವುದೂ ಸಾಧ್ಯವಾಗುವುದಿಲ್ಲ. ಹೀಗೆ ಬರುವ ಸಂದೇಶಗಳೂ ಅಷ್ಟೆ, ನೇರವಾಗಿ ನಮ್ಮನ್ನೇ ಉದ್ದೇಶಿಸಿ ಬರೆದಂತಿರುವುದರಿಂದ, ಹಾಗೂ ಆ ತಾಣದಲ್ಲಿ ನಮ್ಮ ಯಾವುದೋ ಚಟುವಟಿಕೆಯನ್ನು ಉಲ್ಲೇಖಿಸುವುದರಿಂದ (ಉದಾ: ಆನ್‌ಲೈನ್ ಖರೀದಿ) ಅದು ಸ್ಪಾಮ್ ಹೌದೋ ಅಲ್ಲವೋ ಎಂದು ಗುರುತಿಸುವುದೂ ಸವಾಲಿನ ಸಂಗತಿಯೇ ಸರಿ. ಬಹುತೇಕ ಸಂದರ್ಭಗಳಲ್ಲಿ ದೊಡ್ಡದೊಡ್ಡ ಸಂಸ್ಥೆಗಳೇ ಇಂತಹ ಸಂದೇಶಗಳನ್ನು ಕಳುಹಿಸುವುದರಿಂದ ತಮ್ಮ ಸಂದೇಶಗಳು ಸ್ಪಾಮ್ ವಿರೋಧಿ ತಂತ್ರಾಂಶಕ್ಕೆ ಸಿಕ್ಕದಂತೆ ಅವರು ವಿಶೇಷ ಎಚ್ಚರಿಕೆ ವಹಿಸುವುದೂ ಉಂಟಂತೆ.

ಅದೇನೇ ಇರಲಿ, ಚಾಪೆ ಕೆಳಗೆ ತೂರಿದ ಸ್ಪಾಮ್ ತಾಪತ್ರಯಕ್ಕೊಂದು ಮದ್ದು ಹುಡುಕುವಷ್ಟರಲ್ಲಿ ಬೇಕನ್ ಎಂಬ ಈ ಹೊಸ ಉಪದ್ರವ ರಂಗೋಲಿ ಕೆಳಗೇ ತೂರಲು ಹೊರಟಂತೆ ಕಾಣುತ್ತಿದೆ. ಸದ್ಯಕ್ಕೆ ಕಿರಿಕಿರಿ ಅನುಭವಿಸುವುದನ್ನು ಮುಂದುವರೆಸುತ್ತ ಈ ರೋಗಕ್ಕೊಂದು ಮದ್ದು ಸೃಷ್ಟಿಯಾಗುವವರೆಗೂ ಕಾಯುವುದೋ, ಅಥವಾ ವ್ಯವಸ್ಥಿತ ಇಮೇಲ್ ಬಳಕೆ ರೂಢಿಸಿಕೊಂಡು ಸಂವಹನಕ್ಕೇ ಒಂದು ವಿಳಾಸ-ಮಿಕ್ಕ ಕೆಲಸಗಳಿಗೇ ಒಂದು ವಿಳಾಸ ಎಂಬ ಸೂತ್ರ ಅಳವಡಿಸಿಕೊಳ್ಳುವುದೋ... ಅದು ಮಾತ್ರ ನಮಗೇ ಬಿಟ್ಟದ್ದು!

ಏಪ್ರಿಲ್ ೨, ೨೦೧೩ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge