ಶುಕ್ರವಾರ, ಮಾರ್ಚ್ 8, 2013

ಬಂತು ಬಂತು ಫೈರ್‌ಫಾಕ್ಸ್ ಓಎಸ್

ಟಿ. ಜಿ. ಶ್ರೀನಿಧಿ

ಈಗೊಂದು ಹತ್ತು ಹನ್ನೆರಡು ವರ್ಷಗಳಿಂದ ಮೊಬೈಲ್ ಬಳಸುತ್ತಿರುವವರನ್ನು ಕೇಳಿನೋಡಿ, ಅಂದಿನ ಮೊಬೈಲುಗಳು ಎಂದಾಕ್ಷಣ 'ಸ್ನೇಕ್'ನಂತಹ ಆಟಗಳು, ಟಾರ್ಚ್ ಲೈಟು, ಎಲ್ಲಬಗೆಯ ಸಂಗೀತವನ್ನೂ ಹೆಚ್ಚೂಕಡಿಮೆ ಒಂದೇರೀತಿ ಕೇಳಿಸುತ್ತಿದ್ದ ಮಾನೋಫೋನಿಕ್ ರಿಂಗ್‌ಟೋನುಗಳು - ಇಂತಹ ವಿಷಯಗಳೇ ಅವರ ಮನಸ್ಸಿಗೆ ಬರುತ್ತವೆ.

ನಿಜ, ಆಗ ನಾವು ಸ್ಮಾರ್ಟ್ ಆಗಿದ್ದೆವೋ ಇಲ್ಲವೋ, ನಮ್ಮ ಮೊಬೈಲುಗಳು ಮಾತ್ರ ಇಂದಿನಷ್ಟು 'ಸ್ಮಾರ್ಟ್' ಆಗಿರಲಿಲ್ಲ. ಕಳೆದ ದಶಕದಲ್ಲಿ ತಂತ್ರಜ್ಞಾನ ಅದಾವ ಮಟ್ಟದಲ್ಲಿ ಬೆಳವಣಿಗೆ ಕಂಡಿತೆಂದರೆ ಬರಿಯ ದೂರವಾಣಿ ಕರೆ ಮತ್ತು ಎಸ್ಸೆಮ್ಮೆಸ್‌ಗಷ್ಟೆ ಸೀಮಿತವಾಗಿದ್ದ ಮೊಬೈಲ್ ಫೋನುಗಳು 'ಸ್ಮಾರ್ಟ್'ಫೋನುಗಳಾಗಿ ಬದಲಾಗಿ ಕಂಪ್ಯೂಟರುಗಳ ಸರಿಸಮಕ್ಕೇ ಬೆಳೆದುನಿಂತವು. ಮೊಬೈಲ್ ಫೋನ್ ಎಂದರೆ ಕರೆಮಾಡಲಿಕ್ಕಷ್ಟೆ ಇರುವ ಸಾಧನ ಎಂಬ ಭಾವನೆ ಹೋಗಿ ಅದು ನಮ್ಮ ಅಂಗೈಯಲ್ಲಿರುವ ಕಂಪ್ಯೂಟರ್ ಎನಿಸುವಷ್ಟು ಮಟ್ಟಿಗಿನ ಬದಲಾವಣೆ ನಮ್ಮೆಲ್ಲರ ಕಣ್ಮುಂದೆಯೇ ಆಯಿತು ಎಂದರೂ ತಪ್ಪಲ್ಲವೇನೋ.

ಕಂಪ್ಯೂಟರಿನಲ್ಲಿ ನಮಗೆ ಬೇಕಾದ ತಂತ್ರಾಂಶವನ್ನಷ್ಟೆ ನಾವೇನು ನೇರವಾಗಿ ಬಳಸುವುದಿಲ್ಲವಲ್ಲ, ಅಲ್ಲಿನ ಎಲ್ಲ ಚಟುವಟಿಕೆಗಳನ್ನೂ ನಿಯಂತ್ರಿಸಲು ಕಾರ್ಯಾಚರಣ ವ್ಯವಸ್ಥೆ (ಆಪರೇಟಿಂಗ್ ಸಿಸ್ಟಂ, ಓಎಸ್) ಬೇಕೇಬೇಕು. ಮೊಬೈಲುಗಳು ಕಂಪ್ಯೂಟರುಗಳಾಗುವತ್ತ ಸಾಗಿದಂತೆ ಅವುಗಳಲ್ಲೂ ಹತ್ತಾರು ಬಗೆಯ ತಂತ್ರಾಂಶಗಳ ಬಳಕೆ ಶುರುವಾಯಿತಲ್ಲ, ಮೊಬೈಲ್ ಆಪರೇಟಿಂಗ್ ಸಿಸ್ಟಂಗಳ ಬಗ್ಗೆ ಹೊರಪ್ರಪಂಚದ ಗಮನ ಹರಿದದ್ದು ಆಗಲೇ.

ವಿಂಡೋಸ್, ಲಿನಕ್ಸ್ ಮುಂತಾದ ಕಂಪ್ಯೂಟರ್ ಓಎಸ್‌ಗಳಂತೆಯೇ ಮೊಬೈಲ್ ಫೋನುಗಳಲ್ಲಿ ಬಳಕೆಯಾಗುವ ಓಎಸ್ ಕೂಡ ಅವುಗಳ ಒಟ್ಟಾರೆ ಕಾರ್ಯಾಚರಣೆಯನ್ನು ನಿಯಂತ್ರಿಸುವ ಜವಾಬ್ದಾರಿ ಹೊತ್ತುಕೊಂಡಿರುತ್ತದೆ. ಮೊಬೈಲ್ ಫೋನ್ ಹಾಗೂ ಟ್ಯಾಬ್ಲೆಟ್ ಕಂಪ್ಯೂಟರಿನಂತಹ ಸಾಧನಗಳಲ್ಲಿ ಬಳಕೆಯಾಗುವ ಇಂತಹ ಓಎಸ್‌ಗಳ ರಚನೆಯಲ್ಲಿ ಅವುಗಳ ಸಣ್ಣಗಾತ್ರ, ಸ್ಪರ್ಶಸಂವೇದಿ ಗುಣ, ಬ್ಯಾಟರಿಯನ್ನು ಜವಾಬ್ದಾರಿಯುತವಾಗಿ ಬಳಸಬೇಕಾದ ಅಗತ್ಯಗಳನ್ನೆಲ್ಲ ಗಮನದಲ್ಲಿ ಇಟ್ಟುಕೊಂಡಿರಲಾಗುತ್ತದೆ. ಆಂಡ್ರಾಯ್ಡ್, ಐಓಎಸ್, ವಿಂಡೋಸ್, ಸಿಂಬಿಯನ್, ಬ್ಲ್ಯಾಕ್‌ಬೆರಿ ಓಎಸ್, ಸ್ಯಾಮ್‌ಸಂಗ್ ಬಡಾ ಮೊದಲಾದ ಮೊಬೈಲ್ ಓಎಸ್‌ಗಳ ಬಗ್ಗೆ ನಾವೆಲ್ಲ ಕೇಳಿಯೇ ಇದ್ದೇವಲ್ಲ, ಇದೀಗ ಈ ಸಾಲಿಗೆ ಮೊಜಿಲ್ಲಾ ಫೌಂಡೇಶನ್ನಿನ ಫೈರ್‌ಫಾಕ್ಸ್ ಓಎಸ್ ಕೂಡ ಸೇರಿಕೊಂಡಿದೆ.

ಫೈರ್‌ಫಾಕ್ಸ್ ಬ್ರೌಸರಿನಿಂದ ವಿಶ್ವಖ್ಯಾತಿ ಗಳಿಸಿಕೊಂಡ ಮೊಜಿಲ್ಲಾ ಫೌಂಡೇಶನ್ ತನ್ನ ಸ್ಥಾನ ಉಳಿಸಿಕೊಳ್ಳಲು ಈಚಿನ ವರ್ಷಗಳಲ್ಲಿ ಗೂಗಲ್ ಕ್ರೋಮ್ ಜೊತೆಗೆ ಪೈಪೋಟಿಗೆ ಇಳಿದಿರುವುದು ಈಗಾಗಲೇ ಹಳೆಯ ವಿಷಯ. ಇದೀಗ ಅದು ತನ್ನದೇ ಓಎಸ್ ಮೂಲಕ ಮೊಬೈಲ್ ಮಾರುಕಟ್ಟೆಯಲ್ಲೂ ಗೂಗಲ್‌ನ ಆಂಡ್ರಾಯ್ಡ್ ಜೊತೆಗೆ ಸ್ಪರ್ಧೆ ಪ್ರಾರಂಭಿಸುವ ಉದ್ದೇಶ ಇಟ್ಟುಕೊಂಡಿದೆ. ಈ ನಿಟ್ಟಿನಲ್ಲಿ ಈಗಾಗಲೇ ಹಲವು ಮೊಬೈಲ್ ತಯಾರಿಕಾ ಸಂಸ್ಥೆಗಳು ಮೊಜಿಲ್ಲಾ ಜೊತೆಗೆ ಕೈಜೋಡಿಸಿದ್ದು ಮೊದಲ ಫೈರ್‌ಫಾಕ್ಸ್ ಫೋನುಗಳು ಈಗಾಗಲೇ ಮಾರುಕಟ್ಟೆಯತ್ತ ಮುಖಮಾಡಿವೆ. ಎಲ್‌ಜಿ ಹಾಗೂ ಸೋನಿಯಂತಹ ದೊಡ್ಡ ಸಂಸ್ಥೆಗಳಿಂದಲೂ ಫೈರ್‌ಫಾಕ್ಸ್ ಫೋನುಗಳು ಹೊರಬರುವ ನಿರೀಕ್ಷೆಯಿದೆ.

ಗೂಗಲ್‌ನ ಕ್ರೋಮ್ ಓಎಸ್‌ನಂತೆಯೇ ಫೈರ್‌ಫಾಕ್ಸ್ ಓಎಸ್ ಕೂಡ ಕ್ಲೌಡ್ ಆಧರಿತ. ಅಂದರೆ, ಈ ಓಎಸ್ ಬಳಸುವ ಫೋನುಗಳಲ್ಲಿ ಆಪ್‌ಗಳಿರುತ್ತವಲ್ಲ, ಅವೆಲ್ಲವನ್ನೂ ನಾವು ಅಂತರಜಾಲ ಸಂಪರ್ಕದ ಮೂಲಕವೇ ಬಳಸಬೇಕಾಗುತ್ತದೆ. ಹಾಗಾಗಿ ನಮ್ಮ ಮಾಹಿತಿಯೆಲ್ಲ ಫೋನಿನಲ್ಲಿ ಶೇಖರವಾಗುವ ಬದಲು ಅಂತರಜಾಲದಲ್ಲೇ ಇರುತ್ತವೆ ಎನ್ನಬಹುದು.

ಗೂಗಲ್ ಕ್ರೋಮ್ ಓಎಸ್ ಬಳಕೆಯಾಗುವುದು ಲ್ಯಾಪ್‌ಟಾಪ್ ಕಂಪ್ಯೂಟರಿನಲ್ಲಿ, ಆ ಕಂಪ್ಯೂಟರ್ ಬಳಸುವಾಗ ಸದಾಕಾಲ ಇಂಟರ್‌ನೆಟ್ ಸಂಪರ್ಕ ಇರುವಂತೆ ನೋಡಿಕೊಳ್ಳುತ್ತೇವೆ ಎಂದು ಒಂದುವೇಳೆ ಹೇಳಬಹುದೇನೋ. ಆದರೆ ಮೊಬೈಲ್ ಫೋನಿಗೆ, ಅದೂ ನಮ್ಮಲ್ಲಿರುವಂತಹ ಪರಿಸ್ಥಿತಿಯಲ್ಲಿ, ಅದೇ ಸೂತ್ರ ಅನ್ವಯಿಸುವುದು ಸ್ವಲ್ಪ ಕಷ್ಟವಾಗಬಹುದು. ಅಲ್ಲದೆ ಬಹುತೇಕ ಎಲ್ಲ ಕೆಲಸಗಳನ್ನೂ ಅಂತರಜಾಲ ಸಂಪರ್ಕ ಆಧರಿಸಿಯೇ ಮಾಡಬೇಕಿರುವಾಗ ಮೊಬೈಲಿನ ಕಾರ್ಯನಿರ್ವಹಣೆಯೂ ಕೊಂಚ ನಿಧಾನವೆನಿಸಬಹುದು. ಈ ಸಂದೇಹಗಳ ನಡುವೆ ಫೈರ್‌ಫಾಕ್ಸ್ ಓಎಸ್ ಆಂಡ್ರಾಯ್ಡ್‌ಗೆ ಎಷ್ಟರಮಟ್ಟದಲ್ಲಿ ಸ್ಪರ್ಧೆ ನೀಡಬಹುದೆಂದು ಕಾದುನೋಡಬೇಕಿದೆ. ಅಷ್ಟೇ ಅಲ್ಲ, ಉಬುಂಟು ಓಎಸ್‌ನಂತಹ ಇನ್ನೂ ಕೆಲವು ಹೊಸ ಕಾರ್ಯಾಚರಣ ವ್ಯವಸ್ಥೆಗಳು ಮಾರುಕಟ್ಟೆಗೆ ಬರಲಿರುವ ನಿರೀಕ್ಷೆಯ ಹಿನ್ನೆಲೆಯಲ್ಲಿ ಮೊಬೈಲ್ ಪ್ರಪಂಚ ಹೇಗೆ ಬದಲಾಗಲಿದೆ ಎಂದು ನಿರೀಕ್ಷಿಸುವುದೂ ಕುತೂಹಲದ ಸಂಗತಿಯೇ.

ಮಾರ್ಚ್ ೮, ೨೦೧೩ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

1 ಕಾಮೆಂಟ್‌:

ಭಾವಜೀವಿ... ಹೇಳಿದರು...

ಫೈರ್ಫಾಕ್ಸ್ ಓಎಸ್‌ನಲ್ಲಿ ಸಮುದಾಯದ ಮುಖಾಂತರ ಸ್ಥಳೀಕರಣದ ಸಾಧ್ಯತೆ ಇರುವುದು ಇದರ ಇನ್ನೊಂದು ಪ್ಲಸ್‍ಪಾಯಿಂಡ್. ನೋಕಿಯಾದ ಒಂದಿಷ್ಟು ಬೇಸಿಕ್ ಫೋನ್‌ಗಳನ್ನು ಬಿಟ್ಟರೆ ಬೇರಾವ ಫೋನ್‌ಗಳಲ್ಲಿಯೂ ಕನ್ನಡದ ಕಾರ್ಯಾಚರಣೆ ಕಾಣಸಿಗುವುದಿಲ್ಲ.

badge