ಮಂಗಳವಾರ, ಮಾರ್ಚ್ 5, 2013

ಫೋಟೋ ಹಾದಿಯ ಸ್ನೇಹಿತರು


ಟಿ. ಜಿ. ಶ್ರೀನಿಧಿ

ಡಿಜಿಟಲ್ ಛಾಯಾಗ್ರಹಣ ಪ್ರಾರಂಭಿಸಲು ಮುಖ್ಯವಾಗಿ ಬೇಕಾದದ್ದು ಛಾಯಾಗ್ರಹಣದಲ್ಲಿ ಆಸಕ್ತಿ, ಜೊತೆಗೊಂದು ತಕ್ಕಮಟ್ಟಿಗೆ ಚೆನ್ನಾಗಿರುವ ಕ್ಯಾಮೆರಾ. ಆದರೆ ಚಿತ್ರಗಳ ಡಿಜಿಟಲ್ ಪ್ರಪಂಚದೊಳಗೆ ಮುಂದೆಮುಂದೆ ಸಾಗಿದಂತೆ ನಮ್ಮ ಪ್ರಯಾಣದಲ್ಲಿ ಸಾಥ್ ನೀಡಲು ಬೇಕಾದ ಪೂರಕ ಸಾಧನಗಳ ಪಟ್ಟಿ ಬೆಳೆಯುತ್ತ ಹೋಗುತ್ತದೆ. ಅಂತಹ ಕೆಲ ಸಾಧನಗಳ ಪರಿಚಯ ಇಲ್ಲಿದೆ.

* * *
ಬೆಳಕು ಕಡಿಮೆಯಿದ್ದಾಗ, ಅಥವಾ ಶಟರ್‌ಸ್ಪೀಡನ್ನು ಹೆಚ್ಚು ಅವಧಿಗೆ ಹೊಂದಿಸಿದ್ದಾಗ ನಾವು ಕ್ಲಿಕ್ಕಿಸುವ ಛಾಯಾಚಿತ್ರ ಅಸ್ಪಷ್ಟವಾಗಿ ಮೂಡುವ ("ಶೇಕ್ ಆಗುವ") ಸಾಧ್ಯತೆ ಹೆಚ್ಚು. ಕ್ಯಾಮೆರಾದ ಶಟರ್ ತೆಗೆದಿದ್ದಷ್ಟು ಹೊತ್ತು ಅದನ್ನು ಸ್ಥಿರವಾಗಿಡಬೇಕಲ್ಲ, ಕ್ಯಾಮೆರಾವನ್ನು ಕೈಯಲ್ಲಿ ಹಿಡಿದಾಗ ಕೆಲವೊಮ್ಮೆ ಅದು ಸಾಧ್ಯವಾಗದಿರುವುದೇ ಈ ಸಮಸ್ಯೆಗೆ ಕಾರಣವಾಗುತ್ತದೆ. ಇದನ್ನು ತಪ್ಪಿಸಲು ಕ್ಯಾಮೆರಾವನ್ನು ಯಾವುದಾದರೂ ಸ್ಥಿರ ವಸ್ತುವಿನ ಮೇಲೆ ಇಡಬಹುದು. ಆದರೆ ನಮಗೆ ಬೇಕಾದಾಗ ಬೇಕಾದ ಸ್ಥಳದಲ್ಲಿ ಸ್ಥಿರ ವಸ್ತುವನ್ನು ಎಲ್ಲಿಂದ ತರುವುದು?

ಇಂತಹ ಸನ್ನಿವೇಶಗಳಲ್ಲಿ ಟ್ರೈಪಾಡ್ ಅತ್ಯಂತ ಉಪಯುಕ್ತವಾಗಬಲ್ಲದು. ಮೂರು ಕಾಲುಗಳ ಈ ಸಾಧನದ ಮೇಲೆ ಕ್ಯಾಮೆರಾವನ್ನು ಇಟ್ಟರೆ ಶೇಕ್ ಆಗುವ ಸಮಸ್ಯೆಯಿಲ್ಲದೆ ಚಿತ್ರಗಳನ್ನು ಕ್ಲಿಕ್ಕಿಸಬಹುದು. ಅಷ್ಟೇ ಅಲ್ಲ, ಅದರ ಎತ್ತರವನ್ನು ನಮಗೆಷ್ಟು ಬೇಕೋ ಅಷ್ಟಕ್ಕೆ ಹೊಂದಿಸುವುದು ಕೂಡ ಸಾಧ್ಯ. ಚಿತ್ರಿಸಹೊರಟಿರುವ ವಿಷಯದತ್ತ ಕ್ಯಾಮೆರಾದ ನೋಟ ಎಷ್ಟು ಡಿಗ್ರಿ ಕೋನದಲ್ಲಿರಬೇಕು ಎನ್ನುವುದನ್ನೂ ನಾವೇ ಹೊಂದಿಸಬಹುದು. ಟೈಮರ್ ಅಥವಾ ರಿಮೋಟ್ ಸಹಾಯ ಬಳಸಿ ಛಾಯಾಗ್ರಹಣ ಮಾಡುವಾಗಲೂ ಟ್ರೈಪಾಡ್ ಬಹಳ ಉಪಯುಕ್ತ.

ನಾವು ಬಳಸುವ ಟ್ರೈಪಾಡ್ ನಮ್ಮ ಕ್ಯಾಮೆರಾದ ತೂಕವನ್ನು ತಡೆಯುತ್ತದೆಯೇ ಎಂದು ಪರೀಕ್ಷಿಸಿಕೊಳ್ಳುವುದು ಉತ್ತಮ. ಸಾಮಾನ್ಯ ಗುಣಮಟ್ಟದ ಟ್ರೈಪಾಡಿಗೆ ಭಾರೀ ಕ್ಯಾಮೆರಾವನ್ನು ಹೊಂದಿಸಿಟ್ಟರೆ ಸಣ್ಣ ಅಲುಗಾಟಕ್ಕೂ ಕ್ಯಾಮೆರಾ ಬಿದ್ದುಹೋಗುವ ಅಪಾಯವಿರುತ್ತದೆ. ಕ್ಯಾಮೆರಾದ ಕೋನವನ್ನು ಹೊಂದಿಸುವಾಗಲೂ ಎಚ್ಚರವಹಿಸದಿದ್ದರೆ ಇದೇ ಅಪಾಯ ಸಂಭವಿಸಬಹುದು.

ಮೂರು ಕಾಲುಗಳ ಟ್ರೈಪಾಡಿನಂತೆಯೇ ಒಂದೇ ಕಾಲಿನ 'ಮಾನೋಪಾಡ್' ಕೂಡ ಸಿಗುತ್ತದೆ. ಚಿತ್ರ ಕ್ಲಿಕ್ಕಿಸಲು ಹೆಚ್ಚುವರಿಯಾಗಿ ಸ್ವಲ್ಪ ಆಧಾರ ಸಾಕು ಎನ್ನುವಂತಿದ್ದಾಗ ಅದನ್ನೂ ಬಳಸಬಹುದು.

ಅಂದಹಾಗೆ ಟ್ರೈಪಾಡಿನ ಕಾಲುಗಳು ನೇರವಾಗಿಯೇ ಇರಬೇಕು ಎಂದೇನೂ ಇಲ್ಲ; 'ಗೊರಿಲ್ಲಾಪಾಡ್'ನಂತಹ ಟ್ರೈಪಾಡುಗಳಲ್ಲಿ ಬಾಗಿಸಬಹುದಾದಂತಹ ಕಾಲುಗಳಿರುತ್ತವೆ. ಮನೆಯ ಕಿಟಕಿ, ಮರದ ರೆಂಬೆ ಮುಂತಾದ ಜಾಗಗಳಿಗೆ ಕ್ಯಾಮೆರಾವನ್ನು ಭದ್ರವಾಗಿ ಜೋಡಿಸಿ ವಿಶಿಷ್ಟ ಚಿತ್ರಗಳನ್ನು ಸೆರೆಹಿಡಿಯುವ ಆಸೆಯಿದ್ದರೆ ಇಂತಹ ಟ್ರೈಪಾಡುಗಳನ್ನೂ ಬಳಸುವುದು ಸಾಧ್ಯ.

* * *
ಕ್ಯಾಮೆರಾ ಅಂದಮೇಲೆ ಅದರಲ್ಲಿ ಬ್ಯಾಟರಿ ಬಳಕೆ ಸಹಜವೇ ತಾನೆ. ಬಳಕೆಯಾಗುತ್ತಿರುವುದು ಸಾಮಾನ್ಯ ("ಪೆನ್‌ಟಾರ್ಚ್") ಬ್ಯಾಟರಿ ಅಲ್ಲದಿದ್ದರೆ ಕ್ಯಾಮೆರಾ ಕೊಂಡಾಗ ಬ್ಯಾಟರಿಯ ಜೊತೆಗೆ ಚಾರ್ಜರ್ ಕೂಡ ಬಂದಿರುತ್ತದೆ.

ಸಮಸ್ಯೆಯಿರುವುದು ಅಲ್ಲಲ್ಲ; ಕ್ಯಾಮೆರಾ ಜೊತೆಗೆ ಎಲ್ಲೋ ಹೊರಗಡೆ ಹೋಗಿದ್ದಾಗ ಬ್ಯಾಟರಿ ಖಾಲಿಯಾಗುತ್ತದಲ್ಲ, ಸಮಸ್ಯೆ ಉದ್ಭವಿಸುವುದು ಅಲ್ಲಿ. ಹೋದ ಜಾಗದಲ್ಲಿ ಅಂಗಡಿಯಿದ್ದರೆ, ಕ್ಯಾಮೆರಾದಲ್ಲಿರುವುದು ಸಾಮಾನ್ಯ ಬ್ಯಾಟರಿಯಾದರೆ ಮಾತ್ರ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು; ಇಲ್ಲದಿದ್ದರೆ ಕೈಕೈ ಹಿಸುಕಿಕೊಳ್ಳುವುದೇ ಗತಿ!

ಈ ಸಮಸ್ಯೆಯಿಂದ ಪಾರಾಗಲು ಹೆಚ್ಚುವರಿ ಬ್ಯಾಟರಿ ಇಟ್ಟುಕೊಂಡಿರುವುದು ಒಳ್ಳೆಯದು. ಸಾಮಾನ್ಯ ಬ್ಯಾಟರಿ ಬಳಸುವ ಕ್ಯಾಮೆರಾಗಳಿಗಾದರೆ ಎರಡು ಅಥವಾ ನಾಲ್ಕು ರೀಚಾರ್ಜಬಲ್ ಸೆಲ್ ಮತ್ತು ಚಾರ್ಜರ್ ಅತ್ಯುತ್ತಮ ಆಯ್ಕೆ ಎನ್ನಬಹುದು. ಲೀಥಿಯಂ ಅಯಾನ್‌ನಂತಹ ವಿಶೇಷ ಬಗೆಯ ಬ್ಯಾಟರಿಗಳಾದರೆ ನಮ್ಮ ವರಿ ಕಡಿಮೆ ಮಾಡಿಕೊಳ್ಳಲು ಒಂದು ಹೆಚ್ಚುವರಿ ಬ್ಯಾಟರಿಯನ್ನು ಕೊಂಡಿಟ್ಟುಳ್ಳುವುದು ಒಳಿತು.

ಮೆಮೊರಿ ಕಾರ್ಡುಗಳಿಗೂ ಇದೇ ಸೂತ್ರ ಅನ್ವಯಿಸುತ್ತದೆ. ಕ್ಯಾಮೆರಾದಲ್ಲಿರುವ ಕಾರ್ಡು ಚಿತ್ರಗಳಿಂದ ತುಂಬಿದಾಗಲೋ ಅನಿರೀಕ್ಷಿತವಾಗಿ ಕೈಕೊಟ್ಟಾಗಲೋ ಹೆಚ್ಚುವರಿ ಕಾರ್ಡು ನಮ್ಮ ನೆರವಿಗೆ ಬರುತ್ತದೆ. ದೀರ್ಘ ಪ್ರವಾಸವಾಗಿದ್ದು ಲ್ಯಾಪ್‌ಟಾಪ್ ಕೊಂಡೊಯ್ಯುವುದು ಕಷ್ಟ ಎನ್ನುವುದಾದರೆ ಕಾರ್ಡುಗಳನ್ನು ಕೊಂಚ ಹೆಚ್ಚಿನ ಸಂಖ್ಯೆಯಲ್ಲೇ ಇಟ್ಟುಕೊಂಡಿರುವುದು ಒಳಿತು.

ಚಿತ್ರಗಳನ್ನು ಆಗಿಂದಾಗ್ಗೆ ವರ್ಗಾಯಿಸಿಕೊಂಡು ಕಾರ್ಡು ಖಾಲಿ ಮಾಡುವುದಕ್ಕೆ ಕಂಪ್ಯೂಟರ್ ಬಳಸುತ್ತೇವಲ್ಲ, ಕಾರ್ಡ್ ಜೋಡಿಸುವ ಸೌಲಭ್ಯ ನಾವು ಬಳಸುವ ಎಲ್ಲ ಕಂಪ್ಯೂಟರುಗಳಲ್ಲೂ ಇರುತ್ತದೆ ಎನ್ನಲಾಗುವುದಿಲ್ಲ. ಹಾಗಾಗಿ ಮೆಮೊರಿ ಕಾರ್ಡುಗಳ ಜೊತೆಗೆ ಒಂದು ಕಾರ್ಡ್ ರೀಡರ್ ಉಪಕರಣವನ್ನೂ ಇಟ್ಟುಕೊಂಡಿರುವುದು ಒಳ್ಳೆಯ ಅಭ್ಯಾಸ. ಒಂದಕ್ಕಿಂತ ಹೆಚ್ಚು ಬಗೆಯ ಕಾರ್ಡುಗಳನ್ನು ಓದಬಲ್ಲ ರೀಡರುಗಳಿದ್ದರೆ ಇನ್ನೂ ಒಳ್ಳೆಯದು.

ಬಹುತೇಕ ಕ್ಯಾಮೆರಾಗಳನ್ನು ಕೇಬಲ್ ಮೂಲಕ ಕಂಪ್ಯೂಟರಿಗೆ ಜೋಡಿಸಬಹುದಾದರೂ ಕಾರ್ಡ್ ರೀಡರ್ ಬಳಕೆ ಅದಕ್ಕಿಂತ ಸುಲಭ ಎನ್ನಿಸುತ್ತದೆ.

* * *
ಕ್ಯಾಮೆರಾ ಬಳಕೆ ಸುಲಲಿತವಾಗಿರಬೇಕೆಂದರೆ ನಾವು ಅದನ್ನು ಜೋಪಾನವಾಗಿಟ್ಟುಕೊಳ್ಳಬೇಕಾದ್ದು ಅಗತ್ಯ. ಹಾಗಾಗಿ ಕ್ಯಾಮೆರಾ ಜೊತೆಗೆ ಬಳಸುವ ಸಾಧನಗಳ ಪಟ್ಟಿಯಲ್ಲಿ ಕ್ಯಾಮೆರಾ ಬ್ಯಾಗಿಗೂ ಒಂದು ಸ್ಥಾನವಿದೆ.

ನಾವು ಬಳಸುತ್ತಿರುವುದು ಯಾವುದೇ ರೀತಿಯ ಕ್ಯಾಮೆರಾ ಆದರೂ ಅದಕ್ಕೊಂದು ಒಳ್ಳೆಯ ಬ್ಯಾಗ್ ಇಟ್ಟುಕೊಳ್ಳುವುದು ಅನುಕೂಲಕರ. ಚಾರ್ಜರ್, ಕೇಬಲ್, ಹೆಚ್ಚುವರಿ ಮೆಮೊರಿ ಕಾರ್ಡ್, ಬ್ಯಾಟರಿ - ಹೀಗೆ ಸಂಬಂಧಪಟ್ಟ ವಸ್ತುಗಳನ್ನೆಲ್ಲ ಕ್ಯಾಮೆರಾದ ಜೊತೆಗೇ ವ್ಯವಸ್ಥಿತವಾಗಿ ಇಟ್ಟುಕೊಳ್ಳಲು ಅಂಥದ್ದೊಂದು ಬ್ಯಾಗ್ ಸಹಾಯಮಾಡುತ್ತದೆ. ಡಿಎಸ್‌ಎಲ್‌ಆರ್ ಕ್ಯಾಮೆರಾ ಆದರಂತೂ ಅದರ ಲೆನ್ಸುಗಳು, ಅಟ್ಯಾಚ್‌ಮೆಂಟುಗಳು, ಫ್ಲ್ಯಾಶ್ ಇತ್ಯಾದಿಗಳನ್ನೆಲ್ಲ ವ್ಯವಸ್ಥಿತವಾಗಿ, ಜೋಪಾನವಾಗಿ ಇಟ್ಟುಕೊಳ್ಳಲು ಒಳ್ಳೆಯ ಕ್ಯಾಮೆರಾ ಬ್ಯಾಗ್ ಬೇಕೇಬೇಕಾಗುತ್ತದೆ.

ಹಲವು ಸಂದರ್ಭಗಳಲ್ಲಿ ಕ್ಯಾಮೆರಾ ಕೊಳ್ಳುವಾಗಲೇ ಒಂದು ಬ್ಯಾಗನ್ನೂ ಉಚಿತವಾಗಿ ಕೊಡುವ ಅಭ್ಯಾಸ ಇರುತ್ತದೆ. ಅದು ಸಾಕಾಗುವುದಿಲ್ಲ ಎಂದಾಗ ಉತ್ತಮ ಗುಣಮಟ್ಟದ ಒಂದು ಬ್ಯಾಗನ್ನು ಕೊಂಡುಕೊಳ್ಳುವುದು ಒಳಿತು.

ಕ್ಯಾಮೆರಾದ ಯೋಗಕ್ಷೇಮ ನೋಡಿಕೊಳ್ಳುವಾಗ ಕೆಲವು ಸಣ್ಣಪುಟ್ಟ ಸಂಗತಿಗಳನ್ನೂ ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಕ್ಯಾಮೆರಾ ಲೆನ್ಸಿನ ಮುಚ್ಚಳವನ್ನು ಜೋಪಾನಮಾಡುವುದು, ಕ್ಯಾಮೆರಾ ಲೆನ್ಸನ್ನು ಶುಚಿಯಾಗಿಟ್ಟುಕೊಳ್ಳುವುದು - ಇವು ಅಂತಹ ಕೆಲ ಸಂಗತಿಗಳು. ಹಾಗೆಯೇ ಕ್ಯಾಮೆರಾದ ಎಲ್‌ಸಿಡಿ ಪರದೆಯನ್ನು ಗೀರುಗಳಿಂದ ಪಾರುಮಾಡಲು ಅದಕ್ಕೊಂದು ಕವಚವನ್ನೂ ತೊಡಿಸಬಹುದು. ಎಸ್‌ಎಲ್‌ಆರ್ ಕ್ಯಾಮೆರಾದ ಲೆನ್ಸುಗಳನ್ನು ಕಾಪಾಡಲು ಅವುಗಳ ಮುಂದೆ 'ಯುವಿ ಫಿಲ್ಟರ್' ಅಳವಡಿಸುವುದು ಕೂಡ ಸಾಮಾನ್ಯ ಅಭ್ಯಾಸ.

ಮಾರ್ಚ್ ೫, ೨೦೧೩ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge