ಮಂಗಳವಾರ, ಮಾರ್ಚ್ 19, 2013

ಕಂಪ್ಯೂಟರ್ ಮತ್ತು ನಾವು : ಭಾಗ ೧


ಟಿ. ಜಿ. ಶ್ರೀನಿಧಿ

ಕಳೆದ ಶತಮಾನದ ಅತ್ಯಂತ ಮಹತ್ವದ ಆವಿಷ್ಕಾರಗಳಲ್ಲಿ ಕಂಪ್ಯೂಟರಿನದು ಪ್ರಮುಖ ಸ್ಥಾನ. ಬಹುಶಃ ನಾವೆಲ್ಲ ಈ ಮಾತನ್ನು ಬೇಜಾರು ಬರುವಷ್ಟು ಬಾರಿ ಕೇಳಿಬಿಟ್ಟಿದ್ದೇವೆ. ಬಹಳ ಕಡಿಮೆ ಸಮಯದಲ್ಲಿ ಮಾಹಿತಿ ತಂತ್ರಜ್ಞಾನ ನಮ್ಮ ಬದುಕನ್ನೆಲ್ಲ ಆವರಿಸಿಕೊಂಡಿರುವ ಪರಿಯ ಬಗೆಗೆ ಕೇಳುವುದು-ಓದುವುದು ಹಾಗಿರಲಿ, ಅದರ ಅನುಭವವೇ ನಮ್ಮೆಲ್ಲರಿಗೂ ಆಗಿದೆ.

ಹಾಗಾದರೆ ಕಂಪ್ಯೂಟರ್ ನಮ್ಮ ಮೇಲೆ ಬೀರಿರುವ ಪ್ರಭಾವ ಎಂಥದ್ದು? ಕೆಲಸಗಳನ್ನು ಸುಲಭಮಾಡಿದ್ದು, ಹೊಸಹೊಸ ಸೌಲಭ್ಯಗಳನ್ನು ಸೃಷ್ಟಿಸಿಕೊಟ್ಟಿದ್ದು - ಕಂಪ್ಯೂಟರ್ ತಂದ ಬದಲಾವಣೆಗಳು ಇಷ್ಟಕ್ಕೆ ಮಾತ್ರ ಸೀಮಿತವೆ?

ಈ ವಿಷಯದ ಕುರಿತು ಅಮೆರಿಕಾದ ಲೇಖಕ ನಿಕೊಲಸ್ ಕಾರ್ ೨೦೦೮ರಲ್ಲಿ 'ಇಸ್ ಗೂಗಲ್ ಮೇಕಿಂಗ್ ಅಸ್ ಸ್ಟುಪಿಡ್?' ಎಂಬುದೊಂದು ಲೇಖನ ಬರೆದಿದ್ದರು. ಕಂಪ್ಯೂಟರಿನ, ಅದರಲ್ಲೂ ಅಂತರಜಾಲದ ಮೇಲಿನ ಅತಿಯಾದ ಅವಲಂಬನೆಯಿಂದಾಗಿ ನಮ್ಮ ಮೇಲೆ ಏನೆಲ್ಲ ಪರಿಣಾಮಗಳಾಗುತ್ತಿವೆ ಎನ್ನುವ ನಿಟ್ಟಿನಲ್ಲಿ ಈ ಲೇಖನ ಹಲವು ಪ್ರಶ್ನೆಗಳನ್ನು ಮುಂದಿಟ್ಟಿತ್ತು.

ಯಾವುದೋ ಪುಸ್ತಕವನ್ನೋ ಸುದೀರ್ಘ ಲೇಖನವನ್ನೋ ಓದುವ ನಮ್ಮ ತಾಳ್ಮೆ ಈಚಿನ ವರ್ಷಗಳಲ್ಲಿ ಎಲ್ಲಿ ಹೋಗಿದೆ? ಕೆಲವು ಪುಟಗಳನ್ನು ಓದುತ್ತಿದ್ದಂತೆ ನಮ್ಮ ಏಕಾಗ್ರತೆ ಮಾಯವಾಗುವುದು ಏಕೆ?

ಈ ಪ್ರಶ್ನೆಗಳ ಹಿಂದೆ ಹೊರಟ ನಿಕೊಲಸ್ ತಲುಪಿದ್ದು ಕಂಪ್ಯೂಟರ್ ಪ್ರಪಂಚಕ್ಕೆ.

ಕಳೆದ ಒಂದು ದಶಕಕ್ಕೂ ಹೆಚ್ಚು ಅವಧಿಯಲ್ಲಿ ನಾವು ಅಂತರಜಾಲದಲ್ಲಿ ಕಳೆಯುವ ಸಮಯ ಹೆಚ್ಚುತ್ತಲೇ ಹೋಗಿದೆ. ಬೇಕಾದ ಮಾಹಿತಿಯನ್ನು ಹುಡುಕಲು, ಸುಮ್ಮನೆ ಗೊತ್ತುಗುರಿಯಿಲ್ಲದೆ ಅಲೆದಾಡಲು, ನಮಗೆ ಗೊತ್ತಿರುವ ಮಾಹಿತಿಯನ್ನು ಸೇರಿಸಲು - ಹೀಗೆ ಹತ್ತಾರು ಉದ್ದೇಶಗಳಿಗಾಗಿ ನಾವು ಕಂಪ್ಯೂಟರ್ ಪ್ರಪಂಚದಲ್ಲಿರುತ್ತೇವೆ. ಈ ಹಿಂದೆ ಲೈಬ್ರರಿಗಳಲ್ಲೋ ಮನೆಯ ಅಟ್ಟದಲ್ಲೋ ಹುಡುಕಾಡಿ ಪಡೆಯಬೇಕಿದ್ದ ಮಾಹಿತಿಯೆಲ್ಲ ಕೆಲವೇ ಕ್ಲಿಕ್ಕುಗಳಲ್ಲಿ ನಮ್ಮ ಮುಂದೆ ಪ್ರತ್ಯಕ್ಷವಾಗಿಬಿಡುತ್ತಿದೆ. ಬೇರೇನೂ ಕೆಲಸವಿಲ್ಲದಾಗಲೂ, ಬರಿಯ ಟೈಮ್‌ಪಾಸ್ ಚಟುವಟಿಕೆಯಾಗಿಯೂ ನಾವು ಕಂಪ್ಯೂಟರಿನತ್ತ ಮುಖಮಾಡುತ್ತಿದ್ದೇವೆ.

ಇಷ್ಟೆಲ್ಲ ಮಾಹಿತಿಯಿರುವ ಪ್ರಪಂಚಕ್ಕೆ ನಮಗೆ ಮುಕ್ತ ಪ್ರವೇಶ ದೊರಕಿರುವುದು ಖಂಡಿತಾ ಒಳ್ಳೆಯ ಸಂಗತಿಯೇ. ನಮ್ಮ ಆಲೋಚನೆಗಳಿಗೆ ಈ ಪ್ರಪಂಚ ಅನೇಕ ಹೊಸ ಆಯಾಮಗಳನ್ನು ನೀಡುತ್ತಿದೆ. ಈ ಬಗ್ಗೆ ಬೇಕಾದಷ್ಟು ಒಳ್ಳೆಯ ಮಾತುಗಳನ್ನು ನಾವೆಲ್ಲ ಈಗಾಗಲೇ ಕೇಳಿದ್ದೇವೆ; ಕಂಪ್ಯೂಟರುಗಳು ನಮ್ಮ ಬದುಕನ್ನು ಬದಲಿಸಿದ ರೀತಿಯನ್ನು ಕಣ್ಣಾರೆ ಕಂಡೂ ಇದ್ದೇವೆ.

ಆದರೆ ಇದೇ ಸಮಯದಲ್ಲಿ ಕಂಪ್ಯೂಟರುಗಳು ನಾವು ಆಲೋಚಿಸುವ ರೀತಿಯನ್ನೂ ಬದಲಿಸುತ್ತಿವೆ. ದೊಡ್ಡದೊಂದು ಪುಸ್ತಕವನ್ನೋ ಸುದೀರ್ಘ ಲೇಖನವನ್ನೋ ಓದುವ ನಮ್ಮ ತಾಳ್ಮೆ ನಿಧಾನಕ್ಕೆ ಕಡಿಮೆಯಾಗುತ್ತಿರುವುದಕ್ಕೂ ಪ್ರಾಯಶಃ ಇದೇ ಕಾರಣವಿರಬಹುದು. ಅಂತರಜಾಲ ಸಂಪರ್ಕದ ಮೂಲಕ ಹರಿದುಬರುವ ಮಾಹಿತಿಯ ಪ್ರಮಾಣ ಸೆಕೆಂಡಿಗೆ ಕೆಲವೇ ಕಿಲೋಬೈಟುಗಳಿಂದ ಹಲವು ಮೆಗಾಬೈಟುಗಳಿಗೆ ಏರಿದೆಯಲ್ಲ, ನಮಗೆ ಮಾಹಿತಿ ಸಿಗುವ ವೇಗವೂ ಹಾಗೆಯೇ ಏರಲಿ ಎನ್ನುವ ನಿರೀಕ್ಷೆ ನಮ್ಮಲ್ಲಿ ಮೂಡಿದೆ. ಮಾಹಿತಿಯ ಸಮುದ್ರದಾಳಕ್ಕೆ ಇಳಿದು ಅಲ್ಲಿನ ಸೊಗಸನ್ನು ನಿಧಾನಕ್ಕೆ ಆಸ್ವಾದಿಸುವ ತಾಳ್ಮೆ ಕಡಿಮೆಯಾಗಿದೆ; ಮೋಟಾರು ದೋಣಿಯಲ್ಲಿ ಕುಳಿತು ನೀರಿನ ಮೇಲೆ ಭರ್ರನೆ ಹೋಗುವುದಕ್ಕೇ ಈಗ ಡಿಮ್ಯಾಂಡು ಜಾಸ್ತಿ.

ಇದು ಯಾರೋ ಒಬ್ಬರ ಅಭಿಪ್ರಾಯವೇನಲ್ಲ. ಲಂಡನ್ನಿನ ಯೂನಿವರ್ಸಿಟಿ ಕಾಲೇಜಿನ ತಜ್ಞರು ಐದು ವರ್ಷಗಳ ಅವಧಿಯಲ್ಲಿ ನಡೆಸಿದ ಒಂದು ಅಧ್ಯಯನ ಕೂಡ ಹೀಗೆಯೇ ಹೇಳಿದೆ. ಎರಡು ಸಂಶೋಧನಾ ಜಾಲತಾಣಗಳಲ್ಲಿ ಓದುಗರು ಏನೆಲ್ಲ ಮಾಡುತ್ತಾರೆ ಎನ್ನುವುದನ್ನು ಈ ಅಧ್ಯಯನದ ಸಂದರ್ಭದಲ್ಲಿ ಗಮನಿಸಲಾಗಿತ್ತು. ಓದುಗರು ಈ ತಾಣಗಳಿಗೆ ಬಂದಾಗ ಯಾವ ಲೇಖನದ ಮೇಲೂ ತಮ್ಮ ಗಮನ ಕೇಂದ್ರೀಕರಿಸುವುದಿಲ್ಲ; ಯಾವ ಲೇಖನ ತೆಗೆದರೂ ಅದರಲ್ಲಿ ಒಂದೋ ಎರಡೋ ಪುಟ ಓದುವಷ್ಟರಲ್ಲೇ ಇನ್ನೊಂದು ಲಿಂಕಿನತ್ತ ಹೊರಟುಬಿಡುತ್ತಾರೆ ಎನ್ನುವ ಅಂಶ ಈ ಅಧ್ಯಯನದಿಂದ ತಿಳಿದುಬಂತು. ಗಂಭೀರ ಓದಿಗಿಂತ ಸುಮ್ಮನೆ ಕಣ್ಣಾಡಿಸುವ ಅಭ್ಯಾಸ ಇತ್ತೀಚೆಗೆ ಬೆಳೆಯುತ್ತಿದೆ; ಈ ಅಭ್ಯಾಸವನ್ನು ಬೆಳೆಸುವಲ್ಲಿ ಕಂಪ್ಯೂಟರುಗಳು ಮಹತ್ವದ ಪಾತ್ರ ವಹಿಸುತ್ತಿವೆ ಎಂದು ಈ ಅಧ್ಯಯನ ನಡೆಸಿದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಡಿಜಿಟಲ್ ಲೋಕದಲ್ಲಿ ನಮ್ಮನ್ನು ಆವರಿಸಿಕೊಳ್ಳುವ ಮಾಹಿತಿಯ ಪ್ರಮಾಣ ಹಿಂದೆಂದಿಗಿಂತಲೂ ಹೆಚ್ಚಿದೆ. ಲ್ಯಾಪ್‌ಟಾಪ್-ಡೆಸ್ಕ್‌ಟಾಪ್ ಕಂಪ್ಯೂಟರುಗಳಲ್ಲಿ, ಟ್ಯಾಬ್ಲೆಟ್ಟುಗಳಲ್ಲಿ, ಮೊಬೈಲ್ ಫೋನುಗಳಲ್ಲಿ - ಎಲ್ಲೆಲ್ಲೂ ಮಾಹಿತಿಯ ಪ್ರವಾಹವೇ ನಮ್ಮತ್ತ ಹರಿದುಬರುತ್ತಿದೆ. ಹೀಗಾಗಿ ಕೆಲ ದಶಕಗಳ ಹಿಂದಿನ ಪರಿಸ್ಥಿತಿಗೆ ಹೋಲಿಸಿದರೆ ನಾವು ಈಗ ಹತ್ತಾರು ಪಟ್ಟು ಹೆಚ್ಚಿನ ಪ್ರಮಾಣದ ಮಾಹಿತಿಯೊಡನೆ ಸಂಪರ್ಕಕ್ಕೆ ಬರುತ್ತಿದ್ದೇವೆ ನಿಜ. ಆದರೆ ಅದನ್ನು ನಾವು ಪಡೆದುಕೊಳ್ಳುವ ವಿಧಾನವೂ ಹಿಂದಿನ ಪರಿಸ್ಥಿತಿಗೆ ಹೋಲಿಸಿದರೆ ಗಮನಾರ್ಹವಾಗಿ ಬದಲಾಗಿದೆ. ಮುದ್ರಣ ತಂತ್ರಜ್ಞಾನದ ಜೊತೆಗೆ ಬೆಳೆದ ಸುದೀರ್ಘ ಓದಿನ ಅಭ್ಯಾಸ ಕಂಪ್ಯೂಟರ್ ತಂತ್ರಜ್ಞಾನದಿಂದಾಗಿ ಮಾಹಿತಿಯತ್ತ ಕ್ಷಿಪ್ರವಾಗಿ ಕಣ್ಣಾಡಿಸುವ ಅಭ್ಯಾಸವಾಗಿ ಬದಲಾಗುತ್ತಿದೆ.

ಹಲವು ಸಂದರ್ಭಗಳಲ್ಲಿ ಇದು ಹೆಚ್ಚು ಸಮರ್ಥವಾದ ವಿಧಾನವಾಗಿರುತ್ತದೆ, ಹಾಗೂ ನಮಗೆ ಬೇಕಾದ ಮಾಹಿತಿ ಬಹಳ ಕ್ಷಿಪ್ರವಾಗಿ ನಮಗೆ ಸಿಕ್ಕಿಬಿಡುತ್ತದೆ ಎನ್ನುವುದು ಎಷ್ಟು ನಿಜವೋ ಸುದೀರ್ಘ ಅವಧಿಯಲ್ಲಿ ಬೆಳೆದುಬಂದಿದ್ದ ಅಭ್ಯಾಸಗಳನ್ನು ಕಂಪ್ಯೂಟರುಗಳು ಬಹಳ ಬೇಗನೆ ಬದಲಿಸುತ್ತಿವೆ ಎನ್ನುವುದೂ ಅಷ್ಟೇ ನಿಜ ಎನ್ನಬೇಕಾಗುತ್ತದೆ.

ಅಷ್ಟೇ ಏಕೆ, ಹೊಸ ಅಭ್ಯಾಸಗಳು ಬೆಳೆಯುತ್ತಿದ್ದಂತೆ ಅವು ನಮ್ಮ ಮೆದುಳಿನ ಮೇಲೂ ಪ್ರಭಾವ ಬೀರುತ್ತವೆ ಎಂದು ತಜ್ಞರು ಹೇಳುತ್ತಾರೆ. ಹಿಂದಿನ ಅಭ್ಯಾಸಗಳಿಗೆ ಸೂಕ್ತವಾಗಿ ಹೊಂದಿಕೊಂಡಿದ್ದ ಮೆದುಳಿನ ರಚನೆ ಇದೀಗ ನಮ್ಮ ಹೊಸ ಅಭ್ಯಾಸಗಳಿಗೂ ಹೊಂದಿಕೊಳ್ಳುತ್ತಿದೆಯಂತೆ!

ಮಾರ್ಚ್ ೧೯, ೨೦೧೩ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

(ಲೇಖನದ ಎರಡನೇ ಭಾಗ, ಮುಂದಿನ ವಾರ)

ಕಾಮೆಂಟ್‌ಗಳಿಲ್ಲ:

badge