ಮಂಗಳವಾರ, ಮಾರ್ಚ್ 12, 2013

ಆನ್‌ಲೈನ್ ಹಣ 'ಬಿಟ್‍ಕಾಯಿನ್'


ಟಿ. ಜಿ. ಶ್ರೀನಿಧಿ

ತಂತ್ರಜ್ಞಾನ ಬೆಳೆದಂತೆ ಹಣದ ಬಳಕೆ, ನಮಗೆ ಪರಿಚಿತವಿರುವ ನೋಟು-ನಾಣ್ಯಗಳ ರೂಪದಲ್ಲಿ, ಕಡಿಮೆಯಾಗುತ್ತ ಹೋಗುತ್ತದೆ ಎನ್ನುವ ಹೇಳಿಕೆ ಬಹಳ ದಿನಗಳಿಂದಲೇ ಕೇಳಿಬರುತ್ತಿದೆ. ಸಿನಿಮಾ ಟಿಕೇಟಿನಿಂದ ಮನೆಯ ಕಂದಾಯದವರೆಗೆ ಪ್ರತಿಯೊಂದಕ್ಕೂ ಅಂತರಜಾಲದಲ್ಲೇ ಹಣಪಾವತಿಸುವ ನಾವು ಈ ಬದಲಾವಣೆಯನ್ನು ನೋಡುತ್ತಲೂ ಇದ್ದೇವೆ. ಈ ಹಿಂದೆ ಅಂಗಡಿ ಯಜಮಾನರಿಗೋ ಕೌಂಟರಿನಲ್ಲಿ ಕೂತ ಗುಮಾಸ್ತರಿಗೋ ಕೊಡುತ್ತಿದ್ದ ಗರಿಗರಿ ನೋಟುಗಳ ಸ್ಥಾನದಲ್ಲಿ ಇದೀಗ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಆನ್‌ಲೈನ್ ಬ್ಯಾಂಕಿಂಗ್ ಇತ್ಯಾದಿಗಳು ಬಳಕೆಯಾಗುತ್ತಿವೆ.

ಇಲ್ಲಿ ನೋಟು-ನಾಣ್ಯಗಳನ್ನು ಎಣಿಸಿಕೊಡುವ ಬದಲಿಗೆ ಕೆಲವೇ ಕ್ಲಿಕ್ಕುಗಳಲ್ಲಿ ಹಣ ವರ್ಗಾವಣೆಯಾಗುತ್ತದೆ, ನಿಜ. ಆದರೆ ನಾವು ಯಾವ ವಿಧಾನವನ್ನೇ ಬಳಸಿದರೂ ಅಂತಿಮವಾಗಿ ವಹಿವಾಟು ನಡೆಯುವುದು ಮಾತ್ರ ಈಗ ಚಲಾವಣೆಯಲ್ಲಿರುವ ಹಣಕಾಸು ವ್ಯವಸ್ಥೆಯಲ್ಲಿಯೇ. ಅಂದರೆ ಬದನೆಕಾಯಿ ಕೊಂಡರೂ ಬೆಂಜ್ ಕಾರು ಕೊಂಡರೂ ನಾವು ಮಾತ್ರ ಕೊನೆಗೆ ರೂಪಾಯಿಗಳಲ್ಲೇ ಪಾವತಿಸಬೇಕಾದ್ದು ಅನಿವಾರ್ಯ.

ಇದೀಗ ಹಣದ ವರ್ಗಾವಣೆ ಮಾತ್ರ ವರ್ಚುಯಲ್ ರೂಪದಲ್ಲಿ ಆಗುತ್ತಿದೆಯಲ್ಲ, ಹಣವೂ ವರ್ಚುಯಲ್ ರೂಪದಲ್ಲೇ ಇದ್ದರೆ?
ಈ ಆಲೋಚನೆಯ ಫಲವಾಗಿ ರೂಪುಗೊಂಡಿರುವುದೇ 'ಬಿಟ್‌ಕಾಯಿನ್'ನ ಪರಿಕಲ್ಪನೆ. ಅಂತರಜಾಲ ಹೇಗೆ ಮಿಥ್ಯಾಲೋಕವೋ ಅಲ್ಲಿ ಚಲಾವಣೆಯಾಗುವ ಈ 'ಬಿಟ್‌ಕಾಯಿನ್' ಕೂಡ ವರ್ಚುಯಲ್ ಕರೆನ್ಸಿಯೇ.

ಬಿಟ್‌ಕಾಯಿನ್ ವ್ಯವಸ್ಥೆ ಪರಿಚಯವಾದದ್ದು ೨೦೦೯ರಲ್ಲಿ. ಪ್ರತಿ ದೇಶದಲ್ಲೂ ಚಲಾವಣೆಯಲ್ಲಿರುವ ಕರೆನ್ಸಿಗಳಂತೆ ಬಿಟ್‌ಕಾಯಿನ್ ಅನ್ನು ಯಾವುದೇ ಬ್ಯಾಂಕ್ ಅಥವಾ ಸರಕಾರ ನಿಯಂತ್ರಿಸುವುದಿಲ್ಲ. ಹಾಗೆಂದಮಾತ್ರಕ್ಕೆ ಬಿಟ್‌ಕಾಯಿನ್ ಕರೆನ್ಸಿಯನ್ನು ಗೊತ್ತುಗುರಿಯಿಲ್ಲದಂತೆ ಚಲಾವಣೆಗೆ ತರಲಾಗುತ್ತದೆ ಎಂದೇನೂ ಇಲ್ಲ, ಯಾವುದೇ ಸಂದರ್ಭದಲ್ಲಿ ಚಲಾವಣೆಯಲ್ಲಿರುವ ಬಿಟ್‌ಕಾಯಿನ್‌ಗಳ ಒಟ್ಟು ಮೊತ್ತ ಒಂದೇ ಪ್ರಮಾಣದಲ್ಲಿರುವಂತೆ ನೋಡಿಕೊಳ್ಳಲಾಗುತ್ತದೆ.

ಅದೇನೋ ಸರಿ, ಈ ಬಿಟ್‌ಕಾಯಿನ್ ಅನ್ನು ಸಂಪಾದಿಸುವುದು ಹೇಗೆ?

ಬಿಟ್‌ಕಾಯಿನ್ ಬಳಕೆದಾರರಾಗಬೇಕು ಎನ್ನುವವರು ತಮ್ಮ ಕಂಪ್ಯೂಟರುಗಳಲ್ಲಿ ಒಂದು ವಿಶೇಷ ತಂತ್ರಾಂಶವನ್ನು ಅನುಸ್ಥಾಪಿಸಿಕೊಳ್ಳಬೇಕಾಗುತ್ತದೆ. ಆ ತಂತ್ರಾಂಶ ಬಳಕೆದಾರರ ಕಂಪ್ಯೂಟರಿನಲ್ಲಿ ಹೆಚ್ಚುವರಿಯಾಗಿ ಲಭ್ಯವಿರುವ ಸಂಸ್ಕರಣಾ ಸಾಮರ್ಥ್ಯವನ್ನು ಹಲವು ಕ್ಲಿಷ್ಟ ಲೆಕ್ಕಾಚಾರಗಳಿಗಾಗಿ ಬಳಸಿಕೊಳ್ಳುತ್ತದೆ. ಈ ಲೆಕ್ಕಾಚಾರದ ಮೂಲಕ ಸಮಸ್ಯೆಗಳನ್ನು ಬಗೆಹರಿಸುತ್ತಿದ್ದಂತೆ ಆ ಕಂಪ್ಯೂಟರಿನ ಬಳಕೆದಾರನಿಗೆ ಬಿಟ್‌ಕಾಯಿನ್ ರೂಪದ ಹಣ ದೊರಕುತ್ತ ಹೋಗುತ್ತದೆ.

ಹಾಗೆ ಸಂಪಾದಿಸಬಹುದಾದ ಹಣಕ್ಕೆ ಮಿತಿಯೇ ಇಲ್ಲ ಎಂದೇನೂ ಇಲ್ಲ. ಚಲಾವಣೆಗೆ ಬರುವ ಬಿಟ್‌ಕಾಯಿನ್‌ಗಳ ಪ್ರಮಾಣ ಹೆಚ್ಚುತ್ತಿದ್ದಂತೆ ಬಳಕೆದಾರ ಪ್ರತಿ ಬಾರಿಯೂ ಸಂಪಾದಿಸುವ ಬಿಟ್‌ಕಾಯಿನ್‌ಗಳ ಸಂಖ್ಯೆಯೂ ಕಡಿಮೆಯಾಗುತ್ತ ಹೋಗುತ್ತದೆ - ೫೦ರಿಂದ ೨೫ಕ್ಕೆ, ೨೫ರಿಂದ ೧೨.೫ಕ್ಕೆ... ಹೀಗೆ. ಹೀಗಿದ್ದರೂ ಬಿಟ್‌ಕಾಯಿನ್‌ಗಳ ಪೂರೈಕೆ ೨೧೪೦ನೇ ಇಸವಿಯವರೆಗೂ ನಿರಾತಂಕವಾಗಿ ನಡೆಯಲಿದೆಯಂತೆ.

ಸಂಪಾದಿಸಿದ್ದೇನೋ ಸರಿ, ಈ ಹಣವನ್ನು ಬಳಸುವುದೆಲ್ಲಿ ಎಂದು ನೀವು ಕೇಳಬಹುದು. ಜಾಲಲೋಕದಲ್ಲಿ ಈಗಾಗಲೇ ಸಕ್ರಿಯವಾಗಿರುವ ಹಲವು ವಿನಿಮಯ ಕೇಂದ್ರಗಳು ಬಿಟ್‌ಕಾಯಿನ್ ಕರೆನ್ಸಿಯನ್ನು ಇತರ ಕರೆನ್ಸಿಯೊಡನೆ ಹೋಲಿಸುವ ಕೆಲಸ ಮಾಡುತ್ತಿವೆ. ಒಂದು ಡಾಲರಿಗೆ ಇಷ್ಟು ರೂಪಾಯಿ ಎಂದಂತೆ ಒಂದು ಬಿಟ್ ಕಾಯಿನ್ ಇಷ್ಟು ಡಾಲರಿಗೋ ಪೌಂಡಿಗೋ ಸಮ ಎನ್ನುವಂತಹ ಮಾಹಿತಿ ಸದಾಕಾಲ ಸಿಗುತ್ತಲೇ ಇರುತ್ತದೆ (ಫೆಬ್ರುವರಿ ಪ್ರಾರಂಭದಲ್ಲಿ ಒಂದು ಬಿಟ್‌ಕಾಯಿನ್ ಸುಮಾರು ೨೬ ಡಾಲರುಗಳಿಗೆ ಸಮಾನವಾಗಿತ್ತು). ಈ ಮಾಹಿತಿಯ ಆಧಾರದ ಮೇಲೆ ಹಲವೆಡೆ ಬಿಟ್‌ಕಾಯಿನ್‌ಗಳಲ್ಲಿ ವ್ಯವಹರಿಸುವುದು ಸಾಧ್ಯ. ಹಲವಾರು ಸಂಸ್ಥೆಗಳು ಬಿಟ್‌ಕಾಯಿನ್ ರೂಪದಲ್ಲಿ ದೇಣಿಗೆಗಳನ್ನು ಸ್ವೀಕರಿಸುತ್ತವೆ. ಬಿಟ್‌ಕಾಯಿನ್ ಬಳಸಿ ಪಿಜ್ಜಾ ಕೊಳ್ಳುವ ವ್ಯವಸ್ಥೆಯೂ ಅಮೆರಿಕಾದಲ್ಲಿ ಇತ್ತೀಚೆಗೆ ಜಾರಿಗೆ ಬಂದಿದೆಯಂತೆ. ಇದೇ ಸಮಯದಲ್ಲಿ ಹಲವು ಕಾನೂನು ವಿರೋಧಿ ವ್ಯವಹಾರಗಳಲ್ಲೂ ಬಿಟ್‌ಕಾಯಿನ್ ಬಳಕೆಯಾಗುತ್ತಿದೆ ಎನ್ನುವ ಸುದ್ದಿ ಕೂಡ ಕೇಳಿಬಂದಿದೆ.

ಬಿಟ್‌ಕಾಯಿನ್‌ಗಳು ಕಂಪ್ಯೂಟರಿನಲ್ಲಿ ಶೇಖರವಾಗಿರುತ್ತವೆ ಎಂದಾಕ್ಷಣ ಬೇರೆಲ್ಲ ಕಡತಗಳಂತೆ ಅವನ್ನೂ ಕಾಪಿ ಮಾಡಿಕೊಂಡು ಬಳಸಬಹುದೇ ಎನ್ನುವ ಪ್ರಶ್ನೆ ಮೂಡುವುದು ಸಹಜ. ಒಂದು ಬಿಟ್‌ಕಾಯಿನ್ ಮಾಹಿತಿಯನ್ನು ನಾಲ್ಕು ಜನ ಕಾಪಿಮಾಡಿಕೊಂಡು ಶಾಪಿಂಗ್ ಮಾಡಿಬಿಟ್ಟರೆ ಅದು ಖೋಟಾನೋಟು ಬಳಸಿದಂತೆಯೇ ತಾನೆ!

ಅಂತಹುದೊಂದು ಸಾಧ್ಯತೆಯನ್ನು ತಪ್ಪಿಸಲು ಅಗತ್ಯ ತಾಂತ್ರಿಕ ಮುನ್ನೆಚ್ಚರಿಕೆಯನ್ನು ಈ ವ್ಯವಸ್ಥೆ ಒಳಗೊಂಡಿದೆ. ಹಾಗಾಗಿಯೇ ಒಮ್ಮೆ ನಮ್ಮ ಬಿಟ್‌ಕಾಯಿನ್ ಅನ್ನು ಖರ್ಚುಮಾಡಿದೆವೆಂದರೆ ಆ ವ್ಯವಹಾರವನ್ನು ರದ್ದುಪಡಿಸುವುದು ಅಸಾಧ್ಯ.

ಆದರೆ ಇದೇ ಸೌಲಭ್ಯವನ್ನು ಬಳಸಿಕೊಂಡು ಬೇರೊಬ್ಬರ ಬಿಟ್‌ಕಾಯಿನ್‌ಗಳನ್ನು ಕದ್ದು ಬಳಸುವ ವಂಚಕರೂ ಇದ್ದಾರೆ. ಕಳೆದ ಎರಡು-ಮೂರು ವರ್ಷಗಳಲ್ಲಿ ಬಳಕೆದಾರರ ಸಾವಿರಾರು ಬಿಟ್‌ಕಾಯಿನ್‌ಗಳು ಕಳ್ಳತನವಾದ ಅನೇಕ ಘಟನೆಗಳು ವರದಿಯಾಗಿವೆ. ಅಂತರಜಾಲದಲ್ಲಿರುವ ಬಿಟ್‌ಕಾಯಿನ್ ವಿನಿಮಯ ಕೇಂದ್ರಗಳಿಗೂ ಹಲವುಬಾರಿ ಕನ್ನಹಾಕಿದ ಕಳ್ಳರು ಅಲ್ಲೂ ತಮ್ಮ ಕೈಚಳಕ ತೋರಿಸಿದ್ದರು. ಅಂತಹ ಒಂದು ಸಂದರ್ಭದಲ್ಲಿ ಉಂಟಾದ ಗೊಂದಲ ಎಷ್ಟರಮಟ್ಟಿಗಿತ್ತು ಎಂದರೆ ಬಿಟ್‌ಕಾಯಿನ್‌ಗಳ ವಿನಿಮಯ ದರ ಒಮ್ಮೆಲೇ ಹತ್ತಾರು ಪಟ್ಟು ಕುಸಿದು ಅವುಗಳ ಅಸ್ತಿತ್ವಕ್ಕೇ ಸಂಚಕಾರ ಬರುವಂತಹ ಪರಿಸ್ಥಿತಿ ಉಂಟಾಗಿತ್ತು.

ಬಿಟ್‌ಕಾಯಿನ್ ಬಳಕೆ ಎಷ್ಟು ಸುರಕ್ಷಿತ ಎನ್ನುವ ಈ ಪ್ರಶ್ನೆಗಳ ನಡುವೆಯೇ ಅವುಗಳ ಭವಿಷ್ಯದ ಬಗೆಗೂ ಸಾಕಷ್ಟು ಭರವಸೆಯ ಮಾತುಗಳು ಕೇಳಿಬರುತ್ತಿವೆ. ನಮಗೆಲ್ಲ ಪರಿಚಿತವಾದ ರೂಪದ ಹಣಕ್ಕೆ - ನಾಣ್ಯನೋಟುಗಳಿಗೆ ಈ ಬಿಟ್‌ಕಾಯಿನ್‌ಗಳು ನಿಜಕ್ಕೂ ಪರ್ಯಾಯವಾಗಿ ಬೆಳೆಯಬಲ್ಲವೆ? ಕಾದುನೋಡಬೇಕಿದೆ.


ಮಾರ್ಚ್ ೧೨, ೨೦೧೩ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge