ಶುಕ್ರವಾರ, ಮಾರ್ಚ್ 1, 2013

ಲೆನ್ಸ್‌ಗಳ ಲೋಕದಲ್ಲಿ


ಟಿ. ಜಿ. ಶ್ರೀನಿಧಿ

ಡಿಜಿಟಲ್ ಎಸ್‌ಎಲ್‌ಆರ್ (ಡಿಎಸ್‌ಎಲ್‌ಆರ್) ಕ್ಯಾಮೆರಾಗಳ ಬೆಲೆ ಈಚಿನ ವರ್ಷಗಳಲ್ಲಿ ಕೈಗೆಟುಕುವ ಮಟ್ಟಕ್ಕೆ ಬಂದು ತಲುಪಿದೆ. ಇದಕ್ಕೆ ತಂತ್ರಜ್ಞಾನದ ಅಭಿವೃದ್ಧಿ ಒಂದು ಕಾರಣವಾದರೆ ಹೆಚ್ಚುತ್ತಿರುವ ಆದಾಯ ಇನ್ನೊಂದು ಕಾರಣ ಎನ್ನಬಹುದೇನೋ. ಇರಲಿ.

ಸಾಮಾನ್ಯ ಕ್ಯಾಮೆರಾಗಳಲ್ಲಿ ಎಷ್ಟು ಸಾಮರ್ಥ್ಯವಿರುತ್ತದೋ ಅದಷ್ಟನ್ನು ಮಾತ್ರ ಉಪಯೋಗಿಸಿಕೊಳ್ಳುವುದು ಬಳಕೆದಾರರ ಕೆಲಸ. ಕ್ಲಿಕ್ಕಿಸಬೇಕಿರುವುದು ಯಾವುದೇ ಬಗೆಯ ಚಿತ್ರವಾದರೂ ಕ್ಯಾಮೆರಾದಲ್ಲಿರುವ ಲೆನ್ಸಿನಿಂದಲೇ ಕೆಲಸ ಸಾಧಿಸಿಕೊಳ್ಳಬೇಕಾದ್ದು ಅನಿವಾರ್ಯ.

ಆದರೆ ಎಸ್‌ಎಲ್‌ಆರ್ ಕ್ಯಾಮೆರಾಗಳಲ್ಲಿ ಹಾಗಲ್ಲ. ಇಲ್ಲಿ ಬೇರೆಬೇರೆ ರೀತಿಯ ಚಿತ್ರಗಳನ್ನು ಕ್ಲಿಕ್ಕಿಸಲು ಬೇರೆಯವೇ ಲೆನ್ಸುಗಳನ್ನು ಬಳಸುವುದು ಸಾಧ್ಯ. ಹುಲ್ಲಿನ ಮೇಲೆ ಬಿದ್ದಿರುವ ಇಬ್ಬನಿಯ ಹನಿಯಿರಲಿ, ಕ್ಯಾಮೆರಾದ ಎದುರು ಆಡುತ್ತಿರುವ ಮಗುವಿರಲಿ ಅಥವಾ ದೂರದಲ್ಲಿ ಕಾಣುತ್ತಿರುವ ದೇವಸ್ಥಾನದ ಗೋಪುರವೇ ಇರಲಿ, ವಿವಿಧ ಬಗೆಯ ಚಿತ್ರಗಳನ್ನು ಕ್ಲಿಕ್ಕಿಸಲೆಂದೇ ಬೇರೆಬೇರೆ ಲೆನ್ಸುಗಳು ದೊರಕುತ್ತವೆ. ಹಾಗಾಗಿಯೇ ಡಿಎಸ್‌ಎಲ್‌ಆರ್ ಕ್ಯಾಮೆರಾಗಳ ಬಳಕೆ ಹೆಚ್ಚಿದಂತೆ ಬೇರೆಬೇರೆ ರೀತಿಯ ಲೆನ್ಸುಗಳು ಕಾಣಿಸಿಕೊಳ್ಳುತ್ತಿರುವುದೂ ಜಾಸ್ತಿಯಾಗಿದೆ.

ಕ್ಯಾಮೆರಾ ಜೊತೆಗೆ ಬರುವ ಸಾಮಾನ್ಯ ಲೆನ್ಸಿನಿಂದ ಪ್ರಾರಂಭಿಸಿ ರಾಕೆಟ್ ಲಾಂಚರಿನಂತೆ ಕಾಣುವ ದೈತ್ಯ ಲೆನ್ಸುಗಳವರೆಗೆ ಇಂತಹ ಲೆನ್ಸುಗಳಲ್ಲಿ ಅನೇಕ ವಿಧ. ಛಾಯಾಗ್ರಹಣದ ಪರಿಭಾಷೆಯಲ್ಲಿ ನಾವು ಇವನ್ನು ಲೆನ್ಸ್ ಎಂದು ಕರೆಯುತ್ತೇವಾದರೂ ಈ ಸಲಕರಣೆಯ ಒಳಗೆ ಒಂದಕ್ಕಿಂತ ಹೆಚ್ಚು ಸಂಖ್ಯೆಯ ಗಾಜಿನ ಮಸೂರಗಳಿರುತ್ತವೆ. ಕ್ಯಾಮೆರಾ ಲೆನ್ಸಿನೊಳಗೆ ಈ ಮಸೂರಗಳು ಹೇಗೆ ಜೋಡಣೆಯಾಗಿರುತ್ತವೆ ಎನ್ನುವುದರ ಆಧಾರದ ಮೇಲೆ ಅವುಗಳನ್ನು ಬಳಸಿ ಯಾವ ರೀತಿಯ ಚಿತ್ರಗಳನ್ನು ಕ್ಲಿಕ್ಕಿಸಬಹುದು ಎನ್ನುವುದು ನಿರ್ಧಾರವಾಗುತ್ತದೆ.

ಕ್ಯಾಮೆರಾ ಮುಂದಿನ ದೃಶ್ಯ ಫೋಟೋದಲ್ಲಿ ಹೇಗೆ ಸೆರೆಯಾಗುತ್ತದೆ ಎನ್ನುವುದನ್ನು ಕ್ಯಾಮೆರಾ ಲೆನ್ಸಿನ ಫೋಕಲ್ ಲೆಂತ್ ನಿರ್ಧರಿಸುತ್ತದೆ ತಾನೆ, ಅದೇ ಫೋಕಲ್ ಲೆಂತ್ ಆಧಾರದ ಮೇಲೆ ಕ್ಯಾಮೆರಾದ ಲೆನ್ಸ್ ಯಾವ ಬಗೆಯದು ಎಂದು ತಿಳಿಯುವುದು ಕೂಡ ಸಾಧ್ಯ. ಉದಾಹರಣೆಗೆ ನಿಮ್ಮಲ್ಲಿರುವ ಲೆನ್ಸಿನ ಫೋಕಲ್ ಲೆಂತ್ ೧೮ ಮಿಲಿಮೀಟರ್ ಎಂದಿಟ್ಟುಕೊಳ್ಳೋಣ. ಅಂದರೆ ಆ ಲೆನ್ಸಿನ ಫೋಕಲ್ ಲೆಂತ್ ಸಣ್ಣದು ಎಂದಾಯಿತು; ಸಣ್ಣ ಫೋಕಲ್ ಲೆಂತ್ ಇರುವ ಲೆನ್ಸುಗಳನ್ನು ಬಳಸಿ ದೊಡ್ಡ ಪ್ರದೇಶದ ಚಿತ್ರಗಳನ್ನು ಕ್ಲಿಕ್ಕಿಸಬಹುದು. ಕ್ಯಾಮೆರಾ ಮುಂದಿನ ದೃಶ್ಯದ ಬಹುಪಾಲನ್ನು ಇಂತಹ ಲೆನ್ಸುಗಳ ಮೂಲಕ ಸೆರೆಹಿಡಿಯುವುದು ಸಾಧ್ಯವಾಗುವುದರಿಂದ ಇವನ್ನು ವೈಡ್ ಆಂಗಲ್ ಲೆನ್ಸುಗಳೆಂದು ಕರೆಯುತ್ತಾರೆ. ಲೆನ್ಸಿನ ಫೋಕಲ್ ಲೆಂತ್ ಹೆಚ್ಚಿಸಿಕೊಳ್ಳುತ್ತಾ ಹೋದಂತೆ ದೂರದಲ್ಲಿರುವ ಸಣ್ಣ ವಸ್ತುಗಳ ಚಿತ್ರವನ್ನೂ ತೆಗೆಯುವುದು ಸಾಧ್ಯವಾಗುತ್ತದೆ. ೨೦೦ ಎಂಎಂ, ೩೦೦ಎಂಎಂ, ೪೦೦ಎಂಎಂ ಹೀಗೆ ಹೆಚ್ಚಿನ ಫೋಕಲ್ ಲೆಂತ್ ಇರುವ ಇಂತಹ ಲೆನ್ಸುಗಳನ್ನು ಟೆಲಿಫೋಟೋ ಲೆನ್ಸುಗಳೆಂದು ಕರೆಯುತ್ತಾರೆ.

ಹಲವು ಲೆನ್ಸುಗಳಲ್ಲಿ ಫೋಕಲ್ ಲೆಂತ್ ಅನ್ನು ನಮ್ಮ ಅಗತ್ಯಕ್ಕೆ ತಕ್ಕಂತೆ ಬದಲಿಸಿಕೊಳ್ಳುವುದು ಸಾಧ್ಯ. ಉದಾಹರಣೆಗೆ ನಮ್ಮಲ್ಲಿರುವ ಲೆನ್ಸ್ ೧೮-೫೫ಎಂಎಂ ಎನ್ನುವುದಾದರೆ ಅದರ ಫೋಕಲ್ ಲೆಂತ್ ಅನ್ನು ೧೮ ಮಿಲಿಮೀಟರಿನಿಂದ ೫೫ ಮಿಲಿಮೀಟರಿನವರೆಗೆ ನಮಗೆಷ್ಟು ಬೇಕೋ ಅಷ್ಟಕ್ಕೆ ಹೊಂದಿಸಿಕೊಳ್ಳಬಹುದು. ಟೆಲಿಫೋಟೋ ಲೆನ್ಸುಗಳು ಕೂಡ ೫೫-೨೦೦ಎಂಎಂ, ೭೦-೩೦೦ಎಂಎಂ, ೧೫೦-೫೦೦ಎಂಎಂ ಮುಂತಾದ ಅನೇಕ ಫೋಕಲ್ ಲೆಂತ್ ವ್ಯಾಪ್ತಿಗಳೊಡನೆ ದೊರಕುತ್ತವೆ. ಇದರಿಂದಾಗಿ ನಿಂತಲ್ಲೇ ನಮಗೆ ಬೇಕಾದಂತೆ ಜೂಮ್ ಮಾಡಿಕೊಳ್ಳುವುದು ಸಾಧ್ಯವಾಗುತ್ತದೆ. ಇನ್ನು ಕೆಲ ಲೆನ್ಸುಗಳಲ್ಲಿ ಫೋಕಲ್ ಲೆಂತ್ ಅನ್ನು ಬದಲಾಯಿಸುವಂತಿಲ್ಲ. ಭಾವಚಿತ್ರಗಳನ್ನು ಕ್ಲಿಕ್ಕಿಸಲು ಬಳಕೆಯಾಗುವ ಪ್ರೈಮ್ ಲೆನ್ಸ್, ಇಂತಹ ಲೆನ್ಸುಗಳಿಗೊಂದು ಉದಾಹರಣೆ.

ಇಷ್ಟೇ ಅಲ್ಲದೆ ತೀರಾ ಹತ್ತಿರದ ದೃಶ್ಯಗಳತ್ತ ವಿಭಿನ್ನ ನೋಟ ಬೀರುವ 'ಫಿಶ್ ಐ' ಲೆನ್ಸ್ ಹಾಗೂ ಸೂಕ್ಷ್ಮ ವಿಷಯಗಳ ಸ್ಪಷ್ಟ ಚಿತ್ರ ತೆಗೆಯಲು ಬಳಕೆಯಾಗುವ 'ಮ್ಯಾಕ್ರೋ' ಲೆನ್ಸ್ ಸೇರಿದಂತೆ ಇನ್ನೂ ಅನೇಕ ಬಗೆಯ ಲೆನ್ಸುಗಳನ್ನು ಡಿಎಸ್‌ಎಲ್‌ಆರ್ ಕ್ಯಾಮೆರಾಗಳೊಡನೆ ಬಳಸಬಹುದು. ಇತ್ತೀಚೆಗೆ ಜನಪ್ರಿಯತೆ ಗಳಿಸುತ್ತಿರುವ ಕಾಂಪಾಕ್ಟ್ ಸಿಸ್ಟಂ ಕ್ಯಾಮೆರಾಗಳಲ್ಲಿ ಬಳಸಲು ಕೂಡ ಅನೇಕ ರೀತಿಯ ಲೆನ್ಸುಗಳು ದೊರಕುತ್ತವೆ.

ಮಾರ್ಚ್ ೧, ೨೦೧೩ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge