ಶುಕ್ರವಾರ, ಫೆಬ್ರವರಿ 8, 2013

ನೆನಪುಗಳ ಮಾತಲ್ಲ, ಇದು ನೆನಪುಗಳ ಫೋಟೋ ಆಲ್ಬಮ್!

ಟಿ. ಜಿ. ಶ್ರೀನಿಧಿ

ಮದುವೆ, ಗೃಹಪ್ರವೇಶ, ಹುಟ್ಟುಹಬ್ಬಗಳಂತದ ಸ್ಮರಣೀಯ ಸನ್ನಿವೇಶಗಳನ್ನು ಛಾಯಾಚಿತ್ರಗಳಲ್ಲಿ ಸೆರೆಹಿಡಿದಿಡುವುದು ನಮಗೇನೂ ಹೊಸ ವಿಷಯವಲ್ಲ. ದೊಡ್ಡ ಕಾರ್ಯಕ್ರಮಗಳಿರಲಿ, ಎಲ್ಲ ಮೊಬೈಲುಗಳಲ್ಲೂ ಕ್ಯಾಮೆರಾ ಬಂದಮೇಲೆ ದಿನನಿತ್ಯದ ಕೆಲ ಘಟನೆಗಳು ಕೂಡ ಛಾಯಾಚಿತ್ರಗಳಾಗಿ ನಮ್ಮ ಸಂಗ್ರಹಕ್ಕೆ ಸೇರುತ್ತಿವೆ.

ಆದರೆ ಫೋಟೋ ತೆಗೆಯಬೇಕು ಅನ್ನಿಸಿದಾಗಲೆಲ್ಲ ಫೋಟೋ ತೆಗೆಯುವುದು ಸಾಧ್ಯವಾಗಬೇಕಲ್ಲ! ಸ್ಟೇಜಿನ ಮೇಲೆ ನಿಂತು ಭಾಷಣ ಬಿಗಿಯುತ್ತಿರುವಾಗ ಭಾಷಣಕಾರನಿಗೆ ಎಷ್ಟೇ ಆಸೆಯಾದರೂ ಆತನೇ ಸಭಿಕರ ಫೋಟೋ ಕ್ಲಿಕ್ಕಿಸುವುದು ಅಸಹಜವಾಗಿ ಕಾಣುತ್ತದೆ. ಅಂತೆಯೇ ಶಾಪಿಂಗ್ ಮುಗಿಸಿ ಎರಡು ಕೈಯಲ್ಲೂ ಒಂದೊಂದು ಚೀಲ ಹಿಡಿದು ಬರುವಾಗ ಯಾವುದೋ ಫೋಟೋ ಕ್ಲಿಕ್ಕಿಸಬೇಕೆಂದರೂ ಅದು ಸಾಧ್ಯವಾಗುವುದಿಲ್ಲ. ಹೀಗಾಗಿಯೇ ಬಹುತೇಕ ನೆನಪುಗಳನ್ನು ಉಳಿಸಿಟ್ಟುಕೊಳ್ಳಲು ನಾವು ಇನ್ನೂ ಜ್ಞಾಪಕಶಕ್ತಿಯನ್ನೇ ಅವಲಂಬಿಸಬೇಕಿದೆ.

ಇದರ ಬದಲಿಗೆ ನಮ್ಮ ದಿನನಿತ್ಯದ ಎಲ್ಲ ನೆನಪುಗಳನ್ನೂ ಛಾಯಾಚಿತ್ರಗಳ ರೂಪದಲ್ಲಿ ಸಂಗ್ರಹಿಸಿಡುವಂತಿದ್ದರೆ? ಹತ್ತು ವರ್ಷಗಳ ಹಿಂದೆ ಇದೇ ದಿನ ನಾನು ಏನೆಲ್ಲ ಮಾಡಿದ್ದೆ ಎನ್ನುವಂತಹ ವಿವರಗಳನ್ನು ನಮಗೆ ಬೇಕಾದಾಗಲೆಲ್ಲ ನೆನಪಿಸಿಕೊಳ್ಳಬಹುದಿತ್ತು ಅಲ್ಲವೆ?

ನಮ್ಮ ಬದುಕಿನ ಪ್ರತಿ ನಿಮಿಷವನ್ನೂ ಹೀಗೆ ಛಾಯಾಚಿತ್ರಗಳಲ್ಲಿ ಸೆರೆಹಿಡಿದಿಡುವ ವಿಶಿಷ್ಟವಾದುದೊಂದು ಕ್ಯಾಮೆರಾ ಇಷ್ಟರಲ್ಲೇ ಮಾರುಕಟ್ಟೆಗೆ ಬರಲಿದೆ. ಸ್ವೀಡನ್ನಿನ ಕೆಲ ತಂತ್ರಜ್ಞರು ರೂಪಿಸುತ್ತಿರುವ ಈ ಕ್ಯಾಮೆರಾ ಹೆಸರು 'ಮಮೋಟೋ' (memoto) ಎಂದು.


ಈ ಪುಟಾಣಿ ಕ್ಯಾಮೆರಾವನ್ನು ನಮ್ಮ ಶರ್ಟಿನ ಜೇಬಿಗೋ ಟೀಶರ್ಟಿಗೋ ಸಿಕ್ಕಿಸಿಕೊಂಡರೆ ಸಾಕು, ಪ್ರತಿ ನಿಮಿಷಕ್ಕೆ ಎರಡರಂತೆ ಅದು ನಮ್ಮ ಎದುರಿನ ದೃಶ್ಯಗಳನ್ನು ಸ್ವಯಂಚಾಲಿತವಾಗಿ ಕ್ಲಿಕ್ಕಿಸುತ್ತಿರುತ್ತದಂತೆ. ಅಷ್ಟೇ ಅಲ್ಲ, ಜಿಪಿಎಸ್ ಮಾಹಿತಿ ಬಳಸಿ ಪ್ರತಿ ಚಿತ್ರವನ್ನು ಎಲ್ಲಿ ಯಾವಾಗ ಕ್ಲಿಕ್ಕಿಸಿದ್ದು ಎನ್ನುವ ಮಾಹಿತಿಯನ್ನೂ ಅದು ಉಳಿಸಿಡುತ್ತದೆ. ಐದು ಮೆಗಾಪಿಕ್ಸೆಲ್ ಸಾಮರ್ಥ್ಯದ ಈ ಕ್ಯಾಮೆರಾವನ್ನು ಎರಡು ದಿನಕ್ಕೊಮ್ಮೆ ಚಾರ್ಜ್ ಮಾಡಿದರೆ ಸಾಕು ಎಂದು ಅದರ ನಿರ್ಮಾತೃಗಳು ಹೇಳುತ್ತಾರೆ.

ಆ ಎರಡು ದಿನಗಳಲ್ಲೇ ಸಾವಿರಾರು ಫೋಟೋಗಳು ಸಂಗ್ರಹವಾಗುತ್ತವಲ್ಲ, ಚಾರ್ಜ್ ಮಾಡಲು ಕಂಪ್ಯೂಟರಿಗೆ ಕ್ಯಾಮೆರಾ ಜೋಡಿಸಿದ ತಕ್ಷಣ ಅವೆಲ್ಲ ಅಂತರಜಾಲ ಸಂಪರ್ಕದ ಮೂಲಕ ಕ್ಲೌಡ್ ಸ್ಟೋರೇಜ್‌ನಲ್ಲಿ ಹೋಗಿ ಕುಳಿತುಬಿಡುತ್ತವಂತೆ. ಆ ರಾಶಿಯಲ್ಲಿ ನಮಗೆ ಬೇಕಾದ್ದನ್ನು ಮೊಬೈಲ್ ಮೂಲಕವೇ ಹುಡುಕಿಕೊಳ್ಳಲು ಆಪ್‌ಗಳೂ ಇವೆ. ಸುಮಾರು ಹದಿನೈದು ಸಾವಿರ ರೂಪಾಯಿ ಬೆಲೆಯ ಈ ಕ್ಯಾಮೆರಾ ಏಪ್ರಿಲ್ ೨೦೧೩ರಲ್ಲಿ ಮಾರುಕಟ್ಟೆಗೆ ಬರುವ ನಿರೀಕ್ಷೆಯಿದೆ (ಹೆಚ್ಚಿನ ವಿವರಗಳಿಗೆ: memoto.com). ಈ ಕ್ಯಾಮೆರಾದ ವಿನ್ಯಾಸ ಹಾಗೂ ನಿರ್ಮಾಣಕ್ಕಾಗಿ ಖರ್ಚಾಗುತ್ತಿರುವ ಹಣವನ್ನು ಕಿಕ್‌ಸ್ಟಾರ್ಟರ್ ಡಾಟ್ ಕಾಮ್ ಎನ್ನುವ ಕ್ರೌಡ್‌ಫಂಡಿಂಗ್ ತಾಣದ ಮೂಲಕ ನಮ್ಮನಿಮ್ಮಂತಹ ಬಳಕೆದಾರರೇ ನೀಡುತ್ತಿರುವುದು ವಿಶೇಷ.

ಅಂದಹಾಗೆ ನಮ್ಮ ಬದುಕಿನ ಪ್ರತಿಯೊಂದು ನಿಮಿಷವನ್ನೂ ಚಿತ್ರಗಳಲ್ಲಿ ಸೆರೆಹಿಡಿದಿಡುವ ಐಡಿಯಾ ಕೇಳಿಬರುತ್ತಿರುವುದು ಇದೇ ಮೊದಲೇನಲ್ಲ. ಲೈಫ್‌ಲಾಗಿಂಗ್ ಎನ್ನುವ ಹೆಸರಿನಲ್ಲಿ ಈ ಪರಿಕಲ್ಪನೆ ಸಾಕಷ್ಟು ಸಮಯದಿಂದಲೇ ಪ್ರಚಲಿತದಲ್ಲಿದೆ. ಚಿತ್ರಗಳಷ್ಟೇ ಏಕೆ, ದಿನನಿತ್ಯದ ಘಟನೆಗಳ ವೀಡಿಯೋ ತೆಗೆದಿಟ್ಟುಕೊಳ್ಳಲು ಅನುವುಮಾಡಿಕೊಡುವ ಕೆಲ ಸೌಲಭ್ಯಗಳೂ ಬಂದಿವೆ. ಆದರೆ, ನಮ್ಮ ನೆನಪುಗಳನ್ನು ಇಷ್ಟೆಲ್ಲ ವಿವರವಾಗಿ ಉಳಿಸಿಟ್ಟುಕೊಂಡು ಏನುಮಾಡಬೇಕಿದೆ ಎನ್ನುವ ಪ್ರಶ್ನೆಗೆ ಸಮರ್ಪಕ ಉತ್ತರ ಮಾತ್ರ ಇನ್ನೂ ಸಿಕ್ಕಿಲ್ಲ.

ಫೆಬ್ರುವರಿ ೮, ೨೦೧೩ರ ಉದಯವಾಣಿಯಲ್ಲಿ ಪ್ರಕಟವಾಗಿರುವ ಲೇಖನ

ಪೂರಕ ಓದಿಗೆ: ಬದುಕಿನ ಬ್ಲಾಗು 'ಲೈಫ್ ಲಾಗ್'

1 ಕಾಮೆಂಟ್‌:

Manjunatha K.S ಹೇಳಿದರು...

ನಿಮ್ಮ ಶೈಲಿ, ಸರಸವಾದ ಶೈಲಿ. ಕ್ಯಾಮರ ಬೇಡದಿದ್ದರೂ, ಏನೂ ತಿಳಿಯದಿದ್ದರೂ, ಸುಮ್ಮನೇ ಓದಿದರೂ ಒಂದೊಳ್ಳೆಯ ಓದಿಗೆ ಮೋಸವಿಲ್ಲ. ಈ ಲೇಖನ ಬಹು ಇಷ್ಟವಾಯಿತು.

badge