ಮಂಗಳವಾರ, ಫೆಬ್ರವರಿ 26, 2013

ಮೊಬೈಲ್ ಕ್ಯಾಮೆರಾ ಮ್ಯಾಜಿಕ್


ಟಿ. ಜಿ. ಶ್ರೀನಿಧಿ

ಮನೆಯಲ್ಲಿ ಎಷ್ಟು ಒಳ್ಳೆಯ ಡಿಜಿಟಲ್ ಕ್ಯಾಮೆರಾ ಇದ್ದರೂ ಅದನ್ನು ಎಲ್ಲಕಡೆಯೂ ಕೊಂಡೊಯ್ಯುವುದು ಅಸಾಧ್ಯ. ಆದರೆ ಉತ್ತಮ ಫೋಟೋ ತೆಗೆಯಬಹುದಾದಂತಹ ಅದೆಷ್ಟೋ ಸನ್ನಿವೇಶಗಳು ನಮ್ಮಲ್ಲಿ ಕ್ಯಾಮೆರಾ ಇಲ್ಲದ ಸಮಯದಲ್ಲೇ ಎದುರಾಗುತ್ತವಲ್ಲ!

ಉದಾಹರಣೆಗೆ ಕಳೆದವಾರ ರಷ್ಯಾದಲ್ಲಿ ಸಂಭವಿಸಿದ ಉಲ್ಕಾಪಾತದ ಘಟನೆಯನ್ನೇ ನೋಡಿ. ಆ ಸಂದರ್ಭದಲ್ಲಿ ಹೊರಗಡೆ ಇದ್ದವರ ಕೈಯಲ್ಲಿ ಕ್ಯಾಮೆರಾ ಇಲ್ಲದಿದ್ದರೆ ಇಂತಹ ಅಪರೂಪದ ವಿದ್ಯಮಾನ ನೋಡಿಯೂ ಫೋಟೋ ತೆಗೆಯುವುದು ಸಾಧ್ಯವಾಗುತ್ತಿರಲಿಲ್ಲ. ಆದರೆ ರಷ್ಯಾದವರಿಗೇನೋ ಅಂತಹ ಪರಿಸ್ಥಿತಿ ಬರಲಿಲ್ಲ ಬಿಡಿ. ಅಲ್ಲಿನ ರಸ್ತೆಗಳಲ್ಲಿ ಸುರಕ್ಷತೆ ಅದೆಷ್ಟು ಹದಗೆಟ್ಟಿದೆಯೆಂದರೆ ಪೋಲೀಸರು ಕಳ್ಳರು ಎಲ್ಲರೂ ಒಂದೇ ರೀತಿಯಲ್ಲಿ ವಾಹನ ಚಾಲಕರನ್ನು ಗೋಳುಹೊಯ್ದುಕೊಳ್ಳುತ್ತಾರಂತೆ. ಅಂತಹ ಸನ್ನಿವೇಶಗಳಲ್ಲಿ ಸಿಕ್ಕಿಕೊಂಡಾಗ ಸಹಾಯಕ್ಕಿರಲಿ ಎಂದು ಕಾರುಗಳ ಡ್ಯಾಶ್‌ಬೋರ್ಡಿನಲ್ಲಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳುವುದು ಅಲ್ಲಿ ತೀರಾ ಸಾಮಾನ್ಯ. ಹಾಗಾಗಿ ಮೊನ್ನೆ ಉಲ್ಕಾಪಾತವಾಗುತ್ತಿದ್ದಂತೆ ಆಗ ರಸ್ತೆಯಲ್ಲಿದ್ದ ಬಹುತೇಕ ಕಾರುಗಳಲ್ಲಿದ್ದ ಕ್ಯಾಮೆರಾಗಳಲ್ಲಿ ಆ ದೃಶ್ಯ ಸೆರೆಯಾಗಿತ್ತು.

ರಷ್ಯಾದಲ್ಲೇನೋ ಸರಿ, ಆದರೆ ನಮ್ಮೂರಿನಲ್ಲಿ? ನಮ್ಮಲ್ಲಿ ಸುರಕ್ಷತೆಯ ಪರಿಸ್ಥಿತಿ ಕಾರಿನಲ್ಲಿ ಕ್ಯಾಮೆರಾ ಇಟ್ಟುಕೊಂಡು ತಿರುಗುವಷ್ಟು ಇನ್ನೂ ಕೆಟ್ಟಿಲ್ಲ. ಜೊತೆಗೆ ಕಾರಿನಲ್ಲೊಂದು ಕ್ಯಾಮೆರಾ ಇದ್ದರೂ ಬೆಂಗಳೂರಿನಲ್ಲಿ ಎಲ್ಲ ಕಡೆಗೂ ಕಾರು ತೆಗೆದುಕೊಂಡು ಹೋಗುವಷ್ಟು ಜಾಗವೇ ಇಲ್ಲವಲ್ಲ; ಪಕ್ಕದ ರಸ್ತೆಯ ಪಾರ್ಕಿಂಗ್ ಲಾಟಿನಲ್ಲಿ ಕಾರು ನಿಲ್ಲಿಸಿ ನಡೆದುಕೊಂಡು ಹೋಗುತ್ತಿದ್ದಾಗ ಫೋಟೋ ತೆಗೆಯಬೇಕೆನಿಸಿದರೆ ಏನು ಮಾಡುವುದು?

ಕ್ಯಾಮೆರಾ ಫೋನುಗಳ ಮಹತ್ವದ ಬಗ್ಗೆ ಹೇಳಲು ಇಷ್ಟೆಲ್ಲ ಪೀಠಿಕೆ ಎನ್ನುವುದು ನಿಮಗೆ ಈಗಾಗಲೇ ಅರ್ಥವಾಗಿರಬಹುದು. ನಿಜ, ತರಕಾರಿ ತರಲು ಹೋದಾಗಲಾಗಲಿ ಪಾರ್ಕಿನಲ್ಲಿ ವಾಕಿಂಗ್ ಮಾಡುತ್ತಿರುವ ಸಂದರ್ಭದಲ್ಲಾಗಲಿ ಎಲ್ಲಿಗೋ ಪ್ರಯಾಣಿಸುತ್ತಿರುವಾಗಲೇ ಆಗಲಿ, ನಮಗೆ ಬೇಕೆಂದಾಗ ಬೇಕಾದ ಚಿತ್ರವನ್ನು ಕ್ಲಿಕ್ಕಿಸಲು ಅನುವುಮಾಡಿಕೊಡುವುದು ಕ್ಯಾಮೆರಾ ಫೋನುಗಳ ವೈಶಿಷ್ಟ್ಯ.

ಕ್ಯಾಮೆರಾ ಫೋನುಗಳು ಮೊದಲಿಗೆ ಕಾಣಿಸಿಕೊಂಡದ್ದು ತೊಂಬತ್ತರ ದಶಕದ ಆಸುಪಾಸಿನಲ್ಲಿ. ೧೯೯೫ರಲ್ಲಿ ಅಮೆರಿಕಾದ ವಿಜ್ಞಾನಿ ಎರಿಕ್ ಫಾಸಮ್ ಮತ್ತು ಅವರ ತಂಡ 'ಕ್ಯಾಮೆರಾ-ಆನ್-ಎ-ಚಿಪ್' ತಂತ್ರಜ್ಞಾನ ರೂಪಿಸಿ ಸಣ್ಣಗಾತ್ರದ ಕ್ಯಾಮೆರಾಗಳ ಸೃಷ್ಟಿಯನ್ನು ಇನ್ನಷ್ಟು ಸುಲಭಗೊಳಿಸಿದಮೇಲೆ ಕ್ಯಾಮೆರಾ ಫೋನುಗಳತ್ತ ಇನ್ನೂ ಹೆಚ್ಚಿನ ಗಮನ ನೀಡಲಾಯಿತು. ಸಂಸ್ಥೆಗಳಷ್ಟೇ ಅಲ್ಲ, ತಂತ್ರಜ್ಞಾನ ಆಸಕ್ತರು ಕೂಡ ಮೊಬೈಲ್ ದೂರವಾಣಿಗಳಲ್ಲಿ ಕ್ಯಾಮೆರಾ ಅಳವಡಿಸುವ ನಿಟ್ಟಿನಲ್ಲಿ ತಮ್ಮತಮ್ಮ ಮಿತಿಯೊಳಗೇ ಪ್ರಯತ್ನಗಳನ್ನು ನಡೆಸಿದ್ದರು. ಇಂತಹುದೇ ಒಂದು ಪ್ರಯತ್ನದಲ್ಲಿ ಫಿಲಿಪ್ ಕಾನ್ ಎಂಬಾತ ೧೯೯೭ರಲ್ಲಿ ಕ್ಲಿಕ್ಕಿಸಿದ ಚಿತ್ರವನ್ನು ಕ್ಯಾಮೆರಾ ಫೋನ್ ಬಳಸಿ ಕ್ಲಿಕ್ಕಿಸಲಾದ ಮೊದಲ ಚಿತ್ರವೆಂದು ಗುರುತಿಸಲಾಗುತ್ತದೆ.

ದೊಡ್ಡ ಸಂಸ್ಥೆಗಳು ಕೂಡ ಕ್ಯಾಮೆರಾ ಫೋನ್ ರೂಪಿಸುವತ್ತ ತಮ್ಮ ಪ್ರಯತ್ನಗಳನ್ನು ಕೈಗೊಂಡಿದ್ದರು. ತಂತ್ರಜ್ಞಾನ ಕ್ಷೇತ್ರದ ಅನೇಕ ಪ್ರಮುಖ ಹೆಸರುಗಳು ಈ ಸಾಲಿನಲ್ಲಿದ್ದವು. ಇಷ್ಟೆಲ್ಲ ಪ್ರಯತ್ನಗಳ ನಡುವೆ ಮೊದಲ ಕ್ಯಾಮೆರಾ ಫೋನುಗಳು ಜಪಾನಿನಲ್ಲಿ ಬಳಕೆಗೆ ಬಂದವು, ಮಾರುಕಟ್ಟೆಗೆ ಪರಿಚಯವಾಗುತ್ತಿದ್ದಂತೆ ಅಪಾರ ಜನಪ್ರಿಯತೆಯನ್ನೂ ಗಳಿಸಿಕೊಂಡವು. 'ಜೆ-ಫೋನ್' ಮೊಬೈಲ್ ಸಂಸ್ಥೆ ಜಪಾನಿನಲ್ಲಿ ಕ್ಯಾಮೆರಾ ಫೋನ್ ಪರಿಚಯಿಸಿದ ಎರಡೇ ವರ್ಷಗಳಲ್ಲಿ ಅದರ ಗ್ರಾಹಕರಲ್ಲಿ ಅರ್ಧಕ್ಕಿಂತ ಹೆಚ್ಚು ಜನ ಅವನ್ನು ಬಳಸಲು ಪ್ರಾರಂಭಿಸಿದರಂತೆ.

ಈ ಶತಮಾನದ ಪ್ರಾರಂಭದ ವೇಳೆಗಾಗಲೇ ಕ್ಯಾಮೆರಾ ಫೋನುಗಳ ಜನಪ್ರಿಯತೆ ತೀವ್ರವಾಗಿ ಬೆಳೆದಿತ್ತು. ೨೦೦೫ರಲ್ಲಿ ಅತಿ ಹೆಚ್ಚು ಡಿಜಿಟಲ್ ಕ್ಯಾಮೆರಾಗಳನ್ನು ಮಾರಿದ್ದು ನೋಕಿಯಾ ಸಂಸ್ಥೆಯಂತೆ!

ಮೊಬೈಲ್ ದೂರವಾಣಿಗಳ ಮೂಲಕ ಅಂತರಜಾಲ ಸಂಪರ್ಕ ಸಾಧಿಸಿಕೊಳ್ಳುವುದು ಸುಲಭವಾದಮೇಲಂತೂ ಅವುಗಳಲ್ಲಿರುವ ಕ್ಯಾಮೆರಾಗಳ ಬಳಕೆ ಇನ್ನಷ್ಟು ಜಾಸ್ತಿಯಾಯಿತು. ಈಗಂತೂ ಎಲ್ಲರಿಗೂ ಕ್ಯಾಮೆರಾ ಫೋನೇ ಬೇಕು. ಕ್ಯಾಮೆರಾ ಇಲ್ಲದ ಫೋನೇ ಇಲ್ಲ ಎನ್ನುವ ಮಟ್ಟಕ್ಕೆ ಇಂದಿನ ಮಾರುಕಟ್ಟೆ ಬೆಳೆದುನಿಂತಿದೆ. ಮೊಬೈಲುಗಳ ಜೊತೆಗೆ ಬಹುತೇಕ ಟ್ಯಾಬ್ಲೆಟ್ ಕಂಪ್ಯೂಟರುಗಳಲ್ಲೂ ಕ್ಯಾಮೆರಾ ಸೌಲಭ್ಯ ಕಾಣಿಸಿಕೊಂಡಿದೆ.

ಹಲವಾರು ಮೊಬೈಲ್ ಫೋನ್ ಮತ್ತು ಟ್ಯಾಬ್ಲೆಟ್ ಕಂಪ್ಯೂಟರುಗಳಲ್ಲಿ ಎರಡೆರಡು ಕ್ಯಾಮೆರಾಗಳಿರುತ್ತವೆ. ಹಿಂಭಾಗದಲ್ಲಿರುವ ಮುಖ್ಯ ಕ್ಯಾಮೆರಾ ಜೊತೆಗೆ ಇರುವ ಈ ಪುಟ್ಟ ಕ್ಯಾಮೆರಾ, ಮೊಬೈಲ್ ಅಥವಾ ಟ್ಯಾಬ್ಲೆಟ್ಟಿನ ಮುಂಭಾಗದಲ್ಲೇ ಇರುವುದು ವಿಶೇಷ. ಈ ಎರಡನೆಯ ಕ್ಯಾಮೆರಾವನ್ನು ವೀಡಿಯೋ ಕರೆಗಳಿಗಾಗಿ ಬಳಸಬಹುದು. ಇದೂ ವೀಡಿಯೋ ಚಾಟಿಂಗ್‌ನಂತೆಯೇ, ಧ್ವನಿ ಕೇಳುವ ಜೊತೆಗೆ ಪರದೆಯತ್ತ ನೋಡಿಕೊಂಡು ಮಾತನಾಡುತ್ತಿರುವ ನಮ್ಮ ಚಿತ್ರವೂ ನಾವು ಕರೆಮಾಡಿದವರಿಗೆ ಕಾಣಿಸುತ್ತದೆ.  ಅದೇ ರೀತಿ ನಮ್ಮ ಫೋನ್ ಅಥವಾ ಟ್ಯಾಬ್ಲೆಟ್ಟಿನ ಪರದೆಯ ಮೇಲೆ ಅವರ ಚಿತ್ರ ಕೂಡ ಮೂಡಿಬರುತ್ತದೆ.

ಫೋಟೋ ಕ್ಲಿಕ್ಕಿಸುವುದಷ್ಟೆ ಅಲ್ಲ, ವೀಡಿಯೋ ಚಿತ್ರೀಕರಿಸುವ - ಥ್ರೀಡಿ ಛಾಯಾಗ್ರಹಣ ಮಾಡುವ ಸಾಮರ್ಥ್ಯವಿರುವ ಕ್ಯಾಮೆರಾಗಳೂ ಮೊಬೈಲುಗಳಲ್ಲಿ ಕಾಣಸಿಗುತ್ತಿವೆ. ಅಷ್ಟೇ ಅಲ್ಲ, ಮೊಬೈಲಿನಲ್ಲಿರುವ ಕ್ಯಾಮೆರಾಗಳು ಬಾರ್‌ಕೋಡ್, ಕ್ಯೂಆರ್ ಕೋಡ್ ಮುಂತಾದ ಸಂಕೇತಗಳನ್ನು ಗುರುತಿಸುವ ಸ್ಕ್ಯಾನರುಗಳಂತೆಯೂ ಕೆಲಸಮಾಡುತ್ತಿವೆ.

ಒಟ್ಟಿನಲ್ಲಿ ಕ್ಯಾಮೆರಾ ಫೋನುಗಳು ಸಾಮಾನ್ಯ ಡಿಜಿಟಲ್ ಕ್ಯಾಮೆರಾಗಳಿಗೆ ಗಂಭೀರ ಸವಾಲನ್ನೇ ಒಡ್ಡುತ್ತಿರುವ ಈ ಸಂದರ್ಭದಲ್ಲಿ ನಮ್ಮ ಮೊಬೈಲನ್ನು ಛಾಯಾಗ್ರಹಣಕ್ಕಾಗಿ ಬಳಸುವ ಅಭ್ಯಾಸ ನಮ್ಮಲ್ಲಿ ಬೆಳೆಯುತ್ತಿದೆ. ಮೂಲೆ ಅಂಗಡಿ ಬೋರ್ಡಿನಲ್ಲಿರುವ ಸ್ಪೆಲ್ಲಿಂಗ್ ಮಿಸ್ಟೇಕಿನಿಂದ ಪ್ರಾರಂಭಿಸಿ ಮೈಸೂರು ಅರಮನೆಯ ದೀಪಾಲಂಕಾರದವರೆಗೆ ಸಕಲವನ್ನೂ ನಾವು ಮೊಬೈಲಿನಲ್ಲೇ ಸೆರೆಹಿಡಿಯುತ್ತಿದ್ದೇವೆ; ಮದುವೆಯ ವೀಡಿಯೋ ನಮ್ಮ ಫೋನಲ್ಲೇ ತೆಗೆಯಿರಿ ಎನ್ನುವಂತಹ ಜಾಹೀರಾತುಗಳಿಗೂ ಕಡಿಮೆಯೇನಿಲ್ಲ.

ಅಷ್ಟೇ ಏಕೆ, ಮಾಧ್ಯಮಗಳಲ್ಲಿ ಸುದ್ದಿಮಾಡಿದ ಅದೆಷ್ಟೋ ಜಾಗತಿಕ ಘಟನೆಗಳ ದೃಶ್ಯಗಳನ್ನು ಮೊಬೈಲ್ ಕ್ಯಾಮೆರಾ ಬಳಸಿಯೇ ಚಿತ್ರೀಕರಿಸಲಾಗಿತ್ತು ಎಂದು ಅಂಕಿ ಅಂಶಗಳು ಹೇಳುತ್ತವೆ. ಅನೇಕ ಘಟನೆಗಳ ಸುದ್ದಿ ಹೊರಜಗತ್ತನ್ನು ಮೊದಲಿಗೆ ತಲುಪಿದ್ದು ಮೊಬೈಲಿನಲ್ಲಿ ತೆಗೆದ ಚಿತ್ರ ಹಾಗೂ ವೀಡಿಯೋಗಳ ಮೂಲಕವೇ. ಮೊಬೈಲ್ ಕ್ಯಾಮೆರಾ ಜನಪ್ರಿಯತೆ ಎಷ್ಟರ ಮಟ್ಟಿಗೆ ಹೆಚ್ಚಿದೆಯೆಂದರೆ ಅಂತರಜಾಲದ ಮೂಲಕ ಛಾಯಾಚಿತ್ರಗಳನ್ನು ಹಂಚಿಕೊಳ್ಳುವ ತಾಣಗಳಲ್ಲಿ ಕಾಣಿಸಿಕೊಳ್ಳುವ ಚಿತ್ರಗಳಲ್ಲಿ ಬಹುಪಾಲನ್ನು ಮೊಬೈಲ್ ಕ್ಯಾಮೆರಾಗಳನ್ನು ಬಳಸಿಯೇ  ತೆಗೆದಿರುತ್ತಾರೆ ಎಂಬ ಸುದ್ದಿಯೂ ಕೇಳಿಬಂದಿತ್ತು.

ಮೊಬೈಲ್ ಫೋನ್ ಕ್ಯಾಮೆರಾಗಳ ಗುಣಮಟ್ಟ ಹಾಗೂ ಬಳಕೆ ಎರಡೂ ತೀವ್ರವಾಗಿ ಹೆಚ್ಚುತ್ತಿರುವುದರಿಂದ ಸಾಧಾರಣ ಡಿಜಿಟಲ್ ಕ್ಯಾಮೆರಾಗಳಿಗೆ ಬೇಡಿಕೆ ಇನ್ನಷ್ಟು ಕಡಿಮೆಯಾಗಲಿದೆ ಎಂದು ತಜ್ಞರು ಹೇಳುತ್ತಾರೆ. ಮೊಬೈಲ್ ಕ್ಯಾಮೆರಾ ಬಿಟ್ಟರೆ ಡಿಎಸ್‌ಎಲ್‌ಆರ್‌ಗಳಿಗಷ್ಟೆ ಬೇಡಿಕೆಯಿರುವ ಪರಿಸ್ಥಿತಿ ಬರಬಹುದೆನ್ನುವುದು ಅವರ ಅಂದಾಜು. ಅಂತಹ ಸನ್ನಿವೇಶವನ್ನು ಕೊಂಚ ಮುಂದೂಡುವ ಪ್ರಯತ್ನವಾಗಿಯೋ ಏನೋ ಸಾಮಾನ್ಯ ಕ್ಯಾಮೆರಾಗಳಲ್ಲೂ ಅಂತರಜಾಲ ಸಂಪರ್ಕ ಸೌಲಭ್ಯ ಒದಗಿಸುವ ಪರಿಪಾಠ ಇತ್ತೀಚೆಗೆ ಕಾಣಿಸಿಕೊಂಡಿದೆ.

ಫೆಬ್ರುವರಿ ೨೬, ೨೦೧೩ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge