ಮಂಗಳವಾರ, ಫೆಬ್ರವರಿ 19, 2013

ನೆಟ್‌ಲೋಕದಲ್ಲಿ ನೆಟ್ಟಗಿರೋಣ!

ತಪ್ಪು ಮಾಹಿತಿ ತಪ್ಪಿಸಲು ಕೆಲ ಸೂತ್ರಗಳು

ಟಿ. ಜಿ. ಶ್ರೀನಿಧಿ

ನಮ್ಮ ಬದುಕಿನ ಮೇಲೆ ವಿಶ್ವವ್ಯಾಪಿ ಜಾಲದ (ವರ್ಲ್ಡ್‌ವೈಡ್ ವೆಬ್) ಪ್ರಭಾವ ಹೆಚ್ಚುತ್ತಿರುವಂತೆಯೇ ವಿವಿಧ ಮಾಹಿತಿಗಾಗಿ ನಾವು ಅದನ್ನು ಅವಲಂಬಿಸುವುದೂ ಜಾಸ್ತಿಯಾಗಿದೆ. ಯಾವ ವಿಷಯದ ಬಗ್ಗೆ ಯಾವುದೇ ಮಾಹಿತಿ ಬೇಕಿದ್ದರೂ ವಿಶ್ವವ್ಯಾಪಿ ಜಾಲವನ್ನು ಪ್ರಮುಖ ಆಕರವಾಗಿ ಪರಿಗಣಿಸುವ ಅಭ್ಯಾಸ ಅನೇಕರಲ್ಲಿ ಈಗಾಗಲೇ ಬೆಳೆದುಬಿಟ್ಟಿದೆ.

ಈ ಅಭ್ಯಾಸ ತಪ್ಪು ಎನ್ನುವಂತೇನೂ ಇಲ್ಲ. ಏಕೆಂದರೆ ವಿಶ್ವವ್ಯಾಪಿ ಜಾಲ ನಿಜಕ್ಕೂ ಅಮೂಲ್ಯ ಮಾಹಿತಿಯ ಗಣಿ. ಆದರೆ ಇಲ್ಲಿ ಗಣಿಗಾರಿಕೆ ಮಾಡಲು ಹೊರಟಾಗ ಕೆಲವೊಮ್ಮೆ ಬಂಗಾರದ ಬದಲಿಗೆ ಕಾಗೆಬಂಗಾರ ಸಿಕ್ಕಿಬಿಡುತ್ತದೆ. ಅಂದರೆ, ಜಾಲಲೋಕದಲ್ಲಿ ಉಪಯುಕ್ತ ಮಾಹಿತಿ ಎಷ್ಟಿದೆಯೋ ಅಷ್ಟೇ, ಅಥವಾ ಅದಕ್ಕಿಂತ ಹೆಚ್ಚು ಪ್ರಮಾಣದ ಸುಳ್ಳುಗಳೂ ಅಲ್ಲಿ ಸುಳಿದಾಡುತ್ತಿರುತ್ತವೆ.

ವಿಶ್ವವ್ಯಾಪಿ ಜಾಲದ ಸಾಮಾನ್ಯ ಬಳಕೆದಾರರಾದ ನಾವು ಅಲ್ಲಿ ಸುಳ್ಳುಗಳನ್ನು ಸೃಷ್ಟಿಸುವ, ಇಲ್ಲವೇ ಅಂತಹ ಸುಳ್ಳುಗಳನ್ನು ಬಳಸಿ ಇತರರನ್ನು ವಂಚಿಸುವ ಉಸಾಬರಿಗೆ ಹೋಗುವುದಿಲ್ಲ ನಿಜ. ಆದರೆ ಜಾಲಲೋಕದಲ್ಲಿ ನಮ್ಮ ಗಮನಕ್ಕೆ ಬಂದ ಮಾಹಿತಿಯನ್ನೆಲ್ಲ ಸುಳ್ಳೋ ನಿಜವೋ ನೋಡದೆ ಎಲ್ಲರಿಗೂ ಹಂಚಿಬಿಡುವ ಹವ್ಯಾಸ ಮಾತ್ರ ನಮ್ಮಲ್ಲಿ ಅನೇಕರಿಗೆ ಇರುತ್ತದೆ. ಫೇಸ್‌ಬುಕ್‌ನಲ್ಲಂತೂ ಸಿಕ್ಕಿದ್ದನ್ನೆಲ್ಲ ಶೇರ್ ಮಾಡುವುದೇ ಹಲವರ ಕೆಲಸ.

ಕಂಪ್ಯೂಟರ್ ವೈರಸ್ಸುಗಳ ಬಗ್ಗೆ ಕಪೋಲಕಲ್ಪಿತ ಮಾಹಿತಿ, ಫೇಸ್‌ಬುಕ್ ಸೇವೆ ನಿಂತುಹೋಗಲಿದೆ ಎನ್ನುವಂತಹ ಬೆದರಿಕೆಗಳು, ಅದೇನೇನೋ ಮಾಡಿದರೆ ಐಪ್ಯಾಡು-ಲ್ಯಾಪ್‌ಟಾಪುಗಳೆಲ್ಲ ಉಚಿತವಾಗಿ ಸಿಗುತ್ತದೆ ಎನ್ನುವಂತಹ ಬೊಗಳೆ - ಇವು ಜಾಲಲೋಕದಲ್ಲಿ ಹರಿದಾಡುವ ತಲೆಬುಡವಿಲ್ಲದ ಸಂಗತಿಗಳಿಗೆ ಕೆಲವು ಉದಾಹರಣೆಗಳಷ್ಟೆ. ಇವೆಲ್ಲ ಹಾಗಿರಲಿ, ಇಂತಹ ಇನ್ನೂ ಕೆಲ ಸಂದೇಶಗಳು ಆರೋಗ್ಯ ಹಾಗೂ ಔಷಧಗಳಿಗೆ ಸಂಬಂಧಿಸಿದ ಸುಳ್ಳು ಅಥವಾ ತಪ್ಪು ಮಾಹಿತಿಯನ್ನು ಹಂಚುತ್ತವೆ.

ಇಂತಹ ಮಾಹಿತಿಯನ್ನು ಹಂಚುವುದು ಮತ್ತು ನಂಬುವುದು ಎರಡೂ ಶುದ್ಧ ತಪ್ಪು. ಅದರಿಂದಾಗಿ ಸಮಯ ಹಾಳಾಗುವುದು ಅಥವಾ ಮಿತ್ರರಿಂದ ಬೈಸಿಕೊಳ್ಳುವುದಷ್ಟೇ ಅಲ್ಲ, ಆರೋಗ್ಯಕ್ಕೆ ಸಂಬಂಧಿಸಿದಂತೆ ಸಿಕ್ಕಸಿಕ್ಕ ಸಲಹೆಯನ್ನೆಲ್ಲ ಪಾಲಿಸಹೋಗುವುದು ಹಾನಿಕಾರಕವೂ ಆಗಬಹುದು.

ಹಾಗಾದರೆ ಇದರಿಂದ ಪಾರಾಗಲು ನಾವೇನು ಮಾಡಬೇಕು? ಜಾಲಲೋಕದಲ್ಲಿರುವ ಅಪಾರ ಫಸಲಿನಲ್ಲಿ ಕಾಳನ್ನಷ್ಟೆ ತೆಗೆದುಕೊಂಡು ಜೊಳ್ಳು ಸಿಕ್ಕಸಿಕ್ಕಲ್ಲೆಲ್ಲ ಹಾರಾಡದಂತೆ ನೋಡಿಕೊಳ್ಳುವುದು ಹೇಗೆ? ಈ ನಿಟ್ಟಿನಲ್ಲಿ ಒಂದಷ್ಟು ಮಾಹಿತಿ ಇಲ್ಲಿದೆ.

* * *

ಜಾಲಲೋಕದಲ್ಲಿ ಹರಿದಾಡುವ ಸುಳ್ಳು ಮಾಹಿತಿಯನ್ನು ಪತ್ತೆಮಾಡುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯೆಂದರೆ ಆ ಮಾಹಿತಿಯನ್ನು ಕೊಂಚ ನಿಧಾನಕ್ಕೆ ಪರಿಶೀಲಿಸುವುದು.

ಉದಾಹರಣೆಗೆ ಈ ಸಂದೇಶವನ್ನು ಅದೆಷ್ಟೋ ಜನರಿಗೆ ಕಳುಹಿಸಿದರೆ ಒಂದು ಐಪ್ಯಾಡ್ ಉಚಿತವಾಗಿ ಸಿಗುತ್ತದೆ ಎಂದು ನಿಮಗೆ ಬಂದ ಇಮೇಲ್‌ನಲ್ಲಿದೆ ಎಂದುಕೊಳ್ಳೋಣ. ಈ ಕಲ್ಪನೆ ಕೇಳಲು ಎಷ್ಟೇ ರೋಚಕವಾಗಿದ್ದರೂ ಹಾಗೆಲ್ಲಾದರೂ ಆಗುವುದು ಸಾಧ್ಯವೆ ಎಂದು ನಾವು ಮೊದಲು ಯೋಚಿಸಬೇಕಾಗುತ್ತದೆ. ಹತ್ತು ಜನಕ್ಕೆ ಇಮೇಲ್ ಕಳುಹಿಸಿದವರಿಗೆಲ್ಲ ಒಂದೊಂದು ಐಪ್ಯಾಡ್ ಕೊಡಲು ಯಾರಿಗೆ ಸಾಧ್ಯ? ಹಾಗೆಯೇ ನೀವು ಹತ್ತು ಜನಕ್ಕೆ ಇಮೇಲ್ ಕಳುಹಿಸಿದ್ದೀರಿ ಎಂದು ಅವರಿಗೆ ಹೇಗೆ ತಿಳಿಯುತ್ತದೆ? ಎಂದೆಲ್ಲ ಯೋಚಿಸುತ್ತಿದ್ದಂತೆ ಈ ಹೇಳಿಕೆಯ ಬಂಡವಾಳವೆಲ್ಲ ಬಯಲಾಗಿಬಿಡುತ್ತದೆ. ಇದರ ಬದಲಿಗೆ ಹಿಂದೆಮುಂದೆ ಯೋಚಿಸದೆ ನಮ್ಮ ಮಿತ್ರರಿಗೆಲ್ಲ ಈ ಸಂದೇಶವನ್ನು ಫಾರ್‌ವರ್ಡಿಸಿದರೆ? ಎಷ್ಟು ಸಮಯ ಹಾಗೂ ಸಂಪನ್ಮೂಲ ವ್ಯರ್ಥ ಅಲ್ಲವೆ?

ಸಂದೇಶದಲ್ಲಿರುವ ಮಾಹಿತಿ ನಿಜವೋ ಸುಳ್ಳೋ ಎಂದು ಅರಿತುಕೊಳ್ಳಲು ಆ ಸಂದೇಶವನ್ನೇ ಬಳಸುವುದು ಕೂಡ ಸಾಧ್ಯ. ಈ ಸಂದೇಶವನ್ನು ನಿಮಗೆ ಗೊತ್ತಿದ್ದವರಿಗೆಲ್ಲ ಈಗಲೇ ಕಳುಹಿಸಿ! ಎನ್ನುವಂತಹ ಆಗ್ರಹಪೂರ್ವಕ ಸೂಚನೆಗಳಿರುವ ಸಂದೇಶದಲ್ಲಿರುವ ಮಾಹಿತಿ ಸುಳ್ಳಾಗಿರುವ ಸಾಧ್ಯತೆಯೇ ಹೆಚ್ಚು. ಮಾಹಿತಿಗೆ ಪೂರಕವಾದ ಲಿಂಕುಗಳಾಗಲೀ ನಂಬಲರ್ಹ ಉಲ್ಲೇಖಗಳಾಗಲೀ ಇಲ್ಲದ ಸಂದೇಶಗಳದೂ ಇದೇ ಕತೆ.

ಇನ್ನು ಕೆಲ ಸಂದೇಶಗಳ ಸತ್ಯಾಸತ್ಯತೆಯನ್ನು ತಿಳಿದುಕೊಳ್ಳಲು ಅಗತ್ಯವಾದ ಮಾಹಿತಿ ನಮ್ಮಲ್ಲಿ ಇಲ್ಲದಿರಬಹುದು. ನಾವು ದಿನನಿತ್ಯ ಬಳಸುವ ಯಾವುದೋ ವಸ್ತು ಭಯಂಕರ ಕಾಯಿಲೆಗೆ ರಾಮಬಾಣ ಅಂತಲೋ ಅದೇನೋ ಮಾಡಿದರೆ ನಿಮ್ಮ ಫೇಸ್‌ಬುಕ್ ಪುಟವನ್ನು ಕೆಂಪುಬಣ್ಣಕ್ಕೆ ಬದಲಿಸಿಕೊಳ್ಳಬಹುದು ಅಂತಲೋ ಹೇಳುವ ಸಂದೇಶ ನಮ್ಮ ಕಣ್ಣಿಗೆ ಬಿತ್ತು ಎಂದುಕೊಳ್ಳಿ. ಅದರಲ್ಲಿರುವ ವಿಷಯ ನಿಜವೋ ಸುಳ್ಳೋ ಎನ್ನುವುದು ತಕ್ಷಣಕ್ಕೆ ಗೊತ್ತಾಗದಿದ್ದರೆ ನಾವು ಗೂಗಲ್ ಮೊರೆಹೋಗಬಹುದು, ಇಲ್ಲವೇ ಇಂತಹ ಸಂದೇಶಗಳನ್ನು ವಿಶ್ಲೇಷಿಸಿ ಅವು ನಿಜವೋ ಸುಳ್ಳೋ ಎಂದು ವಿವರಿಸುವ ಜಾಲತಾಣಗಳಿಗೂ ಭೇಟಿಕೊಡಬಹುದು.

snopes.com, hoax-slayer.com ಮೊದಲಾದವು ಈ ಬಗೆಯ ಜಾಲತಾಣಗಳಿಗೆ ಉದಾಹರಣೆಗಳು. ಎಲ್ಲೋ ಪ್ರಾರಂಭವಾಗಿ ಫಾರ್‌ವರ್ಡ್ ಆಗುತ್ತ ಆಗುತ್ತ ನಮ್ಮವರೆಗೂ ಬಂದು ತಲುಪುವ ಸಂದೇಶಗಳಲ್ಲಿ ನಿಜ ಎಷ್ಟಿದೆ ಹಾಗೂ ಸುಳ್ಳು ಎಷ್ಟಿದೆ ಎನ್ನುವ ವಿಷಯ ಸಾಮಾನ್ಯವಾಗಿ ಈ ತಾಣಗಳಲ್ಲಿ ಸಿಕ್ಕಿಬಿಡುತ್ತದೆ.

ಕೆಲವೊಮ್ಮೆ ನಕಲಿ ಫೋಟೋಗಳು ಕೂಡ ಇಮೇಲ್ ಹಾಗೂ ಸಮಾಜ ಜಾಲಗಳ ಮೂಲಕ ಹರಿದಾಡುವುದುಂಟು. ಈ ಚಿತ್ರಗಳು ಫೋಟೋಶಾಪ್ ಸೃಷ್ಟಿಯಾಗಿದ್ದರೂ ಕೂಡ ಸುಳ್ಳು ಮಾಹಿತಿಯ ಕತೆ ಹೆಣೆದು ಅವು ನೈಜ ಚಿತ್ರಗಳೇ ಎನ್ನುವಂತೆ ಬಿಂಬಿಸಲು ಪ್ರಯತ್ನಿಸಲಾಗಿರುತ್ತದೆ.

ಇಂತಹ ಯಾವುದೇ ಚಿತ್ರವನ್ನು ನೋಡಿದಾಕ್ಷಣ ಅದು ಅಸಹಜವಾಗಿದೆ ಎನ್ನಿಸಿದರೆ ಅದರ ಸತ್ಯಾಸತ್ಯತೆ ತಿಳಿದುಕೊಳ್ಳುವುದು ಕೂಡ ಸಾಧ್ಯ. ಗೂಗಲ್‌ನ 'ಸರ್ಚ್ ಬೈ ಇಮೇಜಸ್' ಆಯ್ಕೆಯಲ್ಲಿ (images.google.com) ಆ ಚಿತ್ರವನ್ನು ಅಪ್‌ಲೋಡ್ ಮಾಡಿದರೆ ಅದು ಯಾವೆಲ್ಲ ಜಾಲತಾಣಗಳಲ್ಲಿ ಪ್ರಕಟವಾಗಿದೆ ಎಂದು ನೋಡಬಹುದು; ಅಷ್ಟೇ ಅಲ್ಲ, ಆ ಚಿತ್ರಗಳ ಜೊತೆಗೆ ಕಾಣಿಸಿಕೊಳ್ಳುವ ಲೇಖನಗಳನ್ನು ಗಮನಿಸಿದರೆ ಚಿತ್ರದ ಸತ್ಯಾಸತ್ಯತೆ ಬಗ್ಗೆ ಸುಮಾರಾಗಿ ಅಂದಾಜಿಸುವುದು ಕೂಡ ಸಾಧ್ಯ.

* * *

ಇಮೇಲ್ ಮೂಲಕವೋ ಫೇಸ್‌ಬುಕ್‌ನಲ್ಲೋ ಬಂದ ಸಂದೇಶ ನಮ್ಮನ್ನು ವಂಚಿಸಿ ಹಣಕೀಳಲು ಪ್ರಯತ್ನಿಸುತ್ತಿದ್ದರೆ ಅಂತಹ ಸಂದೇಶ ಕಳುಹಿಸಿದವರ ಉದ್ದೇಶ ಸ್ಪಷ್ಟ: ಅವರು ತೋಡಿದ ಹಳ್ಳಕ್ಕೆ ನಾವು ಬಿದ್ದರೆ ಅವರಿಗೆ ಲಾಭವೋ ಲಾಭ. ಆದರೆ ಸುಳ್ಳು ಮಾಹಿತಿಯನ್ನು ಹರಡುವವರ ಉದ್ದೇಶ ಏನಿರುತ್ತದೆ? ಇಲ್ಲದ ವೈರಸ್ಸಿನ ಹೆಸರಿನಲ್ಲಿ ನಮ್ಮನ್ನು ಹೆದರಿಸಿದರೆ, ಪುಗಸಟ್ಟೆ ಐಪ್ಯಾಡಿನ ಆಸೆ ತೋರಿಸಿದರೆ ಅವರಿಗೇನು ಲಾಭ?

ಈ ಪ್ರಶ್ನೆಗೆ ಉತ್ತರಿಸುವುದು ಕೊಂಚ ಕಷ್ಟವೇ. ಕೆಲವೊಮ್ಮೆ ಇಂತಹ ಸಂದೇಶಗಳನ್ನು ಕುಚೇಷ್ಟೆಗೆಂದು ಉದ್ದೇಶಪೂರ್ವಕವಾಗಿಯೇ ಸೃಷ್ಟಿಸಲಾಗಿರುತ್ತದೆ. ಸ್ನೇಹಿತರ ಬಳಗವನ್ನು ಏಮಾರಿಸುವ ಉದ್ದೇಶದಿಂದ ತಯಾರಾದ ಸಂದೇಶಗಳು ಮೂಲ ಸೃಷ್ಟಿಕರ್ತನ ನಿಯಂತ್ರಣ ಮೀರಿ ಹೊರಪ್ರಪಂಚವನ್ನು ತಲುಪುವ ಸಾಧ್ಯತೆಯೂ ಇಲ್ಲದಿಲ್ಲ. ಇನ್ನು ಕೆಲ ಸನ್ನಿವೇಶಗಳಲ್ಲಿ ಯಾವುದೋ ವ್ಯಕ್ತಿ ಅಥವಾ ಸಂಸ್ಥೆಯ ಬಗ್ಗೆ ಅಪಪ್ರಚಾರ ಮಾಡಲು ಕೂಡ ಇಂತಹ ಸಂದೇಶಗಳನ್ನು ಹುಟ್ಟುಹಾಕಲಾಗಿರುತ್ತದೆ. ಯಾವಯಾವುದೋ ಉದ್ದೇಶಗಳಿಗಾಗಿ ಪ್ರಾರಂಭಿಸಲಾಗುವ ಇಮೇಲ್ ಮನವಿಪತ್ರಗಳ ಹಿಂದೆ ರದ್ದಿ ಸಂದೇಶಗಳನ್ನು (ಸ್ಪಾಮ್) ಕಳುಹಿಸಲಿಕ್ಕಾಗಿ ಇಮೇಲ್ ವಿಳಾಸಗಳನ್ನು ಕದಿಯುವ ಹುನ್ನಾರವೂ ಇರಬಹುದು.

ಯಾವುದೋ ಮಾಹಿತಿಯನ್ನು ತಪ್ಪಾಗಿ ಅರ್ಥೈಸಿಕೊಂಡು ಅದರ ಆಧಾರದ ಮೇಲೆ ಈ ಬಗೆಯ ಸಂದೇಶಗಳನ್ನು ಹುಟ್ಟುಹಾಕುವುದೂ ಉಂಟು. ಬೋನ್ಸಾಯ್ ವಿಧಾನದಲ್ಲಿ ಗಿಡಮರಗಳನ್ನು ಚಿಕ್ಕಗಾತ್ರದಲ್ಲಿ ಬೆಳೆಸಿದಂತೆ ಬೆಕ್ಕುಗಳನ್ನೂ ಚಿಕ್ಕ ಗಾತ್ರದಲ್ಲಿ ಬೆಳೆಸಬಹುದು, ಅದಕ್ಕಾಗಿ ಮರಿಗಳನ್ನು ಗಾಜಿನ ಭರಣಿಗಳೊಳಗೆ ಹಾಕಿಡಬೇಕು ಎಂದು ಯಾರೋ ತಮಾಷೆಗೆ ಬರೆದಿದ್ದನ್ನು ಓದಿದವರು ಅಲ್ಲಿನ ಕುಚೇಷ್ಟೆಯನ್ನು ಅರ್ಥಮಾಡಿಕೊಳ್ಳದೆ ಈ ಪರಿಕಲ್ಪನೆಯನ್ನು ವಿರೋಧಿಸುವ ಸಂದೇಶಗಳನ್ನು ಹಂಚಿ ಭಾರೀ ರಾದ್ಧಾಂತವೇ ಆಗಿಬಿಟ್ಟಿತ್ತು (ಹೆಚ್ಚಿನ ವಿವರಗಳಿಗೆ ಗೂಗಲ್‌ನಲ್ಲಿ Bonsai Kittens ಎಂದು ಹುಡುಕಿನೋಡಿ).

* * *

ಅದೆಲ್ಲ ಏನೇ ಆದರೂ, ಸಿಕ್ಕಸಿಕ್ಕ ಸಂದೇಶಗಳನ್ನೆಲ್ಲ ಎಲ್ಲರಿಗೂ ಫಾರ್‌ವರ್ಡ್ ಮಾಡುವ ಅಥವಾ ಫೇಸ್‌ಬುಕ್‌ನಲ್ಲಿ ಶೇರ್ ಮಾಡುವ ಮುನ್ನ ಒಮ್ಮೆ ಯೋಚಿಸುವುದು ನಮ್ಮ ಜವಾಬ್ದಾರಿ ಎನ್ನುವುದಂತೂ ನಿಜ. ಹಾಗಾಗಿ ಈ ಸಂದೇಶವನ್ನು ಹತ್ತು ಜನಕ್ಕೆ ಕಳುಹಿಸಿದರೆ ನಿಮಗೆ ಒಳ್ಳೆಯದಾಗುತ್ತದೆ ಅಂತಲೋ ಅದಾವುದೋ ರೋಗದಿಂದ ಬಳಲುತ್ತಿರುವವರಿಗೆ ದುಡ್ಡು ಸಿಗುತ್ತೆ ಅಂತಲೋ ಹೇಳುವ ಸಂದೇಶಗಳನ್ನು ಎಲ್ಲರೊಡನೆಯೂ ಹಂಚಿಕೊಂಡು ನಮ್ಮ ಆಪ್ತರಿಗೆಲ್ಲ ಕಿರಿಕಿರಿ ಮಾಡದಿರುವುದೇ ಒಳ್ಳೆಯ ಅಭ್ಯಾಸ ಎನ್ನಬಹುದು. ಅಕಸ್ಮಾತ್ ನಮ್ಮ ಪರಿಚಿತರಲ್ಲಿ ಯಾರಾದರೂ ಇಂತಹ ಅಸಂಬದ್ಧ ಸಂದೇಶಗಳನ್ನು ನಮ್ಮೊಡನೆ ಹಂಚಿಕೊಂಡರೆ ಒಳ್ಳೆಯ ಮಾತಿನಲ್ಲೇ ಅವರಿಗೆ ತಿಳಿಸಿಹೇಳುವುದು ಖಂಡಿತಾ ತಪ್ಪಾಗಲಾರದು!

ಫೆಬ್ರುವರಿ ೧೯, ೨೦೧೩ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

1 ಕಾಮೆಂಟ್‌:

ಅನಾಮಧೇಯ ಹೇಳಿದರು...

ತುಂಬಾ ಅರ್ಥಪೂರ್ಣ ಲೇಖನ.ಧನ್ಯವಾದಗಳು.

badge