ಮಂಗಳವಾರ, ಜನವರಿ 29, 2013

ಒಂದು ಕ್ಲಿಕ್ಕಿನ ಕತೆ


ಟಿ. ಜಿ. ಶ್ರೀನಿಧಿ

ಮೊನ್ನೆ ನನ್ನ ಹೆಂಡತಿಯ ಜೊತೆಗೆ ಮಾತನಾಡುತ್ತಿದ್ದಾಗ ಸಂಭಾಷಣೆ ನನ್ನ ಪ್ರಾಥಮಿಕ ಶಾಲೆಯ ದಿನಗಳತ್ತ  ತಿರುಗಿತು. ಸುಮಾರು ಹದಿನೈದು-ಇಪ್ಪತ್ತು ವರ್ಷ ಹಿಂದೆ ಮಲೆನಾಡಿನ ಪುಟ್ಟ ಊರೊಂದರಲ್ಲಿ ಕಳೆದ ಆ ದಿನಗಳ ನೆನಪು ನನಗೆ ಇಂದೂ ಸ್ಪಷ್ಟವಾಗಿಯೇ ಇದೆ; ಆದರೆ ಆ ಸನ್ನಿವೇಶಗಳನ್ನು ನನ್ನ ಹೆಂಡತಿಗೆ ವಿವರಿಸುವಾಗ ತೋರಿಸಲು ಇರುವ ಛಾಯಾಚಿತ್ರಗಳು ಮಾತ್ರ ಬೆರೆಳೆಣಿಕೆಯಷ್ಟು: ಹಳೆಯ ಆಲ್ಬಮ್ಮುಗಳನ್ನೆಲ್ಲ ಹುಡುಕಿದರೆ ಶಾಲೆಯ ಪ್ರತಿ ವರ್ಷಕ್ಕೂ ಒಂದೋ ಎರಡೋ ಚಿತ್ರ ಸಿಗಬಹುದೇನೋ ಅಷ್ಟೆ!

ಆದರೆ ಈಗ? ಸಮಾರಂಭಗಳು - ಪ್ರವಾಸಗಳು ಹಾಗಿರಲಿ, ದಿನನಿತ್ಯದ ಸಣ್ಣಪುಟ್ಟ ಘಟನೆಗಳ ಚಿತ್ರಗಳೂ ನಮ್ಮ ನೆನಪಿನ ವಿಸ್ತರಣೆಯಂತೆ ಮೊಬೈಲಿನಲ್ಲಿ - ಕ್ಯಾಮೆರಾದಲ್ಲಿ - ಕಂಪ್ಯೂಟರಿನಲ್ಲಿ ಕುಳಿತುಬಿಟ್ಟಿರುತ್ತವೆ.

ಸಾಕಷ್ಟು ಕೆಲಸ ಮತ್ತು ಖರ್ಚಿನ ವ್ಯವಹಾರವಾಗಿದ್ದ ಛಾಯಾಗ್ರಹಣವನ್ನು ಇಷ್ಟು ಸರಳಗೊಳಿಸಿದ್ದು, ನಿರ್ವಿವಾದವಾಗಿ, ಡಿಜಿಟಲ್ ಕ್ಯಾಮೆರಾಗಳು. ಈ ಡಿಜಿಟಲ್ ಅವತಾರದಿಂದಾಗಿ ಛಾಯಾಗ್ರಹಣ ಇಂದು ಪ್ರತಿಯೊಬ್ಬರ ಕೈಗೂ ಎಟುಕುವಂತಾಗಿದೆ. ತಂತ್ರಜ್ಞಾನ ಪಂಡಿತರಿಂದ ಪಾಮರರವರೆಗೆ ಡಿಜಿಟಲ್ ಕ್ಯಾಮೆರಾ ಬಳಕೆ ಎಲ್ಲರಿಗೂ ನೀರು ಕುಡಿದಷ್ಟೇ ಸುಲಭ.

ಛಾಯಾಗ್ರಹಣದ ಸ್ವರೂಪವನ್ನೇ ಬದಲಿಸಿಬಿಟ್ಟಿರುವ ಈ ಕ್ಯಾಮೆರಾಗಳು ಕೆಲಸಮಾಡುವುದು ಹೇಗೆ? ಡಿಜಿಟಲ್ ಕ್ಯಾಮೆರಾ ಕಾರ್ಯವೈಖರಿಯ ಸಣ್ಣದೊಂದು ಪರಿಚಯ ಇಲ್ಲಿದೆ.

* * *

ಇಮೇಲ್ ಮೂಲಕ ಇರಬಹುದು, ಸಮಾಜಜಾಲಗಳಲ್ಲೇ ಇರಬಹುದು - ಅಂತರಜಾಲದ ಮೂಲಕ ಛಾಯಾಚಿತ್ರಗಳನ್ನು ರವಾನಿಸುವುದು ನಮಗೆಲ್ಲ ತೀರಾ ಸಾಮಾನ್ಯ ವಿಷಯ. ಹೀಗೆ ರವಾನಿಸಬೇಕೆಂದರೆ ಮೊದಲಿಗೆ ಆ ಚಿತ್ರವನ್ನು ಒಂದು-ಸೊನ್ನೆಗಳ ಕಂಪ್ಯೂಟರ್ ಭಾಷೆಯಲ್ಲಿ ಪ್ರತಿನಿಧಿಸಬೇಕಾಗುತ್ತದೆ.

ಇದಕ್ಕಾಗಿ ನಮ್ಮ ಮುಂದಿರುವ ಆಯ್ಕೆಗಳು ಎರಡು - ಸಾಮಾನ್ಯ ಕ್ಯಾಮೆರಾದಲ್ಲಿ ಕ್ಲಿಕ್ಕಿಸಿದ ಚಿತ್ರವನ್ನು ಪ್ರಿಂಟುಹಾಕಿಸಿ ಆ ಪ್ರಿಂಟನ್ನು ಸ್ಕ್ಯಾನ್ ಮಾಡುವುದು, ಇಲ್ಲವೇ ಕ್ಯಾಮೆರಾ ಮುಂದಿನ ದೃಶ್ಯವನ್ನು ನೇರವಾಗಿ ಕಂಪ್ಯೂಟರಿಗೆ ಅರ್ಥವಾಗುವ ರೂಪದಲ್ಲೇ ಸೆರೆಹಿಡಿದುಕೊಳ್ಳುವುದು.

ಫೋಟೋ ಹೇಗೆ ಬಂದಿದೆಯೆಂದು ತಿಳಿದುಕೊಳ್ಳಲು ಸಾಕಷ್ಟು ಹಣ-ಸಮಯ ವ್ಯಯಿಸಿ ಆನಂತರ ಮುದ್ರಿತ ಚಿತ್ರವನ್ನು ಸ್ಕ್ಯಾನ್ ಮಾಡಿ ಗುಣಮಟ್ಟ ಸುಮಾರಾಗಿದೆ ಎಂದು ಗೊಣಗುವುದು ನಿಜಕ್ಕೂ ಕೊಂಕಣ ಸುತ್ತಿ ಮೈಲಾರಕ್ಕೆ ಹೋಗುವ ಸಂಗತಿಯೇ! ಈ ತಾಪತ್ರಯವನ್ನು ಸುಲಭವಾಗಿ ನಿವಾರಿಸುವ ಎರಡನೇ ಆಯ್ಕೆಯಿದೆಯಲ್ಲ, ಅದೇ ಡಿಜಿಟಲ್ ಕ್ಯಾಮೆರಾಗಳು ನಮಗೆ ನೀಡಿರುವ ಕೊಡುಗೆ.

ಸಾಮಾನ್ಯ ಕ್ಯಾಮೆರಾಗಳಲ್ಲಿರುವಂತೆಯೇ ಡಿಜಿಟಲ್ ಕ್ಯಾಮೆರಾಗಳಲ್ಲೂ ಬೆಳಕನ್ನು ಒಳತರುವ ಲೆನ್ಸುಗಳಿರುತ್ತವೆ. ಹೀಗೆ ಒಳಬರುವ ಬೆಳಕು ಸಾಮಾನ್ಯ ಕ್ಯಾಮೆರಾಗಳಲ್ಲಿ ಫಿಲ್ಮಿನ ಮೇಲೆ ಬಿದ್ದು ಕ್ಯಾಮೆರಾ ಮುಂದಿನ ದೃಶ್ಯವನ್ನು ಅದರಲ್ಲಿ ಸೆರೆಹಿಡಿಯುವುದು ನಮಗೆ ಗೊತ್ತಿರುವ ವಿಷಯವೇ. ಆದರೆ ಡಿಜಿಟಲ್ ಕ್ಯಾಮೆರಾಗಳಲ್ಲಿ ಈ ಬೆಳಕು ಫಿಲ್ಮಿನ ಬದಲು ಇಮೇಜ್ ಸೆನ್ಸರ್ ಎಂಬ ಸಾಧನದ ಮೇಲೆ ಬೀಳುತ್ತದೆ, ಮತ್ತು ಆ ಸಾಧನ ಕ್ಯಾಮೆರಾ ಮುಂದಿನ ದೃಶ್ಯವನ್ನು ಒಂದು-ಸೊನ್ನೆಗಳ ಕಂಪ್ಯೂಟರ್ ಭಾಷೆಯಲ್ಲಿ ಸೆರೆಹಿಡಿದಿಟ್ಟುಕೊಳ್ಳುತ್ತದೆ.

* * *

ಸಾಮಾನ್ಯ ಕ್ಯಾಮೆರಾಗಳಲ್ಲಿ ಫಿಲ್ಮು ಮಾಡುವ ಕೆಲಸವನ್ನೇ ಡಿಜಿಟಲ್ ಕ್ಯಾಮೆರಾದ ಇಮೇಜ್ ಸೆನ್ಸರ್ ಮಾಡುತ್ತದೆ ಎನ್ನಬಹುದು. ಅದು ಚಿತ್ರವನ್ನು ದಾಖಲಿಸಿಕೊಳ್ಳುವ ವಿಧಾನ ಮಾತ್ರ ಕೊಂಚ ಭಿನ್ನ, ಅಷ್ಟೆ.

ಲೆನ್ಸಿನ ಮೂಲಕ ಹಾದು ತನ್ನ ಮೇಲೆ ಬೀಳುವ ಬೆಳಕನ್ನು ಮೊದಲಿಗೆ ಇಲೆಕ್ಟ್ರಾನುಗಳಾಗಿ ಪರಿವರ್ತಿಸುವುದು ಈ ಸೆನ್ಸರಿನ ಮುಖ್ಯ ಕೆಲಸ. ಸೂರ್ಯನ ಬೆಳಕನ್ನು ವಿದ್ಯುತ್ತಾಗಿ ಪರಿವರ್ತಿಸುವ ಸೋಲಾರ್ ಫಲಕಗಳನ್ನು ನೋಡಿದ್ದೇವಲ್ಲ, ಇಮೇಜ್ ಸೆನ್ಸರನ್ನು ಅಂತಹುದೊಂದು ಫಲಕದ ಪುಟಾಣಿ ರೂಪವಾಗಿ ಕಲ್ಪಿಸಿಕೊಂಡರೆ ಅದರಲ್ಲಿ ಸೋಲಾರ್ ಸೆಲ್‌ನಂತಹುದೇ ಘಟಕಗಳು ಲಕ್ಷಾಂತರ ಸಂಖ್ಯೆಯಲ್ಲಿರುತ್ತವೆ ಎನ್ನಬಹುದು.

ಇಂತಹ ಪ್ರತಿಯೊಂದು ಸೆಲ್‌ನ ಮೇಲೆ ಬೀಳುವ ಬೆಳಕನ್ನು ಇಲೆಕ್ಟ್ರಾನುಗಳಾಗಿ ಪರಿವರ್ತಿಸುವ ಇಮೇಜ್ ಸೆನ್ಸರ್, ಅದರ ಪ್ರಮಾಣವನ್ನು ಡಿಜಿಟಲ್ ರೂಪದಲ್ಲಿ ಪ್ರತಿನಿಧಿಸುತ್ತದೆ. ಮುಂದೆ ಇದೇ ಮಾಹಿತಿಯನ್ನು ಅರ್ಥಮಾಡಿಕೊಳ್ಳುವ ಕಂಪ್ಯೂಟರ್, ಅದನ್ನು ಪರದೆಯ ಮೇಲೆ ಚಿತ್ರರೂಪದಲ್ಲಿ ಪ್ರದರ್ಶಿಸುತ್ತದೆ, ಆ ಚಿತ್ರವನ್ನು ಸಂಪಾದಿಸಲು - ಮುದ್ರಿಸಲು ಕೂಡ ನೆರವಾಗುತ್ತದೆ.

* * *

ಇಮೇಜ್ ಸೆನ್ಸರ್ ತನ್ನ ಮೇಲೆ ಬೀಳುವ ಬೆಳಕನ್ನಷ್ಟೆ ಗ್ರಹಿಸಿ ಅದನ್ನು ಡಿಜಿಟಲ್ ರೂಪಕ್ಕೆ ಪರಿವರ್ತಿಸುತ್ತದಲ್ಲ, ಆ ಮೂಲಕ ಕ್ಯಾಮೆರಾ ಮುಂದಿನ ದೃಶ್ಯ ಡಿಜಿಟಲ್ ಕ್ಯಾಮೆರಾದಲ್ಲಿ ದಾಖಲಾಗುತ್ತದೆ ಎನ್ನುವುದೇನೋ ಸರಿ. ಆದರೆ ಆ ದೃಶ್ಯದಲ್ಲಿರುವ ಅಸಂಖ್ಯ ಬಣ್ಣಗಳು ಚಿತ್ರದಲ್ಲಿ ಸೆರೆಯಾಗುವುದು ಹೇಗೆ?

ಈ ಉದ್ದೇಶಕ್ಕಾಗಿ ಫಿಲ್ಟರುಗಳನ್ನು ಬಳಸಲಾಗುತ್ತದೆ. ಕೆಂಪು, ಹಸಿರು ಹಾಗೂ ನೀಲಿ ಬಣ್ಣಗಳನ್ನು ಗ್ರಹಿಸುವ ಈ ಫಿಲ್ಟರುಗಳು ಕ್ಯಾಮೆರಾ ಮುಂದಿನ ದೃಶ್ಯದಲ್ಲಿ ಈ ಬಣ್ಣಗಳು ಯಾವ ಪ್ರಮಾಣದಲ್ಲಿವೆ ಎನ್ನುವುದನ್ನು ದಾಖಲಿಸಿಕೊಳ್ಳುತ್ತವೆ. ಈ ಮಾಹಿತಿಯ ಆಧಾರದ ಮೇಲೆ ಚಿತ್ರದ ಬಣ್ಣಗಳನ್ನು ಗುರುತಿಸುವ ಕ್ಯಾಮೆರಾ, ತಾನು ಸೆರೆಹಿಡಿದ ಚಿತ್ರದಲ್ಲಿ ನೈಜ ಬಣ್ಣಗಳೇ ಇರುವಂತೆ ನೋಡಿಕೊಳ್ಳುತ್ತದೆ.

* * *

ಛಾಯಾಗ್ರಹಣ ಕ್ಷೇತ್ರ ಫಿಲ್ಮಿನ ಕಾಲದಿಂದ ಡಿಜಿಟಲ್ ಕಾಲಕ್ಕೆ ಒಂದೇ ನೆಗೆತದಲ್ಲೇನೂ ಬಂದುಬಿಡಲಿಲ್ಲ. ಫಿಲ್ಮ್ ತೊಳೆಸುವ - ಪ್ರಿಂಟು ಹಾಕಿಸಲು ಓಡಾಡುವ ತಾಪತ್ರಯವನ್ನೆಲ್ಲ ತಪ್ಪಿಸುವ ನಿಟ್ಟಿನಲ್ಲಿ ಹಲವಾರು ದಶಕಗಳ ಹಿಂದೆಯೇ ಒಂದು ಯಶಸ್ವೀ ಪ್ರಯತ್ನ ನಡೆದಿತ್ತು. ಕ್ಯಾಮೆರಾ ಜಗತ್ತಿನ ಇತಿಹಾಸದಲ್ಲಿ ಮಹತ್ವದ ಸ್ಥಾನ ಪಡೆದುಕೊಂಡಿರುವ ಈ ಸಾಧನೆಯ ಪರಿಚಯ, ಮುಂದಿನ ಸಂಚಿಕೆಯಲ್ಲಿ!

ಜನವರಿ ೨೯, ೨೦೧೩ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge