ಮಂಗಳವಾರ, ಜನವರಿ 15, 2013

ಕಾಫಿ, ಕಂಪ್ಯೂಟರ್ ಮತ್ತು ಕ್ಯಾಮೆರಾ


ಟಿ. ಜಿ. ಶ್ರೀನಿಧಿ

ತಂತ್ರಜ್ಞಾನದ ಒಟ್ಟಾರೆ ಇತಿಹಾಸಕ್ಕೆ ಹೋಲಿಸಿದಾಗ ಅಂತರಜಾಲ ನಮ್ಮ ಬದುಕನ್ನು ಪ್ರವೇಶಿಸಿದ್ದು ತೀರಾ ಇತ್ತೀಚೆಗೆ ಅಂತಲೇ ಹೇಳಬೇಕು. ಆದರೆ ಕೆಲವೇ ದಶಕಗಳ ಅವಧಿಯಲ್ಲಿ ಅದು ನಮ್ಮೆಲ್ಲರ ಬದುಕಿನ ಮೇಲೆ ಪ್ರಾಯಶಃ ಹಿಂದಿನ ಎಲ್ಲ ತಂತ್ರಜ್ಞಾನಗಳಿಗಿಂತ ಹೆಚ್ಚಿನ ಪ್ರಭಾವ ಬೀರಿದೆ. ನಮ್ಮಲ್ಲಿ ಅನೇಕರಿಗೆ ಇಂಟರ್‌ನೆಟ್ ಇಲ್ಲದ ಬದುಕನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲವೇನೋ.

ಆದರೆ ಕೆಲವೇ ವರ್ಷಗಳ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ. ಅಂತರಜಾಲ ಸೃಷ್ಟಿಯಾಗಿ ಈಗಿನ್ನೂ ಮೂವತ್ತು ವರ್ಷಗಳಾಗಿವೆ ಅಷ್ಟೆ; ವಿಶ್ವವ್ಯಾಪಿ ಜಾಲ (ವರ್ಲ್ಡ್ ವೈಡ್ ವೆಬ್) ರೂಪುಗೊಂಡಿದ್ದು ಇಂಟರ್‌ನೆಟ್ ಬಂದು ಹತ್ತು ವರ್ಷದ ಮೇಲೆ. ವಿಶ್ವವ್ಯಾಪಿ ಜಾಲದ ಬೆಳೆವಣಿಗೆಯೂ ಅಷ್ಟೆ; ಏನೂ ಇಲ್ಲದ ಪರಿಸ್ಥಿತಿಯಿಂದ ಇಂದಿನ ಅಪಾರ ಸಾಧ್ಯತೆಗಳವರೆಗಿನ ವಿಕಾಸ ರಾತ್ರೋರಾತ್ರಿಯೇನೂ ಆಗಿಹೋಗಲಿಲ್ಲ.

ಹಾಗೆ ನೋಡಿದರೆ ನಮಗೆಲ್ಲ ಇದೀಗ ಚಿರಪರಿಚಿತವಾಗಿರುವ ಅನೇಕ ಸಂಗತಿಗಳು ವಿಶ್ವವ್ಯಾಪಿ ಜಾಲದ ಪ್ರಾರಂಭಿಕ ವರ್ಷಗಳಲ್ಲಿ ಅಸ್ತಿತ್ವದಲ್ಲೇ ಇರಲಿಲ್ಲ. ಅಂತಹ ಸಂಗತಿಗಳಲ್ಲಿ ಈಗ ಸರ್ವಾಂತರ್ಯಾಮಿಯಾಗಿರುವ ವೆಬ್ ಕ್ಯಾಮೆರಾ ಕೂಡ ಒಂದು.


ವೆಬ್ ಕ್ಯಾಮೆರಾ
ವೆಬ್ ಕ್ಯಾಮೆರಾಗಳೂ ಮೂಲತಃ ಡಿಜಿಟಲ್ ಕ್ಯಾಮೆರಾಗಳೇ. ಆದರೆ ಅವುಗಳನ್ನು ಬಳಸಿ ಮಾಡಲಾಗುವ ಛಾಯಾಗ್ರಹಣದ ಗುಣಮಟ್ಟ ಕಡಿಮೆಯಿರುತ್ತದೆ, ಹಾಗೂ ಇತರ ಡಿಜಿಟಲ್ ಕ್ಯಾಮೆರಾಗಳಲ್ಲಿರುವಂತೆ ಅವುಗಳಲ್ಲಿ ಚಿತ್ರಗಳನ್ನು ಉಳಿಸಿಟ್ಟುಕೊಳ್ಳುವ ಸಾಮರ್ಥ್ಯ ಇರುವುದಿಲ್ಲ. ಛಾಯಾಚಿತ್ರವಾಗಲಿ, ವೀಡಿಯೋ ಆಗಲಿ, ತಕ್ಷಣವೇ ಕಂಪ್ಯೂಟರಿಗೆ ವರ್ಗಾವಣೆಯಾಗಬೇಕಾದ್ದು ಇಲ್ಲಿ ಅನಿವಾರ್ಯ. ಹಾಗಾಗಿಯೇ ವೆಬ್ ಕ್ಯಾಮೆರಾಗಳನ್ನು ಕಂಪ್ಯೂಟರ್ ಜೊತೆಗಷ್ಟೆ ಬಳಸುವುದು ಸಾಧ್ಯ.

ಈಗಂತೂ ಎಲ್ಲ ಬಗೆಯ ಕಂಪ್ಯೂಟರುಗಳಲ್ಲೂ ವೆಬ್ ಕ್ಯಾಮೆರಾ ಕಾಣಸಿಗುವುದು ಸಾಮಾನ್ಯ ಸಂಗತಿಯೇ ಆಗಿಹೋಗಿದೆ. ವೀಡಿಯೋ ಚಾಟಿಂಗ್ ಇರಲಿ, ವಾಹನದ ಎಮಿಶನ್ ಟೆಸ್ಟ್ ಇರಲಿ, ಹೊಸ ರೇಶನ್ ಕಾರ್ಡಿಗೆ ಬೇಕಾದ ಛಾಯಾಚಿತ್ರವೇ ಇರಲಿ - ಇವೆಲ್ಲದಕ್ಕೂ ವೆಬ್ ಕ್ಯಾಮೆರಾ ಬೇಕೇ ಬೇಕು.

ವೆಬ್ ಕ್ಯಾಮೆರಾಗಳ ಮೂಲಕ ಸೆರೆಹಿಡಿಯುವ ವೀಡಿಯೋ ಗುಣಮಟ್ಟ ಕಡಿಮೆಯಾದ್ದರಿಂದ ಅದರ ಗಾತ್ರವೂ ಕಡಿಮೆಯಿರುತ್ತದೆ. ಹೀಗಾಗಿಯೇ ತಕ್ಷಣದ ಪ್ರಸಾರ (ಸ್ಟ್ರೀಮಿಂಗ್) ಅಪೇಕ್ಷಿಸುವ ವೀಡಿಯೋ ಚಾಟಿಂಗ್‌ನಂತಹ ಸನ್ನಿವೇಶಗಳಲ್ಲಿ ಅವು ಬಹಳ ಉಪಯುಕ್ತವಾಗಿವೆ. ವೆಬ್‌ಕ್ಯಾಮೆರಾಗಳನ್ನು ಫೋಟೋ ಕ್ಲಿಕ್ಕಿಸಲೂ ಬಳಸಬಹುದು. ರೇಶನ್ ಕಾರ್ಡಿಗಾಗಿಯೋ, ದೊಡ್ಡದೊಡ್ಡ ಕಚೇರಿಗಳಲ್ಲಿ ಸಂದರ್ಶಕರ ಪಾಸುಗಳಿಗಾಗಿಯೋ, ಎಮಿಶನ್ ಟೆಸ್ಟ್ ರಶೀದಿಯ ಮೇಲೆ ಮುದ್ರಿಸಲೋ ಚಿತ್ರಗಳನ್ನು ಕ್ಲಿಕ್ಕಿಸುವಾಗ ಅತ್ಯುತ್ತಮ ಗುಣಮಟ್ಟದ ಚಿತ್ರವೇನೂ ಬೇಕಾಗುವುದಿಲ್ಲವಲ್ಲ, ಹಾಗಾಗಿ ಅಲ್ಲೂ ವೆಬ್‌ಕ್ಯಾಮೆರಾಗಳು ಬಳಕೆಯಾಗುತ್ತವೆ.

ಕಾಫಿ ಮತ್ತು ಕ್ಯಾಮೆರಾ
ಅದು ೧೯೯೦ರ ದಶಕದ ಪ್ರಾರಂಭದ ಸಮಯ. ಕೇಂಬ್ರಿಜ್ ವಿಶ್ವವಿದ್ಯಾನಿಲಯದ ಸಿಸ್ಟಂಸ್ ಗ್ರೂಪ್ ಸಂಶೋಧಕರು ಕೆಲಸಮಾಡುತ್ತಿದ್ದ ಕಂಪ್ಯೂಟರ್ ಲ್ಯಾಬಿನಲ್ಲಿ ಟ್ರೋಜನ್ ರೂಮ್ ಎಂಬುದೊಂದು ಜಾಗವಿತ್ತು; ಅಲ್ಲೊಂದು ಕಾಫಿ ಯಂತ್ರ ಕೂಡ ಇತ್ತು. ಕೆಲಸ ಬೇಸರವಾದಾಗ ಯಾರಿಗಾದರೂ ಕಾಫಿ ಕುಡಿಯುವ ಯೋಚನೆ ಬಂದರೆ ಅವರು ಅಲ್ಲಿಗೇ ಬರಬೇಕಿತ್ತು.

ಕೆಲವು ಸಂಶೋಧಕರೇನೋ ಟ್ರೋಜನ್ ರೂಮಿನ ಹತ್ತಿರದಲ್ಲೇ ಇದ್ದರು. ಆದರೆ ಇನ್ನು ಕೆಲವರು ಅಲ್ಲಿಗೆ ತಲುಪಲು ಎರಡು ಮೂರು ಮಹಡಿ ಹತ್ತಿಳಿಯಬೇಕಾಗುತ್ತಿತ್ತು. ಉಸ್ಸಪ್ಪಾ ಎಂದು ಅಷ್ಟುದೂರ ಬಂದರೆ ಹಲವಾರು ಬಾರಿ ಮಶೀನಿನಲ್ಲಿದ್ದ ಕಾಫಿಯಷ್ಟೂ ಖಾಲಿಯಾಗಿಬಿಟ್ಟಿರುತ್ತಿತ್ತು. ಮತ್ತೆ ಕಾಫಿ ಸಿದ್ಧವಾಗುವವರೆಗೂ ಕಾದರೆ ಅಷ್ಟು ಸಮಯ ವ್ಯರ್ಥ, ಕಾಫಿ ರೆಡಿಯಾದ ಮೇಲೆ ಬರೋಣವೆಂದರೆ ಅಷ್ಟರಲ್ಲಿ ಮತ್ತೆ ಕಾಫಿ ಖಾಲಿಯಾಗುವ ಭಯ!

ಈ ಸಮಸ್ಯೆಗೆ ಆ ಸಂಶೋಧಕರು ಹುಡುಕಿಕೊಂಡ ಪರಿಹಾರ ವಿಶಿಷ್ಟವಾಗಿತ್ತು; ಹಳೆಯದೊಂದು ಕಂಪ್ಯೂಟರ್ ಮತ್ತೊಂದು ವೀಡಿಯೋ ಕ್ಯಾಮೆರಾ ಹೊಂಚಿಕೊಂಡ ಅವರು ತಾವು ಕುಳಿತ ಜಾಗದಿಂದಲೇ ಕಾಫಿಯಂತ್ರದ ಮೇಲೊಂದು ಕಣ್ಣಿಡುವ ವ್ಯವಸ್ಥೆ ಮಾಡಿಕೊಂಡರು!

ಹಾಗೆ ಸಿದ್ಧವಾದದ್ದೇ ಪ್ರಪಂಚದ ಮೊತ್ತಮೊದಲ ವೆಬ್ ಕ್ಯಾಮೆರಾ.

ಮೊದಲ ವೆಬ್ ಕ್ಯಾಮೆರಾ
ಮೊದಲಿಗೆ ಈ ಯೋಚನೆ ಬಂದದ್ದು ಕೇಂಬ್ರಿಜ್ ತಂಡದಲ್ಲಿದ್ದ ಡಾ. ಕ್ವೆಂಟಿನ್ ಸ್ಟಾಫರ್ಡ್-ಫ್ರೇಸರ್ ಹಾಗೂ ಡಾ. ಪಾಲ್ ಜಾರ್ಡೆಟ್ಸ್‌ಕಿ ಎಂಬ ಇಬ್ಬರು ಸಂಶೋಧಕರಿಗೆ. ವೀಡಿಯೋ ಕ್ಯಾಮೆರಾವನ್ನು ಕಾಫಿ ಯಂತ್ರದತ್ತ ತಿರುಗಿಸಿಟ್ಟ ಅವರು ಕ್ಯಾಮೆರಾಗೂ ಕಂಪ್ಯೂಟರಿಗೂ ಸಂಪರ್ಕ ಕಲ್ಪಿಸಿದರು. ಅಷ್ಟೇ ಅಲ್ಲ, ಈ ಜೋಡಣೆ ಕೆಲಸಮಾಡಲು ಬೇಕಾದ ತಂತ್ರಾಂಶವನ್ನೂ ಸಿದ್ಧಪಡಿಸಿದರು. ಅಲ್ಲಿನ ಕಂಪ್ಯೂಟರ್ ಜಾಲದಲ್ಲಿದ್ದ ಯಾರು ಬೇಕಾದರೂ ಈ ತಂತ್ರಾಂಶವನ್ನು ಬಳಸುವುದು ಸಾಧ್ಯವಿತ್ತು; ಹಾಗೆ ಬಳಸಿದವರೆಲ್ಲರ ಕಂಪ್ಯೂಟರ್ ಪರದೆಯ ಮೇಲೂ ಕಾಫಿ ಯಂತ್ರದ ಇತ್ತೀಚಿನ ಚಿತ್ರ ಮೂಡುತ್ತಿತ್ತು. ಅಷ್ಟೇ ಅಲ್ಲ, ವೀಡಿಯೋ ಕ್ಯಾಮೆರಾ ಜೊತೆಗಿದ್ದ ಫ್ರೇಮ್ ಗ್ರಾಬರ್ ಎಂಬ ಮತ್ತೊಂದು ಉಪಕರಣದ ಸಹಾಯದಿಂದ ಈ ಚಿತ್ರ ನಿಮಿಷಕ್ಕೆ ಮೂರು ಬಾರಿ ಅಪ್‌ಡೇಟ್ ಆಗುತ್ತಿತ್ತು. ಹಾಗಾಗಿ ಕಾಫಿ ಯಂತ್ರದಲ್ಲಿ ಮಿಕ್ಕಿರುವ ಕಾಫಿ ಕುರಿತ ಮಾಹಿತಿ ಯಾವಾಗಲೂ ತಾಜಾ ಆಗಿರುತ್ತಿತ್ತು!

ಆದರೆ ೧೯೯೩ರ ನವೆಂಬರ್ ತಿಂಗಳವರೆಗೂ ಈ ಕಾಫಿ ಕ್ಯಾಮೆರಾ ಸೇವೆ ಕೇಂಬ್ರಿಜ್ ವಿವಿಯ ಕಂಪ್ಯೂಟರ್ ವಿಭಾಗಕ್ಕಷ್ಟೆ ಸೀಮಿತವಾಗಿತ್ತು.

ಅಲ್ಲಿನ ವಿಜ್ಞಾನಿ ಡಾ. ಮಾರ್ಟಿನ್ ಜಾನ್ಸನ್ ಕೆಲಸಮಾಡುತ್ತಿದ್ದ ಕಂಪ್ಯೂಟರ್ ಈ ಜಾಲದಿಂದ ಹೊರಗಿತ್ತು. ಹಾಗಾಗಿ ಅವರು ಕಾಫಿಯಂತ್ರದವರೆಗೂ ನಡೆಯುವುದನ್ನು ತಪ್ಪಿಸಲು ಕಾಫಿ ಕ್ಯಾಮೆರಾದ ಮೊರೆಹೋಗುವಂತಿರಲಿಲ್ಲ. ಆಗಷ್ಟೇ ಕಣ್ಣುಬಿಡುತ್ತಿದ್ದ ವಿಶ್ವವ್ಯಾಪಿ ಜಾಲದ ಬಗ್ಗೆ ಆಸಕ್ತಿವಹಿಸಿದ್ದ ಮಾರ್ಟಿನ್‌ಗೆ ಕಾಫಿ-ಕ್ಯಾಮೆರಾದ ಈ ಜೋಡಿಯನ್ನು ವಿಶ್ವವ್ಯಾಪಿ ಜಾಲಕ್ಕೆ (ವರ್ಲ್ಡ್‌ವೈಡ್ ವೆಬ್) ಸಂಪರ್ಕಿಸುವ ಯೋಚನೆ ಬಂತು. ಅದಕ್ಕೆ ಅಗತ್ಯವಾದ ತಂತ್ರಾಂಶವನ್ನೆಲ್ಲ ಸಿದ್ಧಪಡಿಸಿದ ಅವರು ನವೆಂಬರ್ ೨೨ರ ವೇಳೆಗೆ ಕಾಫಿ ಕ್ಯಾಮೆರಾ ಚಿತ್ರಗಳನ್ನು ವೆಬ್ ಮೂಲಕ ನೋಡುವುದನ್ನು ಸಾಧ್ಯವಾಗಿಸಿದರು,

ಹೀಗೆ ಸಾಮಾನ್ಯ ಕಾಫಿಯಂತ್ರವೊಂದು ವೆಬ್ ಕ್ಯಾಮೆರಾ ಎಂಬ ಅನನ್ಯ ತಂತ್ರಜ್ಞಾನವೊಂದರ ಸೃಷ್ಟಿಗೆ ಕಾರಣವಾಯಿತು. ಅಷ್ಟೇ ಅಲ್ಲ, ವೆಬ್ ಕ್ಯಾಮೆರಾ ಮೂಲಕ ಜಾಲದಲ್ಲಿ ಮೂಡಿದ ಮೊದಲ ಚಿತ್ರಕ್ಕೆ ವಿಷಯವಾದ ಹೆಗ್ಗಳಿಕೆಯೂ ಅದೇ ಕಾಫಿಯಂತ್ರಕ್ಕೆ ಸಿಕ್ಕಿತು.

ಕಾಫಿಯಂತ್ರವೆಂಬ ಸೆಲೆಬ್ರಿಟಿ
ಮೊದಲ ವೆಬ್ ಕ್ಯಾಮೆರಾ ಮೂಲಕ ಮೂಡುತ್ತಿದ್ದ ಚಿತ್ರಗಳಲ್ಲಿ ಅಂತಹ ವೈಶಿಷ್ಟ್ಯವೇನೂ ಇರಲಿಲ್ಲ. ಭರ್ತಿಯಾಗಿರುವ ಕಾಫಿಯಂತ್ರ, ಅರ್ಧ ತುಂಬಿರುವ ಕಾಫಿಯಂತ್ರ, ಕಾಲುಭಾಗವೋ ಮುಕ್ಕಾಲುಭಾಗವೋ ತುಂಬಿರುವ ಯಂತ್ರ, ಅಥವಾ ಕಾಫಿ ಖಾಲಿಯಾಗಿರುವ ಯಂತ್ರ - ಈ ಚಿತ್ರಗಳಲ್ಲಿದ್ದ ವೈವಿಧ್ಯವೂ ಅಷ್ಟರಲ್ಲೇ ಇತ್ತು.

ಆದರೆ ವಿಶ್ವವ್ಯಾಪಿ ಜಾಲದ ಮೂಲಕ ಚಿತ್ರಗಳು, ಹೆಚ್ಚೂಕಡಿಮೆ ನೇರಪ್ರಸಾರದಲ್ಲೇ, ಹರಿದುಬರುತ್ತಿವೆ ಎಂಬ ಸುದ್ದಿ ಕಂಪ್ಯೂಟರ್ ಲೋಕದಲ್ಲಿ ದೊಡ್ಡದೊಂದು ಸಂಚಲನವನ್ನೇ ಸೃಷ್ಟಿಸಿಬಿಟ್ಟಿತು. ಆ ಚಿತ್ರಗಳು ಪ್ರಕಟವಾಗುತ್ತಿದ್ದ ವಿಶ್ವವ್ಯಾಪಿ ಜಾಲದ ಪುಟಕ್ಕೆ ಅಸಂಖ್ಯ ಬಳಕೆದಾರರು ಭೇಟಿನೀಡಲು ಪ್ರಾರಂಭಿಸಿದರು. "ನಮ್ಮ ಹಗಲಿನ ಸಮಯ ನಿಮ್ಮಲ್ಲಿ ರಾತ್ರಿಯಾಗಿರುತ್ತದೆ, ಟ್ರೋಜನ್ ರೂಮಿನಲ್ಲಿ ಲೈಟಿಲ್ಲದೆ ನಮಗೆ ಕಾಫಿಯಂತ್ರ ಕಾಣುವುದಿಲ್ಲ, ಹಾಗಾಗಿ ರಾತ್ರಿಹೊತ್ತು ಅಲ್ಲೊಂದು ಲೈಟು ಹಾಕಿಟ್ಟಿರಿ" ಎನ್ನುವಂತಹ ಬೇಡಿಕೆಗಳು ದೂರದೂರದ ದೇಶಗಳಿಂದಲೂ ಬಂದಿದ್ದವಂತೆ. ಅಷ್ಟೇ ಏಕೆ, ಕಾಫಿಯಂತ್ರದ ಪ್ರತ್ಯಕ್ಷದರ್ಶನಕ್ಕಾಗಿ ಪ್ರವಾಸಿಗರು ಬರುತ್ತಿದ್ದದ್ದೂ ಉಂಟಂತೆ!

ಕಾಫಿಯಂತ್ರದ ಈ ಸೆಲೆಬ್ರಿಟಿ ಸ್ಟೇಟಸ್ ಸುಮಾರು ಹತ್ತು ವರ್ಷಗಳ ಕಾಲ ಅಬಾಧಿತವಾಗಿ ಮುಂದುವರೆದದ್ದು ವಿಶೇಷ.

ಕಾಫಿ ಕತೆಗೊಂದು ಕೊನೆ
ಹತ್ತು ವರ್ಷಗಳಾಗುವಷ್ಟರಲ್ಲಿ ಕಾಫಿ-ಕ್ಯಾಮೆರಾ-ಕಂಪ್ಯೂಟರಿನ ಈ ಜೋಡಣೆಯನ್ನು ನಿಭಾಯಿಸುವುದು ಕೇಂಬ್ರಿಜ್‌ನ ಸಂಶೋಧಕರಿಗೆ ತಲೆನೋವಿನ ಕೆಲಸ ಎನ್ನಿಸಲು ಶುರುವಾಗಿತ್ತು. ಅಲ್ಲದೆ ಅನೇಕ ಬಗೆಯ ವೆಬ್ ಕ್ಯಾಮೆರಾಗಳು ಆ ವೇಳೆಗಾಗಲೇ ಮಾರುಕಟ್ಟೆಗೆ ಬಂದಿದ್ದವು (೧೯೯೪ರಲ್ಲಿ ಮಾರುಕಟ್ಟೆಗೆ ಬಂದ ಕ್ವಿಕ್ ಕ್ಯಾಮ್ ಎನ್ನುವುದು ವಿಕಿಪೀಡಿಯಾ ಪ್ರಕಾರ ಮೊದಲ ಕಮರ್ಶಿಯಲ್ ವೆಬ್‌ಕ್ಯಾಮೆರಾ). ಹಾಗಾಗಿ ಅವರು ತಮ್ಮ ಕಾಫಿ ಕ್ಯಾಮೆರಾವನ್ನು ಆರಿಸಿಬಿಡುವ ತೀರ್ಮಾನ ಮಾಡಿದರು. ಅಭಿಮಾನಿಗಳ ವಿರೋಧದ ನಡುವೆಯೇ ಈ ತೀರ್ಮಾನ ಕಾರ್ಯರೂಪಕ್ಕೂ ಬಂತು; ವಿಜ್ಞಾನಿಯೊಬ್ಬರ ಕೈಬೆರಳುಗಳು ಕ್ಯಾಮೆರಾದ ಗುಂಡಿ ಒತ್ತಿ ಅದನ್ನು ಆರಿಸುತ್ತಿರುವ ಚಿತ್ರದೊಡನೆ ಕಾಫಿಯಂತ್ರದ ಚಿತ್ರಯಾತ್ರೆ ಮುಕ್ತಾಯವಾಯಿತು.

ಆದರೆ ಕತೆ ಅಲ್ಲಿಗೇ ಮುಗಿಯಲಿಲ್ಲ. ಕೊನೆಯ ಫೋಟೋ ತೆಗೆಸಿಕೊಂಡಿತ್ತಲ್ಲ ಆ ಕಾಫಿಯಂತ್ರ, ಅದನ್ನು ವಿಶ್ವವ್ಯಾಪಿ ಜಾಲದ ಮೂಲಕ ಎರಡೂವರೆ ಲಕ್ಷ ರೂಪಾಯಿಗಳಿಗಿಂತಲೂ ಹೆಚ್ಚಿನ ಬೆಲೆಗೆ ಹರಾಜುಹಾಕಲಾಯಿತು. ಅದನ್ನು ಕೊಂಡ ಜರ್ಮನಿಯ ಪತ್ರಿಕೆಯೊಂದು ಕಾಫಿಯಂತ್ರದ ಮುಂದೊಂದು ವೆಬ್ ಕ್ಯಾಮೆರಾ ಇಟ್ಟು ಅದರ ಚಿತ್ರಗಳನ್ನು ತನ್ನ ಜಾಲತಾಣದಲ್ಲಿ ಮತ್ತೆ ಪ್ರಕಟಿಸಿತು!

ಜನವರಿ ೧೫, ೨೦೧೩ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge