ಮಂಗಳವಾರ, ಜನವರಿ 1, 2013

ಇಂಟರ್‌ನೆಟ್ ಅಷ್ಟೇ ಅಲ್ಲ, ಇದು ಇಂಟರ್-ಪ್ಲಾ-ನೆಟ್!


ಟಿ. ಜಿ. ಶ್ರೀನಿಧಿ

ಎಲ್ಲರಿಗಿಂತ ಮೊದಲು ಎವರೆಸ್ಟ್ ಪರ್ವತ ಹತ್ತಿದವರು ನಾವೇ ಎಂದುಕೊಂಡು ಹೋಗಿ ನೋಡಿದರೆ ಅಲ್ಲಿ ಅವರಿಗೊಂದು ಚಹಾ ಅಂಗಡಿ ಸಿಕ್ಕಿತು ಎನ್ನುವುದು ಹಳೆಯ ಜೋಕು. ಈಗ ಎವರೆಸ್ಟ್ ಪರ್ವತಾರೋಹಣವೆಲ್ಲ ಹಳೆಯ ವಿಷಯ; ಮುಂದೊಂದು ದಿನ ಯಾರಾದರೂ ಮಂಗಳ ಗ್ರಹದ ಮೇಲೆ ಇಳಿದರೆ ಅದನ್ನೇನಾದರೂ ವಿಶೇಷ ಎನ್ನಬಹುದೇನೋ ಅಷ್ಟೆ.

ಹಾಗೆ ಮಂಗಳಗ್ರಹ ತಲುಪಿದವರು ಚಹಾ ಅಂಗಡಿ ನೋಡುತ್ತಾರೋ ಇಲ್ಲವೋ, ಅವರಿಗೆ ಇಂಟರ್‌ನೆಟ್ ಸಂಪರ್ಕವನ್ನಂತೂ ಕೊಡಬಹುದು ಎನ್ನುತ್ತಿದ್ದಾರೆ ವಿಜ್ಞಾನಿಗಳು. ಇಂಟರ್‌ಪ್ಲಾನೆಟರಿ ಪ್ರವಾಸ ಮುಗಿಸಿದ ಮೇಲೂ ಈಸಿಯಾಗಿ ಇಜ್ಞಾನ ಡಾಟ್ ಕಾಮ್‌ನೊಳಗೆ ಇಣುಕಲು ನೆರವಾಗಬಲ್ಲ ಇಂಟರೆಸ್ಟಿಂಗ್ ಪರಿಕಲ್ಪನೆಯೊಂದರ ಪರಿಚಯ ಇಲ್ಲಿದೆ.

ಇಂಟರ್-ಪ್ಲಾ-ನೆಟ್! ನಮ್ಮ ಭೂಮಿಯನ್ನು ಸಂಪೂರ್ಣವಾಗಿ ಆವರಿಸಿಕೊಂಡಿರುವ ಅಂತರಜಾಲದ ಮಾಯಾಜಾಲವನ್ನು ಭೂಮಿಯಿಂದ ಆಚೆಗೆ, ಅಂತರಿಕ್ಷದತ್ತಲೂ ವಿಸ್ತರಿಸುವ ನಿಟ್ಟಿನಲ್ಲಿ ಬಳಸಲು ಉದ್ದೇಶಿಸಲಾಗಿರುವ ತಂತ್ರಜ್ಞಾನದ ಹೆಸರು ಡಿಸ್ರಪ್ಷನ್ ಟಾಲರೆಂಟ್ ನೆಟ್‌ವರ್ಕಿಂಗ್, ಅಂದರೆ ಡಿಟಿಎನ್. ಹೆಸರೇ ಹೇಳುವಂತೆ ಈ ತಂತ್ರಜ್ಞಾನ ಬಳಸುವ ಜಾಲಗಳಿಗೆ ಸಂವಹನದಲ್ಲಿ ಉಂಟಾಗಬಹುದಾದ ಅಡೆತಡೆಗಳನ್ನು ಸಹಿಸಿಕೊಳ್ಳುವ ಶಕ್ತಿಯಿರುತ್ತದೆ.

ಅಂತರಜಾಲವನ್ನು ಅಂತರಿಕ್ಷಕ್ಕೂ ಕೊಂಡೊಯ್ಯುವ ಈ ಪರಿಕಲ್ಪನೆ ತೀರಾ ಹೊಸದೇನೂ ಅಲ್ಲ. ನಮ್ಮ ಸೌರವ್ಯೂಹದಲ್ಲಿರುವ ಗ್ರಹಗಳ ನಡುವೆ ಸಂಪರ್ಕ ಕಲ್ಪಿಸುವ ಇಂಟರ್‌ಪ್ಲಾನೆಟರಿ ಇಂಟರ್‌ನೆಟ್ ('ಇಂಟರ್-ಪ್ಲಾ-ನೆಟ್' ಅಥವಾ 'ಅಂತರ-ಗ್ರಹ-ಜಾಲ') ಎಂಬ ಮಹತ್ವಾಕಾಂಕ್ಷಿ ಯೋಜನೆ ೧೯೯೦ರ ದಶಕದಿಂದಲೇ ಸುದ್ದಿಯಲ್ಲಿದೆ. ಇಂತಹುದೊಂದು ಜಾಲವನ್ನು ರೂಪಿಸುವ ನಿಟ್ಟಿನಲ್ಲಿ ಪ್ರಾರಂಭಿಕ ಕಾರ್ಯಗಳನ್ನು ಕೈಗೊಂಡವರಲ್ಲಿ ನಾವೆಲ್ಲ ಬಳಸುವ ಅಂತರಜಾಲದ ರೂವಾರಿಗಳಲ್ಲೊಬ್ಬರಾದ ವಿಂಟನ್ ಗ್ರೇ ಸರ್ಫ್ ಕೂಡ ಒಬ್ಬರು.

ಇದು ಡಿಟಿಎನ್ ಭೂಮಿಯ ಮೇಲೆ ಅಂತರಜಾಲದ ಹರವು ಎಷ್ಟು ವ್ಯಾಪಕವಾಗಿದೆ ಎನ್ನುವ ವಿಷಯ ನಮಗೆಲ್ಲ ಗೊತ್ತೇ ಇದೆ. ಬ್ರಾಡ್‌ಬ್ಯಾಂಡ್, ವಯರ್‌ಲೆಸ್, ಮೊಬೈಲ್ ಇಂಟರ್‌ನೆಟ್, ಡಯಲ್ ಅಪ್ - ಹೀಗೆ ಅಂತರಜಾಲ ಸಂಪರ್ಕಗಳಲ್ಲಿ ಹಲವು ವಿಧಗಳಿರುವುದೂ ಹೊಸ ವಿಷಯವೇನಲ್ಲ. ಈ ಸಂಪರ್ಕಗಳಾವುವೂ ತಲುಪದ ಅನೇಕ ಪ್ರದೇಶಗಳಲ್ಲಿ ಉಪಗ್ರಹದ ಮೂಲಕವೂ ಅಂತರಜಾಲ ಸಂಪರ್ಕ ಕಲ್ಪಿಸಿಕೊಡಲಾಗಿದೆ.

ಆದರೆ ಅಂತರಿಕ್ಷದ ಪರಿಸ್ಥಿತಿಯೇ ಬೇರೆ. ಅಲ್ಲಿರುವ ಗ್ರಹ-ಉಪಗ್ರಹಗಳ, ಬಾಹ್ಯಾಕಾಶ ಕೇಂದ್ರಗಳ, ಅಂತರಿಕ್ಷ ವಾಹನಗಳ ನಡುವೆ ಮಾಹಿತಿ ಹರಿದಾಡಬೇಕೆಂದರೆ ಅದು ಬಹಳ ದೂರ ಕ್ರಮಿಸಬೇಕಾಗುತ್ತದೆ. ಸೌರ ಜ್ವಾಲೆಯೋ ಮತ್ತಾವುದೋ ಆತಂಕವೋ ಎದುರಾದರೆ ಸಂವಹನಕ್ಕೆ ಅಡ್ಡಿಯೂ ಆಗುತ್ತದೆ. ಹೀಗೆಲ್ಲ ಇರುವುದರಿಂದಲೇ ಅಂತರಿಕ್ಷದಲ್ಲಿ ಕೆಲಸಮಾಡುವ ಜಾಲಕ್ಕೆ ನಿಧಾನಗತಿಯ ಸಂವಹನ ಹಾಗೂ ಇನ್ನಿತರ ಅಡೆತಡೆಗಳನ್ನು ಸಹಿಸಿಕೊಳ್ಳುವ ಶಕ್ತಿ ಇರಲೇಬೇಕಾಗುತ್ತದೆ.

ಸ್ಟೋರ್ ಆಂಡ್ ಫಾರ್‌ವರ್ಡ್ ಬಾಹ್ಯಾಕಾಶದಲ್ಲಾಗುವ ಮಾಹಿತಿ ಸಂವಹನದಲ್ಲಿ ಉಂಟಾಗಬಹುದಾದ ಅಡಚಣೆಗಳನ್ನು ನಿವಾರಿಸಲೆಂದು ಡಿಸ್ರಪ್ಷನ್ ಟಾಲರೆಂಟ್ ಜಾಲಗಳು ಒಂದು ವಿಶೇಷ ತಂತ್ರವನ್ನು ಬಳಸುತ್ತದೆ. ಮತ್ತೊಂದು ಘಟಕದೊಡನೆ ಪರಿಪೂರ್ಣ ಸಂಪರ್ಕ ಸಾಧ್ಯವಾಗುವವರೆಗೆ ಇಂತಹ ಜಾಲದಲ್ಲಿರುವ ಪ್ರತಿಯೊಂದು ಘಟಕವೂ (ನೋಡ್) ತನ್ನಲ್ಲಿರುವ ಮಾಹಿತಿಯನ್ನು ಉಳಿಸಿಟ್ಟುಕೊಳ್ಳುವುದೇ ಈ ತಂತ್ರ. 'ಸ್ಟೋರ್ ಆಂಡ್ ಫಾರ್‌ವರ್ಡ್' ಎಂದು ಗುರುತಿಸಲಾಗುವ ಈ ತಂತ್ರದಿಂದಾಗಿ ಸಂವಹನದ ಸಂದರ್ಭದಲ್ಲಿ ಯಾವುದೇ ಮಾಹಿತಿ ನಷ್ಟವಾಗದಂತೆ ನೋಡಿಕೊಳ್ಳುವುದು ಸಾಧ್ಯವಾಗುತ್ತದೆ.

ಮೊದಲನೆಯ ಬಾರಿಗೆ ಡಿಟಿಎನ್ ತಂತ್ರಜ್ಞಾನದ ಗಮನಾರ್ಹ ಯಶಸ್ಸು ಪ್ರಪಂಚಕ್ಕೆ ಗೊತ್ತಾದದ್ದು ಬಹುಶಃ ೨೦೦೮ರಲ್ಲೇ ಇರಬೇಕು. ಭೂಮಿಯಿಂದ ಎರಡು ಕೋಟಿ ಮೈಲಿಗಳಷ್ಟು ದೂರದಲ್ಲಿದ್ದ 'ಇಪಾಕ್ಸಿ' ಎಂಬ ಅಂತರಿಕ್ಷ ವಾಹನದ ಜೊತೆಗೆ ಅಂತರಜಾಲ ಸಂಪರ್ಕ ಸಾಧಿಸಿಕೊಂಡ ನಾಸಾ ಅದರೊಡನೆ ಚಿತ್ರಗಳನ್ನು ವಿನಿಮಯ ಮಾಡಿಕೊಂಡ ಸುದ್ದಿಯನ್ನು ಆ ವರ್ಷದ ನವೆಂಬರ್‌ನಲ್ಲಿ ವರದಿಮಾಡಿತ್ತು.

ಇನ್ನೊಂದು ಯಶಸ್ಸು ಇಂಟರ್‌ಪ್ಲಾನೆಟರಿ ಇಂಟರ್‌ನೆಟ್‌ನ ಪರಿಕಲ್ಪನೆ ಮತ್ತೊಮ್ಮೆ ಸುದ್ದಿಮಾಡಿದ್ದು ೨೦೧೨ರ ಕೊನೆಯಲ್ಲಿ. ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿರುವ ಗಗನಯಾತ್ರಿಯೊಬ್ಬರು ಭೂಮಿಯ ಮೇಲಿರುವ ರೋಬಾಟ್ ಅನ್ನು ನಿಯಂತ್ರಿಸಲು ಇಂಟರ್‌ನೆಟ್ ಬಳಸಿ ಆಗ ಇತಿಹಾಸವನ್ನೇ ಸೃಷ್ಟಿಸಿದರು.

ಯುರೋಪಿಯನ್ ಸ್ಪೇಸ್ ಏಜೆನ್ಸಿ ಹಾಗೂ ನಾಸಾ ಸಹಯೋಗದಲ್ಲಿ ನಡೆದ ಈ ಪ್ರಯೋಗದಲ್ಲಿ ಭಾರತೀಯ ಮೂಲದ ವಿಜ್ಞಾನಿ ಸುನೀತಾ ವಿಲಿಯಮ್ಸ್ ಪಾಲ್ಗೊಂಡಿದ್ದು ವಿಶೇಷ. ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲೇ ಇದ್ದುಕೊಂಡು ಜರ್ಮನಿಯಲ್ಲಿರುವ ರೋಬಾಟನ್ನು ಅಂತರಜಾಲದ ಮೂಲಕವೇ ನಿಯಂತ್ರಿಸಿದರು. ಇದನ್ನು ಇಂಟರ್‌ಪ್ಲಾನೆಟರಿ ಇಂಟರ್‌ನೆಟ್‌ನ ಇತಿಹಾಸದ ಮಹತ್ವದ ಮೈಲಿಗಲ್ಲುಗಳಲ್ಲೊಂದು ಎಂದೇ ಪರಿಗಣಿಸಲಾಗುತ್ತಿದೆ.

ಪ್ರಯೋಜನಗಳು ಬಾಹ್ಯಾಕಾಶ ಕೇಂದ್ರಗಳು ಹಾಗೂ ಅಂತರಿಕ್ಷ ವಾಹನಗಳೊಡನೆ ಸಂಪರ್ಕ ಕಲ್ಪಿಸಿಕೊಳ್ಳಲು ವಿಜ್ಞಾನಿಗಳು ಪ್ರಸ್ತುತ ಪ್ರತ್ಯೇಕ ಸಂಪರ್ಕಗಳನ್ನೇ (ಪಾಯಿಂಟ್-ಟು-ಪಾಯಿಂಟ್ ಕಮ್ಯೂನಿಕೇಶನ್) ಬಳಸಬೇಕಾದ ಪರಿಸ್ಥಿತಿಯಿದೆ. ಆದರೆ ಅಂತರಜಾಲದ ವ್ಯಾಪ್ತಿ ಅಂತರಿಕ್ಷಕ್ಕೂ ಹರಡಿದ ಮೇಲೆ ಈ ಪರಿಸ್ಥಿತಿ ಬದಲಾಗಿ ಎಲ್ಲ ಸಂಪರ್ಕಕ್ಕೂ ಅದನ್ನೇ ಬಳಸಲು ಸಾಧ್ಯವಾಗಬಹುದು ಎನ್ನಲಾಗಿದೆ. ಇದರಿಂದ ಮಾಹಿತಿ ಸಂವಹನಕ್ಕೆ ಆಗುವ ಖರ್ಚಿನಲ್ಲಿ ಉಳಿತಾಯವಾಗುವುದರ ಜೊತೆಗೆ ಸಂವಹನದ ವಿಶ್ವಸನೀಯತೆಯೂ ಹೆಚ್ಚಲಿದೆ.

ಅಷ್ಟೇ ಅಲ್ಲ, ಅಂತರಿಕ್ಷದ ಕ್ಲಿಷ್ಟ ಪರಿಸ್ಥಿತಿಯಲ್ಲೂ ಅಂತರಜಾಲ ಸರಾಗವಾಗಿ ಕೆಲಸಮಾಡುವುದು ಸಾಧ್ಯವಾಯಿತೆಂದರೆ ಅದೇ ತಂತ್ರಜ್ಞಾನವನ್ನು ಭೂಮಿಯ ಮೇಲೆ ಇನ್ನೂ ಸಂಪರ್ಕ ಜಾಲಗಳಿಂದ ದೂರವಿರುವ ದುರ್ಗಮ ಪ್ರದೇಶಗಳಲ್ಲೂ ಬಳಸುವುದು ಸಾಧ್ಯವಾಗಲಿದೆ. ವಿಶ್ವಾಸಾರ್ಹ ಮಾಹಿತಿ ಸಂವಹನದ ಸಾಧ್ಯತೆ ಈ ತಂತ್ರಜ್ಞಾನವನ್ನು ರಕ್ಷಣಾ ಕ್ಷೇತ್ರದಲ್ಲೂ ಉಪಯುಕ್ತವಾಗಿಸಲಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

ಡಿಸೆಂಬರ್ ೨೦೧೨ರ ದಿಕ್ಸೂಚಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge