ಬುಧವಾರ, ನವೆಂಬರ್ 7, 2012

ಕಂಪ್ಯೂಟರಿಗೆ ಕನ್ನಡ ಕಲಿಸಿದ ಕತೆ


ಟಿ. ಜಿ. ಶ್ರೀನಿಧಿ

ಶ್ರೀ ಕೆ. ಪಿ. ರಾವ್
ಈಗಷ್ಟೆ ಮಾರುಕಟ್ಟೆಗೆ ಬಂದ ಹೊಸ ಮೊಬೈಲ್ ಫೋನ್ ಇರಲಿ, ಲೇಟೆಸ್ಟ್ ಟ್ಯಾಬ್ಲೆಟ್ ಕಂಪ್ಯೂಟರ್ ಇರಲಿ, ಅಥವಾ ಕಂಪ್ಯೂಟರಿನ ಯಾವುದೋ ತಂತ್ರಾಂಶವೇ ಇರಲಿ, "ಇದರಲ್ಲಿ ಕನ್ನಡ ಬಳಸಬಹುದೇ?" ಎನ್ನುವ ಪ್ರಶ್ನೆ ನಮ್ಮೆದುರು ಆಗಿಂದಾಗ್ಗೆ ಬರುತ್ತಲೇ ಇರುತ್ತದೆ. ಆದರೆ ಈ ಪ್ರಶ್ನೆ ಯಾವುದೋ ನಿರ್ದಿಷ್ಟ ಯಂತ್ರಾಂಶ ಅಥವಾ ತಂತ್ರಾಂಶಕ್ಕಷ್ಟೆ ಸೀಮಿತವಾಗಿರುತ್ತದೆ; ಏಕೆಂದರೆ ಕಂಪ್ಯೂಟರಿನಲ್ಲಿ ಕನ್ನಡ ಮೂಡುವುದು ನಮ್ಮ ಪಾಲಿಗೆ ಹೊಸ ವಿಷಯವೇನೂ ಅಲ್ಲವಲ್ಲ!

ಆದರೆ ಕೆಲ ದಶಕಗಳ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ. ಕಂಪ್ಯೂಟರುಗಳೇ ಅಪರೂಪವಾಗಿದ್ದ ಆ ಕಾಲದಲ್ಲಿ ಕಂಪ್ಯೂಟರ್ ಬಳಸಬೇಕು ಎಂದರೆ ಇಂಗ್ಲಿಷ್ ಗೊತ್ತಿರಲೇಬೇಕು ಎನ್ನುವಂತಹ ಪರಿಸ್ಥಿತಿ ಇತ್ತು. ಆ ಫೋನಿನಲ್ಲಿ ಕನ್ನಡ ಓದಬಹುದು, ಈ ಟ್ಯಾಬ್ಲೆಟ್ಟಿನಲ್ಲಿ ಕನ್ನಡ ಟೈಪುಮಾಡುವುದೂ ಸುಲಭ ಎಂದೆಲ್ಲ ವಿವರಿಸುವ ನಮಗೆ ಕಂಪ್ಯೂಟರ್ ಪ್ರಪಂಚದಲ್ಲಿ ಕನ್ನಡವೇ ಕಾಣಸಿಗದಿದ್ದ ದಿನಗಳನ್ನು ಊಹಿಸುವುದೇ ಕಷ್ಟ, ಅಲ್ಲವೆ?

ಅಂತಹ ದಿನಗಳಲ್ಲೂ ಕಂಪ್ಯೂಟರ್ ಪ್ರಪಂಚದಲ್ಲಿ ಸಕ್ರಿಯರಾಗಿದ್ದ ಕನ್ನಡದ ಭಗೀರಥರು ತಮ್ಮ ಅದಮ್ಯ ಉತ್ಸಾಹದಿಂದ ಕಂಪ್ಯೂಟರಿಗೂ ಅ-ಆ-ಇ-ಈ ಹೇಳಿಕೊಟ್ಟರು; ಡಿಜಿಟಲ್ ಲೋಕದಲ್ಲಿ ಕನ್ನಡ ಹುಲುಸಾಗಿ ಬೆಳೆಯಲು ಕಾರಣರಾದರು.

ಇಂಗ್ಲಿಷ್ ನಾಡಿನಿಂದ ಬಂದ ಕಂಪ್ಯೂಟರ್, ಇಂತಹ ಮೇಷ್ಟರೊಬ್ಬರ ನೆರವಿನಿಂದ ಕನ್ನಡ ಕಲಿತ ಕತೆ ಇಲ್ಲಿದೆ.

* * *

ಭಾರತೀಯ ಭಾಷೆಗಳ ಮಟ್ಟಿಗೆ ಹೇಳುವುದಾದರೆ ಮುದ್ರಣ ಕ್ಷೇತ್ರದಲ್ಲಿ ಅಪಾರ ಬದಲಾವಣೆಗಳನ್ನು ತಂದದ್ದು ಕಳೆದ ಶತಮಾನದ ಉತ್ತರಾರ್ಧದ ಕೆಲ ದಶಕಗಳು. ಅಚ್ಚುಮೊಳೆಗಳನ್ನು ಜೋಡಿಸಿಯಷ್ಟೆ ಆಗುತ್ತಿದ್ದ ಮುದ್ರಣದ ಕ್ಷೇತ್ರಕ್ಕೆ ಕಂಪ್ಯೂಟರುಗಳು ಪ್ರವೇಶಿಸಿದ ಸಮಯ ಅದು.

ಭಾರತೀಯ ಲಿಪಿಗಳ ಈ ಹೊಸ ಪಯಣ ಮೊದಲಿಗೆ ಸಿಂಧೂ ಲಿಪಿಯಿಂದಲೇ ಪ್ರಾರಂಭವಾದದ್ದು ವಿಶೇಷ. ಕನ್ನಡದ ಅದೃಷ್ಟವೋ ಏನೋ ಈ ಯೋಜನೆಯಲ್ಲಿ ಭಾಗಿಯಾಗಿದ್ದ ತಜ್ಞರಲ್ಲಿ ನಮ್ಮವರೂ ಒಬ್ಬರಿದ್ದರು. ಕನ್ನಡ ಲಿಪಿ ಮುದ್ರಿಸಲಿಕ್ಕೂ ಕಂಪ್ಯೂಟರ್ ಸಹಾಯ ಏಕೆ ಪಡೆಯಬಾರದೆಂಬ ಪ್ರಶ್ನೆ ಅವರ ಮನಸ್ಸಿಗೆ ಬಂದದ್ದೇ ತಡ, ಅವರು ಆ ನಿಟ್ಟಿನಲ್ಲಿ ಕೆಲಸ ಪ್ರಾರಂಭಿಸಿಯೇಬಿಟ್ಟರು.

ಈ ಪ್ರಯತ್ನದಲ್ಲಿ ಅವರನ್ನು ಕಾಡಿದ ಸಮಸ್ಯೆಗಳು ಹಲವಾರು. ಬೇರೆಲ್ಲ ಏಕೆ, ಇಂಗ್ಲಿಷ್ ಹಾಗೂ ಕನ್ನಡದಲ್ಲಿರುವ ಅಕ್ಷರಗಳ ಸಂಖ್ಯೆಯ ನಡುವಿನ ವ್ಯತ್ಯಾಸವೇ ಸಾಕಷ್ಟು ತೊಂದರೆಕೊಡುವ ವಿಷಯವಾಗಿತ್ತು. ಕನ್ನಡದ ಅಷ್ಟೂ ಅಕ್ಷರಗಳನ್ನು ಇಂಗ್ಲಿಷ್ ಕೀಬೋರ್ಡಿನಲ್ಲಿರುವಷ್ಟೇ ಅಕ್ಷರಗಳಲ್ಲಿ ಮೂಡಿಸಬೇಕಾದ ಅನಿವಾರ್ಯತೆಯೂ ಇತ್ತು; ತುಂಡುತುಂಡಾದ ಹಲವು ಭಾಗಗಳು ಸೇರಿ ಅಕ್ಷರ ರೂಪುಗೊಳ್ಳಬೇಕಾದ ಪರಿಸ್ಥಿತಿ, ಮೊಳೆಜೋಡಿಸುವ ಕಾಲದಲ್ಲಿ ರೂಪುಗೊಂಡದ್ದು, ಕಂಪ್ಯೂಟರ್ ಪ್ರಪಂಚದತ್ತಲೂ ಬಂದುಬಿಡುವುದರಲ್ಲಿತ್ತು.

ಯಾವ ತರ್ಕಕ್ಕೂ ನಿಲುಕದ, ನೆನಪಿಡಲೂ ಕಷ್ಟವಾದ ಇಂತಹ ವಿಚಿತ್ರ ಸನ್ನಿವೇಶವನ್ನು ಬದಲಿಸಹೊರಟವರ ಮುಂದೆ ಸುಲಭದ ದಾರಿಯೇನೂ ಇರಲಿಲ್ಲ. ಆದರೂ ಛಲಬಿಡದ ಅವರು ಭಾಷೆಯ ಉಚ್ಚಾರಣೆಯಲ್ಲಿರುವ ತರ್ಕವನ್ನೇ ಕಂಪ್ಯೂಟರಿನಲ್ಲೂ ಅಳವಡಿಸುವಲ್ಲಿ ಯಶಸ್ವಿಯಾದರು - ಇಂಗ್ಲಿಷಿನ 'k' ಕನ್ನಡದ 'ಕ' ಆಯಿತು, 'k' ಮತ್ತು 'a' ಸೇರಿ 'ಕಾ' ಆಯಿತು, 'k' ಮತ್ತು 'i' ಸೇರಿ 'ಕಿ' ಆಯಿತು!

ಈ ಹೊಸ ಕೀಲಿಮಣೆ ವಿನ್ಯಾಸದ ನೆರವಿನಿಂದ ಇಂಗ್ಲಿಷಿನ ಕೀಬೋರ್ಡಿನಲ್ಲಿರುವಷ್ಟೇ ಅಕ್ಷರಗಳಿಂದ ಕನ್ನಡವನ್ನು ಟೈಪಿಸುವುದು ಸಾಧ್ಯವಾಯಿತು; ಡಿಜಿಟಲ್ ಲೋಕದಲ್ಲಿ ಕನ್ನಡದ ಪಯಣವೂ ಪ್ರಾರಂಭವಾಯಿತು. ಅಕ್ಷರಗಳನ್ನು ಉಚ್ಚರಿಸುವ ಕ್ರಮದಂತೆಯೇ ಟೈಪಿಸಬಹುದಾದ ಈ ತರ್ಕಬದ್ಧ ಕ್ರಮದಿಂದಾಗಿ ಕೀಬೋರ್ಡ್ ವಿನ್ಯಾಸವನ್ನು ನೆನಪಿಟ್ಟುಕೊಳ್ಳುವುದು ಸುಲಭ; ಹಾಗಾಗಿ ಈ ವಿನ್ಯಾಸ ಬಹಳ ಬೇಗ ಜನಪ್ರಿಯವಾಯಿತು. ಮುಂದೆ ಇದೇ ವಿನ್ಯಾಸ ಕರ್ನಾಟಕ ಸರಕಾರದ ಅಧಿಕೃತ ವಿನ್ಯಾಸವೆಂಬ ಹಣೆಪಟ್ಟಿಯೊಡನೆ ವ್ಯಾಪಕವಾಗಿ ಬಳಕೆಗೆ ಬಂತು.

ಈ ವಿಶಿಷ್ಟ ಸಾಧನೆಯ ಮಹತ್ವವನ್ನು ಮನಗಂಡ ಇತರ ಭಾಷೆಗಳವರೂ ಇದರ ಉಪಯೋಗ ಪಡೆದುಕೊಳ್ಳಲು ಮುಂದಾದರು. ಈ ವಿನ್ಯಾಸ ಬಳಸಿ ರೂಪುಗೊಂಡ ತೆಲುಗು ಭಾಷೆಯ ಪುಸ್ತಕವೊಂದು ೧೯೮೫ರಷ್ಟು ಹಿಂದೆಯೇ ಮುದ್ರಣವೂ ಆಯಿತು.

* * *

ಇಷ್ಟೆಲ್ಲ ಆದರೂ ಕಂಪ್ಯೂಟರಿಗೆ ಕನ್ನಡ ಕಲಿಸಿದ ಮೇಷ್ಟ್ರು ಮಾತ್ರ ಪ್ರಚಾರದ ಗೊಡವೆಗೆ ಹೋಗದೆ ತೆರೆಮರೆಯಲ್ಲೇ ಉಳಿದುಕೊಂಡರು. ತಮ್ಮ ಸಾಧನೆಗೆ ಪೇಟೆಂಟ್ ಪಡೆಯುವ, ಪ್ರಶಸ್ತಿ ಪುರಸ್ಕಾರಗಳನ್ನು ಅರಸುವ ಗೋಜಿಗೆಲ್ಲ ಹೋಗದೆ ತಮ್ಮ ಸೃಷ್ಟಿ ವ್ಯಾಪಕವಾಗಿ ಬಳಕೆಯಾಗುತ್ತಿರುವ ಸಂಗತಿಯಿಂದಲೇ ಖುಷಿಪಟ್ಟುಕೊಂಡರು.

ಈ ಮಹನೀಯರೇ ಶ್ರೀ ಕೆ. ಪಿ. ರಾವ್. ಎಪ್ಪತ್ತರ ಹರೆಯದಲ್ಲಿರುವ ಅವರದು ಈಗಲೂ ಹಿಂದಿನ ಹುರುಪೇ. ಅಕ್ಷರಗಳ ಅಚ್ಚರಿಯ ಲೋಕದಲ್ಲಿ ಅವರು ಸದಾಕಾಲವೂ ಹೊಸ ಸಂಗತಿಗಳ ಅನ್ವೇಷಣೆಯಲ್ಲಿರುತ್ತಾರೆ, ಕಲಿಕೆಯಲ್ಲಿ ತೊಡಗಿರುತ್ತಾರೆ.

ಹೊಸ ವಿಷಯಗಳ ಬಗ್ಗೆ ಇರಬೇಕಾದ ಕುತೂಹಲದಲ್ಲಿ, ಕಲಿಕೆಯ ಆಸಕ್ತಿಯಲ್ಲಿ, ಕೆಲಸದಲ್ಲಿರಬೇಕಾದ ಶ್ರದ್ಧೆಯಲ್ಲಿ ನಮ್ಮೆಲ್ಲರಿಗೂ ಆದರ್ಶಪ್ರಾಯರಾದ ಶ್ರೀ ಕೆ. ಪಿ. ರಾವ್ ಅವರಿಗೆ ಕನ್ನಡದ ಕಂಪ್ಯೂಟರ್ ಬಳಕೆದಾರರೆಲ್ಲರ ಪರವಾಗಿ ಹೃತ್ಪೂರ್ವಕ ಕೃತಜ್ಞತೆಗಳು.

ನವೆಂಬರ್ ೬, ೨೦೧೨ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

2 ಕಾಮೆಂಟ್‌ಗಳು:

Vijay Kumar ಹೇಳಿದರು...

K.P Rao avarige computernalli kannada balake madoru runiyagirabeku..:)

Vijay Kumar ಹೇಳಿದರು...

K.P Rao avarige computernalli kannada balake madoru runiyagirabeku..:)

badge